ವಿಷಯದ ವಿವರಗಳಿಗೆ ದಾಟಿರಿ

ಜನವರಿ 9, 2018

1

ಕೊಳಕು ಪ್ಯಾಂಟಿನಲ್ಲಿದ್ದ ಹರಿದ ನೋಟು …

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಅದೊಂದು ದೊಡ್ಡ ವೇದಿಕೆ. ವ್ಯಕ್ತಿಯೊಬ್ಬ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ಕಿವಿತಮಟೆಯೇ ಉದುರುವಂತೆ ಅರಚುತಿದ್ದ. ಏಳಿಗೆ ಎಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಇಂತಹ ಬಿಟ್ಟಿ ಭಾಷಣವನ್ನು ಕೇಳುವುದು ಮಾತ್ರವೆಂದೇ ಅಂದುಕೊಂಡಿದ್ದ ಸಾವಿರಾರು ಜನ ಆತನ ಒಂದೊಂದು ಮಾತಿಗೂ ‘ಓ…’ ಎನ್ನುತ್ತಾ, ಶಿಳ್ಳೆಯೊಡೆಯುತ್ತ, ಬೊಬ್ಬೆಯಾಕುತ್ತಾ ಕುಣಿದಾಡುತಿದ್ದರು. ನೆರೆದಿದ್ದ ಜನಸ್ತೋಮದಲ್ಲಿ ಅಪ್ಪನೂ ಒಬ್ಬನಾಗಿರುವಾಗ ಮನೆಯಲ್ಲಿನ ಮಕ್ಕಳು ಪೋಲಿ ಬೀಳುವ ಮೊದಲ ದಿನಕ್ಕೆ ನಾಂದಿಯನ್ನು ಹಾಡಿದ್ದರು. ತನ್ನ ಗೂಡು ಪೆಟ್ಟಿಗೆಯ ಡಬ್ಬದಿಂದ ಬೀಡಿಯ ಕಟ್ಟು, ಬೆಂಕಿಯಪೊಟ್ಟಣವನ್ನು ಯಾವುದೇ ಭಾವಗಳಿಲ್ಲದೆ ಮಕ್ಕಳಿಗೆ ಕೊಟ್ಟ ಗೂಡಂಗಡಿಯ ತಾತ ಚಡ್ಡಿ ಹಾಕಿರುವ ಅವುಗಳಿಂದ ಪಡೆದ ಹರಿದ ಐವತ್ತು ರೂಪಾಯಿಗಳಿಗೆ ಚಿಲ್ಲರೆಯನ್ನು ಹಿಂದುರಿಗಿಸುವ ಮುನ್ನತಪ್ಪು ಲೆಕ್ಕವನ್ನೇನಾದರೂ ಹೇಳಿ ಒಂದೆರೆಡು ರೂಪಾಯಿ ಲಪಟಾಯಿಸುವುದರ ಬಗ್ಗೆ ಆಲೋಚಿಸುತ್ತಿದ್ದನೇ ವಿನಹ ಎಳೆಯ ವಯಸ್ಸಿಗೆ ಬೀಡಿಯ ಮೋಹಕ್ಕೆ ಬಿದ್ದಿರುವ ಆ ಕುಡಿಗಳಿಗೆ ಗದರಿಸುವ ಗುರುತರ ಕಾರ್ಯವನ್ನು ನಿಭಾಯಿಸಲಿಲ್ಲ. ಬೀಡಿಯ ನಂತರ ಕೊನೆಗೊಂದು ಸಿಗರೇಟಿಗೂ ಬೇಕಿದ್ದ ಹಣವಷ್ಟನ್ನೇ ಅಪ್ಪನ ಪ್ಯಾಂಟಿನ ಜೇಬಿನಿಂದ ಎಗರಿಸಿಕೊಂಡು ಬಂದಿದ್ದ ಮಕ್ಕಳು ಅರ್ವತ್ತು ವಯಸ್ಸಿನ ತಾತಪ್ಪನ ಕುತಂತ್ರವನ್ನು ಸಫಲವಾಗಲು ಬಿಡುತ್ತಾರೆಯೇ?!

ಅಷ್ಟರಲ್ಲಾಗಲೇ ಮನೆಯ ದೇವರ ಕೋಣೆಯಿಂದ ಬಂದ ಘಂಟೆಯ ಸದ್ದು ಮನೆಯನ್ನೇ ಒಂದು ಕ್ಷಣಕ್ಕೆ ಅದುರಿಸಿದಂತಿದ್ದಿತು. ಲಕ್ಷ್ಮೀ ಪಟದ ಮುಂದೆ ಮಗನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಜೋರಾಗೆ ಹೇಳಿಕೊಳ್ಳುತ್ತಿದ್ದ ಮನೆಯ ಸೊಸೆ ಅರ್ಧ ಘಂಟೆಯ ನಂತರ ಪಕ್ಕದ ಮನೆಯಾಕೆಯೊಟ್ಟಿಗೆ ಮನೆಗೆ ಅಂಟಿಕೊಂಡಿದ್ದ ಗೂಡಂಗಡಿಯ ಮುಂದೆ ಕೂತಿದ್ದ ಮಾವನಿಗಾಗಲಿ, ಅಲ್ಲೆಲ್ಲೋ ಭಾಷಣದ ಪ್ರವಾಹವನ್ನೇ ಹರಿಸುತ್ತಿರುವ ತನ್ನ ಪತಿರಾಯನಿಗಾಗಲಿ ತಿಳಿಯದಂತೆ ಹೋಗಿ ತನ್ನ ಗಲ್ಲಿಯ ಹೆಂಗಸರೆಲ್ಲರ ಹೊಟ್ಟೆ ಉರಿಯುವಂತೆ ಕಾಣುವ ಹೊಸ ಸೀರೆಯೊಂದನ್ನು ಕೊಂಡುಕೊಳ್ಳಬೇಕೆಂದು, ಉಟ್ಟು ಬೀಗಬೇಕೆಂದು ಹವಣಿಸುತ್ತಿದ್ದಳು.

ಭಾಷಣ ನಡೆಯುತಿದ್ದ ಮೈದಾನದ ಒಂದು ಮೂಲೆಯಲ್ಲಿ ವ್ಯಾಪಾರಿಯೊಬ್ಬ, ಪಕ್ಕದ ರಾಜ್ಯದ ಹಳ್ಳಿಯೊಂದರಲ್ಲಿ ಸಿಗುವ ಮೂರು ಕಾಸಿನ ಉತ್ತಮ ಸೀರೆಗಳನ್ನು ತೆಗೆದುಕೊಂಡು ಬಂದು, ಕೊಂಡ ಕಾಸಿಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರುತಿದ್ದನು. ಸೊಸೆ ಮತ್ತವಳ ಗೆಳತಿ ಜೊತೆ ಬಂದು ವ್ಯಾಪಾರಿಯ ಬಳಿ ಸೀರೆಯೊಂದನ್ನು ಕೊಂಡು ಸಾವಿರ ರೂಪಾಯಿಯ ಮೇಲೆ ಮಾವನ ಗಲ್ಲದ ಡಬ್ಬಿಯಿಂದ ತಂದಿದ್ದ ಹರಿದ ಐವತ್ತು ರೂಪಾಯಿಗಳನ್ನು ಅಂಗಡಿಯವನಿಗೆ ನೀಡಿ ವ್ಯಾಪಾರವನ್ನು ಅಂತಿಮಗೊಳಿಸಿದ್ದರು.

ಹೆಂಗಸರಿಬ್ಬರು ನೀಡಿದ್ದ ಹರಿದ ಐವತ್ತು ರೂಪಾಯಿಯನ್ನು ಈತ ಪರೀಕ್ಷಿಸುವ ಮೊದಲೇ ಜಾಗ ಖಾಲಿ ಮಾಡಿದ್ದರು.. ಆ ನೋಟನ್ನು ಯಾರಿಗೆ ದಾಟಿಸುವುದು ಅಂತ ವ್ಯಾಪಾರಿ ಯೋಚಿಸುತ್ತಿರುವಾಗಲೇ ಊರೆಲ್ಲ ಅಲೆದರೂ ಒಂದು ರೂಪಾಯಿಯೂ ಸಿಗದಿದ್ದ ಭಿಕ್ಷುಕನೊಬ್ಬನು ಕೈಚಾಚಿ ಅಂಗಡಿಯವನ್ನಲ್ಲಿಗೆ ಬಂದಾಗ ಕಷ್ಟಪಟ್ಟು ಕನಿಕರವನ್ನು ತೋರಿಸಿ ಹರಿದ ನೋಟನ್ನು ಭಿಕ್ಷುಕನ ಕೈಗಿರಿಸಿದ ವ್ಯಾಪಾರೀ.

ಗೋಡೆಗೆ ತಗುಲಿಹಾಕಿದ್ದ ಸರ್ವದೇವರುಗಳ ಪಟಗಳಿಗೆ ಕೈಯನ್ನು ಮುಗಿದು, ಊರು ಮುಳುಗಿಹೋದರೂ ಸರಿಯೇ ತನ್ನ ಗಲ್ಲಪೆಟ್ಟಿಗೆಯೊಂದು ತುಂಬಿದರೆ ಸಾಕೆಂದು ಬೇಡಿದ ಬಾರ್ ಅಂಗಡಿಯ ಮಾಲೀಕ ಬಾರಿನ ಬಾಗಿಲನ್ನು ತೆಗೆಯುವಾಗಲೇ ಮುಂಜಾವು! ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ದೇವಾಲಯಕ್ಕೆ ಹೋಗುವ ಶ್ರದ್ದಾಭರಿತ ಕಾರ್ಯದಂತೆ ಅಪ್ಪ ಹಾಗು ಇತರ ಕುಡುಕ ಪ್ರಜೆಗಳು/ಕಾರ್ಯಕರ್ತರು ಅತ್ತ ಭಾಷಣದ ಮಧ್ಯೆಯೇ ಎದ್ದು ಇತ್ತಕಡೆ ಬಂದು ನಿಂತಿದ್ದರು. ಖಾಲಿ ಹೊಟ್ಟೆಗೆ ಗಟಗಟನೆ ಮದ್ಯವನ್ನು ಹೀರಿ, ಕಿಸೆಯ ದುಡ್ಡೆಲ್ಲ ಖಾಲಿಯಾಗಿ ಒಬ್ಬರ ಮುಖವನ್ನು ಮತ್ತೊಬ್ಬರು ಗಲಿಬಿಲಿಯಾಗಿ ನೋಡುತ್ತಾ ಕೊನೆಗೆ ಒಂದಿಷ್ಟು ಸಾಲದ ರೂಪದಲ್ಲೂ ‘ಸಮಾ’ ಹೀರಿ ಭಾಷಣ ನಡೆಯುತ್ತಿದ್ದ ಸ್ಥಳಕ್ಕೆ ಮನಸ್ಸಿರದ ಮನಸ್ಸಲ್ಲಿ ಹೆಜ್ಜೆಯಿಟ್ಟರು. ಅತ್ತ ಕಡೆಯಿಂದ ಸಾಯುವವನಿಗೆ ಸ್ವರ್ಗ ಸಿಕ್ಕಂತೆ ಐವತ್ತು ರೂಪಾಯಿಯ ನೋಟೊಂದನ್ನು ಪಡೆದು ಮೊದಲು ಎರಡು ದಿನದಿಂದ ನೀರನ್ನು ಬಿಟ್ಟು ಬೇರೇನೂ ಕಾಣದ ಹೊಟ್ಟೆಗೆ ತಿಂಡಿಯೊಂದಿಷ್ಟನ್ನು ತಿನ್ನಲು ಧಾವಿಸುತ್ತಿದ್ದ ಹರಿದ ಬಟ್ಟೆಯ ಭಿಕ್ಷುಕನನ್ನು ಸುತ್ತುವರೆದವು ಕುಡಿದ ಮತ್ತಿನಲ್ಲಿದ್ದ ಕಾರ್ಯಕರ್ತರು. ‘ಅಸಹಾಯಕರಿಗೆ ಸಹಾಯಕರಾಗಿ, ಬಡವರಿಗೆ ಆಸರೆಯಾಗಿ, ಹಸಿದವನಿಗೆ ದಾನಿಯಾಗಿ…’ ಎಂಬ ನಾಯಕನ ಭಾಷಣದ ಚೀರಾಟ ಗುಂಪಿನ ಪ್ರತಿ ಕಿವಿಗಳಿಗೂ ಬೀಳುತಿತ್ತು. ನೆತ್ತಿಗೆ ಏರಿದ್ದ ಹೆಂಡದ ಮತ್ತೋ ಅಥವ ಗುಣಸಹಜವಾಗಿದ್ದ ಒರಟು ತನವೋ ಅಥವ ಮಾನವೀಯತೆಯನ್ನು ಮರೆತ ಮನದ ಕ್ರೌರ್ಯವೊ ಏನೋ ಹಣವನ್ನು ಕೊಡಲೊಪ್ಪದ ಭಿಕ್ಷುಕನನ್ನು ಪ್ರಾಣಿಗಳಿಗೆ ಥಳಿಸಿದಂತೆ ಥಳಿಸಿ ಜೀವ ಹೋದರೂ ಬಿಗಿಮುಷ್ಟಿಯಲ್ಲಿ ಮುದುರಿ ಹಿಡಿದಿದ್ದ ಐವತ್ತು ರೂಪಾಯಿ ನೋಟನ್ನು ಪಡೆಯಲು ಹರ ಸಾಹಸ ಮಾಡಿ ಕೊನೆಗೆ ಕಲ್ಲೊಂದರಿಂದ ಆ ನೊಂದ ಕೈ ಗಳ ಮೇಲೆ ಜಜ್ಜಿ, ಮುದುಡಿ ಒದ್ದೆಯಾದ ಹರಿದ ನೋಟನ್ನು ಕಸಿದುಕೊಂಡು ಎಣ್ಣೆಯಂಗಡಿಯ ಕಡೆಗೆ ಧಾವಿಸಿತು ಅಮಲು ಕಾರ್ಯಕರ್ತರ ದಂಡು.

ಹಳಸು, ಹುಳುಕು, ಬೈಗುಳ, ನಿಷ್ಠುರ, ಶಾಪ, ಮತ್ತೊಂದು ಮಗದೊಂದು ಯಾವುದೇ ಆದರೂ ಸರಿಯೇ ಬಾಲ ಅಲ್ಲಾಡಿಸಿಕೊಂಡು ಕಂಡ ಕಂಡವರ ಹಿಂದೆಲ್ಲ ‘ನೀನೇ ನನ್ನ ಸರ್ವಸ್ವ’ ಎಂಬಂತೆ ಹೋಗುತ್ತಿದ್ದ ಬೀದಿ ನಾಯಿಯ ಮರಿ ಹೆಂಡಕುಡುಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಹೊಡೆದುರುಳಿಸಿ ಎತ್ತಲೋ ಓಟ ಕಿತ್ತ ಕಡೆಗೆ ತಾನೂ ಓಡಲು ಶುರುವಿಟ್ಟಿತು. ಗುಂಪಿನಲ್ಲೊಬ್ಬನ ದೈತ್ಯ, ತನ್ನ ಕಾಲಿನಿಂದ ಕರುಳೇ ಕಕ್ಕಿ ಹೊರಬರುವಂತೆ ಮರಿಯ ಹೊಟ್ಟೆಯ ಮೇಲೆ ಒದ್ದನು. ಒದೆ ತಿಂದ ಮರಿ ಚೆಂಡಿನಂತೆ ಹಾರಿ, ಬಿದ್ದು ಹೊರಳಾಡುತಿದ್ದ ಭಿಕ್ಷುಕನ ಬಳಿಗೆ ಬಿದ್ದಿತು. ನಾಯಿಯ ಆರ್ತನಾದ, ಭಿಕ್ಷುಕನ ರೋಧನೆ ಮುಗಿಲು ಮುಟ್ಟಿತು.

ಬೆಳ್ಳಂಬೆಳೆಗೆ ರಾಶಿ ರಾಶಿ ಪುಸ್ತಕದ ಓರೆಯನ್ನು ಎಳೆಯ ಬೆನ್ನುಗಳ ಮೇಲೆ ಹೊತ್ತು ಸ್ಕೂಲಿಗೆ ಹೊರಟಿದ್ದ ಎಂಟು ವರ್ಷದ ಪುಟ್ಟಿ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತಿದ್ದದನ್ನು ಕಂಡು ಅವನ ಬಳಿಗೆ ಹೋಗಿ ಆತನ ನರಳುವಿಕೆಯಲ್ಲಿಯೇ ಹಸಿದ ಆರ್ತನಾದವನ್ನು ಅರಿತು (!) ಮನೆಯಿಂದ ಅಮ್ಮ ಕಟ್ಟಿ ಕೊಟ್ಟಿದ್ದ ಎರಡು ಇಡ್ಲಿಯನ್ನು ಪಕ್ಕದ ಅಂಗಡಿಯಿಂದ ಪಡೆದ ಒಂದಿಷ್ಟು ಪೇಪರ್ ಚೂರಿನ ಮೇಲೆ ಸುರಿದು ಆತನ ಮುಂದಿಟ್ಟಳು. ಒಂದಿಚು ಪೇಪರ್ ಅನ್ನೂ ಬಿಡದೆ ತಿನ್ನುವಷ್ಟು ಹಸಿವೆಯಲ್ಲಿಯೂ ಆತ ಒಂದು ಇಡ್ಲಿಯನ್ನು ಎದ್ದು ಸರಿಯಾಗಿ ನಿಲ್ಲಲೂ ಶಕ್ತನಾಗಿರದ ನಾಯಿ ಮರಿಯ ಮುಂದೆ ಇಟ್ಟನು. ತನ್ನ ಮುದ್ದು ಪಿಳಿ ಪಿಳಿ ಕಣ್ಣುಗಳಿಂದ ಅದು ಬಿಕ್ಷುಕನ ಮೇಲೆ ಕರುಣೆಯ ನೋಟವನ್ನು ಬೀರಿತ್ತು.

ಅಂಗಡಿಯ ಮುಂದೆ ಮತ್ತೊಂದು ಸುತ್ತು ಬಂದ ಗುಂಪು ಹರಿದ ಐವತ್ತು ರೂಪಾಯಿಯ ನೋಟನ್ನು ನೀಡಿ ಬಾಟಲಿಯೊಂದನ್ನು ಕೂಗಿ ಪಡೆದು ಗಟ ಗಟನೆ ‘ಎತ್ತ’ತೊಡಗಿತು. ಅಂಗಡಿಯವ ನೋಟನ್ನು ಗಲ್ಲದ ಪೆಟ್ಟಿಗೆಯೊಳಗೆ ಹಾಕುವ ಮುನ್ನ ಅದರ ಹರಿದ ಆಕಾರವನ್ನು ಕಂಡು ಕುಪಿತನಾಗಿ ಗುಂಪಿನ ವಿರುದ್ಧ ಧ್ವನಿ ಎತ್ತುವಾಗ ಹಫ್ತಾ ವಸೂಲಿಯ ಖದೀಮರು ಬಂದು ಆತನ ಕೈಲಿದ್ದ ನೋಟಿನೊಟ್ಟಿಗೆ ಇನ್ನೂ ಮೂರ್ನಾಲ್ಕು ನೋಟನ್ನು ಪಡೆದು ಜಾಗ ಕಿತ್ತರು.

ಒಳಗಡೆಯಿಂದ ಪುಟ್ಟಿ ‘ಅಪ್ಪಾ, ಶೂ ಕಟ್ಟು’ ಎಂದು ಕರೆದಿದ್ದರಿಂದ ಕಾರ್ಯಕರ್ತ ಕುಡುಕರ ಗುಂಪಿಗೆ ಬೈಯುವ ಮೊದಲೇ ಅಂಗಡಿಯವನಿಗೆ ಮನೆಯೊಳಗೇ ಹೋಗಬೇಕಾಗಿ ಬಂತು. ಅಷ್ಟರಲ್ಲಾಗಲೇ ಮನೆಯಾಕೆ ಮಗಳ ಶೂ ಅನ್ನು ಕಟ್ಟಿ ಇಡ್ಲಿಗೆ ಚಟ್ನಿ ಹಾಕಿದ್ದ ಡಬ್ಬವನ್ನು ಊಟದ ಡಬ್ಬಿಗೆ ಹಾಕಿ ‘ಪೂರ್ತಿ ತಿಂದು ಬಾ’ ಎಂದು ಕೂಗಿಕೊಂಡಳು. ಹಫ್ತಾ ವಸೂಲಿಯ ಗುಂಪು ಊರಿನ ಹತ್ತಿಪ್ಪತ್ತು ಅಂಗಡಿಗಳಿಂದ ಬಂದ ಹಣವನ್ನು ಭಾಷಣ ಬಿಗಿಯುತ್ತಿದ್ದ ‘ಅಣ್ಣ’ನ  ಹಿಂದೆ ಯಾರಿಗೂ ಕಾಣದಂತೆ ಆತನ ಕೈಯ ಮೇಲಿತ್ತವು. ‘ಅಣ್ಣ’ ಕೊನೆಗೂ ಭಾಷಣ ಮುಗಿಸಿ ಸ್ಟೇಜಿನಿಂದ ಕೆಳಗಿಳಿದು ಕಾರ್ಯಕರ್ತರೊಬ್ಬರ ಬಳಿ ಬಳಿಗೂ ಹೋಗಿ ಕೈ ಕುಲುಕುವ ನೆಪದಲ್ಲಿ ಒಂದೊಂದೇ ನೋಟನ್ನು ಅವರ ಕೈಮೇಲೆ ಇರಿಸತೊಡಗಿದ. ಖುಷಿಯನ್ನು ತಾಳಲಾರದೆ ಕುಡುಕ ಗುಂಪಿನ ಕೆಲವರಂತೂ ‘ಅಣ್ಣ’ ನ ಎದುರು ನಮಸ್ಕರಿಸುತ್ತಾ ಸಾಷ್ಟಾಂಗ ಬಿದ್ದರು, ಅಪ್ಪನೊಬ್ಬನ್ನನ್ನು ಬಿಟ್ಟು! ಬೇಸರ, ಆಶ್ಚರ್ಯ ಹಾಗು ಗೊಂದಲ ಭಾವಗಳು ಆತನ ಮನಸ್ಸನು ಆವರಿಸಿದ್ದವು. ಏಕೆಂದರೆ ಮನೆಯ ಗೋಡೆಗೆ ನೇತಾಕಿದ್ದ ಆತನ ಕೊಳಕು ಪ್ಯಾಂಟಿನ ಜೇಬಿನ ತಳದಲ್ಲಿ ವರ್ಷಗಳಿಂದ ಕೊಳೆಯುತಿದ್ದ ಹರಿದ ಐವತ್ತು ರೂಪಾಯಿ ನೋಟು ಇಲ್ಲಿ ಆತನ ಕೈಯ ಮೇಲೆ ಇರಿಸಲ್ಪಟಿತ್ತು!!

Read more from ಲೇಖನಗಳು
1 ಟಿಪ್ಪಣಿ Post a comment
  1. ಬಸವರಾಜ. ಬೂದಿಹಾಳ. ಗೋವಾ.
    ಜನ 17 2018

    ಬರಹಗಳ ನಿರೂಪನೆ, ಕತಾ ಹಂದರ ಸೊಗಸಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments