ವಿಷಯದ ವಿವರಗಳಿಗೆ ದಾಟಿರಿ

ಜನವರಿ 18, 2018

1

ಅನಂತಕುಮಾರ್ ಹೇಳಿದ್ದರಲ್ಲೇನು ತಪ್ಪಿದೆ?

‍ನಿಲುಮೆ ಮೂಲಕ

– ಜೆಬಿಆರ್ ರಂಗಸ್ವಾಮಿ

ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದೆ. ಯಾವ context ನಲ್ಲಿ ಯಾಕಾಗಿ ಆ ಮಾತುಗಳನ್ನಾಡಿದ್ದಾರೆ ? ಅದನ್ನೂ ಆಲಿಸಿದೆ. ಅವರು ಉದ್ದೇಶಿಸಿ ಹೇಳಿದ ಮಾತುಗಳಲ್ಲಿ ಅಪರಾಧವೇನಿದೆ ? ಅನ್ನಿಸಿತು‌. ಮತ್ತೊಮ್ಮೆ ಎಲ್ಲ ಛಾನಲ್ಗಳಲ್ಲಿ ಅವರು ಆಡಿದ ಮಾತುಗಳನ್ನು ಗ್ರಹಿಸಲು ಯತ್ನಿಸಿದೆ. ಕಾವ್ಯಾನಂದರ ( ಕುವೆಂಪು ಅಲ್ಲ ) ಮೊದಲು ನೀನು ಮಾನವನಾಗು ಎಂಬುದನ್ನು ಉಲ್ಲೇಖಿಸಿ ಪ್ರಾಸಂಗಿಕವಾಗಿ ಮಾತನಾಡಿದ್ದಾರೆಯೇ ಹೊರತು, ಆ ಮಾತುಗಳನ್ನು ಅವಹೇಳನ ಮಾಡಿದ್ದಾರೆ ಅನ್ನಿಸಲಿಲ್ಲ. ಕಾವ್ಯಾನಂದರನ್ನು ಟೀಕಿಸಲಿಲ್ಲ. ಬುದ್ದಿಜೀವಿಗಳು ಎಂದೊಡನೆ ‘ಪುಸ್ತಕ ಬರೆವ ಎಲ್ಲರೂ’ ಅಂದುಕೊಳ್ಳಬೇಕಿಲ್ಲ. ಆ ಹೆಸರಿನಲ್ಲಿ ವ್ಯಾಪಾರ ಮಾಡುವ ಗೋಸುಂಬೆಗಳು, ದುರ್ಲಾಭ ಪಡೆದುಕೊಳ್ಳುವ ವಂಚಕರು; ಫೋನು, ಫ್ಯಾನು, ಗೂಟದ ಕಾರಿನ ಸವಲತ್ತಿಗಾಗಿ ಹಾತೊರೆವ ಅಪ್ರಾಮಾಣಿಕರ ಗುಂಪನ್ನು ಉದ್ದೇಶಿಸಿ ಹೇಳಿದ ಮಾತುಗಳು ಎಂದು ಯಾರಿಗಾದರೂ ಗೊತ್ತಾಗುತ್ತದೆ. ಬುದ್ದಿಜೀವಿಗಳ ಸೋಗಿನಲ್ಲಿ ಪರಾನ್ನಪುಷ್ಟರಾಗಿರುವ ಗಂಜಿಗಿರಾಕಿಗಳನ್ನು ಎಲ್ಲ ಕಡೆಯೂ ನಾವು ದಿನವೂ ನೋಡುತ್ತಿಲ್ಲವೇ ?

ಅದೊಂದು ಕಾಲವಿತ್ತು: ನಾಡುನುಡಿಯ ಉನ್ನತಿಯನ್ನು ಬಯಸುವ, ಸರ್ವಜನಾಂಗದ ಶಾಂತಿಯನ್ನು ಬಯಸುವ, ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿದ್ದ ನಿಜವಾದ ಬುದ್ದಿಜೀವಿ ಸಾಹಿತಿಗಳ ಸಾಲುಸಾಲನ್ನೇ ಕಂಡಿದ್ದೇವೆ. ಕನ್ನಡದ ಹೋರಾಟಕ್ಕಾಗಿ ತನುಮನಧನ ಮತ್ತು ಆರೋಗ್ಯವನ್ನು ಪಣವಾಗಿಟ್ಟು ದುಡಿದ ಅನಕೃ, ಎಂ.ರಾಮಮೂರ್ತಿ, ನಾಡಿಗೇರರೆಲ್ಲಿ ? ಈಗಿನ ವಸೂಲಿವೀರ ವೋರಾಟಗಾರರೆಲ್ಲಿ?. ಪ್ರಾಮಾಣಿಕತೆಯ ಮೌಲ್ಯವನ್ನು ಹೊದ್ದಿದ್ದ, ಸಾಹಿತ್ಯ ಕೃಷಿಯನ್ನು ತಪಸ್ಸೆಂದು ಭಾವಿಸಿ ನಾಡಜನರ ಅಭಿರುಚಿಯನ್ನು ತಿದ್ದಿ ಬೆಳೆಸಿದ ಹಿಂದಿನ ತಲೆಮಾರಿನ ಶ್ರೇಷ್ಠರೆಲ್ಲಾ ಈಗಲೂ ನಮ್ಮ ಕಣ್ಣ ಮುಂದೆಯೇ ಇದ್ದಾರೆ. ನವೋದಯ, ಪ್ರಗತಿಶೀಲ, ನವ್ಯರ ತನಕವೂ ಮರ್ಯಾದಸ್ತ ಬುದ್ದಿಜೀವಿಗಳೇ ಇದ್ದರು. ಅವರ ಸಾಹಿತ್ಯಕ್ಕಿಂತಲೂ ಅವರ ವೈಯುಕ್ತಿಕ ಬದುಕು ಸ್ವಚ್ಛವಾಗಿತ್ತು. ಆದರ್ಶವಾಗಿತ್ತು. ಅನುಕರಣನೀಯವಾಗಿತ್ತು. ಈಗಿನ ಬುದ್ದಿಜೀವಿ ಹಿಂಡಿನಲ್ಲಿ ಆದರ್ಶಪ್ರಾಯರನ್ನು ಹೆಕ್ಕಿ ತೆಗೆಯಬೇಕಾಗಿದೆ. ಇಷ್ಟಾದರೂ ಸ್ವಂತ ಪ್ರತಿಭೆಯಿಂದ ಗಣ್ಯಸ್ಥಾನವನ್ನು ಪಡೆದಿರುವ ಅನೇಕರು ಈಗಲೂ ನಮ್ಮ ಕಣ್ಣಮುಂದೆಯೇ ಇದ್ದಾರೆ. ಕುವೆಂಪು ನಂತರದ ಅಡಿಗರು, ಕೆ.ಎಸ್.ನ, ಎಸ್.ಎಲ್.ಭೈರಪ್ಪ, ಹಾ.ಮಾ.ನಾಯಕರು, ತೇಜಸ್ವಿ, ಲಂಕೇಶ್, ಕಣವಿ, ಜಿ.ಎಸ್.ಎಸ್. , ಚಿ.ಮೂ, ಜಿ.ಎಚ್. ನಾಯಕರು, ಶತಾವಧಾನಿ ಗಣೇಶ್, ದೇವನೂರ ಮಹಾದೇವ ಹೀಗೆ ಅನೇಕ ಗಣ್ಯರಿದ್ದಾರೆ. ಇವರ ಧೋರಣೆಯನ್ನು, ಇವರ ಬರವಣಿಗೆಯನ್ನು ನೀವು ಟೀಕಿಸಬಹುದು. ಆದರೆ ಇವರ ವ್ಯಕ್ತಿತ್ವವನ್ನಲ್ಲ. ಇವರ ಮರ್ಯಾದಸ್ತ ಜೀವನವನ್ನಲ್ಲ. ಇವರ commitment ಅಥವಾ conviction ಗಳನ್ನಲ್ಲ. ಸಾರ್ವಜನಿಕ ಬದುಕಿನೆಡೆಗಿರುವ ಪ್ರಾಮಾಣಿಕತೆಯನ್ನಲ್ಲ. ಅಂತಹ ಘನವಾದ ಬದುಕುಳ್ಳ ಎಷ್ಟು ಜನ ಬುದ್ದಿಜೀವಿಗಳನ್ನು ಈಗ ತೋರಿಸಬಲ್ಲಿರಿ, ನೀವೇ ಹೇಳಿರಿ.

ಈಗ ಪ್ರತಿಯೊಂದಕ್ಕೂ ಮೂಗು ತೂರಿಸಿಕೊಂಡು ಬಂದು ಮುಂಚೂಣಿಗೆ ಬಂದು ನಿಲ್ಲುತ್ತಿರುವ ಬುದ್ದಿಜೀವಿಗಳ ಮೂತಿಯನ್ನಾದರೂ ನೋಡಿ. ಅವರ ಮಾತುಕತೆ ನಡೆನುಡಿ ಯಾವ ದಿಕ್ಕಿಗಿದೆ ಗಮನಿಸಿದ್ದೀರಾ ? ಅವರು ಉದುರಿಸುವ ಮುಕ್ತಾಫಲಗಳಲ್ಲಿ ಸಮಾಜವನ್ನು ಒಗ್ಗೂಡಿಸುವ ದನಿ ಇದೆಯೋ ಅಥವಾ ಒಗ್ಗಟ್ಟನ್ನು ಒಡೆಯುವ ಮನೆಮುರುಕತನವಿದೆಯೋ ? ಸಾಹಿತಿಗಳಿಗೇಕೆ ಸ್ವಾಮೀ ರಾಜಕಾರಣಿಗಳ ರಾತ್ರಿಕೂಟಗಳು ? ಅಧಿಕಾರಸ್ತರ ಪಡಸಾಲೆಯಲ್ಲೇಕೆ ಅವರ ಸುಳಿದಾಟಗಳು ? ಆಳುವವರಿಗೆ ಒಪ್ಪಿಗೆಯಾಗುವಂತೆ ಬರೆವ ಕೈಂಕರ್ಯಗಳು ?. ಉದುರಿಸುವ ಮುಕ್ತಾಫಲಗಳು ?

ಸೈಟು ಹೊಡೆದುಕೊಳ್ಳುವ ಬುದ್ದಿಜೀವಿಗಳು ಎಂದು ಮಾತಿನಭರದಲ್ಲಿ ಹೆಗಡೆ ಕಾರಿದ್ದಾರೆ. ಸ್ವಂತಕ್ಕೊಂದು ಸೂರೋ ಸೈಟನ್ನೋ ಬುಜೀಗಳು ಮಾಡಿಕೊಳ್ಳಲಿ. ಸ್ವಂತಕ್ಕೆ ಒಳ್ಳೆಯ ಸೈಟನ್ನೇ ಪಡೆದುಕೊಳ್ಳಲಿ. ಚೆನ್ನಾದ ಮನೆಯಲ್ಲಿ ಹಸನಾಗಿ ಬದುಕಲಿ. ಅದು ಒಳಿತೇ. ಅದಕ್ಕಾಗಿ ಪುಢಾರಿಗಳ ಬಾಲಹಿಡಿದರೆ ತಪ್ಪು ಅನ್ನಲಾಗದು. ಆದರೆ ಸೈಟುಗಳ ಮೇಲೆ ಸೈಟುಮಾಡುವ ಧಂಧೆಗಿಳಿದರೆ ? . ಓಲೈಕೆಗಾಗಿ ಪುಢಾರಿಗಿರಿ ಮಾಡಿಕೊಂಡು, ತಾತ್ವಿಕ ವಿಚಾರಧಾರೆ ಹರಿಸುವ ಪಿಂಪ್ ಗಿರಿ ಇದೆಯಲ್ಲಾ ? ಅದು ಟೀಕಾರ್ಹವೇ ತಾನೇ ?

ಹೆಗಡೆ ಜನರಲೈಸ್ ಮಾಡಿದ್ದು ಸರಿಯಲ್ಲ. ಇಂತಿಂಥವರು ಎಂದು ಹೆಸರಿಸಬೇಕಿತ್ತು ಎಂದು ಛಾನಲ್ ನವರು ಒತ್ತಾಯಿಸುತ್ತಿದ್ದರು. ಹೆಸರನ್ನು ಪ್ರತ್ಯೇಕವಾಗಿ ಹೇಳಲೇಬೇಕಿಲ್ಲ. ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳ ಸೀಟುಹಿಡಿದಿರುವ ಬುದ್ದಿಜೀವಿಗಳ ಮಾತುಗಳನ್ನೇ ಗಮನಿಸಿ. ಒಬ್ಬನಾದರೂ ಸಮಗ್ರ ಸಮಾಜದ ಒಳಿತನ್ನು ಬಯಸುವ ಮಾತನಾಡುತ್ತಾನೆಯೇ ? ಯಾವುದೋ ಗುಂಪಿನ, ಜಾತಿಯ ಅಥವಾ ಪಕ್ಷದ ವಕ್ತಾರರಂತೆ ಮಾತಾಡುತ್ತಿಲ್ಲವೇ?. more loyal than the king. ಪಕ್ಷದವರಿಗಿಂತ ಜೋರಾಗಿ ಅರಚಿಕೊಳ್ಳುತ್ತಿಲ್ಲವೇ ? ಅವರ ಟೀಕೆಗಳಲ್ಲಿ ಒಂದು ಸೃಷ್ಟಿಯನ್ನು ಕುರಿತ ನ್ಯಾಯವಿದೆ ಅನ್ನಿಸುತ್ತದೆಯೇ ?. ಯಾರೇ ಆಗಿರಲಿ ಈಗ ಪ್ರಶ್ನೆ ಮಾಡಬೇಕಾದದ್ದು ಸೋಗಿನ ಬುದ್ದಿಜೀವಿ ಚಿಂತಕರ ಅಪ್ರಾಮಾಣಿಕತೆಯನ್ನು ಮತ್ತು ಅವರ ಗೋಸುಂಬೆತನವನ್ನು. ಹೆಗಡೆ ಅದನ್ನೇ ಜಗ್ಗಿಸಿ ಕೇಳಿದ್ದಾರೆ. ಅಷ್ಟೇ.

1 ಟಿಪ್ಪಣಿ Post a comment
  1. vasu
    ಜನ 18 2018

    ವೇದಗಳು ಘೋಷಿಸುತ್ತದೆ ” ಮನುರ್ಭವ. ದೇವಾಯ ದೈನಂ ಜನಂ”.[ ಋಗ್ವೇದ10.53.6] ಎಂದರೆ, ಮನುಷ್ಯನಾಗು ಮತ್ತು ದಿವ್ಯ ಮಾನವತೆಯ ಪ್ರಕಾಶನ ಮಾಡು. ದಿವ್ಯ ಸಂತಾನಕ್ಕೆ ಜನ್ಮಕೊಡು,

    ಹೆಗಡೆಯವರು ಮೊದಲು ಮಾನವರಾಗಿ ಎಂಬ ಸಂದೇಶವನ್ನು ಕೇವಲ ಮೇಲ್ಮೋಟದ ಶಬ್ಧಾರ್ಥವನ್ನು ಗಮನಿಸಿದ್ದಾರೆ. ಆದರೆ ಅದಕ್ಕೂ ಹೆಚ್ಚಿನ ಅರ್ಥವಿದೆ. ಮನನ ಶೀಲನಾದವನೇ ಮನುಷ್ಯ. ಹಾಗಾಗಿ ಮನನ ಶೀಲನಾಗಿ ಸ್ವಾಭಾವಿಕ ಗುಣಗಳಿಂದ ಮೇಲೆದ್ದು ದಿವ್ಯಗುಣಗಳನ್ನು ಮೆರೆದು ದಿವ್ಯಗುಣಗಳನ್ನು ಹೊಂದಿದ ಸಂತಾನವನ್ನು ಬೆಳಸಿ ಎಂದು ವೇದದ ಕರೆಯನ್ನು ಸ್ವಲ್ಪ ಅರ್ಥ ಮಾಡಿಕೊಂಡು ವಿವೇಚನೆಯಿಂದ ವರ್ತಿಸಿದರೆ ಎಲ್ಲರಿಗೂ ಕ್ಷೇಮ. ಹೆಗಡೆಯವರು ಇಲ್ಲಿ ಎಡವಿದ್ದಾರೆ. ಎನ್ನುವುದೇ ನನ್ನ ಅಭಿಪ್ರಾಯ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments