ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 13, 2017

ಲೈಂಗಿಕ ದೌರ್ಜನ್ಯ,ಬುದ್ಧಿಜೀವಿಗಳು ಮತ್ತು ಐಡಿಯಾಲಜಿ

‍ನಿಲುಮೆ ಮೂಲಕ

– ಅಶ್ವಿನಿ ಬಿ ದೇಸಾಯಿ ಮತ್ತು ಚೈತ್ರ ಎಂ.ಎಸ್

ಆರೋಹಿ ಸಂಶೋಧನಾ ಸಂಸ್ಥೆ, ಜಯನಗರ, ಬೆಂಗಳೂರು

ಹಾಲಿವುಡ್‍ನ ನಿರ್ದೇಶಕ ಹಾರ್ವೆ ವೇನ್‍ಸ್ಟೀನ್‍ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಈ ಕಾರಣಕ್ಕಾಗಿ ‘MeToo’ Hasgtag ಅಡಿಯಲ್ಲಿ ಹೊರಬರುತ್ತಿರುವ ದೌರ್ಜನ್ಯಗಳ ಕಥೆಗಳು ಈಗ ಜಾಗತಿಕ ಸುದ್ದಿಯಾಗಿದೆ. ಈ ಪ್ರತಿಕ್ರಿಯೆಗಳು ಒಳ್ಳೆಯ ಬೆಳವಣಿಗೆಯೆಂದು ಭಾರತದ ಸ್ತ್ರೀವಾದಿ ಮತ್ತು ಪ್ರಗತಿಪರರ ಅಭಿಪ್ರಾಯವಾಗಿದೆ. ಈ ನಡುವೆ, ‘MeToo’ ಚಳವಳಿಯ ಭಾಗವಾಗಿ  ರಾಯಾ ಸರ್ಕಾರ್ ಎಂಬ ವಿದ್ಯಾರ್ಥಿನಿಯೊಬ್ಬಳು ಕೆಲವು ಭಾರತೀಯ ಪ್ರಾಧ್ಯಾಪಕರನ್ನು ಲೈಂಗಿಕ ಕಿರುಕುಳದಂಥ ಕೃತ್ಯಗಳಲ್ಲಿ ಆರೋಪಿಗಳೆಂದು ಗುರುತಿಸಿದ್ದಾಳೆ. ಈ ಪಟ್ಟಿಯಲ್ಲಿ ಜೆಎನ್‍ಯು, ಜಾಧವಪುರ ವಿಶ್ವವಿದ್ಯಾನಿಲಯಗಳಂಥ ಸಂಸ್ಥೆಗಳಿಂದ ಹಿಡಿದು, ಚಿಂತಕರಾದ ಕೌಶಿಕ್ ಬಸು, ಸದಾನಂದ ಮೆನನ್, ದೀಪೇಶ್ ಚಕ್ರವರ್ತಿಯವರಿಂದ ಪಾರ್ಥ ಚಟರ್ಜಿಯವರೆಗೆ ಅನೇಕರ ಹೆಸರುಗಳಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಆರೋಪಿಗಳು ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು, ಆದ್ದರಿಂದ ಲೈಂಗಿಕ ದೌರ್ಜನ್ಯದ ಸಮಸ್ಯೆಯೇ ಜಾತಿವ್ಯವಸ್ಥೆಯ ಇನ್ನೊಂದು ರೂಪವೆಂದು ವಾದಿಸಿದ್ದಾರೆ. ಮರುಕ್ಷಣ ಮಾಲತಿ ಕುಮಾರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವ ದಲಿತ-ಬಹುಜನ ಅಧ್ಯಾಪಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಕಾಂಚ ಇಳಯ್ಯರಿಂದ ಹಿಡಿದು ಅನೇಕ ದಲಿತ ಚಿಂತಕರ ಹೆಸರು ಸೇರಿಕೊಂಡಿದೆ. ಚಿಂತಕರನೇಕರು ಈ ಪಟ್ಟಿಯನ್ನು ಇದು ಮೇಲ್ಜಾತಿಯ ಹುನ್ನಾರವೆಂದು ಚರ್ಚಿಸಿದ್ದೂ ಆಗಿದೆ.

ಈ ಆರೋಪ ಪಟ್ಟಿಯನ್ನು ಕುರಿತು ಸ್ತ್ರೀವಾದಿಗಳಾದ ನಿವೇದಿತಾ ಮೆನನ್, ಕವಿತಾ ಕೃಷ್ಣನ್, ಮುಂತಾದವರು ಬಹಿರಂಗ ಪತ್ರದ ಮೂಲಕ ಪ್ರತಿಕ್ರಿಯಿಸಿದರು. ಇವರ ಪ್ರಕಾರ ಈ ಬಗೆಯ ‘ನೇಮ್ ಆಂಡ್ ಶೇಮ್’ ಪಟ್ಟಿ ಒಳ್ಳೆಯದಲ್ಲ, ಈ ಪಟ್ಟಿಯಲ್ಲಿ ಸ್ತ್ರೀವಾದಿಗಳಾಗಿರುವ ತಮ್ಮ ಪುರುಷ ಮಿತ್ರರಿದ್ದಾರೆ. ಇವರು ಇಂಥ ಕೆಲಸ ಮಾಡಿದ್ದರೆ, ಅಂಥವರ ಮೇಲೆ ಕಾನೂನಿನಂತೆ ಸರಿಯಾದ ಕ್ರಮವನ್ನು (ಡ್ಯೂ ಪ್ರೊಸೆಸ್) ಕೈಗೊಳ್ಳಬೇಕೇ ವಿನಾ ಹೀಗೆಲ್ಲ ಸಾರ್ವಜನಿಕವಾಗಿ ಛೀಮಾರಿ ಹಾಕುವುದು ಸರಿಯಲ್ಲವೆಂಬ ಎಚ್ಚರಿಕೆಯ ಮಾತನ್ನಾಡಿದ್ದಾರೆ.

ಪ್ರತಿಕ್ರಿಯೆಗಳು ಮತ್ತು ಗೊಂದಲಗಳು:

ಈ ಪ್ರತಿಕ್ರಿಯೆಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಜಾತಿ ವ್ಯವಸ್ಥೆ ಹೇಗೆ ಜನರನ್ನು ಪ್ರೇರೇಪಿಸುತ್ತದೆ ಎಂಬುದು ಅರ್ಥವಾಗುವುದೇ ಇಲ್ಲ ಅಲ್ಲದೆ ಈ ಆರೋಪಗಳು ಮನುವಾದಕ್ಕೆ, ವರ್ಣ ವ್ಯವಸ್ಥೆಗೆ ಸಾಕ್ಷಿಗಳಾದದ್ದು ಹೇಗೆ ಎನ್ನುವುದೂ ತಿಳಿಯುವುದಿಲ್ಲ. ಸ್ತ್ರೀವಾದಿಗಳು ವಾದಿಸಿದಂತೆ ಸುಮ್ಮನೆ ಯಾರನ್ನೋ ಅವಮಾನಿಸಿವುದು ಸರಿಯೆಲ್ಲವೆನ್ನುವುದನ್ನು ಒಪ್ಪೋಣ, ಆದರೆ ಇಂಥ ಚಿಂತಕರ ನಿಲುವು ಇದೇ ಬಗೆಯ ಇತರ ಘಟನೆಗಳಲ್ಲಿ ತೀರಾ ವಿರುದ್ಧವಾಗಿ ಕಾಣುತ್ತದೆ. ಈ ಹಿಂದೆ ಕರ್ನಾಟಕದಲ್ಲಿ ಪ್ರೊ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾದಾಗ, ಹಂತಕರಾರೆಂಬುದು ತಿಳಿಯುವ ಮೊದಲೇ ಇವರೆಲ್ಲರೂ ಹಿಂದೂ ರಾಷ್ಟ್ರವಾದಿಗಳು ಈ ಕೊಲೆಗಳಿಗೆ ಕಾರಣರೆಂದು ತನಿಖೆಗೆ ಮುನ್ನವೇ ಘೋಷಿಸಿಬಿಟ್ಟಿದ್ದರು. ಇದೇ ‘ಚಿಂತಕಿ’ಯರು ಹಾಲಿವುಡ್ ನಿರ್ದೇಶಕ ಹಾರ್ವೆ ವೇನ್‍ಸ್ಟೀನ್ ಮೇಲಿರುವ ಲೈಂಗಿಕ ಕಿರುಕುಳದ ಆರೋಪದ ಸಂದರ್ಭದಲ್ಲಿ ನಡೆಸಿದ್ದ ‘MeToo’ ಚಳವಳಿಗೆ ಬೆಂಬಲ ಸೂಚಿಸಿ, ಇಂಥ ಮತ್ತಷ್ಟು ಚಳವಳಿ ನಡೆಯಬೇಕು ಎಂದು ಅಪ್ಪಣೆ ಕೊಡಿಸಿದ್ದರು! ಈ ಪ್ರಕರಣಗಳಲ್ಲಿ ಡ್ಯೂ ಪ್ರೊಸೆಸ್ ಅವರ ಗಮನಕ್ಕೆ ಬಂದಂತೆ ಕಾಣುವುದಿಲ್ಲ. ಈಗ ತಮ್ಮದೇ ಐಡಿಯಾಲಜಿಕಲ್ ಗುಂಪಿನ ಸದಸ್ಯರ ವಿರುದ್ಧ ಇಂಥದ್ದೇ ಆಪಾದನೆ-ಚಳವಳಿ ಶುರುವಾಗಿದ್ದೇ ತಡ, ಇವರಿಗೆಲ್ಲ ತೀವ್ರ ಕಸಿವಿಸಿ ಶುರುವಾಗಿದೆ!

ಕೆಲವು ಪ್ರಶ್ನೆಗಳು

ಆರೋಪಿಯೊಬ್ಬ ಯಾವುದೋ ಜಾತಿಗೆ ಸೇರಿದ್ದಾನೆಂದ ಮಾತ್ರಕ್ಕೆ ಆರೋಪಿತ ಕೃತ್ಯಕ್ಕೂ ಜಾತಿಗೂ ಸಂಬಂಧವಿದೆಯೆಂದು ವಾದಿಸುವುದು ಅಸಂಬದ್ಧ. ತಮ್ಮ ವಾದಗಳಿಗೆ ವಿರೋಧವಾದ ಸಾಕ್ಷ್ಯಗಳನ್ನು ಒಂದು ಹುನ್ನಾರವೆಂದು ನಿರಾಕರಿಸುವುದು ಸರಿಯೆ? ಇವರಿಗೆ ಲೈಂಗಿಕ ದೌರ್ಜನ್ಯದಂಥ ಕುಕೃತ್ಯಗಳ ಕುರಿತು ಯೋಚಿಸುವುದಕ್ಕಿಂತ ತಾವು ಸರಿಯೆಂದು ನಂಬಿರುವುದನ್ನೇ ಸಾಧಿಸುವುದರಲ್ಲಿ ಹೆಚ್ಚು ಆಸಕ್ತಿ ಇದ್ದಂತೆ ಕಾಣಿಸುತ್ತದೆ. ಹಾಗೆಯೇ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಪರಾಧಿಯೆನ್ನುವ ಮುನ್ನ ಆರೋಪಗಳ ಯುಕ್ತಾಯುಕ್ತ ವಿಚಾರ ಮಾಡಬೇಕು ಎಂಬುದಕ್ಕೆ ಯಾರ ತಕರಾರೂ ಇಲ್ಲ. ಆದರೆ ಇದೇ ವಿಚಾರವಾದಿಗಳು ತಮ್ಮ ಗುಂಪಿನವರನ್ನು ಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುವಾಗ ಈ ಕ್ರಮಗಳನ್ನು ಮರೆತು ಯಾರನ್ನೋ ಆರೋಪಿಯೆಂದು ವಾದಿಸಲು ಕಾರಣವೇನು? ಅಂದರೆ, ಈ ಚಿಂತಕರಿಗೆ ತಮ್ಮ ಐಡಿಯಾಲಜಿಗೆ ಹತ್ತಿರವಾದವರಿಗೆ ವಿಪತ್ತು ಬಂದಾಗ ಜಾಗೃತವಾಗುವ ಕಾನೂನು ಉಪಕ್ರಮ ವಿಧಾನಗಳು ಇತರರ ವಿಷಯಗಳಲ್ಲಿ ನೆನಪಾಗುವುದಿಲ್ಲವೇಕೆ? ತಮ್ಮವರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯವೆ? ಇಷ್ಟೆಲ್ಲ ಸಮಸ್ಯೆಗಳಿವೆಯೆಂದ ಮಾತ್ರಕ್ಕೆ ಈ ಚಿಂತಕರನ್ನು ಅಪ್ರಮಾಣಿಕರೆನ್ನಲಾಗುವುದಿಲ್ಲ. ಬದಲಿಗೆ, ಒಂದೇ ರೀತಿ ವರ್ತಿಸುವ ಅನೇಕರಲ್ಲಿ ಇದು ಸಮಾನವಾಗಿರುವುದರಿಂದ ಈ ಅಸಂಬದ್ಧತೆಯನ್ನು ವ್ಯಕ್ತಿಗತ ಸಂಗತಿಯಾಗಿ ಗಮನಿಸುವುದಕ್ಕಿಂತ ಅವರ ಐಡಿಯಾಲಜಿಯ ಸಮಸ್ಯೆಯಾಗಿ ವಿಶ್ಲೇಷಿಸುವುದು ಸೂಕ್ತವೆನಿಸುತ್ತದೆ.

ಐಡಿಯಾಲಜಿ ಎಂದರೇನು?

ನಮ್ಮ ಬೌದ್ಧಿಕ ಜಗತ್ತಿನಲ್ಲಿ ಐಡಿಯಾಲಜಿಗಳನ್ನೇ ಸಿದ್ಧಾಂತಗಳೆಂದು ಕರೆದು ಅವುಗಳನ್ನು ವೈಜ್ಞಾನಿಕ ಸಿದ್ಧಾಂತಗಳೆಂಬಂತೆ ಭಾವಿಸಲಾಗಿದೆ. ಆದರೆ ಐಡಿಯಾಲಜಿಗಳು ವೈಜ್ಞಾನಿಕ ಸಿದ್ಧಾಂತಗಳಲ್ಲ. ಎಸ್. ಎನ್. ಬಾಲಗಂಗಾಧರವರು ವಿವರಿಸುವಂತೆ ವಿಜ್ಞಾನ ಮತ್ತು ಮನುಷ್ಯನ ಕ್ರಿಯೆಗಳಿಗೆ ತಂತ್ರಜ್ಞಾನವಿದ್ದಂತೆ, ಐಡಿಯಾಗಳ ಜಗತ್ತಿಗೆ ಐಡಿಯಾಲಜಿಗಳಿವೆ. ಅಂದರೆ, ಹೇಗೆ ಮನುಷ್ಯನ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ವಿಜ್ಞಾನಗಳ ಜ್ಞಾನವನ್ನು ಬಳಸಿ ಹೊಸ ವಸ್ತುಗಳನ್ನು ಉತ್ಪತ್ತಿ ಮಾಡಲು ತಂತ್ರಜ್ಞಾನವು ಹೇಗೆ ಸಹಾಯ ಮಾಡುತ್ತದೆಯೋ ಹಾಗೆಯೇ ಸಂಬಂಧವಿರದ ಥಿಯರಿಗಳನ್ನು, ವಿವರಣೆಗಳನ್ನು ಬಳಸಿ ಕೆಲವು ಕ್ರಿಯೆಗಳನ್ನು ಐಡಿಯಾಲಜಿ ಸಮರ್ಥಿಸುತ್ತದೆ. ಅಂದರೆ ಮೇಲಿನ ಉದಾಹರಣೆಗಳಲ್ಲಿ ಸಾಮಾಜಿಕ ನ್ಯಾಯ, ಜಾತಿ ವ್ಯವಸ್ಥೆ ಸಮಾನತೆ ಇತ್ಯಾದಿ ಸಿದ್ಧಾಂತಗಳನ್ನು ಯಾವುದೋ ಘಟನೆಗೆ ಜೋಡಿಸಿಕೊಂಡು ಯಾರನ್ನೋ ಹಳಿಯುವಲ್ಲಿ ಅಥವಾ ಸಮರ್ಥಿಸುವಲ್ಲಿ ಐಡಿಯಾಲಜಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಲೈಂಗಿಕ ಶೋಷಣೆಯಂಥ ಕೃತ್ಯಗಳನ್ನು ಡ್ಯೂ ಪ್ರೊಸೆಸ್, ಕಾನೂನು ಇತ್ಯಾದಿಗಳ ಹೆಸರಲ್ಲಿ ತೆರೆಮರೆಗೆ ಸರಿಸಲು, ಹಾಗೆಯೇ ಕೋಮುವಾದ, ಮೂಲಭೂತವಾದಗಳ ಹೆಸರಿನಲ್ಲಿ ಬಲಪಂಥೀಯರನ್ನು ಖಳನಾಯಕರನ್ನಾಗಿಸುವಲ್ಲಿ ಇದೇ ಐಡಿಯಾಲಜಿ ಕೆಲಸ ಮಾಡುತ್ತದೆ. ಐಡಿಯಾಲಜಿಗಳನ್ನು ಬಳಸುವಲ್ಲಿ ಎಡ, ಬಲ ಇತ್ಯಾದಿಗಳೆಲ್ಲರೂ ಸಮಾನರು. ಯಾವುದೇ ಐಡಿಯಾಲಜಿಯವರೂ ಈ ಮಾತಿಗೆ ಹೊರತಲ್ಲ.

ಮುಂದೆ…?

ಐಡಿಯಾಲಜಿಗಳಿಂದಾಯಿಂದಾಗಿ ಲೈಂಗಿಕ ದೌರ್ಜನ್ಯದಂಥ ಕೃತ್ಯಗಳೂ ಭಿನ್ನ ಗುಂಪುಗಳಿಗೆ ತಮಗೆ ‘ಬೇಕಾಗಿರುವ ಸತ್ಯ’ಗಳನ್ನು ಹೇಳಲು ಬೇಕಾದ ಸಾಕ್ಷ್ಯವಾಗಿ ಕಾಣಿಸುತ್ತಿವೆ! ಈ ಐಡಿಯಾಲಜಿಗಳ ಹೊಡೆದಾಟಗಳಲ್ಲಿ ಕೆಲವು ಸಂಗತಿಗಳು ನಮಗೆ ಕಾಣದಾಗಿವೆ. ಈ ಆರೋಪಗಳ ಮೂಲ ಉನ್ನತ ಶಿಕ್ಷಣ ಕೇಂದ್ರಗಳಾಗಿರುವುದರಿಂದ ನಮ್ಮ ಅಕಾಡಮಿಕ್ ಜಗತ್ತಿನಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇಲ್ಲಿ ತೊಂದರೆಯಿದೆ ಎಂಬುದು ಸ್ಪಷ್ಟ. ಆದರೆ ಈ ಆರೋಪ ಪಟ್ಟಿಯನ್ನು ಸಾರಾಸಗಟು ಒಪ್ಪಿಬಿಟ್ಟರೆ, ಯಾರು ಬೇಕಾದರೂ ಯಾರನ್ನಾದರೂ ಅಪರಾಧಿಯೆಂದು ಸಾರ್ವಜನಿಕವಾಗಿ ಘೋಷಿಸಿಬಿಡುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಆರೋಪಪಟ್ಟಿಗಳ ಚರ್ಚೆಯಲ್ಲಿ ಯಾರೊಬ್ಬರೂ ಯಾವ ಮಾನದಂಡದಿಂದ ಒಂದು ಸಂವಾದವನ್ನೋ ಒಂದು ಘಟನೆಯನ್ನೋ ಲೈಂಗಿಕ ದೌರ್ಜನ್ಯ ಎಂದು ಹೇಗೆ ನಿರ್ಧರಿಸುವುದು ಎಂಬುದನ್ನು ಚರ್ಚಿಸಿಲ್ಲ. ಬಹುತೇಕ ಬಾರಿ ಪರಸ್ಪರ ಒಪ್ಪಿಗೆ ಮೇರೆಗೆ ಇಂಥ ಸಂಬಂಧಗಳು ಹುಟ್ಟಿಕೊಂಡು ‘ಕಾರಣಾಂತರಗಳಿಂದ’ ಬಿರುಕುಂಟಾದಾಗ ಈ ರೀತಿ ಆರೋಪಗಳು ಹುಟ್ಟಿರುವ ನಿದರ್ಶನಗಳೂ ಬೇಕಾದಷ್ಟಿವೆ. ಹೀಗಿದ್ದಾಗ ಯಾವುದು ಲೈಂಗಿಕ ದೌರ್ಜನ್ಯ, ಅಂಥ ಘಟನೆಗಳು ವಿಶ್ವವಿದ್ಯಾನಿಲಯಗಳಲ್ಲಿ ಘಟಿಸದಿರಲು ಏನು ಮಾಡಬೇಕು ಎಂಬ ವಿಷಯಗಳನ್ನು ಚರ್ಚಿಸದೆ, ಕೇವಲ ಯಾವುದೋ ಐಡಿಯಾಲಜಿಗೆ ಜೋತುಬೀಳುವುದರಿಂದ ಸಾಧಿಸುವುದೇನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ನಿಜವಾಗಿ ಚಿಂತಕರು ಎನಿಸಿಕೊಂಡವರು ಚರ್ಚಿಸಿ ಮಾರ್ಗ ತೋರಬೇಕಾದ ರೀತಿ ಇದು. ಅದನ್ನು ಬಿಟ್ಟು ತಮಗೆ ಬೇಕಾದ್ದು, ತಮಗೆ ಬೇಕಾದವರು ಅನ್ನುವಂತೆ ವರ್ತಿಸತೊಡಗಿದರೆ ಅಂಥವರಿಗೆ ಐಡಿಯಾಲಜಿಯ ರೋಗ ಬಡಿದಿದೆ ಎನ್ನದೆ ವಿಧಿಯಿಲ್ಲ.

* ಈ ಲೇಖನವು ದಿನಾಂಕ 10 ಡಿಸೆಂಬರ್ 2017ರ ಕನ್ನಡ ಪ್ರಭದಲ್ಲಿ “ಅತ್ಯಾಚಾರಕ್ಕೂ ಐಡಿಯಾಲಜಿ ಸೊಂಕು” (ಪುಟ 8) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿತ್ತು. ಇಲ್ಲಿ ಪ್ರಕಟವಾಗಿರುವುದು ಆ ಲೇಖನದ unedited version.

ಚಿತ್ರಕೃಪೆ : subversify.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments