ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 6, 2018

2

ದಲಿತ-ಮುಸ್ಲಿಂ ರಾಜಕಾರಣದ ‘ಭ್ರಮೆ’ ಮತ್ತು J.N ಮಂಡಲ್ ಎಂಬ ‘ವಾಸ್ತವ’- (ಭಾಗ-೧)

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

“ಸತ್ಯ ಮತ್ತು ನ್ಯಾಯ ಉಳಿಸಲು ಎರಡೇ ವಿಧಾನ – ಟಿಪ್ಪುವಿನ ಕತ್ತಿ, ಅಂಬೇಡ್ಕರ್ ಸಂವಿಧಾನ” ಹೀಗೊಂದು ಬರಹವಿರುವ ಚಿತ್ರವನ್ನು ಗೆಳೆಯರೊಬ್ಬರು ವಾಟ್ಸಾಪ್ ಮಾಡಿದ್ದರು.’ಮುಸ್ಲಿಂ + ದಲಿತ ರಾಜಕಾರಣ’ದ ಉದ್ದೇಶವಿಟ್ಟುಕೊಂಡಿರುವ ಈ ಚಿತ್ರ ನೋಡಿದಾಗ ನನಗೆ ನೆನಪಾದವರು ಜೋಗೇಂದ್ರ ನಾಥ್ ಮಂಡಲ್ (J.N ಮಂಡಲ್).

ಈಗಿನ ಬಾಂಗ್ಲಾದೇಶ, ಆಗಿನ ಪೂರ್ವ ಬಂಗಾಳದಲ್ಲಿ ಜನಿಸಿದವರು J.N ಮಂಡಲ್. ಜಾತಿಯಿಂದ ನಾಮಶೂದ್ರರಾಗಿದ್ದ ಅವರ ರಾಜಕೀಯ ಜೀವನ ಶುರುವಾಗಿದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ಸಿನ ಸರಲ್ ಕುಮಾರ್ ದತ್ತಾ ಅವರನ್ನು ಸೋಲಿಸುವ ಮೂಲಕ. ಸುಭಾಷ್ ಚಂದ್ರ ಬೋಸ್ ಅವರಿಂದ ಪ್ರಭಾವಿತರಾಗಿದ್ದ ಮಂಡಲ್ ಅವರು, ಬೋಸ್ ಅವರನ್ನು ಕಾಂಗ್ರೆಸ್ಸಿನಿಂದ ಹೊರಹಾಕಿದ ನಂತರ ಮುಸ್ಲಿಂ ಲೀಗ್ ಸೇರಿಕೊಂಡರು. ಅಂಬೇಡ್ಕರ್ ಅವರೊಂದಿಗೆ ಸೇರಿಕೊಂಡು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಸ್ಥಾಪಿಸಿದ್ದರು, 1946ರಲ್ಲಿ ಬಂಗಾಳದಲ್ಲಿ ನಡೆದ ಕೋಮುಗಲಭೆಯ ಸಮಯದಲ್ಲಿ, ದಲಿತರು, ಮುಸ್ಲಿಮರ ಮೇಲೆ ದಾಳಿ ಮಾಡದೇ ಗಲಭೆಯಿಂದ ದೂರವಿರಬೇಕೆಂದೂ ಮತ್ತು ಕಾಂಗ್ರೆಸ್ ಪಕ್ಷದ ಮೇಲ್ವರ್ಗದ ಜನ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆಂದು ಕರೆಕೊಟ್ಟಿದ್ದರು. Direct Action Day ಮೂಲಕ ಬಂಗಾಳದ ಹಿಂದೂಗಳ Ethnic Cleansing ಗಾಗಿ  ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಕರೆ ನೀಡಿ, ಸಾವಿರಾರು ಮುಗ್ಧ ಜೀವಗಳ ಮಾರಣಹೋಮಕ್ಕೆ ಕಾರಣವಾದಗಾಲೂ, ಮಂಡಲ್ ಅವರ ನಿಷ್ಟೆ ಮುಸ್ಲಿಂ ಲೀಗ್ ಕಡೆಗೆ ಇತ್ತು. ಕಡೆಗೆ ಭಾರತ ವಿಭಜನೆಯಾಗಿ, ಪಾಕಿಸ್ತಾನ ಹುಟ್ಟಿಕೊಂಡಾಗ, ಆ ದೇಶದ ಮೊದಲ ಕಾನೂನು-ಕಾರ್ಮಿಕ ಸಚಿವರಾದವರು J.N ಮಂಡಲ್. ಕಾಮನ್ವೆಲ್ತ್ ಮತ್ತು ಕಾಶ್ಮೀರ ವ್ಯವಹಾರಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದವರು.

ಮುಸ್ಲಿಂ ಲೀಗ್ ಜೊತೆ ಸೇರಿಕೊಂಡು ‘ದಲಿತ-ಮುಸ್ಲಿಂ’ ಐಕ್ಯತೆಯ ರಾಜಕಾರಣ ಮಾಡಿ, ಪ್ರತ್ಯೇಕ ಪಾಕಿಸ್ತಾನವನ್ನು ಗಳಿಸಿಕೊಂಡು, ಪಾಕಿಸ್ತಾನದಲ್ಲಿ ದಲಿತರ ಬದುಕು ಭವ್ಯವಾಗಿರಲಿದೆಯೆಂದು ನಂಬಿಕೊಂಡಿದ್ದ ಮಂಡಲ್ ಅವರ ಭ್ರಮೆ ಕಳಚಲು ಹೆಚ್ಚು ಸಮಯ ಹಿಡಿಯಲಿಲ್ಲ. 1950ರ ಅಕ್ಟೊಬರ್ ತಿಂಗಳಿಗೆ, ಅಂದರೆ ಪಾಕಿಸ್ತಾನ ಸ್ಥಾಪನೆಯಾದ ಮೂರೇ ಮೂರೂ ವರ್ಷಗಳೊಳಗೆ ಅವರಿಗೆ ಇಸ್ಲಾಮ್ ಮತಾಂಧತೆಯ ಅರಿವಾಗಿಹೋಗಿತ್ತು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಲಿಯಾಖತ್ ಅಲಿಖಾನ್ ಅವರಿಗೆ ಸುಮಾರು 14 ಪುಟಗಳ ಸುಧೀರ್ಘ ಪತ್ರ ಬರೆದು ರಾಜೀನಾಮೆ ನೀಡಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಂಡಲ್ ಅವರು, ತಮ್ಮ ಜೀವಿತಾವಧಿಯ 18 ವರ್ಷಗಳನ್ನು ಭಾರತದಲ್ಲೇ ಕಳೆದವರು.

ಭಾರತ ವಿಭಜನೆಯ ಸಮಯದಲ್ಲಿ ಶುರುವಾಗಿ, ಸ್ವತಂತ್ರ ಭಾರತದ ಮೊದಲ ನಲ್ವತ್ತು ದಶಕಗಳ ಕಾಲ ಮರೆಯಾಗಿದ್ದ ದಲಿತ-ಮುಸ್ಲಿಂ ರಾಜಕಾರಣದ ಭ್ರಮೆ ಈಗ ಮತ್ತೆ ಕಾವೇರುತ್ತಿದೆ. ಈ ಸಮಯದಲ್ಲಿ, ದಲಿತ-ಮುಸ್ಲಿಂ ರಾಜಕಾರಣದ ಭ್ರಮೆಯೆದುರು, ಮಂಡಲ್ ಎಂಬ ವಾಸ್ತವವನ್ನು ನಿಲ್ಲಿಸಿನೋಡಬೇಕಿದೆ. ಮಂಡಲ್ ಅವರ ಸುಧೀರ್ಘ ಪತ್ರದ ಪ್ರಮುಖ ಅಂಶಗಳನ್ನು ಹೇಳುತ್ತಾ ಹೋಗುತ್ತೇನೆ. ಇವೆಲ್ಲವೂ ಮಂಡಲ್ ಅವರದ್ದೇ ಮಾತುಗಳು.

” ಆತ್ಮೀಯ ಪ್ರಧಾನ ಮಂತ್ರಿಗಳೇ,
ಪೂರ್ವ ಬಂಗಾಳದ ದಲಿತ ಸಮುದಾಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ನನ್ನ ಜೀವಮಾನದ ಉದ್ದೇಶದಲ್ಲಿ ಸೋತಿರುವ ಅತೀವ ನೋವು ಹಾಗೂ ವಿಷಾದದಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ…” ಎಂದು ಶುರುವಾಗುವ ಪತ್ರದಲ್ಲಿ, ಮಂಡಲ್ ಅವರು ತಾವು ಮತ್ತು ತಮ್ಮನ್ನು ನಂಬಿ ಪಾಕಿಸ್ತಾನದ ಜೊತೆ ಸೇರಿಕೊಂಡರವರ ಕತೆ-ವ್ಯಥೆಗಳನ್ನು ಹಾಗೂ ಮುಸ್ಲಿಂ ಲೀಗ್ ಜೊತೆಗಿನ ತಮ್ಮ ಸಂಬಂಧ ರೂಪುತಳೆದ ಬಗೆಯನ್ನು ದಾಖಲಿಸುತ್ತಾ ಹೋಗುತ್ತಾರೆ

1. 1943ರಲ್ಲಿ ಬಂಗಾಳ ಸರ್ಕಾರ ಪಥನವಾದಾಗ, ಮುಸ್ಲಿಂ ಲೀಗಿನ ಮುಖಂಡರೆಲ್ಲ ಬಂದು 21 ದಲಿತ ಶಾಸಕರಿದ್ದ ನನ್ನ ಬೆಂಬಲವನ್ನು ಕೋರಿದ್ದೀರಿ. 3 ದಲಿತರಿಗೆ ಸಚಿವ ಸ್ಥಾನ, ದಲಿತರಿಗೆ 5 ಲಕ್ಷದ ವಾರ್ಷಿಕ ಶಿಕ್ಷಣ ಅನುದಾನದಂತಹ ನಿಬಂಧನೆಗಳ ಆಧಾರದಲ್ಲಿ, ಖ್ವಾಜಾ ನಯೀಮುದ್ದೀನ್ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

2. ನಿಬಂಧನೆಗಳ ಹೊರತಾಗಿ, ಬಂಗಾಳದಲ್ಲಿ ದಲಿತರು-ಮುಸ್ಲಿಮರ ನಡುವೆ ಇದ್ದ ಸಾಮ್ಯತೆಗಳೂ ನಾನು ಮುಸ್ಲಿಂ ಲೀಗ್ ಜೊತೆ ಕೈಜೋಡಿಸಲು ಕಾರಣವಾಗಿದ್ದವು. ಶೈಕ್ಷಣಿಕವಾಗಿ ಎರಡೂ ಸಮುದಾಯಗಳು ಹಿಂದುಳಿದಿದ್ದವು. ವ್ಯಾವಹಾರಿಕವಾಗಿವೂ ಇಬ್ಬರ ನಡುವೆ ಸಾಮ್ಯತೆಯಿತ್ತು. ಎರಡೂ ಸಮುದಾಯದಲ್ಲಿ ಕಾರ್ಮಿಕರು, ಕೃಷಿಕರು, ಮೀನುಗಾರರು ಇದ್ದರು. ಹೀಗಿದ್ದಾಗ ನಾವು ಅಧಿಕಾರ ಹಿಡಿದರೆ ಎರಡೂ ಸಮುದಾಯದ ಮತ್ತು ಆ ಮೂಲಕ ಬಂಗಾಳದ ಬಹುಜನರ ಶ್ರೇಯೋಭಿವೃದ್ಧಿಯ ಮಾಡಬಹುದು ಮತ್ತು ಮುಖ್ಯವಾಗಿ ಸಮಾಜದಲ್ಲಿ ಕೋಮು ಸಾಮರಸ್ಯ ಮೂಡಿಸಬಹುದೆಂಬ ಕಾರಣಕ್ಕೆ ನಾನು ಮುಸ್ಲಿಂ ಲೀಗ್ ಜೊತೆಯಾಗಲು ಒಪ್ಪಿಕೊಂಡಿದ್ದೆ.

3. 1946ರಲ್ಲಿ ನಡೆದ ಚುನಾವಣೆಯಲ್ಲಿ, ಮುಸ್ಲಿಂ ಲೀಗಿನ ಸುಹ್ರವಾಡಿಯವರ ಸಂಪುಟದಲ್ಲಿ ನಾನು ಏಕೈಕ ದಲಿತನಾಗಿದ್ದೆ. 1946ರ ಆಗಸ್ಟ್ 16ರಂದು, ಮುಸ್ಲೀಂ ಲೀಗ್ ‘Direct-Action Day’ಗೆ ಕೊಟ್ಟ ಕರೆಯಿಂದಾಗಿ ಮಾರಣಹೋಮವೇ ನಡೆದುಹೋಯಿತು. ಹಿಂದೂಗಳು ನನ್ನ ರಾಜೀನಾಮೆ ಕೇಳಿದರು. ನನ್ನ ಬದುಕು ದುಸ್ತರವಾಗಿತ್ತು, ಪ್ರತಿದಿನ ಬೆದರಿಕೆ ಪತ್ರಗಳು ಬರುತ್ತಲೇ ಇದ್ದವು. ಇಷ್ಟಾದರೂ ನಾನು ನನ್ನ ನಿಷ್ಟೆಗೆ ಬದ್ಧವಾಗಿದ್ದೆ. ನಮ್ಮ ಪತ್ರಿಕೆ ಜಾಗರಣ ಮೂಲಕ, ಮುಸ್ಲಿಂ ಲೀಗ್ – ಕಾಂಗ್ರೆಸ್ ನಡುವಿನ ಈ ಗಲಭೆಯಲ್ಲಿ ಮೂಗು ತೂರಿಸದಂತೆ ದಲಿತರಿಗೆ ಕರೆ ನೀಡಿದ್ದೆ. ಕ್ರೋಧಿತರಾಗಿದ್ದ ಹಿಂದೂಗಳ ಗುಂಪಿನಿಂದ ನನ್ನನ್ನು ಉಳಿಸಿದವರು ನನ್ನ ಅಕ್ಕಪಕ್ಕ ವಾಸವಿದ್ದ ಹಿಂದೂಗಳೇ.

ಕಲ್ಕತ್ತಾದ ಗಲಭೆಗೆ ನೌಕಾಲಿಗೂ ಹರಡಿತು. ದಲಿತರು ಸೇರಿದಂತೆ ಹಿಂದೂಗಳ ಮಾರಣ ಹೋಮವಾಯಿತು, ನೂರಾರು ಜನರನ್ನು ಇಸ್ಲಾಮ್ ಗೆ ಮತಾಂತರಿಸಲಾಯಿತು. ನನ್ನ ಸಮುದಾಯದ ಜನರ ಮನೆ-ಬದುಕು ಬರಡಾಯಿತು. ಗಲಭೆಗಳ ನಂತರ ಆ ಜಾಗಗಳಿಗೆ ಭೇಟಿಕೊಟ್ಟ ನನಗೆ ಅಲ್ಲಿನ ಹಿಂದೂಗಳ ಪರಿಸ್ಥಿತಿ ನೋಡಿ ವಿಪರೀತ ಸಂಕಟವಾಯಿತು. ಆದರೂ ನಾನು ಸುಹ್ರವಾಡಿ ಸರ್ಕಾರ ಮತ್ತು ಮುಸ್ಲಿಂ ಲೀಗ್ ಜೊತೆಗೆ ಮುಂದುವರೆದೆ. ಕಲ್ಕತ್ತ ಗಲಭೆಯ ನಂತ್ರ ಸುಹ್ರವಾಡಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದಾಗಲೂ, 4 ಜನ ಆಂಗ್ಲೋ ಇಂಡಿಯನ್ ಹಾಗು 4 ಜನ ದಲಿತರ ಬೆಂಬಲ ಪಡೆದು ಸರ್ಕಾರ ಉಳಿಸಿದ್ದು ನಾನು.

4. 1946ರ ಅಕ್ಟೊಬರ ತಿಂಗಳಲ್ಲಿ, ಸುಹ್ರವಾಡಿಯವರಿಂದ ನನಗೆ ಅಚಾನಕ್ ಆಗಿ ಮಧ್ಯಂತರ ಭಾರತ ಸರ್ಕಾರದಲ್ಲಿ ಸಚಿವನಾಗುವ ಆಹ್ವಾನ ಬಂದಿತು ಮತ್ತು ನನ್ನ ನಿರ್ಧಾರ ತಿಳಿಸಲು ಒಂದು ಗಂಟೆ ಸಮಯ ನೀಡಿದ್ದರು. ಒಂದು ವೇಳೆ ನನ್ನ ನಾಯಕರಾದ ಡಾ. ಬಿ. ಆರ್ ಅಂಬೇಡ್ಕರ್ ಅವರಿಗೆ ಒಪ್ಪಿಗೆಯಿಲ್ಲದೆ ಇದ್ದರೇ, ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ನಿಬಂಧನೆಯ ಮೇಲೆ ನಾನು ಸೇರಿಕೊಂಡೆ. ನಂತರ ಟೆಲಿಗ್ರಾಮ್ ಮೂಲಕ ಆಗ ಲಂಡನ್ನಿನಲ್ಲಿದ್ದ ಅಂಬೇಡ್ಕರ್ ಅವರ ಒಪ್ಪಿಗೆಯೂ ಸಿಕ್ಕಿತು.

5. ಮಧ್ಯಂತರ ಸರ್ಕಾರದಲ್ಲಿ ನಾನು ಸಚಿವನಾದ ನಂತರ, ನನ್ನನ್ನು ಭೇಟಿ ಮಾಡಿದ ಸುಹ್ರವಾಡಿಯವರು, ಗೋಪಾಲ್ ಗಂಜ್ ನಲ್ಲಿ, ಕೋಮು ಗಲಭೆಯ ಸಾಧ್ಯತೆ ಇರುವುದಾಗಿಯೂ, ಅಲ್ಲಿ ನನ್ನ ಸಮುದಾಯವಾದ ನಾಮಶೂದ್ರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಅವರು ಹಾಗೂ ಮುಸ್ಲಿಮರ ನಡುವೆ ಶಾಂತಿ ಸಭೆ ನಡೆಸುವಂತೆ ಕೇಳಿಕೊಂಡರು. ನಾನು ಒಂದು ಡಜನ್ನಿಗೂ ಹೆಚ್ಚು ಮೀಟಿಂಗ್ ನಡೆಸಿದೆ. ಫಲಿತಾಂಶವಾಗಿ ನಾಮಶೂದ್ರರು ಪ್ರತೀಕಾರವನ್ನು ಕೈ ಬಿಟ್ಟರು. ಆ ಮೂಲಕ ದೊಡ್ಡ ಗಲಭೆಯೊಂದನ್ನು ನಾನು ತಪ್ಪಿಸಿದ್ದೆ.

6. ಪಾಕಿಸ್ತಾನದ ಸ್ಥಾಪನೆಯಾದ ನಂತರ ಶರಿಯತ್ ಕಾನೂನು ಜಾರಿಗೆ ತಂದು ಪಾಕಿಸ್ತಾನವನ್ನು ಇಸ್ಲಾಮಿಕ್ ಸ್ಟೇಟ್ ಮಾಡುತ್ತಾರೆಂದು ನಾನು ಮೊದಲೇ ಊಹಿಸಿದ್ದೆನೇದಾರೂ, ಖೈದ್ ಈ ಆಜಂ ಮಹಮ್ಮದ್ ಅಲಿ ಜಿನ್ನಾ ಅವರು ಮಾಡಿದ ಭಾಷಣದಲ್ಲಿ, ಪಾಕಿಸ್ತಾನದಲ್ಲಿ ಹಿಂದೂ-ಮುಸ್ಲಿಮರಿಗೆ ಸಮಾನ ಕಾನೂನು, ಅವಕಾಶಗಳು ಇರಲಿವೆ ಮತ್ತು ಎಲ್ಲರೂ ಪಾಕಿಸ್ತಾನಿಗಳು. ಜನರನ್ನು ರಿಲಿಜನ್ ಆಧಾರದಲ್ಲಿ ಬೇಧ ಭಾವ ಮಾಡುವುದಿಲ್ಲ ಎಂದಿದ್ದು ಭರವಸೆ ಮೂಡಿಸಿತ್ತು. ಆದರೆ, ಆ ಭಾಷಣ ನಿಮ್ಮ ಒಪ್ಪಿಗೆಯಿಂದಲೇ ಎಂದೂ ಕಾರ್ಯರೂಪಕ್ಕೆ ಬರಲೇ ಇಲ್ಲ.

7. ಬಂಗಾಳದ ವಿಭಜನೆ : ಬಂಗಾಳದ ವಿಭಜನೆಯ ಸಮಯದಲ್ಲಿ, ನಾನು ಪ್ರತಿಯೊಬ್ಬರ ವಿರೋಧ ಕಟ್ಟಿಕೊಳ್ಳಬೇಕಾಯಿತು. ನನ್ನನ್ನು ಹಿಂದುಗಳ ವಿರೋಧಿ ಎಂದರು. ನಾನು ಅದೆಲ್ಲವನ್ನು ಸಹಿಸಿಕೊಂಡು ಪಾಕಿಸ್ತಾನದ ಪರ ನಿಂತೆ. ನನ್ನ ಕರೆಗೆ ಓಗೊಟ್ಟ ಪಾಕಿಸ್ತಾನದ 7 ಮಿಲಿಯನ್ ದಲಿತರು ನನ್ನ ಬೆಂಬಲಕ್ಕೆ ನಿಂತರು. ( ಈಗ ಅವರಲ್ಲಿ ಎಷ್ಟು ಜನ ಉಳಿದಿರಬಹುದು ? ಉಳಿದಿದ್ದರೂ ಮತಾಂತರವಾಗದೇ ಎಷ್ಟು ಜನ ಇದ್ದಿರಬಹುದು ? )

8. ಪಾಕಿಸ್ತಾನದ ಘೋಷಣೆಯಾದ ನಂತರದ ಮೊದಲ ಸರ್ಕಾರದ ಕ್ಯಾಬಿನೆಟ್ ನಲ್ಲಿ ನನ್ನನ್ನು ಸಚಿವರನ್ನಾಗಿ ನೀವು ಮಾಡಿದ್ದೀರಿ. ಪೂರ್ವ ಬಂಗಾಳದಲ್ಲಿ ಖ್ವಾಜ ನಯೀಮುದ್ದೀನ್ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಖ್ವಾಜ ನಯೀಮುದ್ದೀನ್ ಅವರೊಂದಿಗೆ ಮಾತನಾಡಿ ಇಬ್ಬರು ದಲಿತರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡುವಂತೆ ನಾನು ಕೇಳಿಕೊಂಡಿದ್ದೆ. ಆದರೆ ನಂತರ, ನಿಮ್ಮ ಹಾಗೂ ಖ್ವಾಜ ನಯೀಮುದ್ದೀನ್ ಮತ್ತು ಈಗಿನ ಪೂರ್ವ ಬಂಗಾಳದ ಮುಖ್ಯಮಂತ್ರಿ ನೂರುಲ್ ಅಮೀನ್ ಅವರೊಂದಿಗೆ ಈ ಕುರಿತು ನಡೆದ ಚರ್ಚೆ, ಘಟನೆಗಳು ಬೇಸರ ತರಿಸುವಂತವು.

ನೂರ್ ಉಲ್ ಅಮಿನ್ ಅವರು ಮುಖ್ಯಮಂತ್ರಿಯಾದ ನಂತರವೂ ಇದೆ ಸ್ಥಿತಿ ಮುಂದುವರೆಯಿತು. ನಿಮಗ್ಯಾರಿಗೂ ದಲಿತರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮನಸ್ಸಿಲ್ಲವೆನ್ನುವುದು ನನಗೆ ಅರ್ಥವಾಗಿ ಹೋಗಿತ್ತು. ಈ ನಡುವೆ ದಲಿತ ಸಂಘಟನೆಯ ಒಳಗೆ ಒಡೆದು ಆಳುವ ನೀತಿಯನ್ನು ನೂರ್ ಉಲ್ ಅಮಿನ್ ಮತ್ತು ಮುಸ್ಲಿಂ ಲೀಗಿನ ಇತರ ನಾಯಕರು ಮಾಡಿದ್ದಿರಿ. ಪಾಕಿಸ್ತಾನದ ದಲಿತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ನನಗಿದ್ದ ಕಾಳಜಿ, ನನ್ನ ನೇರ ಮಾತು ಮತ್ತು ಜನಪ್ರಿಯತೆ ನಿಮಗೆ ಮಗ್ಗುಲ ಮುಳ್ಳಾಗಿತ್ತು. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ…”

ಇದು ಮಂಡಲ್ ಅವರ ಸುಧೀರ್ಘ ಪತ್ರದ ಮೊದಲ ಕೆಲವು ಅಂಶಗಳು. ಮುಸ್ಲಿಂ ಲೀಗ್ ನಾಯಕರು ದಲಿತರನ್ನು ಹೇಗೆ ತಮ್ಮ ಮತಗಳಿಕೆ ಮತ್ತು ರಾಜಕೀಯ ಹಿತಾಸಕ್ತಿಯ ಗುರಾಣಿಯನ್ನಾಗಿ ಬಳಸಿಕೊಂಡರು ಎನ್ನುವುದು ಅರ್ಥವಾಯಿತಲ್ಲ. ಅಂತಿಮವಾಗಿ ಮುಸ್ಲಿಂ ಲೀಗ್ ಬಯಸುತ್ತಿರುವುದೇನು? ಎನ್ನುವುದನ್ನು ಮಂಡಲ್ ಅವರ ಮಾತುಗಳಲ್ಲೇ ಲೇಖನದ ಮುಂದಿನ ಭಾಗದಲ್ಲಿ ಹೇಳುತ್ತೇನೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments