ಮರಾಠ ನಾಯಕನಿಗೊಂದು ನಮನ
– ಪಲ್ಲವಿ ಭಟ್, ಬೆಂಗಳೂರು
ಕಳೆದ ವರುಷ ಚಲನಚಿತ್ರವೊಂದು ಭಾರತದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿತು. “ಬಾಹುಬಲಿ” ಎನ್ನುವ ಆ ಚಿತ್ರವನ್ನು ನೋಡದವರ ಸಂಖ್ಯೆಯೇ ವಿರಳವೆನ್ನಬಹುದು. ರಾಜಮೌಳಿಯವರ ಕಲ್ಪನಾ ಶಕ್ತಿ, ಕಲಾವಿದರ ನಟನಾ ಚಾತುರ್ಯ, ಹಾಗೂ ಗ್ರಾಫಿಕ್ಸ್ ನ ವಿಸ್ಮಯಗಳಿಂದಾಗಿ ಈ ಚಿತ್ರವು ಭಾರತದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿ ಮೂಡಿದೆ.
ನಾನು ಆ ಚಿತ್ರವನ್ನು ನೋಡಿದ್ದೆ. ನೋಡಿ ಒಂದಷ್ಟು ವಾರಗಳು ಕಳೆದ ಮೇಲೂ ಅದೇನೋ ನನ್ನನ್ನು ಕಾಡುವಂತಿತ್ತು. ಮರೆತು ಹೋಗಿರುವ ಏನನ್ನೋ ನೆನಪಿಸುವಂತಿತ್ತು. ರಾಜನ ಗಾಂಭೀರ್ಯ, ನ್ಯಾಯ ,ನಿಷ್ಠೆಗಳ ಬಗ್ಗೆ ಅದೆಲ್ಲೋ ಓದಿದ ನೆನಪು. ಮತ್ತೆ ಮತ್ತೆ ಕೆದಕಿ ನೋಡಿದರೆ ನೆನಪಿಗೆ ಬಂದದ್ದು ಒಂದು ಪುಟ್ಟ ಪುಸ್ತಕ. ಭಾರತ-ಭಾರತಿಯವರ ಪ್ರಕಾಶನದಲ್ಲಿ ಹೊರ ಬಂದಿದ್ದ “ಶಿವಾಜಿ” ಎನ್ನುವ ಆ ಪುಸ್ತಕ ಅಪ್ಪನ ಶೆಲ್ಫ್ ನಲ್ಲಿ ಇನ್ನೂ ಇರಬಹುದು. ಓದುವ ಹವ್ಯಾಸವನ್ನು ಬೆಳೆಸಿಕೊ ಎಂದು ಯಾರು ಯಾವಾಗಲೇ ಗೊಣಗಲಿ, ನಾನು ಪಟ್ಟಂಥ ಇದೇ ಪುಸ್ತಕವನ್ನು ಕೈಗೆತ್ತಿಕೊಳ್ಳುತಿದ್ದೆ. ಸಣ್ಣ ಪುಸ್ತಕವಾಗಿದ್ದರಿಂದಲೋ, ಅಥವಾ ಶಿವಾಜಿ ಅನ್ನುವ ಮಹಾರಾಜರು ತುಂಬಾ ಇಷ್ಟವಾಗಿದ್ದರಿಂದಲೋ,ನನಗೆ ತಿಳಿದಿಲ್ಲ.
ಮರೆತು ಹೋಗಿದ್ದ ಬಾಲ್ಯದ ನಾಯಕನ ನೆನಪನ್ನು ಮತ್ತೆ ಮರುಕಳಿಸಲು ಅಂತರ್ಜಾಲದ ಬುದ್ದಿ ರಾಕ್ಷಸನಾದ ವಿಕಿಯ ಬಳಿ ಹೋದೆ. ಓದುತ್ತಾ ಹೋದಂತೆ ಇದು ಏನೋ ಬರೀ ಯುದ್ಧಗಳ ಪಟ್ಟಿ ಎಂದನಿಸಿತು. ಅಂದೆಂದೋ ಓದಿದ ಪುಸ್ತಕದಲ್ಲಿದ್ದ ಭಾವಗಳು ಇಲ್ಲಿ ಇರಲಿಲ್ಲ. ಜೊತೆಗೆ ಗೆಲುವು ಸೋಲುಗಳ ಲೆಕ್ಕಗಳಷ್ಟೇಯೇ ಇತಿಹಾಸ, ಎಂಬ ಪ್ರಶ್ನೆಯೂ ಮನಸಲ್ಲಿ ಮೂಡಲಾರಂಭಿಸಿತು. ಪುಠ್ಯಪುಸ್ತಕಗಳು ಮರೆತ, ಆಧುನಿಕ ಚಿಂತಕರು ಅಲ್ಲಗಳೆದ ಆ ಮಹಾನ್ ಹೋರಾಟಗಾರನನ್ನು ಅವರ ಜನ್ಮದಿನವಾದ ಫೆಬ್ರವರಿ ೧೯ ಕ್ಕಾದರೂ ನೆನಪಿಸಿಕೊಳ್ಳಬೇಕಿನಿಸಿತು.
ನಿಜವಾದ ಇತಿಹಾಸಕಾರರು ಮರೆಯಲಾಗದ,ಮರೆಯಬಾರದ ಒಂದು ಅಧ್ಯಾಯ – ಛತ್ರಪತಿ ಶ್ರೀ ಶಿವಾಜಿ ಮಹಾರಾಜರದ್ದು. ೧೭ನೇ ಶತಮಾನದಲ್ಲೇ ಮೊದಲ ಬಾರಿಗೆ “ಸ್ವರಾಜ್ಯ” ಎಂಬ ಸ್ವಾಭಿಮಾನದ ಬೀಜವನ್ನು ಈ ಭಾರತ ದೇಶದಲ್ಲಿ ಬಿತ್ತಿದವರು ಶಿವಾಜಿ ಮಹಾರಾಜರು. ಬಾಲ್ಯದಲ್ಲೇ ಗುಲಾಮಿಗಿರಿಗೆ ತಲೆಬಾಗಿದ ತನ್ನ ತಂದೆಯನ್ನು ವಿರೋಧಿಸಿ ಧರ್ಮ ರಕ್ಷಕನಾಗುವೆ ಎಂದು ತಾಯಿ ಹಾಗು ಗುರುವಿಗೆ ಮಾತು ಕೊಟ್ಟವರು. ಫೆಬ್ರವರಿ ೧೯, ೧೬೮೦ಕ್ಕೆ ಹುಟ್ಟಿದ ಇವರು ತನ್ನ ೧೯ ನೇ ವರುಷಕ್ಕೇ ತೋರಣದುರ್ಗವನ್ನು ವಶಪಡಿಸಿಕೊಂಡು ವೀರನೆನಿಸಿಕೊಂಡರು. ಅಲ್ಲಿಗೆ ಮರಾಠ ಸಾಮ್ರಾಜ್ಯದ ಉದಯವಾಗಿತ್ತು. ಮುಂದೆ ಸಿಂಹಗಡ್, ರೈಗಡ್, ವಿಜಯದರ್ಗಾ, ರಾಜಗಡ್ ಮುಂತಾದ ಕೋಟೆಗಳು ಶಿವಾಜಿ ಮಹಾರಾಜರ ಹಿಡಿತಕ್ಕೊಳಪಟ್ಟವು. ಪ್ರತಾಪಗಡವೆಂಬ ಕೋಟೆಯ ಬಳಿ ಅಫಜಲಖಾನನೆಂಬ ದೈತ್ಯ ಸೇನಾಪತಿಯನ್ನು ನಿಗ್ರಹಿಸಿದ ಮೇಲಂತೂ ಶಿವಾಜಿ ಮಹಾರಾಜರ ಪ್ರತಾಪ ಮುಗಿಲು ಮುಟ್ಟಿತ್ತು. ನೀತಿ, ನ್ಯಾಯ, ಗೋ ಸಂರಕ್ಷಣೆ, ಸ್ತ್ರೀ ಸಂರಕ್ಷಣೆ, ಧರ್ಮ ಸಂರಕ್ಷಣೆ, ರಾಜ್ಯ ರಕ್ಷಣೆಗಳಷ್ಟೇ ಅಲ್ಲದೆ, ಭಾರತದ ಯುದ್ಧ ತಂತ್ರಗಳಿಗೂ ಹೊಸ ರೂಪ -ರೇಷೆ ಕೊಟ್ಟವರು ಶಿವಾಜಿ ಮಹಾರಾಜರು. ನೌಕಾ ಸೇನೆಯ ಮಹತ್ವ,ಗೆರಿಲ್ಲಾ ತಂತ್ರಗಳು,ಬಚ್ಚಿಟ್ಟು ಯುದ್ಧ ಮಾಡುವ ಹೊಸ ತಂತ್ರಗಳನ್ನು ಭಾರತೀಯರಿಗೆ ಹೇಳಿಕೊಟ್ಟಿದ್ದರು.೧೬೭೪ರಲ್ಲಿ ನಡೆದ ಕೀರೀಟ ಧಾರಣೆಯಲ್ಲಿ ಶಿವಾಜಿ ಮಹಾರಾಜರನ್ನು ಛತ್ರಪತಿ ಎಂದು ಘೋಷಿಸಲಾಯಿತು. ಜೊತೆಗೆ ಹಿಂದೂ ಸಾಮ್ರಾಜ್ಯದ ಸ್ಥಾಪಕರು ಎಂಬ ಚಾರಿತ್ರಿಕ ಪಟ್ಟವೂ ಅವರದ್ದಾಯಿತು.
ಇದು ಬರೀ ಒಬ್ಬ ಮಹಾರಾಜರ ಕತೆಯಲ್ಲ. ಇತಿಹಾಸವು ಹುದುಗಿಸಿಟ್ಟಿರುವ ಇನ್ನದೆಷ್ಟೋ ಗುಡಿಗಳು,ರಾಜರ ಕಥೆಗಳು ದೇಶದ ಉದ್ದಗಲಕ್ಕೂ ಕಾಣಬಹುದು. ರಾಣಾ ಪ್ರತಾಪ್,ಕೃಷ್ಣ ದೇವರಾಯ, ಪ್ರಥ್ವಿರಾಜ್ ಚೌಹಾನ್ ಎಂಬಂತಹಾ ಬೆರಳೆಣಿಕೆಯಷ್ಟು ಹೆಸರುಗಳಷ್ಟೇ ನಮಗೆ ಪರಿಚಿತ. “ಬಾಹುಬಲಿ” ಎಂಬ ಕಾಲ್ಪನಿಕ ಚಿತ್ರವೇ ನಮಲ್ಲಿ ಇಷ್ಟೊಂದು ರೋಮಾಂಚನವನ್ನು ಉಂಟುಮಾಡಿದರೆ, ನಮ್ಮ ದೇಶದಲ್ಲಿದ್ದ ನಿಜವಾದ ವೈಭವವನ್ನು ಕಲ್ಪಿಸಿದರೆ ಏನಾಗಬಹುದೋ , ನಾ ಕಾಣೆ. ಛದ್ಮವೇಷ ಸ್ಪರ್ಧೆಗಳಿಗಷ್ಟೇ ಸೀಮಿತವಾಗಿಡದೆ, ಕೆದಕಿ ಕಲಿಯಬೇಕಾಗಿದೆ ನಮ್ಮ ದೇಶದ ನಿಜವಾದ ಇತಿಹಾಸವನ್ನು.