ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2018

ನಂಬಿಕೆ

‍ನಿಲುಮೆ ಮೂಲಕ

– ಪ್ರಶಾಂತ್ ಭಟ್

‘ಇದು ಹೀಗಾಗುತ್ತದೆ ಅಂತ ನನಗೆ ಗೊತ್ತಿತ್ತು’ ಪಕ್ಕದ ಸೀಟಿನವನ‌ ಮಾತು ಕೇಳಿ ಮೊಬೈಲಿಂದ ತಲೆ ಎತ್ತಿ ನೋಡಿದಾಗ ಬಸ್ಸು ನಿಂತದ್ದು ಅರಿವಿಗೆ ಬಂತು. ಇವ ಯಾರು ಮಾರಾಯ, ಬಸ್ಸು ಹೊರಟಾಗಿಂದ ತನ್ನೊಳಗೇ ಏನೋ ಗುನುಗುತ್ತಾ ಕೈ ಸನ್ನೆ ಮಾಡ್ತಾ ಕಿರಿಕಿರಿ ಉಂಟುಮಾಡಿದ್ದ. ನಮ್ಮದೇ ಸಾವಿರ ಇರಬೇಕಾದರೆ ಈ ತರಹದ ಆಸಾಮಿ ಸಿಕ್ಕರೆ ಪ್ರಯಾಣವೂ ಪ್ರಯಾಸವೇ! ಅವಳ ಮೆಸೇಜು ಬಂತಾ ಅಂತ ನೋಡುವಾ ಅಂದರೆ ಹಾಳಾದ ನೆಟ್ವರ್ಕ್ ಕೂಡಾ ಇಲ್ಲ. ಅದು ಸರಿ ಈ ಬಸ್ಸು ನಿಂತದ್ದಾದರೂ ಯಾಕೆ? ಓಹ್, ಎದುರೆಲ್ಲ ವಾಹನಗಳ ಸಾಲೇ ಸಾಲು! ಅಲ್ಲದೆ ಈ ಘಾಟಿಯಲ್ಲಿ ಇದೊಂದು ಗೋಳು. ಒಂದು ಗುಡ್ಡ ಕುಸಿದರೆ, ಜೋರು ಮಳೆಗೆ ಮರ ಉರುಳಿಬಿದ್ದರೆ, ನಿದ್ದೆಯ ಮತ್ತಲ್ಲಿ ಯಾವನಾದರು ಟ್ಯಾಂಕರ್ನವ ಮಗುಚಿಕೊಂಡರೆ ಮುಗಿಯಿತು. ಅದರ ನಡುವೆ ಜೀವ ಬಿಟ್ಟು ರಾಂಗ್ ವೇನಲ್ಲಿ ಮುನ್ನುಗ್ಗಿ ಬರುವ ಹುಚ್ಚು ಚಾಲಕರು. ತಾವೂ ಸಿಲುಕಿ ಉಳಿದವರನ್ನೂ ಸಿಕ್ಕಿಸಿ ರಂಪ ರಾದ್ಧಾಂತ. ಓಹ್, ನಂದೂ ಇದೇ ಕತೆಯಲ್ವಾ?

ಕಳೆದ ತಿಂಗಳು ಹೋದಾಗ ತಿಂಡಿಗೆ ದೋಸೆ ಎರೆಯುವಾಗ ಅಮ್ಮ ಕೇಳಿದ್ದಳು ‘ಎಂತ? ಅಲ್ಲೇ ಎಲ್ಲಾರೂ ನೋಡ್ಕೊಂಡಿದಿಯಾ ಹೇಗೆ?’ ಏನಂತ ಉತ್ತರಿಸೋದು? ‘ನೋಡೂ, ಮೊದ್ಲು ಯಾವಾಗ ರಜೆ ಸಿಕ್ಕಿ ಇಲ್ಲಿ ಬರ್ತೀಯಾ ಅಂತ ಚಡಪಡಿಸ್ತಿದ್ದೆ. ಈಗ ಬಂದ್ರೂ ಸರಿ ಮಾತಾಡಲ್ಲ, ಇಡೀ ದಿನ‌ ಪೋನು. ನೆನಪಿರಲಿ. ನಮ್ದು ದೇವರು, ಭೂತ ಇರುವ ಮನೆ’ ಅಷ್ಟರಲ್ಲಿ ತಾನು ‘ಇಲ್ಲಮ್ಮಾ’ ಅನ್ನುತ್ತಾ ವಿಷಯ ಪ್ರಸ್ತಾಪವನ್ನು ಮನಸ್ಸಲಾಗಲೇ ಮುಂದೂಡಿದ್ದೆ. ‘ಈಗ ಬರುವುದೂ ಅಂತ ನೆನೆಸಿಕೊಂಡರೆ ಹಿಂಸೆಯಾಗ್ತದೆ. ಆ ಫಾಟಿ ರೋಡಂತೂ ಪೂರ್ತಿ ಹಾಳು. ಧೂಳು ಬೇರೆ! ಅದಲ್ಲದೆ ಯೋಜನೆ ಬರ್ತದಂತೆ. ಇಲ್ಲಿಂದ ಅಲ್ಲಿಗೆ ನೀರು ಸಾಗಿಸ್ತಾರಂತೆ. ಬೊಜ್ಜ’ ಅಂತೇನೋ ಸಮಜಾಯಿಷಿ ಕೊಟ್ಟ ನೆನಪು ಈಗ.

