ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2018

ಕರ್ನಾಟಕ ಸ್ವಾಭಿಮಾನವನ್ನು ಬಹಮನಿಗಳಿಗೆ ಒತ್ತೆಯಿಡಲು ಹೊರಟಿದ್ದ ಕಾಂಗ್ರೆಸ್

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

“ಅದೋ ಅದೋ ವಿಜಯನಗರದ ಸ್ಥಾಪನೆ,ವಿಜಯನಗರದ ಏಳಿಗೆ,ವಿಜಯನಗರದ ವೈಭವ. ಹಾ! ವಿಜಯನಗರದ ನಾಶ…” ಎಂದು ಕನ್ನಡ ರಾಷ್ಟ್ರವೀರ ಎಚ್ಚಮನಾಯಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಡಾ.ರಾಜ್ ಕುಮಾರ್ ಅವರು ಹೇಳುವಾಗ, ಕರ್ನಾಟಕ ಸ್ವಾಭಿಮಾನಕ್ಕಾಗಿ ಮಿಡಿಯುವ ಪ್ರತಿ ಕನ್ನಡಿಗನ ಮನದಲ್ಲೂ ತೀವ್ರ ವೇದನೆ,ಆಕ್ರೋಶದ ಅನುಭವವಾಗುತ್ತದೆ. ಆಗಲೇಬೇಕು ಕೂಡ.ಆದರೆ ಈ ಮಾತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕನ್ನಡಿಗರಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ಸ್ವಾಭಿಮಾನವನ್ನು ವೋಟ್ ಬ್ಯಾಕಿಂಗೆ ಅಡವಿಟ್ಟ ಕಾಂಗ್ರೆಸ್ ಪಕ್ಷಕ್ಕೆ ವಿಜಯನಗರ ಸಾಮ್ರಾಜ್ಯ ನೆನಪಾಗಲಿಲ್ಲ,ಅವರಿಗೆ ನೆನಪಾಗಿದ್ದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯವನ್ನು ನಾಮಾವಶೇಷ ಮಾಡಿದ ಬಹಮನಿ ಸುಲ್ತಾನರದ್ದು.ಉತ್ತರದಲ್ಲಿ ಮಹಮ್ಮದ್ ಬಿನ್ ತುಘಲಕನ ಕಾಲದಲ್ಲಿ ಹುಟ್ಟಿಕೊಂಡ ಬಹಮನಿ ಸುಲ್ತಾನರನ್ನು ದಕ್ಷಿಣದ ತುಘಲಕ್ ಸರ್ಕಾರ ನೆನಪಿಸಿಕೊಂಡಿದ್ದು ಕಾಕತಾಳೀಯವೋ,ಪುನರ್ಜನ್ಮದ ನೆನಪೋ ಗೊತ್ತಿಲ್ಲ.ಆದರೆ ಇಂತಹ ದರಿದ್ರ ಸರ್ಕಾರವನ್ನು ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು.

ಹೊರದೇಶದ ಆಕ್ರಮಣಕಾರರ ಅದರಲ್ಲೂ ಮುಖ್ಯವಾಗಿ ಇಸ್ಲಾಮ್ ದಾಳಿಕೋರರ ಬರ್ಬರತೆ,ಕ್ರೌರ್ಯವೆಂತದ್ದು ಎನ್ನುವುದನ್ನು ಉತ್ತರ ಭಾರತ ಶತಮಾನಗಳ ಕಾಲ ಅನುಭವಿಸಿದೆ. ಈ ವಿಷಯದಲ್ಲಿ ದಕ್ಷಿಣ ಭಾರತದ ಅದೃಷ್ಟ ಚೆನ್ನಾಗಿಯೇ ಇತ್ತು.ಬಹುಶಃ ದಕ್ಷಿಣದ ರಾಜರು ಇಸ್ಲಾಮಿ ದಾಳಿಕೋರರ ಭಯ ನಮಗಿಲ್ಲ ಎಂಬ ಭ್ರಮೆಯಲ್ಲಿಯೇ ಬದುಕುತ್ತಿದ್ದರೋ ಏನೋ,ಆದರೆ ಅದು ಅಲ್ಲಾವುದ್ದೀನ್ ಖಿಲ್ಜಿಯ ಕಾಲದವರೆಗೂ ಮಾತ್ರವೇ.ಖಿಲ್ಜಿಯ ದಂಡನಾಯಕ ಮತಾಂತರಿ ಮಲ್ಲಿಕಾಫರ್, ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ದಾಳಿಗೆ ಮುಹೂರ್ತವಿಟ್ಟ.ಆ ಸಂಧರ್ಭದಲ್ಲಿ ಹೊಯ್ಸಳ ಮಹಾರಾಜ ಮುಮ್ಮಡಿ ಬಲ್ಲಾಳ ವೀರ ತಮಿಳುನಾಡಿನ ತಿರುವಣ್ಣಾಮಲೈನಲ್ಲಿದ್ದ. ಮಲ್ಲಿಕಾಫರನ ಸ್ಥಾನದಲ್ಲಿ ವೀರ ಸೇನಾನಿಯಿದ್ದಿದ್ದರೇ, ಬಲ್ಲಾಳನು ಇದ್ದಾಗಲೇ ರಾಜಧಾನಿಗೆ ಮುತ್ತಿಗೆ ಹಾಕುವ ಧೈರ್ಯ ತೋರುತ್ತಿದ್ದನೋ ಏನೋ,ಆದರೆ ಎಷ್ಟಾದರೂ ಮತಾಂಧ ದಾಳಿಕೋರನಲ್ಲವೇ ಪೃಥ್ವಿರಾಜ ಚೌಹಾಣನ ಕಾಲದಿಂದಲೂ ಇವರು ಗೆದ್ದುಕೊಂಡು ಬಂದಿದ್ದು ಕಪಟದಿಂದಲೇ.ಮಲ್ಲಿಕಾಫರನ ಜಿಹಾದಿ ಸೈನ್ಯ ಸತತ ೧೩ ದಿನಗಳ ಕಾಲ ಹೊಯ್ಸಳರ ಭವ್ಯ ರಾಜಧಾನಿಯನ್ನು ನಾಶಮಾಡಿ ದ್ವಾರಸಮುದ್ರವನ್ನು, “ಹಾಳಾದ ಬೀಡು” ಎನ್ನುವಂತೆ ಮಾಡಿತು,ಜನರ ಬಾಯಿಯಲ್ಲಿ “ಹಳೇಬೀಡು” ಆಗಿ ಹೋಯಿತು. ಈ ವಿನಾಶವೂ ಮುಂಬರಲಿರುವ ಭವ್ಯ ಸಾಮ್ರಾಜ್ಯದ ಮುನ್ನುಡಿಯೇ ಆಗಿ ಹೋಯಿತು.ಹಾಗೊಂದು ಮುನ್ನುಡಿ ಬರೆಯಲು ಹೊರಟ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳ ವೀರನಿಗೆ ಆಗ ಇನ್ನೂ ೮೨ರ ವಯಸ್ಸು ಅಷ್ಟೇ!

ಇಂದು ಮಲ್ಲಿಕಾಫರ್ ಬಂದು ಹೋದ,ನಾಳೆ ಮತ್ತೊಬ್ಬ ಇಸ್ಲಾಮಿ ದಾಳಿಕೋರ ಬರುತ್ತಾನೆ,ಒಟ್ಟಾರೆಯಾಗಿ ಉತ್ತರದಲ್ಲಿದ್ದ ರಾಕ್ಷಸರು ದಕ್ಷಿಣದ ಬಾಗಿಲಿಗೆ ಬಂದು ನಿಂತಿದ್ದಾರೆ. ಇಂತಹ ಸಮಯದಲ್ಲೇ ನಾವು ನಾವು ಕಚ್ಚಾಡಿಕೊಂಡರೇ ದಕ್ಷಿಣ ಭರತಭೂಮಿಯೇ ಇಸ್ಲಾಮೀಕರಣವಾದೀತು ಎಂದು ಅರಿತವನೇ ಮೊದಲಿಗೇ, ಒಡೆದು ಹೋಳಾಗಿದ್ದ ದಾಯಾದಿ ಹೊಯ್ಸಳರನ್ನು ಬಗ್ಗುಬಡಿದು ಜೊತೆ ಮಾಡಿಕೊಂಡ, ಇವನ ಪ್ರಭುತ್ವವನ್ನು ಒಪ್ಪಿಕೊಂಡ ಸಣ್ಣ-ಪುಟ್ಟ ಪಾಳೇಗಾರರನ್ನು ಜೊತೆ ಹಾಕಿಕೊಂಡು ಒಪ್ಪದವರನ್ನು ಬಲಪ್ರಯೋಗಿಸಿ ಒಪ್ಪಿಸಿಕೊಂಡು ಹಿಂದೂ ಸಾಮ್ರಾಜ್ಯಕ್ಕೊಂದು ಬಲವಾದ ತಳಹಾದಿ ಹಾಕುತ್ತ ಹೊರಟ ಮುಮ್ಮಡಿ ಬಲ್ಲಾಳ. ದಕ್ಷಿಣದಲ್ಲಿ ದ್ವಾರಸಮುದ್ರ, ಪೂರ್ವದಲ್ಲಿ ತಿರುವಣ್ಣಾಮಲೈ ಮತ್ತು ಉತ್ತರದಲ್ಲಿ ಕುಂದಣಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಮಹಾಪರಾಕ್ರಮಿ ಮುಮ್ಮಡಿ ಬಲ್ಲಾಳ ವೀರನ ಬಗ್ಗೆ ಕರ್ನಾಟಕದಲ್ಲೆಷ್ಟು ಜನರಿಗೆ ಗೊತ್ತಿದೆ? ಮುಂದಿನ ಮಹಾಸಮ್ರಾಜ್ಯವನ್ನು ಸ್ಥಾಪಿಸಲು ಬಲ್ಲಾಳ ನೇತೃತ್ವದಲ್ಲಿ ಹಿಂದೂ ರಾಜರ ಸಭೆಯು ನಡೆದಿದ್ದು, ಪರಶಿವನ ಶಕ್ತಿ ಕ್ಷೇತ್ರ ಅರುಣಾಚಲದಲ್ಲಿ.ಆ ಸಭೆಯಲ್ಲಿ ಹಕ್ಕ-ಬುಕ್ಕರೂ ಇದ್ದರು.ಬಳ್ಳಾರಿಯ ಬಳಿ ಹೊಸನಗರ ಸ್ಥಾಪಿಸಿ ಹಕ್ಕ-ಬುಕ್ಕ ಸಹೋದರರನ್ನು ಅಲ್ಲಿಯ ಆಡಳಿತ ನೋಡಿಕೊಳ್ಳಲು ಬಿಟ್ಟಿದ್ದ ಬಲ್ಲಾಳ ವೀರ.

ಇತ್ತ ಮಧುರೆಯಲ್ಲಿ ಸುಲ್ತಾನರ ಅಟ್ಟಹಾಸ ಮೇರೆ ಮೀರಿತ್ತು,ಮೀನಾಕ್ಷಿ ದೇವಸ್ಥಾನಕ್ಕೆ ಬೀಗ ಜಡಿದಿದ್ದರು. ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಸುಸಜ್ಜಿತ ಸೈನ್ಯಬಲ ಕಟ್ಟಿಕೊಂಡ ಮುಮ್ಮಡಿ ಬಲ್ಲಾಳ ಮೀನಾಕ್ಷಿ ದೇವಿ ದೇವಸ್ಥಾನವನ್ನು ಇಸ್ಲಾಮಿ ಬಂಧನದಿಂದ ಮುಕ್ತಿಗೊಳಿಸಲು ಅಂತಿಮ ಯುದ್ಧ ಘೋಷಿಸಿದ. ಆ ಯುದ್ಧದಲ್ಲಿ ಬಲ್ಲಾಳ ವೀರನ ಹೊಯ್ಸಳ ಸೇನೆ ಮಧುರೆ ಸುಲ್ತಾನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು. ಸುಲ್ತಾನನೊಳಗಿನ ಸೈತಾನ ಜಾಗೃತನಾಗಿ ೧೪ ದಿನಗಳ ಕದನ ವಿರಾಮ ಬೇಡಿಕೆಯಿಟ್ಟ. ಎಲ್ಲಾ ಹಿಂದೂ ವೀರರಿಗಿದ್ದ “ಭೋಳೆ ಸ್ವಭಾವ”ಕ್ಕೆ ಬಲ್ಲಾಳ ವೀರನು ಹೊರತಾಗಬಲ್ಲನೇ? ಸುಲ್ತಾನನ ಖೆಡ್ಡಾದಲ್ಲಿ ಬಿದ್ದ ಬಲ್ಲಾಳ ಶಾಂತಿ ಮಾತುಕತೆಗೆಂದು ಮಧುರೆಗೆ ತನ್ನ ಕೆಲವೇ ಕೆಲ್ವು ಅಂಗರಕ್ಷಕರೊಂದಿಗೆ ಹೋದವನು ಮತ್ತೆಂದೂ ಹಿಂದಿರುಗಿ ಬರಲಿಲ್ಲ. ಬಲ್ಲಾಳ ವೀರನನ್ನು ಮೋಸದಿಂದ ಕೊಂದ ಸುಲ್ತಾನರು ಆತನ ದೇಹದ ಮಾಂಸವನ್ನೆಲ್ಲ ತೆಗೆದು ಹೊಟ್ಟು ತುಂಬಿ ಮಧುರೆಯ ಹೆಬ್ಬಾಗಿಲಿಗೆ ತೂಗು ಹಾಕಿದ್ದರು. ಭವ್ಯ ಹಿಂದೂ ಸಾಮ್ರಾಜ್ಯ ಕಟ್ಟುತ್ತಾ ಹೊರಟಿದ್ದ ಮುಮ್ಮಡಿ ವೀರ ಬಲ್ಲಾಳನ ಕಾಲ ಮುಗಿದಿತ್ತು.

ಆದರಿದು ಅಂತ್ಯವಾಗಿರಲಿಲ್ಲ.  ಇತ್ತ ಕರ್ನಾಟಕ ದಕ್ಷಿಣದಲ್ಲಿ ಮುಮ್ಮಡಿ ಬಲ್ಲಾಳ ಮಾಡಿದ ಕೆಲಸವನ್ನೇ ಕಂಪಿಲಿಯಲ್ಲಿ ಕಂಪಿಲರಾಯ,ಗಂಡುಗಲಿ ಕುಮಾರರಾಮ ಮಾಡಿದ್ದರು,12ನೇ ಶತಮಾನದ ಕಡೆಯಲ್ಲಿ ಸಿಂಗೇಯ ನಾಯಕರಿಂದ ಸ್ಥಾಪನೆಯಾದ ಕಂಪಿಲಿ ರಾಜ್ಯ,ಗಂಡುಗಲಿ ಕುಮಾರ ರಾಮರಂತಹ ಅಪ್ರತಿಮ ಪರಾಕ್ರಮಿಯ ಕಾಲದಲ್ಲಿ ದೆಹಲಿ ಸುಲ್ತಾನನ ನಿದ್ದೆಗೆಡಿಸಿತ್ತು.ಕುಮಾರ ರಾಮನ ಅಂತ್ಯದೊಂದಿಗೆ ಪತನವಾಗಿದ್ದ ಕಂಪಿಲಿ ರಾಜ್ಯ ಹಾಗೂ ಮುಮ್ಮಡಿ ವೀರ ಬಲ್ಲಾಳನ ಹೊಯ್ಸಳ ಸಾಮ್ರಾಜ್ಯದ ಧೂಳಿನಿಂದ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣೆ ನೀಡಿದವರು ಗುರು ವಿದ್ಯಾರಣ್ಯರು. ಉತ್ತರದಿಂದ ಪದೇ ಪದೇ ನಡೆಯುತ್ತಿದ್ದ ಇಸ್ಲಾಮ್ ದಾಳಿಯನ್ನು ತಡೆದು,ನಮ್ಮ ಸಂಸ್ಕೃತಿಯ ರಕ್ಷಣೆಗೆ ಅಂತಹದ್ದೊಂದು ಸಾಮ್ರಾಜ್ಯದ ಅವಶ್ಯಕೆತೆಯಿದ್ದೇ ಇತ್ತು. ಅಂದು ವಿಜಯನಗರ ಸಾಮ್ರಾಜ್ಯದ ಉದಯವಾಗದೇ ಇದ್ದಿದ್ದರೇ ಇಂದು ಅದೆಷ್ಟು ಕನ್ನಡಿಗರ ಮನೆ ಭಾಷೆ ಉರ್ದುವಾಗಿ ಬದಲಾಗಿರುತ್ತಿತ್ತೋ? ಅಂತಹ ವಿಜಯನಗರ ಸಾಮ್ರಾಜ್ಯಕ್ಕೆ ಮಗ್ಗಲ ಮುಳ್ಳಾಗಿ ಕಾಡಿದವರು ಬಹಮನಿ ಸುಲ್ತಾನರು.

ಕೃಷ್ಣದೇವಾರಾಯ ಬರುವವರೆಗೂ ಒಮ್ಮೆ ಅವರು ಗೆಲ್ಲವುದು,ಒಮ್ಮೆ ನಮ್ಮವರು ಗೆಲ್ಲುವುದು ನಡೆಯುತ್ತಲೇ ಇದ್ದಿತು.ಕೃಷ್ಣದೇವರಾಯ ಕೊಟ್ಟ ಮರ್ಮಾಘಾತಕ್ಕೆ ಬಹಮನಿ ಸುಲ್ತಾನನ ಸಾಮ್ರಾಜ್ಯ ನಿಜಾಂ ಶಾಹಿ, ಅದಿಲ್ ಶಾಹಿ ಇಮಾದ್ ಶಾಹಿ, ಬರೀದ್ ಶಾಹಿ ಮತ್ತು ಕುತುಬ್ ಶಾಹಿ ಎಂದು ಐದು ಹೋಳಾಗಿ ಮಾರ್ಪಟ್ಟಿತು. ಎಷ್ಟಾದರೂ ರಕ್ತಬೀಜಾಸುರರ ವಂಶವಲ್ಲವೇ! ಹೀಗೆ ಹೋಳಾದ ಬಹಮನಿಗಳು  ತಮ್ಮ ತಮ್ಮಲ್ಲೇ ದಾಯಾದಿ ಕಚ್ಚಾಟಗಳನ್ನು ಮಾಡಿಕೊಂಡೇ ಬಂದಿದ್ದರು.

ಎಲ್ಲಿಯವರೆಗೂ  ಧರ್ಮದ ಹಾದಿಯನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ಈ ಸಾಮ್ರಾಜ್ಯವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲವೆಂದಿದ್ದರಂತೆ ಗುರು ವಿದ್ಯಾರಣ್ಯರು.ಹೊಯ್ಸಳರ ಮುಮ್ಮಡಿ ಬಲ್ಲಾಳ ತನ್ನ ಸಾಮ್ರಾಜ್ಯವನ್ನು ಇಸ್ಲಾಮ್ ಮುಕ್ತಗೊಳಿಸಿಕೊಂಡಿದ್ದರೇ,ಇತ್ತ ಒಂದನೇ ದೇವರಾಯನ ಕಾಲಕ್ಕಾಗಲೇ ವಿಜಯನಗರದ ಸಾಮ್ರಾಟರಿಗೆ “ಭೋಳೆ ಸ್ವಭಾವ” ದ  ಖಾಯಿಲೆ ಅಮರಿಕೊಂಡಾಗಿತ್ತು. ಎರಡನೇ ದೇವರಾಯನ ಕಾಲದಲ್ಲಿ ಇದು ಇನ್ನಷ್ಟು ಹೆಚ್ಚಿತು. ಹಂಪಿಯಲ್ಲೆಲ್ಲ ಮುಸ್ಲಿಂ ವರ್ತಕರು,ಸೈನ್ಯಪಡೆಗಳಿದ್ದವು.ತುಳುವ ಕೃಷ್ಣ ದೇವರಾಯನ ಕಾಲದಲ್ಲಿ ಸುವರ್ಣ ಯುಗವನ್ನು ತಲುಪಿದ ವಿಜಯನಗರವು ಅವನದೇ ಕಾಲದಲ್ಲಿ ಹಾದಿಯನ್ನು ಮೆಲ್ಲಗೆ ಬಿಡಲಾಂಭಿಸಿತಾ? ಬಹಮನಿ ಸುಲ್ತಾನರನ್ನು ಸಂಪೂರ್ಣ ನಿರ್ನಾಮ ಮಾಡುವ ಬದಲಿಗೆ ಉಳಿಸಿಬಿಟ್ಟ. ಸಾಲದು ಎಂಬಂತೆ ದಾಯಾದಿ ಕಲಹದಲ್ಲಿ ಸಿಕ್ಕು ಗುಲ್ಬರ್ಗದಲ್ಲಿ ಸೆರೆಯಾಗಿದ್ದ ಬಹಮನಿ ಸುಲ್ತಾನ ಮಹಮ್ಮದ್ ಷಹನನ್ನು ಬಂಧನ ವಿಮೋಚನೆಗೊಳಿಸಿ, ಅವನನ್ನು ಮರುಸ್ಥಾಪನೆ ಮಾಡಿದ. ಅದರಿಂದಾಗಿ ‘‘ಯವನರಾಜ್ಯ ಸ್ಥಾಪನಾಚಾರ್ಯ’’ ಎಂಬ ಬಿರುದಿಗೆ ಪಾತ್ರನಾಗಿ ಉಬ್ಬಿಹೋದ.ಧರ್ಮ ರಕ್ಷಣೆಗೆಂದು ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದಲ್ಲಿ ಸೆಕ್ಯುಲರ್ ಖಾಯಿಲೆ ಅಂಟಿಸಿಕೊಂಡವರು ಪಟ್ಟವೇರಿದರು.ಪರಕೀಯರ ರಿಲಿಜಿಯನ್ ಗ್ರಂಥವನ್ನು  ಸಿಂಹಾಸನದ ಪಕ್ಕದಲ್ಲಿಟ್ಟುಕೊಂಡು ಆಳುವ ಮೂರ್ಖತನಗಳು ಸೃಷ್ಟಿಯಾದವು, ಇಸ್ಲಾಮನ್ನು ಪಾಲಿಸುವವರು ಸೈನ್ಯದೊಳಕ್ಕೆ ಬಂದರು.

ಅಳಿಯ ರಾಮರಾಯನಂತೂ ಸೆಕ್ಯುಲರ್ ಮೂರ್ಖತನದಲ್ಲಿ ಅಂದಿನಕಾಲಕ್ಕೆ ಡಬಲ್ ಪಿಹೆಚ್ಡಿ ಮಾಡಿದ್ದನೇನೋ,ಉಂಡ ಅನ್ನಕ್ಕೆ ದ್ರೋಹ ಬಗೆದು ಬಿಜಾಪುರದ ಸುಲ್ತಾನನಿಂದ ಹೊರದಬ್ಬಿಸಿಕೊಂಡಿದ್ದ ಗಿಲಾನಿ ಸಹೋದರರನ್ನು ಕರೆದುಕೊಂಡು ಬಂದು ಸೇನಾಪತಿಗಳನ್ನಾಗಿಸಿದ್ದಲ್ಲದೇ  ಅವರಡಿಯಲ್ಲಿ ೮೦ ಸಾವಿರ ಜನರ ಬೃಹತ್ ಸೈನ್ಯವನ್ನಿಡುವ ಮಹಾಮೂರ್ಖ ಕೆಲಸವನ್ನು ಮಾಡಿದ,ಸಾಮ್ರ್ಯಾಜ್ಯದ ಆಯಕಟ್ಟಿನ ಜಾಗಗಳಲ್ಲಿ ದಿಲಾವರ್,ಅಂಬರ್,ನೂರ್,ಬಜಲೀ ಖಾನರಂತಹ ಮುಸಲ್ಮಾನರೆಲ್ಲ ಉನ್ನತ ಹುದ್ದೆಯಲ್ಲಿ ತೂರಿಕೊಂಡಿದ್ದರು.ಒಂದುಕಡೆ ತಂತ್ರ ನಿಪುಣನೆಂದು ಹೊಗಳಿಸಿಕೊಳ್ಳುವ ರಾಮರಾಯ,ಮತ್ತೊಂದು ಕಡೆಯಿಂದ ಸೆಕ್ಯುಲರ್ ಖಾಯಿಲೆ ಅಂಟಿಸಿಕೊಂಡು ಅದಕ್ಕೆ ತದ್ವಿರುದ್ಧವೂ ಆಗಿದ್ದ.

ಇಸ್ಲಾಮ್ ವಿಷಯ ಬಂದಾಗ ಹೊರಗಿನ ಐದು ಸುಲ್ತಾನ ಶಾಹಿಗಳೂ ಮತ್ತೆ ಬಹಮನಿಗಳಾಗಬಲ್ಲರು ಮತ್ತು ತನ್ನ ಅನ್ನ ಉಂಡು ಬೆಳೆದವರೂ ತಮ್ಮ ರಿಲಿಜನ್ನಿಗಾಗಿ ಬೆನ್ನಿಗೆ ಚೂರಿ ಹಾಕಬಲ್ಲರು ಎನ್ನುವುದನ್ನು ಮರೆತುಕುಳಿತುಬಿಟ್ಟ. ಮಹಾಪ್ರಳಯದ ದಿನ ಬಂದೇ ಬಿಟ್ಟಿತು. ನಾಲ್ಕು ಸುಲ್ತಾನರು ಒಟ್ಟಾಗಿ ವಿಜಯನಗರದ ಮೇಲೆ ಮುತ್ತಿಗೆ ಹಾಕುವುದು ಖಚಿತವಾದಾಗ,ರಾಮರಾಯ ತನ್ನ ಪುತ್ರನಂತೆ ನೋಡಿಕೊಳ್ಳುತ್ತಿದ್ದ ಬಿಜಾಪುರದ ಸುಲ್ತಾನನು ಮೊದಲು ಯುದ್ಧದಲ್ಲಿ ತಟಸ್ಥವಾಗಿರುತ್ತೇನೆ ಎಂದವನು ಕಡೆಗೆ ಇಸ್ಲಾಮ್ ಹೆಸರಿನಲ್ಲಿ ಉಳಿದ ನಾಲ್ವರ ಜೊತೆ ಸೇರಿಕೊಂಡ, ಧರ್ಮ ಧರ್ಮ ದ್ರೋಹಿಗಳಿಗೆ ನಮ್ಮಲ್ಲಿ ಬರವೇ? ಅವರು ಈಗಲೂ ದಂಡಿಯಾಗಿಯೇ ಇದ್ದಾರೆ,ಆಗಲು ಇದ್ದರು. ಅಂತಹ ಸಣ್ಣಪುಟ್ಟ ಹಿಂದೂ ರಾಜರು ಬಹಮನಿಗಳ ಕೈಜೋಡಿಸಿದರು. ಅಂತಿಮವಾಗಿ  ರಕ್ಕಸತಂಗಡಿಯಲ್ಲಿ ಭೀಕರ ಕದನ ನಡೆಯಿತು. ಯುದ್ಧದಲ್ಲಿ ವಿಜಯನಗರದ ಕೈ ಮೇಲಾಗುವ ಹಂತದಲ್ಲಿ ಗಿಲಾನಿ ಸಹೋದರರಿಗೂ ಉಂಡ ಮನೆಯ ಅನ್ನಕ್ಕಿಂತ ಇಸ್ಲಾಮ್ ದೊಡ್ಡದೆನಿಸಿತು,ಧಿಡೀರ್ ಎಂದು ಪಕ್ಷ ಬದಲಾಯಿಸಿದ ಗಿಲಾನಿ ಸಹೋದರರ ಸೈನ್ಯ ವಿಜಯನಗರ ಸೈನ್ಯದ ವಿರುದ್ಧವೇ ತಿರುಗಿ ಬಿತ್ತು.ರಾಮರಾಯನ ಸೆಕ್ಯುಲರ್ ಹುಚ್ಚು ಯುದ್ಧ ಭೂಮಿಯಲ್ಲೇ ಬಿಟ್ಟು ಹೋಗಿತ್ತು,ಆದರೆ ಕಾಲ ಮಿಂಚಿ ಹೋಗಿತ್ತು, ೯೦ರ ವಯಸ್ಸಿನಲ್ಲೂ ಯುದ್ಧರಂಗದಲ್ಲಿದ್ದ ಪರಾಕ್ರಮಿ ರಾಮರಾಯನನ್ನು ಬಂಧಿಸಿ ತಲೆಕಡಿದು, ಯುದ್ಧಭೂಮಿಯಲ್ಲೆಲ್ಲಾ ಶತ್ರುಪಡೆ ತೋರಿಸುತ್ತಾ ಓಡಿತು.ಸಾಮ್ರಾಟ,ಸೇನಾಧಿಪತಿಗಳಿಲ್ಲದ ಸೇನೆ ದಿಕ್ಕಾಪಾಲಾಯಿತು. ಧರ್ಮರಕ್ಷಣೆಗೆಂದು ಜನ್ಮತಾಳಿ ಶತಮಾನಗಳ ಕಾಲ ಭವ್ಯವಾಗಿ ಮಿನುಗಿದ ಸಾಮ್ರಾಜ್ಯವು ಭೋಳೆ ಸ್ವಭಾವ,ಸೆಕ್ಯುಲರ್ ಕ್ಯಾನ್ಸರಿನಿಂದಾಗಿ ಧರಾಶಾಹಿಯಾಯಿತು.

ಕರ್ನಾಟಕ ಸ್ವಾಭಿಮಾನವನ್ನು ಬಹಮನಿಗಳು ಕದ್ದೊಯ್ದರು. ಅಂತಹ ಬಹಮನಿ ಸುಲ್ತಾನರನ್ನು ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ನೆನಪಿಸಿಕೊಳ್ಳುತ್ತಿದೆ.ಬಹಮನಿ ಉತ್ಸವ ಮಾಡಲು ಹೊರಟಿದ್ದ ಕಾಂಗ್ರೆಸ್ ನಾಯಕರು, ಚುನಾವಣಾ ಸಮಯವೆಂಬ ಏಕೈಕ ಕಾರಣಕ್ಕೆ ಈಗ ಹಿಂದೆ ಸರಿದಿದ್ದಾರೆಯೇ ಹೊರತು, ಹಿಂದೂ ಭಾವನೆಗಳನ್ನು,ಕರ್ನಾಟಕ ಸ್ವಾಭಿಮಾನವನ್ನು ಕೆಣಕಿ ಅವಮಾನಿಸಿದಂತೆ ಆಗುವುದೆಂಬ ಪಾಪ ಪ್ರಜ್ಞೆಯೇನೂ ಆ ಪಕ್ಷವನ್ನು ಕಾಡಿರುವುದಿಲ್ಲ. ನಿಜವಾಗಿ ಪಾಪಪ್ರಜ್ಞೆ ಇರುವವರಿಗೆ ಕಾಡಬೇಕಾಗಿದ್ದು ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಅಂತ್ಯವೇ ಹೊರತು,ಅದನ್ನು ಅಂತ್ಯಗೊಳಿಸಿ ತಿಂಗಳುಗಳ ಕಾಲ ಕೊಳ್ಳೆ,ಲೂಟಿ,ಅತ್ಯಾಚಾರ ಮಾಡಿದ ಬಹಮನಿಗಳಲ್ಲ.

ಬಹಮನಿಗಳು ರಾಜ್ಯದ ಸಂಸ್ಕೃತಿ,ಕಲೆಗೆ ಕೊಡುಗೆ ನೀಡಿದ್ದಾರೆ ಎಂದಿದ್ದರು ಪ್ರಿಯಾಂಕ್ ಖರ್ಗೆ,ಖರ್ಗೆ ಸಾಹೇಬರೇ, ರಾಮರಾಯನ ರುಂಡವನ್ನು ಗುಲ್ಬರ್ಗಕ್ಕೆ ಕೊಂಡೊಯ್ದು ವಿಶೇಷ ದ್ರಾವಣದಲ್ಲಿಟ್ಟು, ಅದನ್ನು ವಿಜಯ ಸಂಕೇತವಾಗಿ ಆಗಾಗ ಪ್ರದರ್ಶನಕ್ಕಿಟ್ಟು ವಿಕೃತಖುಷಿ ಪಡುತಿದ್ದಿದ್ದು ಬಹಮನಿ ಸಂಸ್ಕೃತಿಯೇ? ಅಥವಾ ಬಿಜಾಪುರದ ಸುಲ್ತಾನ, ರಾಮರಾಯನ ರುಂಡದ ಕಲ್ಲಿನ ಆಕೃತಿ ಮಾಡಿಸಿ ಅದರ ಬಾಯಿಯಿಂದ ಗಟಾರದ ನೀರು ಹರಿಯುವಂತೆ ಮಾಡಿಕೊಂಡಿದ್ದನಲ್ಲ ಆ ಬಹಮನಿ ಸಂಸ್ಕೃತಿಯೇ? ಅದೆಷ್ಟು ಕೊಬ್ಬು, ಅಹಂಕಾರದಿಂದ ಇವರು ಬಹಮನಿಗಳನ್ನು ನೆನಸಿಕೊಂಡು ಉತ್ಸವ ಮಾಡಲು ಹೊರಟಿದ್ದರು? ಬಹಮನಿ ಉತ್ಸವವೆನ್ನುವುದು ಮುಮ್ಮಡಿ ಬಲ್ಲಾಳ ವೀರ,ಕಂಪಿಲರಾಯ, ಗಂಡುಗಲಿ ಕುಮಾರರಾಮ,ಗುರು ವಿದ್ಯಾರಣ್ಯ,ಹಕ್ಕ-ಬುಕ್ಕ, ಕೃಷ್ಣದೇವರಾಯ, ಎಚ್ಚಮ ನಾಯಕನಿಗೆ ಮಾಡುವ ಅಪಮಾನವೆಂದು ಕಾಂಗ್ರೆಸ್ಸಿಗೇಕೆ ಅನಿಸಲಿಲ್ಲ? ಪುಡಿ ವೋಟಿಗಾಗಿ  ಕರ್ನಾಟಕ ಸ್ವಾಭಿಮಾನವನ್ನು ಬಹಮನಿಗಳಿಗೆ ಒತ್ತೆಯಿಡಲು ಹೊರಟಿದ್ದ ಕಾಂಗ್ರೆಸ್ಸನ್ನು ಸ್ವಾಭಿಮಾನಿ ಕನ್ನಡಿಗರೆಂದು ಕ್ಷಮಿಸಬಾರದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments