ವಿಷಯದ ವಿವರಗಳಿಗೆ ದಾಟಿರಿ

ಜನವರಿ 5, 2018

ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ?

‍ನಿಲುಮೆ ಮೂಲಕ

– ಪ್ರೊ. ಪ್ರೇಮಶೇಖರ

ಭಾಗ – ೧

ಮೂಲ ಹೀಬ್ರೂ ಬೈಬಲ್‍ನಲ್ಲಿ ದೇವರ ಹೆಸರು “YHWH” ಎಂದಿದೆ. ಇದನ್ನು “ಯೆಹೋವ” ಎಂದು ಉಚ್ಚರಿಸುವುದು ಎಷ್ಟು ಸಮಂಜಸ ಎಂದು ನನಗೆ ತಿಳಿಯದು. ಅದರೂ ಆ ಉಚ್ಚಾರಣೆಯೇ ಸಾರ್ವತ್ರಿಕವಾಗಿರುವುದರಿಂದಾಗಿ ನಾನೂ ಅದನ್ನೇ ಬಳಸುತ್ತೇನೆ.

ಸಾಮಾನ್ಯವಾಗಿ ಎಲ್ಲ ಧರ್ಮಗಳೂ ಹೇಳುವುದು ದೇವರಿಗೆ ಮೂರು ಪ್ರಮುಖ ಲಕ್ಷಣಗಳು ಅಥವಾ ಸಾಮರ್ಥ್ಯಗಳಿವೆ ಎಂದು. ದೇವರು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ. ಆದರೆ ಯೆಹೋವ ದೇವರು ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ ಆಗಿರಲಿಲ್ಲ. ಆತ ಸರ್ವಜ್ಞ ಆಗಿದ್ದನೇ ಅಲ್ಲವೇ ಎನ್ನುವುದಕ್ಕೆ ನಿಖರ ಪುರಾವೆಗಳು ದೊರೆಯುವುದಿಲ್ಲ.

ಮೊದಲಿಗೆ, ಯೆಹೋವ ದೇವರು ಸೊಡೋಂ ಮತ್ತು ಗೊಮೋರಾ ಪಟ್ಟಣಗಳನ್ನು ನಾಶಮಾಡಿದ ಬಗೆಯನ್ನು ಆತ ಸರ್ವಶಕ್ತ ಆಗಿರಲಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಪರಿಗಣಿಸಬಹುದು. ಅಲ್ಲಿನ ಜನ ತಾನು ವಿಧಿಸಿದ್ದ ಕಟ್ಟಳೆಗಳನ್ನೆಲ್ಲಾ ಕಡೆಗಣಿಸಿ ಅನಾಚಾರಗಳಲ್ಲಿ ಮೈಮರೆತಿದ್ದಾಗ ಅವರನ್ನ ನಾಶಮಾಡಲು ನಿರ್ಧರಿಸುವ ದೇವರು ಲಾಟ್ ಎನ್ನುವ ಧರ್ಮಭೀರು, ಸಂಭಾವಿತ ಮತ್ತವನ ಕುಟುಂಬವನ್ನ ಮಾತ್ರ ಕಾಪಾಡಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ತನ್ನ ದೂತರನ್ನ ಲಾಟ್‌ನ ಮನೆಗೆ ಕಳಿಸುತ್ತಾನೆ. ಲಾಟನಿಗೆ ಆ ದೇವದೂತರು ಹೇಳುವುದು “ನಾಳೆ ಬೆಳಿಗ್ಗೆ ಈ ಪಟ್ಟಣ ನಾಶ ಆಗುತ್ತದೆ. ಅಷ್ಟರೊಳಗೆ ನೀವೆಲ್ಲರೂ ಈ ಊರನ್ನು ತೊರೆದು ಓಡಿಹೋಗಿ ಪರ್ವತಗಳನ್ನು ತಲುಪಬೇಕು. ಇಲ್ಲವಾದರೆ ನಿಮ್ಮನ್ನು ನಾವು ಕಾಪಾಡಲಾಗುವುದಿಲ್ಲ” ಎಂದು. ಯೆಹೋವ ದೇವರು ಸರ್ವಶಕ್ತ ಆಗಿದ್ದರೆ ಇಡೀ ಪಟ್ಟಣ ನಾಶ ಆಗುತ್ತಿದ್ದರೂ, ಅದರಲ್ಲಿರುವ ಸಕಲ ಜೀವಿಗಳೂ ಸಾಯುತ್ತಿದ್ದರೂ, ಆ ದುರಂತದ ನಡುವೆಯೇ ಲಾಟ್ ಮತ್ತವನ ಕುಟುಂಬವನ್ನು ಕಾಪಾಡಬಹುದಾಗಿತ್ತು. ಆದರೆ ಯೆಹೋವ ದೇವರಿಗೆ ಅಂತಹ ಶಕ್ತಿ ಇರಲಿಲ್ಲ. ತನ್ನ ಶಕ್ತಿಯ ಇತಿಮಿತಿಗಳನ್ನ ಅವನು ಅರಿತಿದ್ದ. ಅಲ್ಲದೇ, ಸೊಡೋಂ ನಗರ ನಾಶವಾದ ಬಗೆ ನಮಗೆ ತಿಳಿಯುವುದು ಲಾಟ್‍ನ ಹೆಂಡತಿಯ ಕಂಡ ನೋಟದಿಂದ. ಆ ವಿವರಗಳು ಯೆಹೋವ ದೇವರು ಆ ನಗರದ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದಿರಬಹುದಾದ ದಟ್ಟ ಸೂಚನೆಯನ್ನು ನೀಡುತ್ತವೆ.

ಯೆಹೋವ ದೇವರು ಸರ್ವಾಂತರ್ಯಾಮಿ ಅಗಿರಲಿಲ್ಲ ಎನ್ನುವುದಕ್ಕೆ ಉದಾಹರಣೆಗಳು ಬೈಬಲ್‍ನ ಹಲವೆಡೆ ದೊರೆಯುತ್ತವೆ. ಕಿವಿ ಕಿತ್ತುಹೋಗೋವಂತಹ ಭಯಂಕರ ಸದ್ದುಮಾಡುವ ಒಂದು ಹಾರಾಡುವ ವಾಹನದಲ್ಲಿ ಕುಳಿತುಕೊಂಡು ಈ ದೇವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿದ್ದ.  ಮೋಸೆಸ್, ಅಬ್ರಹಾಮ್ ಮುಂತಾದವರನ್ನೆಲ್ಲಾ ಯೆಹೋವ ದೇವರು ಭೇಟಿ ಮಾಡಿದಾಗೆಲ್ಲಾ ಅಂತಹ ವಾಹನದಲ್ಲೇ ಅವನು ಬರುವುದು. ತಾನು ಕಣ್ಣಾರೆ ಕಂಡ ಅಂತಹ ಒಂದು ವಾಹನದ ಸಮಗ್ರ ವಿವರಗಳನ್ನು ಎಜ಼ಕೀಲ್ ಕೊಡುತ್ತಾನೆ.

ಈ ಮೇಲಿನ ವಿವರಗಳನ್ನು ನೋಡಿದರೆ ಯೆಹೋವ ದೇವರು ಆ ಕಾಲದಲ್ಲಿ ವೈಜ್ಞಾನಿಕವಾಗಿ ಮುಂದುವರಿದ ಜನಾಂಗಕ್ಕೆ ಸೇರಿದ ಒಬ್ಬ ವಿಜ್ಞಾನಿಯಾಗಿದ್ದಿರಬೇಕು. ಅವನ ಕೃತ್ಯಗಳು ಮತ್ತು ಸಾಧನೆಗಳು ಆದಿಮಾನವನ ತಿಳುವಳಿಕೆಗೆ ಮೀರಿದ್ದಾಗಿರಬೇಕು. ಆದರೆ ಪ್ರಶ್ನೆಯೆಂದರೆ ಯೆಹೋವ ದೇವರು ಮತ್ತವನ ದೂತರು ಸೇರಿದ್ದ ವೈಜ್ಞಾನಿಕವಾಗಿ ಮುಂದುವರೆದ ಜನಾಂಗ ಅನಾದಿಕಾಲದಲ್ಲಿ ಈ ಭೂಮಿಯ ಯಾವುದೋ ಒಂದು ಕಡೆ ಅಸ್ತಿತ್ವದಲ್ಲಿತ್ತೇ ಅಥವಾ ಅವರೆಲ್ಲರೂ ಬರುತ್ತಿದ್ದುದು ಬೇರಾವುದೋ ಗ್ರಹದಿಂದಲೋ? ಈ ಪ್ರಶ್ನೆಯ ಜಾಡು ಹಿಡಿದು ನಾವು ಮುಂದುವರೆಯುವುದು ಬೇಡ. ಅದರ ಚರ್ಚೆ ಈ ಲೇಖನದ ವ್ಯಾಪ್ತಿಯನ್ನು ಮೀರಿಹೋಗುತ್ತದೆ. ಹೀಗಾಗಿ ಮುಂದೊಮ್ಮೆ ಈ ವಿಷಯವನ್ನೇ ಪ್ರತ್ಯೇಕವಾಗಿ ಚರ್ಚೆಗೆತ್ತಿಕೊಳ್ಳೋಣ.

ಆದರಿಲ್ಲಿ ನಾವು ಅಗತ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಯೆಹೋವ ದೇವರು ನೀಡಿದ “ಹತ್ತು ಕಟ್ಟಳೆಗಳು” (Ten Commandments) ಯೆಹೂದಿ ಧರ್ಮದ (ಮತ್ತದರ ಕುಡಿ ಕ್ರೈಸ್ತ ಧರ್ಮದ) ಮೂಲತತ್ವಗಳಾಗಿರುವುದನ್ನು ಅಂದರೆ ಮೂಲತಃ ಯೆಹೂದಿ ಧರ್ಮ ಯೆಹೋವ ದೇವರಿಂದ ಬೋಧಿಸಲ್ಪಟ್ಟದ್ದನ್ನು. ಆದರೆ ಇದಾದದ್ದು ಯಾವಾಗ ಎಂಬ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಲಾಗುವುದಿಲ್ಲ. ಈ ಬಗ್ಗೆ ಒಂದು ಊಹೆ ಮಾಡಬಹುದಷ್ಟೇ. ಹೋಮೋ ಎರೆಕ್ಟಸ್ ಮಾನವನ ಮೆದುಳಿಗಿಂತ ಹೋಮೋ ಸೇಪಿಯನ್ ಮಾನವನ ಮೆದುಳು ಸುಮಾರು ಒಂದೂವರೆ ಪಟ್ಟು ದೊಡ್ಡದಾಗಿತ್ತು ಮತ್ತು ಈ ಬೆಳವಣಿಗೆ ಘಟಿಸಿದ್ದು ವಿಕಾಸವಾದದ ನಿಯಮಗಳನ್ನು ಸಾರಾಸಗಟಾಗಿ ತೂರಿಬಿಡುವಷ್ಟು ಅತಿ ಕಡಿಮೆ ಅವಧಿಯಲ್ಲಿ ಎಂದು ವಿಜ್ಞಾನ ಹೇಳುವುದಕ್ಕೂ, “ದೇವರ ಪುತ್ರರು ಮನುಷ್ಯನ ಕುವರಿಯರನ್ನು ಪತ್ನಿಯರನ್ನಾಗಿ ಸ್ವೀಕರಿಸಿದರು” ಎಂದು ಬೈಬಲ್‍ನ ಆದಿ ಕಾಂಡ ಹೇಳುವುದಕ್ಕೂ ತಾಳೆ ಹಾಕಿದರೆ ಅಚ್ಚರಿಯ ಊಹೆಗಳಿಗೆ ದಾರಿಯಾಗುತ್ತದೆ. ಅದರ ಪ್ರಕಾರ ಯೆಹೋವ ದೇವರು ಮತ್ತವನ ವೈಜ್ಞಾನಿಕವಾಗಿ ಮುಂದುವರೆದ ಜನಾಂಗದ ಪುರುಷರು ಭೂಮಿಯಲ್ಲಿದ್ದ ‘ಅರೆಮಾನವ’ ಹೋಮೋ ಎರೆಕ್ಟಸ್ ಹೆಣ್ಣುಗಳ ಜತೆ ಲೈಂಗಿಕ ಸಂಪರ್ಕ ಬೆಳೆಸಿ ದೊಡ್ಡ ಗಾತ್ರದ ಮೆದುಳನ್ನು ಹೊಂದಿದ ಹೋಮೋ ಸೇಪಿಯನ್ ಮನುಷ್ಯನ ಸೃಷ್ಟಿಗೆ ಕಾರಣವಾಗಿದ್ದಿರಬಹುದು.  ಅಂದರೆ ಯೆಹೋವ ದೇವರು ಮತ್ತವನ ಸಹಚರರು ತಮ್ಮ ಜೈವಿಕ ಪ್ರಯೋಗಗಳಿಂದ ಹೊಸದೊಂದು ಮಾನವ ಜನಾಂಗವನ್ನು ಸೃಷ್ಟಿಸಿ ಅದಕ್ಕೆ ಹತ್ತು ಕಟ್ಟಳೆಗಳನ್ನು ವಿಧಿಸಿ ಯೆಹೂದಿ ಧರ್ಮಕ್ಕೆ ತಳಹದಿ ಹಾಕಿದ್ದಿರಬಹುದು. ಇದರರ್ಥ ಹೊಮೋ ಸೇಪಿಯನ್ ಮತ್ತು ನಂತರದ ನಮ್ಮ ಹೋಮೋ ಸೇಪಿಯನ್ ಸೇಪಿಯನ್ ಮಾನವರು ವೈಜ್ಞಾನಿಕವಾಗಿ ಮುಂದುವರೆದ ಯಾವುದೊ ಜನಾಂಗ ಯಾವುದೋ ಉದ್ದೇಶಕ್ಕಾಗಿ ನಡೆಸಿದ ಪ್ರಯೋಗದ ಪರಿಣಾಮವೇ? ಆ ಜನಾಂಗ ತಮ್ಮ ಸೃಷ್ಟಿಯಾದ ಮಾನವನ ಮೇಲೆ ಯೆಹೂದಿ ಧರ್ಮವನ್ನು ವಿಧಿಸಿದ್ದು ಸಹಾ ಯಾವುದೋ ಉದ್ದೇಶದಿಂದಲೇ? ಈ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ.

ಈ ಬಗೆಯಲ್ಲಿ ಯೆಹೂದಿ ಧರ್ಮದ ಉಗಮವನ್ನು ನಾವು ಗುರುತಿಸಬಹುದಾದರೂ ಅದಾದದ್ದು ಯಾವಾಗ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಹೋಮೋ ಸೇಪಿಯನ್ ಮಾನವ ಉದಿಸಿದ ಕಾಲಮಾನದ ಬಗ್ಗೆ ವಿಕಾಸವಾದ ಹೇಳುವುದಕ್ಕೂ, ದೊರೆತಿರುವ ಹಲವಾರು ಆಧಾರಗಳು ಸೂಚಿಸುವುದಕ್ಕೂ ಲಕ್ಷಾಂತರ, ಮಿಲಿಯಾಂತರ ವರ್ಷಗಳ ವ್ಯತ್ಯಾಸವಿದೆ. ಈ ವ್ಯತ್ಯಾಸ ಅಳಿಸಿಹೋಗಿ ಒಂದು ನಿಖರ ಕಾಲಮಾನ ನಮಗೆ ಸ್ಪಷ್ಟವಾಗಿ ತಿಳಿದಾಗ ಆ ಕಾಲಮಾನವನ್ನು ಯೆಹೂದಿ ಧರ್ಮದ ಉದಯದ ಕಾಲ ಎಂದು ಅಂಗೀಕರಿಸಬಹುದು.

ಇನ್ನು ಜೈನ, ಬೌದ್ಧ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು ಉದಿಸಿದ ಬಗೆ ಮತ್ತು ಕಾಲ ನಮಗೆಲ್ಲರಿಗೂ ನಿಖರವಾಗಿಯೇ ತಿಳಿದಿದೆ. ಹೀಗಾಗಿ ಅದರ ಬಗ್ಗೆ ಚರ್ಚೆಯನ್ನು ಬದಿಗಿಟ್ಟು  ಹಿಂದೂಧರ್ಮಕ್ಕೆ  ಹಿಂತಿರುಗೋಣ.

ಲೇಖನದ ಮೊದಲ ಭಾಗದಲ್ಲಿ ವಿವರಿಸಿರುವಂತೆ ಪ್ರಕೃತಿಯ ಆರಾಧನೆಯ ರೂಪದಲ್ಲಿ ಎಂದೊ ಉದಿಸಿದ ಹಿಂದೂ ಧರ್ಮ ತನ್ನ ಇತಿಹಾಸದುದ್ದಕ್ಕೂ ಹೊಸತುಗಳನ್ನು ಸ್ವೀಕರಿಸುತ್ತಾ, ವಿಕಾಸಗೊಳ್ಳುತ್ತಾ, ಬೆಳೆಯುತ್ತಾ ಸಾಗಿಬಂದಿದೆ. ಈ ಬೆಳವಣಿಗೆಯಲ್ಲಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಹಿಂದೂ ಧರ್ಮಕ್ಕೆ ಯಾವುದೂ “ಅನ್ಯ”ವಲ್ಲ. ಭಾರತದ ಸಿಂಧೂ ಕಣಿವೆಯ ನಾಗರಿಕರಿಗೆ ಪೂಜನೀಯವಾಗಿದ್ದ ಎಂದು ಹೇಳಬಹುದಾದ ಶಿವನನ್ನು ಹೊರಗಿನಿಂದ ಬಂದ ಹಿಂದೂಗಳು ತಮ್ಮ ತ್ರಿಮೂರ್ತಿಗಳಲ್ಲಿ ಒಬ್ಬನನ್ನಾಗಿ ಅಂಗೀಕರಿಸಿದ್ದು ಹಿಂದೂಧರ್ಮದ ವೈಚಾರಿಕ ವೈಶಾಲ್ಯಕ್ಕೊಂದು ಉದಾಹರಣೆ. (ಶಿವ ಮತ್ತು ಶಿವಲಿಂಗದ ಆರಾಧನೆ ಮೂಲತಃ ಪೂರ್ವ ಆಫ್ರಿಕಾದಲ್ಲಿ ಆರಂಭವಾಗಿ ಭಾರತಕ್ಕೆ ಬಂದಿರಬಹುದು ಎಂಬ ವಾದವೂ ಇದೆ.) ವಿಜಯಿ ಜನಾಂಗವೊಂದು ಸೋತ ಜನಾಂಗದ ದೈವವೊಂದನ್ನು ತನ್ನ ಪ್ರಮುಖ ದೈವಗಳಲ್ಲೊಂದಾಗಿ ಅಂಗೀಕರಿಸಿದ ಉದಾಹರಣೆ ಬಹುಶಃ ಬೇರೆಲ್ಲೂ ಸಿಗಲಾರದು. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ತಾವು ಪ್ರಸರಿಸಿದ ನೆಲದಲ್ಲಿ ಮೊದಲೇ ಇದ್ದ ವಿಚಾರ ಮತ್ತು ನಂಬಿಕೆಗಳನ್ನು ಬೇರು ಸಹಿತ ಕಿತ್ತೊಗೆದು ಅಲ್ಲಿ ತಮ್ಮ ವಿಚಾರ ಮತ್ತು ನಂಬಿಕೆಗಳನ್ನು ನೆಟ್ಟದ್ದು ಎಲ್ಲರಿಗೂ ಗೊತ್ತೇ ಇದೆ. ಪ್ರಾಚೀನ ಗ್ರೀಕ್, ರೊಮನ್ ಮತ್ತು ಈಜಿಪ್ಷಿಯನ್ ದೇವರುಗಳನ್ನು ನಾವಿಂದು ಕಾಣುವುದು ಕೇವಲ ಮ್ಯೂಸಿಯಂಗಳಲ್ಲಿ ಮಾತ್ರ. ಪ್ರಾಚೀನ ಯೂರೋಪಿನ ಕೆಲ್ಟಿಕ್, ಬಾಸ್ಕ್, ಮಾಗ್ಯಾರ್, ನೋರ್ಸ್ ಮುಂತಾದ ಜನಾಂಗಗಳ ನಂಬಿಕೆಗಳು ನಮಗೆ ಸಿಗುವುದು ಪುಸ್ತಕಗಳಲ್ಲಿ ಮಾತ್ರ.  ಆದರೆ ಪ್ರಾಚೀನ ಸಿಂಧೂ ಕಣಿವೆಯಷ್ಟೇ ಅಲ್ಲ, ಭಾರತದ ಉದ್ದಗಲಕ್ಕೂ ಅಸ್ತಿತ್ವದಲ್ಲಿದ್ದ  ವಿವಿಧ ಬುಡಕಟ್ಟುಗಳ ನಂಬಿಕೆಗಳು, ಆಚರಣೆಗಳು, ದೈವಗಳು ಹಿಂದೂಧರ್ಮದಲ್ಲಿ ಐಕ್ಯವಾಗಿ ಇಂದಿಗೂ ಜೀವಂತವಾಗಿ ಉಳಿದಿವೆ.

ಹೀಗೆ ತನ್ನ ಸಂಪರ್ಕಕ್ಕೆ ಬಂದ ಯಾವುದನ್ನೂ ವಿರೋಧಿಸದೇ, ಎಲ್ಲವನ್ನೂ ಸ್ವೀಕರಿಸುತ್ತಾ, ಅಂತರ್ಗತಗೊಳಿಸಿಕೊಳ್ಳುತ್ತಾ ಅದಕ್ಕನುಗುಣವಾಗಿ ಬದಲಾಗುತ್ತಾ, ವಿಶಾಲವಾಗುತ್ತಾ ಬಂದ ಹಿಂದೂಧರ್ಮವನ್ನು ಒಂದೇ ಒಂದು ಪುಸ್ತಕದಲ್ಲಿ ಬಂಧಿಸಿಡುವುದು ಸಾಧ್ಯವೇ ಇಲ್ಲ. ಬಂಧಿಸಿಟ್ಟರೂ ಆ ಪುಸ್ತಕಕ್ಕೆ ಕಾಲಕಾಲಕ್ಕೆ ತಿದ್ದುಪಡಿಗಳನ್ನು ತರಲೇಬೇಕು. ಅದು ಕಡ್ಡಾಯ. ಇದನ್ನು ಹಿಂದೂಧರ್ಮದ ಇತಿಹಾಸ ಸಾರಿ ಹೇಳುತ್ತದೆ.

ಹೀಗೆ ಯಾವುದನ್ನೂ ಅನ್ಯ ಎಂದು ತಿರಸ್ಕರಿಸದೇ ಎಲ್ಲವನ್ನೂ ಅಂತರ್ಗತಗೊಳಿಸಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಂಡಿರುವುದರಿಂದಲೇ ದೇವರನ್ನು ತಲುಪಲು ತಾನೊಂದೇ ಮಾರ್ಗ ಎಂದು ಹಿಂದೂಧರ್ಮ ಹೇಳುವುದಿಲ್ಲ. ನಿಮ್ಮ ಭಾವಕ್ಕೆ ತಕ್ಕಂತೆ ನೀವು ಯಾವ ದಾರಿಯನ್ನಾದರೂ ಹಿಡಿಯಬಹುದು ಎಂದದು ಹೇಳುತ್ತದೆ. ಒಬ್ಬ ಸ್ಥಾಪಕನಿಗೆ ಸೀಮಿತವಾದ, ಒಂದು ಪುಸ್ತಕದಲ್ಲಿ ಬದಲಾಗದಂತೆ ಬಂಧಿಯಾಗಿ ಹೋಗಿರುವ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳಲ್ಲಿ ಈ ವಿಶಾಲ ಮನೋಭಾವವನ್ನು ಕಾಣಲಾಗದು. ಹಿಂದೂ ಧರ್ಮಕ್ಕೂ ಇತರ ಧರ್ಮಗಳಿಗೂ ಇರುವ ಪ್ರಮುಖ ವ್ಯತ್ಯಾಸ ಇದು.

ದೇವರನ್ನು ತಲುಪಲು ಇತರ ಮಾರ್ಗಗಳ (ಧರ್ಮಗಳ) ಅಸ್ತಿತ್ವವನ್ನೂ ಮಾನ್ಯ ಮಾಡಿರುವ ಹಿಂದೂಧರ್ಮ ತನ್ನೊಳಗೂ ಸಹಾ ವಿವಿಧ ಮಾರ್ಗಗಳಿಗೆ ಅವಕಾಶ ನೀಡಿದೆ. ಆರಾಧಿಸಲು ದೈವದ ಆಯ್ಕೆಯಲ್ಲಿ ಹಿಂದೂಗಳಿಗೆ ಸ್ವಾತಂತ್ರ್ಯವಿದೆ. ಆಯ್ಕೆ ಮಾಡಿಕೊಂಡ ದೈವಕ್ಕೆ ನಿಮಗಿಷ್ಟವಾದ ರೂಪವನ್ನು ನೀವು ಕೊಡಬಹುದು. ನಿಮಗಿಷ್ಟವಾದ ಬಗೆಯಲ್ಲಿ ಆರಾಧಿಸಬಹುದು. ನಿರ್ದಿಷ್ಟ ಶ್ಲೋಕಗಳ ಮೂಲಕವೂ ಆರಾಧಿಸಬಹುದು ಅಥವಾ ನಿಮ್ಮ ಸೃಜನಶೀಲತೆಗನುಗುಣವಾಗಿ ನೀವೇ ನಿಮ್ಮದೇ ಭಾಷೆಯಲ್ಲಿ, ಬೇಕಾದ ಬಗೆಯಲ್ಲಿ ವಾಕ್ಯಗಳನ್ನು ರಚಿಸಿಕೊಳ್ಳಬಹುದು. ನಿಮ್ಮ ಆರಾಧ್ಯದೈವವನ್ನು ತಂದೆಯೆ ಎನ್ನಬಹುದು, ಮಗುವೇ ಎಂದೂ ಕರೆಯಬಹುದು. ಆರಾಧಿಸಲು ನಿರ್ದಿಷ್ಟ ಸ್ಥಳಕ್ಕೆ ಹೋಗಬಹುದಾದರೂ ಹೋಗಲಾಗದಿದ್ದರೆ, ಹೋಗುವ ಮನಸ್ಸಿಲ್ಲದಿದ್ದರೆ ನೀವಿರುವ ಸ್ಥಳದಲ್ಲೇ ಆರಾಧಿಸಬಹುದು. ಇಷ್ಟವಿದ್ದರೆ ಮತ್ತೊಬ್ಬರಿಂದ (ಅರ್ಚಕರಿಂದ) ಆರಾಧನೆ ಮಾಡಿಸಬಹುದು. ಇಷ್ಟವಿಲ್ಲದಿದ್ದರೆ ನೀವೇ ಮಾಡಬಹುದು. ಅದು ನಿಮ್ಮಿಷ್ಟ. ಆರಾಧನೆಯೇ ಬೇಡ ಎನಿಸಿದರೆ ಸುಮ್ಮನಿದ್ದುಬಿಡಿ. ಆರಾಧಿಸಲೇಬೇಕು ಎಂದು ಹಿಂದೂಧರ್ಮ ನಿಮಗೆ ಕಟ್ಟಳೆ ವಿಧಿಸುವುದಿಲ್ಲ.

ಒಟ್ಟಿನಲ್ಲಿ ಹೇಗಾದರೂ ಆರಾಧಿಸಿ, ಆರಾಧಿಸದೆಯೂ ಇರಿ. ಯಾವ ಕಟ್ಟಳೆಯೂ ಇಲ್ಲ. ಅಷ್ಟೇ ಅಲ್ಲ, ಆರಾಧನೆಯನ್ನೇ ಖಂಡಿಸಿ, ಟೀಕಿಸಿ.  ಆರಾಧಿಸಲೇಬೇಡಿರೆಂದು ಇತರರಿಗೆ ಹೇಳಿ. ನಿಮಗೆ ಯಾವ ಅಪಾಯವೂ ಇಲ್ಲ. ಅಥವಾ ನೀವು ಆರಾಧಿಸುವ ವಿಧಾನ ಶಾಸ್ತ್ರಗಳಿಗಿಂತ/ ಧರ್ಮ ಗ್ರಂಥಗಳಲ್ಲಿರುವುದಕ್ಕಿಂತ ಬೇರೆಯಾಗಿದೆ, ಆ ಕಾರಣದಿಂದಾಗಿ ನಿಮ್ಮಿಂದ ದೈವನಿಂದೆಯಾಗಿದೆ, ಆ ಕಾರಣಕ್ಕಾಗಿ ನಿಮಗೆ ತಲೆದಂಡದ ಶಿಕ್ಷೆಯಾಗಬೇಕು ಎಂದು ಯಾವ ಪುರೋಹಿತರಾಗಲೀ, ಧರ್ಮಜ್ಞಾನಿಗಳಾಗಲೀ ಹೇಳುವುದಿಲ್ಲ. ಹಿಂದೂಧರ್ಮದಲ್ಲಿ “blasphemy” ಅಥವಾ “ದೈನನಿಂದೆ”ಗೆ ಹಾಗೂ “ಫತ್ವಾ”ಗೆ ಸ್ಥಾನವೇ ಇಲ್ಲ.

ಈ ಸ್ವಭಾವವನ್ನು ಹಿಂದೂಧರ್ಮದ ಬಲಹೀನತೆಯಲ್ಲ. ಅದೇ ಅದರ ಶಕ್ತಿ. ಎಲ್ಲವನ್ನೂ, ಸ್ವೀಕರಿಸುವುದರಿಂದ, ಒಳಗೊಳ್ಳುವುದರಿಂದ, ಆ ಮೂಲಕ ಬಹುತ್ವಕ್ಕೆ ಅವಕಾಶ ನೀಡುವುದರಿಂದ ಹಿಂದೂಧರ್ಮ ಯಾವ ಹೊಡೆತಕ್ಕೂ ಕುಸಿದು ಬೀಳುವುದಿಲ್ಲ. ಹಿಂದೂಧರ್ಮ ಬಾಗುತ್ತದೆ, ಮುರಿಯುವುದಿಲ್ಲ. ವೈರಿಯನ್ನೇ ತಮ್ಮವರನ್ನಾಗಿ ಮಾಡಿಕೊಳ್ಳುವವರಿಗೆ ಸೋಲೆಲ್ಲಿ?  ಈ ಮನೋಭಾವದಿಂದಾಗಿಯೇ, ಸ್ವಭಾವದಿಂದಾಗಿಯೇ ಹಿಂದೂ ಧರ್ಮ ಎಲ್ಲ ಒತ್ತಡಗಳನ್ನೂ ತಾಳಿಕೊಂಡು ಇನ್ನೂ ಉಳಿದಿದೆ. ಇತರ ಧರ್ಮಗಳ ಮೇಲೆ ಅಂತಹ ಒತ್ತಡ ಇನ್ನೂ ಬಿದ್ದಿಲ್ಲ ಅಷ್ಟೇ.

“ವಿಜಯವಾಣಿ” ದೈನಿಕದ “ಜಗದಗಲ” ಅಂಕಣದಲ್ಲಿ ದಿನಾಂಕ ೧೩ ಹಾಗೂ ೨೦ ಆಗಸ್ಟ್ ೨೦೧೪ರಂದು ಪ್ರಕಟವಾದ ಲೇಖನ

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments