ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 3, 2018

ಕನ್ನಡ ಪರ ಹೋರಾಟವೆಂದರೆ ಕಾಂಗ್ರೆಸ್ ಪರ ಹೋರಾಟವೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ರಾಜಕೀಯ ಪಕ್ಷಗಳಿಗೆ ಯಾವತ್ತಿಗೂ ಲಾಭದ ಬಾಬತ್ತು. ಈಗ ಮಹದಾಯಿ ವಿಷಯದಲ್ಲೂ ಆಗುತ್ತಿರುವುದೂ ಅದೇ. ರಧಾನಿ ಮೋದಿಯವರ ಬಳಿ,ಗೋವಾ-ಮಹಾರಾಷ್ಟ್ರದ ಜೊತೆಗೆ ಸಂಧಾನದ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯದ ಸರ್ವಪಕ್ಷ ನಿಯೋಗ ಹೋಗಿ ಕೇಳಿಕೊಂಡಾಗ,ಈ ವಿವಾದದ ಇತಿಹಾಸದ ಅರಿವಿದ್ದ ಅವರು,ಮಧ್ಯಸ್ಥಿಕೆ ನಿರಾಕರಿಸಿ ಮೊದಲು ಆಯಾ ರಾಜ್ಯಗಳಲ್ಲಿರುವ ಪಕ್ಷಗಳ ಒಪ್ಪಿಸಿ ಎಂದಿದ್ದರು. ನಂತರ  ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ,ಗೋವಾದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಬಿಜೆಪಿಯವರು ಹಾಗೂ ಗೋವಾದ ವಿರೋಧ ಪಕ್ಷ ಕಾಂಗ್ರೆಸ್ಸನ್ನು ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ಸಿನವರು ಒಪ್ಪಿಸುವ ನಿರ್ಧಾರವಾಗಿತ್ತು.

ನಂತರ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೋವಾ-ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪಾತ್ರ ಬರೆದಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯು ಬಂದಿತ್ತು. ಅವರ ಮಧ್ಯಸ್ಥಿಕೆಯಲ್ಲಿಯೇ ಮಾತುಕತೆ ನಡೆಯಲಿದೆ ಎನ್ನುವ ಸುದ್ದಿಗಳು ಇದ್ದವು.ಈ ನಡುವೆ ಕರ್ನಾಟಕದ ಬಿಜೆಪಿಯ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಹದಾಯಿ ವಿಷಯಕ್ಕೆ ಭೇಟಿ ಮಾಡಿದ್ದರು.ಆ ಭೇಟಿಯನ್ನೂ ವಿವಾದವಾಗಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸಮಸ್ಯೆಯಿರುವುದು ಗೋವಾ ರಾಜ್ಯದ ಜೊತೆ. ರಾಜ್ಯ ಬಿಜೆಪಿಯವರು ಗೋವಾ ಸಿಎಂ ಜೊತೆ ಮಾತನಾಡಲಿ’ ಎಂದು ಖ್ಯಾತೆ ತೆಗೆದಿದ್ದರು. ಆ ನಂತ್ರ ಗೋವಾದಲ್ಲಿ ಚುನಾವಣೆಯ ಕಾವೇರಿತು,ಇತ್ತ ರಾಜ್ಯ ಬಿಜೆಪಿಗೆ ಅದರದ್ದೇ ಆದ ತಲೆ ನೋವು ತಾಪತ್ರಯಗಳಿದ್ದವು. ಇತ್ತೀಚಿಗೆ ಧೂಳು ಕೊಡವಿಕೊಂಡು ಯಡ್ಯೂರಪ್ಪನವರ ನೇತೃತ್ವದಲ್ಲಿ ಶುರುವಾಗಿದ್ದ ಪರಿವರ್ತನಾ ಯಾತ್ರೆಯ ಹುಬ್ಬಳ್ಳಿ ಸಮಾವೇಶದ ಸಮಯದಲ್ಲಿ,Over Enthusiastic ಆದ ಯಡ್ಯೂರಪ್ಪನವರು ಮಹದಾಯಿ ವಿವಾದಕ್ಕೆ ಪರಿಹಾರ ದೊರಕಲಿದೆ,ಗೋವಾದಿಂದ ಸಿಹಿ ಸುದ್ದಿ ತರುತ್ತೇನೆ ಎಂದು ಘೋಷಿಸಿಬಿಟ್ಟರು.ಅತ್ತ ಅಮಿತ್ ಷಾ ಅವರ ಮಧ್ಯಸ್ಥಿಕೆಯಲ್ಲಿ ಗೋವಾ ಸಿಎಂ ಪರಿಕ್ಕರ್,ರಾಜ್ಯದ ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆಯ ಫೋಟೋಗಳು ಬ್ರೇಕಿಂಗ್ ನ್ಯೂಸ್ ಚಾನೆಲ್ಲುಗಳಿಂದ ಹಿಡಿದು ದಿನಪತ್ರಿಕೆಗಳಲ್ಲೂ ಬಂದವು. ಏನೋ ಪವಾಡವಾಗಲಿದೆ ಎಂದು ಬರೆದವು.ಮುಗ್ಧ ರೈತರು,ಹೋರಾಟಗಾರರು ಕಾದು ಕುಳಿತರು, ಕಡೆಗೆ ಪರಿಕ್ಕರ್ ಅವರಿಂದ ಯಡ್ಯೂರಪ್ಪನವರಿಗೆ ಪತ್ರವೊಂದು ಬಂತು. ಕುಡಿಯುವ ನೀರಿನ ವಿಚಾರದಲ್ಲಿ ಮಾತ್ರ ತಾವು ಮಾತುಕತೆಗೆ ಸಿದ್ಧರಾಗಿರುವುದಾಗಿ ಬರೆದಿದ್ದರು. ಸಮ್ಮಿಶ್ರ ಸರ್ಕಾರದ ಏಕೈಕ ಬಿಜೆಪಿಯ ನಾಯಕರಾಗಿ ನಿಜಕ್ಕೂ ಪರಿಕ್ಕರ್ ಹಾಗೂ ಗೋವಾ ಬಿಜೆಪಿ ರಿಸ್ಕ್ ತೆಗೆದುಕೊಂಡೇ ಈ ಪತ್ರ ಬರೆದಿತ್ತು. ಗೋವಾ ಸಿಎಂ ಕರ್ನಾಟಕ ಸಿಎಂಗೆ ಪತ್ರ ಬರೆಯಬೇಕಿತ್ತು ಎಂದು ಖ್ಯಾತೆ ತೆಗೆದ ಕಾಂಗ್ರೆಸ್ಸು ಇತ್ತ ಹೋರಾಟಗಾರರನ್ನು ತಂದು ಬಿಜೆಪಿಯ ಕಚೇರಿ ಎದುರು ಕೂರಿಸಿ,ಅತ್ತ ಗೋವಾ ಕಾಂಗ್ರೆಸ್ಸಿಗೆ ತಿವಿಯಿತು.

ಗೋವಾ ಕಾಂಗ್ರೆಸ್ ಪರಿಕ್ಕರ್ ಅವರನ್ನು ರಾಜ್ಯ ವಿರೋಧಿ ಎನ್ನುವಂತೆ ಅಲ್ಲಿ ಬಿಂಬಿಸಿತು, ಖುದ್ದು ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳೇ ಪರಿಕ್ಕರ್ ಅವರ  ವಿರುದ್ಧ ತಿರುಗಿ ಬಿದ್ದವು. ಮಹದಾಯಿಗೆ ಪಕ್ಷ ಬೇಧ ಮರೆತು ಪರಿಹಾರ ಹುಡುಕುವುದಕ್ಕಿಂತಲೂ,ಬಿಜೆಪಿಯನ್ನು ರಾಜಕೀಯವಾಗಿ ಬಡಿಯುವ ಖುಷಿಯೇ ಮುಖ್ಯಮಂತ್ರಿಗಳಿಗೆ ಹಿತವಾಯಿತು.

ವಾಸ್ತವದಲ್ಲಿ ಬಿಜೆಪಿ ಆಗಸ್ಟ್ ತಿಂಗಳ ಸರ್ವಪಕ್ಷ ಸಭೆಯ ನಿರ್ಧಾರದಂತೆ ನಡೆದುಕೊಂಡಿತ್ತು. ಅದೇ ಪ್ರಕಾರ ಕರ್ನಾಟಕ ಕಾಂಗ್ರೆಸ್ಸಿನವರು ಗೋವಾ ಕಾಂಗ್ರೆಸ್ಸನ್ನು ಒಪ್ಪಿಸಬೇಕಿತ್ತು.

ಆದರೆ,ಕರ್ನಾಟಕದ ಸಿ.ಎಂ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಮಾಡಿದ್ದೇನು? ‘ನಮಗೂ ಗೋವಾ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ’ ಎಂದು ಖುದ್ದು ಸಿಎಂ ಸಾಹೇಬರೇ ಕೈ ಎತ್ತಿದರು.ಹಾಗಿದ್ದರೆ, ಮಹದಾಯಿ ವಿಷಯದಲ್ಲಿ ‘ಕೈ’ ಎತ್ತಿದ ಪಕ್ಷ ಯಾವುದು? ರೈತರಿಗೆ ಮೋಸ ಮಾಡಿದವರು ಯಾರು? ಯಾರ ವಿರುದ್ಧ ಬಂದ್ ಮಾಡಬೇಕಿತ್ತು? ಯಾವ ಪಕ್ಷದವರ ವಿರುದ್ಧ ಹೋರಾಟಗಾರರು ಪ್ರತಿಭಟಿಸಿಬೇಕಿತ್ತು?

 

ಸಮರ್ಥ ಹೋರಾಟ,ಜವಾಬು ನೀಡುವಲ್ಲಿ ಸೋತಿರುವ ಬಿಜೆಪಿಗೆ,ಕಾಂಗ್ರೆಸ್ಸಿನ ಕೊರಳುಪಟ್ಟಿ ಹಿಡಿದು ಆಗಸ್ಟ್ ತಿಂಗಳ ಸರ್ವಪಕ್ಷ ಸಭೆಯ ತೀರ್ಮಾನದಲ್ಲಿ ನೀವೇನು ಮಾಡಿದ್ದೀರಿ ಎಂದು ಕೇಳಲಾಗಲೇ ಇಲ್ಲ. ಪರಿಣಾಮ,ಪ್ರಯತ್ನ ಮಾಡಿಯೂ ಬಿಜೆಪಿ ಕಟಕಟೆಯಲ್ಲಿ ನಿಲ್ಲಬೇಕಾಯಿತು.ವಾಟಾಳ್ ನಾಗರಾಜ್ ನೇತೃತ್ವದ ಸೋ-ಕಾಲ್ಡ್ ಹೋರಾಟಗಾರರಿಗೆ ಅದೇನು ಮರ್ಜಿಯೋ ಏನೋ, ಅವರು ಎಲ್ಲಾ ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರು ಬರುವುದೆಂದು ನಿಶ್ಚಯವಾಗಿದ್ದ ಜನವರಿ ೨೫ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಬಿಟ್ಟರು.ಅವರ ದುರಾದೃಷ್ಟಕ್ಕೆ ಮೋದಿಯವರು ಬರುವ ದಿನ ಫೆಬ್ರವರಿ ೪ನೇ ತಾರೀಖಿಗೆ ಮುಂದೂಡಲ್ಪಟ್ಟಿತ್ತು,ಮೋದಿ ಬಾರದಿದ್ದರೇನು? ಅಮಿತ್ ಷಾ ಬರುತ್ತಾರಲ್ಲ ಅಷ್ಟೇ ಸಾಕು ಎಂದರೇನೋ ಕಾಂಗ್ರೆಸ್ ಮುಖಂಡರು,ಪ್ರೆಸ್ ಕ್ಲಬ್ಬಿಗೆ ಬಂದ ವಾಟಾಳ್ ಬಂದ್ ಘೋಷಣೆ ಮಾಡಿದರು. ಆ ದಿನ ಖುದ್ದು ಸರ್ಕಾರವೇ ಮುಂದೆ ನಿಂತು ರಾಜ್ಯ ಸಾರಿಗೆ, ಬೆಂಗಳೂರು ಮಹಾನಗರ ಸಾರಿಗೆಯನ್ನು ನಿಲ್ಲಿಸಿ ಸರ್ಕಾರಿ ಬಂದ್ ಗೆ ಸಹಾಯ ಹಸ್ತ ಚಾಚಿತು.ತಮ್ಮ ಸಂಘಟನೆಗಳನ್ನು ಕಾಂಗ್ರೆಸ್ಸಿಗೆ ಅಡವಿಟ್ಟುಕೊಂಡವರು ಜನರಲ್ಲಿ ಭೀತಿ ಹುಟ್ಟಿಸಿ ಬಂದ್ ಮಾಡಿಸಿದರು.ಈ ಹೋರಾಟಗಾರರ ನೈತಿಕತೆ ಯಾವ ಮಟ್ಟಕ್ಕಿಳಿದಿತ್ತು ಎಂದರೇ,ಇವರ್ಯಾರಿಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಲೇಬೇಕೆನಿಸಲಿಲ್ಲ.ಅಮಿತ್ ಷಾ ಅವರು ಬಂದಾಗ ಬಂದ್ ಮಾಡಿದವರು,”ಕರ್ನಾಟಕಕ್ಕೇ ಒಂದೇ ಒಂದು ಹನಿ ಮಹದಾಯಿ ನೀರು ಕೊಡುವುದಿಲ್ಲ” ಎಂದಿದ್ದ ಸೋನಿಯಾ ಗಾಂಧಿಯವರ ಮಗ ರಾಹುಲ್ ಗಾಂಧೀ ಬಂದಾಗ,ಬಂದ್ ಬೇಡ ಕನಿಷ್ಟ ಪ್ರತಿಭಟನೆಯನ್ನು ದಾಖಲಿಸಿ ಇವರ ನೈತಿಕತೆ ಪ್ರದರ್ಶಿಸಲಿ ನೋಡೋಣ.

 

ಕೇವಲ ಮಹದಾಯಿ ಅಂತಲ್ಲ, ಹಿಂದಿ ಹೇರಿಕೆಯ ವಿಷಯದಲ್ಲೂ ಈ ಸಂಘಟನೆಗಳು ಕಾಂಗ್ರೆಸ್ಸಿನಿಂದಲೇ ಸೂಚನೆ ಪಡೆಯುತ್ತಿರುವಂತೆ ವರ್ತಿಸಿದವು. ನೆಹರೂ ಕಾಲದಲ್ಲಿ ಶುರುವಾದ ಕೇಂದ್ರ ಸರ್ಕಾರದ ಹಿಂದಿ ಭಾಷಾ ನೀತಿಯನ್ನು ನರೇಂದ್ರ ಮೋದಿಯವರೇ ಜಾರಿಗೆ ತಂದರೇನೋ ಎನ್ನುವಂತೆ ಇವರು ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡರು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಂದು ಪೆರಿಯಾರ್ ವಾದಿಗಳು ತಿರುಗಿಬಿದ್ದಾಗ ಬ್ರಿಟಿಷರೇ ಆ ನೀತಿಯನ್ನು ಹಿಂಪಡೆದಿದ್ದರು. ಇನ್ನು ಸ್ವತಂತ್ರ ಭಾರತದಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಸಂವಹನ ಭಾಷೆಯಾಗಿ ಇಂಗ್ಲೀಷ್ ಹಾಗೂ ಹಿಂದಿಯನ್ನು ತಂದಿದ್ದು ನೆಹರೂ ಕಾಲದಲ್ಲೇ ಹೊರತು ಮೋದಿಯವರ ಕಾಲದಲ್ಲಿ ಅಲ್ಲ. ಹೀಗಿರುವಾಗ ಇವರು ನೈತಿಕತೆ ಇರುವ ಹೋರಾಟಗಾರರಾಗಿದ್ದರೆ ಕಾಂಗ್ರೆಸ್ಸನ್ನು ಪ್ರಶ್ನಿಸಬೇಕಿತ್ತು.ಆದರೆ ಈ ಕಾಂಗ್ರೆಸ್ ಕನ್ನಡಿಗರ ಗುರಿಯಿದ್ದಿದ್ದು ಬಿಜೆಪಿಯ ಮೇಲೆ ಮಾತ್ರವೇ. ಇನ್ನು ಬಣ್ಣ ಬದಲಿಸುವಲ್ಲಿ ಊಸರವಳ್ಳಿಗಳೂ ನಾಚುವಂತೆ ಮಾಡಬಲ್ಲ ಕಾಂಗ್ರೆಸ್ ನಾಯಕರೂ, ಇದಕ್ಕೂ ಮೋದಿಯವರನ್ನೇ ಕಟಕಟೆಗೆ ನಿಲ್ಲಿಸಿದರು.ಹಾಗೆ ನಿಲ್ಲಿಸುವಾಗ ಜಾಣ್ಮೆಯಿಂದ ನೆಹರೂ ಅವರನ್ನು ಮರೆತರು.ಇನ್ನು ಇವನ್ನೆಲ್ಲ ಪ್ರಶ್ನಿಸಬೇಕಿದ್ದ ಬಿಜೆಪಿ ನಾಯಕರು ಸೆಲ್ಫ್ ಗೋಲ್ ಹೊಡೆದುಕೊಂಡು ಮತ್ತೆ ಕಟಕಟೆಗೆ ಏರುವುದರಲ್ಲೇ ಖುಷಿಕಂಡರು.ಒಟ್ಟಾರೆ ಈ ಎಲ್ಲ ಘಟನೆಗಳಿಂದ ಕನ್ನಡ ಪರ ಹೋರಾಟವೆಂದರೆ ಕಾಂಗ್ರೆಸ್ ಪರ ಹೋರಾಟವೆನ್ನುವ ಭಾವನೆಯನ್ನು ಸೋ-ಕಾಲ್ಡ್ ಹೋರಾಟಗಾರರು,ಸಂಘಟನೆಗಳು ಸೃಷ್ಟಿಸಿವೆ.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರಿಂದ ಶುರುವಾದ ಕರ್ನಾಟಕ/ಕನ್ನಡ ಚಳವಳಿಯ ಹೋರಾಟದ ಪರಂಪರೆಯಲ್ಲಿ ಶುರುವಾಗಿ ಅನಕೃ,ಮ.ರಾಮಮೂರ್ತಿ, ಡಾ.ರಾಜ್ ಕುಮಾರ್ ಅವರಂತಹ ಹಲವಾರು ಪುಣ್ಯಾತ್ಮರ ಹೆಸರುಗಳು ಇಂದಿಗೂ ಕನ್ನಡಿಗರ ಜನಮನದಲ್ಲಿ ಅಚ್ಚಳಿಯದೇ ದಾಖಲಾಗಿದೆ. ನೆನಪಿರಲಿ,ಹಾಗೆ ಅವರು ದಾಖಲಾಗಿರುವುದು ‘ಪ್ರೀತಿ’ಯ ಮೂಲಕವೇ ಹೊರತು ‘ಭೀತಿ’ ಹುಟ್ಟಿಸುವ ಮೂಲಕವಲ್ಲ. ಹೌದು ಅದೊಂದು ಸಮಯವಿತ್ತು. ಕನ್ನಡಪರ ಹೋರಾಟ,ಸಂಘಟನೆಗಳು ಎಂದರೆ ಕರ್ನಾಟಕದ ಜನಸಾಮಾನ್ಯರೂ ಗೌರವ ತೋರಿಸುತ್ತಿದ್ದರು. ಆದರೆ ಈಗ ಹೋರಾಟಗಳೆಂದರೆ ಅದು ಒಂದು ಪಕ್ಷದ ಅಣತಿಯಂತೆ ಮತ್ತೊಂದು ಪಕ್ಷದ ವಿರುದ್ಧ ನಡೆಯುವುದು ಎನ್ನುವಲ್ಲಿಗೆ ತಂದು ನಿಲ್ಲಿಸಿದ್ದಾರೆ ಈ ಹೋರಾಟಗಾರರು.

ಇವರ ಹೋರಾಟವೆಂದರೆ,ಅದು “ಬಂದ್” ಮಾತ್ರ.ಮಾತೆತ್ತಿದರೆ ಬಂದ್ ಮಾಡುವುದೊಂದೇ ಸಮಸ್ಯೆಯ ಪರಿಹಾರವೆಂದು ತಿಳಿದುಕೊಂಡಿದ್ದಾರೆ ಈ ಹೋರಾಟಗಾರರು. ಕಳೆದ ಹದಿನೆಂಟು ತಿಂಗಳಲ್ಲಿ ಏಳು ಬಂದ್ ಗಳಿಗೆ ಸಾಕ್ಷಿಯಾಗಿದ್ದ ರಾಜ್ಯ ನಾಳೆ ಮತ್ತೊಂದು ಬಂದ್ ಗೆ ಸಾಕ್ಷಿಯಾಗುವ ಸ್ಥಿತಿಯಿಂದ ಜನಸಾಮಾನ್ಯರು ಪಾರಾಗಿದ್ದಾರೆ. ನಿನ್ನೆ ಹೈಕೋರ್ಟು ಬಂದ್ ಮಾಡುವುದು ಅಸಂವಿಧಾನಿಕ ಎಂದು ತೀರ್ಪು ನೀಡಿದೆ.ಸದ್ಯಕ್ಕೆ ಕನ್ನಡಿಗರು ಬಂದ್ ನಿಂದ ಬಚಾವು. (ಬಂದ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಮೂಲ ಅರ್ಜಿದಾರ ಶ್ರದ್ಧಾ ಪೋಷಕ ಸಂಘದವರು. ಆ ಅರ್ಜಿಗೆ ನಿಲುಮೆ ಹಾಗೂ ಜೈಭಾರ್ಗವ ಬಳಗ ಮಧ್ಯಂತರ ಅರ್ಜಿದಾರರಾಗಿದ್ದೆವು)

ಕನ್ನಡವ ಕಾಪಾಡು ಕನ್ನಡದ ಕಂದ
ಕನ್ನಡಿಗರ ರಕ್ಷಿಸು ಓರಾಟಗಾರರಿಂದ…

ಎನ್ನುವ ದಿನಗಳಲ್ಲಿ ನಾವಿಂದು ನಿಂತಿದ್ದೇವೆ ಎನ್ನುವುದೇ ನೋವಿನ ಸಂಗತಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments