ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 13, 2017

ಬುದ್ಧಿಜೀವಿಗಳು ಹಾಗೂ ಪೌರಾಣಿಕ ವ್ಯಕ್ತಿಗಳು

‍ನಿಲುಮೆ ಮೂಲಕ

– ವಿನಾಯಕ ವಿಶ್ವನಾಥ ಹಂಪಿಹೊಳಿ

ಈ ಲೇಖನವು ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಹರಿದು ಬಂದಿರುವ ಪೌರಾಣಿಕ ಕಥೆಗಳಲ್ಲಿ ಕಂಡು ಬರುವ ವ್ಯಕ್ತಿಗಳ ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವದನ್ನು ಸಮಂಜಸವಾಗಿ ವಿವರಿಸುವ ಒಂದು ಚಿಕ್ಕ ಪ್ರಯತ್ನವಾಗಿದೆ. ಬೇರೆ ಬೇರೆ ಪೌರಾಣಿಕ ವ್ಯಕ್ತಿಗಳ ಕುರಿತು ಬುದ್ಧಿಜೀವಿಗಳು ಏಕೆ ಬೇರೆ ಬೇರೆ ನಿಲುವುಗಳನ್ನು ತಾಳುತ್ತಾರೆ ಹಾಗೂ ಒಂದೇ ಪೌರಾಣಿಕ ವ್ಯಕ್ತಿಯ ಕುರಿತು ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಂತೆ ಕಾಣುವ ಹೇಳಿಕೆಗಳನ್ನು ಏಕೆ ಕೊಡುತ್ತಾರೆ ಎನ್ನುವದನ್ನು ಇಲ್ಲಿ ವಿವರಿಸಲು ಯತ್ನಿಸಲಾಗಿದೆ.

ರಾಮನ ಕುರಿತು ಕೆ. ಎಸ್. ಭಗವಾನ್ ‘ರಾಮನಿಗೆ ಗೋಮಾಂಸ ಹಾಗೂ ಮದ್ಯಪಾನ ಅತಿ ಪ್ರಿಯವಾಗಿತ್ತು’ ಎಂದು ಅಭಿಪ್ರಾಯ ಪಡುತ್ತಾರೆ. ‘ವಾಲ್ಮೀಕಿ ಬರೆದಿರುವ ಮೂಲ ರಾಮಾಯಣದ ಉತ್ತರಕಾಂಡದಲ್ಲಿ ಈ ಅಂಶಗಳೆಲ್ಲ ಇವೆ, ಆದ್ದರಿಂದಲೇ ಈ ಅಭಿಪ್ರಾಯಕ್ಕೆ ಬಂದಿದ್ದೇನೆ.’ ಎಂದು ಆಧಾರವನ್ನೂ ಕೊಡುತ್ತಾರೆ. ಇನ್ನು ಬಂಜಗೆರೆ ಜಯಪ್ರಕಾಶ ‘ರಾಮ ಸೀತೆಗಾಗಿ ಲಂಕೆಗಾಗಿ ಬಂದಿರಲಿಲ್ಲ. ಕಬ್ಬಿಣದ ಅದಿರಿಗಾಗಿ ಲಂಕೆಗೆ ಬಂದಿದ್ದ.’ ಎಂದು ಸಂಶೋಧಿಸಿ ಹೇಳಿದ್ದರು. ಇತ್ತೀಚೆಗೆ ಸಿ. ಎಸ್. ದ್ವಾರಕಾನಾಥ ‘ರಾಮ ಅಸ್ತಿತ್ವದಲ್ಲಿದ್ದ ಎನ್ನುವದಕ್ಕೆ ಯಾವುದೇ ದಾಖಲೆಗಳಿಲ್ಲ’ ಎಂದರು. ಇವೆಲ್ಲವೂ ಬಹಳ ವಿವಾದಕ್ಕೆ ಆಸ್ಪದವಾದವು.

ಇವೆಲ್ಲವೂ ಪರಸ್ಪರ ವಿರೋಧಾಭಾಸವಿರುವ ಹೇಳಿಕೆಗಳು. ಏಕೆಂದರೆ ಒಬ್ಬ ಬುದ್ಧಿಜೀವಿ ರಾಮನಿದ್ದ ಎನ್ನುವುದನ್ನೊಪ್ಪಿ, ರಾಮಾಯಣದ ಆಧಾರದ ಮೇಲೆ ರಾಮನ ಆಹಾರ ಪದ್ಧತಿಯನ್ನು ನಿರ್ಣಯಿಸಿದರೆ, ಇನ್ನೊಬ್ಬ ಬುದ್ಧಿಜೀವಿ, ರಾಮನ ಅಸ್ತಿತ್ವವನ್ನಷ್ಟೇ ಒಪ್ಪಿ, ರಾಮಾಯಣದ ಕತೆಯನ್ನು ಸಂಪೂರ್ಣ ಒಪ್ಪದೇ ಅದಕ್ಕೆ ಹೊರತಾದ ಅಭಿಪ್ರಾಯವನ್ನು ಮಂಡಿಸುತ್ತಾರೆ. ಮಗದೊಬ್ಬ ಬುದ್ಧಿಜೀವಿ ರಾಮನ ಅಸ್ತಿತ್ವಕ್ಕೆ ಆಧಾರವೇ ಇಲ್ಲ ಎಂದು ಹೇಳಿ, ರಾಮ ಹಾಗೂ ರಾಮಾಯಣಕ್ಕೆ ಹಿಸ್ಟಾರಿಕಲ್ ದಾಖಲೆಗಳಿರುವದನ್ನೇ ಪೂರ್ತಿಯಾಗಿ ಅಲ್ಲಗಳೆಯುತ್ತಾರೆ. ಹೀಗೆ ಹಲವಾರು ಬುದ್ಧಿಜೀವಿಗಳು ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಆದರೆ ಈ ಭಿನ್ನಾಭಿಪ್ರಾಯದ ಕುರಿತು ಬುದ್ಧಿಜೀವಿಗಳು ಯಾವುದೇ ಸ್ಪಷ್ಟೀಕರಣವನ್ನು ನೀಡುವುದಿಲ್ಲ. ಉದಾ: ದ್ವಾರಕಾನಾಥ ಎಲ್ಲಿಯೂ ಭಗವಾನ್ ಅಭಿಪ್ರಾಯವನ್ನು ವಿರೋಧಿಸುವದಿಲ್ಲ ಅಥವಾ ಎಲ್ಲ ಬುದ್ಧಿಜೀವಿಗಳೂ ರಾಮನ ಅಸ್ತಿತ್ವ ಅಥವಾ ರಾಮಾಯಣದ ಸತ್ಯಾಸತ್ಯತೆಯ ಕುರಿತು ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬರುವುದಿಲ್ಲ. ಹಾಗೆ ನೋಡಿದರೆ ಇವರೆಲ್ಲರೂ ಒಂದೇ ಗುಂಪಿಗೆ ಸೇರುವ ಬುದ್ಧಿಜೀವಿಗಳು ಹಾಗೂ ಪ್ರಗತಿಪರ ವೇದಿಕೆಗಳಲ್ಲಿ, ವೈಚಾರಿಕ ಸಮ್ಮೇಳನಗಳಲ್ಲಿ ಒಟ್ಟಿಗೇ ವೇದಿಕೆ ಹಂಚಿಕೊಂಡವರು. ತಾವು ಪರಸ್ಪರ ವಿರೋಧಾಭಾಸವಿರುವ ಹೇಳಿಕೆಗಳನ್ನು ನೀಡುತ್ತಿದ್ದೇವೆ ಎಂದು ಬಹುಶಃ ಇವರಿಗೆ ಅನಿಸದೇ ಇರಲಿಕ್ಕೂ ಸಾಕು.

ಇವರ ಹೇಳಿಕೆಗಳನ್ನು ಜನರು ಹಾಗೂ ಮಾಧ್ಯಮದವರು ವೈಜ್ಞಾನಿಕ ಚಿಂತನೆ ಅಥವಾ ವೈಚಾರಿಕ ಅಭಿಪ್ರಾಯವೆಂದು ಭಾವಿಸುತ್ತಾರೆ. ಪ್ರಗತಿಪರ ಬುದ್ಧಿಜೀವಿಗಳು ಇತರರ ಭಿನ್ನಾಭಿಪ್ರಾಯಗಳನ್ನು ವಿರೋಧಿಸದೇ ಗೌರವಿಸುತ್ತಾರೆ ಎಂದು ನಾವಿಲ್ಲಿ ಭಾವಿಸಬಹುದು. ಆದರೆ ಇದು ಸಮಂಜಸವಲ್ಲ. ಏಕೆಂದರೆ ದೇವಸ್ಥಾನಗಳಲ್ಲಿ ರಾಮನನ್ನು ಪೂಜಿಸುವ ಬ್ರಾಹ್ಮಣರು ರಾಮನ ಮೇಲೆ ಹೊಂದಿರುವ ಅಭಿಪ್ರಾಯವನ್ನು ಇವರು ಎಂದೆಂದಿಗೂ ಗೌರವಿಸಲಾರರು. ಬ್ರಾಹ್ಮಣರು ರಾಮನ ಕುರಿತು ಹೊಂದಿರುವ ಅಭಿಪ್ರಾಯವು ಹುನ್ನಾರದಿಂದ ಕೂಡಿದ್ದು, ಅದನ್ನು ಸಮಾಜವು ತಿರಸ್ಕರಿಸಬೇಕು ಎನ್ನುವದೇ ಅವರು ನೀಡುವ ಕರೆಯಾಗಿದೆ.

ಇವರು ಎಡಪಂಥದ ಚಿಂತಕರಾಗಿರುವದರಿಂದ ಈ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನೋಣವೇ? ಅದೂ ಸಾಧ್ಯವಿಲ್ಲ. ಏಕೆಂದರೆ ಮಹಿಷಾಸುರನ ಹಬ್ಬ ಆಚರಿಸುವಾಗ ಈ ಬುದ್ಧಿಜೀವಿಗಳು ಒಂದೇ ವೇದಿಕೆಯಲ್ಲಿ ಸೇರಿ ವಿಜೃಂಭಣೆಯಿಂದ ಆಚರಿಸಿದರು. ಮಹಿಷಾಸುರನ ಅಸ್ತಿತ್ವದ ಕುರಿತು ಯಾವುದೇ ಹಿಸ್ಟಾರಿಕಲ್ ದಾಖಲೆಗಳಿರದಿದ್ದರೂ, ಮಹಿಷಾಸುರನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ರಾಮನ ಅಸ್ತಿತ್ವವನ್ನು ಪ್ರಶ್ನಿಸುವಂತೆ, ಚೌಡಮ್ಮ, ಮಾರಮ್ಮ ಮುಂತಾದ ದೇವಿಯರನ್ನು ಪ್ರಶ್ನಿಸುವ ಅಥವಾ ವಾಲ್ಮೀಕಿಯ ಹಿಸ್ಟಾರಿಕಲ್ ದಾಖಲೆಗಳು ಇಲ್ಲದಿರುವುದರಿಂದ ವಾಲ್ಮೀಕಿ ಜಯಂತಿಯನ್ನು ಪ್ರಶ್ನಿಸುವ ಗೋಜಿಗೆ ಇವರ ವೈಚಾರಿಕತೆ ಹೋಗುವದಿಲ್ಲ.

ಸಮಾಜದ ಪುರೋಹಿತರು ಹಾಗೂ ಆಳುವವರು ಬಹುಸಂಖ್ಯಾತರನ್ನು ಶೋಷಿಸಲೆಂದೇ ಮನುಸ್ಮೃತಿಯನ್ನು ರಚಿಸಿದರು ಎನ್ನುವ ಬುದ್ಧಿಜೀವಿಗಳು, ಆ ಪುಸ್ತಕವನ್ನು ಬರೆದವನ ಕುರಿತು ಯಾವುದಾದರೂ ಹಿಸ್ಟಾರಿಕಲ್ ದಾಖಲೆಗಳಿವೆಯೇ ಎಂದು ಕೇಳಿದರೆ ಒಮ್ಮತದ ಅಭಿಪ್ರಾಯ ಅವರಲ್ಲೆಂದೂ ಮೂಡದು. ರಾಮಾಯಣದ ಪ್ರಸಂಗಗಳನ್ನು ಆಯ್ದು ಆರ್ಯ-ದ್ರಾವಿಡ ಸಿದ್ಧಾಂತದಡಿ, ಆರ್ಯರ ದಬ್ಬಾಳಿಕೆ ಹಾಗೂ ದ್ರಾವಿಡರ ಶೋಷಣೆಯೆಂದು ವಿವರಿಸುವಾಗ ರಾಮಾಯಣಕ್ಕೆ ಹಿಸ್ಟಾರಿಕಲ್ ದಾಖಲೆ ಇಲ್ಲ ಎಂದು ಅವರೇ ಹೇಳುವ ಅಂಶವನ್ನು ಅವರೇ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಹಾಗಿದ್ದರೆ ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ಬುದ್ಧಿಜೀವಿಗಳ ಈ ಅಭಿಪ್ರಾಯಗಳನ್ನು ಅರ್ಥೈಸುವುದು ಹೇಗೆ? ದ್ವಾರಕಾನಾಥರ ರಾಮನ ಅಸ್ತಿತ್ವವನ್ನೇ ನಿರಾಕರಿಸುವ ಹೇಳಿಕೆಯು ಬಂಜಗೆರೆಯ ‘ರಾಮನು ಕಬ್ಬಿಣದ ಅದಿರಿಗಾಗಿ ಲಂಕೆಗೆ ಬಂದಿದ್ದ’ ಎಂಬ ಹೇಳಿಕೆಗೆ ಸರಿಹೊಂದದಿದ್ದರೂ, ಬಂಜಗೆರೆ ಅದನ್ನು ಏಕೆ ವಿರೋಧಿಸಲಿಲ್ಲ? ಪರಸ್ಪರ ವಿರೋಧಾಭಾಸವಿರುವ ಅಭಿಪ್ರಾಯಗಳನ್ನು ಹೊಂದಿದ್ದರೂ, ಯಾವ ಹಿನ್ನೆಲೆಯು ಇವರೆಲ್ಲರನ್ನೂ ಒಟ್ಟಿಗೇ ಹಿಡಿದಿಟ್ಟಿದೆ? ವೈಚಾರಿಕತೆಯನ್ನೂ ಬದಿಗಿಟ್ಟು ಮಹಿಷಾಸುರನನ್ನು ಪೂಜಿಸಲು ಇವರು ತಯಾರಾದರಲ್ಲ, ಇದರ ಕಾರಣವೇನು?

ಪೌರಾಣಿಕ ವ್ಯಕ್ತಿಗಳ ಕುರಿತು ಬುದ್ಧಿಜೀವಿಗಳು ನೀಡುವ ಅಭಿಪ್ರಾಯಗಳ ಮೂಲ ರಚನೆಯನ್ನು ಅರಿಯದೇ ಅವುಗಳಿಗೆ ಉತ್ತರ ನೀಡುವದರಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ವ್ಯಕ್ತಿಗಳು ನಿಜವಾಗಿಯೂ ಇದ್ದರು ಎಂದು ಹಿಸ್ಟಾರಿಕಲ್ ದಾಖಲೆಗಳನ್ನು ಹುಡುಕಿ ಹೇಳುವುದು ಅವರಿಗೆ ಉತ್ತರವೂ ಅಲ್ಲ. ಕಾರಣ, ರಾಮನ ಅಸ್ತಿತ್ವಕ್ಕೆ ದಾಖಲೆಗಳಿಲ್ಲ ಎಂದು ದ್ವಾರಕಾನಾಥರು ಹೇಳುವಾಗ, ರಾಮನ ಅಸ್ತಿತ್ವವನ್ನು ನಿರಾಕರಿಸುವದೇ ಅವರ ಪರಮಾರ್ಥವಾಗಿರುವುದಿಲ್ಲ. ಇಲ್ಲವಾದಲ್ಲಿ ರಾಮನ ಕುರಿತ ಸಂಘ ಪರಿವಾರದ ಅಭಿಪ್ರಾಯವನ್ನು ವಿರೋಧಿಸುವಂತೆ ದ್ವಾರಕಾನಾಥರ ಅಭಿಪ್ರಾಯವನ್ನೂ ಸಹ ಭಗವಾನ್ ಹಾಗೂ ಬಂಜಗೆರೆ ವಿರೋಧಿಸಬೇಕಿತ್ತಲ್ಲವೇ?

ಪೌರಾಣಿಕ ವ್ಯಕ್ತಿಗಳ ಕುರಿತು, ಬುದ್ಧಿಜೀವಿಗಳು ನೀಡುವ ಅಭಿಪ್ರಾಯಗಳು ಯಾವ ರಚನೆಯನ್ನು ಹೊಂದಿವೆ ಎಂಬ ಪ್ರಶ್ನೆ ಏಳಬಹುದು. ಅದನ್ನರಿಯಲು ಇನ್ನೊಂದು ಉದಾಹರಣೆ ನೋಡೋಣ. ಸಲಫೀ ಇಸ್ಲಾಮೀ ಐಡಿಯಾಲಜಿಯನ್ನು ಪ್ರಸಾರ ಮಾಡುವ ಜಾಕೀರ್ ನಾಯ್ಕನ ಕುರಿತು ನಮಗೆಲ್ಲರಿಗೂ ಗೊತ್ತೇ ಇದೆ. ಆತ ಇಸ್ಲಾಮ್ ಎಂಬುದು ಭೂಮಿಯ ಮೇಲಿರುವ ಮೂಲ ಹಾಗೂ ಸತ್ಯವಾದ ರಿಲಿಜನ್ನು ಎಂದು ಭಾವಿಸಿದ್ದಾನೆ. ಆದರೆ ಬುದ್ಧಿಜೀವಿಗಳು ದ್ರಾವಿಡರು ಇಲ್ಲಿನ ಮೂಲಜನ ಹಾಗೂ ಅವರಿಗೂ ರಿಲಿಜನ್ನೊಂದಿತ್ತು ಎಂದು ಭಾವಿಸಿದ್ದಾರೆ, ಅಲ್ಲವೇ? ಈಗ ಎರಡೂ ಚಿತ್ರಣಗಳನ್ನು ಹೋಲಿಸಿಕೊಂಡು ಒಮ್ಮೆ ನೋಡೋಣ. ಕೆಳಗಿನ ಎರಡು ಪರಿಚ್ಛೇದಗಳನ್ನು ಗಮನಿಸಿ.

ಜಾಕೀರ್ ನಾಯ್ಕನಿಗೆ ಆತನ ಪೂರ್ವಜರು ಹೇಳುವ ಇಸ್ಲಾಂ ರಿಲಿಜನ್ನೇ ಮೂಲ ಹಾಗೂ ಸತ್ಯವಾದ ರಿಲಿಜನ್ನು. ಇಸ್ಲಾಮಿಗೆ ವಿರುದ್ಧವಾಗಿರುವ ವೇದಗಳ ಕಥೆಗಳು ಮಾನವನ ಹುನ್ನಾರದಿಂದ ಸೃಷ್ಟಿಯಾಗಿದ್ದರೂ, ಅವುಗಳಲ್ಲಿ ಕೆಲವು ಆಯಾಮಗಳು ಇಸ್ಲಾಮಿನ ತತ್ತ್ವಗಳ ವಿವರಣೆಗಳನ್ನು ಪುಷ್ಟೀಕರಿಸುವಂತೆ ಭಾಸವಾಗುವದರಿಂದ ಆ ಅಂಶಗಳನ್ನು ಒಪ್ಪಿಕೊಳ್ಳುತ್ತಾನೆ ಹಾಗೂ ಅವುಗಳನ್ನು ಸಂಶೋಧಿಸುವವರನ್ನು ಹೊಗಳುತ್ತಾನೆ. ಉದಾ: ‘ನ ತಸ್ಯ ಪ್ರತಿಮಾ ಅಸ್ತಿ’. ಅಲ್ಲದೇ ಇಸ್ಲಾಂ ಭೂಮಿಯ ಮೂಲ ರಿಲಿಜನ್ನಾಗಿರುವದರಿಂದ ಆದಮ್ ಮುಸ್ಲಿಮನೇ ಆಗಿರಬೇಕು ಹಾಗೂ ಆತನನ್ನು ಪ್ರವಾದಿಯೆಂದು ಒಪ್ಪಿ ಗೌರವಿಸುವದು ಸತ್ಯ ಆಚರಣೆ.

ಬುದ್ಧಿಜೀವಿಗೆ ಅವನ ಸಮಾಜವಿಜ್ಞಾನ ಹೇಳುವ ದ್ರಾವಿಡರ ರಿಲಿಜನ್ನೇ ಈ ನೆಲದ ಮೂಲ ಹಾಗೂ ಸತ್ಯವಾದ ರಿಲಿಜನ್ನು. ದ್ರಾವಿಡರ ರಿಲಿಜನ್ನಿಗೆ ವಿರುದ್ಧವಾಗಿರುವ ಆರ್ಯರ ರಿಲಿಜನ್ನಿನ ಕಥೆಗಳೆಲ್ಲವೂ ಆರ್ಯರ ಹುನ್ನಾರದಿಂದ ಸೃಷ್ಟಿಯಾಗಿದ್ದರೂ, ಅವುಗಳಲ್ಲಿರುವ ಕೆಲವು ಆಯಾಮಗಳು ದ್ರಾವಿಡ ರಿಲಿಜನ್ನಿನ ಆರ್ಯರ-ಶೋಷಣೆ ಮುಂತಾದ ವಿವರಣೆಗಳನ್ನು ಪುಷ್ಟೀಕರಿಸುವಂತೆ ಭಾಸವಾಗುವುದರಿಂದ, ಆ ಅಂಶಗಳನ್ನು ಒಪ್ಪಿಕೊಳ್ಳುತ್ತಾನೆ ಹಾಗೂ ಆ ಆಯಾಮಗಳನ್ನು ಸಂಶೋಧಿಸುವವರನ್ನು ಹೊಗಳುತ್ತಾನೆ. ಉದಾ: ‘ಆರ್ಯನಾದ ರಾಮನು ದ್ರಾವಿಡನಾಗಿದ್ದ ರಾವಣನನ್ನು ಕೊಂದನು.’ ಇತ್ಯಾದಿ. ಅಲ್ಲದೇ ದ್ರಾವಿಡ ರಿಲಿಜನ್ನು ನೆಲದ ಮೂಲವಾದ ರಿಲಿಜನ್ನಾಗಿರುವದರಿಂದ ಮಹಿಷ ದ್ರಾವಿಡನೇ ಆಗಿರಬೇಕು ಹಾಗೂ ಆತನನ್ನು ಸಮಾನತೆಯ ಹರಿಕಾರನೆಂದು ಒಪ್ಪಿ ಗೌರವಿಸುವದು ಸತ್ಯ ಆಚರಣೆ.

ಈ ಮೇಲಿನ ಎರಡೂ ಪರಿಚ್ಛೇದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎರಡನೇ ಪರಿಚ್ಛೇದವು ವಾಸ್ತವವಾಗಿ ಮೊದಲನೇ ಪರಿಚ್ಛೇದದ ಇನ್ನೊಂದು ರೂಪವಾಗಿದೆ ಎನ್ನುವದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಜಾಕೀರ ನಾಯ್ಕನ ಬದಲಾಗಿ ಬುದ್ಧಿಜೀವಿ ಬಂದಿದ್ದಾನೆ. ಇಸ್ಲಾಂ ಬದಲಿಗೆ ಬುದ್ಧಿಜೀವಿಗಳೇ ಊಹಿಸಿಕೊಂಡಿರುವ ದ್ರಾವಿಡ ರಿಲಿಜನ್ ಬಂದಿದೆ. ವೇದಗಳ ಕಥೆ ಬದಲು ಆರ್ಯ ರಿಲಿಜನ್ನಿನ ಕಥೆಗಳು ಬಂದಿವೆ. ಮಾನವನ ಹುನ್ನಾರದ ಬದಲು ಆರ್ಯರ ಹುನ್ನಾರ ಶಬ್ದ ಪ್ರಯೋಗವಾಗಿದೆ. ಇಸ್ಲಾಮಿನ ತತ್ತ್ವಗಳ ಬದಲು ಆರ್ಯರ-ಶೋಷಣೆ ಬಂದಿದೆ. ಇಸ್ಲಾಂ ಭೂಮಿಯ ಮೂಲ ರಿಲಿಜನ್ನಾದರೆ, ದ್ರಾವಿಡರದ್ದು ಈ ನೆಲದ ಮೂಲ ರಿಲಿಜನ್ನು. ಆದಮ್ ಬದಲು ಮಹಿಷ ಬಂದಿದ್ದಾನೆ ಹಾಗೂ ಪ್ರವಾದಿಯ ಬದಲು ಸಮಾನತೆಯ ಹರಿಕಾರ ಬಂದಿದ್ದಾನೆ. ವಾಕ್ಯರಚನೆಗಳು ಎರಡೂ ಕಡೆ ಸಮಾನ.

ಈ ಚಟುವಟಿಕೆಯಿಂದ ಏನನ್ನು ಕಲಿತಂತಾಯಿತು? ಜಾಕೀರ ನಾಯ್ಕನಿಗೂ ಹಾಗೂ ಬುದ್ಧಿಜೀವಿಗಳಿಗೂ ಅಂಥ ವ್ಯತ್ಯಾಸವೇನಿಲ್ಲ. ಇಬ್ಬರ ವಾದಲಹರಿಗಳು ರಿಲಿಜನ್ನಿನ ಸ್ವರೂಪವನ್ನೇ ಹೊಂದಿವೆ. ಆದರೆ ಬುದ್ಧಿಜೀವಿಗಳು ತಮ್ಮ ವಾದವನ್ನು ಮಾತ್ರ ವೈಚಾರಿಕತೆ ಎಂದು ಭಾವಿಸಿಕೊಂಡಿದ್ದಾರೆ ಅಷ್ಟೇ. ಈ ಬುದ್ಧಿಜೀವಿಗಳು ಕಾಲೇಜಿನಲ್ಲಿ ಕಲಿತ ಯೂರೋಪಿನಲ್ಲಾದ ಕ್ಯಾಥೋಲಿಕ್ಕರ ವಿರುದ್ಧದ ಪ್ರೊಟೆಸ್ಟಂಟ್ ರಿಫರ್ಮೇಶನ್ ವಿಚಾರಗಳ ಸೆಕ್ಯುಲರ್ ರೂಪಾಂತರವಾದ ‘ಜ್ಞಾನೋದಯ ಚಿಂತನೆ’ಗಳನ್ನೇ ವೈಚಾರಿಕ/ವೈಜ್ಞಾನಿಕ ಚಿಂತನೆಗಳೆಂದು ಸ್ವೀಕರಿಸಿಕೊಂಡಿದ್ದಾರೆ. ಈ ಪ್ರೊಟೆಸ್ಟಂಟ್ ವೈಚಾರಿಕತೆಗೆ ಮಾರು ಹೋಗಿ ಇನ್ಫಿರಿಯಾರಿಟಿ ಕಾಂಪ್ಲೆಕ್ಸಿಗೆ ಒಳಗಾದ ಬುದ್ಧಿಜೀವಿಗಳಿಂದ ಈ ವೈಚಾರಿಕ ಕ್ರಾಂತಿ ಪಶ್ಚಿಮದಲ್ಲಷ್ಟೇ ಅಲ್ಲ, ನಮ್ಮಲ್ಲೂ ನಡೆದಿದೆ ಎಂದು ತೋರಿಸುವ ಒಂದು ವ್ಯರ್ಥ ಪ್ರಯತ್ನವೇ ಈ ಸಂಶೋಧನೆಗಳು. ಬುದ್ಧಿಜೀವಿಗಳ ಪೂರ್ವಗ್ರಹಗಳನ್ನು ನಾವು ಹೀಗೆ ಪಟ್ಟಿ ಮಾಡಬಹುದು.

ಪ್ರತಿಯೊಂದು ಸಮಾಜಕ್ಕೂ ರಿಲಿಜನ್ನು ಅಂತಾ ಒಂದು ಇರಲೇ ಬೇಕು ಎಂಬ ಸಮಾಜವಿಜ್ಞಾನದ ಪೂರ್ವಗ್ರಹವನ್ನೇ ಈ ಬುದ್ಧಿಜೀವಿಗಳು ಕಣ್ಮುಚ್ಚಿ ಒಪ್ಪಿಬಿಟ್ಟಿದ್ದಾರೆ. ಹೀಗಾಗಿ ಆರ್ಯರ ಆಕ್ರಮಣಕ್ಕೂ ಮೊದಲೇ ಇಲ್ಲಿನ ಮೂಲ ರಿಲಿಜನ್ನೊಂದು ದ್ರಾವಿಡರದ್ದಿತ್ತು ಎಂದು ಊಹಿಸುತ್ತಾರೆ. ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಂಟರನ್ನು ಆರ್ಯರ ಹಾಗೂ ದ್ರಾವಿಡರ ಮೇಲೆ ಆರೋಪಿಸುತ್ತಾರೆ. ಆರ್ಯರದ್ದು ಕ್ಯಾಥೋಲಿಕ್ ಮಾದರಿಯ ಶೋಷಿಸುವ ಸುಳ್ಳು ರಿಲಿಜನ್ನಾದರೆ, ದ್ರಾವಿಡರದ್ದು ಕ್ಯಾಥೋಲಿಕ್ಕರು ತಮ್ಮ ಭ್ರಷ್ಟತೆಯನ್ನು ಹೇರುವುದಕ್ಕಿಂತ ಮುಂಚೆ ಇದ್ದ ಪರಿಶುದ್ಧ ಪ್ರೊಟೆಸ್ಟಂಟ್ ಮಾದರಿಯ ಸಮಾನತೆ ಸಾರುವ ಸತ್ಯ ರಿಲಿಜನ್. ಈ ಊಹೆಗಳ ಮೇಲೆ ಸಮಾಜದ ಇಂದಿನ ಸ್ಥಿತಿಗತಿಗಳನ್ನು ವಿವರಿಸುತ್ತಾರೆ.

ಪ್ರೊಟೆಸ್ಟಂಟ್ ಮಾದರಿಯ ಸಮಾನತೆಯು ಸಮಾಜದಲ್ಲಿ ಕಾಣದೇ ಇರುವದರಿಂದ ಅದಕ್ಕೊಂದು ವಿವರಣೆಯನ್ನು ನೀಡಬೇಕಾಗುತ್ತದೆ. ಇದಕ್ಕೆ ಈ ಬುದ್ಧಿಜೀವಿಗಳು ವೇದ ಹಾಗೂ ಪುರಾಣಗಳ ಕಥೆಗಳಲ್ಲಿ ಬರುವ ನಾಯಕರನ್ನು ಆರ್ಯರ ಪ್ರತಿನಿಧಿಯನ್ನಾಗಿಸಿ ಹಾಗೂ ಶೋಷಕರನ್ನಾಗಿಸಿ, ಖಳನಾಯಕ ಹಾಗೂ ದಕ್ಷಿಣ ಭಾರತದ ಪಾತ್ರಗಳನ್ನು ಶೋಷಿತರನ್ನಾಗಿಸಿ ಇಲ್ಲವೇ ಪ್ರತಿರೋಧಿಗಳನ್ನಾಗಿಸಿ, ಶೋಷಣೆಯ, ಹುನ್ನಾರದ ಹಾಗೂ ಪ್ರತಿಭಟನೆಯ ಕಥೆಗಳನ್ನು ವೈಚಾರಿಕತೆಯ ಹೆಸರಲ್ಲಿ ಹೆಣೆಯುತ್ತಾರೆ. ತನ್ಮೂಲಕ ಸಮಾಜದಲ್ಲಿ ಅಸಮಾನತೆ ಹೇಗೆ ಹಬ್ಬಿತು ಎಂದು ಸಂಶೋಧನೆಗಳನ್ನು ಮುಂದಿಡುತ್ತಾರೆ.

ಮಹಿಷನನ್ನು ದ್ರಾವಿಡನೆಂದು ಭಾವಿಸುವದರಿಂದ ಆತ ಸಮಾನತೆಯ ಪರವಿದ್ದ ಹಾಗೂ ಸತ್ಯವಾಗಿಯೂ ಅಸ್ತಿತ್ವದಲ್ಲಿದ್ದ ಮನುಷ್ಯನಾಗಿ ಬಿಡುತ್ತಾನೆ. ಹೀಗಾಗಿ ಅವನನ್ನು ಪೂಜಿಸುವಾಗ ಅವರಿಗೆ ಯಾವುದೇ ಹಿಸ್ಟಾರಿಕಲ್ ದಾಖಲೆಯ ಅಗತ್ಯವಿಲ್ಲ. ಆತನ ಹಬ್ಬ ಮಾಡಲು ಎಲ್ಲರೂ ಸೇರುತ್ತಾರೆ. ಮಹಿಷನ ಅಸ್ತಿತ್ವ ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಯಾರಿಗೂ ಬರುವುದಿಲ್ಲ. ಅಷ್ಟೇ ಅಲ್ಲ, ಈ ರೀತಿಯ ಪ್ರಶ್ನೆಗಳು ಆರ್ಯರ ಹುನ್ನಾರದ ಭಾಗವೇ ಆಗುತ್ತವೆ. ಆದಮ್ ನಿಜವಾಗಿಯೂ ಇದ್ದನೇ ಹಾಗೂ ಆ ಕಾಲದಲ್ಲೇ ಇಸ್ಲಾಂ ನಿಜವಾಗಿಯೂ ಇತ್ತೇ, ಅಲ್ಲದೇ ಆತ ಮುಸ್ಲಿಮನಾಗಿದ್ದನೇ ಎಂದು ನಾವು ಸಂಶಯ ಪಡುವದು ಹೇಗೆ ಜಾಕೀರ್ ನಾಯ್ಕನಿಗೆ ಸುಳ್ಳು ರಿಲಿಜನ್ನಿನವರ ಷಡ್ಯಂತ್ರದಂತೆ ಕಾಣುವುದೋ, ಹಾಗೆಯೇ ನಾವು ಮಹಿಷಾಸುರನ ನಿಜವಾಗಿಯೂ ಇದ್ದನೇ ಹಾಗೂ ಪ್ರೊಟೆಸ್ಟಂಟ್ ಮಾದರಿಯ ಸಮಾನತೆಯನ್ನು ಸಾರುವ ದ್ರಾವಿಡ ರಿಲಿಜನ್ ನಿಜವಾಗಿಯೂ ಇತ್ತೇ, ಅಲ್ಲದೇ ಮಹಿಷಾಸುರ ಆ ದ್ರಾವಿಡ ರಿಲಿಜನ್ನಿನ ಪ್ರತಿಪಾದಕನಾಗಿದ್ದನೇ ಎಂದು ಪ್ರಶ್ನಿಸುವದು ಬುದ್ಧಿಜೀವಿಗಳಿಗೆ ಆರ್ಯರ ಷಡ್ಯಂತ್ರದಂತೇ ಕಾಣುತ್ತದೆ.

ಬುದ್ಧಿಜೀವಿಗಳಿಗೆ ರಾಮ ಆರ್ಯರ ಸುಳ್ಳು ರಿಲಿಜನ್ನಿನ ದೇವತೆಯಾಗಿ ಬಿಡುತ್ತಾನೆ. ಈಗ ಆತನನ್ನು ಸುಳ್ಳು ದೇವತೆ ಎನ್ನುವದಷ್ಟೇ ಬುದ್ಧಿಜೀವಿಗಳಿಗೆ ಮುಖ್ಯವಾಗುತ್ತದೆ. ಆಗ ಅವರು ಆತನನ್ನು ‘ಮದ್ಯಮಾಂಸಪ್ರಿಯ’ ಎನ್ನಲಿ, ಇಲ್ಲವೇ ‘ಅದಿರಿಗಾಗಿ ಲಂಕೆಗೆ ಬಂದಿದ್ದ ಹೀಗಾಗಿ ರಾಮಾಯಣದ ಕಥೆ ಸುಳ್ಳಿನಿಂದ ಕೂಡಿದೆ’ ಎನ್ನಲಿ ಅಥವಾ ‘ರಾಮನೆಂಬುವವನ ಅಸ್ತಿತ್ವಕ್ಕೆ ಹಿಸ್ಟರಿಯಲ್ಲಿ ದಾಖಲೆಯೇ ಇಲ್ಲ’ ಎನ್ನಲಿ, ಏನು ಬೇಕಾದರೂ ಹೇಳಲಿ, ಎಲ್ಲವೂ ಮಾನ್ಯವೇ. ಕಾರಣ ರಾಮನು ಸುಳ್ಳು ರಿಲಿಜನ್ನಿನ ದೇವತೆ ಎಂಬ ಆಶಯವೇ ಎಲ್ಲ ಮಾತುಗಳಲ್ಲೂ ಹೊರಡಬೇಕಾಗಿರುತ್ತದೆ ಅಷ್ಟೇ. ಬುದ್ಧಿಜೀವಿಗಳು ತಮ್ಮ ಸಂಶೋಧನೆಗಳ ಮೂಲಕ ಈ ಆಶಯವನ್ನೇ ಸಾರುವದರಿಂದ ಅವರಿಗೆ ತಾವು ವಿರೋಧಾಭಾಸಗಳ ಹೇಳಿಕೆಗಳನ್ನು ನೀಡುತ್ತಿದ್ದೇವೆ ಎಂಬುದು ಗಮನಕ್ಕೂ ಬರುವುದಿಲ್ಲ.

ಬುದ್ಧಿಜೀವಿಗಳ ಪಾಲಿಗೆ ರಾಮಾಯಣವೆಂಬುದು ಕಂತೆಗಳ ಬೊಂತೆಯಾದರೂ ಅದರ ಕರ್ತೃವಾದ ವಾಲ್ಮೀಕಿಯ ಜಾತಿಯನ್ನು ಅವರು ಶೋಷಿತ ದ್ರಾವಿಡ ರಿಲಿಜನ್ನಿನ ಕೆಟೆಗರಿಯಲ್ಲಿ ದಾಖಲಿಸುವುದರಿಂದ ಒಂದು ಉತ್ತಮ ಕಾವ್ಯದ ಕರ್ತೃವಾಗಿ ವಾಲ್ಮೀಕಿ ವಾಸ್ತವವಾಗಿ ಅಸ್ತಿತ್ವದಲ್ಲಿರುವದು ಬುದ್ಧಿಜೀವಿಗಳಿಗೆ ಅನಿವಾರ್ಯ. ಆದ್ದರಿಂದ ವಾಲ್ಮೀಕಿ ಜಯಂತಿಯನ್ನು ಇವರೆಂದೂ ವಿರೋಧಿಸುವುದಿಲ್ಲ. ಹಾಗೆಯೇ ಮನುವಿನ ಅಸ್ತಿತ್ವಕ್ಕೂ ಹಿಸ್ಟಾರಿಕಲ್ ದಾಖಲೆಗಳಿರದಿದ್ದರೂ, ಇಲ್ಲಿನ ಜನರನ್ನು ಶೋಷಿಸಲು ಮನುಸ್ಮೃತಿಯನ್ನು ಬರೆದುಕೊಂಡರು ಎಂಬುದನ್ನು ಸಾಧಿಸಲು, ಕಥೆಗಳು ಹೇಳುವ, ಇಡೀ ಭೂಮಿಗೆ ಅಧಿಪತಿಯಾಗಿದ್ದನೆಂದು ಹೇಳುವ ಮನುವು ವಾಸ್ತವದಲ್ಲಿ ಇದ್ದ ಹಾಗೂ ಮನುಸ್ಮೃತಿಯನ್ನು ಇಡೀ ಸಮಾಜದ ಮೇಲೆ ಹೇರಿದ ಎಂದು ಬುದ್ಧಿಜೀವಿಗಳು ಹೇಳಬೇಕಾಗಿರುವುದು ಇವರಿಗೆ ಅನಿವಾರ್ಯ.

ಹೊಸಯುಗದ ಚಿಂತಕರಾದ ನಾವು ಈ ಬುದ್ಧಿಜೀವಿಗಳ ಪೌರಾಣಿಕ ಪಾತ್ರಗಳ ಕುರಿತ ಸಂಶೋಧನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು? ನಾವು ಬುದ್ಧಿಜೀವಿಗಳು ಒಡ್ಡುವ ವಾದಗಳನ್ನು ವಿರೋಧಾಭಾಸಗಳ ಸಮೇತ ಪಟ್ಟಿ ಮಾಡಬೇಕು. ಮುನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಬೇಯಿಸಿಟ್ಟು ಹೋದ ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತ, ಪ್ರೊಟೆಸ್ಟಂಟ್ ಹಾಗೂ ಕ್ಯಾಥೋಲಿಕ ಕ್ರಿಶ್ಚಿಯನ್ ಥಿಯಾಲಜಿಗಳಿಗೆ ಅನುಗುಣವಾಗಿ ಇವರು ಹೇಳುತ್ತಿರುವ ಹೊಸ ಸಂಶೋಧನೆಗಳನ್ನು ಹೊಂದಿಸಿ ಸಮಂಜಸವಾಗಿ ವಿವರಿಸಬೇಕು. ಇವರ ಹೊಸ ಸಂಶೋಧನೆಗಳು ಅದೇ ಬಿದ್ದು ಹೋದ ಹಳೆಯ ಥಿಯರಿಯ ಹೊಸ ರೂಪವಷ್ಟೇ ಹೊರತು ಇನ್ನೇನೂ ಅಲ್ಲ ಎನ್ನುವುದನ್ನು ತೋರಿಸಬೇಕು.

ಬುದ್ಧಿಜೀವಿಗಳು ಪಶ್ಚಿಮದಲ್ಲಿ ಆದ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯನ್ನೇ ವೈಚಾರಿಕತೆಯೆಂಬ ಹೊಸ ಹೆಸರಿನಲ್ಲಿ ಮಾರಲು ಯತ್ನಿಸುತ್ತಿದ್ದಾರೆ ಹಾಗೂ ಅವರ ಸಂಶೋಧನೆಗಳು ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತದ ಮೇಲೆ ಅವರೇ ಕಟ್ಟಿಕೊಂಡಿರುವ ಹೆಲ್ಯುಸಿನೇಶನ್ನಿನ ಮುಂದುವರೆದ ಭಾಗವಾಗಿವೆ ಅಷ್ಟೇ. ಅವರು ಸದ್ಯಕ್ಕೆ ದ್ರಾವಿಡ ರಿಲಿಜನ್ನೆಂಬ ಅಸ್ತಿತ್ವದಲ್ಲೇ ಇಲ್ಲದ ರಿಲಿಜನ್ನೊಂದರ ಪ್ರೀಸ್ಟುಗಳಂತೆ ವರ್ತಿಸುತ್ತಿದ್ದಾರೆ. ಇದು ವೈಚಾರಿಕತೆಯೂ ಅಲ್ಲ ಹಾಗೂ ಇವರ ಪೂರ್ವಗ್ರಹಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments