– ಸಂತೋಷ್ ತಮ್ಮಯ್ಯ
ದೇಶ ಕಂಡ ಶ್ರೇಷ್ಠ ಕಾನೂನು ಪರಿಣಿತ ಮತ್ತು ಸಂವಿಧಾನ ತಜ್ಞ ಕೆ.ವಿ ಕೃಷ್ಣ ಅಯ್ಯರ್ ಒಮ್ಮೆ ಸಂಸದರೇ ಸೇರಿದ್ದ ಸಭೆಯೊಂದರಲ್ಲಿ “ಎಲ್ಲಕ್ಕೂ ಒಂದು ಕೊನೆ ಎಂಬುದಿರುತ್ತದೆ. ಸಂವಿಧಾನದ ಕೆಲವು ವಿಧಿಗಳು ಇಂದು ಕಾಲಬಾಹಿರವಾಗಿವೆ. ಅವು ಬದಲಾಗಲೇ ಬೇಕು. ಸಂವಿಧಾನ ಬದಲಾಗಲೇ ಬಾರದು ಎನ್ನುವಷ್ಟು ಪವಿತ್ರ ವಸ್ತುವೇನಲ್ಲ. ಅವು ಸಮಾಜದಲ್ಲಿ ಒಂದು ಪರಿಕರವೇ ಹೊರತು, ಸಮಾಜವನ್ನು ನಿರ್ಧರಿಸುವ ಸಾಧನಗಳಲ್ಲ” ಎಂದಿದ್ದರು . ಆಂದು ಆಯ್ಯರ್ ಮಾತಿಗೆ ನೆರದಿದ್ದ ಸಂಸದರೆಲ್ಲಾ ಕುತ್ತಿಗೆ ನೋಯುವಷ್ಟು ತಲೆದೂಗಿದ್ದರು. ಅವರಿಗೆಲ್ಲಾ ಅಯ್ಯರ್ ಮಾತು ಅರ್ಥವಾಗಿತ್ತೋ ಅಥವಾ ಬಾಯಿಬಿಟ್ಟರೆ ಬಣ್ಣಗೇಡು ಎಂದು ಸುಮ್ಮನಾಗಿದ್ದರೋ ಗೊತ್ತಿಲ್ಲ. ಅಂತೂ ಆ ಮಾತು ಹೆಚ್ಚು ಚರ್ಚೆಯಾಗಲಿಲ್ಲ.
ಇಂದಿರಾ ಕಾಲದ ರಾಜಕಾರಣಿ, ಮುತ್ಸದ್ಧಿ ಚಿದಂಬರಂ ಸುಬ್ರಮಣಿಯಮ್ ಕೂಡಾ “ಸಂವಿಧಾನ ಪರಂಪರೆಯ ಬೆಳಕಿನಲ್ಲಿ ರೂಪುಗೊಳ್ಳಬೇಕಿತ್ತು. ಅದು ಪರಿಷ್ಕರಣೆಗೆ ಒಳಪಡಲೇಬೇಕು. ಈಗಿನ ಸಂವಿಧಾನ ಬುದ್ಧಿವಂತರೆಲ್ಲರನ್ನೂ ರಾಜಕಾರಣಿಗಳಾಗಿ ಮತ್ತು ರಾಜಕಾರಣಿಗಳ ಗುಲಾಮರನ್ನಾಗಿಸಲು ಮಾತ್ರ ಶಕ್ತವಾಗಿದೆ” ಎಂದು ಕಟುವಾಗಿ ಹೇಳಿದ್ದರು. ಆಗಲೂ ಅದು ಚರ್ಚೆಯಾಗಲಿಲ್ಲ. ಏಕೆಂದರೆ ಅಂದು ಅವರ ಮಾತಿನ ಅರ್ಥವನ್ನು ಗ್ರಹಿಸುವವರ ಸಂಖ್ಯೆ ಅತ್ಯಂತ ಕಡಿಮೆಯಿತ್ತು. ಮತ್ತು ಅರ್ಥವಾದ ಬುದ್ಧಿವಂತರೆಲ್ಲರೂ ರಾಜಕಾರಣಿಗಳ ಅಂಬಾಸೆಡರ್ ಕಾರಿನ ಡೋರು ತೆಗೆಯುವುದರಲ್ಲಿ ಧನ್ಯತೆ ಕಾಣುತ್ತಿದ್ದರು.
ಅದಕ್ಕೂ ಬಹಳ ಹಿಂದೆ ಥಿಯೋಡರ್ ಷೇ ಎಂಬ ಜರ್ಮನ್ ಚಿಂತಕ ತನ್ನ ಲೆಗಸಿ ಆಫ್ ಲೋಕಮಾನ್ಯ ಎಂಬ ಪುಸ್ತಕದಲ್ಲಿ “ಭಾರತೀಯ ಸಂವಿಧಾನದಲ್ಲಿ ಭಾರತೀಯತೆಯೆಂಬುದೇ ಇಲ್ಲ. ಅದು ಅನ್ಯಾನ್ಯ ದೇಶಗಳ ಸಂವಿಧಾನಗಳ ಚೂರುಪಾರುಗಳನ್ನು ಜೋಡಿಸಿ ಹೊಲಿದ ಒಂದು ಕಲಾಕೃತಿ” ಎಂದು ಬರೆದಿದ್ದ. ವಿಚಿತ್ರವೆಂದರೆ ಆಗಲೂ ವಿದೇಶಿಯನ ಮಾತಿಗೆ ದೇಶದಲ್ಲಿ ಎದುರಾಡಿದವರಿರಲಿಲ್ಲ.
ಆದರೆ ಮೊನ್ನೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ, ಬದಲಿಸಲೆಂದೇ ನಾವಿದ್ದೇವೆ ಎಂದಾಗ ನಾಮುಂದು ತಾಮುಂದೆಂಬಂತೆ ಟೀಕೆಗಳ ಮಹಾಪೂರ ಹರಿಯತೊಡಗಿತು. ಎಲ್ಲರೂ ಸಂವಿಧಾನ ಪರಿಷ್ಕರಣೆಯ ಮಾತಾಡುವುದು ನೇರ ಅಂಬೇಡ್ಕರರಿಗೇ ಮಾಡಿದ ಅವಮಾನ, ಫ್ಯಾಸಿಸ್ ಶಕ್ತಿ ಮತ್ತು ಮನುವಾದಿ ಮನಸ್ಸುಗಳ ಹುನ್ನಾರ, ಆರೆಸ್ಸೆಸ್ಸಿನ ಅಜೆಂಡಾ ಎಂದು ಅರಚಲಾರಂಭಿಸಿದರು. ಹಾಗಾದರೆ ಸಂವಿಧಾನ ಚರ್ಚೆಗೆ ಅತೀತವೇ? ಅದರ ಬಗ್ಗೆ ಮಾತಾಡಲೇಬಾರದೇ? ಅದೇನು ಕುರಾನೇ? ಅದರ ಕರ್ತೃ ಪ್ರವಾದಿಯೇ? ತಮಾಷೆಯೆಂದರೆ ಅಂಬೇಡ್ಕರರೇ ಸಂವಿಧಾನವನ್ನು ಸ್ವೀಕರಿಸುತ್ತಾ “ಇದುವರೆಗೆ ನಮ್ಮ ಕುಂದುಕೊರತೆ, ಲೋಪದೋಷಗಳಿಗೆ ಬ್ರಿಟಿಷರನ್ನು ದೂರಬಹುದಿತ್ತು. ಆದರೆ ಇನ್ನು ನಮಗೆ ನಾವೇ ಹೊಣೆಗಾರರು. ಸಂವಿಧಾನ ಕೂಡಾ ಪುನರವಲೋಕಿಸಬಲ್ಲ ಸಂಗತಿ” ಎಂದಿದ್ದರು. ಅಂದರೆ ಸಾಕ್ಷಾತ್ ಅಂಬೇಡ್ಕರರೇ ಸಂವಿಧಾನವನ್ನು ದೇವಲೋಕದ ಸರಕೆಂದೂ ತಾನೊಬ್ಬ ಪ್ರವಾದಿಯೆಂದೂ ಅಂದುಕೊಂಡಿರಲಿಲ್ಲ. ಆದರೆ ಅದನ್ನೇ ಅನಂತ್‌ಕುಮಾರ್ ಹೆಗಡೆ ಹೇಳಿದರೆ ವಿವಾದ!
ಅಷ್ಟಕ್ಕೂ ಅವರ ಮಾತಲ್ಲಿ ತಪ್ಪೇನಿತ್ತು? ಅನಂತ ಕುಮಾರ್ ಹೆಗಡೆ ಮೇಲೆ ಕೀಳು ಭಾಷೆ ಉಪಯೋಗಿಸಿದವರ ಜೊತೆಗೆ ಹೆಗಡೆ ಮಾತಿಗೆ ಅಂತರ ಕಾಯ್ದುಕೊಂಡವರು ಸಂವಿಧಾನವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ಸಂವಿಧಾನವನ್ನು ನಾವು ಸ್ವೀಕರಿಸಿದಾಗ ಅದರಲ್ಲಿ 395 ವಿಧಿಗಳಿದ್ದವು. ಅವುಗಳಲ್ಲಿ ಸುಮಾರು 250 ವಿಧಿಗಳು 1935 ರ ಭಾರತ ಸಂವಿಧಾನ ಅಧಿನಿಯಮದಿಂದ ನೇರವಾಗಿ ತೆಗೆದುಕೊಂಡವುಗಳು. ಮೂರನೆ ಅಧ್ಯಾಯದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕಾ ಸಂವಿಧಾನದಿಂದ ನೇರವಾಗಿ ಭಟ್ಟಿ ಇಳಿಸಲಾಗಿತ್ತು. ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಬ್ರಿಟಿಷ್ ವೆಸ್ಟ್ ಮಿನಿಸ್ಟರ್ ನಿಂದ ನೇರವಾಗಿ ಎಗರಿಸಲಾಗಿತ್ತು. ನಾಲ್ಕನೆ ಅಧ್ಯಾಯದ ರಾಜ್ಯನೀತಿ ತತ್ವಗಳು ಐರಿಷ್ ಸಂವಿಧಾನದ ಕಾರ್ಬನ್ ಕಾಪಿಗಳು. ಅಂದರೆ ಭಾರತೀಯ ಸಂವಿಧಾನದಲ್ಲಿರುವ ಬಹುತೇಕ ನಿಯಮಗಳು ಇಲ್ಲಿಗೆ ಒಗ್ಗದ ಸರಕುಗಳು. ಅಂದಿನ ತುರ್ತು ಸಂವಿಧಾನ ನಿರ್ಮಾತೃರಿಂದ ಆ ಕೆಲಸ ಮಾಡಿಸಿತ್ತು. ಸ್ವತಃ ಅಂಬೇಡ್ಕರರಿಗೂ ಈ ನಿಯಮಗಳು ಸುಧೀರ್ಘಾವಧಿಗೆ ಸಲ್ಲುವ ಸಂಗತಿಗಳಲ್ಲ ಎಂದೂ ತಿಳಿದಿತ್ತು. ಏಕೆಂದರೆ ಅಂಬೇಡ್ಕರರೇನೂ ಕಾಂಗ್ರೆಸಿಗರಂತೆ ದಡ್ಡಶಿಖಾಮಣಿಗಳಾಗಿರಲಿಲ್ಲ. ಪರಕೀಯ ವಿಧಿಗಳನ್ನು ಅಳವಡಿಸುವ ಹೊತ್ತಲ್ಲಿ ಅಂಬೇಡ್ಕರರು ಸಾಧ್ಯವಾದಷ್ಟೂ ಪರಂಪರೆಯ ಪಾಕ, ವಾಸ್ತವ ಪ್ರಜ್ಞೆ ಮತ್ತು ದೂರದೃಷ್ಟಿತ್ವದಿಂದ ಸಂವಿಧಾನಕ್ಕೆ ಅಂತಿಮ ರೂಪವನ್ನು ಕೊಟ್ಟಿದ್ದರು. ಹಾಗಾಗಿ ಸಂವಿಧಾನ ರಚನೆಗೆ ಮೀಸಲಿಟ್ಟ ಸಮಯಕ್ಕಿಂತಲೂ ಅದರ ಚರ್ಚೆಯೇ ಹೆಚ್ಚಿನ ಸಮಯ ತೆಗೆದುಕೊಂಡಿತು. ಕರಡು ಪ್ರತಿಯ ಮೇಲಿನ ಆ ಚರ್ಚೆ ಅದೆಷ್ಟು ದೀರ್ಘಕಾಲದವರೆಗೆ ನಡೆಯಿತೆಂದರೆ ಸ್ವತಃ ಅಂಬೇಡ್ಕರರೇ ಅದನ್ನು ವಿಳಂಭ ನೀತಿ ಎಂದು ಬೇಸರಿಸಿ ಸಮಿತಿಯಿಂದ ಹೊರನಡೆದುಬಿಟ್ಟಿದ್ದರು.
ಇಷ್ಟೆಲ್ಲಾ ರಾದ್ಧಾಂತಗಳ ನಂತರ ಸಂವಿಧಾನ ದೇಶಕ್ಕೆ ಅರ್ಪಣೆಯಾಯಿತು. ಆದರೆ ಕೆಲವೇ ವರ್ಷಗಳಲ್ಲಿ ಮಹತ್ವಾಕಾಂಕ್ಷೆಯಿಂದ ಅರ್ಪಣೆಯಾದ ಸಂವಿಧಾನ ಆತ್ಮಹತ್ಯೆ ಮಾಡಿಕೊಂಡಿತು. ಏಕೆಂದರೆ ಸಂವಿಧಾನದಲ್ಲಿ ಯಾವುದನ್ನು ನಿರ್ದೇಶಕ ತತ್ವಗಳೆಂದು ಮೂಲಭೂತ ಹಕ್ಕುಗಳೆಂದು ಒತ್ತುಕೊಟ್ಟು ಹೇಳಲಾಗಿತ್ತೋ ಅವು ಕಾಂಗ್ರೆಸಿನ ಅನುಕೂಲಸಿಂಧು ರಾಜಕಾರಣಕ್ಕೆ ಬಲಿಯಾಯಿತು. ನಿರ್ದೇಶಕ ತತ್ವಗಳಲ್ಲಿ ಉಲ್ಲೇಖಿತ ಸಮಾನ ನಾಗರಿಕ ಸಂಹಿತೆಯನ್ನು ಕೋಮುವಾದವೆಂದು ಕರೆಯಲಾಯಿತು. ಕಾಲಬಾಹಿರವಾಗಿದ್ದ ಕೆಲವು ಮತಗಳ ರಕ್ಷಣೆಗೆ ಸಂವಿಧಾನವನ್ನೇ ತಿರುಚಲಾಯಿತು. ಅಂದರೆ ಸಂವಿಧಾನವನ್ನು ಲೆಕ್ಕಿಸದೆ ನಡೆಯುವ ಜಾಯಮಾನವನ್ನು ಕಾಂಗ್ರೆಸ್ ಪಾಲಿಸತೊಡಗಿತು. ಅಂದರೆ ಸತ್ಯವನ್ನು ಬಂಗಾರದ ಬಟ್ಟಲಿನಲ್ಲಿ ಮುಚ್ಚಿಡುವ ಪ್ರವೃತ್ತಿಯನ್ನು ಎಲ್ಲಾ ರಾಜಕೀಯ ಪಕ್ಷಗಳೂ ಅನುಸರಿದವು. ಎಲ್ಲಾ ಪಕ್ಷಗಳು ಎಂದರೆ ಹೆಗಡೆ ಮಾತಿಗೆ ಆಂತರ ಕಾಯ್ದುಕೊಂಡವರ ಪಕ್ಷವೂ ಸಹ!
ಹೆಗಡೆ ಮಾತಿಗೆ ವಿರೋಧ ಮತ್ತು ಅಂತರ ಕಾಯ್ದುಕೊಂಡವರೆಲ್ಲರೂ ಸಂವಿಧಾನ ಪರಾಮರ್ಶೆಗೆ ಅವಕಾಶವನ್ನೇ ನೀಡಲಿಲ್ಲ. ಅದನ್ನು ಸುವರ್ಣದ ಚೌಕಟ್ಟಲ್ಲಿಟ್ಟು ಹಿಗ್ಗಾಮುಗ್ಗಾ ಹೊಗಳಲಾಯಿತು. ಅಂಬೇಡ್ಕರ್ ನಿಧನಾನಂತರ ಸಂವಿಧಾನ ಕೂಡಾ ದೇವಲೋಕದ ಸರಕಾಗಿಹೋಯಿತು. ಸಂವಿಧಾನದ ಬಗೆಗಿನ ಚರ್ಚೆಯೆಂದರೆ ಅದೊಂದು ರಣವಾದ್ಯ ಎನ್ನುವಂತೆ ಕೆಲವರು ವಾದಿಸತೊಡಗಿದರು. ಸಂವಿಧಾನವೆಂದರೆ ಅಂಬೇಡ್ಕರರ ಸೃಷ್ಟಿ, ಹಾಗಾಗಿ ಅದು ಪ್ರಶ್ನಾತೀತ, ಸಂವಿಧಾನವನ್ನು ವಿಶ್ಲೇಷಿಸುವುದು, ತರ್ಕಕ್ಕೊಡ್ಡುವುದು ಅಂಬೇಡ್ಕರರಿಗೆ ಮಾಡುವ ಅವಮಾನ ಎಂಬ ಬೆದರಿಕೆಗಳು ಈಗಿನಂತೆ ಆಗಲೂ ನಡೆದವು. ಸಂವಿಧಾನದಲ್ಲಿ ದೌರ್ಬಲ್ಯವನ್ನು ಕಾಣುವುದೆಂದರೆ ದಲಿತರಿಗೆ ಅಪಮಾನಗೈಯುವುದೆಂದೇ ಅರ್ಥ ಎಂದು ಕಿಡಿಕಾರಿದರು. ಹೊಗಳಿ ಹೊಗಳಿ ಮತ್ತಷ್ಟು ಅತೀಂದ್ರಿಯ ಪಟ್ಟಕ್ಕೇರಿಸಿದರು. ಆದರೆ ಯಾರು ಅದನ್ನು ಆ ಪಟ್ಟಕ್ಕೇರಿಸಿದ್ದರೋ ಅಸಲಿಗೆ ಅವರ ಉದ್ದೇಶದಲ್ಲಿ ಪ್ರಮಾಣಿಕತೆಯಿರಲಿಲ್ಲ. ಕೆಲವರಿಗೆ ಅದರಲ್ಲಿ ಪ್ರಯೋಜನ ಕಂಡಿತ್ತು. ಬದಲಾಗುತ್ತಿದ್ದ ಕಾಲದೊಡನೆ ಓಡಲಾಗದಿದ್ದವರಿಗೆ ಬಂಗಾರದ ಬಟ್ಟಲಲ್ಲಿ ಮುಚ್ಚಿಟ್ಟಿದ್ದ ಸಂವಿಧಾನ ಅಸ್ತ್ರವಾಯಿತು. ಆದರೆ ಕಾಂಗ್ರೆಸ್ ಮಾತ್ರ ತಣ್ಣಗೆ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಿತ್ತು. 1976ರಲ್ಲಿ ತಿದ್ದುಪಡಿ ತಂದು ಜಾತ್ಯತೀತ-ಸಮಾಜವಾದಿ ಇತ್ಯಾಧಿ ತಲೆಹರಟೆಗಳನ್ನು ತುರುಕಿದಾಗ, ನ್ಯಾಯಾಂಗದ ಅಧಿಕಾರ ಮೊಟಕುಗೊಳಿಸಿದಾಗ ಅಂಬೇಡ್ಕರ್ ಮೇಲಿನ ಗೌರವ ದ್ವಿಗುಣವಾಗಿತ್ತೇ? ಅಥವಾ ತನ್ನ ಮೂಗಿನ ನೇರಕ್ಕೆ ಸಂವಿಧಾನ ಬದಲಿಸಿಕೊಂಡ ಇಂದಿರಾ ಗಾಂಧಿಯೇನು ಅಂಬೇಡ್ಕರರಿಗಿಂತ ಶ್ರೇಷ್ಠರಾಗಿದ್ದರೇ?
ಬುದ್ಧಿಜೀವಿಗಳ ಕೆಲವು ವರ್ತನೆಗಳು ತಮಾಷೆಯೆನಿಸುತ್ತದೆ. ಭಗವದ್ಗೀತೆ, ಮನುಸ್ಮೃತಿಗಳ ಚಿಂತನೆಗಳು ಪುರಾತನವಾದವು ಎಂದು ತೆಗಳಿದ್ದವರೇ ಸಂವಿಧಾನ ಬದಲಾಗಬಾರದು ಎನ್ನುತ್ತಿದ್ದಾರೆ! ಆಂಬೇಡ್ಕರ್ ಹೇಳಿದ್ದನ್ನೇ ಅನಂತ್‌ಕುಮಾರ್ ಹೇಳಿದರೂ ಟೀಕಿಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲೇ ಜಗತ್ತಿನಲ್ಲಿ ಏನೇನೋ ಬದಲಾವಣೆಯಾಗಿದೆ. ದೋಸೆ-ರೊಟ್ಟಿ-ಚಟ್ನಿ-ಪಾಯಸಗಳೂ ಕಾಲಕ್ಕೆ ತಕ್ಕಂತೆ ಬದಲಾಗಿವೆ. ಆದರೆ ಯಾವ ಕಾರಣಕ್ಕೂ ಸಂವಿಧಾನ ಬದಲಾಗಬಾರದಂತೆ! ಅಂಬೇಡ್ಕರ್ ಎಲ್ಲಾ ಕಾಲಕ್ಕೂ ಪ್ರಸ್ತುತರಂತೆ, ಆದರೆ ಅವರು ಪಟಕ್ಕೆ ಮಾತ್ರ ಸೀಮಿತವಾಗಬೇಕಂತೆ. ಕಾಲಬಾಹ್ಯವಾದದನ್ನು ಕಷ್ಟ ಪಟ್ಟಾದರೂ ಉಳಿಸಿಕೊಳ್ಳಬೇಕಂತೆ. ಒಂದರ್ಥದಲ್ಲಿ ಇದು ತುಕ್ಕುಹಿಡಿದ ಕತ್ತಿಯನ್ನೇ ಬಳಸಬೇಕು ಎಂದಂತೆ. ಸಂವಿಧಾನ ಹೇಳುವ ನಾಗರಿಕ ಹಕ್ಕು, ಸಮಾನತೆ, ಭಾತೃತ್ವ, ಪಾರದರ್ಶಕತೆ, ಶಿಕ್ಷಣ… ಯಾವುದು ತಾನೇ ತನ್ನ ಉದ್ದೇಶವನ್ನು ಪೂರ್ತಿಗೊಳಿಸಿದೆ. ಆರೆಶತಮಾನಗಳ ಕಾಲ ತನ್ನ ಆಶಯ ಈಡೇರಿಸದ ಸಂಗತಿಯನ್ನು ಯಕಶ್ಚಿತ್ ಅವಲೋಕನ ಮಾಡಬಾರದು ಎಂದರೆ ಏನು ಕಥೆ? ಕೆಟ್ಟುನಿಂತ ಯಂತ್ರವನ್ನು ದುರಸ್ತಿ ಮಾಡಕೂಡದು, ಮಾರಲೂಬಾರದು ಎಂದವನ್ನು ಹೇಗೆ ಕರೆಯಬಹುದೋ ಅನಂತ್‌ಕುಮಾರ್ ಹೆಗಡೆಯ ಬೆನ್ನಿಗೆ ನಿಲ್ಲದವರೆಲ್ಲರನ್ನೂ ಹಾಗೆಯೇ ಕರೆಯಬಹುದು. 2014ರಲ್ಲಿ ದೇಶದ ಜನ ಅನಂತ್‌ಕುಮಾರರಿಗೂ, ಅವರ ಪಕ್ಷಕ್ಕೂ ಬಹುಮತ ನೀಡಿದ್ದು ಇಂಥದ್ದನ್ನು ಬದಲಿಸಿ ಎಂಬ ಕಾರಣಕ್ಕಾಗಿ ಎಂಬುದನ್ನು ಮರೆಯಬಾರದು.
Like this:
Like ಲೋಡ್ ಆಗುತ್ತಿದೆ...
Related
samvidhana mattu kanuniginta doddavaraaru illa. indira rajakaranigalalli prabhavashaali mahile ennnuvudannu bittare shekada 70 rastu kanunannu svarthakkakagi balisikondiddu nija.