ಪ್ರಶ್ನೆ ರಾಹುಲ್ ಪಟ್ಟಾಭಿಷೇಕದ್ದಲ್ಲ; ಕಾಂಗ್ರೆಸ್ಸಿನ ನಿಗೂಢ ನಡೆಗಳದ್ದು
– ರಾಕೇಶ್ ಶೆಟ್ಟಿ
ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿಸುವಾಗ,ವಯೋವೃದ್ಧ ಕೇಸರಿಯವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎನ್ನುವುದು ಈಗ ಇತಿಹಾಸ. ಆದರೆ ಕೇಸರಿಯವರ ರಾಜಕೀಯ ಅಧ್ಯಾಯ ತೀರಾ,ಇಂದಿರಾ ಗಾಂಧಿಯವರ ಕಾಲದಲ್ಲಿ ದಲಿತ ನಾಯಕ ಜಗಜೀವನ್ ರಾಮ್ ಅವರ ರಾಜಕೀಯ ಜೀವನವನ್ನು ಮುಗಿಸಿದಷ್ಟು ಕ್ರೂರವಾಗಿರಲಿಲ್ಲವೆಂಬುದೇ ಸಮಾಧಾನ!
ದೇವೇಗೌಡರ ನೇತೃತ್ವದ ಸರ್ಕಾರವನ್ನು ವಿನಾಕಾರಣ ಬೀಳಿಸಿದ್ದ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆ ಗೆಲ್ಲಲು ನಾಯಕರೇ ಇರಲಿಲ್ಲವೆಂಬ ನೆಪವೊಡ್ಡಿ ಸೋನಿಯಾ ಅವರನ್ನು ಮುನ್ನೆಲೆಗೆ ತರಲಾಯಿತು. ರಾಜೀವ್ ಗಾಂಧಿಯವರ ಕೊಲೆಯ ನಂತರ ದೇಶವನ್ನು,ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿದ್ದ ಪಿವಿ ನರಸಿಂಹರಾವ್ ಕಾಂಗ್ರೆಸ್ಸಿನಲ್ಲಿ ಯಾರಿಗೂ ಆಗ ಬೇಡವಾಗಿದ್ದರು. ಕಾರಣ ಸ್ಪಷ್ಟ, ನೆಹರೂ ಕುಟುಂಬದ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ, ನಕಲಿ ಗಾಂಧಿ ಕುಟುಂಬದ ಮುಖ ಸ್ತುತಿ ಮಾಡುವ ಗುಲಾಮರು ಇಷ್ಟವಾಗುತ್ತಾರೆಯೇ ಹೊರತು ಸ್ವಂತ ಬುದ್ಧಿಶಕ್ತಿ,ಚಿಂತನೆಯುಳ್ಳ ನಾಯಕರಲ್ಲ. ಇಂದಿರಾ ಕಾಲದಲ್ಲಿ ಜಗಜೀವನ್ ರಾಮ್,ಮೊರಾರ್ಜಿ ದೇಸಾಯಿಯಂತವರನ್ನು ಹಣಿಯಲಾಗಿತ್ತು. ಸೋನಿಯಾ ಕಾಲಕ್ಕೆ ನರಸಿಂಹರಾವ್,ಕೇಸರಿಯವರು ನೆಹರೂ ಕುಟುಂಬದ ರಾಜಕೀಯ ಬೇಟೆಗೆ ಬಲಿಯಾದರು.ಕೇಸರಿಯವರನ್ನು ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷ ಹುದ್ದೆಯಿಂದ ಇಳಿಸಿ, ಸೋನಿಯಾ ಅವರಿಗೆ ಪಟ್ಟ ಕಟ್ಟಲು,ಸೋನಿಯಾರ ಟೀಮು ಸೇರಿಕೊಂಡಿದ್ದ ಪ್ರಣಬ್ ಮುಖರ್ಜಿ,ಶರದ್ ಪವಾರ್ ಅವರಂತವರಿಗೂ ಮುಂದೊಂದು ದಿನ ಕೇಸರಿಯವರಿಗೆ ಸಿಕ್ಕ ಅದೇ ರುಚಿಯ ಸ್ವಾದವೂ ಸಿಕ್ಕಿತು. ಶರದ್ ಪವಾರ್, ಸಂಗ್ಮಾ, ತಾರೀಖ್ ಅನ್ವರ್ ಅವರನ್ನು ಪಕ್ಷದಿಂದ ಹೊರಹಾಕಿದರು. ಮುಂದೊಂದು ದಿನ ಅಡ್ಡಿಯಾಗಬಹುದಾಗಿದ್ದ ರಾಜೇಶ್ ಪೈಲಟ್,ಮಾಧರಾವ್ ಸಿಂಧಿಯಾ ರಸ್ತೆ ಮತ್ತು ವಿಮಾನಾಪಘಾತಗಳಲ್ಲಿ ಸತ್ತರು.ಈ ರೀತಿ ವಿಮಾನಾಪಘಾತ/ರಸ್ತೆ ಅಪಘಾತಗಳಲ್ಲಿ ಸಾಯುವವರ ಪಟ್ಟಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಲ್ಲಿ ಸಿಗುತ್ತದೆ.ಆದರೆ ಹಾಗೆ ಸಿಗುವ ಪಟ್ಟಿ ಇದೇ ನೆಹರು ಕುಟುಂಬದ ಆಸುಪಾಸಿನಲ್ಲಿ ಸುತ್ತುತ್ತದೆ. ನಿಗೂಢತೆ ಮತ್ತು ನೆಹರೂ ಕುಟುಂಬಕ್ಕೂ ಅದೇನೋ ಒಂದು ನಂಟು.
ನೆಹರೂ ಪ್ರಧಾನಿಯಾಗಿದ್ದೆ ಒಂದು ನಿಗೂಢ. ಕಾಂಗ್ರೆಸ್ಸಿನ ಕಾರ್ಯಕಾರಿಣಿ ಪ್ರಧಾನಿಯಾಗಿ ಬಯಸಿದ್ದು ಸರ್ದಾರ್ ವಲ್ಲಭಾಯ್ ಪಟೇಲರನ್ನು,ಆದರೆ ಗಾಂಧೀಜಿಯವರ ಬುದ್ಧಿಯ ಮೇಲೆ ಯಾರ,ಯಾವ ಪ್ರಭಾವವಿತ್ತೋ ಅವರು ನೆಹರೂವನ್ನು ಪ್ರಧಾನಿಯನ್ನಾಗಿ ದೇಶದ ಮೇಲೆ ಹೇರಿಕೆ ಮಾಡಿದರು.ಸ್ವಾತಂತ್ರ್ಯ ದಕ್ಕಿ ಭಾರತೀಯರ ಕೈಗೆ ಆಡಳಿತ ಸಿಗುವ ವೇಳೆಗೆ ಭಾರತಕ್ಕೆ ಬಂದಿಳಿದ ಮೌಂಟ್ ಬ್ಯಾಟನ್ ದಂಪತಿಯೊಂದಿಗೆ ನೆಹರೂವಿಗಿದ್ದ ಆಪ್ತ ಸ್ನೇಹವೆಲ್ಲಾ ಕಾಕತಾಳೀಯವಾಗಿರಲಿಕ್ಕಿಲ್ಲ. ನೆಹರು ಪ್ರಧಾನಿಯಾಗಿ ಕಾಶ್ಮೀರ, ಟಿಬೆಟ್,ಚೀನಾ ವಿಷಯದಲ್ಲಿ ತೆಗೆದುಕೊಂಡ ತಿಕ್ಕಲು ನಿರ್ಧಾರಗಳ ಹಿಂದೆ ಯಾವ ಮರ್ಜಿಯಿತ್ತೋ, ಯಾರ ನಿರ್ದೇಶನಗಳಿತ್ತೋ ಏನೋ? ಬಲ್ಲವರಾರು! ನೀವು ಮದ್ರಾಸ್ ಕೆಫೆ ಸಿನಿಮಾ ನೋಡಿದ್ದರೇ, ಅದರಲ್ಲಿರುವ ಗುಪ್ತಚರ ಅಧಿಕಾರಿ ಯಾವುದೋ ಮರ್ಜಿಗೆ ಬಿದ್ದು ವಿದೇಶಿ ಶಕ್ತಿಗಳ ತಾಳಕ್ಕೆ ಹೇಗೆ ಕುಣಿಯುತ್ತಿರುತ್ತಾನೆ ಎನ್ನುವುದು ತಿಳಿಯುತ್ತದೆ.ನಿಗೂಢ ಹತ್ಯೆಗಳ ವಿಷಯಕ್ಕೆ ಬಂದರೇ, ನೆಹರೂ ಕಾಲದಲ್ಲೇ ಪಂಡಿತ್ ಶ್ಯಾಮ್ ಪ್ರಸಾದ್ ಮುಖರ್ಜಿಯವರನ್ನು ಕಾಶ್ಮೀರದಲ್ಲಿ ನಿಗೂಢವಾಗಿ ಕೊಲ್ಲಲಾಯಿತು, ಜ್ವರ ಬಂದು ಸತ್ತರೆಂದು ಹೇಳಿದರು.ಖುದ್ದು ನೆಹರೂ ಸಾವು ವಯೋ ಸಹಜವೇ ಆದರೂ,ಯಾವ್ಯಾವುದೋ ಖಾಯಿಲೆ ಬಂದು ಸತ್ತರು ಎನ್ನುತ್ತಾರೆ. ಮಹಾನ್ ಸಮಾಜವಾದಿ,ಪ್ರಜಾಪ್ರಭುತ್ವವಾದಿಯೆಂದು ಗಂಜಿಗಿರಾಕಿಗಳಿಂದ ಈಗಲೂ ಹೊಗಳಿಸಿಕೊಳ್ಳುವ ನೆಹರೂ ತನ್ನ ಉತ್ತರಾಧಿಕಾರಿಯಾಗಿ ನೋಡ ಬಯಸಿದ್ದು ಮಗಳು ಇಂದಿರಾರನ್ನು. ಆದರೆ ವರದಾನದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದರು. ಅಂತಹ ಶಾಸ್ತ್ರಿಯವರ ಅಂತ್ಯ ದೂರದ ತಾಷ್ಕೆಂಟಿನಲ್ಲಿ ಅತ್ಯಂತ ನಿಗೂಢ ರೀತಿಯಲ್ಲಿ ಆಯಿತು.ಅವರಿಗೆ ಹಾರ್ಟ್ ಅಟ್ಯಾಕ್ ಆಯಿತೆಂದು ಹೇಳಿದರು. ನಂತರ ಅಧಿಕಾರಕ್ಕೇರಿದ್ದು ಇಂದಿರಾ ಗಾಂಧಿ. ಹಾಗೆ ನೋಡಿದರೆ ನೆಹರೂ ಕಾಲಕ್ಕಿಂತಲೂ ಹೆಚ್ಚು ನಿಗೂಢತೆ ಇರುವ ಘಟನೆಗಳು ಇಂದಿರಾ ಗಾಂಧಿಯವರ ಕಾಲದಲ್ಲೇ ನಡೆದಿವೆ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ನಂತರ ಪ್ರಬಲ ವಿರೋಧ ಪಕ್ಷದ ನಾಯಕಾರಾಗುತ್ತಿದ್ದ ದೀನ್ ದಯಾಳ್ ಉಪಾಧ್ಯಾಯರ ಕೊಲೆ ಇಂದಿಗೂ ನಿಗೂಢವೇ!
ನಗರ್ವಾಲ ಹಗರಣವೆಂದೇ ಕರೆಯಲ್ಪಡುವ ಬ್ಯಾನ್ಕ್ ದರೋಡೆ ಪ್ರಕರಣ ನಿಮಗೆ ಗೊತ್ತಿರಬಹುದು.ಸ್ಟೇಟ್ ಬ್ಯಾನ್ಕಿನ ಕ್ಯಾಶಿಯರ್ ಮಲ್ಹೋತ್ರಾ ಅವರಿಗೆ,ಇಂದಿರಾ ಗಾಂಧಿಯವರ ಮನೆಯಿಂದ,ಅವರದೇ ದನಿಯನ್ನು ಅನುಕರಿಸಿ ಮಾಡಲಾಗಿದ್ದ ಕರೆಯಲ್ಲಿ,ಬಾಂಗ್ಲಾದೇಶಿಯೊಬ್ಬರಿಗೆ 60 ಲಕ್ಷ ರೂಪಾಯಿಗಳನ್ನು ಕೊಡುವಂತೆ ಹೇಳಿತ್ತು. ನಂತರ ತಿಳಿದು ಬಂದಿದ್ದು ಇಂದಿರಾ ಗಾಂಧಿಯವರಿಂದ ಆ ಕರೆ ಬಂದಿಲ್ಲವೆಂದು! ಹಾಗಿದ್ದರೆ ಇಂದಿರೆಯ ಮನೆಯ ಒಳ ಹೊಕ್ಕು ಅವರ ದನಿ ಅನುಕರಿಸಿದ್ದು ಯಾರು? ಗೂಬೆಯನ್ನು ಸೈನ್ಯದ ನಿವೃತ್ ಕ್ಯಾಪ್ಟನ್ ನಗರ್ವಾಲ ಅವರ ಮೇಲೆ ಹೊರಿಸಲಾಯಿತು. ಗಂಡಸೊಬ್ಬ ಇಂದಿರಾರಂತೆ ಮಾತನಾಡಿದ್ದನಂತೆ! ಈ ಕೇಸಿನ ತನಿಖೆಗೆ ಇಳಿದ ಅಧಿಕಾರಿ ಕಶ್ಯಪ್ ಅವರು ನಿಗೂಢವಾಗಿಯೇ ಸತ್ತರು. ಅದಾಗಿ ಒಂದು ವರ್ಷಕ್ಕೆ ನಗರ್ವಾಲರಿಗೂ ಹಾರ್ಟ್ ಅಟ್ಯಾಕ್ ಆಯಿತಂತೆ! ಅಲ್ಲಿಗೆ ಇಂದಿರಾ ಗಾಂಧಿಯವರ ಮನೆಯ ಆ ಹೆಣ್ಣು ಧ್ವನಿ ಯಾವುದೆಂದು ಅಧಿಕೃತವಾಗಿ ಹೊರಬರಲೇ ಇಲ್ಲ. ಅಂದ ಹಾಗೇ, ಆ ಸಮಯಕ್ಕಿನ್ನು ಸಂಜಯ್ ಗಾಂಧಿಗೆ ಮದುವೆಯಾಗಿರಲಿಲ್ಲ.
ಈ ಬ್ಯಾನ್ಕ್ ದರೋಡೆಯಂತೆ ಸುದ್ದಿಯಾದ ಮತ್ತೊಂದು ಘಟನೆ, ಜೀವನ್ ವಿಮಾ ನಿಗಮದ ಕಿಣಿಯೆನ್ನುವವರಿಗೆ, ಇಂದಿರಾ ಅವರಿಂದ ಬಂದಿತ್ತು ಎನ್ನಲಾದ ಫೋನ್ ಕಾಲ್. ಸಂತ್ರಸ್ತೆಯೊಬ್ಬರಿಗೆ ಅವರು ವಿಮೆ ಮಾಡಿಸಿಲ್ಲವಾದರೂ ಹಣ ಕೊಡಲೇಬೇಕು ಇಲ್ಲದಿದ್ದರೆ ನಿನ್ನ ಕೆಲಸ ಉಳಿಯುವುದಿಲ್ಲವೆಂದು ಧಮಕಿ ಹಾಕಿತ್ತು ಆ ಧ್ವನಿ. ಕರೆ ಮಾಡಿದ್ದು ಸ್ವತಃ ಪ್ರಧಾನಿ ಇಂದಿರಾ ಗಾಂಧಿಯವರೇ ಎಂದುಕೊಂಡ ಕಿಣಿಯವರ ಹೃದಯ ಸ್ತಬ್ಧವಾಯಿತು. LIC ನೌಕರರು ಬೀದಿಗಿಳಿದು ಬೊಬ್ಬೆ ಹೊಡೆದರೂ ಸತ್ಯ ಹೊರಗೇ ಬರಲೇ ಇಲ್ಲ. ಅದನ್ನೂ ಇಂದಿರಾ ಮನೆಯ ನೌಕರನೊಬ್ಬ ತಮಾಷೆಗೆ ಮಾಡಿದ್ದು ಎಂದು ಮುಚ್ಚಿ ಹಾಕಲಾಯಿತು.
ಇಂದಿರಮ್ಮನಿಗೆ ತನ್ನ ಸುತ್ತಲೇ ಇರುವ ಯಾರಿಂದ ಈ ಕೆಲಸಗಳು ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲದೇ ಏನು? ಆ ವ್ಯಕ್ತಿಯ ಹೆಸರು ಬಯಲು ಮಾಡಿದರೇ ಏನು ಅನಾಹುತವಾಗುತ್ತಿತ್ತೋ ಏನೋ,ಹಾಗಾಗಿ ಈ ಕೇಸು ನಿಗೂಢವಾಗಿಯೇ ಹೋಯಿತು.ಈ ನಿಗೂಢತೆಯ ಸಾಲಿಗೆ ಮೆಚ್ಚಿನ ಪುತ್ರ ಸಂಜಯ್ ಸಾವು ಕೂಡ ಸೇರಿಕೊಂಡಿತು. ಇಷ್ಟೆಲ್ಲಾ ನಿಗೂಢತೆಯನ್ನು ಅರಿತಿದ್ದ ಇಂದಿರಮ್ಮನ ಹತ್ಯೆಯೂ ನಿಗೂಢವಾಗಿಯೇ ಹೋಯಿತು.ಮೇಲ್ನೋಟಕ್ಕೆ ಆಕೆಯ ಗಾರ್ಡುಗಳೇ ಕೊಂದವರು ಎಂದರೂ,ಆಕೆ ಸಾಯುವ ದಿನದ ಘಟನೆಗಳು, ನಂತರ ಹಳ್ಳ ಹಿಡಿದ ತನಿಖೆ ಎಲ್ಲವೂ ಈ ನಿಗೂಢತೆಯನ್ನು ಹೆಚ್ಚಿಸುತ್ತವೆ.ಖುದ್ದು ಮಗನೇ ಪ್ರಧಾನಿಯಾಗಿದ್ದರೂ ತನಿಖಾ ವರದಿ ಸಂಸತ್ತಿನಲ್ಲಿ ಮಂಡನೆಯಾಗಲೇ ಇಲ್ಲ.
ಇಂದಿರಾ ಗಾಂಧಿಯವರ ನಂತರ ಪ್ರಧಾನಿಯಾದ ರಾಜೀವ್ ಗಾಂಧಿಯವರ ಹತ್ಯೆಯ ಕುರಿತ ತನಿಖಾ ವರದಿಗಳನ್ನು ಓದಿದರಂತೂ,ಇಂತಹದ್ದೊಂದು ವ್ಯವಸ್ಥಿತ ಕೊಲೆಯಲ್ಲಿ LTTE ಸಂಘಟನೆ ಪಾತ್ರಧಾರಿಯಷ್ಟೇ ಎನ್ನುವುದು ತಿಳಿದುಬಿಡುತ್ತದೆ.ತಮಿಳುನಾಡಿನಿಂದ ಸ್ಥಳೀಯ ಗುಪ್ತಚರ ಅಧಿಕಾರಿಗಳು ಸಾಲು ಸಾಲು ಸಂದೇಶ ಕಳುಹಿಸಿ ರಾಜೀವ್ ಗಾಂಧಿಯವರ ಜೀವಕ್ಕೆ ಅಪಾಯವಿದೆ,ಸ್ಪೋಟಕ ಸಾಮಗ್ರಿ ತುಂಬಿಕೊಂಡ ಹಡಗು ಶ್ರೀಲಂಕಾದಿಂದ ತಮಿಳುನಾಡಿಗೆ ಬಂದಿದೆ, ಇಂತಿತ ಜಾಗದಲ್ಲಿ LTTE ಯವರು ಇದ್ದಾರೆ ಎಂಬೆಲ್ಲ ಮಾಹಿತಿಗಳನ್ನು ಕಳುಹಿಸಿದರೂ ಆಗ ಕೇಂದ್ರ ಗುಪ್ತಚರ ಮುಖ್ಯಸ್ಥರು ಕ್ಯಾರೇ ಎನ್ನಲೇ ಇಲ್ಲ. ಮುಂದೆ ಸೋನಿಯಾ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅದೇ ವ್ಯಕ್ತಿ ರಾಷ್ಟ್ರೀಯ ಭದ್ರತಾ ಸಲೆಹಗಾರರಾಗಿ, ರಾಜ್ಯಪಾಲರಾಗಿ ನಿವೃತ್ತರಾದರು!
ಈಗಲೂ ನೋಡಿ. ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧೀ ಆರೋಗ್ಯದ ಸಮಸ್ಯೆ ಎಂದು ಹೊರ ದೇಶಕ್ಕೆ ಹೋದರು ಎನ್ನುವ ಸುದ್ದಿಗಳು ಬಂದವೇ ಹೊರತು,ಅವರು ಯಾವ ದೇಶಕ್ಕೆ ಹೋಗಿದ್ದರು,ಅವರಿಗೇನು ಖಾಯಿಲೆ ಆ ಯಾವುದೇ ಮಾಹಿತಿಗಳು ಹೊರಬರುವುದಿಲ್ಲವಲ್ಲ,ಇದ್ಯಾಕೆ ಈ ಪರಿ ನಿಗೂಢತೆ? ಅದು ಬಿಡಿ, ಈ ರಾಹುಲ್ ಗಾಂಧೀ ಆಗಾಗಾಹೋಗುವ ಟ್ರಿಪ್ಪುಗಳ ಗುಟ್ಟೇನು?ಅದೇನಾದರೂ ಬಯಲಾಗಿದೆಯೇ? ಅದೇಕೆ ಈ ಕುಟುಂಬದ ವಿಷಯದಲ್ಲಿ ಇಷ್ಟೆಲ್ಲಾ ನಿಗೂಢತೆ,ರಹಸ್ಯಗಳು?
ಈ ನಿಗೂಢ ಘಟನೆಗಳನ್ನೆಲ್ಲಾ ನೋಡಿದಾಗ, ದೂರದ ದೇಶದಲ್ಲೆಲ್ಲಿಂದಲೋ ಈ ದೇಶದ ರಾಜಕೀಯವನ್ನು ನಿಯಂತ್ರಿಸಲಾಗುತ್ತಿತ್ತು ಮತ್ತು ಈಗಲೂ ಅಂತಹ ಪ್ರಯತ್ನಗಳು ನಡೆಯುತ್ತಲೇ ಇವೆ ಎನ್ನುವುದು ಸ್ಪಷ್ಟವಾಗುವುದಿಲ್ಲವೇ? ಅಭಿವೃದ್ಧಿ ಶೀಲ ದೇಶಗಳನ್ನು ಬಲಾಢ್ಯ ದೇಶಗಳು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬಯಸುತ್ತವೆ.ಎಷ್ಟಾದರೂ ಭಾರತದಂತಹ ಅಗಾಧ ದೇಶ ಮತಾಂತರಕ್ಕೆ, ವ್ಯಾಪಾರಕ್ಕೆ ಪ್ರಶಸ್ತವಾದ ಜಾಗ,ಯಾರು ತಾನೇ ಬಿಟ್ಟಾರು ಹೇಳಿ. ಖುದ್ದು ಇಂದಿರಮ್ಮನೇ ಅಮೆರಿಕಾದ CIA Agentಗಳು ಭಾರತದ ರಾಜಕಾರಣದಲಿದ್ದಾರೆ ಎಂದಿದ್ದರಲ್ಲವೇ? ಅಮೆರಿಕಾದಂತೆಯೇ ಬೇರೆ ದೇಶಗಳೂ ಸಹ Agentಗಳನ್ನು ಭಾರತದಲ್ಲಿ ಬಿಟ್ಟಿರಲೂಬಹುದು. ಇವರೆಲ್ಲ ಈ ದೇಶದ ಮಾಧ್ಯಮಗಳ,ಜ್ಞಾನ ಕೇಂದ್ರಗಳ,ಜನಾಭಿಪ್ರಾಯ ರೂಪಿಸುವಂತಹ ಆಯಕಟ್ಟಿನ ಜಾಗಗಳಲ್ಲಿ ತೂರಿಕೊಂಡಿದ್ದಾರೆ.
ರಾಜೀವ್ ನಿಧನದ ಏಳು ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದ ಸೋನಿಯಾರನ್ನು, ಧಿಡೀರ್ ಮುನ್ನೆಲೆಗೆ ತರಲಾಗುತ್ತದೆ.ದೇಶದಾದ್ಯಂತ ಕಾಂಗ್ರೆಸ್ ಗಂಜಿಗಿರಾಕಿಗಳೆಲ್ಲ ಸೇರಿಕೊಂಡು ಹೊಸ ನಾಯಕಿಯ ಉದಯವೆಂದು ವಂಗಮಾಗಧರಂತೆ ಉಧೋ ಉಧೋ ಎನ್ನುತ್ತಾರೆ.ಹೀಗೆ ಹೇಳಲು ಅದೆಷ್ಟು ಗಂಜಿ ಸರಬರಾಜಿಯಿತೋ ಗೊತ್ತಿಲ್ಲ. ದೇಶದಾದ್ಯಂತ ಪ್ರತಿಯೊಂದು ಪ್ರಭಾವಿ ಜಾಗದಲ್ಲಿ ಬೇರು ಬಿಟ್ಟಿರುವ ಈ ಗಂಜಿಗಿರಾಕಿಗಳು, ಸೋನಿಯಾ ಅವರನ್ನು ಹಾಡಿ ಹೊಗಳಿದಂತೆ ಈಗ ರಾಹುಲ್ ಮತ್ತು ಪ್ರಿಯಾಂಕರನ್ನು ಹಾಡಿ ಹೊಗಳಿ ಜನ ಮಾನಸದಲ್ಲಿ ಅವರ ಬಗ್ಗೆ ಇಂಪ್ರೆಷನ್ ಕ್ರಿಯೇಟ್ ಮಾಡುವ ಕೆಲಸದಲ್ಲಿ ನಿರತವಾಗಿವೆ. ಉದಾಹರಣೆಗೆ – ಫಿರೋಜ್ ಗ್ಯಾಂಡಿ ಎಂಬ ಪಾರ್ಸಿಯನ್ನು ಮದುವೆಯಾದ ಇಂದಿರಾ ನೆಹರೂ,ಇಂದಿರಾ ಗಾಂಧಿಯಾಗಿ ಬದಲಾಗುವುದಾದರೇ, ರಾಬರ್ಟ್ ವಾಧ್ರಾನನ್ನು ಮದುವೆಯಾದ ಪ್ರಿಯಾಂಕಾ ಗಾಂಧೀ ಪ್ರಿಯಾಂಕ ವಾಧ್ರಾ ಆಗಬೇಕಲ್ಲವೇ? ಊಹುಂ, ಆಕೆ ಮಾಧ್ಯಮದವರ ಪಾಲಿಗೆ ಪ್ರಿಯಾಂಕಾ ಗಾಂಧಿಯೇ! ಹೆಸರು ಮಾತ್ರ ಸಾಕೇ ,ಇನ್ನೊಂದಿಷ್ಟು ತಳುಕು ಬಳುಕು ಬೇಕಲ್ಲ.ಪ್ರಿಯಾಂಕಾ ಅಜ್ಜಿ ಇಂದಿರಾ ಗಾಂಧಿಯ ಹೋಲಿಕೆ ಹೊಂದಿದ್ದಾರೆ,ಅದೇ ಹೇರ್ ಸ್ಟೈಲು,ಅದೇ ರೀತಿ ಸೀರೆ ಉಡುತ್ತಾರೆ,ಜನರನ್ನು ಆಕರ್ಷಿಸುತ್ತಾರೆ,ಪಕ್ಷದ ಮುಂದಿನ ನಾಯಕಿಯಾಗುವ ಚರಿಷ್ಮಾ ಅವರಿಗಿದೆ ಎಂದೆಲ್ಲ ಮೂಳೆ ನೆಕ್ಕುವ ಶ್ವಾನಗಳಂತ ವರದಿಗಳನ್ನು ಬರೆಸಲಾಗುತ್ತದೆ.
ಇಂತಹದ್ದೆ ಕೆಲಸವನ್ನು ಈ Prestituteಗಳು ರಾಹುಲ್ ಗಾಂಧಿಯ ವಿಷಯದಲ್ಲೂ ದಶಕಗಳಿಂದ ಮಾಡಿಕೊಂಡು ಬರುತ್ತಿವೆ. ಎಷ್ಟೇ ನಕಲಿ ಪರದೆ ಕಟ್ಟಿದರೂ,ಒಂದಲ್ಲ ಒಂದು ದಿನ ಪರದೆ ಸರಿಯಲೇ ಬೇಕಲ್ಲ! ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಡಿದು ಉಪಾಧ್ಯಕ್ಷನಾಗಿ ರಾಹುಲ್ ಸಾಧನೆ ಶೂನ್ಯ. ಹಾಗಿದ್ದಾಗ್ಯೂ, ಕಾಂಗ್ರೆಸ್ ಎಂಬ ನೆಹರೂ ಫ್ಯಾಮಿಲಿ ಪ್ರಾಪರ್ಟಿ ಪಕ್ಷದ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯನ್ನೇ ಸರ್ವಾನುಮತವೆಂಬ ಹೆಸರಿನಲ್ಲಿ SELECT ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯೆಂದರೇ ಕಾಮಿಡಿಯನ್ ಎನ್ನುವ ಮಟ್ಟಿಗೆ ಆಗಿ ಹೋಗಿದೆ. ಎಷ್ಟರ ಮಟ್ಟಿಗೆ ಎಂದರೆ, “ಗೆದ್ದರೆ ಆಡೋಕೆ ಬಂದಿದ್ದೆ,ಸೋತರೆ ನೋಡೋಕೆ ಬಂದಿದ್ದೆ” ಅಂತೊಂದು ಹಳೆಯ ಗಾದೆ ಕಾಂಗ್ರೆಸ್ಸಿನ ಗುಲಾಮ ನಾಯಕರು,ಗಂಜಿಗಿರಾಕಿಗಳು ಈ ಹಳೆಯ ಗಾದೆಗೊಂದು ಹೊಸ ಟಚ್ ಕೊಟ್ಟು ಹೀಗೆ ಹೇಳುತ್ತಾರೆ : “ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಹುಲ್ ಕಾರಣ. ಸೋತರೆ ಇವಿಎಂ/ಸ್ಥಳೀಯ ನಾಯಕರು ಕಾರಣ”.
ರಾಜೀವ್ ಗಾಂಧಿಯವರ ಮಡದಿ ಎಂಬ ಏಕೈಕ ‘ಅರ್ಹತೆ’ಯ ಆಧಾರದ ಮೇಲೆ ಹೇಗೆ ಸೋನಿಯಾ ಗಾಂಧಿಯವರನ್ನು ತಂದು ಕಾಂಗ್ರೆಸ್ ಎಂಬ ಫ್ಯಾಮಿಲಿ ಬ್ಯುಸಿನೆಸ್ಸಿನ ಸಿಇಓ ಮಾಡಲಾಯಿತೋ ಅದೇ ರೀತಿಯಲ್ಲಿ,ಸೋನಿಯಾ ಪುತ್ರನೆಂಬ ಏಕೈಕ ಕಾರಣದಿಂದಲೇ ಈಗ ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ Select ಮಾಡಲಾಗಿದೆಯೇ ಹೊರತು, ರಾಹುಲ್ ಗಾಂಧಿಯವರ ಇಲ್ಲಿಯವರೆಗಿನ ಸಾಧನೆಗಳೇನು ಹೇಳಿ?
ಸಾಧನೆಗಳು ಹಾಳಾಗಿ ಹೋಗಲಿ, ಈ ವ್ಯಕ್ತಿಯ ಬುದ್ಧಿಮತ್ತೆ ಎಂತದ್ದು? ಈ ದೇಶದ ಪ್ರಧಾನಿಯಾಗುವವ ಎಂದು ಗಂಜಿಗಿರಾಕಿಗಳಿಂದ ಬಿಂಬಿಸಲ್ಪಡುತ್ತಿರುವ ವ್ಯಕ್ತಿಗೆ ಈ ದೇಶದ ಕುರಿತು ಯಾವ Vision ಇದೆ ಕೇಳಿ ನೋಡಿ. 2014ರ ಚುನಾವಣಾ ಸಮಯದಲ್ಲಿ ಅರ್ನಾಬ್ ಗೋಸ್ವಾಮಿಯವರಿಗೆ ನೀಡಿದ ಸಂದರ್ಶನದಲ್ಲಿ ಸಾಹೇಬರ ಬುದ್ಧಿಶಕ್ತಿಯ ಪರಿಚಯ ಜನರಿಗೆ ಆಗಿತ್ತು, ಮೊನ್ನೆ ಮೊನ್ನೆ ಗುಜರಾತ್ ಚುನಾವಣೆ ಸಮಯದಲ್ಲೂ ನೀಡಿದ ಸಂದರ್ಶನವೂ ಹಾಗೆಯೇ ಇತ್ತು. ಉದಾಹರಣೆಗೇ, ಸಂದರ್ಶಕಿ ಗುಜರಾತ್ ಬಗ್ಗೆ ನಿಮ್ಮ Vision ಏನು ಎಂದು ಕೇಳುತ್ತಾಳೆ. ರಾಹುಲ್ ಗಾಂಧಿಯ ಉತ್ತರವೇನಿತ್ತು ಗೊತ್ತೇ? ಗುಜರಾತಿನ ವಿಷನ್ ಅನ್ನು ಗುಜರಾತಿನ ಜನ ನಿಶ್ಚಯಿಸುತ್ತಾರೆಯೇ ಹೊರತು ರಾಹುಲ್ ಗಾಂಧೀ ನಿಶ್ಚಯಿಸುವುದಿಲ್ಲ! ಅಷ್ಟೇ… ಭಾರತದ ಹಣೆಬರಹವನ್ನು ಭಾರತದ ಜನರೇ ನಿಶ್ಚಯಿಸಿಕೊಳ್ಳಬೇಕೇ ಹೊರತು ನನ್ನನ್ನು ನಂಬಿಕೊಳ್ಳಬೇಡಿ ಎಂಬ ಪ್ರಾಮಾಣಿಕ ಉತ್ತರ ರಾಹುಲ್ ಗಾಂಧಿಯದ್ದು.
ಅಂತವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅದನ್ನು ಲೈಟ್ ಆಗಿ ತೆಗೆದುಕೊಳ್ಳುವುದು ಎದುರಾಳಿ ಬಿಜೆಪಿ ಪಕ್ಷಕ್ಕೆ ಸರಿ ಎನಿಸಲೂ ಬಹುದು. ಆದರೆ ಪ್ರಶ್ನೆ ರಾಹುಲ್ ಗಾಂಧಿಯದ್ದಲ್ಲ. ಈ ಹಿಂದೆ ಹೇಳಿದ ಬೇರೆ ಬೇರೆ ನಿಗೂಢ ಘಟನೆಗಳ ಸೂತ್ರಧಾರಿಗಳದ್ದು. ಅವರಿಗೆ ಭಾರತ ಒಂದು ಸ್ವತಂತ್ರ ಶಕ್ತಿಯಾಗಿ ನಿಲ್ಲುವುದು ಮತ್ತು ಮುಖ್ಯವಾಗಿ ಈ ದೇಶದ ಸನಾತನ ಸಂಸ್ಕೃತಿ ಪುನರುಜ್ಜೀವನ ಆಗುವುದು ಬೇಕಿಲ್ಲ.ಅದನ್ನು ತಡೆಯಲು ಇವರು ನಾನಾ ದಾಳಗಳನ್ನು ಉರುಳಿಸಬಲ್ಲರು,ಸಮಾಜವನ್ನು ಹಾಳು ಗೆಡವಿಯಾದರೂ ತಮ್ಮ ಕೈಗೊಂಬೆ ನಾಯಕನ ಪ್ರತಿಷ್ಠಾಪನೆಗೆ ಇವರು ಪ್ರಯತ್ನಿಸುತ್ತಾರೆ. ಗುಜರಾತ್ ಚುನಾವಣೆಯ ಉದಾಹರಣೆಯನ್ನೇ ನೋಡಿ. ಇಡೀ ರಾಜ್ಯದಲ್ಲೇ ಜಾತಿ ಜಾತಿಗಳ ನಡುವೆ ಕಿಚ್ಚು ಹಚ್ಚಿ ಚಳಿ ಕಾಯಿಸಿಕೊಂಡರು.ಕಡೆಗೆ ಅವರೆಲ್ಲರೂ ಬಂದಿದ್ದೂ ಕಾಂಗ್ರೆಸ್ ತೆಕ್ಕೆಗೆ. ಗುಜರಾತಿನಲ್ಲೇನೋ ಇವರು ಸೋತರು.ಆದರೆ ಆ ರಾಜ್ಯದ ಸಾಮಾಜಿಕ ಸಾಮರಸ್ಯಕ್ಕೆ ಬಲವಾದ ಪೆಟ್ಟು ನೀಡಿರುವುದು ಸುಳ್ಳಲ್ಲ.ಇದೇ ರೀತಿ ಒಡೆದು ಆಳುವ ನೀತಿಯನ್ನು ಕರ್ನಾಟಕದಲ್ಲೂ ತರಲಾಗಿದೆ. ಒಂದು ವೇಳೆ ಇಲ್ಲೇನಾದರೂ ಕಾಂಗ್ರೆಸ್ ಗೆದ್ದರೇ ಅದನ್ನೂ ರಾಹುಲ್ ಪದತಲಕ್ಕೆ ಸಮರ್ಪಿಸುತ್ತಾರೆ(ಸೋತರೆ ಗೊತ್ತಲ್ಲ EVM ನೆಪ). ಮಾತಿಗೊಮ್ಮೆ ಜಾತಿ ವಿನಾಶದ ಬಗ್ಗೆ ಭಾಷಣ ಬಿಗಿಯುವ ಗಂಜಿಗಿರಾಕಿಗಳು, ಕಾಂಗ್ರೆಸ್ ನಡೆಸುತ್ತಿರುವ ಜಾತಿ ರಾಜಕಾರಣದ ಬಗ್ಗೆ ಬಾಯಿ ತೆರೆಯಲಾರರು, ಬಾಯಿಯಲ್ಲಿ ಮೂಳೆಯನ್ನು ಚೀಪುವಾಗ,ಮಾತನಾಡುವುದಾದರೂ ಹೇಗೆ ಹೇಳಿ? ಗಂಜಿಯ ಋಣವಲ್ಲವೇ!
ಈ ಬೆಳವಣಿಗೆಗಳನ್ನು ಕೇವಲ ರಾಹುಲ್ ಗಾಂಧಿಯ ಪ್ರಮೋಷನ್ ಎಂದು ನೋಡುವ ತಪ್ಪು ಮಾಡುವ ಬದಲಿಗೆ ನೆಹರೂ ಕಾಲದಿಂದ ಆ ಕುಟುಂಬದ ನಿಗೂಢತೆಗೂ ಈ ದೇಶದ ರಾಜಕೀಯ ವಿಪ್ಲವಗಳಿಗೂ ಇರುವ ನಂಟೇನು ಎನ್ನುವ ದೃಷ್ಟಿಯಲ್ಲಿ ನೋಡಿದರೆ ಈ ಅಪಾಯದ ಮಟ್ಟ ಎಂತದ್ದು ಎನ್ನುವುದು ಅರಿವಾಗುತ್ತದೆ. ಆ ಎಚ್ಚರಿಕೆ ನಮ್ಮಲ್ಲಿರಬೇಕು.
ಅದ್ಬುತ
ನಾಗಿ,ಸಲಾಂ ಸಾಬಿ,ಎಲ್ಲಾ ಯಾವ ಬಿಲದೊಳಗಿವೆ?
ರಾಹುಲ್ ಗಾಂಧಿಯವರ ಪಟ್ಟಾಭಿಷೇಕದ ಕುರಿತಾಗಿ ತಾವು ಬರೆದಿರುವ ಲೇಖನವನ್ನು ಕೇವಲ “ಆ ಕುಟುಂಬದ ನಿಗೂಢ ಜೀವನ, ವ್ಯವಹಾರ” ಗಳಿಗೇ ಸೀಮಿತಗೊಳಿಸಿದ್ದರೆ ನಿಮ್ಮ ವಾದವನ್ನು ಒಂದು ಮಟ್ಟಿಗೆ ಒಪ್ಪಬಹುದು. ವ್ಯಕ್ತಿಯೊಬ್ಬರ ಆರೋಗ್ಯ ವಿಚಾರವನ್ನು ಜಗಜ್ಜಾಹೀರು ಮಾಡುವ ಆವಶ್ಯಕತೆ ಯಾರಿಗೂ ಇಲ್ಲ. ನಿಮ್ಮ ಮನೆಯಲ್ಲಿ ಯಾರಿಗಾದರೂ ಯಾವುದಾದರೂ ಖಾಯಿಲೆ ಬಂದರೆ ಅವರನ್ನು ಯಾವ ಆಸ್ಪತ್ರೆಗೆ, ಯಾವ ಚಿಕಿತ್ಸೆಗೆ ಕರೆದೊಯ್ಯುತ್ತೀರಿ ಎಂದು ಜನ ಪ್ರಶ್ನೆ ಮಾಡಿದರೆ ನೀವು ಉತ್ತರಿಸುವ ಅಗತ್ಯವಿಲ್ಲ. ನೀವು ಸಾಮಾನ್ಯ ನಾಗರಿಕನಾದರೂ ಸರಿ ಅಥವಾ ಪ್ರಭಾವೀ ರಾಜಕಾರಣಿ ಆದರೂ ಸರಿ. ನಿಮ್ಮ ವಿಚಾರ ನಿಮ್ಮ ಗೋಪ್ಯತೆಯ ಹಕ್ಕು ಅದು. ಆದರೆ ನೀವು “biased” ಆಗಿ ಕೀಳುಮಟ್ಟದಲ್ಲಿ ದೂಷಿಸುತ್ತಿರುವ “ಪ್ರೆಸ್ಟಿಟ್ಯೂಟ್”ಗಳಂತೆಯೇ ಬಿಜೆಪಿಯ ಪಾದಸೇವೆ ಮಾಡುವ “ಸೂಡೋnational” ವರದಿಗಾರರೂ ಇದ್ದರು, ಮತ್ತು ಅವರ ಸಂಖ್ಯೆ ಕಳೆದ ೩ ವರ್ಷಗಳಲ್ಲಿ ಅಣಬೆಗಳಂತೆ ಹೆಚ್ಚಾಗಿದೆ. ನೀವು ಹೇಳುತ್ತಿರುವ ಅರ್ನಾಬ್ ಗೋಸ್ವಾಮಿ ಎಂಬಾತನನ್ನ ಜರ್ನಲಿಸ್ಟ್ ಕರೆಯುವುದೇ ಮಹಾ ಪಾಪ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ಎಷ್ಟರ ಮಟ್ಟಿಗೆ ಇದೆ ಎಂದು ಕ್ರಿಟಿಕಲ್ ಆಗಿ ಬರೆಯಲು ಸಾಧ್ಯವೇ ನಿಮಗೆ? ಅಮಿತ್ ಷಾ ಅವರು ಅಧ್ಯಕ್ಷರಾಗುವುದಕ್ಕೆ ಯಾವ ಚುನಾವಣೆ ನಡೆಯಿತು?
ಆರೋಗ್ಯದ ವಿಷಯದಲ್ಲಿ ತಮ್ಮ ಮಾತಿನ ಲಾಜಿಕ್ ಅನ್ನು ಒಪ್ಪೋಣ. ರಾಹುಲ್ ಗಾಂಧಿಯ ವಿದೇಶ ಪ್ರವಾಸದ್ದೇನಪ್ಪಾ ಗುಟ್ಟು? ಮುಚ್ಚಿಡುವಂತದ್ದೇನಿದೆ ಅಂತ ಬೇಕಲ್ಲ?
ಇನ್ನು, ಅರ್ನಾಬ್ ಗೋಸಾಮಿಯವರನ್ನು ಇಲ್ಲಿ ಎಳೆದು ತಂದಿದ್ದು ನಾನ್ಸೆನ್ಸ್ Argument ಅಷ್ಟೇ… ನಾನು ಪ್ರೆಸ್ಟಿಟ್ಯುಟ್ಸ್ ಗಳ ಬಗ್ಗೆ ಯಾವ ಸಂಧರ್ಭದಲ್ಲಿ ಮಾತನಾಡಿದ್ದೇನೆ ಎಂದು ನೋಡಿ,ಅದನ್ನು ಪ್ರಶ್ನಿಸಿ ನೋಡೋಣ
ನೀವು ನಿಮ್ಮ “ಗೋಲ್ ಪೋಸ್ಟ್” ಬದ್ಲಾಯಿಸ್ತಾ ಇದ್ದೀರಾ. ಪ್ರೆಸ್ಟಿಟ್ಯೂಟ್ ಅನ್ನೋ ಪದಾನೇ ಅಸಹ್ಯ. ಈ ಸುಡೋನಾಶನಲಿಸ್ಟ್ ರಿಪೋರ್ಟರ್ಗಳಿಗೆ ಏನಂತ ಕರೀತೀರಾ? ಪ್ರೆಸ್ಸ್ಟ್ರೇಟರ್ಸ್ ಅನ್ನೋಣವೇ? ಅರ್ನಬ್ ಗೋಸ್ವಾಮಿಯನ್ನು ನಾನು ಎಳೆದು ತರಲಿಲ್ಲ. ತಾವೇ ಆತನನ್ನ ಮೊದಲು ಪ್ರಸ್ತಾಪಿಸಿದ್ದು ಅದು ಬಿಡಿ.ಕಾಂಗ್ರೆಸ್ಸಿನ ಹುಳುಕುಗಳನ್ನು ಬರೆಯಲು ಒಂದು ದೊಡ್ಡ ಪುಸ್ತಕ ಸಾಲದು. ನಾನೂ ಬರೆಯಬಲ್ಲೆ. ಆದರೆ ಬರೀ ಒಂದು ಪಕ್ಷದ ಹುಳುಕುಗಳ ಬಗ್ಗೆ ದೀರ್ಘವಾಗಿ ಬರೆಯುವದಷ್ಟೇನೋ ಅಥವಾ ಬಿಜೆಪಿ, ಸಿಪಿಎಂಗಳನ್ನೂ ಟೀಕಿಸಲು ಸಾಧ್ಯವೇ ತಮಗೆ. ಅದನ್ನು ಹೇಳಿ.