ವಿಷಯದ ವಿವರಗಳಿಗೆ ದಾಟಿರಿ

ಜನವರಿ 3, 2018

2

ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ..?

‍ನಿಲುಮೆ ಮೂಲಕ

– ಪ್ರೊ. ಪ್ರೇಮಶೇಖರ

ಹಿಂದೂ ಧರ್ಮದ ಅಪಹಾಸ್ಯ, ಅವಹೇಳನ ಇಂದು ನಿನ್ನೆಯದಲ್ಲ. ಅದು ಆರಂಭವಾಗಿ ಶತಮಾನಗಳೇ ಕಳೆದುಹೋಗಿವೆ. ತನ್ನ ಚಿಪ್ಪಿನೊಳಗೇ ಅಡಗಿಕೊಂಡು ಹೊರಪ್ರಪಂಚಕ್ಕೆ ಬಹುತೇಕ ಅಪರಿಚವಾಗಿಯೇ ಇದ್ದ ಹಿಂದೂ ಸಮಾಜ ತನ್ನ ಅಪರಿಚಿತತೆಯಿಂದಲೇ ಮೊದಲಿಗೆ ಅರಬ್ ಮುಸ್ಲಿಮ್ ಧಾಳಿಕಾರರಲ್ಲಿ, ನಂತರ ಕ್ರಿಶ್ಚಿಯನ್ ವರ್ತಕರು ಮತ್ತು ಸೈನಿಕರಲ್ಲಿ ಅಚ್ಚರಿಯನ್ನುಂಟುಮಾಡಿತು. ಅನೇಕ ದೇವದೇವಿಯರುಳ್ಳ, ಒಂದೇ ಒಂದು ನಿರ್ದಿಷ್ಟ ಧರ್ಮಗ್ರಂಥವಿಲ್ಲದ, ಶ್ರೇಣೀಕೃತ ಜಾತಿವ್ಯವಸ್ಥೆಯ ಅನಿಷ್ಟದಲ್ಲಿ ಒಡೆದು ಹಂಚಿಹೋಗಿದ್ದ ಹಿಂದೂ ಸಮಾಜ ಏಕದೈವವನ್ನು, ಏಕಧರ್ಮಗ್ರಂಥವನ್ನೂ ಹೊಂದಿದ್ದ, ಸಮಾನತೆಯ ತಳಹದಿಯ ಮೇಲೆ ರಚಿತವಾಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಗಳಿಗೆ ಸಂಪೂರ್ಣ ವಿರುದ್ಧವಾಗಿದ್ದುದರಿಂದಾಗಿ ಆ ಧರ್ಮಗಳ ಅನುಯಾಯಿಗಳಲ್ಲಿ ಕುತೂಹಲ, ಅಪನಂಬಿಕೆಗಳನ್ನುಂಟುಮಾಡಿದ್ದು ಸಹಜವೇ ಆಗಿತ್ತು. ಆದರೆ ಈ ಭಾವನೆಗಳು ಕ್ಷಿಪ್ರಕಾಲದಲ್ಲೇ ಅವಹೇಳನದ ರೂಪ ಪಡೆದುಕೊಂಡದ್ದು ದುರ್ಭಾಗ್ಯದ ಬೆಳವಣಿಗೆ. ಅದಕ್ಕಿಂತಲೂ ದೌರ್ಭಾಗ್ಯದ ಸಂಗತಿಯೆಂದರೆ ಪರಧರ್ಮೀಯರು ಆರಂಭಿಸಿದ ಹಿಂದೂ ಅವಹೇಳನವನ್ನು ಈಗ ಸ್ವತಃ ಹಿಂದೂಗಳೇ ಮುಂದುವರೆಸಿಕೊಂಡುಹೋಗುತ್ತಿರುವುದು.ಅವರ ಈ ಕೃತ್ಯ ಆರೋಗ್ಯಕರವಾಗಿದ್ದು ಹಿಂದೂಧರ್ಮದ ಕೆಲವೊಂದು ಅನಾಚಾರಗಳನ್ನು ತೊಡೆದುಹಾಕುವಂತಿದ್ದರೆ ಅದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ. ಅವರ ಟೀಕೆಗಳಲ್ಲಿ ಎದ್ದುಕಾಣುತ್ತಿರುವುದು ಹೆಚ್ಚಿನಂಶ ಕಿಡಿಗೇಡಿತನ. ಅಂಥವರಿಗೆ ಚಿಂತಕರೆಂಬ ಹಣೆಪಟ್ಟಿ ದಕ್ಕುತ್ತಿರುವುದು ಸಮಕಾಲೀನ ಸಮಾಜದ ಒಂದು ವರ್ಗದ ಬೌದ್ಧಿಕ ದಾರಿದ್ರ್ಯದ ದ್ಯೋತಕ. ಇವರು ಈಗ ಎತ್ತುತ್ತಿರುವ ಪ್ರಶ್ನೆ ಹಿಂದೂಧರ್ಮದ ಅದಿಯ ಕುರಿತಾಗಿ, ಇತರ ಧರ್ಮಗಳಿಗಿರುವಂತೆ ಹಿಂದೂಧರ್ಮಕ್ಕೆ ಸ್ಥಾಪಕನೊಬ್ಬ ಇಲ್ಲ ಎನ್ನುವ ಕುರಿತಾಗಿ.

ಇತಿಹಾಸದಲ್ಲಿ ದಾಖಲಾಗಿರುವಂತೆ, ಈಗಲೂ ನಮಗೆ ಗೋಚರಿಸುತ್ತಿರುವಂತೆ ನೂರೊಂದು ವೈವಿಧ್ಯಮಯ ಧರ್ಮಗಳು ಅಥವಾ ಧಾರ್ಮಿಕ ನಂಬುಗೆಗಳನ್ನು ಜಗತ್ತು ಕಂಡಿದೆ. ಜೀವಂತ ಮನುಷ್ಯನ ಎದೆಯನ್ನು ಬಗೆದು ಮಿಡಿಯುತ್ತಿರುವ ಹೃದಯವನ್ನು ಕಿತ್ತು ಹೊರಗೆಳೆದು ಸೂರ್ಯನಿಗೆ ತೋರಿಸುವ ಪ್ರಾಚೀನ ಅಜ್ಟೆಕ್ ಧಾರ್ಮಿಕ ವಿಧಿಯಿಂದ ಹಿಡಿದು ಒಂದು ಸಣ್ಣ ಕ್ರಿಮಿಯನ್ನೂ ಕೊಲ್ಲಬಾರದೆನ್ನುವ ಜೈನಧರ್ಮದವರೆಗೆ, ಬಹುತೇಕ ಯುದ್ಧಗಳ ಮೂಲಕ ಪ್ರಸಾರಗೊಂಡ ಇಸ್ಲಾಂನಿಂದ ಹಿಡಿದು ಶಾಂತಿಯುತ ಪ್ರಚಾರದಿಂದಲೇ ಒಂದು ಕಾಲದಲ್ಲಿ ಏಶಿಯಾದ ಪ್ರಮುಖ ಧರ್ಮವಾಗಿದ್ದ ಬೌದ್ಧಧರ್ಮದವರೆಗೆ ಹಲವು ಹತ್ತು ಧರ್ಮಗಳು, ನಂಬುಗೆಗಳು ನಮ್ಮೆದುರಿಗಿವೆ.

ಇಷ್ಟಾಗಿಯೂ ಈಗ ಜಾಗತಿಕವಾಗಿ ಪ್ರಮುಖವೆನಿಸಿಕೊಳ್ಳುವ ಧರ್ಮಗಳೆಲ್ಲವುಗಳ ಮೂಲವನ್ನು ಕೇವಲ ಎರಡೇ ಧರ್ಮಗಳಲ್ಲಿ ಗುರುತಿಸಬಹುದಾಗಿದೆ. ಅವೆಂದರೆ ಹಿಂದೂ ಹಾಗೂ ಯೆಹೂದಿ ಧರ್ಮಗಳು. ಉಳಿದೆಲ್ಲಾ ಧರ್ಮಗಳು ಈ ಎರಡರಲ್ಲೇ ಮೊಳೆತ ನಿರಾಕರಣಾ ಅಥವಾ ಸುಧಾರಣಾ ಪ್ರಕ್ರಿಯೆಗಳು. ಬೌದ್ಧಧರ್ಮ, ಜೈನಧರ್ಮ, ಸಿಖ್ ಧರ್ಮ ಮುಂತಾದುವುಗಳ ಮೂಲ ಹಿಂದೂಧರ್ಮದಲ್ಲಿದ್ದರೆ ಕ್ರಿಶ್ಚಿಯಾನಿಟಿ, ಇಸ್ಲಾಂ ಮತ್ತು ಬಹಾಯಿ ಧರ್ಮಗಳ ಮೂಲವನ್ನು ಯೆಹೂದಿ ಧರ್ಮದಲ್ಲಿ ಕಾಣಬಹುದಾಗಿದೆ. ಹೀಗಾಗಿ ಹಿಂದೂ ಮತ್ತು ಯೆಹೂದಿ ಧರ್ಮಗಳ ಉಗಮದ ಬಗ್ಗೆ ಚರ್ಚಿಸಿದರೆ ಅದು ಉಳಿದೆಲ್ಲಾ ಧರ್ಮಗಳ ಉಗಮದ ಚರ್ಚೆಗೆ ಪೀಠಿಕೆಯಾಗುತ್ತದೆ.

ಮೊದಲಿಗೆ ಹಿಂದೂಧರ್ಮವನ್ನು ಕೈಗೆತ್ತಿಕೊಳ್ಳೋಣ ಹಾಗೂ ಈ ಚರ್ಚೆಯನ್ನು “ಹಿಂದೂ” ಎಂಬ ಪದದ ಉಗಮದಿಂದಲೇ ಪ್ರಾರಂಭಿಸೋಣ. ಭಾರತೀಯರಿಗೆ ಹಿಂದೂ ಎಂಬ ಹೆಸದು ಕೊಟ್ಟವರು ಪರ್ಷಿಯನ್ನರು. ಇದರ ಹಿಂದೆ ಭಾಷಿಕ ಹಾಗೂ ಉಚ್ಚಾರಣೀಯ ಕಾರಣಗಳಿವೆ. ಪರ್ಶಿಯನ್ ಭಾಷೆಯಲ್ಲಿ “ಸ” ಅಕ್ಷರ ಇಲ್ಲದ ಕಾರಣ ಬೇರೆಲ್ಲಾ ಭಾಷೆಗಳ “ಸ”ಕಾರಗಳು ಪರ್ಷಿಯನ್ ನಾಲಿಗೆಯಲ್ಲಿ “ಹ”ಕಾರಗಳಾಗಿ ಬದಲಾಗುತ್ತವೆ. ಈ ಕಾರಣದಿಂದಾಗಿ ಹಿಂದೂ, ಹಿಂದೂಸ್ತಾನ ಎಂಬ ಹೆಸರುಗಳು ಹುಟ್ಟಿಕೊಂಡ ಬಗೆ ಹೀಗಿದೆ – ಸಿಂಧೂ ನದಿಗೆ ಆ ಹೆಸರು ಕೊಟ್ಟವರು ಆರ್ಯರು. ಆರ್ಯಪೂರ್ವ ಕಾಲದಲ್ಲಿ ಸಿಂಧೂ ಕಣಿವೆಯ ಜನರು ಆ ನದಿಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೆಂದು ನಮಗೆ ತಿಳಿಯದಾಗಿದೆ. ಸಿಂಧೂ ನಾಗರಿಕತೆಯ ಲಿಪಿಯನ್ನು ಓದುವುದರಲ್ಲಿ ಯಶಸ್ಸು ಸಿಗುವವರೆಗೆ ಆ ಹೆಸರೂ ನಮ್ಮಿಂದ ಮರೆಯಾಗಿಯೇ ಇರುತ್ತದೆ. ಕ್ಯಾಸ್ಪಿಯನ್ ಸಮುದ್ರದ ಉತ್ತರ ತೀರದ ತಮ್ಮ ಮೂಲನೆಲೆಯನ್ನು ತೊರೆದು ಸಿಹಿನೀರನ್ನರಸಿ ಇತ್ತ ಬಂದ ಆರ್ಯರಿಗೆ ಮೂರೂವರೆ ಸಹಸ್ರಮಾನಗಳ ಹಿಂದೆ ಈ ನದಿ ಎದುರಾದಾಗ ಅದರ ಅಗಾಧತೆ ಅವರನ್ನು ದಿಗ್ಮೂಢರನ್ನಾಗಿಸಿತು.

ಅದರಿಂದಲೇ ಅವರು ಅಗಾಧ ಜಲರಾಶಿ ಅಥವಾ ಸಾಗರವನ್ನು ಸೂಚಿಸುವ “ಸಿಂಧೂ” ಎಂಬ ಹೆಸರನ್ನು ಆ ನದಿಗಿಟ್ಟರು. ನಂತರ ಅದು ಪರ್ಶಿಯನ್ ನಾಲಿಗೆಯಲ್ಲಿ “ಹಿಂದೂ” ಎಂದಾಗಿ ಅಪಭ್ರಂಶಗೊಂಡಿತು. ಅವರು ಸಿಂಧೂ ನದಿಯನ್ನು ಹಿಂದೂ ಎಂದು ಕರೆದದ್ದಲ್ಲದೇ ಈ ಪ್ರದೇಶವನ್ನೂ ಆ ಹೆಸರಿನಿಂದಲೇ ಗುರುತಿಸಲಾರಂಭಿಸಿದರು. ಅದರ ಮುಂದುವರಿಕೆಯ ಫಲವಾಗಿ ಈ ನಾಡಿನ ಜನರಿಗೂ ಹಿಂದೂ ಎಂಬ ಹೆಸರು ಬಂತು. ಹೀಗಾಗಿ ಹಿಂದೂ ಎನ್ನುವುದು ಮೂಲತಃ ಧರ್ಮಸೂಚಕವಾಗಿರಲಿಲ್ಲ. ಉತ್ತರ ಭಾರತದಲ್ಲಿ ವಾಸಿಸುವ ಎಲ್ಲರೂ, ಅವರ ಧಾರ್ಮಿಕ ನಂಬಿಕೆಗಳೇನೇ ಇರಲಿ ಅವರೆಲ್ಲರೂ ಹಿಂದೂಗಳೇ ಅಂದರೆ ಹಿಂದೂ (ಸಿಂಧೂ) ದೇಶವಾಸಿಗಳೇ. ಇಂದಿಗೂ ಸಹಾ ಪಶ್ಚಿಮ ಹಾಗೂ ಮಧ್ಯ ಏಶಿಯಾದ ಭಾಷೆಗಳಲ್ಲಿ ಹಿಂದೂ ಅಂದರೆ ಭಾರತೀಯ (ಇಂಡಿಯನ್) ಎಂದರ್ಥ, ಹಿಂಧೂಧರ್ಮೀಯ ಎಂದಲ್ಲ.

ನಂತರ ಪರ್ಶಿಯನ್ನರಿಂದ ಹಿಂದೂ ಎಂಬ ನಾಡಿನ ಬಗ್ಗೆ ಅರಿತ ಗ್ರೀಕರು ಅದನ್ನು ತಮ್ಮ ಭಾಷಾ ನಿಯಮಗಳಿಗನುಸಾರವಾಗಿ “ಇಂಡಿಯಾ” ಎಂದು ಬದಲಾಯಿಸಿಕೊಂಡರು. ಕಳೆದ ಎರಡೂವರೆ ಸಾವಿರ ವರ್ಷಗಳಿಂದಲೂ ಭಾರತ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿರುವುದು ಈ ಹೆಸರಿನಿಂದ. ಮೊದಲಿಗೆ ಪ್ರದೇಶಸೂಚಕವಾದ ಹಿಂದೂ ಅಥವಾ ಇಂಡಿಯಾ ಎಂಬ ನಾಮಪದಗಳು ಮುಂದೆ ವಸಾಹತೀಕರಣದ ಕಾಲದಲ್ಲಿ ಪ್ರತ್ಯೇಕ ಅರ್ಥಗಳನ್ನು ಪಡೆದುಕೊಂಡವು. ಇದಕ್ಕೆ ಕಾರಣ ವಸಾಹತುಶಾಹಿ ವಿದ್ವಾಂಸರು ಇಂಡಿಯಾ ಎಂಬ ನಾಮಪದವನ್ನು ಭೌಗೋಳಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಸೂಚಿಸಲೂ, ಹಿಂದೂ ಎಂಬ ನಾಮಪದವನ್ನು ಆ ಭೌಗೋಳಿಕ ಪ್ರದೇಶಕ್ಕೇ ವಿಶಿಷ್ಟವಾದ ಧಾರ್ಮಿಕ ನಂಬುಗೆಗಳನ್ನು ಸೂಚಿಸಲೂ ಬಳಸಿಕೊಳ್ಳತೊಡಗಿದ್ದು. ನಂತರ ವಸಾಹತುಶಾಹಿ ಶೈಕ್ಷಣಿಕ ಮೂಸೆಯಲ್ಲಿ ಅದ್ದಿತೆಗೆದ ಭಾರತೀಯರೂ ಈ ಅರ್ಥಗಳನ್ನೇ ಒಪ್ಪಿಕೊಂಡು ಪ್ರಚುರಪಡಿಸುತ್ತಾ ಬರುತ್ತಿದ್ದಾರೆ.

ಹಿಂದೂಧರ್ಮದ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಆಧಾರಗಳಿಲ್ಲ. ಇದಕ್ಕೆ ಕಾರಣ ಹಿಂದೂ ಧರ್ಮವೆಂದು ಕರೆಸಿಕೊಳ್ಳುತ್ತಿರುವ ಸಂಪ್ರದಾಯ, ರೂಡಿರಿವಾಜುಗಳ ಮೊತ್ತದ ಪ್ರಾಚೀನತೆ. ಇದನ್ನು ವಿವರಿಸುವ ಮೊದಲು ಮಾನವಸಮಾಜದಲ್ಲಿ ಧರ್ಮದ ಉಗಮದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವುದು ಇಲ್ಲಿ ಉಚಿತ.

ಧಾರ್ಮಿಕ ನಂಬುಗೆಗಳ, ವಿಚಾರಗಳ ಇತಿಹಾಸ ಬಹುಷಃ ಮಾನವ ಇತಿಹಾಸದಷ್ಟೇ ಪ್ರಾಚೀನ. ಹೀಗಾಗಿ ಮಾನವನ ಪ್ರಾಚೀನತೆಯ ಬಗ್ಗೆ ನಮಗೆ ನಿಖರವಾಗಿ ತಿಳಿಯುವವರೆಗೆ ಧರ್ಮದ ಪ್ರಾಚೀನತೆಯೂ ನಮಗೆ ನಿಖರವಾಗಿ ತಿಳಿಯುವುದಿಲ್ಲ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ಈಗ ಚಾಲ್ತಿಯಲ್ಲಿರುವ ವಿಕಾಸವಾದದ ಪ್ರಕಾರ ಆಫ್ರಿಕಾದಲ್ಲಿ ವಾನರರಿಂದ ಮಾನವ ಪ್ರಬೇಧ ಬೇರ್ಪಟ್ಟದ್ದು ಅರವತ್ತು ಲಕ್ಷ ವರ್ಷಗಳ ಹಿಂದೆ. ಅದರ ಮುಂದುವರಿಕೆಯಾಗಿ ಇಪ್ಪತ್ತಮೂರು ಲಕ್ಷ ವರ್ಷಗಳ ಹಿಂದೆ ಆಯುಧಗಳನ್ನು ತಯಾರಿಸುವ ಬುದ್ಧಿಶಕ್ತಿಯನ್ನು ಹೊಂದಿದ ಹೋಮೊ ಹ್ಯಾಬಿಲಿಸ್ ಮಾನವನ ಉಗಮವಾಯಿತು. ನಾವು ಹೋಮೋ ಸೇಪಿಯನ್ ಸೇಪಿಯನ್‍ಗಳು ಉಗಮವಾದದ್ದು ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ. ಅದರೆ ಇತ್ತೀಚೆಗೆ ದೊರೆಯುತ್ತಿರುವ ಅಧಾರಗಳಿಂದಾಗಿ ವಿಕಾಸವಾದದ ಬುಡವೇ ಅಲುಗಾಡತೊಡಗಿದೆ. ಈ ಹೊಸ ಆಧಾರಗಳ ಪ್ರಕಾರ ಕಲ್ಲಿನಿಂದ ಆಯುಧಗಳನ್ನೂ, ಉಪಕರಣಗಳನ್ನೂ ತಯಾರಿಸಬಲ್ಲ ಬುದ್ಧಿಶಕ್ತಿಯುಳ್ಳ ಮಾನವ ಸುಮಾರು “ನಾಲ್ಕೂವರೆಯಿಂದ ಐದು ಕೋಟಿ” ವರ್ಷಗಳ ಹಿಂದೆಯೇ ಪ್ರಪಂಚದ ವಿವಿಧೆಡೆ ಕಾಣಿಸಿಕೊಂಡಿದ್ದ! (ಇದರ ಬಗ್ಗೆ ಮುಂದೆ ಅವಕಾಶವಾದಾಗ ವಿವರವಾಗಿ ಬರೆಯುತ್ತೇನೆ.)

ಆಯುಧಗಳನ್ನೂ, ಉಪಕರಣಗಳನ್ನೂ ತಯಾರಿಸಬಲ್ಲ ಮಾನವನಿಗೆ ಸಹಜವಾಗಿಯೇ ಪ್ರಕೃತಿಯ ಹಲವು ನಿಯಮಗಳು ಪರಿಚಯವಾಗಿದ್ದಿರಲೇಬೇಕು. ಆ ಮೂಲಕ ತನ್ನನ್ನು ತಾನರಿಯುವ ಪ್ರಯತ್ನವನ್ನೂ ಆತ ನಡೆಸಿರಬೇಕು. ಅದೇ ಧಾರ್ಮಿಕ ನಂಬುಗೆಗಳಿಗೆ ತಳಹದಿಯೂ ಆಗಿರಬೇಕು.

ಪ್ರಕೃತಿ ನಿಯಮಗಳ ಮೇಲೆ ತನ್ನನ್ನು ತಾನರಿಯಲು ಪ್ರಯತ್ನಿಸಿದ ಮಾನವನಲ್ಲಿ ಧಾರ್ಮಿಕ ಜಿಜ್ಞಾಸೆಗಳುದಿಸಿದವೆಂದು ಹೇಳಲು ನಾನಿಲ್ಲಿ ಬ್ರಿಟಿಷ್ ಮಾನವಶಾಸ್ತ್ರಜ್ಞ ಎಡ್ವರ್ಡ್ ಟೈಲರ್ (1832-1917) ಮಾಡಿರುವ ಅವಲೋಕನವನ್ನು ಬಳಸಿಕೊಳ್ಳುತ್ತೇನೆ. ಟೈಲರ್ ಹೇಳುವುದು ಹೀಗೆ: ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಮೂಡುವ ವಿವರಿಸಲಾಗದ ಆಲೋಚನೆಗಳು, ಕಾಣುವ ಚಿತ್ರಗಳು, ಕನಸುಗಳು, ಹಳವಂಡಗಳು, ಅವುಗಳಲ್ಲಿ ಮೃತ ಪರಿಚಯಸ್ಥರು ಕಾಣಿಸಿಕೊಳ್ಳುವುದು ಮುಂತಾದುವು ತಾನೆಂದರೆ ಭೌತಿಕ ಶರೀರ ಮಾತ್ರವಲ್ಲ, ಶರೀರದೊಳಗೆ ‘ಮತ್ತೇನೋ’ ಅಂದರೆ ಆತ್ಮ (ಲ್ಯಾಟಿನ್‍ನಲ್ಲಿ “ಅನಿಮಾ”) ಇರಬಹುದೆಂಬ ಕಲ್ಪನೆಯನ್ನು ಆದಿಮಾನವನಲ್ಲಿ ಮೂಡಿಸಿರಬಹುದು. ಅದು ಮುಂದುವರೆದು, ಸತ್ತ ನಂತರ ದೇಹವನ್ನು ತ್ಯಜಿಸಿದ ಆತ್ಮವು ನಾಶವಾಗದೇ ಪ್ರಕೃತಿಯಲ್ಲಿ ಅಂದರೆ ಮರಗಿಡಗಳು, ಕಲ್ಲುಬಂಡೆಗಳು, ನದಿ ಪರ್ವತಗಳಲ್ಲಿ, ಸೂರ್ಯ ಚಂದ್ರ ಗ್ರಹ ನಕ್ಷತ್ರಗಳಲ್ಲಿ ನೆಲೆಸುತ್ತವೆಂಬ ನಂಬಿಕೆಯೂ ಮೂಡಿರಬೇಕು. ಅದರ ಮುಂದುವರಿಕೆಯಾಗಿ ಮೃತ ಪ್ರೀತಿ ಪಾತ್ರರು ನೆಲೆಸಿರುವ ಪ್ರಕೃತಿಯ ಚಿನ್ಹೆಗಳೂ ಆದಿಮಾನವನಿಗೆ ಪ್ರೀತಿಪಾತ್ರವಾಗಿ ಕ್ರಮೇಣ ಅವುಗಳ ಮೇಲೆ ಭಕ್ತಿ ಮೊಳೆತು ಅವು ಪೂಜಾರ್ಹಗೊಳ್ಳತೊಡಗಿರಬೇಕು. ಪೂಜಾವಿಧಾನಗಳು ಮತ್ತು ಅವುಗಳಿಗೆ ಒತ್ತುಕೊಟ್ಟ ಭಾವನೆಗಳು ಮತ್ತು ನಂಬಿಕೆಗಳು ಧಾರ್ಮಿಕ ವಿಧಿವಿಧಾನಗಳಿಗೆ ತಳಹದಿಯಾಗಿರಬೇಕು. ಧರ್ಮ ಹೀಗೆ ಉದಿಸಿರಬೇಕು.

ಪ್ರಾಚೀನ ಹಿಂದೂ ನಂಬುಗೆಗಳಲ್ಲಿ ಪ್ರಕೃತಿಯ ಬಗ್ಗೆ ಪೂಜ್ಯ ಭಾವನೆ, ಅದರ ಅರಾಧನೆ ಪ್ರಮುಖವಾಗಿ ಕಾಣಿಸಿಕೊಳ್ಳುವುದರಿಂದ ಹಿಂದೂಧರ್ಮದ ಮೊಳಕೆಯನ್ನು ಹೊಮೋ ಹ್ಯಾಬಿಲಿಸ್‍ನ ಕಾಲದಲ್ಲೇ ಗುರುತಿಸಬಹುದೇನೋ. ಆದರೆ ಪ್ರಶ್ನೆಯೆಂದರೆ ಇದಾದದ್ದು ಯಾವಾಗ? ವಿಕಾಸವಾದದ ಪ್ರಕಾರ ಅದಾದದ್ದು ಕೇವಲ ಇಪ್ಪತ್ತಮೂರು ಲಕ್ಷ ವರ್ಷಗಳ ಹಿಂದೆ. ಆದರೆ ಮೇಲೆ ವಿವರಿಸಿದಂತೆ ಇತ್ತೀಚೆಗೆ ದೊರೆಯುತ್ತಿರುವ ಆಧಾರಗಳ ಪ್ರಕಾರ ಅದಾದದ್ದು ಐದು ಕೋಟಿ ವರ್ಷಗಳ ಹಿಂದೆ!

ಈ ವಿಧಾನದಲ್ಲಿ ಸೃಷ್ಟಿಯಾದದ್ದು ಕೇವಲ ಹಿಂದೂ ಧಾರ್ಮಿಕ ನಂಬುಗೆಗಳು ಮಾತ್ರವಲ್ಲ. ಪ್ರಪಂಚದ ಎಲ್ಲೆಡೆ ಮಾನವ ಗುಂಪುಗಳು ಈ ಬಗೆಯಾಗಿಯೇ ತಂತಮ್ಮ ಧಾರ್ಮಿಕ ನಂಬುಗೆಗಳನ್ನು ಮೂಡಿಸಿಕೊಂಡಿರಬೇಕು. ಅವುಗಳಲ್ಲಿ ಕೆಲವು ನಶಿಸುತ್ತಾ, ಮತ್ತೆ ಕೆಲವು ಬದಲಾಗುತ್ತಾ ಬೆಳೆಯುತ್ತಾ ಸಾಗಿಬಂದಿವೆ. ಹೀಗೆ ಸಾಗಿಬಂದಿರುವುದಕ್ಕೆ ಅತ್ಯಂತ ಸೂಕ್ತ ಉದಾಹರಣೆ ಹಿಂದೂಧರ್ಮ. ಮೇಲೆ ವಿವರಿಸಿದಂತೆ ಎಂದೋ ಉದಿಸಿದ ನಂಬುಗೆಗಳು ಹೊಸರೂಪಗಳನ್ನು ಪಡೆಯುತ್ತಾ, ಪೂರ್ಜಾರ್ಹವಾದ ಹೊಸ ದೈವಗಳನ್ನು ಸೃಷ್ಟಿಸಿಕೊಳ್ಳುತ್ತಾ, ಅದಕ್ಕನುಗುಣವಾಗಿ ಹೊಸ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ, ಅವೆಲ್ಲವನ್ನೂ ಅಕ್ಷರರೂಪದಲ್ಲಿ ದಾಖಲಿಸುತ್ತಾ ಸಾವಿರಾರು, ಲಕ್ಷಾಂತರ ವರ್ಷಗಳವರೆಗೆ ಸಾಗಿಬಂದಿರುವ ಹಿಂದೂಧರ್ಮಕ್ಕೆ ನಿರ್ದಿಷ್ಟ ಸ್ಥಾಪಕನೊಬ್ಬ, ಒಂದೇ ಒಂದು ಧರ್ಮಗ್ರಂಥ ಇರಲು ಹೇಗೆ ಸಾಧ್ಯ

ಇನ್ನು ಯೆಹೂದಿ ಧರ್ಮದ ಬಗ್ಗೆ ಹೇಳುವುದಾದರೆ ಅದು ಸ್ಥಾಪನೆಗೊಂಡ ಬಗೆಯನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಬೈಬಲ್‍ನ ಹಳೇ ಒಡಂಬಡಿಕೆಯಲ್ಲಿ ದಾಖಲಾಗಿರುವಂತೆ ಯೆಹೋವ ದೇವರು ಭಯಂಕರ ಶಬ್ಧ ಹೊರಡಿಸುತ್ತಿದ್ದ ಒಂದು ಹಾರಾಡುವ ಯಂತ್ರದಲ್ಲಿ ಕುಳಿತು ಒಂದುಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿದ್ದ. ಅಷ್ಟೇ ಅಲ್ಲ, ತನ್ನ ಕಟ್ಟಳೆಗಳನ್ನು ಮೀರಿದ ಸೊಡೋಂ ನಗರದ ನಿವಾಸಿಗಳನ್ನು ಆತ ಬೃಹದಾಕಾರದ ಅಣಬೆಯಂತಹ ಹೊಗೆಯನ್ನು ಸೃಷ್ಟಿಸಿದ ಭಯಂಕರ ಅಸ್ತ್ರ (ಅಣುಬಾಂಬ್‍ ?) ಬಳಸಿ ನಾಶಮಾಡಿದ. ಈ ವಿವರಗಳಿಂದ ತಿಳಿಯುವುದೇನೆಂದರೆ ಯೆಹೋವ ದೇವರು ಆ ಕಾಲದ ಮಾನವನ ಸಾಮರ್ಥ್ಯಕ್ಕೆ ಮೀರಿದ ತಿಳುವಳಿಕೆ, ಬುದ್ಧಿ, ಶಕ್ತಿಸಾಮರ್ಥ್ಯಗಳನ್ನು ಹೊಂದಿದ್ದ ವಿಜ್ಞಾನಿಯಾಗಿದ್ದಿರಬಹುದು. ಈ ಬಗೆಗಿನ ವಿವರಗಳು ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.

2 ಟಿಪ್ಪಣಿಗಳು Post a comment
  1. ನವೀನ ಗಂಗೋತ್ರಿ
    ಜನ 3 2018

    ಪ್ರೊಫೆಸರ್, ತಮ್ಮ ಲೇಖನದ ಮುಂದಿನ ಭಾಗಕ್ಕಾಗಿ ಕಾಯುವಂತೆ ಮಾಡಿದ್ದೀರಿ. ಯೆಹೂದಿಗಳ ಬಗ್ಗೆ ಇನ್ನಷ್ಟು ತಿಳಿಯುವ ತುಡಿತ ಮೂಡಿಸಿದ್ದೀರಿ. ಯೆಹೂದಿ ಮತ್ತು ಹಿಂದೂ ಧರ್ಮಗಳೇ ಜಗತ್ತಿನ ಉಳಿದೆಲ್ಲ ಧರ್ಮಗಳ ಮಾತೃಸ್ಥಾನದಲ್ಲಿವೆ ಎಂಬುದನ್ನು ನೆನಪಿಸಿಕೊಳ್ಳುವಾಗೆಲ್ಲ ಯೆಹೂದಿಗಾದ ಸ್ಥಿತಿಯೇ ಮುಂದೊಂದು ದಿನ ಹಿಂದುವಿಗೂ ಆದೀತೇ ಎಂಬ ಆತಂಕವೇಳುತ್ತದೆ. ಅಥವಾ ಯೆಹೂದಿಗಳು ಸುರಿಸಿದಷ್ಟು ರಕ್ತವನ್ನು ಹಿಂದೂ ಈಗಾಗಲೇ ಸುರಿಸಿಯಾಗಿದೆಯೋ ಗೊತ್ತಿಲ್ಲ.

    ನೀವು ಆರ್ಯಾಕ್ರಮಣ ಅಥವಾ ಆರ್ಯವಲಸೆ ಸಿದ್ಧಾಂತವನ್ನು ಅಂಗೀಕರಿಸಿಯೇ ಲೇಖನ ಬರೆದಿದ್ದೀರಿ ಅನ್ನಿಸಿತು. ಸಾಕಷ್ಟು ಬಾರಿಗೆ ಅಸತ್ಯವೆಂದು ಪ್ರಮಾಣಿತವಾದ ಆ ಸಿದ್ಧಾಂತದ ಕುರಿತಾಗಿ ವಿದ್ವದ್ವಲಯದಲ್ಲಿ ಇವತ್ತಿಗೂ ಇರುವ ಭಿನ್ನಾಭಿಪ್ರಾಯಗಳು ನಮ್ಮಂಥ ಜಿಜ್ಞಾಸುಗಳಿಗೆ ಗೊಂದಲ ಮೂಡಿಸುತ್ತವೆ.

    ಉತ್ತರ

Trackbacks & Pingbacks

  1. ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ? | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments