– ಸಂತೋಷ್ ತಮ್ಮಯ್ಯ

ಕರ್ನಾಟಕ ಟೂರಿಸಂ ವೆಬ್ಸೈಟಿನಲ್ಲಿನ್ನು ಕಲ್ಲಿನ ರಥದ ಚಿತ್ರ ಇರುವುದಿಲ್ಲವೇ? ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಸರನ್ನು ಸರ್ಕಾರ ಅದಿಲ್ ಶಾಹಿ ವಿಶ್ವವಿದ್ಯಾಲಯ ಎಂದು ಬದಲಾಯಿಸುವುದೇ? ಹಂಪಿ ಉತ್ಸವ ನಿಂತುಹೋಗುತ್ತಾ? ಬರೀದ್ ಶಾಹಿಗಳ ಬೆರಕೆ ಭಾಷೆ ಉರ್ದು ರಾಜ್ಯದ ಅಕೃತ ಆಡಳಿತ ಭಾಷೆಯಾಗಿಹೋಗುತ್ತಾ? ವಾರ್ತಾ ಇಲಾಖೆ ಸ್ವತಃ ತಾನೇ ನಿಂತು ಇಮಾದ್ ಶಾಹಿ ಪುಂಡರ ಸಿನೆಮಾವನ್ನು ನಿರ್ಮಿಸುತ್ತದಾ? ಅಂಜನಾದ್ರಿ, ಮಾತಂಗ, ಮಾಲ್ಯವಂತ ಬೆಟ್ಟಗಳಲ್ಲಿನ್ನು ಬಹಮನಿ ಸುಲ್ತಾನರ ಕ್ರೌರ್ಯಗಳ ನೆರಳು ಬೆಳಕಿನ ಪ್ರದರ್ಶನಾಟ ನಡೆಯುತ್ತದಾ? ಟಿಬಿ ಡ್ಯಾಮಿಗೆ ಮರುನಾಮಕರಣ ಮಾಡುವ ಉದ್ದೇಶವೂ ಇರಬಹುದೇ?
ಹೀಗೆ ಹಲವು ಸಂದೇಹಗಳು ಮೂಡುತ್ತಿದೆ. ಮೊದಲಾಗಿದ್ದರೆ ಇವೆಲ್ಲಾ ಹುಚ್ಚು ಕಲ್ಪನೆ ಎಂದುಕೊಳ್ಳಬಹುದಿತ್ತು. ಆದರೆ ಈಗ ಹಾಗನಿಸುತ್ತಿಲ್ಲ. ಏಕೆಂದರೆ ಇನ್ನೈದು ವರ್ಷ ರಾಜ್ಯವನ್ನು ಕಾಂಗ್ರೆಸ್ ಆಳಿದರೆ ಇವೆಲ್ಲವೂ ಸಂಭವಿಸಬಹುದು. ಅಲ್ಲದೆ ಈಗ ನಾವಂತೂ ಪೋಲೆಂಡಿನಲ್ಲಿ ಹಿಟ್ಲರ್ ಜಯಂತಿ ನಡೆದರೂ, ಅಮೆರಿಕಾದಲ್ಲಿ ತಾಲೀಬಾನ್ ಫೆಸ್ಟ್ ನಡೆದರೂ ಅಚ್ಚರಿ ಹುಟ್ಟದಷ್ಟು ಸಂವೇದನಾರಹಿತರಾಗಿಬಿಟ್ಟಿದ್ದೇವೆ. ಹೀಗಿರುವಾಗ ಬಹಮನಿ ಉತ್ಸವ ನಡೆದರೆ ಅಚ್ಚರಿಯೇನೂ ಇಲ್ಲ.
ಹಾಗೆ ನೋಡಿದರೆ ಕಾಂಗ್ರೆಸಿಗೆ ಇಂಥದ್ದೊಂದು ಯೋಚನೆ ಸ್ವಲ್ಪತಡವಾಗಿಯೇ ಬಂದಿದೆ. ನಿಜವಾಗಿಯೂ ಕಾಂಗ್ರೆಸಿಗರಿಗೆ ಟಿಪ್ಪುಗಿಂತ ಮೊದಲು ಬಹಮನಿಗಳೇ ನೆನಪಿಗೆ ಬರಬೇಕಿತ್ತು. ಅದಕ್ಕೊಂದು ಕಾರಣವಿದೆ. ಬಹಳ ವರ್ಷಗಳ ಕಾಲ ಕಾಂಗ್ರೆಸಿಗರಿಗೆ ಮತ್ತು ಅವರ ಕೂಲಿಗೆ ದುಡಿಯುವ ಬುದ್ಧಿಜೀವಿಗಳಿಗೆ ಬಹಮನಿಗಳ ಚರಿತ್ರೆಯನ್ನು ಒಂದು ವೈಚಾರಿಕ ಚೌಕಟ್ಟಿಗೆ ತರಲು ಕಷ್ಟವಾಗಿತ್ತು. ಏಕೆಂದರೆ ಇವರಿಗೆಲ್ಲಾ ಬಹಮನಿಗಳನ್ನು ನಿಜಾಂ ಶಾಹಿ, ಅದಿಲ್ ಶಾಹಿ ಇಮಾದ್ ಶಾಹಿ, ಬರೀದ್ ಶಾಹಿ ಮತ್ತು ಕುತುಬ್ ಶಾಹಿ ಎಂದು ವಿಂಗಡಿಸಬೇಕೋ ಅಥವಾ ಬಹಮನಿ ಎಂದು ಒಗ್ಗೂಡಿಸಿ ಅವರಲ್ಲಿ ಎಂದೂ ಇಲ್ಲದ ಒಗ್ಗಟ್ಟನ್ನು ಮೂಡಿಸಬೇಕೋ ಎಂಬ ಬಗ್ಗೆ ಭಯಂಕರ ಗೊಂದಲವಿತ್ತು. ಕೆಲವರು ಈ ಐದು ಸಂಸ್ಥಾನಗಳನ್ನು ಪ್ರತ್ಯೇಕ ಎಂದು ವಿಂಗಡಿಸಲು ಪ್ರಯತ್ನಿಸಿದಷ್ಟೂ ಶಾಹಿಗಳ ಜನ್ಮತಃ ಗುಣಗಳಾದ ಅನೈತಿಕ ಸಂಬಂಭ, ರಕ್ತಸಂಬಂಗಳ ಕೊಲೆ, ದರೋಡೆ, ಕ್ರೌರ್ಯಗಳೇ ತಲೆಹಾಳುಮಾಡುತ್ತಿದ್ದವು. ಅಲ್ಲದೆ ವಿದೇಶಿ ಪ್ರವಾಸಿಗಳಿಂದ ವರ್ಣೀಸಲ್ಪಟ್ಟ ವಿಜಯನಗರ ವೈಭವವನ್ನು ಸಾರಾಸಗಟಾಗಿ ನಿರಾಕರಿಸುವ ಸ್ಥಿತಿಯಲ್ಲೂ ಎಡಪಂಥೀಯರಿರಲಿಲ್ಲ. ಮುಸ್ಲಿಂ ಅರಸರನ್ನು ನೇರಾನೇರಾ ವಿವರಿಸಲು ಕೈ ಬಾರದ ಕಾರಣ ಇವರಿಗೆಲ್ಲಾ ಬಹಮನಿ ಸುಲ್ತಾನರು ಸಾಂಸ್ಕೃತಿಕ, ಸಾಮಾಜಿಕ ಸುಧಾರಕರಂತೆಯೂ, ವಿಜಯನಗರದಲ್ಲಿ ಶೈವ-ವೈಷ್ಣವ ಜಗಳಗಳಿದ್ದಂತೆಯೂ ಇತಿಹಾಸ ರಚನೆಯಾಯಿತು. ಪ್ರಾಜ್ಞರು ಆಗಲೇ ಬಹಮನಿಗಳ ವೈಭವಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಎಚ್ಚರಿಸಿದ್ದರು. ಆ ವೇದಿಕೆಯನ್ನು ಬಳಸುವ ಕಾಲ ಪಕ್ವವಾಗಿರುವುದರಿಂದ ಬಹಮನಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ! ಅದಕ್ಕೆ ಸಿದ್ಧರಾಮಯ್ಯ ಕಾಲಕ್ಕಿಂತ ಯೋಗ್ಯ ಕಾಲ ಬೇರಾವುದಿದೆ? ಹಾಗಾಗಿ ಬಹಮನಿ ಉತ್ಸವ ನಡೆದರೂ ನಡೆಯಬಹುದು. ಅದರಲ್ಲಿ ಅಚ್ಚರಿಯೇನೂ ಇಲ್ಲ.
ಇರಲಿ, ಸರಕಾರದ ನೆಚ್ಚಿನ ಬಹಮನಿಗಳ ಸಾಧನೆಗಳನ್ನು ಕೊಂಚ ಮೆಲುಕು ಹಾಕೋಣ.
ಮರುಭೂಮಿಯಲ್ಲಿ ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದವರು ದೆಹಲಿಯಲ್ಲಿ ಅರಸನೆನಿಸಿಕೊಂಡಿದ್ದರು. ಮೆತ್ತೆಯಲ್ಲಿ ಕುಳಿತಾಕ್ಷಣ ಕಳ್ಳನ ಬುದ್ಧಿ ಬದಲಾಗುವುದೇ? ದೆಹಲಿ ಪುಂಡಪೋಕರಿಗಳ ತಾಣವಾಯಿತು. ಮತಾಂತರ, ಬಲಾತ್ಕಾರ, ಕ್ರೌರ್ಯಗಳು ಮೇರೆ ಮೀರಿದವು. ಅದೇ ಹೊತ್ತಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಇಸ್ಲಾಮಿನ ಉದ್ದೇಶ ಈಡೇರಿಸಲು ದಕ್ಷಿಣಕ್ಕೆ ಬಂದಿದ್ದ. ಮೊಟ್ಟಮೊದಲ ಬಾರಿಗೆ ದಕ್ಷಿಣ ಇಸ್ಲಾಮಿನ ಉರಿಯನ್ನು ಅನುಭವಿಸಿತು. ಮುಂದೆ ತುಘಲಕನೂ ಇಸ್ಲಾಮಿಗಾಗಿ ಸೇನೆ ಕಳುಹಿಸಿ ಪ್ರಚಾರ ಕಾರ್ಯ ಕೈಗೊಂಡ. ಪುಣ್ಯಕ್ಕೆ ಆ ಹೊತ್ತಲ್ಲಿ ಇಸ್ಲಾಂ ಎಂದರೆ ಕೇವಲ ವೈಯಕ್ತಿಕ ನೆಲೆಯಲ್ಲಿ ಪಾಲಿಸಲ್ಪಡುವ ಧಾರ್ಮಿಕ ನಂಬಿಕೆಯದ್ದಲ್ಲ ಎಂದು ಅರಿತ ದಾರ್ಶನಿಕರಿದ್ದರು. ಅವರೆಲ್ಲರೂ ಆ ಬೆಂಕಿಯನ್ನು ಆರಿಸಲು ಬಲಾಢ್ಯ ಹಿಂದೂ ಸಾಮ್ರಾಜ್ಯದ ಆವಶ್ಯಕತೆಯನ್ನು ಮನಗಂಡರು. ಪರಿಣಾಮ ವಿಜಯನಗರ ಹುಟ್ಟಿತು. ಇಷ್ಟಲ್ಲದೆ ವಿರೂಪಾಕ್ಷನಾಣೆಗೂ ವಿಜಯನಗರ ಸಾಮ್ರಾಜ್ಯ ನಿರ್ಮಾಣದ ಉದ್ದೇಶ ರಸ್ತೆ ಬದಿಗಳಲ್ಲಿ ಮುತ್ತುರತ್ನಗಳನ್ನು ಮಾರುವುದಂತೂ ಆಗಿರಲೇ ಇಲ್ಲ. ಹಾಗೆ ನಿರ್ಮಾಣವಾದ ಹಿಂದೂ ಸಾಮ್ರಾಜ್ಯ ತುರ್ಕರ ದಾಳಿಯನ್ನು ಉತ್ತರಕ್ಕೆ ತಳ್ಳುತ್ತಾ ಹೋದಂತೆ ವಿಜಯನಗರವನ್ನು ಹಣಿಯಲು ಮುಸ್ಲಿಮರು ಒಟ್ಟಾದರು. ಅದೇ ಬಹಮನಿ. ಹಿಂದು ರಕ್ಷಣೆಗೆ ವಿಜಯನಗರವಿದ್ದಂತೆ ಇಸ್ಲಾಂ ಹರಡಲು ಅಲ್ ಖೈದಾದಂಥಾ ಬಹಮನಿ.
ವಿಜಯನಗರ ಸ್ಥಾಪನೆಯಾದ ವೊದಲ ದಿನದಂದೇ ಬಹಮನಿಗಳು ಕುದಿಯತೊಡಗಿದರು. ತಾಳಿಕೋಟೆಯಲ್ಲಿ ಅದು ವಿಕೋಪಕ್ಕೆ ಹೋಯಿತು. ಅದರ ನಡುವೆ ಅದೆಷ್ಟೋ ಯುದ್ಧಗಳು ನಡೆದವು. ದೇವರಾಯನ ಮರಣಾನಂತರ ೧೪೨೨ರಲ್ಲಿ ವೀರವಿಜಯರಾಯ ವಿಜಯನಗರದ ರಾಜನಾದ. ಆ ಹೊತ್ತಲ್ಲಿ ಅಹ್ಮದ್ ಶಾ ಎಂಬವನು ದಖನ್ನಲ್ಲಿ ಇಸ್ಲಾಂ ಪ್ರಸರಣದ ಹೊಣೆ ಹೊತ್ತು ಸುಲ್ತಾನನಾಗಿದ್ದ. ದೆಹಲಿಯ ಸೇನೆಯ ನೆರವು ಪಡೆದ ಅಹ್ಮದ್ ಶಾ ಹಿಂದು ಮುಂದು ನೋಡದೆ ವಿಜಯನಗರಕ್ಕೆ ಮುತ್ತಿಗೆ ಹಾಕಿದ. ಯುದ್ಧ ಸಿದ್ಧತೆಯಿಲ್ಲದ ರವಿಜಯರಾಯನ ಸೇನೆ ತುಂಗಭದ್ರ ತೀರದಿಂದ ಹಿಮ್ಮೆಟ್ಟುತ್ತಾ ಬಂತು. ಹಂಪಿ ಮುಸಲ್ಮಾನರ ವಶವಾಯಿತು. ಸೇನೆ ಇಲ್ಲದ ರಾಜಧಾನಿಯಲ್ಲಿ ಇಸ್ಲಾಂ ಹುಚ್ಚೆದ್ದು ಕುಣಿಯಿತು. ಹೆಂಗಸರು ಮಕ್ಕಳೆನ್ನದೆ ಸುಲ್ತಾನ್ ಸೈನ್ಯದ ಕತ್ತಿಗೆ ಬಲಿಯಾದರು. ಹಿಂದು ಎಂದು ಕಂಡವರನ್ನೆಲ್ಲಾ ಕೊಲ್ಲಲಾಯಿತು. ಆಗ ತಾನೇ ಕಟ್ಟಲ್ಪಡುತ್ತಿದ್ದ ದೇವಸ್ಥಾನಗಳನ್ನು ಕೆಡವಲಾಯಿತು. ರಾಜಧಾನಿಯನ್ನು ಉಳಿಸಿಕೊಳ್ಳಲು ವೀರವಿಜಯ ಅಪಾರ ಕಪ್ಪವನ್ನು ಸುಲ್ತಾನನಿಗೆ ನೀಡಬೇಕೆಂದು ಆಜ್ಞೆ ಹೊರಡಿಸಲಾಯಿತು. ತಲೆತಪ್ಪಿಸಿಕೊಂಡ ವೀರವಿಜಯ ಅಪಾರ ಸಂಪತ್ತನ್ನು ತುರ್ಕನ ಮಡಿಲಿಗೆ ಸುರಿದ. ಆದರೆ ಇಸ್ಲಾಂ ಉದ್ದೇಶ ಅದಷ್ಟೇ ಆಗಿರಲಿಲ್ಲ. ರಾಜನನ್ನು ತನ್ನ ಕಾಲಕೆಳಗೆ ಹಾಕಿ ತುಳಿದ ಸುಲ್ತಾನ ರಾಜಧಾನಿಯಲ್ಲಿ ಮೂರು ದಿನ ವಿಜಯೋತ್ಸವವನ್ನಾಚರಿಸಿ ತುಂಗಭದ್ರೆಯನ್ನು ದಾಟಿದ್ದ. ಈ ಮೂರು ದಿನಗಳೂ ದೇವಾಲಯಗಳ ಧ್ವಂಸ ಮತ್ತು ಲೂಟಿ ಅವ್ಯಾಹತವಾಗಿ ನಡೆಯಿತು. ಕ್ಷಮಿಸಿ, ಇವೆಲ್ಲದರ ಬಗ್ಗೆ ಹಂಪಿ ಯೂನಿವರ್ಸಿಟಿ ಬರೆದಿಲ್ಲ. ಇವೆಲ್ಲವನ್ನೂ ಚಿದಾನಂದ ಮೂರ್ತಿಗಳೋ ಸೂರ್ಯನಾಥ ಕಾಮತರೋ ಹೇಳಿದಾಗ ಇವೆಲ್ಲವೂ ಆರೆಸ್ಸೆಸ್ ಇತಿಹಾಸ ಎಂದು ಕಾಂಗ್ರೆಸ್ ಕಿರುಚಿತು.
ಇದಕ್ಕೂ ಮೊದಲು ಮಹಮದ್ ಶಾ ಎಂಬ ಮತ್ತೊಬ್ಬ ಪುಂಡ ಬಹಮನಿಯಲ್ಲಿ ಕುಳಿತಿದ್ದ. ಆತನಿಗೆ ಆಗ ವಿಜಯನಗರದರಸ ಬುಕ್ಕರಾಯನ ಪರಾಕ್ರಮ ತಿಳಿದಿರಲಿಲ್ಲವೋ ಗೊತ್ತಿಲ್ಲ. ಒಂದು ದಿನ ನಮಾಜ್ ಮುಗಿಸಿದವನೇ ಹಿಂದೂ ಸಾಮ್ರಾಜ್ಯವನ್ನು ಸಂಪೂರ್ಣ ನಾಶ ಮಾಡುತ್ತೇನೆಂದು ಪಣತೊಟ್ಟು ಅಪಾರ ಸೈನ್ಯದೊಂದಿಗೆ ಹಂಪಿಯತ್ತ ಹೊರಟ. ಗುಲ್ಬರ್ಗದ ಸಮೀಪ ಆತ ನಡೆಸಿದ ಹಿಂದೂ ನರಮೇಧ ಯಾವ ನಾಜಿಗಳಿಗಿಂತಲೂ ಕಡಿಮೆಯಿರಲಿಲ್ಲ. ತುರ್ಕ ಲೂಟಿ, ದಂಗೆಗಳನ್ನು ನಡೆಸುತ್ತಾ ರಾಜಧಾನಿಯತ್ತ ಧಾವಿಸುತ್ತಿದ್ದಾನೆಂಬುದನ್ನು ತಿಳಿದ ಬುಕ್ಕರಾಯ ಆತನನ್ನು ಓದ್ದೋಡಿಸಿದ್ದ. ಮತ್ತೆಂದೂ ಆತ ವಿಜಯನಗರದ ತಂಟೆಗೆ ಬರಲಿಲ್ಲ. ಈ ಸಂಗತಿಯನ್ನೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳು ಹೇಳುವುದಿಲ್ಲ. ಸೆಕ್ಯುಲರ್ ಶೋಕಿ ನಮ್ಮ ಮನಸ್ಸಲ್ಲೆಷ್ಟು ಪಾಚಿ ಕಟ್ಟಿದೆಯೆಂದರೆ ಸಾಕ್ಷಾತ್ ಆಲೂರರೇ ತಮ್ಮ ಗತವೈವೈವದಲ್ಲಿ ಅದನ್ನು ಉಲ್ಲೇಖಿಸಿದರೂ ನಾವು ಆ ಘಟನೆಯನ್ನು ತರ್ಕಕ್ಕೊಡ್ಡುತ್ತೇವೆ! ಇನ್ನು ಸಿದ್ಧರಾಮಯ್ಯ ಬಹಮನಿ ಉತ್ಸವ ಮಾಡುವುದರಲ್ಲೇನು ಆಶ್ಚರ್ಯವೇನಿದೆ? ಎಡಚರು ರಚಿಸಿದ ಕನ್ನಡದ ಚರಿತ್ರೆ ಶೋಧ ಪ್ರವೃತ್ತಿಯವರಲ್ಲೂ ಗೊಂದಲವನ್ನು ಮೂಡಿಸಿಬಿಟ್ಟಿವೆ. ಮುಂದೆ ತಾಳಿಕೋಟೆ ವಿಜಯಾನಂತರ ಕೂಡಾ ಮುಸಲ್ಮಾನರು ಸಾಮ್ರಾಜ್ಯ ವಿಸ್ತರಣೆ ಮಾಡಿದಂತೆ ವರ್ತಿಸಲಿಲ್ಲ. ಹಾಗೆ ವರ್ತಿಸುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಏಕೆಂದರೆ ಚದುರಿಹೋಗಿದ್ದ ಐದು ಶಾಹಿಗಳು ಒಂದಾಗಿದ್ದೇ ಇಸ್ಲಾಂ ಎಂಬ ಕಾರಣಕ್ಕಾಗಿ. ವಿಜಯನಗರದ ವಿರುದ್ಧ ದಾಳಿ ಮಾಡಿದ್ದೇ ಜಿಹಾದ್ ಹೆಸರಿನಲ್ಲಿ.
ಅಂದು ಬಹಮನಿಗಳು ಹೇಗೆ ವರ್ತಿಸಿದರೆಂದರೆ ಇಂದು ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನರು ದಂಗೆಯಲ್ಲಿ ಹೇಗೆ ವರ್ತಿಸುತ್ತಾರೋ ಹಾಗೇ. ವಿಜಯನಗರದ ಆನೆ-ಕುದುರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಚಿಕ್ಕ ಮತ್ತು ದೊಡ್ಡ ದೇವಸ್ಥಾನಗಳಿಗೆ ನುಗ್ಗಿ ಧ್ವಂಸ ಮಾಡಲಾಯಿತು, ಮನೆಗಳನ್ನು ದೋಚಿ ಬೆಂಕಿ ಹಚ್ಚಲಾಯಿತು. ವಿಗ್ರಹಗಳನ್ನು ಒಡೆಯಲಾಯಿತು, ಸ್ವತಃ ಬಹಮನಿ ಅರಸರೇ ಸಿಕ್ಕಷ್ಟನ್ನು ದೋಚಿ ಉಳಿದ ಸಂಪತ್ತನ್ನು ಹಂಚಿ ಎಂದು ಆಜ್ಞಾಪಿಸಿದ. ದುಷ್ಟ ಮುಸಲ್ಮಾನರು ಸಿಕ್ಕಷ್ಟೂ ಸಾಲದೆಂಬಂತೆ ಸಂಶಯ ಬಂದಲ್ಲೆಲ್ಲಾ ನೆಲವನ್ನಗೆಯತೊಡಗಿದರು. ಸಂಪೂರ್ಣ ಹತ್ತು ದಿನಗಳ ಕಾಲ ವಿಜಯನಗರದ ಲೂಟಿ ನಡೆಯಿತು. ಎಂದಿನಂತೆ ಈ ಸಂಗತಿ ಕೂಡ ಹಂಪಿ ಕನ್ನಡ ಯೂನಿವರ್ಸಿಟಿ ಪ್ರಸಾರಾಂಗದ ಪುಸ್ತಕಗಳಲ್ಲಿಲ್ಲ.
ಯಾವ ವಿದ್ಯೆಯೇ ಆಗಲಿ, ಯಾವ ಧ್ಯೇಯವೇ ಆಗಲಿ, ಅದೆಷ್ಟೇ ಮೌಲಿಕವಾದ ಸಂಗತಿಯೇ ಆಗಿರಲಿ. ಕಾಲಕ್ರಮೇಣ ತನ್ನ ಅಸಲಿ ಉದ್ದೇಶವನ್ನು ಕ್ರಮೇಣ ಕಳೆದುಕೊಳ್ಳುತ್ತಾ ಬರುತ್ತದೆ. ವಿಜಯನಗರ ಅರಸರಲ್ಲೂ ಅದಾಯಿತು. ಕೃಷ್ಣದೇವರಾಯನೂ ಈಗಿನವರಂತೆ ಮುಸಲ್ಮಾನರೆಲ್ಲರೂ ಕೆಟ್ಟವರೇ? ಅವರಲ್ಲೂ ಒಳ್ಳೆಯವರಿರುವುದಿಲ್ಲವೋ? ಎಂದು ಯೋಚಿಸಿದನೋ ಏನೋ. ಆತ ಮುಸಲ್ಮಾನರ ಜೊತೆ ಅಗತ್ಯಕ್ಕಿಂತ ಹೆಚ್ಚು ವ್ಯಾಪಾರ ಸಂಬಂಧ ಇರಿಸಿಕೊಳ್ಳಲಾರಂಭಿಸಿದ. ಅತ್ಯುತ್ತಮ ಅರಬ್ ತಳಿಯ ಕುದುರೆಗಳನ್ನು ಅವರಿಂದ ತರಿಸಿಕೊಳ್ಳಲಾರಂಭಿಸಿದ. ಕುದುರೆ ವ್ಯಾಪಾರ ಆರಂಭದಲ್ಲಿ ಚೆನ್ನಾಗಿಯೇ ನಡೆಯುತ್ತಿದ್ದರೂ ಒಂದು ದಿನ ಭಟ್ಕಳದ ವರ್ತಕರು ತಮ್ಮ ಕುದುರೆಗಳನ್ನು ವಿಜಯನಗರಕ್ಕೆ ಬದಲಾಗಿ ಬಹಮನಿಗಳಿಗೆ ಮಾರಲಾರಂಭಿಸಿದರು! ಅಂದರೆ ಇಸ್ಲಾಮಿಗೆ ಅಡ್ಡಿಯಾದರೆ ಉಳಿದೆಲ್ಲವೂ ಗೌಣ ಎಂದು ತುರ್ಕರು ಸೂಚನೆ ನೀಡಿದ್ದರು. ಅದರ ಫಲವನ್ನು ಕೃಷ್ಣದೇವರಾಯ ಅತೀ ಬೇಗ ಉಣ್ಣುವಂತಾಯಿತು. ಬಹಮನಿಗಳ ಬಗ್ಗೆ ಹೇಳುತ್ತಾ ಹೋದರೆ ಅದೇ ಒಂದು ಬ್ರಹದ್ಗ್ರಂಥವಾದೀತು. ಸರ್ಕಾರಕ್ಕೆ ಈಗ ನೆನಪಾಗಿದ್ದು ಇಂಥ ಬಹಮನಿಗಳದ್ದು.
ತಾವು ತಾವೇ ಕಚ್ಚಾಡಿಕೊಳ್ಳುತ್ತಿದ್ದ ಐವರು ಶಾಹಿಗಳು ಹಿಂದು ಸಾಮ್ರಾಜ್ಯಕ್ಕಾಗಿ ಒಗ್ಗೂಡಿದರೆಂದರೆ ಅದೆಂಥಾ ಮತಾಂಧತೆಯಿರಬೇಕು? ಅಂಥ ಮತಾಂಧತೆ ಸರ್ಕಾರಕ್ಕೆ ಇಷ್ಟವಾಗಬೇಕಾದರೆ ಇನ್ನು ಇವರಂಥವರಿರಬೇಕು? ತಾಳೀಕೋಟೆ ಯುದ್ಧದ ಬಗ್ಗೆ ಆಲೂರು ವೆಂಕಟರಾಯರು ಬರೆದಿರುವುದು ನೆನಪಾಗುತ್ತಿದೆ ‘ಕರ್ನಾಟಕ ವೈಭವವು ಕೊನೆಯಾಯಿತು, ಕರ್ನಾಟಕ ದೇವಿಯ ಹಣೆಯ ಕುಂಕುಮವು ಅಳಿಸಿತು. ಕೊರಳ ಮಂಗಲ ಸೂತ್ರವು ಕತ್ತರಿಸಿತು, ಕರ್ನಾಟಕದ ಸಂಪತ್ತಿಯು ಸಮಾ ಹೊಂದಿತು. ಕರ್ನಾಟಕ ವಿದ್ಯಾನಿಧಿಯು ಅಡಗಿಹೋಯಿತು. ಕರ್ನಾಟಕದ ಪ್ರತಾಪ ಸೂರ್ಯನು ಅಸ್ತನಾದನು. ಹಿಂದಿನಿಂದ ಇಂದಿನವರೆಗೆ ಕರ್ನಾಟಕರಾದ ನಾವು ಇತಿಹಾಸದಿಂದ ನಾಪುಶೇಷರಾಗಿ ಹೋಗಿರುವೆವು. ಕರ್ನಾಟಕರೇ, ನಾವು ಪೂರ್ವ ವೈಭವವನ್ನು ಪಡೆಯಲು ಪ್ರಯತ್ನಿಸುವ ಕಾಲವು ಇನ್ನೂ ಪ್ರಾಪ್ತವಾಗಿಲ್ಲವೋ?’ ಇಲ್ಲ ವೆಂಕಟರಾಯರೇ ಕರ್ನಾಟಕ ಕಾಂಗ್ರೆಸ್ ಮುಕ್ತರಾಗುವವರೆಗೆ, ಉಳಿದವರಿಗೆ ವಿದ್ಯಾರಣ್ಯ, ಹಕ್ಕಬುಕ್ಕರು ಅರ್ಥವಾಗುವವರೆಗೆ ಆ ವೈಭವ ಪ್ರಾಪ್ತವಾಗುವುದಿಲ್ಲ.
Like this:
Like ಲೋಡ್ ಆಗುತ್ತಿದೆ...
Related
Superb
ಬಹಮನಿ ಮತ್ತು ಆ ಸಂತತಿಯ ಪೂರಕರ ಬಗೆಗೆ ತಿಳಿಯಬೇಕೆಂದರೆ ಈ ಲೇಖನ ಓದಲೇ ಬೇಕು!