‘ನೀನು ಮೊದಲೇ ಹೇಳಿದ್ದರೆ ನನಗೇನು? ನಂಗೆ ಹೋಗಬೇಕು ಅನಿಸಿದರೆ ಹೋಗ್ತೇನೆ. ದೇವರಿಗಿಂತ ದೊಡ್ಡವ ಏನಾ ನೀನು?’ ಪಕ್ಕದವ ಯಾರನ್ನೋ ಉದ್ದೇಶಿಸಿ ಮಾತಾಡ್ತಾ ಇದ್ದ. ಅವನು ನೋಡುತ್ತಿದ್ದ ಕಡೆ ಯಾರೂ ಕಾಣಲಿಲ್ಲ. ಇವಂಗೆಂತ ಮರ್ಲಾ? ಜಾಗ್ರತೆ, ಹುಚ್ಚು ಹಿಡಿದವರು ಕೆಲವೊಮ್ಮೆ ಕೆರಳಿ ಕಚ್ತಾರಂತೆ. ಇಲ್ಲಿ ಈ ಕಾಡಲ್ಲಿ ಆಸ್ಪತ್ರೆ ಇರಲಿ ಸರಿಯಾಗಿ ಸಾಯಲೂ ಗತಿ ಇಲ್ಲ. ಸಾವು ಅಂದಾಕ್ಷಣ ಅವಳ ನೆನಪಾಯಿತು. ‘ನೋಡಿ ಇವ್ರೇ, ಹಾಗೆಲ್ಲ ಯೋಚಿಸಬಾರದು. ಈಗ ನಂಗೂ ಹಾಗೇ ಸುಮಾರು ಸಲ ಅನಿಸ್ತದೆ. ಅನಿಸಿದ್ದೆಲ್ಲ ಮಾಡೋಕಾದ್ರೆ ಸಾವಿರ ಸಲ ನಾನು ಪಡ್ಚ’

ನಂಗೆ ಶಾಕ್ ಹೊಡೆದಾಗಾಯ್ತು! ಪಕ್ಕದವನೇ! ‘ನಂಗೊತ್ತು, ನಿಮಗೆ ಆಶ್ಚರ್ಯ ಆಗ್ತದೆ ಅಂತ. ಏನು ಮಾಡೂದು ಮಾರಾಯ್ರೇ. ಇವ ಒಬ್ಬ ಕಿವಿ ಹತ್ರ ಬಂದು ಪಿರಿಪಿರಿ ಹೇಳಿದ್ರೆ ಎಷ್ಟೂಂತ ಸುಮ್ಮನಿರೋದು. ನೀವೇ ಹೇಳಿ’ ಅಂದ ಆತ. ಅವನ ಈಗ ಸರಿಯಾಗಿ ನೋಡಿದೆ. ಕಿವಿ ಪೂರ್ತಿ ಮುಚ್ಚುವಂತೆ ಶಾಲು ತಲೆಗೆ ಸುತ್ತಿಕೊಂಡಿದ್ದ. ಅಷ್ಟೇನೂ ನೀಟಾಗಿ ಕಾಣದ ಬಟ್ಟೆ ಶರ್ಟು ಪ್ಯಾಂಟು, ಸೊರಗಿದ ಮುಖ. ಪಕ್ಕನೆ ಯಾರೂ ನೋಡಿ ಮರೆಯಬಹುದಾದ ಮುಖ.’ಬಿಡಿ,ನನ್ನನ್ಯಾರು ಗುರುತಿಸ್ತಾರೆ? ಅದಲ್ಲದೆ ಇವೆಲ್ಲ ಆಗಿ ತುಂಬಾ ವರ್ಷ ಆಯ್ತು. ನಾನೇನು ಮಾಡಿಲ್ಲ ಮತ್ತೆ ಆದ್ರೂ..’ ಸುಮ್ಮನಾದ.

ಇವ ಯಾರನ್ನಾದ್ರೂ ಕೊಲೆ ಮಾಡಿದವನಾ? ದರೋಡೆ? ಅಥವಾ ಮಂತ್ರವಾದಿ? ಕರ್ಣಪಿಶಾಚಿ ಒಲಿಸಿಕೊಂಡವನಾ? ಮನೆಯಲ್ಲಾದ ಭೂತಕೋಲದಲ್ಲಿ ಭೂತ ಕುಣಿದದ್ದು ನೆನಪಾಯಿತು. ‘ಓಹ್, ನಿಮ್ಮನೇಲಿ ಭೂತದ ಮುಖವಾಡ ಉಂಟಾ? ಹಂಗಾರೆ ನೇಮ ನಿಷ್ಟೆ ಎಲ್ಲ ಭಾರೀ ಮಾರ್ರೇ. ನೀವೇಳುವುದೂ ಸರಿ. ನಾನು ಕೊಲೆ ಮಾಡಿದವನೇ. ಆದರೆ ನೀವು ಗ್ರಹಿಸಿದ ಹಾಗೆ ಚೂರಿಯಿಂದ ಕುತ್ತಿ ಎಲ್ಲ ಅಲ್ಲ ಮಾರ್ರೇ. ಎಂತ ನಾನೂ ಮನುಷ್ಯನೇ. ಅದರಿಂದಲೇ ಅಲ್ವಾ ಇವ ಗಂಟುಬಿದ್ದಿದ್ದು. ಶನಿ,ಶನಿ ಹಿಡಕೊಂಡ ಹಾಗೆ ಹಿಡಕೊಂಡು ಬಿಟ್ಟ.’ ಅವ ಮತ್ತೆ ಸುಮ್ಮನಾದ.

ದೇವರು, ಭೂತ ಇಲ್ಲ ಅಂತ ಹೈಸ್ಕೂಲಿನಲ್ಲಿ ವಾದಿಸಿದ್ದು, ಆಗ ವಿರೋಧ ಮಾಡುವವ ‘ಹಾಗಾದರೆ ನಿಮ್ಮ ಮನೆಯಲ್ಲಿ ಯಾಕೆ ಭೂತಕ್ಕೆ ನೆಣೆ ಇಡ್ತೀರಿ? ದಿನಾ ಪೂಜೆ ಯಾಕೆ ಮಾಡ್ತೀರಿ?’ ಕೇಳಿದ್ದು. ‘ಅವೆಲ್ಲ ಹಿರಿಯರ ನಂಬಿಕೆ. ನಾನು ಮಾಡ್ಬೇಕು ಅಂತ ಇಲ್ಲ ಅಂತ ಉತ್ತರ ಕೊಟ್ಟದ್ದು. ಬಹುಮಾನ ಬಂದರೂ, ಕೋಪದಿಂದ ಸಂಜೆ ಮನೆಗೆ ಹೋಗಿ ದೇವರ ಮಡಿ ಪೂರಾ ಹುಡಿ ಮಾಡಬೇಕಂತ ಉಪಾಯ ಮಾಡಿದ್ದು. ಮನೆಯ ಹೊಸ್ತಿಲು ದಾಟಿದಾಗ ಭಯ ಮೆಟ್ಟಿಕೊಂಡಂತಾಗಿ ಸುಮ್ಮನಾದದ್ದು.

ಈಗಲೂ ಅದೇ ಭಯ ಕಾಡ್ತಾ ಇದೆ. ಎಂತದರದ್ದೋ ಇರುವಿಕೆ ಇದ್ದ ಹಾಗೆ.ಅದೇ ಭಾವ.ಅದೇ ಹೆದರಿಕೆ. ಹಿಂದೆ ಮುಂದೆ ಎಲ್ಲಾ ನೋಡಿದೆ. ಕೆಲವರಿಗೆ ಒಳ್ಳೆ ನಿದ್ದೆ. ಮತ್ತೆ ಕೆಲವರು ಬಸ್ಸು ಇಳಿದು ಏನಾಗಿದೆ ಅಂತ ನೋಡಲು ಹೋಗಿದ್ದರು. ‘ಮರ ಬಿತ್ತಂತೆ. ಅದನ್ನು ಕಡಿದು ತೆರವು ಮಾಡೋಕೆ ಜನ ಬರ್ಬೇಕು ಘಾಟಿಯ ಕೆಳಗಿಂದ’ ಅಂತೆಲ್ಲ ಸುದ್ದಿ ಗಾಳಿಯಲ್ಲಿ ತೇಲಿ ಬಂತು. ಪವರ್ ಬ್ಯಾಂಕ್ ಇದೆಯಾ ಕೇಳಿದ ಒಬ್ಬನಿಗೆ ತಲೆಯಾಡಿಸಿದ್ದಾಯ್ತು. ಮತ್ತೆ ನಾನೆಂತ ಸಾಯುದಾ? ಎಷ್ಟೊತ್ತು ನಿಲ್ತದೆ ದೇವರಿಗೇ ಗೊತ್ತು. ಅದರೆಡೆಯಲ್ಲಿ ಕಳಿಸಿದ ಮೇಸೆಜಿಗೆ ಉತ್ತರ ಬಾರದಿದ್ದರೆ ಅವಳಿಗೂ ಬೇಜಾರು. ಆಮೇಲೆ ಸಮಾಧಾನ ಮಾಡೋದು. ಥತ್, ಈ ಚಕ್ರ ಯಾರಿಗೆ ಬೇಕು?

‘ಎಲ್ಲರಿಗೂ ಅವ್ರದ್ದೇ ಸಮಸ್ಯೆ ದೊಡ್ದು. ಇವ ಬಂದ ಮೇಲೆ ನೋಡಿ. ಹೆಂಡತಿ, ಮಕ್ಳು ಎಲ್ಲಾ ಹೋದ್ರು. ಇವ ಒಬ್ಬ ಇದಾನೆ. ಕೆಲವೊಮ್ಮೆ ನಿದ್ದೆ, ನಿದ್ದೆ ಅಂದ್ರೆ ಪೂರ್ತಿ ಅಲ್ಲ ತೂಕಡಿಸಿ ಏಳುವಾಗ್ಲೂ ಪಾಪ ನನ್ನ ನೋಡ್ತಾ ಕೂತಿರ್ತಾನೆ. ಹೋಗು ಮಾರಾಯ ಸ್ವಲ್ಪ ಮಲಗು. ನಾನು ಇರ್ತೇನೆ ಅಂದ್ರೂ ಕೇಳೂದಿಲ್ಲ. ಆಗ ಮಾತೇ ಇಲ್ಲ. ಸುಮ್ಮನೇ ತಲೆಯಾಡಿಸ್ತಾನೆ. ಪಾಪ,ಅನಿಸ್ತದೆ ನೋಡಿ’ ಪಕ್ಕದವ ಮತ್ತೆ ಮಾತು ಶುರು ಮಾಡಿದ್ದ‌.

ಯಾರು ಸಾರ್, ಇವ ಅಂದ್ರೆ? ಅಂತ ಕೇಳಬೇಕು ಅಂತ ಬಾಯಿ ತುದಿಗೆ ಬಂತು. ಕೇಳಿದರೆ ಸಿಕ್ಕಿಕೊಂಡ ಹಾಗೇ. ‘ಅಯ್ಯೋ, ಅದಕ್ಕೇನು? ನೀವು ನಂಬೂದಿಲ್ಲ ಅಷ್ಟೇ. ನೋಡಿ ಅವ ಈಗ ನಿಮಗೆ ತಾಗುವ ಹಾಗೆ ನಿಂತಿದಾನೆ ನೋಡಿ ನೋಡಿ.’ ಮೆಲ್ಲನೆ ಬೆನ್ನ ಮೂಳೆಯಿಂದ ಚಳಿ ಶುರುವಾದಂತಾಗಿ ನೋಡಿದೆ. ಯಾರೂ ಕಾಣಿಸಲಿಲ್ಲ.

‘ಬಿಡಿ, ಅವನು ನಿಮಗೆಲ್ಲ ಕಾಣ್ತಾನಾ. ಹಾಗೆ ಕಂಡ್ರೆ ನಾನ್ಯಾಕೆ ಹೀಗಿರ್ತಿದ್ದೆ? ಎಂತದೂ ಇಲ್ಲ. ಕಷ್ಟ ಅಂದಾಗ ಬೈಯ್ದು ಹಣ ಕೊಟ್ಟಿದ್ದ. ಹಣ ವಾಪಸ್ ಕೊಡ್ಲಿಲ್ಲ. ಇಲ್ಲ ಅಂತಲ್ಲ. ಬೇಡ ಅನಿಸಿತ್ತು. ಒಂಥರಾ ಸುಖ. ಸಾಯಲಿ ಬಡ್ಡೀ ಮಗ ಇನ್ನೂ ಇನ್ನೂ ಉಪದ್ರ ಕೊಡುವಾ ಅಂತ. ದಿನಾ ಮನೆ ಹತ್ರ ಬರುವವ. ಬೈಯ್ದಿದ್ದ ಅಲ್ಲ. ಕೋಪ ಇತ್ತು. ಅವನಿಗೂ ಕೊಟ್ಟವರು ಕೇಳ್ಲಿಕ್ಕೆ ಶುರು ಮಾಡಿದ್ರು. ನಂಗೆ ಎಂತಕೋ ಕೊಡ್ಬೇಕು ಅನಿಸ್ಲಿಲ್ಲ. ಒಂದ್ಸಲ ಮನೆ ಹತ್ರ ಬಂದಾಗ ಬೈಯ್ದು ಕಳಿಸಿದೆ. ಜನ‌ ಕಾಣಲೇ ಇಲ್ಲ. ಒಂದಿನ ಆಯ್ತು ಎರಡು ದಿನ ಆಯ್ತು ಮೂರನೇ ದಿನ ರಾತ್ರಿ , ಮಲಗಿದ್ದೆ. ಜೋರು ಬಾಯಾರಿಕೆ. ಗೊತ್ತಲ್ಲ ಈ ಸೆಕೆಗೆ. ಗಟ್ಟಿದೇನಾದ್ರೂ ತಿಂದ್ರೆ ನಡುರಾತ್ರಿ ಎಚ್ಚರ ಆಗ್ತದೆ. ನೀರು ಕುಡಿದ್ರೆ ಮೂತ್ರ ಮಾಡ್ಬೇಕು ಅನಿಸ್ತದೆ. ರಗಳೆ. ಹಾಗೆ ಎದ್ದು ನೀರು ಕುಡಿಲಿಕ್ಕೆ ಅಂತ ಫ್ರಿಜ್ ಹತ್ರ ಬಂದರೆ, ಮನೆ ಹೊರಗಡೆ ಗೇಟತ್ರ ಯಾರೋ ನಿಂತ ಹಾಗೆ ಆಯ್ತು. ನೋಡಿದ್ರೆ, ಇವ! ಈ ರಾತ್ರಿಲಿ ಎಂತ ಸಾವು ಇವಂದು ಅಂತ ಬೈಯ್ದೆ ಮೆಲ್ಲಗೆ. ಮನೆಯವರಿಗೆ ಎಚ್ಚರ ಆಗ್ಬಾರ್ದು ನೋಡಿ. ಹೋಗಲೇ ಇಲ್ಲ. ಆಸಾಮಿ. ಮತ್ತೆಂತ ಮಾಡುದು ಬಾ ಅಂತ ಒಳಗೆ ಕರ್ದೆ. ಬಂದು ಸೋಫಾದಲ್ಲಿ ಕೂತ್ಕೊಂಡ. ಮಲಗಲೂ ಇಲ್ಲ. ಅವಾಗಿಂದ ಜೊತೆಗೇ ಇದಾನೆ’ ಅವನು ಹೇಳುತ್ತಲೇ ಹೋದ.

ಇವನಿಗೆ ಏನಾಗಿದೆ? ಕತೆ ಕಟ್ತಾ ಇದಾನಾ? ಅಲ್ಲ ನಿಜವಾ? ಮಾತು ಬರಿಯ ಶಬ್ದಗಳಾಗಿ ಕಿವಿಗೆ ಬೀಳ್ತಾ ಹೋಯ್ತು. ಜೋರು ಭಯವಾಗತೊಡಗಿತು. ಆ ಹೊಳೆಯದ್ದು ಪ್ರೊಜೆಕ್ಟ್ ಬರುವುದು ಬೇಡ ಅಂತ ಜಾಥಾ ಮಾಡಿದಾಗ ಹೋಗಿ ಪೋಲೀಸರು ತುಂಬಿಕೊಂಡು ಹೋಗಿ ಒಂದಿಡೀ ರಾತ್ರಿ ಕೂರಿಸಿದ್ದಾಗಲೂ ಈ ತರಹ ಹೆದರಿಕೆ ಹುಟ್ಟಿರಲಿಲ್ಲ. ಅದೇ ನೆಪದಲ್ಲಿ ರಾಜಧಾನಿ ಕಂಬಳ ಸಮಿತಿ ಅಂತ ಕೋಣದ್ದು ಟೀ ಶರ್ಟು ಹಾಕಿ ನಡೆದಾಗ ಒಂದು ಲಾಠಿ ಪೆಟ್ಟು ಬಿದ್ದಾಗಲೂ ಹೆದರಿಕೆ ಆಗಿರಲಿಲ್ಲ. ಅವಾಗಲೇ ಅವಳು ಸಿಕ್ಕಿದ್ದು. ಮತ್ತೆ ನೆನಪು ಚಿಟ್ಟೆಯಾಯ್ತು. ಇದೆಲ್ಲ ಎಂತಕೆ ಮಾಡ್ತಿದೀನಿ ಅಂತ ಸರಿಯಾಗಿ ಗೊತ್ತಿರಲಿಲ್ಲ. ಅವಳು ಸಿಕ್ಕ ಮೇಲೆ ಆಸಕ್ತಿಯೂ ಕಮ್ಮಿಯಾಗಿತ್ತು. ಅದಲ್ಲದೆ ಸಂಬಂಧ‌ ನಿಭಾಯಿಸೋದು ಇರುವುದರಲ್ಲೇ ಕಷ್ಟದ ವಿಷಯ ಅಲ್ವಾ? ಅದಾದ ಮೇಲೆ ಅಲ್ವಾ ಬೇರೆ ಜಾತಿ, ಮಡಿ, ಭೂತದ ಕಟ್ಟು, ನಿತ್ಯಪೂಜೆ, ಒಬ್ನೇ ಮಗ, ತುಂಬಾ ಆಸ್ತಿ, ಯಾರೂ ಇಲ್ಲ ಅಂತೆಲ್ಲ ಸುಳಿಗಳು ಇರುವುದು ಮಂಡೆಗೆ ಹೋಗ್ಲಿಕೆ ಶುರುವಾದದ್ದು. ಸೀದಾ ಹೋಗುದು. ಮದ್ವೆ ಆಗ್ತೇನೆ ಹೇಳೂದು. ಬೇಡ ಅಂದ್ರೆ ನಿಮ್ದು ಆಸ್ತಿ ನೀವೇ ಇಟ್ಕೊಳಿ ಅನ್ನೂದು. ಓಹ್, ಬೈಕಿನ ಲೋನಿನ ಇಎಮ್ಐ ಅಪ್ಪನೇ ಕಟ್ತಾ ಇರೋದಲ್ವಾ? ಛೇ. ಈ ನಗರದಲ್ಲಿ ಎಲ್ಲಾ ಕಂತು ಕಟ್ತಾ ಮನೆ ಬಿಟ್ಟು ಬರೇ ಪ್ರೀತಿ ನಂಬಿ ಬದುಕಬಹುದಾ? ಕಳೆದ ಸಲವೂ ಈ ಸೀದಾ ಹೇಳುವ ಸಂಗತಿ ಒಳಗೇ ಉಳಿದಿತ್ತು. ಈ ಸಲವಾದರೂ ಧೈರ್ಯ ಮಾಡುವ ಅಂತ ಬಂದ್ರೇ. ಇವಂದೊಂದು.

ಓಹ್.ಐಡಿಯಾ. ಇವನ, ಆ ‘ಅವನ’ ಹತ್ರ ಭವಿಷ್ಯ ಕೇಳೋದು. ಹಣ್ಣೋ ಕಾಯೋ ಅಂತ.’ಅದೆಲ್ಲ ಹೇಗಾಗುತ್ತೆ? ಇವ ಎಂತ ಕುಟ್ಟಿಚಾತನಾ? ಪಾಪ ಮಾರಾಯ್ರೇ. ಹಾಗೆ ಎಲ್ಲ ಗೊತ್ತಾಗುದಿಲ್ಲ ಅವನಿಗೆ. ನಂಗೆ ಬೇಕಾದ್ದು ಕೆಲವೊಂದ್ಸಲ ಹೇಳ್ತಾನೆ. ಅಷ್ಟೇ. ಮೊನ್ನೆ ಲಾರಿ ಗುದ್ದಲಿಕ್ಕೆ ಇತ್ತು. ಹೇಳಲೇ ಇಲ್ಲ ಮಹರಾಯ. ಅವನಿಗೂ ಒಬ್ಬನೇ ಬೋರಾಗ್ತದೋ ಏನೋ. ಕೆಲವೊಮ್ಮೆ ನಾನು ಯಾವಾಗ್ಲೂ ಅಲ್ಲ ಮತ್ತೆ ಹಿಂಗೆ, ಹಿಂಗೆ ಸ್ವಲ್ಪ ಮಲಗ್ತೇನೆ. ಆಗ ಎಂತ ಮಾಡ್ಬೇಕು ಅವ. ಸುಮ್ಮನೆ ಕೂತಿರ್ಬೇಕು. ಇವತ್ತು ನೋಡಿ. ಹೋಗ್ಬೇಡಾ. ಮರ ಬೀಳ್ತದೆ. ಲೇಟಾಗ್ತದೆ ಅಂದ. ನಂಗೆ ಸಾಕಾಗಿದೆ ಮಾರಾಯ. ಆ ಕಾರ್ಣಿಕದ ಜಾಗಕ್ಕೆ ಹೋಗಿ ಪಾರು ಮಾಡು ಅಂತ ಬೊಬ್ಬೆ ಹೊಡೆದು ಪ್ರಾರ್ಥಿಸುವ ಅಂತ ಹೊರಟೆ. ಎಂತ ಮಾಡಿದ್ರೂ ನಾವು ಒಂದೇ ಅಂದಿದ್ದ. ಬಹುಶಃ ಅದಕ್ಕೆ ಮರ ಇವನೇ ಬೀಳ್ಸಿದ್ರೂ ಇರಬಹುದು’ ಹೇಳುತ್ತಾ ಪಕ್ಕದವ ನಕ್ಕ.

ಇವನದೇನಾದರೂ ಇರಲಿ. ಬಸ್ಸು ಹೊರಟರೆ ಸಾಕು ಅನಿಸಿತು. ದೂರದಲ್ಲೆಲ್ಲೋ ‘ಪೋಂ ಪೋಂ ಪೀ ಪೀ’ ಹಾರನ್ ಶಬ್ದ ಗಾಡಿಗಳು ಮೂವ್ ಆಗಲು ಶುರುವಾಗಿದೆ ಅನಿಸಿತು. ನೆಟ್ವರ್ಕ್ ಇಲ್ಲ ಬಿಟ್ಟರೆ ಈ ಕಾಯುವಿಕೆ ಬೇಸರ ತರಿಸಿರಲಿಲ್ಲ. ನಗರ ಜೀವನದ ಅಭ್ಯಾಸವಾ? ಊರಿಗೆ ಹೋಗಿ ಸೆಟ್ಲಾದರೆ ಇದಕ್ಕಿಂತ ನೆಮ್ಮದಿಯಾ? ಬೇರೆ ಸಮಸ್ಯೆ? ಅಪರೂಪದ ಬಿಯರಿಗೂ ಕತ್ತರಿ? ಅವಳು ?

‘ಬೇಕಾದರೆ ಒಂದು ಮಾಡುವ. ಒಂದು ಪ್ರಶ್ನೆ ಕೇಳಿ. ಒಂದೇ ಒಂದು. ಎಂತ ಹೇಳ್ತಾನೆ ನೋಡುವ. ಯಾವುದರ ಬಗ್ಗೆಯಾದ್ರೂ. ನಂಗೂ ಮೊದಲಿದು. ನಮ್ಮದೇ ಇದ್ರಲ್ಲಿ ಮುಳುಗಿರ್ತೆವಲ್ಲ. ಬೇರೆ ಎಂತವೂ ಗೊತ್ತಾಗಬೇಕು ಅಂತ ಅನಿಸ್ತದಾ ಹೇಳಿ?’ ಅಂದ ಪಕ್ಕದವ.

ಏನು ಕೇಳಲಿ ? ಕಂಬಳ‌ ನಿಷೇಧ ರದ್ಧಾಗಬಹುದಾ ಅಂತಲಾ? ಹೊಳೆಯ ಪ್ರೊಜೆಕ್ಟ್ ಬರ್ತದಾ ಇಲ್ವಾ ಅಂತಲಾ ? ಮೊನ್ನೆ ಊರಲ್ಲಾದ ಆ ಹುಡುಗಿಯ ಕೊಲೆಗಾರ ಯಾರು ಅಂತ ? ಅವಳು ನನಗೆ ಸಿಗ್ತಾಳಾ ಅಂತ ? ಈ ಸಲ ಅಪ್ರೈಸಲ್ ರೇಟಿಂಗ್ ಏನು ಅಂತ ? ನಾನು ಸ್ವಂತ ಮನೆ ಕಟ್ತೇನಾ ಅಂತ ? ವಾಪಸ್ ಊರಿಗೆ ಬರ್ತೇನಾ? ಇಲ್ಲೇ ಇರ್ತೇನಾ ? ಈ ಬಸ್ಸು ಊರಿಗೆ ಹೋಗಿ ಸೇರುತ್ತಾ! ಬೇಡ ಸಾರ್ ಯಾವುದಕ್ಕೂ ಉತ್ತರ ಅಂದೆ. ಇದು ಕೇಳಿದ್ರೆ ಅದೆಂತ ಅದು ಕೇಳಿದ್ರೆ ಇದೆಂತ ಅಂತೆಲ್ಲ ಗಜಿಬಿಜಿಯಾಗ್ತದೆ. ಇರ್ಲಿ ಹಾಗೆ. ಅವನಿಗೆ ಖುಷಿಯಾಯ್ತು ಅನಿಸಿತು. ಸುಮ್ಮನೆ ನನ್ನ ನೋಡಿ ನಕ್ಕ.

ಬಸ್ಸು ಹೊರಟಿತು. ಎರಡು ಗಂಟೆ ಲೇಟು.ಆಮೇಲೆ ಇಡೀ ಪ್ರಯಾಣ ಅವನು ಮಾತಾಡಲಿಲ್ಲ. ನನಗೂ ಮಾತಾಡಬೇಕು ಅನಿಸಲಿಲ್ಲ. ಇಳಿವ ಸ್ಟಾಪ್ ಬರುವಾಗ ಕೇಳಲೇಬೇಕು ಅನಿಸಿ ಕೇಳಿದೆ. ಅಲ್ಲ, ಈ ಇವನು ಇರುವುದು ಹೌದಾ? ನೀವು ನಂಬ್ತೀರಾ? ಸುಮ್ಮನೆ ಅಲ್ಲವಾ? ಅವನ ಮರೆತು ನೆಮ್ಮದಿಯಾಗಿ ಇರಬಾರ್ದಾ!

ಅವನು ಮತ್ತೆ ನಕ್ಕ, ‘ಅಲ್ಲ ಮಾರಾಯ್ರೇ, ನಿಮಗೆ ಆ ಹುಡುಗಿ ಸಿಗ್ತಾಳೆ ಅನ್ನುವುದು ನಂಬಿಕೆ. ಅವಳು ಸಿಕ್ಕರೆ ಜೀವನ ಸುಖವಾಗಿರುತ್ತೆ ಅಂತ ನಂಬಿಕೆ. ಒಪ್ತಾರೆ ಅನ್ನುವುದೂ ನಂಬಿಕೆ. ನಾಳೆ ಬೆಳಿಗ್ಗೆ ನೋಡ್ತೀರಿ ಅನ್ನುವುದೂ ನಂಬಿಕೆ. ನಿಮ್ಮನ್ನು ಬಿಟ್ಟು ಎಲ್ಲರೂ ಖುಷಿ ಖುಷಿಯಾಗಿ ಇದಾರೆ ಅಂತ ಕೂಡ ನಂಬ್ತೀರಿ. ನಂಬಿಕೆಯೇ ಜೀವನ ಅಲ್ವಾ ? ಇಷ್ಟು ದಿನ ಅವನಿಲ್ಲ ಅಂತ ನಂಗೆ ಅನಿಸಿಲ್ಲ. ಇನ್ನು ಇಲ್ಲ ಅಂದರೂ ಬಿಟ್ಟು ಹೋಗಲ್ಲ ಅಂತ ನಂಬ್ತೀನಿ. ಯಾಕೆಂದರೆ ಅವನು ನನ್ನ ಭಾರ. ನಿಮ್ದು ನಿಮಗೆ ಕಾಣ್ತಾ ಇಲ್ಲ ಅಷ್ಟೇ’
ಬಸ್ಸಿಳಿದೆ.

ಅವ ಹೌದೋ ಅಲ್ಲವೋ ಅಂತ ಕಿಟಕಿಯಿಂದ ತಿರುಗಿ ನೋಡಿದ ಹಾಗೆ ಕಂಡಿತು.ಮತ್ತೆ ಸಿಗ್ತಾನಾ ?

Read more from ಕಥೆ, ಕನ್ನಡ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments