ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಸಿದ್ಧರಾಮಯ್ಯನವರಿಗೆ ಇದೆಯೇ?
– ರಾಕೇಶ್ ಶೆಟ್ಟಿ
ನೈತಿಕತೆ ಎಂದರೆ ಕೇಜಿಗೆಷ್ಟು ಎಂದು ಬದುಕುವ ಜನರು ಯಾರನ್ನು ಬೇಕಾದರೂ, ಏನನ್ನೂ ಬೇಕಾದರೂ ನಾಚಿಕೆ ಬಿಟ್ಟು ಪ್ರಶ್ನಿಸಬಲ್ಲರು. ಉದಾಹರಣೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊನ್ನೆ ಟ್ವಿಟರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು “ಲೋಕಪಾಲ್’ ಯಾಕ್ರೀ ನೇಮಕ ಮಾಡಿಲ್ಲ ಅಂತ ಪ್ರಶ್ನಿಸುತ್ತಿದ್ದಿದ್ದು! ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ನುಂಗಿ ನೀರು ಕುಡಿದ ಸಿಎಂ ಸಾಹೇಬರು ಪ್ರಧಾನಿಯವರನ್ನು ಆ ಪರಿ ಅಧಿಕಾರವಾಣಿಯಲ್ಲಿ ಪ್ರಶ್ನಿಸುವುದನ್ನು ನೋಡಿದಾಗ, ಇವರಿಗೆ ಪಾಪ ಪ್ರಜ್ಞೆಯೇ ಇಲ್ಲವೇನೋ ಎನ್ನಿಸುತ್ತಿತ್ತು.
ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ 1986ರಲ್ಲಿ ಅಸ್ತಿತ್ವಕ್ಕೆ ಬಂದರೂ, ರಾಜ್ಯದಲ್ಲಿ ‘ಲೋಕಾಯುಕ್ತ’ ಎನ್ನುವ ಸಂಸ್ಥೆಯೊಂದಿದೆ ಎಂದು ಜನ ಸಾಮಾನ್ಯರಿಗೆ ತಿಳಿದು ಬಂದಿದ್ದು ನ್ಯಾ.ವೆಂಕಟಾಚಲ ಅವರ ಕಾಲದಲ್ಲಿ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾ, ಬಹಿರಂಗ ನ್ಯಾಯಾಲಯ ಕಲಾಪಗಳನ್ನು ನಡೆಸುತ್ತಿದ್ದರು. ಅವರು ನಡೆಸುವ ಕಲಾಪಗಳು ಹಾಗೂ ಭ್ರಷ್ಟರ ಮೇಲಿನ ದಾಳಿಯ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ನೋಡುವಾಗ, ಜನಸಾಮಾನ್ಯರಿಗೂ ನಮ್ಮ ಕಷ್ಟ ಕೇಳುವವರೊಬ್ಬರಿದ್ದಾರೆ ಎನ್ನುವ ನೆಮ್ಮದಿ ಸಿಗುತಿತ್ತು. ಅದು ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲ.
ನ್ಯಾ.ವೆಂಕಟಾಚಲ ಅವರ ನಂತರ ಬಂದ ನ್ಯಾ.ಸಂತೋಷ್ ಹೆಗ್ಡೆಯವರು ಲೋಕಾಯುಕ್ತದ ಮೇಲಿನ ಜನರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದರು. ವೆಂಕಾಟಾಚಲರು ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸುವ ಮೂಲಕ ಚಾಲನೆ ನೀಡಿದ ಕೆಲಸವನ್ನು, ಭ್ರಷ್ಟ ಅಧಿಕಾರಿಗಳ ಜೊತೆಗೆ ಭ್ರಷ್ಟ ರಾಜಕಾರಣಿಗಳೂ ಲೋಕಾಯುಕ್ತವೆಂದರೆ ಬೆಚ್ಚುವಂತೆ ಮಾಡಿದವರು ಹೆಗ್ಡೆಯವರು. ಲಂಚಪಡೆಯುವಾಗ ಸಿಕ್ಕಿಬಿದ್ದ ಆಡಳಿತ ಪಕ್ಷದ ಶಾಸಕರನ್ನೇ ಜೈಲಿಗೆ ಕಳುಹಿಸಿದ್ದರು.
ಕೃಷ್ಣ ಅವರ ಕಾಲದಲ್ಲಿ ಶುರುವಾದ ಗಣಿಗಾರಿಕೆ, ಬಿಜೆಪಿ-ಜೆಡಿಎಸ್ ಕಾಲದಲ್ಲಾಗಲೇ ಗಣಿಗಲಾಟೆ, ಭ್ರಷ್ಟಾಚಾರದ ಕೂಪವಾಗಿ ಬದಲಾಗಿತ್ತು. ಯಡ್ಯೂರಪ್ಪನವರ ಕಾಲದಲ್ಲಿ ತೀರಾ ವಿಪರೀತಕ್ಕೆ ಹೋಗಿತ್ತು. ಗಣಿ ಹಗರಣದ ತನಿಖೆಗೆ ಇಳಿದಿದ್ದ ನ್ಯಾ.ಸಂತೋಷ್ ಹೆಗ್ಡೆಯವರು ಸರ್ಕಾರದ ಅಸಹಕಾರದ ಧೋರಣೆಯನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಲೋಕಾಯುಕ್ತ ನ್ಯಾಯಮೂರ್ತಿಗಳ ರಾಜೀನಾಮೆ ಅಂದಿಗೆ ದೊಡ್ಡ ಸುದ್ದಿಯಾಗಿತ್ತು. ನಾಡಿನ ನಾನಾ ವರ್ಗದವರೂ ನ್ಯಾ.ಹೆಗ್ಡೆಯವರಿಗೆ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಸಿದ್ಧರಾಮಯ್ಯನವರ ಕಾಲದಲ್ಲಿ ಲೋಕಾಯುಕ್ತದ ಬಗ್ಗೆ ಮೌನವಾಗಿ ಕುಳಿತಿರುವ ಗಂಜಿಗಿರಾಕಿಗಳು ಅಂದು ಯಡ್ಯೂರಪ್ಪನವರ ಕಾಲದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು ಇಂದು ಲೋಕಾಯುಕ್ತವನ್ನು ಮುಚ್ಚಿಸಿ ಮೀಸೆ ತಿರುವುತ್ತಿರುವ ಸಿದ್ಧರಾಮಯ್ಯ ಮತ್ತವರ ಕಾಂಗ್ರೆಸ್ ಪಕ್ಷದವರು ಅಂದು ಸದನದಲ್ಲಿ ಯಡಿಯೂರಪ್ಪನವರನ್ನು ಅಡ್ಡ ಹಾಕಿಕೊಂಡು ಸಂತೋಷ್ ಹೆಗ್ಡೆಯವರು ರಾಜೀನಾಮೆ ಹಿಂಪಡೆಯುವಂತೆ ಮಾಡಿ ಎಂದೂ, ಲೋಕಾಯುಕ್ತಕ್ಕೆ ಸರ್ವಾಧಿಕಾರ ನೀಡಿ ಎಂದು ಆಗ್ರಹಿಸಿದ್ದನ್ನು ಮರೆತಂತಿದೆ. ಹೆಗ್ಡೆಯವರ ರಾಜೀನಾಮೆಯ ಹಿನ್ನೆಲೆಯಲ್ಲಿ ಗಣಿ ಹಗರಣಗಳು ಸೇರಿಕೊಂಡು ಒಂದಿಡೀ ವಾರ ಸುಧೀರ್ಘ ಚರ್ಚೆ ನಡೆದಿತ್ತು. ಅಂತಿಮವಾಗಿ ಮುಖ್ಯಮಂತ್ರಿಗಳಾಗಿದ್ದ ಯಡ್ಯೂರಪ್ಪನವರು ಸಿಟ್ಟಿನ ಬರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ ಕುರ್ಚಿಯೆಡೆಗೆ ನುಗ್ಗುವ ಭಂಗಿಯಲ್ಲಿ ಹೊರಟಿದ್ದರು, ಅದಕ್ಕೆ ಪ್ರತಿಯಾಗಿ ಸಿದ್ಧರಾಮಯ್ಯನವರು ತೋಳುತಟ್ಟಿ ಬನ್ನಿ ಎಂದಿದ್ದರು. ಇದೆ ಗಲಾಟೆಯಲ್ಲಿಯೇ ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದು ರೆಡ್ಡಿ ಬ್ರದರ್ಸ್. (ಅಂದ ಹಾಗೆ ಆ ತಂಡದಲ್ಲಿದ್ದ ಕೂಡ್ಲಿಗಿ ನಾಗೇಂದ್ರರಂತವರು ಇಂದು ಸಿದ್ಧರಾಮಯ್ಯನವರ ಬಗಲಿನಲ್ಲೇ ಕುಳಿತಿದ್ದಾರೆ. ೬೦ ಲಕ್ಷ ಮೌಲ್ಯದ ಉಡುಗೊರೆಯನ್ನು ರಾಹುಲ್ ಗಾಂಧಿಯವರಿಗೆ ಮೊನ್ನೆ ಮೊನ್ನೆ ನೀಡಿದ್ದಾರೆ). ಅಂತಿಮವಾಗಿ ಎಲ್.ಕೆ ಅಡ್ವಾಣಿಯವರ ಸಂಧಾನದಿಂದ ಹೆಗ್ಡೆಯವರು ರಾಜೀನಾಮೆ ಹಿಂಪಡೆಯುವ ಮೂಲಕ ಲೋಕಾಯುಕ್ತದಲ್ಲಿ ಮತ್ತೆ ಸಂತೋಷದ ದಿನಗಳು ಮರುಕಳಿಸಿದ್ದವು.
ನ್ಯಾ.ಹೆಗ್ಡೆಯವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗಣಿ ಅವ್ಯವಹಾರದ ಕುರಿತು ನೀಡಿದ ವರದಿ ರಾಜ್ಯದ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡಿದ್ದು ತಿಳಿದೇ ಇದೆ. ಈ ಮನುಷ್ಯ ಯಾವಾಗ ನಿವೃತ್ತಿಯಾಗುತ್ತಾರೋ ಎಂದು ಕಾಯುತಿದ್ದ ಭ್ರಷ್ಟರ ಹಿಂಡು ದೊಡ್ಡದಾಗಿಯೇ ಇತ್ತು. ಜೂನ್ 2010ರಂದು ನ್ಯಾ.ಸಂತೋಷ್ ಹೆಗ್ಡೆಯವರು ನಿವೃತ್ತರಾದಾಗ ಎಷ್ಟು ಜನ ಭ್ರಷ್ಟರು ಹಾಲು ಕುಡಿದರೋ. ಅವರೊಂದಿಗೆ ರಾಜ್ಯದ ಲೋಕಾಯುಕ್ತದಲ್ಲಿನ ಸಂತೋಷದ ದಿನಗಳು ಹೊರಟು ಹೋದವು. ಹೆಚ್ಚು ಕಡಿಮೆ ಒಂದು ವರ್ಷ ಲೋಕಾಯುಕ್ತ ಖುರ್ಚಿ ಖಾಲಿ ಉಳಿಯಿತು. ಆ ನಂತರ ಬಂದ ನ್ಯಾ.ಶಿವರಾಜ್ ಪಾಟೀಲರು ಹೆಚ್ಚು ದಿನ ಉಳಿಯಲಾಗಲಿಲ್ಲ.
ಪ್ರಾಮಾಣಿಕತೆಯನ್ನು ಬೋಧಿಸುವ ವ್ಯಕ್ತಿ ಹಾಗು ವ್ಯವಸ್ಥೆಯನ್ನು ಪಟ್ಟಭದ್ರರು ಯಾವತ್ತಿಗೂ ಸಹಿಸಲಾರರು. ಅಂತಹದ್ದೊಂದು ವ್ಯವಸ್ಥೆಯನ್ನು ಹಾಳುಗೆಡವಲು ಗೆದ್ದಲು ಹುಳಗಳನ್ನು ಎಲ್ಲಿಂದಾದರೂ ಹುಡುಕಿ ತಂದು ಅವರು ಬಿಡಬಲ್ಲರು. ಇಂತಹ ಪಾಪ ಕಾರ್ಯದಲ್ಲಿ ಆಡಳಿತ-ವಿರೋಧ ಪಕ್ಷಗಳಲ್ಲೆವೂ ಮೌನವಾಗಿ ಒಂದಾಗುತ್ತವೆ. ಹೀಗೆ ಬಂದವರೇ ವೈ.ಭಾಸ್ಕರ್ ರಾವ್ ಅವರ ಘನಂಧಾರಿ ಸಾಧನೆಗಳ ಬಗ್ಗೆ ಬರೆದರೆ ಮೈಲಿಗೆಯಾಗುವುದರಿಂದ ಬರೆಯದಿರುವುದೇ ಒಳಿತು. ಭ್ರಷ್ಟರನ್ನು ಹಿಡಿದು ಸುದ್ದಿಯಾಗುತ್ತಿದ್ದ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರೇ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಸುದ್ದಿಯಾದರು. ಇಡೀ ರಾಜ್ಯಕ್ಕೆ ರಾಜ್ಯವೇ ಅವರ ರಾಜೀನಾಮೇ ಕೇಳಿದರೂ ಅವರಿಗೇನು ಅನಿಸಲೇ ಇಲ್ಲ.
ವೈರುಧ್ಯ ನೋಡಿ, ನ್ಯಾ.ಸಂತೋಷ್ ಹೆಗ್ಡೆಯವರು ರಾಜೀನಾಮೆ ನೀಡಿದಾಗ ರಾಜ್ಯದ ಜನರು ಹಿಂಪಡೆಯಿರಿ ಅಂತ ದುಂಬಾಲು ಬಿದ್ದಿದ್ದರು. ಅದೇ ಈ ಭಾಸ್ಕರ್ ರಾವ್ ಅವರಿಗೆ ರಾಜೀನಾಮೆ ನೀಡಿ ಎಂದು ದುಂಬಾಲು ಬಿದ್ದರೂ ಕೊಡಲು ತಯಾರಿರಲಿಲ್ಲ ಪುಣ್ಯಾತ್ಮ. ಅಂತಿಮವಾಗಿ ಸಹಿ ಚಳವಳಿ, ಪದಚ್ಯುತಿ ನಿರ್ಧಾರವಾಗಲಿದೆ ಎನ್ನುವಾಗ ವಿಧಿಯಿಲ್ಲದೇ ಎದ್ದು ಹೋದರು. ಮೈಯಿಡಿ ಆರೋಪಗಳು ಬಂದರೂ ಭಾಸ್ಕರ್ ರಾವ್ ಅವರೆಡೆಗೇ ಸಿದ್ಧರಾಮಯ್ಯನವರ ಸರ್ಕಾರಕ್ಕೇ ಅದೇನೋ ವಿಚಿತ್ರ ಪ್ರೀತಿ ಮಮಕಾರ ತೋರಿಸಿದ್ದು ಎದ್ದು ಕಾಣುತಿತ್ತು. ತಿನ್ನು ತಿನ್ನಲು ಬಿಡು ಎನ್ನುವ ನೀತಿಯಿಂದಾಗಿಯೇ ಇಬ್ಬರಿಗೂ ಪರಸ್ಪರ ಪ್ರೀತಿ ಇತ್ತೆನಿಸುತ್ತದೆ.
ರಾವ್ ಹೋಗುತ್ತಿದ್ದಂತೆಯೇ, ಉಪಲೋಕಾಯುಕ್ತ ಮಜಗೆ ಅವರ ಅವಧಿಯೂ ಮುಗಿದಿತ್ತು. ಅಲ್ಲಿಗೆ, ಭ್ರಷ್ಟರ ಪಾಲಿಗೆ ಉಳಿದಿದ್ದ ಏಕೈಕ ಅಡ್ಡಿ ಅಂತ ಇದ್ದವರು ನ್ಯಾ.ಸುಭಾಷ್ ಅಡಿ. ಪ್ರತಿಪಕ್ಷಗಳು, ಮಾಧ್ಯಮ, ಜನ ಸಾಮಾನ್ಯರ ವಿರೋಧದ ನಡುವೆಯೂ ಜಿದ್ದಿಗೆ ಬಿದ್ದಂತೆ ಸರ್ಕಾರ ಅಡಿಯವರನ್ನು ಪದಚ್ಯುತಗೊಳಿಸುವ ಹಟಕ್ಕೆ ಬಿದ್ದಿತ್ತು.
ಇವೆಲ್ಲದರ ನಡುವೆ, ನ್ಯಾ.ಸುಭಾಷ್ ಅಡಿಯವರ ಮೇಲಿನ ಆರೋಪಗಳ ಕುರಿತ ತನಿಖೆ ನಡೆಸಲು ಹೈಕೋರ್ಟ್ ನೇಮಿಸಿದ್ದ ನ್ಯಾ.ಬೂದಿಹಾಳ್ ಸಮಿತಿ ತನಿಖೆ ನಡೆಸಿ, ನ್ಯಾ.ಅಡಿಯವರಿಗೆ ಕ್ಲೀನ್ ಚಿಟ್ ನೀಡಿತಾದರೂ, ಅನಾಥವಾದ ಲೋಕಾಯುಕ್ತ ಸಂಸ್ಥೆಯ ಹಾಗೂ ಪ್ರಬಲ ಪ್ರತಿಪಕ್ಷವಿಲ್ಲದ ಸನ್ನಿವೇಶದ ಲಾಭ ಪಡೆದ ಸಿದ್ಧರಾಮಯ್ಯನವರ ತುಘಲಕ್ ಸರ್ಕಾರ ಎಲ್ಲಾ ರಂಗಗಳಿಂದ ವಿರೋಧವನ್ನೂ ಲೆಕ್ಕಿಸದೆ ತನ್ನ ಹಟಮಾರಿತನದ ಧೋರಣೆ ಮುಂದುವರೆಸಿ ಹಲ್ಲಿಲ್ಲದ ಎಸಿಬಿಯನ್ನು ಅಸ್ತಿತ್ವಕ್ಕೆ ತಂದಿತು.
ಖಾಲಿಯಿದ್ದ ಲೋಕಾಯುಕ್ತ ಹುದ್ದೆಗೆ ಅರ್ಹ ವ್ಯಕ್ತಿಗಳ ಆಯ್ಕೆಯ ಸಂದರ್ಭದಲ್ಲಿ ಉನ್ನತ ಸಮಿತಿ ಶಿಫಾರಸ್ಸು ಮಾಡಿದ್ದು ನ್ಯಾ.ವಿಕ್ರಂಜಿತ್ ಸೇನ್ ಅವರ ಹೆಸರನ್ನು. ಆದರೆ ಹಟಮಾರಿತನವೇ ಮೈವೆತ್ತಂತೆ ವರ್ತಿಸುವ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿದ್ದು (Of course ವಿರೋಧದ ನಡುವೆ) ನ್ಯಾ.ನಾಯಕ್ ಅವರ ಹೆಸರನ್ನು. ರಾಜ್ಯಪಾಲರು ಒಂದಲ್ಲ ಅಂತ ಎರಡು ಬಾರಿ ನ್ಯಾ.ನಾಯಕ್ ಅವರ ಹೆಸರನ್ನು ತಿರಸ್ಕರಿಸಿದ್ದರು. ಅಂತಿಮವಾಗಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲಾಯಿತಾದರೂ, ಅವರಿಗೇ ಯಾವುದೇ ಅಧಿಕಾರವನ್ನೇನೂ ಸರ್ಕಾರ ಉಳಿಸಿರಲಿಲ್ಲ.
ಹಾಗಾಗಿ, ಒಂದು ಕಾಲದಲ್ಲಿ ಭ್ರಷ್ಟರ ಎದೆ ನಡುಗಿಸುತ್ತಿದ್ದ ಲೋಕಾಯುಕ್ತ ಸಂಸ್ಥೆಯ ಹೆಸರೇ ಈಗ ಎಲ್ಲೂ ಕೇಳಿ ಬರುವುದಿಲ್ಲ. ಈಗಿನ ಸರ್ಕಾರದ ಭ್ರಷ್ಟಾಚಾರದ ಕೇಸುಗಳೆಲ್ಲ ಎಸಿಬಿಗೆ ಹೋದಷ್ಟೇ ವೇಗದಲ್ಲಿ ಕ್ಲೀನ್ ಚಿಟ್ ಪಡೆದೋ ಅಥವಾ FIR ದಾಖಲಾಗದೆಯೋ ಕೊಳೆಯುತ್ತಿವೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ ಎನ್ನುತ್ತಾರೆ. ಪೊಲೀಸರನ್ನೇ ಮನೆಗೆ ಕಳುಹಿಸಿದ ನಂತರ ಆಟ ಕಳ್ಳರದ್ದೇ ತಾನೇ? ಹೌದು ಸಿದ್ಧರಾಮಯ್ಯನವರು ರಾಜ್ಯದಲ್ಲಿ ಭ್ರಷ್ಟಾಚಾರದ ಹೆಸರೇ ಇಲ್ಲದಂತೆ ಮಾಡಿದ್ದಾರೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಸುವ ಮೂಲಕ, ರಬ್ಬರ್ ಸ್ಟ್ಯಾಂಪ್ ನಂತಹ ಎಸಿಬಿ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ…
ಕಾಂಗ್ರೆಸ್ ಪಕ್ಷ ಸುದ್ದಿ ಹುಟ್ಟು ಹಾಕುವ ಬಗೆಯನ್ನು ನಾವು ಗಮನಿಸಬೇಕು. ಬಳ್ಳಾರಿ ಗಣಿಧಣಿಗಳು ಸದನದಲ್ಲಿ ಸವಾಲು ಹಾಕಿದ್ದಕ್ಕೆ ಉತ್ತರವಾಗಿ ಆಗ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಮಾಡಿತ್ತು. ಅದನ್ನು “ಭ್ರಷ್ಟಚಾರದ ವಿರುದ್ಧ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ” ಅಂತ ಮಾಧ್ಯಮಗಳಲ್ಲಿ ಇಮೇಜ್ ಮಾಡಿಸಿ ಜನರನ್ನು ನಂಬಿಸಲಾಯಿತು.ಆಸ್ಥಾನ ಪಂಡಿತರು ‘ಭ್ರಷ್ಟಾಚಾರ ವಿರೋಧಿ’ ಸಿದ್ಧರಾಮಯ್ಯ ಅಂತೊಂದು ಇಮೇಜ್ ಸೃಷ್ಟಿಸಿದರು. ಅಂತಹ ಇಮೇಜ್ ಇಟ್ಟುಕೊಂಡು ಬಂದ ಸಿದ್ಧರಾಮಯ್ಯ ಮಾಡಿದ್ದೇನು? ಅವರ ಪಾದಯಾತ್ರೆಗೆ ಸ್ಪೂರ್ತಿಯಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಸಿದ್ದು ಸಿದ್ಧರಾಮಯ್ಯನವರ ಘನಂಧಾರಿ ಸಾಧನೆ, ಅದೇ ಅವರ ನವಕರ್ನಾಟಕ ನಿರ್ಮಾಣ. ಜನರ ನೆನಪಿನ ಶಕ್ತಿ ಕಡಿಮೆ ಎಂಬ ಹಳೆಯ ಕಾಲದ ಮಾತನ್ನು ನಂಬಿ ಹೀಗೆ ಮೆರೆಯುತ್ತಿರುವ ಸಿಎಂ ಸಾಹೇಬರು ನೆನಪಿನಲ್ಲಿಡಬೇಕಾಗಿರುವುದು, ಈ ಡಿಜಿಟಲ್ ಯುಗದಲ್ಲಿ ಚಿತ್ರಗುಪ್ತನ ಲೆಕ್ಕಚಾರದಂತೆ ತಮ್ಮ ಅಂಗೈನಿಂದ ಬಿಚ್ಚಿಟ್ಟ ದುಬೈನ ದುಬಾರಿ ವಾಚಿನ ಕತೆಯೂ ಸೇರಿದಂತೆ, ಸರ್ಕಾರದ “ಭ್ರಷ್ಟಚಾರ ಭಾಗ್ಯ” ಯೋಜನೆಗಳೆಲ್ಲವೂ ಅಂಗೈಯಲ್ಲೇ ಸಿಗುತ್ತವೆ, ೨೦೧೮ರಲ್ಲಿ ಜನರ ಮುಂದೆ ಅದನ್ನು ಹಿಡಿದು ಹೋಗುವವರು ಬೇಕಾಗಿದ್ದಾರೆ ಅಷ್ಟೇ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಿರ್ಮಾಣಕ್ಕಾಗಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಭರಪೂರ ಕೇಸುಗಳನ್ನು ನೀಡಿದೆ ಬಳಸಿಕೊಳ್ಳುವುದಷ್ಟೇ ಬಾಕಿ.
ಇವತ್ತಿಗೆ ಯಡಿಯೂರಪ್ಪನವರನ್ನು ಜೈಲಿಗೆ ಹೋಗಿ ಬಂದವರು ಎಂದು ಪದೇ ಪದೇ ಹೀಯಾಳಿಸುತ್ತಾರೆ ಸಿದ್ಧರಾಮಯ್ಯ. ಒಂದು ವೇಳೆ ಲೋಕಾಯುಕ್ತ ಸಂಸ್ಥೆಯಿದ್ದು ಅದರಲ್ಲಿ ಸಂತೋಷ್ ಹೆಗ್ಡೆಯವರಂತವರು ಇದ್ದಿದ್ದರೇ, ಸಿದ್ಧರಾಮಯ್ಯನವರು ಸೇರಿದಂತೆ ಅವರ ಸಚಿವರು, ಶಾಸಕರಲ್ಲಿ ಎಷ್ಟು ಜನರು ಬೇಲ್ ಮೇಲೆ ಓಡಾಡಬೇಕಿತ್ತೋ? ಯಡ್ಯೂರಪ್ಪನವರು ಜೈಲಿಗೆ ಹೋಗಿ ಬಂದವರೇ ಇರಬಹುದು, ಆದರೆ ಅವರು ಲೋಕಾಯುಕ್ತವನ್ನು ಮುಚ್ಚಿಸುವಂತಹ ನೀಚ ಕೆಲಸಕ್ಕೆ ಎಂದೂ ಕೈ ಹಾಕಲಿಲ್ಲ, ತಮ್ಮ ಸರ್ಕಾರವಿದ್ದಾಗ ರಾಜೀನಾಮೆ ನೀಡಿದ ಹೆಗ್ಡೆಯವರನ್ನು ಅವರೆಂದೂ ಬದಿಗೆ ಸರಿಸುವ ಪ್ರಯತ್ನವನ್ನು ಮಾಡಲಿಲ್ಲ. ಬದಲಿಗೆ ಅಂದಿಗೆ ಅಗತ್ಯವಿದ್ದ 15 ಸ್ಥಾನಗಳಲ್ಲಿ 12 ಸ್ಥಾನಕ್ಕೆ ನೇಮಕಾತಿ ಮಾಡಿಸಿದ್ದರು. 292 ಹೊಸ ಸ್ಥಾನಗಳಿಗೆ ನೋಟಿಫಿಕೇಶನ್ ಕೂಡ ಹೊರಡಿಸಿದ್ದರು, ಯಾದಗಿರಿ ಜಿಲ್ಲೆಯಲ್ಲೊಂದು ಲೋಕಾಯುಕ್ತದ ಕಚೇರಿಯನ್ನು ತೆಗೆಯಲು ಅನುಮತಿ ಕೊಟ್ಟಿದ್ದರು, ಅದು ಪ್ರಜಾಪ್ರಭುತವಾದಲ್ಲಿ ನಂಬಿಕೆಯಿದ್ದವರು ನಡೆದುಕೊಳ್ಳುವ ರೀತಿ, ಹಾಗೆ ನಡೆದುಕೊಂಡಿದ್ದವರು ಯಡ್ಯೂರಪ್ಪನವರು. ಮೇಲ್ನೋಟಕ್ಕೆ ಸಮಾಜವಾದಿಯೆನ್ನುತ್ತ ಸರ್ವಾಧಿಕಾರಿ ಧೋರಣೆ ತೋರಿಸುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷಕ್ಕೆ ಅದೆಲ್ಲಾ ಎಲ್ಲಿ ಅರ್ಥವಾಗಬೇಕು ಹೇಳಿ? ಇಡಿ ದೇಶಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಶಕ್ತಿಯಿಲ್ಲದಂತೆ ಮಾಡಿ ಮುಚ್ಚಿಸಿರುವ ಸಿದ್ದರಾಮಯ್ಯನವರು, ಈಗ ಕೇಂದ್ರದಲ್ಲಿ ಲೋಕಪಾಲವೇಕೆ ಇಲ್ಲ ಎಂದು ಟ್ವಿಟರಿನಲ್ಲಿ ಮೋದಿಯವರನ್ನು ಪ್ರಶ್ನಿಸುತ್ತಾರಲ್ಲ, ಸಿದ್ಧರಾಮಯ್ಯನವರಿಗೆ ಪಾಪಪ್ರಜ್ಞೆ ಕಾಡುವುದಿಲ್ಲವೇ?