ಹೌದು. ಸಿಎಂ ಸಿದ್ದರಾಮಯ್ಯನವರು ಎರಡನೇ ದೇವರಾಜ ಅರಸು…!
– ರಾಕೇಶ್ ಶೆಟ್ಟಿ
‘Law and order are the medicine of the politic body and when the politic body gets sick, medicine must be administered’ – ಕಾನೂನು ಸುವ್ಯವಸ್ಥೆಯು ರಾಜಕೀಯ ವ್ಯವಸ್ಥೆಗೆ ಔಷಧವಿದ್ದಂತೆ ಮತ್ತು ರಾಜಕೀಯ ವ್ಯವಸ್ಥೆಯೇ ಅನಾರೋಗ್ಯಕ್ಕೆ ಒಳಗಾದಾಗ, ಔಷಧವನ್ನು ನೀಡಲೇಬೇಕು” ಕಾನೂನು ಸುವ್ಯವಸ್ಥೆಯ ಕುರಿತು ಹೀಗೆ ಹೇಳುತ್ತಾರೆ ಡಾ. ಅಂಬೇಡ್ಕರ್. ಕರ್ನಾಟಕದ ಮಟ್ಟಿಗೆ ಸೂಕ್ತವಾದ ಮಾತಿದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ರೋಗಗ್ರಸ್ಥವಾಗಿ ಕುಳಿತಿದೆ. ಅದು ಯಾವ ಪರಿ ಕುಲಗೆಟ್ಟಿದೆಯೆಂದರೆ, ರಾಜಧಾನಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯ ಅನತಿದೂರದಲ್ಲೇ ರಾಬರಿಗಳು ನಡೆದಿರುವ ವರದಿಗಳಾಗುತ್ತಿವೆ. ಪೊಲೀಸ್ ಕಚೇರಿಯ ಬಳಿ ಬಿಡಿ, ಖುದ್ದು ಪೊಲೀಸರಿಗೆ ರಕ್ಷಣೆಯಿಲ್ಲದಂತಾಗಿದೆ. ರಸ್ತೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ರೌಡಿಗಳು ಮಚ್ಚು ಬೀಸುತ್ತಿದ್ದಾರೆ, ಗನ್ ಕಿತ್ತುಕೊಳ್ಳುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ, ಪೊಲೀಸರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು?
ನಾಲ್ಕೂವರೆ ವರ್ಷಗಳಲ್ಲಿ ಮೂವರು ಗೃಹ ಸಚಿವರನ್ನು ರಾಜ್ಯ ನೋಡಿದ್ದು ಬಹುಶಃ ಇದೇ ಮೊದಲಿರಬೇಕು. ಮೂವರ ಕಾಲದಲ್ಲೂ ಆದ ಸಾಧನೆ ಮಾತ್ರ ಸಾಲು ಸಾಲು ಹೆಣಗಳು ಉರುಳಿದ್ದು ಮಾತ್ರವೇ. ನಕ್ಸಲ್ ನಿಗ್ರಹ ಪಡೆಯ ಯೋಧನ ಗುಂಡಿಗೆ ದನಗಳ್ಳನೊಬ್ಬ ಪ್ರಾಣ ಕಳೆದಾಗಿನಿಂದ ಹಿಡಿದು ಮೊನ್ನೆ ಮೊನ್ನೆ ಬೆಂಗಳೂರಿನ ನಟ್ಟನಡು ರಸ್ತೆಯಲ್ಲಿ ಗಾಂಜಾ ಮಾರಾಟಗಾರರ ಜಾಲಕ್ಕೆ ಬಲಿಯಾದ ಸಂತೋಷ್ ವರೆಗೂ ರಾಜ್ಯದ ಕಾನೂನು ಅವ್ಯವಸ್ಥೆಯ ಕಥೆಗಳು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತವೆ.
ದನಗಳ್ಳನನ್ನು ಕೊಂದ ನಕ್ಸಲ್ ನಿಗ್ರಹ ಪಡೆಯ ಯೋಧನಿಗೆ ಸಿಕ್ಕಿದ್ದು ಅಮಾನತ್ತು/ಜೈಲಿನ ಬಹುಮಾನ. ಮೈಸೂರು, ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ, ಪೋಲೀಸರ ಮೇಲೆ ಹಲ್ಲೆಯಂತಹ ಗಂಭೀರ ಅಪರಾಧಗಳಿದ್ದ PFIನ 175 ಕೇಸುಗಳನ್ನು ಹಿಂತೆಗೆದುಕೊಂಡ ಸಿದ್ಧರಾಮಯ್ಯ ಜಿಹಾದಿ ಶಕ್ತಿಗಳಿಗೆ ರಕ್ತ ಹರಿಸಲು ರಹದಾರಿ ಮಾಡಿಕೊಟ್ಟರು. ಕೆಲವೇ ದಿನದಲ್ಲಿ ಮೂಡಬಿದಿರೆಯಲ್ಲಿ ಪ್ರಶಾಂತ ಪೂಜಾರಿಯನ್ನು ಹಾಡಹಗಲೇ ಕೊಂದರು. ಕೊಂದವರು ಅಕ್ರಮ ಕಸಾಯಿಖಾನೆಯ ಕಳ್ಳರು(ಯಾವ ಸಂಘಟನೆಗೆ ಸೇರಿದವರೆನ್ನುವುದನ್ನೇನು ಬಿಡಿಸಿ ಹೇಳಬೇಕಿಲ್ಲ). ಸಿದ್ಧರಾಮಯ್ಯನವರ ಸರ್ಕಾರ ಬಂದ ನಂತರವಂತೂ ಕರಾವಳಿಯಲ್ಲಿ ತಲವಾರು, ಮಾರಾಕಾಸ್ತ್ರಗಳನ್ನಿಡಿದು ಮನೆಯವರಿಗೆ ಬೆದರಿಸಿ ಕೊಟ್ಟಿಗೆಗಳಿಂದಲೇ ಗೋವುಗಳನ್ನು ಎತ್ತಿಕೊಂಡು ಹೋಗುವಷ್ಟು ಚಿಗುರಿಕೊಂಡಿದ್ದರು ಗೋ ಕಳ್ಳರು. ದೇವಸ್ಥಾನಗಳಲ್ಲಿ ಮಲಗಿರುತ್ತಿದ್ದ, ರಸ್ತೆಯಲ್ಲಿ ಓಡಾಡಿಕೊಂಡಿರುತ್ತಿದ್ದ ಗೋವುಗಳನ್ನು ಈ ಕಳ್ಳರು ಬಿಡದೇ, ಸ್ಕಾರ್ಪಿಯೋ, ಸುಮೋದಂತಹ ವಾಹನಗಳಲ್ಲಿಯೇ ತುಂಬಿಕೊಂಡು ಹೋಗುತ್ತಿದ್ದರೂ ಅದನ್ನು ತಡೆಯುವಲ್ಲಿ ಗೃಹ ಇಲಾಖೆ ಸೋತಿತ್ತು. ಒಮ್ಮೆ ಯೋಚಿಸಿ, ರಾಜ್ಯಸರ್ಕಾರದ ಕಾನೂನು ಸುವ್ಯವಸ್ಥೆ ನೆಟ್ಟಗಿದ್ದಿದ್ದರೆ, ಅಕ್ರಮ ಕಸಾಯಿಖಾನೆ, ಗೋವು ಕಳ್ಳ ಸಾಗಣೆಗಳ ವಿರುದ್ಧ ಪ್ರಶಾಂತ್ ಪೂಜಾರಿಯಂತಹ ಯುವಕರೇಕೆ ಬಡಿದಾಡಿ ಪ್ರಾಣಬಿಡಬೇಕಿತ್ತು? ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವ, ಕಳ್ಳರಿಗೆ ಗುಂಡಿಕ್ಕುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿರಲಿಲ್ಲವೇ?
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ, ರಾಜಕೀಯ ಹತ್ಯೆಗಳು ಹೀಗೆ ಸಾಲುಸಾಲಾಗಿ ನಡೆದ ಉದಾಹರಣೆಗಳೇ ಇರಲಿಲ್ಲ. ಅಂತಹದ್ದೊಂದು ಸಾಧನೆ ಮಾಡಿದವರು ಸಿಎಂ ಸಿದ್ಧರಾಮಯ್ಯನವರ ಸರ್ಕಾರ. ಕೇವಲ ಕರಾವಳಿಯೊಂದೇ ಅಲ್ಲ, ಶಿವಮೊಗ್ಗ, ಮೈಸೂರು, ಮಂಡ್ಯ, ಬೆಂಗಳೂರಿನಲ್ಲೂ ಈ ಹತ್ಯಾ ಸರಣಿಗಳು ನಡೆದವು. ಹಾಗೆಯೇ ಬಲಿಯಾದವರಳ್ಳಿ ಬಿಜೆಪಿ, ಜೆಡಿಎಸ್, ಎಸ್ಡಿಪಿಐ ಕಾರ್ಯಕರ್ತರೂ ಇದ್ದಾರೆ. ಕಳೆದವಾರ ವಿಧಾನಸೌಧದಿಂದ ಅನತಿದೂರದಲ್ಲಿರುವ ಚಿನ್ನಪ್ಪ ಗಾರ್ಡನ್ನಿನಲ್ಲಿ ಗಾಂಜಾ ವ್ಯಸನಿ ಕಮ್ ಮಾರಾಟಗಾರರು ಸಂತೋಷನ್ನು ಕೊಂದರು. ಗೃಹಸಚಿವರು, ಕೊಲ್ಲುವ ಉದ್ದೇಶವಿರಲಿಲ್ಲ, ಸ್ಕ್ರೀವ್ ಡ್ರೈವರ್ ನಿಂದ ಚುಚ್ಚಿದ್ದಾನಷ್ಟೆ ಎಂದು ಘೋಷಿಸಿ ತನಿಖಾಧಿಕಾರಿಗಳಿಗೆ ಪ್ರಕರಣದ ಎಷ್ಟಿರಬೇಕೆಂದು ಹುಕುಂ ಹೊರಡಿಸಿದರು.
ಕರಾವಳಿಯಲ್ಲಿ ನಡೆದ ಹತ್ಯೆಗಳಲ್ಲಿ ಮತೀಯ ಕಾರಣಗಳು ಮಾತ್ರವಲ್ಲ, ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯದ ಮಾಫಿಯಾ, ಮರಳು ಮಾಫಿಯಾದಂತಹ ದಂಧೆಗಳೂ ಕಾರಣವಾಗಿವೆ. ಮಂಗಳೂರಿನ ಜೈಲಿನಲ್ಲೇ ಹತ್ಯೆ ನಡೆದು, ಎರಡು ಮೂರು ಬಾರಿ ಮಾರಾಮಾರಿ ನಡೆದಿದೆ. ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೈದವರು ಗಾಂಜಾ ಅಮಲಿನಲ್ಲಿದ್ದರು ಎನ್ನುವ ಸುದ್ದಿಗಳಿದ್ದವು, ಬಹುತೇಕ ಹತ್ಯೆಗಳು ಹೀಗೆ ನಶೆಯನ್ನೇರಿಸಿಕೊಂಡೆ ನಡೆಸಲಾಗುತ್ತಿದೆ ಎಂದಾದರೇ, ಗಾಂಜಾ ಎನ್ನುವುದು ರಾಜ್ಯದಲ್ಲಿ ರಾಜಾರೋಷವಾಗಿ ಬಿಕಾರಿಯಾಗುತ್ತಿರಬೇಕಲ್ಲ! ಅದನ್ನೇಕೆ ಪೊಲೀಸ್ ಇಲಾಖೆಗೆ ತಡೆಯಲಾಗುತ್ತಿಲ್ಲ?
ಎಂತೆಂತಹ ಅಪರಾಧಿಗಳು, ರೌಡಿಗಳ ಹೆಡೆಮುರಿ ಕಟ್ಟಿದ ಕರ್ನಾಟಕ ಪೊಲೀಸರಿಗೆ ಜಿಹಾದಿ ಶಕ್ತಿಗಳು, ಮಾದಕ ದ್ರವ್ಯ ಮಾರಾಟ ಜಾಲವನ್ನು ಬುಡಸಮೇತ ಕಿತ್ತೆಸೆಯುವುದು ಕಠಿಣ ಕೆಲಸವಲ್ಲ. ವೃತ್ತಿ ಗೌರವ, ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಿ, ಕೈಗಳನ್ನು ಕಟ್ಟಿ ಹಾಕಿದರೇ ಪೊಲೀಸರು ತಾನೇ ಏನು ಮಾಡಬಲ್ಲರು ಹೇಳಿ? ಯಶವಂತಪುರದ ರೌಡಿಯೊಬ್ಬನನ್ನು ಎನ್ಕೌಂಟರ್ ಮಾಡಿದ ದಿಟ್ಟ ಅಧಿಕಾರಿ DYSP ಗಣಪತಿಯವರ ಗತಿಯೇನಾಯಿತು ಗೊತ್ತಲ್ಲ. ಅದೇ ಎನ್ಕೌಂಟರ್ ಅವರ ವೃತ್ತಿ ಬದುಕು ಹಾಗೂ ಅಂತಿಮವಾಗಿ ಜೀವಕ್ಕೆ ಸಂಚಕಾರ ತಂದಿತು. ಅನುಮಾನಾಸ್ಪದವಾಗಿ ಸಾವಿಗೀಡಾದರು.
ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಪ್ರವೀಣ್ ಸೂದ್ ಅವರನ್ನು ಧಿಡೀರ್ ಎಂದು ಎತ್ತಂಗಡಿ ಮಾಡಿದರು. ಕಾರಣ ದಕ್ಷತೆಯಿಂದ ಕೆಲಸ ಮಾಡಿದ್ದು. ಜೈಲಿನ ಅಕ್ರಮಗಳನ್ನು ಬಯಲಿಗೆಳೆದ ಅಧಿಕಾರಿ ರೂಪಾ ಅವರಿಗೂ ಸಿಕ್ಕಿದ್ದು ವರ್ಗಾವಣೆಯ ಬಹುಮಾನವೇ. ಪೊಲೀಸರಿಂದ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ಕೋಮುಗಲಭೆಯಲ್ಲಿ ಬೇಕಾಗಿದ್ಡ ಸೊ-ಕಾಲ್ಡ್ ಅಲ್ಪಸಂಖ್ಯಾತ ಸಮುದಾಯದ ಆರೋಪಿಯನ್ನು ಬಂಧಿಸಿದ ತಪ್ಪಿಗಾಗಿ ದಕ್ಷಿಣ ಕನ್ನಡದ ದಕ್ಷ ಅಧಿಕಾರಿಯೊಬ್ಬರನ್ನು ರಾತ್ರೋರಾತ್ರಿ ಈ ಸರ್ಕಾರ ವರ್ಗಾವಣೆ ಮಾಡಿತ್ತು, ಕಡೆಗೆ ಪೊಲೀಸ್ ಸಿಬ್ಬಂದಿಗಳೇ ಪ್ರತಿಭಟನೆಗಿಳಿದು ಅದನ್ನು ರದ್ದು ಮಾಡಿಸಿದ್ದಂತಹ ಘಟನೆಗೂ ರಾಜ್ಯ ಸಾಕ್ಷಿಯಾಗಿದ್ದು ಸಿದ್ಧರಾಮಯ್ಯನವರ ಸಾಧನೆ. ಖುದ್ದು ಪೊಲೀಸ್ ಇಲಾಖೆಯೇ ಪ್ರತಿಭಟನೆಗಿಳಿದು ಇತಿಹಾಸ ನಿರ್ಮಿಸಿದ ಸರ್ಕಾರವೂ ಸಿದ್ಧರಾಮಯ್ಯನವರದ್ದೇ. ಪೊಲೀಸ್ ಇಲಾಖೆಯನ್ನು ಈ ಪರಿ ಹದಗೆಡಿಸಿ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವಿದ ಸಾಧನೆಯ ದೃಷ್ಟಿಯಿಂದ ಸಿಎಂ ಸಿದ್ಧರಾಮಯ್ಯನವರನ್ನು ಎರಡನೇ ದೇವರಾಜ ಅರಸು ಎನ್ನಬಹುದು.
ದಿವಗಂತ ದೇವರಾಜ ಅರಸು ಅವರ ಸಾಧನಗೆಳು ಹಲವರಿಬಹುದು. ಆದರೆ ಅವರ ಕಾಲದಲ್ಲಿ ಕಾನೂನು ಅವ್ಯವಸ್ಥೆಯ ಸಾಧನೆಗಳೂ ಅಷ್ಟೇ ಕೆಟ್ಟದಾಗಿವೆ. ರೌಡಿಗಳ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ಆಗ ದೂರನ್ನು ತೆಗೆದುಕೊಳ್ಳುತ್ತಿರಲಿಲ್ಲ. ದೂರು ತೆಗೆದುಕೊಂಡರೆ ‘ಬುದ್ದಿ’ಯವರ ಕೋಪಕ್ಕೆ ಗುರಿಯಾಗಬೇಕಲ್ಲ ಎನ್ನುವುದು ಪೋಲೀಸರ ಅಳುಕಾಗಿತ್ತು. ಬಂಧಿಸಲು ಬಂದ ಪೊಲೀಸರನ್ನೇ ಮಚ್ಚು ಹಿಡಿದು ಅಟ್ಟಾಡಿಸಿದ್ದ ಜಯರಾಜನ ರೌಡಿಯೊಂದಿಗೇ ಅರಸು ಸಾಹೇಬರು ಬೆಳಗ್ಗೆ ಲಾಲ್ ಬಾಗಿನಲ್ಲಿ ಜಾಗಿಂಗ್ ಹೋಗುತ್ತಿದ್ದರಂತೆ! ಬೇರೆ ಸರ್ಕಾರಗಳಲ್ಲಿ ಕಿಚನ್ ಕ್ಯಾಬಿನೇಟುಗಳಿದ್ದಂತೆ ಅರಸು ಅವರಿಗೆ ರೌಡಿ ಕ್ಯಾಬಿನೆಟ್ ಇತ್ತೆಂದರೆ ತಪ್ಪಾಗಲಾರದು. ಅವರ ಇಂದಿರಾ ಬ್ರಿಗೇಡಿನ ಸೂರಿನಡಿಯಲ್ಲೇ ಅವರೆಲ್ಲರನ್ನೂ ಸಾಕಿಕೊಂಡಿದ್ದರು. ಅರಸು ಅವರ ಕಾಲದಲ್ಲೂ ಸ್ವಾಭಿಮಾನವಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇಂತಹ ಲೆಜ್ಜೆಗೆಟ್ಟ ಕಾನೂನು ಅವ್ಯವಸ್ಥೆಯ ವಾತಾವರಣದಲ್ಲಿ ನಾನು ಕಾರ್ಯ ನಿರ್ವಹಿಸಲಾರೆ ಎಂದು ರಾಜೀನಾಮೆ ಬಿಸಾಕಿ ಹೊರಬಂದಿದ್ದರು,ಸಿದ್ಧರಾಮಯ್ಯನವರ ಕಾಲದಲ್ಲೂ ಅನುಪಮಾ ಶೆಣೈ ಅಂತವರು ಹೊರಬಂದಿದ್ದಾರೆ
ರಾಜಕೀಯ ಹತ್ಯೆಗಳು ಮಾತ್ರವಲ್ಲ. ಪೊಲೀಸ್ ಅಧಿಕಾರಿಗಳು, IAS ಅಧಿಕಾರಿಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಸಾಲು ಸಾಲು ಘಟನೆಗಳು ನಡೆದಿದ್ದು ಸಿದ್ಧರಾಮಯ್ಯನವರ ಅವಧಿಯಲ್ಲಿಯೇ. ಬೇರೆ ಎಲ್ಲಾ ಹತ್ಯೆ, ಅನುಮಾನಾಸ್ಪದ ಸಾವುಗಳನ್ನು ಬದಿಗಿಟ್ಟು ನೋಡಿದರೂ, ಸಿದ್ಧರಾಮಯ್ಯನವರ ನೆಚ್ಚಿನ ಬುದ್ಧಿಜೀವಿಗಳ ಪ್ರಾಣಕ್ಕೂ ರಾಜ್ಯದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಸಂಶೋಧಕ ಕಲ್ಬುರ್ಗಿಯವರನ್ನು ಹಾಡಹಗಲೇ ಅವರ ಮನೆಯಲ್ಲಿಯೇ ಗುಂಡಿಟ್ಟು ಕೊಲ್ಲಲಾಯಿತು. ಸರ್ಕಾರ ಅವರ ಸಾವನ್ನು ರಾಜಕೀಯವಾಗಿ ಬಳಸಿಕೊಂಡಿತೇ ಹೊರತು, ಸರ್ಕಾರದ ಯೋಗ್ಯತೆಗೆ ಹಂತಕರನ್ನು ಇದುವರೆಗೂ ಬಂಧಿಸಲಾಗಿಲ್ಲ. ಖುದ್ದು ಕಲ್ಬುರ್ಗಿಯವರ ಕುಟುಂಬಸ್ಥರೇ ರಾಜ್ಯಸರ್ಕಾರದ ಮೇಲೆ ನಮಗೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನೂ ಮರ್ಯಾದೆ ಬಿಟ್ಟು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಹಂತಕರ ಪತ್ತೆಹಚ್ಚುವುದರಲ್ಲಿ ಸರ್ಕಾರಕ್ಕೆ ಆಸಕ್ತಿಯೇ ಇದ್ದಂತಿಲ್ಲ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಮುತುವರ್ಜಿ ವಹಿಸಿ ಗೌರಿ ಹೆಸರಿನ ಸಮಾವೇಷ ಮಾಡಿಕೊಂಡು ಅದರಲ್ಲಿ ಮೋದಿಯವರನ್ನು ಬಯ್ಯುತ್ತ ಖುಷಿ ಪಡುತ್ತಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಯ ಹೊಣೆ ರಾಜ್ಯಸರ್ಕಾರದ್ದೋ ಕೇಂದ್ರ ಸರ್ಕಾರದ್ದೋ ಎನ್ನುವುದೂ ಸಿಎಂ ಸಾಹೇಬರಿಗೆ ಮರೆತುಹೋಗಿರಬಹುದು.
ಸಿದ್ಧರಾಮಯ್ಯನವರು ಅಧಿಕಾರಕ್ಕೇರುವ ಸಂದರ್ಭದಲ್ಲಿ ಅವರ ಆಸ್ಥಾನ ಪಂಡಿತರು, ಎರಡನೇ ದೇವರಾಜ ಅರಸು ಬಂದರೆಂದು ಜೈಕಾರ ಹಾಕಿದ್ದರು. ಹಿಂಬಾಲಕರು, ಆಸ್ಥಾನ ಪಂಡಿತರನ್ನು ಸಿದ್ಧರಾಮಯ್ಯನವರು ನಿರಾಸೆ ಮಾಡಿಲ್ಲ, ಹೇಗಿದ್ದರೂ ಒಳ್ಳೆಯ ಕೆಲಸಗಳ ಮೂಲಕ ಅರಸು ಅವರೊಂದಿಗೆ ಹೋಲಿಸಿಕೊಳ್ಳುವುದು ಕನಸಿನ ಮಾತು ಹಾಗಾಗಿ ಕಾನೂನು ಸುವ್ಯವಸ್ಥೆಯನ್ನು ಕಾನೂನು ಅವ್ಯವಸ್ಥೆಯನ್ನಾಗಿಸಿದ್ದ ಅವರ ಸಾಧನೆಯನ್ನೇ ಮೀರಿಸುವ ಶಪಥ ಮಾಡಿದ್ದರೇನೋ. ಕಾನೂನು ಅವ್ಯವಸ್ಥೆಯಲ್ಲಿ ದಾಖಲೆ ನಿರ್ಮಿಸಿ “ನುಡಿದಂತೆ ನಡೆಯುತ್ತಿದ್ದಾರೆ ಸಿಎಂ ಸಿದ್ಧರಾಮಯ್ಯ “