ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2018

ಕೇಂದ್ರ ಬಜೆಟ್ 2018: ಮೋದಿ ಸರಕಾರದ ಮುಂದಿರುವ ಮಹೋನ್ನತ ಅಗ್ನಿಪರೀಕ್ಷೆ.

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

images“1.25 ಬಿಲಿಯನ್ ಜನರ ಮೇಲೆ ನೇರ ಪರಿಣಾಮ ಬೀರಲಿರುವ ಹಾಗೂ ಒಂಭತ್ತು ಚುನಾವಣೆಗಳನ್ನು ಎದುರಿಸಲಿರುವ ಈ ಸಾಲಿನ ಮುಂಗಡ ಪತ್ರ, ಕಳೆದ ನಾಲ್ಕು ಬಜೆಟ್‍ಗಳಿಗೆ ಹೋಲಿಸಿದರೆ ಅತ್ಯಂತ ಕಠಿಣ, ಸವಾಲಿನ ಹಾಗೂ ನಿರೀಕ್ಷೆಯ ಬಜೆಟ್. ಹಲವು ಅನಘ್ರ್ಯ ಸಮಸ್ಯೆಗಳ ಹೊರತಾಗಿಯೂ ಇದು ‘ಮತದಾರ’ ಕೇಂದ್ರಿತ ಬಜೆಟ್ ಆಗಬಹುದೆಂಬುದನ್ನು ಸರಳವಾಗಿ ಊಹಿಸಬಹುದಾದರೂ, ಅದು ಆರ್ಥಿಕ ಪುನಚ್ಛೇತನಕ್ಕೆ ಕಾರಣವಾಗಬಲ್ಲದೆ? ಎಂಬುದು ದೇಶದ ಮುಂದಿರುವ ಸವಾಲು.”

ಬಜೆಟ್ ಅಥವಾ ಸರಕಾರದ ವಾರ್ಷಿಕ ಆಯವ್ಯಯ ಮುಂದಿನ ಸಾಲಿನ ಹಣಕಾಸು ನಿರ್ವಹಣೆಯ ದಾರಿ. ಪ್ರತೀ ಸರಕಾರಕ್ಕೆ ಬಜೆಟ್ ನಿರ್ವಹಣೆ ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಸುಧಾರಣೆಗೆ ಅವಕಾಶ. ತತ್ಕಾಲೀನ ಅನಿವಾರ್ಯತೆಗಳನ್ನು ಎದುರಿಸುವ ಮತ್ತು ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಸವಾಲು ಎರಡೂ ಅದರ ಮುಂದಿರುತ್ತದೆ. ಕೇವಲ ಚುನಾವಣೆ ಗೆಲ್ಲುವುದೇ ಜನಪ್ರಿಯ ಬಜೆಟ್‍ನ ಸೂತ್ರವಾದರೆ ಆರ್ಥಿಕ ಪ್ರಗತಿ ಕುಂಠಿತವಾಗಬಹುದು. ಹಾಗೆಂದು ಮೂಲಭೂತ ಆರ್ಥಿಕ ಪ್ರಗತಿಗೆ ಒತ್ತು ಕೊಡದಿದ್ದರೆ ಯಾವ ಚುನಾವಣೆಯೂ ದೇಶವನ್ನು ಮೇಲೆತ್ತಲಾರದು. ದೇಶದ ಆರ್ಥಿಕ ಪ್ರಗತಿಯ ಆನ್ವಯಿಕತೆಯ ಮೂಲಕ ಅದರ ಫಲಾಫಲಗಳು ಶೀಘ್ರವಾಗಿ, ನೇರವಾಗಿ ಮತ್ತು ಸುಲಭವಾಗಿ ತಲುಪುವಂತೆ ಮಾಡಬೇಕಿರುವುದೇ ಈ ಕಾಲದ ಅನಿವಾರ್ಯತೆ. ಅದಕ್ಕೊಂದು ಉತ್ತಮ ಉದಾಹರಣೆ, ಹಿಂದಿನಿಂದಲೂ ಭಾರತದ ಆರ್ಥಿಕತೆಯ ಒಂದು (ಅವ)ಲಕ್ಷಣವೆಂದರೆ ಅದು “ಜಾಬ್‍ಲೆಸ್ ಗ್ರೋಥ್” ಅಂದರೆ ಉದ್ಯೋಗರಹಿತ ಬೆಳವಣಿಗೆ. ಕಳೆದ ನಾಲ್ಕು ವರ್ಷಗಳಲ್ಲಿ ಬೆಳವಣಿಗೆಯ ಜೊತೆ ಅದೇ ಪ್ರಮಾಣದಲ್ಲಿ ರೂಪುಗೊಳ್ಳದ ಉದ್ಯೋಗ ಸೃಷ್ಟಿ ಸರಕಾರಕ್ಕೆ ಬೃಹತ್ ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ.

ನರೇಂದ್ರ ಮೋದಿ ಸರಕಾರಕ್ಕೆ ಇದು ಐದನೇ ಹಾಗೂ “ಮೋದಿ 1.0” ಸರಕಾರದ ಕೊನೆಯ ಪೂರ್ಣಾವಧಿ ಬಜೆಟ್. 2019ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮೋದಿ ಸರಕಾರಕ್ಕಿದು “ಮಾಡು ಇಲ್ಲವೆ ಮಡಿ ಅಥವಾ ಮೇಕ್ ಆರ್ ಬ್ರೇಕ್” ಬಜೆಟ್. ಒಂದೆಡೆ ಹೆಚ್ಚುತ್ತಿರುವ ನಿರೀಕ್ಷೆ, ಮತ್ತೊಂದೆಡೆ ಸಾಲು ಸಾಲು ಚುನಾವಣೆಗಳು ಹಾಗೂ ಆಂತರಿಕ-ಬಾಹ್ಯ ಆರ್ಥಿಕ ಸವಾಲುಗಳು. ಇವೆಲ್ಲವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆಯ ಜೊತೆಗೆ ಭಾರತಕ್ಕೆ ಹೊಸ ದಿಶೆಯನ್ನು ತೋರಬೇಕಾದ ಅಗತ್ಯತೆ ಈ ಬಜೆಟ್ ಮುಂದಿದೆ. ಆದ್ದರಿಂದಲೇ 1.25 ಬಿಲಿಯನ್ ಜನರ ಮೇಲೆ ನೇರ ಪರಿಣಾಮ ಬೀರಲಿರುವ ಹಾಗೂ ಒಂಭತ್ತು ಚುನಾವಣೆಗಳನ್ನು ಎದುರಿಸಲಿರುವ ಈ ಸಾಲಿನ ಮುಂಗಡ ಪತ್ರ, ಕಳೆದ ನಾಲ್ಕು ಬಜೆಟ್‍ಗಳಿಗೆ ಹೋಲಿಸಿದರೆ ಅತ್ಯಂತ ಕಠಿಣ, ಸವಾಲಿನ ಹಾಗೂ ನಿರೀಕ್ಷೆಯ ಬಜೆಟ್. ಹಲವು ಅನಘ್ರ್ಯ ಸಮಸ್ಯೆಗಳ ಹೊರತಾಗಿಯೂ ಇದು ‘ಮತದಾರ’ ಕೇಂದ್ರಿತ ಬಜೆಟ್ ಆಗಬಹುದೆಂಬುದನ್ನು ಸರಳವಾಗಿ ಊಹಿಸಿದರೂ ಅದು ಆರ್ಥಿಕ ಪುನಚ್ಛೇತನಕ್ಕೆ ಕಾರಣವಾಗಬಲ್ಲದೆ? ಎಂಬುದು ದೇಶದ ಮುಂದಿರುವ ಸವಾಲು.

ಬಜೆಟ್‍ಗೂ ಎರಡು ದಿನ ಮುನ್ನವೇ ಬಿಡುಗಡೆಗೊಂಡ ಕೇಂದ್ರ ಸರಕಾರದ ಎಕನಾಮಿಕ್ ಸರ್ವೆ ಪ್ರಕಾರ, ಜಿ.ಎಸ್.ಟಿ ಹಾಗೂ ಅಪನಗದಿಕರಣದ ಪರಿಣಾಮಗಳಿಂದ ಚೇತರಿಸಿಕೊಂಡಿರುವ ಭಾರತ 2018-19ನೇ ಹಣಕಾಸು ವರ್ಷದಲ್ಲಿ 7%-7.5% ಪ್ರತಿಶತ ದರದಲ್ಲಿ ಜಿಡಿಪಿ ಬೆಳವಣಿಗೆಯನ್ನು ಸಾಧಿಸಲಿದೆ. ಈ ಕಾರಣದಿಂದಲೇ ಭಾರತ ಮತ್ತೊಮ್ಮೆ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಲಿದೆ. ಕಳೆದೆರಡು ವರ್ಷಗಳಲ್ಲಿ ಜಿ.ಎಸ್.ಟಿ. ಹಾಗೂ ಅಪನಗದಿಕರಣದಿಂದ ಕ್ರಮವಾಗಿ ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆ ಸಂಗ್ರಹದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಅಪನಗದಿಕರಣದ ತರುವಾಯ 10.1 ಮಿಲಿಯನ್ ಹೆಚ್ಚುವರಿ ಜನರು ನೇರ ತೆರಿಗೆ ವ್ಯಾಪ್ತಿಗೆ ಬಂದಿದ್ದರೆ, ಜಿ.ಎಸ್.ಟಿ ಜಾರಿಯಾದ 6 ತಿಂಗಳುಗಳೊಳಗಾಗಿ ಶೇಕಡ 50% ಹೆಚ್ಚಿನ ಪ್ರಮಾಣದ ಜನರು ಪರೋಕ್ಷ ತೆರಿಗೆಯ ವ್ಯಾಪ್ತಿಗೆ ಬಂದಿದ್ದಾರೆ. ಅಂದರೆ 6.5 ಮಿಲಿಯನ್ ಪರೋಕ್ಷ ತೆರಿಗೆದಾರರು ನೋಂದಾಯಿಸಿಕೊಂಡಿದ್ದರೆ, ಆ ಸಂಖ್ಯೆ ಈಗ 10 ಮಿಲಿಯನ್ ದಾಟಿದೆ. ಜೊತೆಗೆ ಭಾರತದ ಮಟ್ಟಿಗೆ ನಕಾರಾತ್ಮಕವಾಗಿಯೇ ಸಾಗಿರುವ “ತೆರಿಗೆ-ಜಿ.ಡಿ.ಪಿ.” ಅನುಪಾತದ ಪ್ರಮಾಣ (ಜಿಡಿಪಿ ಬೆಳವಣಿಗೆಯ ನಿರೀಕ್ಷಿತ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ತೆರಿಗೆ ಸಂಗ್ರಹವಾಗುವಿಕೆ) ಕ್ರಮೇಣ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವ ಸೂಚನೆ ನೀಡಿದೆ. 2018ರ ಆರ್ಥಿಕ ಸಮೀಕ್ಷೆ(ಅರವಿಂದ ಸುಬ್ರಮಹ್ಯಮ್) ಗಮನಿಸಿದಾಗ ಈ ಸಂಗತಿಗಳು ಭಾರತದ ಸ್ಥೂಲ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆಗಳಾಗಿವೆ.

ಭಾರತದ ಆರ್ಥಿಕತೆಯ ಮೇಲೆ ಮುಖ್ಯವಾಗಿ ಬಾಹ್ಯ ಮತ್ತು ಆಂತರಿಕ ಸಂಗತಿಗಳು ಪರಿಣಾಮ ಬೀರುತ್ತವೆ. ಯಾವುದೇ ರೀತಿಯ ಸ್ಥೂಲ ಆರ್ಥಿಕತೆಯ ನಿರ್ಣಯಗಳನ್ನು ಕೈಗೊಳ್ಳುವಾಗ ಈ ಸಂಗತಿಗಳನ್ನು ಗಮನಿಸಿಕೊಳ್ಳುವುದು ಅನಿವಾರ್ಯ. ಭಾರತದ ಬಜೆಟ್‍ನ ಸಾಧ್ಯತೆಗಳು ಕೂಡ ಈ ಸಂಗಂತಿಗಳ ಮೇಲೆಯೇ ಅವಲಂಬಿತವಾಗಿವೆ.

ಜಾಗತಿಕ ಪರಿಣಾಮ:
ಜಾಗತಿಕ ಸಂಗತಿಗಳ ಹಿನ್ನೆಲೆಯಲ್ಲಿ ಈ ಬಾರಿ ಭಾರತದ ಎದುರಿಗೆ ಕಠಿಣ ಸವಾಲುಗಳೇ ಎದುರಾಗಿವೆ. ಮತ್ತು ವಿಶ್ವಮಟ್ಟದ ಈ ಸಮಸ್ಯೆಗಳು ಸಧ್ಯಕ್ಕೆ ಪರಿಹಾರವಾಗುವಂತೆ ತೋರುತ್ತಿಲ್ಲ.

ಮೊದಲನೆಯದಾಗಿ ಏರುತ್ತಿರುವ ಕಚ್ಚಾ ತೈಲದ ಬೆಲೆ. 2013ರಿಂದೀಚೆಗೆ ವಿಶ್ವ ಮಾರುಕಟ್ಟೆಯಲ್ಲಿ ಪುನರುತ್ಪಾದಿಸಲಾಗದ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಮುಖವಾಗಿತ್ತು. ಭಾರತದ ಆರ್ಥಿಕತೆ ಹಾಗೂ ಮೋದಿ ಸರಕಾರ ಅದರ ನೇರ ಲಾಭವನ್ನು ಅನುಭವಿಸಿತ್ತು. ಆಮದು ಬೆಲೆ ಕಡಿಮೆಯಾಗಿತ್ತು. ತೈಲ ಸಬ್ಸಿಡಿಯ ಮೇಲಿನ ಸರಕಾರದ ಸಬ್ಸಿಡಿ ಹೊರೆ ಕಡಿತಗೊಂಡಿತ್ತು ಮತ್ತು ಹಣದುಬ್ಬರ ಹತೋಟಿಯಲ್ಲಿತ್ತು. ಈ ಮೂರು ಮುಖ್ಯ ಕಾರಣಗಳಿಂದ ಭಾರತದ ಒಟ್ಟಾರೆ ಖರ್ಚು ಕಡಿಮೆಯಾಗಿತ್ತು. ವಿದೇಶಿ ವಿನಿಮಯ ಬೊಕ್ಕಸ ಲಾಭಕರವಾಗಿತ್ತು. ಆದರೀಗ ಪರಿಸ್ಥಿತಿ ಭಿನ್ನವಾಗಿದೆ. ತೈಲ ಮಾರುಕಟ್ಟೆಯ ಚೇತರಿಕೆಯಿಂದ ಉತ್ಪಾದಿಸುವ ರಾಷ್ಟ್ರಗಳು (ಒಪಿಇಸಿ) ತೈಲ ಬೆಲೆಯನ್ನು ಏರಿಸತೊಡಗಿವೆ. ಎಷ್ಟರಮಟ್ಟಿಗೆಂದರೆ ಕಳೆದ ಆರು ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ 60%ರಷ್ಟು ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಅಧ್ಯಯನಗಳ ಪ್ರಕಾರ ಪ್ರತೀ ಬ್ಯಾಲರ್ ತೈಲದ ಮೇಲೆ 10 ಡಾಲರ್‍ಗಳು ಹೆಚ್ಚಳವಾದಂತೆ ಭಾರತದ ಜಿ.ಡಿ.ಪಿ. ಬೆಳವಣಿಗೆಯ ದರ ಶೇಕಡ 0.2-0.4% ರಷ್ಟು ಕುಂಠಿತಗೊಳ್ಳುವ ಸಾಧ್ಯತೆಯಿದೆ. ಒಂದೆಡೆ ಈ ಖರ್ಚನ್ನು ಹೊಂದಿಸಬೇಕು. ಮತ್ತೊಂದೆಡೆ ಪರ್ಯಾಯ ಇಂಧನ ಮೂಲಗಳಿಗೆ ಹೆಚ್ಚಿನ ಹೂಡಿಕೆಯನ್ನು ಮಾಡಬೇಕಾದ ಅನಿವಾರ್ಯತೆ ವಿತ್ತ ಸಚಿವ ಅರುಣ್ ಜೇಟ್ಲಿಯವರ ಮುಂದಿದೆ.

ಎರಡನೆಯದಾಗಿ ಮೇಕ್ ಇನ್ ಇಂಡಿಯಾ ಯೋಜನೆಯ ಮುಖೇನ ಕೈಗಾರಿಕೋತ್ಪನ್ನ ವಸ್ತುಗಳ ರಫ್ತಿಗೆ ಉತ್ತೇಜನ ದೊರೆತಿದ್ದರೂ, ಒಟ್ಟಾರೆ ರಫ್ತು ವಹಿವಾಟು ಏರಿಳಿತವನ್ನು ಹೊಂದುತ್ತಿದೆ. 2018ರ ಆರ್ಥಿಕ ಸಮೀಕ್ಷೆಯಲ್ಲಿ ಈ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದ್ದರೂ ಸಧ್ಯದ ಪರಿಸ್ಥಿತಿಯಲ್ಲಿ ಆಮದು ವಹಿವಾಟಿನ ಪ್ರಮಾಣ ಯತೇಚ್ಛವಾಗಿದೆ. ಪರಿಣಾಮ ವಿದೇಶಿ ವಿನಿಮಯದಲ್ಲಿ ಕರೆಂಟ್ ಅಕೌಂಟ್ ಕೊರತೆಯನ್ನು ಭಾರತ ಎದುರಿಸುತ್ತಿದೆ.

ಮೂರನೆಯದಾಗಿ ವಿಶ್ವದ ಅತ್ಯಂತ ಪ್ರಭಾವಿ ಅಮೆರಿಕದ ಫೆಡರಲ್ ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿ ಶೂನ್ಯ ಪ್ರಮಾಣದಲ್ಲಿದ್ದ ಬಡ್ಡಿದರವನ್ನು ಏರಿಸಲು ಪ್ರಾರಂಭಿಸಿದೆ. ಅಮೆರಿಕದ ಹಣದುಬ್ಬರ ಕುಂಠಿತಗೊಳ್ಳುವ ಜೊತೆಗೆ ಅಮೆರಿಕದತ್ತ ಡಾಲರ್ ಮತ್ತೆ ಹರಿದುಬರುವಂತೆ ಮಾಡುವುದೂ ಕೂಡ ಅದರ ಉದ್ದೇಶ. ಪರಿಣಾಮ ಹೂಡಿಕೆ, ಶೇರು ಮಾರುಕಟ್ಟೆ ಹಾಗೂ ಇನ್ನಿತರ ಮೂಲಗಳಿಂದ ಉತ್ತಮ ಬಡ್ಡಿದರವನ್ನು ಅರಸಿ ಭಾರತದತ್ತ ಬರುತ್ತಿದ್ದ ಬಂಡವಾಳಗಳು ಅಮೆರಿಕದತ್ತ ಮರಳುತ್ತಿವೆ. ಇದರಿಂದ ಭಾರತದ ರುಪಾಯಿಗಳ ಹೋಲಿಕೆಯಲ್ಲಿ ಡಾಲರ್ ಮೌಲ್ಯವೂ ಹೆಚ್ಚಾಗುವ ಲಕ್ಷಣಗಳಿವೆ.

ನಾಲ್ಕನೆಯದಾಗಿ ಕಳೆದ ಎರಡು ವರ್ಷಗಳಲ್ಲಿ ವಿಶ್ವ ಮಾರುಕಟ್ಟೆ ಬೆಳವಣಿಗೆಯ ಸೂಚನೆಯನ್ನು ನೀಡಿದ್ದರೂ, 2018ರ ಹೊತ್ತಿಗೆ ಮತ್ತೆ ಇಳಿಮುಖವಾದಂತೆ ತೋರುತ್ತಿದೆ. ಇದರಿಂದ ಭಾರತದ ಕೃಷಿ-ಕೈಗಾರಿಕಾ ರಫ್ತು ವಹಿವಾಟು ಕುಂಠಿತಗೊಳ್ಳಬಹುದು. ಮೇಲಾಗಿ ಹಣದುಬ್ಬರದ ಏರಿಕೆಯ ಸವಾಲು ಹಾಗೂ ವಿದೇಶಿ ಬಂಡವಾಳ ಹೂಡಿಕೆ ಇಳಿಮುಖವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಆದರೆ ಭಾರತದ ಚಿತ್ರಣ ಇದಕ್ಕೆ ವ್ಯತಿರಿಕ್ತವಾಗಿದೆ. ಕಳೆದೆರಡು ವರ್ಷಗಳಲ್ಲಿ ಎರಡು ಮಹತ್ವದ ಸುಧಾರಣೆಗಳಿಂದ ಆರ್ಥಿಕತೆಯ ಏರುಗತಿಯಲ್ಲಿ ಅಲ್ಪವಿರಾಮ ಸಿಕ್ಕಂತಾಗಿದ್ದರೂ ಈಗ ಮತ್ತೊಮ್ಮೆ ಅದು ಚೇತರಿಕೆಯನ್ನು ಕಂಡುಕೊಂಡಿದೆ ಎಂದು ಎಕನಾಮಿಕ್ ಸರ್ವೆ ತಿಳಿಸಿದೆ(7-7.1% ಜಿಡಿಪಿ ಬೆಳವಣಿಗೆ). ಇಂತಹ ಇನ್ನೂ ಅನೇಕ ಮಹತ್ವದ ಆರ್ಥಿಕ ಸುಧಾರಣೆಯಾದಾಗಲೇ ಭಾರತ ಅಭಿವೃದ್ಧಿಯ ಒಂದು ಬೃಹತ್ ಆರ್ಥಿಕ ಶಕ್ತಿಯಾಗಲು ಸಾಧ್ಯ ಎಂಬುದಾಗಿ ಐ.ಎಂ.ಎಫ್ ಮೊದಲಾದ ಅಂತರಾಷ್ಟ್ರೀಯ ಸಂಸ್ಥೆಗಳು ಹೇಳುತ್ತಿವೆ. ಮತ್ತಷ್ಟು ಆರ್ಥಿಕ ಸುಧಾರಣೆಗಳು ಈ ಬಜೆಟ್‍ನ ಆಶಯವಾಗುವುದರಲ್ಲಿ ಸಂಶಯವಿಲ್ಲ.

ಆಂತರಿಕ ಸವಾಲು:
ಯಾವುದೇ ದೇಶದ ಮುಕ್ತ ಆರ್ಥಿಕತೆಗೆ ಬಾಹ್ಯ ಸಂಗತಿಗಳಷ್ಟೇ ಆಂತರಿಕ ಸಂಗತಿಗಳೂ ಮಹತ್ವಪೂರ್ಣ. ಸ್ಥೂಲ ಹಾಗೂ ಸೂಕ್ಷ್ಮ ಆರ್ಥಿಕತೆಯ ಮೂಲ ಅಡಗಿರುವುದೇ ದೇಶದೊಳಗಿನ ಸಂಗತಿಗಳಲ್ಲಿ. ಮೊದಲನೆಯದಾಗಿ, ಮಾನ್ಸೂನ್, ಕಳೆದ ವರ್ಷ ಮಳೆ ಉತ್ತಮವಾಗಿದ್ದರೂ ಅಸಮತೋಲಿತ ಮುಂಗಾರಿನ ಪರಿಣಾಮ ದೊಡ್ಡ ಮಟ್ಟದಲ್ಲಿ ಬೆಳೆ ನಾಶಗೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2.8%ನಷ್ಟು ಬೆಳೆ ಉತ್ಪಾದನೆಯಲ್ಲಿ ಕೊರತೆಯುಂಟಾಗಿದೆ. ಮೇಲಾಗಿ ಹಿಂಗಾರು ಮಳೆಯ ಕೊರತೆಯಿಂದಾಗಿ ಅನೇಕ ಅಣೆಕಟ್ಟುಗಳಲ್ಲಿ ನೀರಿನ ಶೇಖರಣಾ ಪ್ರಮಾಣ ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ. ಕೃಷಿ ಸಚಿವಾಲಯದ ವರದಿಯ ಪ್ರಕಾರ ‘ರಾಬಿ’ ಬೆಳೆಗಳ ಬಿತ್ತನೆಯಲ್ಲಿ ಕಳೆದ ವರ್ಷಕ್ಕಿಂತ ಸುಮಾರು 0.9% ಪ್ರಮಾಣ ಕಡಿಮೆಯಾಗಿದೆ. ಈ ಬಾರಿಯ ಮಾನ್ಸೂನ್‍ನ ಖಚಿತ ಮಾಹಿತಿಯಿಲ್ಲದ ಕಾರಣ ಕೃಷಿಕರ ಸಮಸ್ಯೆ ಹೀಗೆಯೇ ಮುಂದುವರೆಯಲಿದೆ. ಜೊತೆಗೆ ಕೃಷಿ ಕಾರ್ಮಿಕರ ಸಂಬಳದಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಶೇಕಡ 0.24%ರಷ್ಟು ಕುಂಠಿತವಾಗಿರುವುದು ಹೆಚ್ಚುತ್ತಿರುವ ಗ್ರಾಮೀಣ ಅರ್ಥವ್ಯವಸ್ಥೆಯ ಒತ್ತಡಕ್ಕೆ ಕಾರಣವಾಗುತ್ತಿದೆ. ಗುಜರಾತ್ ಚುನಾವಣೆಯ ಗ್ರಾಮೀಣ ಮತದಾರರ ಮನಸ್ಥಿತಿ ಇದಕ್ಕೊಂದು ಉತ್ತಮ ಸಾಕ್ಷಿ. ಮತ್ತಷ್ಟು ವಿಸ್ತರಿಸಬೇಕಾದ ನೀರಾವರಿ ಯೋಜನೆ, ಬೆಂಬಲ ಬೆಲೆ, ಬೆಳೆ ವಿಮೆ ಮೊದಲಾದ ಅನೇಕ ಆದ್ಯ ಸಂಗತಿಗಳು ಸುಧಾರಣೆಯಾಗದ ಹೊರತು 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಯೋಜನೆ ಆದರ್ಶವಾದಿ ಯೋಚನೆಯಾಗಿ ಉಳಿಯುವ ಅಪಾಯವಿದೆ. ಬೆಳೆ ಹಾನಿ, ಸಾಲ, ಕಡಿಮೆ ಆದಾಯ, ಸಂಕೀರ್ಣ ಮಾರುಕಟ್ಟೆಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವ ದೇಶದ ಕೃಷಿ ಕಾರ್ಮಿಕರಿಗೆ ಹಾಗೂ ಕೃಷಿಯೇತರವಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಒತ್ತಡಕ್ಕೊಳಪಟ್ಟ ಗ್ರಾಮೀಣ ಆರ್ಥಿಕತೆಗೆ ಪುಷ್ಠಿ ನೀಡುವಂತಹ ಕ್ರಿಯಾಯೋಜನೆಗಳಿಗೆ ಬಜೆಟ್ ನಾಂದಿಹಾಡಬೇಕಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಗಳಾಗಬೇಕಿವೆ. ಒಂದೆಡೆ ನಾನ್‍ಫರ್ಫಾಮಿಂಗ್ ಅಸೆಟ್(ಎನ್.ಪಿ.ಎ/ ಕ್ರಿಯಾತ್ಮಕವಲ್ಲದ ಆಸ್ತಿ)ಗಳ ಒತ್ತಡದಿಂದ ಬಳಲುತ್ತಿರುವ ಬ್ಯಾಂಕ್‍ಗಳಿಗೆ ಆರ್ಥಿಕ ಪುನಚ್ಛೇತನ ಒದಗಿಸಬೇಕಾದ ಅನಿವಾರ್ಯತೆಯಿದೆ. ಆಗ ಮಾತ್ರ ಹೆಚ್ಚಿನ ಸಾರ್ವಜನಿಕ ಹಾಗೂ ಖಾಸಗಿ ಬಂಡವಾಳ ಹೂಡಿಕೆಗೆ ಸಾಲ ದೊರೆಯುತ್ತದೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳು ಮುಂದುವರೆಯುತ್ತವೆ. ಇದರ ಪರಿಣಾಮ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯ ಮೇಲಾಗುತ್ತದೆ. ಆದರೆ ಇದನ್ನು ಕೇಂದ್ರ ಸರಕಾರವೇ ಮಾಡಬೇಕಿದೆ. ಬ್ಯಾಂಕಿಂಗ್ ಕ್ಷೇತ್ರದ ಆಡಳಿತ ಸುಧಾರಣೆ, ಕಡಿಮೆ ಪ್ರಮಾಣದ ವಹಿವಾಟು ನಡೆಸುವ ಬ್ಯಾಂಕ್‍ಗಳ ಜೋಡಣೆ, ಬ್ಯಾಂಕ್‍ಗಳ ಉತ್ತಮ ವ್ಯವಹಾರಕ್ಕೆ ಮರುದ್ರವ್ಯೀಕರಣ(ರಿಕ್ಯಾಪಿಟಲೈಜೇಶನ್) ಇತ್ಯಾದಿ ಸುಧಾರಣೆಗಳನ್ನು ತರಬೇಕಾದ ಅನಿವಾರ್ಯತೆ ಈ ಬಜೆಟ್ ಮೇಲಿದೆ. ಅನೇಕ ನಷ್ಟದಲ್ಲಿರುವ ಸರಕಾರಿ ಸಂಸ್ಥೆಗಳಲ್ಲಿನ ಬಂಡವಾಳಹರಣದ ಮೂಲಕ ಸರಕಾರ ತನ್ನ ಬೊಕ್ಕಸಕ್ಕೆ ಹಣ ತರುವ ಪ್ರಯತ್ನ ಮಾಡುವುದರಿಂದ ಅಂತಹ ಸಾರ್ವಜನಿಕ ವಲಯದಲ್ಲಿ ಆಡಳಿತ ಶಿಸ್ತು ಹಾಗೂ ಹೆಚ್ಚಿನ ಉತ್ಪಾದಕತೆಗೂ ಕಾರಣವಾಗಲಿದೆ.

ಇತ್ತೀಚೆಗೆ ಒಕ್ಸ್‍ಫಾಮ್ ಬಿಡುಗಡೆಗೊಳಿಸಿದ ವರದಿಯಲ್ಲಿ “ಭಾರತದ 1% ಜನರ ಕೈಯಲ್ಲಿ 73% ಜನರ ಸಂಪತ್ತು ಕ್ರೋಢೀಕರಣಗೊಂಡಿದೆ” ಎಂಬುದಾಗಿ ತಿಳಿಸಿದೆ. ಇದನ್ನು ದಾವೊಸ್‍ನ ವಿಶ್ವ ಎಕನಾಮಿಕ್ ಫೋರಂನ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು ಎಂದು ವರದಿಯಾಗಿತ್ತು. ಪರೋಕ್ಷ ತೆರಿಗೆಯ ಅಸಮರ್ಪಕ ಅಳವಡಿಸುವಿಕೆ ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದ ದೇಶದಲ್ಲಿ ಸಂಪತ್ತಿನ ಅಸಮತೋಲನ ಕ್ರೋಢೀಕರಣವಾಗಿದೆ. ಇದು ಕೇವಲ ಸ್ಪರ್ಧಾತ್ಮಕ ಮಾರುಕಟ್ಟೆಯಿಂದಾದ ಕಂದಕವಲ್ಲ. ಈ ಅಸಮತೋಲನೆಯ ನಿವಾರಣೆಗೆ ಸರಕಾರದ ಬಳಿ ನೇರ ತೆರಿಗೆ ಸುಧಾರಣೆಯಂತಹ ಸಾಕಷ್ಟು ಸುಧಾರಣಾ ಮಾರ್ಗಗಳಿವೆ.

ರಾಷ್ಟ್ರೀಯ ಭದ್ರತೆ, ಉಚಿತ ಆರೋಗ್ಯ, ಶಿಕ್ಷಣ ಮೊದಲಾದ ಸಾರ್ವಜನಿಕ ಸೇವೆಗಳ ಪೂರೈಕೆಗಳಿಗಾಗಿ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯದ ಅಗತ್ಯವಿದೆ. ಅದಕ್ಕಾಗಿ ಪ್ರಗತಿಪರ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಆರ್ಥಿಕ ಕ್ರಾಂತಿಯ ಅನಿವಾರ್ಯತೆ ಈ ಬಜೆಟ್ ಮುಂದಿದೆ. ನೇರ ತೆರಿಗೆಯನ್ನು ಮತ್ತಷ್ಟು ವಿಸ್ತøತಗೊಳಿಸುವುದು ಒಂದು ಮಾರ್ಗ, ಅದರ ದರಗಳನ್ನು ಕಡಿತಗೊಳಿಸಿ, ತೆರಿಗೆ ಆಡಳಿತದಲ್ಲಿ ಸುಧಾರಣೆ ತಂದು ಸರಳೀಕೃತಗೊಳಿಸುವುದು ಮತ್ತೊಂದು ಮಾರ್ಗ. 1920ರ ಸುಮಾರಿನಿಂದ 1950ರ ಸುಮಾರಿನ ವರೆಗೆ ಮುಂದುವರೆದ ದೇಶಗಳಲ್ಲಿ ತೆರಿಗೆ ಕೇಂದ್ರಿತ ಆರ್ಥಿಕ ಕ್ರಾಂತಿಯೇ ನಡೆದಿದೆ. ಕಾರ್ಪೋರೆಟ್ ತೆರಿಗೆಯನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವುದಕ್ಕಾಗಿ ಈ ಬಜೆಟ್‍ನಲ್ಲಿ ಅದರ ದರವನ್ನು ಇಳಿಸುವ ಸಾಧ್ಯತೆಯಿದೆ. ಅದೇ ರೀತಿ ಪರೋಕ್ಷ ತೆರಿಗೆಯಿಂದ ಜನರಿಗೆ ಹೊರೆಯಾಗುವಂತಹ ಕೆಲವಾರು ಮೂಲಭೂತ ವಸ್ತುಗಳಿಗೆ ಜಿ.ಎಸ್.ಟಿ.ಯಿಂದ ವಿನಾಯಿತಿ ದೊರೆಯುವ ಸಂಭವವಿದೆ.

ಜೇಟ್ಲಿ ದ್ವಂದ್ವ:
ಮುಖ್ಯವಾಗಿ ಉದ್ಯೋಗ ಸೃಷ್ಟಿ, ಗ್ರಾಮೀಣ ಆರ್ಥಿಕತೆಯ ಪುನಚ್ಛೇತನ, ಉತ್ಪಾದನೆ ಹಾಗೂ ರಫ್ತಿಗೆ ನೀಡಬೇಕಾದ ಪ್ರಾಧಾನ್ಯತೆ, ಖಾಸಗಿ ಹೂಡಿಕೆಯ ಪುನಚ್ಛೇತನ ಹಾಗೂ ವಿದೇಶಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕಾದ ಅನಿವಾರ್ಯತೆ, ಗ್ರಾಮೀಣ ಅರ್ಥವ್ಯವಸ್ಥೆಯ ಸುಧಾರಣೆ, ಖಾಸಗಿ ಹೂಡಿಕೆಗೆ ಪೂರಕವಾಗಿ ಸಾರ್ವಜನಿಕ ಹೂಡಿಕೆಯನ್ನೂ ಮಾಡಬೇಕಾದ ಮೊದಿ 1.0 ಸರಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಮೇಲಿದೆ.  ಸಾಧಿಸುವುದೆಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಣಾಳಿಕೆಯನ್ನು ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಿದಂತೆ. ಆದರೆ ವಿತ್ತ ಸಚಿವ ಅರುಣ್ ಜೇಟ್ಲಿ ಎದುರಿಸುವ ಬಹುಮುಖ್ಯ ದ್ವಂದ್ವ ಎಂದರೆ, ಸರಕಾರ ಸಾಲಮಾಡಿ ಹೂಡದ ಹೊರತು ಬೃಹತ್ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯಗಳ ಬೆಳವಣಿಗೆ, ರಕ್ಷಣೆ, ಸಮಾಜವಾದಿ-ಸಾಮಾಜಿಕ ಯೋಜನೆಗಳ ನಿತ್ಯಹರಿದ್ವರ್ಣತೆ, ಸರಕಾರದ ಈ-ಆಡಳಿತ ಹಾಗೂ ಜನಕೇಂದ್ರಿತ ಆಡಳಿತ ಯಂತ್ರದ ದಿನನಿತ್ಯದ ಚಲಾವಣೆ ಸೇರಿದಂತೆ ಅನೇಕಾನೇಕ ಸೇವೆಗಳಿಗೆ ಸರಕಾರವೇ ನೇರವಾಗಿ ತನ್ನ ಬೊಕ್ಕಸದಿಂದ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಮುಖ್ಯವಾಗಿ ಹೂಡಿಕೆಯ ಪುನಚ್ಛೇತನಕ್ಕೆ ಸರಕಾರವೇ ನೇರವಾಗಿ ಹೂಡಿಕೆಯನ್ನು ಮಾಡಬೇಕಾದ ಅನಿವಾರ್ಯತೆಯಲ್ಲಿದೆ.

ಆದರೆ ಹೀಗೆ ಮಾಡುವುದು ಎಂದರೆ ಅದು ವಿತ್ತೀಯ ಶಿಸ್ತನ್ನು ಸಡಿಲಗೊಳಿಸಿದಂತೆ. ಈಗಾಗಲೇ ಸರಕಾರ ಪ್ರಸಕ್ತ ಸಾಲಿನಲ್ಲಿ ಜಿಡಿಪಿಗೆ ಹೋಲಿಕೆಯಾಗುವಂತೆ ‘ವಿತ್ತೀಯ ಕೊರತೆಯ’ ನಡಿಗೆಯನ್ನು ಸಡಿಲಿಸಿದೆ. ಹೀಗಾದರೆ ಕೇವಲ ಸಾಲದ ಹೊರೆಯಷ್ಟೇ ಮೀರುವುದಿಲ್ಲ ಜೊತೆಗೆ ‘ಮೂಡಿ, ಎಸ್ ಆಂಡ್ ಪಿ’ ಮೊದಲಾದ ಅಂತರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳಲ್ಲಿ ಭಾರತದ ಅಂಕವೂ ಕಡಿತಗೊಳ್ಳುವ ಭೀತಿಯಿದೆ. ಅದರಿಂದ ವಿದೇಶಿ ಹೂಡಿಕೆಗೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಮೋದಿ ‘ಮೂಡಿ’ಯವರನ್ನು ಮೆಚ್ಚಿಸಲು ಹೋದರೆ ಆರ್ಥಿಕ ಪುನಚ್ಛೇತನಕ್ಕೆ ತೊಂದರೆ, ಇಲ್ಲವಾದಲ್ಲಿ ವಿಶ್ವಮಟ್ಟದ ಪ್ರತಿಷ್ಟೆಗೆ ಭಂಗ. ಈ ದ್ವಂದ್ವ ಜೇಟ್ಲಿಯವರನ್ನು ಬಜೆಟ್ ಉದ್ದಕ್ಕೂ ಕಾಡಲಿದೆ.

ಆರ್ಥಿಕ ಪುನಚ್ಛೇತನದ ಮಾರ್ಗವೆಂದರೆ ಅದು ಕತ್ತಿಯಂಚಿನ ನಡಿಗೆ. ಅದರ ಪರಿಣಾಮ ತಕ್ಷಣಕ್ಕೆ ಲಾಭಕರವೆಂದು ತೋರದಿರಬಹುದು, ಆದರೆ ಭವಿತ್ಯಕ್ಕೆ ಯುಗಪ್ರವರ್ತಕ ಶಕ್ತಿಯ ಇಂಧನವನ್ನೊದಗಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಭಾರತದ ಆರ್ಥಿಕ ಪ್ರಗತಿಯ ದಾರಿ, ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯನ್ನೇ ಆಮೂಲಾಗ್ರವಾಗಿ ಬದಲಾಯಿಸಬಲ್ಲಂತಹ ಆರ್ಥಿಕ ಸುಧಾರಣೆ ಭಾರತಕ್ಕೆ ಅನಿವಾರ್ಯವಾಗಿದೆ. ಈ ಬಜೆಟ್ ಅಂತಹ ಸುಧಾರಣೆಗಳನ್ನು ತರುವ ಹಾಗೂ ಭಾರತದ ಮಂಜುಮುಸುಕಿದ ಆರ್ಥಿಕತೆಗೆ ಪುನಚ್ಛೇತನವನ್ನೊದಗಿಸುವ ಸೂಚನೆಗಳನ್ನು ನೀಡಿದೆ. ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯಮ್ ಬರೆದಿರುವ 2018ರ ಆರ್ಥಿಕ ಸಮೀಕ್ಷೆ ಕೂಡ ಅದೇ ನಿಟ್ಟಿನ ಆಲೋಚನೆಗಳನ್ನು ಒದಗಿಸಿದೆ. ವಿತ್ತೀಯ ಶಿಸ್ತು ಹಾಗೂ ಆರ್ಥಿಕ ಪುನಚ್ಛೇತನ ಎರಡೂ ಅನಿವಾರ್ಯ ಸಂಗತಿಗಳು. ಇವೆರಡನ್ನೂ ಈ ಬಾರಿಯ ಬಜೆಟ್‍ನಲ್ಲಿ ಹೇಗೆ ನಿಭಾಯಿಸುತ್ತಾರೆಂಬುದರ ಜೊತೆಗೆ ಕಳೆದ ನಾಲ್ಕು ವರ್ಷಗಳ ದೂರದೃಷ್ಟಿಯನ್ನು ಯಾವ ರೀತಿ ಸಮಗ್ರೀಕರಿಸುತ್ತಾರೆಂಬುದರ ಮೇಲೆ ‘ಮೋದಿ 1.0 ಸರಕಾರ’ದ ಸಾಂಸ್ಥಿಕ ಪ್ರಮಾಣಪತ್ರ ರೂಪುಗೊಳ್ಳಲಿದೆ. ದೇಶದ ನವ ಆರ್ಥಿಕ ಭವಿಷ್ಯ ನಿರ್ಧರಿತವಾಗಲಿದೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments