ರಾಜಕಾರಣಿಗಳೇ, ಮಹಿಳೆಯರಿಗೆ ರಕ್ಷಣೆಕೊಡಿ ಇಲ್ಲವೇ ಜಾಗ ಖಾಲಿ ಮಾಡಿ
– ಚೈತ್ರ ಗೌಡ ಹಾಸನ
ಸ್ನಾತಕೋತ್ತರ ಪತ್ರಿಕೋದ್ಯಮ,
ಮಾನಸಗಂಗೋತ್ರಿ, ಮೈಸೂರು.
ಆದಿಯಿಂದಲೂ ಸೃಷ್ಟಿಯ ಮೂಲ ಹೆಣ್ಣು, ಕರುಣೆ, ವಾತ್ಸಲ್ಯ, ಮಮತೆ, ಅಕ್ಕರೆ ತಾಳ್ಮೆ ಹೀಗೆ ವಿಶಿಷ್ಟ ಶಕ್ತಿಗಳ ಸಂಗಮದ ಜೊತೆಗೆ ನವಿರಾದ ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಈ ಪ್ರಕೃತಿಯಿಂದಲೇ ವಿಭಿನ್ನ ಶಕ್ತಿಯನ್ನು ಪಡೆದಿರುವ ಪೋಷಕಿ, ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಶಿಶುವನ್ನು ಹೊತ್ತು ಪೋಷಿಸಿ, ತನ್ನ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸಿ ಮರುಹುಟ್ಟು ಎನ್ನುವಂತಹ ನೋವನ್ನು ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿ ಅಂತಹ ಸಾಧನೆ ಮಾಡಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ ನಡತೆಗಳಿಂದ ಪೂಜನೀಯ ಸ್ಥಾನದಲ್ಲಿದ್ದಾಳೆ.
ನಮಗೆಲ್ಲಾ ತಿಳಿದಿರುವಂತೆ ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು, ಸ್ತ್ರೀಯರು ಬ್ರಹ್ಮ ವಾದಿಯಾಗಿ ಬ್ರಹ್ಮ ಸಭೆಗಳಲ್ಲಿ ಪುರುಷರ ಸಮಾನವಾಗಿ ವಾದಮಾಡಬಲ್ಲವರಾಗಿದ್ದರು ಎಂದು ಹೇಳಿ ಅಪಾಲಾ, ಲೋಪಮುದ್ರೆ, ಮೈತ್ರೇಯಿ, ಗಾರ್ಗಿ, ಉಭಯ ಭಾರತಿ ಇತ್ಯಾದಿ ಬೆರಳೆಣಿಕೆ ಸ್ತ್ರೀಯರನ್ನು ಉದಾಹರಣೆಯಾಗಿ ನೀಡುತ್ತಾರೆ. ಆದರೆ ಇವರ್ಯಾರೂ ಸಾಮಾನ್ಯ ಮಹಿಳೆಯರು ಆಗಿರಲಿಲ್ಲ. ಇವರೆಲ್ಲ ಉನ್ನತ ವರ್ಗದ, ಉಚ್ಚ ವರ್ಣದ ಋಷಿಯ ಪತ್ನಿಯರಾಗಿದ್ದರು. ಅಷ್ಟಕ್ಕೂ ಅವರಲ್ಲಿ ಗಾರ್ಗಿ, ಮೈತ್ರೇಯರು ತಮಗೇಕೆ ಬ್ರಹ್ಮ ವಿದ್ಯೆ ನೀಡುತ್ತಿಲ್ಲವೆಂದು ತಮ್ಮ ಪತಿಯೊಂದಿಗೆ ವಾದವೇ ಹೂಡಿದ್ದರು. ವೇದಗಳ ಕಾಲದಲ್ಲಿ ಸಾಮಾನ್ಯ ವರ್ಗ, ವರ್ಣದ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುದಕ್ಕೆ ಯಾವುದೇ ಮಾಹಿತಿಗಳು ಇಲ್ಲ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹೋರಾಟದ ಸಂದರ್ಭಗಳಲ್ಲಿ ಮಹಿಳೆಯರು ಮುಂದಿದ್ದರೆ ಹೋರಾಟ ಯಶಸ್ಸು ಕಂಡಂತೆ ಸರಿ ಎಂದು ಹೇಳುತ್ತಿದ್ದರು, ಅದಕ್ಕಾಗಿ ಸ್ತ್ರೀಯರಿಗೆ ಸಾಮಾಜಿಕವಾಗಿ ಹೊರಬರುವಂತೆ ಒತ್ತಾಯಿಸಲಾಯಿತೇ ಹೊರತು ಹೆಣ್ಣಿನ ಉದ್ಧಾರಕ್ಕಾಗಿ ಅಲ್ಲ. ಗಾಂಧಿ ಹೆಣ್ಣನ್ನು ಗೌರವಿಸುತ್ತಾರೆ, ಪೂಜ್ಯ ಮನೋಭಾವನೆಯಿಂದ ಕಾಣುತ್ತಾರೆ ಆದರೆ ಸಮಾನ ನೆಲೆಯಲ್ಲಿ ಬರುವುದನ್ನು ಸಹಿಸುವುದಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಒಪ್ಪಿದ ಗಾಂಧೀಜಿ ಗೃಹಿಣಿಗೆ ಗೃಹದಾಚೆಗೆ ಬದುಕಿಲ್ಲ ಎಂದೇ ಭಾವಿಸಿದ್ದರು. ಹೆಣ್ಣು ಗಂಡಿನ ಸಮಾನತೆಯ ಬಗ್ಗೆ ಗಾಂಧೀಜಿಯಲ್ಲಿ ಗೊಂದಲಗಳಿದ್ದವು.
21 ನೇ ಶತಮಾನದಲ್ಲಿಯೂ ಕ್ರೂರ ಮನೋಭಾವನೆಯ ಪುರುಷರಿಗೆ ಹೆಣ್ಣು ಶಿಕ್ಷಣವನ್ನು ಕಲಿಯುವುದು ಬೇಡವಾಗಿದೆ. ಗುಲಾಮಳಾಗಿ ಪುರುಷನ ಅಡಿಯಾಳಾಗಿ ದುಡಿಯಬೇಕಾಗಿದೆ. ಹೆಣ್ಣು ಶಿಕ್ಷಣ ಪಡೆದರೆ ಜ್ಞಾನವಂತಳಾಗುತ್ತಾಳೆ, ವಿಚಾರವಂತಳಾಗುತ್ತಾಳೆ, ಸರಿ ತಪ್ಪುಗಳನ್ನು ಪ್ರಶ್ನಿಸುತ್ತಾಳೆ, ಪುರುಷನ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಸ್ವತಂತ್ರಳಾಗುತ್ತಾಳೆಂಬುವ ಮನಸ್ಥಿತಿ ಬೇರೆ ಇದೆ. ಇದಾವುದೂ ಆಗಬಾರದೆಂಬ ದೃಷ್ಟಿಯಿಂದಲೇ ಬಾಲ್ಯ ವಿವಾಹ ಇಂದಿಗೂ ಅಸ್ತಿತ್ವದಲ್ಲಿರುವುದು .
10 ವರ್ಷದಿಂದೀಚೆಗೆ ಭಾರತೀಯ ಉದ್ಯಮ ಕ್ಷೇತ್ರದಲ್ಲಿ, ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಸಮಾಜದ ಜವಾಬ್ದಾರಿಯುತ ಸ್ಥಾನಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ 16 ನೇ ಲೋಕಸಭೆಯ ಸದಸ್ಯರ ಪೈಕಿ 61 ಮಹಿಳೆಯರು ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಆಯ್ಕೆಯಾಗಿದ್ದಾರೆ. ಆದರೆ ಹೆಚ್ಚು ಮಹಿಳೆಯರು ತೊಡಗಿಸಿಕೊಂಡಿರುವ ಉದ್ಯೋಗ ಕ್ಷೇತ್ರಗಳನ್ನು ನಾವು ನೋಡುವುದಾದರೆ ಕೃಷಿ ಕ್ಷೇತ್ರ 69%. ಆದರೆ ರಾಜಕೀಯ ಕೇವಲ 1%. ಶ್ರಮ ಕ್ಷೇತ್ರದಲ್ಲಿ ಹೆಚ್ಚು ಆಡಳಿತದಲ್ಲಿ ಕೇವಲ 1% ರಷ್ಟು ಮಾತ್ರ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿದ್ದು ಲೋಕಸಭೆಯಲ್ಲಿ 1996 ರಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕೆಂದು ರೂಪಿಸಿದ ಮಸೂದೆ ಅನುಮೋದನೆಯಾಗದೆ ಹಾಗೆಯೇ ಬಾಕಿ ಉಳಿದಿರುವುದು ಶೊಚನೀಯ ಸಂಗತಿ. ಮಹಿಳೆ ತನ್ನ ಹಕ್ಕು ಮತ್ತು ಅಧಿಕಾರಗಳ ಪಡೆಯುವಲ್ಲಿ ಮುಂದಾದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚುನಾವಣೆಯನ್ನ ಎದುರಿಸುವ ಮಹಿಳಾ ಅಭ್ಯರ್ಥಿಗಳು ಹಿಂಸೆ, ಬೈಗುಳ, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಆಕೆಯ ಚಾರಿತ್ರ್ಯ ಹರಣ ಮಾಡುವಂತಹ ಪ್ರಯತ್ನಗಳು ರಾಜಕೀಯದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿವೆ. ಮಹಿಳೆಯರು 33% ರಷ್ಟು ಮೀಸಲಾತಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಡೆದಿದ್ದರೂ ಸಹ ಸ್ವತಂತ್ರವಾಗಿ ಆಳ್ವಿಕೆ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮೀಸಲಾತಿಯಿಂದ ಸ್ಥಾನ ಗಿಟ್ಟಿಸಿದ ಮಹಿಳಾ ರಾಜಕಾರಣಿಯನ್ನು ಆಳುವುದು ಅವರ ಮನೆಯ ಯಜಮಾನರು. ಮೀಸಲಾತಿ ಮಹಿಳೆ ಮೇಯರ್ ಆಗಿದ್ದರೆ ಬೈ ಡಿಫಾಲ್ಟ್ ಮೇಯರ್ ಆಕೆಯ ಪತಿ ಅಥವಾ ಇತರ ಯಾರಾದರೂ ಅನುಭವ ಇರುವ ಗಂಡಸು. ಅದಾಗ್ಯೂ ಅನ್ಯಾಯ, ಅನಾಚಾರ, ಅತ್ಯಾಚಾರ, ಭ್ರೂಣ ಹತ್ಯೆಗಳನ್ನು ತಡೆಯಲಾಗುತಿಲ್ಲ. ಪ್ರತಿ ಹೆಜ್ಜೆ-ಹೆಜ್ಜೆಗೂ ದೌರ್ಜನ್ಯಗಳನ್ನು ಎದುರಿಸಿ, ಶೋಷಣೆಗೆ ಸಿಲುಕಿ ಹೆಣ್ಣು ಜರ್ಝರಿತಳಾಗಿದ್ದಾಳೆ. ದೇಶದೆಲ್ಲೆಡೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಕಂಡು ಆತಂಕ ಉಂಟಾಗುತ್ತಿದೆ. ಸ್ನೇಹ, ಪ್ರೀತಿ, ಆತ್ಮವಿಶ್ವಾಸದ ಬದುಕು ಕನಸಾಗುತ್ತಿದೆ. ಕಾನೂನು ಸ್ತ್ರೀಯರ ಪರವಾಗಿದ್ದರೂ ಅದರ ಅರಿವಿಲ್ಲದೆ ಹಲವಾರು ಮಿತಿಗಳಲ್ಲಿ ಸಿಲುಕಿ ನರಳುವಂತಾಗಿದೆ. ಇದರ ನಿವಾರಣೆಗಾಗಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ, ಮಹಿಳೆಯರಿಗೆ ನಿರ್ಣಾಯಕ ಸ್ಥಾನದ ಅವಶ್ಯಕತೆ ಇದೆ, ವಿಧಾನಸಭೆ ಲೋಕಸಭೆಗಳಲ್ಲಿ ಮಹಿಳೆಯರು ಸಮಾನ ಸಂಖ್ಯೆಯಲ್ಲಿರಬೇಕು ರಾಜಕೀಯ ಅಧಿಕಾರದ ಹೊರತು ಮಹಿಳೆಯ ರಕ್ಷಣೆ ಬೆಳವಣಿಗೆ ಸಾಧ್ಯವಿಲ್ಲ. ಮಹಿಳಾ ಸಬಲೀಕರಣ ಆಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಸಂಪೂರ್ಣವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಇದಕ್ಕಾಗಿ ಅಧಿಕಾರ ಮತ್ತು ಸಂಪತ್ತಿನ ಸಮಾನ ಹಂಚಿಕೆಯಾಗಬೇಕು.
ಹೆಣ್ಣು ಸಮಾಜದ ಕಣ್ಣು ಎಂದು ಹೇಳುತ್ತಾರೆ; ಆದರೆ ಎಲ್ಲರೂ ದಾಸಿಯ ದೃಷ್ಟಿಯಲ್ಲಿ ನೋಡುತ್ತಾರೆ. ಹೆಣ್ಣನ್ನು ದೇವರೆಂದು ಪೂಜಿಸುವ ಕಾಲವೊಂದಿತ್ತು. ಈಗ ಗಾಣದ ಎತ್ತಾಗಿ ಬಳಸಿಕೊಳ್ಳುತ್ತಿದ್ದಾರೆ. ಹುಟ್ಟುತ್ತಲೇ ನಿರಾಸೆ, ಬೆಳೆಯುವಾಗ ಹಿಂಸೆ, ನಾಲ್ಕು ಗೋಡೆಗಳ ಬಂಧನದಲ್ಲೇ ಹೆಣ್ಣಿನ ಆಸೆಗಳು ಬತ್ತಿ ಹೋಗುತ್ತಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹರೆಯದ ಒಂದು ಹೆಣ್ಣು ನಿಂತಿದ್ದರೆ ಕಾಮದ ಕಣ್ಣಿನಲ್ಲಿ ಅವಳನ್ನು ಕಾಣುತ್ತಿವರೇ ಹೊರತು ಆಕೆಯು ಯಾರೋ ಒಬ್ಬರ ತಾಯಿ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತೆ ಅನ್ನುವ ಮನೋಭಾವನೆ ಬರುವುದೇ ಇಲ್ಲವೇ? ಮದರ್ ತೆರೆಸಾ, ಸರೋಜಿನಿ ನಾಯ್ಡು, ಸುನೀತಾ ವಿಲಿಯಮ್ಸ್, ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಇಂದಿರಾ ಗಾಂಧಿಯಂತಹ ಎಷ್ಟೋ ಜೀವಗಳನ್ನು ಈ ಭೂಮಿಗೆ ಕಾಲಿಡುವ ಮುನ್ನವೇ ಕೊಂದಿರಿ? ತೊದಲು ನುಡಿಯ ಮುದ್ದು ಕಂದಮ್ಮ, ಈ ಕ್ರೂರ ಸಮಾಜದ ಅರಿವೇ ಇಲ್ಲದ ಪುಟ್ಟ ಮಕ್ಕಳು, ಭವಿಷ್ಯದ ಸಾವಿರ ಕನಸುಗಳನ್ನೊತ ಹದಿಹರೆಯದ ಯುವತಿ, ತನ್ನ ದೇಹದೊಳು ಮತ್ತೊಂದು ಜೀವವನ್ನೊತ್ತ ಹೆಣ್ಣು ಮಗಳು, ಮಬ್ಬು ಕಣ್ಣಿನ ಮುದುಕಿ ಇನ್ನೂ ಅದೆಷ್ಟು ಜೀವಗಳು ಬಲಿಯಾಗಬೇಕು ಕಾಮ ಚಟಕ್ಕೆ? ಶಾಲಾ ಶಿಕ್ಷಕರು, ಪ್ರಾಧ್ಯಾಪಕರು, ಚಿಕ್ಕಪ್ಪ, ಸ್ನೇಹಿತ, ಅಣ್ಣ ಇವರೆಲ್ಲ ಯಾಕೆ ಜನ್ಮ ಕೊಟ್ಟ ತಂದೆಯಿಂದಲೇ ರಕ್ಷಣೆ ಇಲ್ಲದಿರುವಾಗ ನಂಬಿಕೆ ಅನ್ನುವ ಪದವನ್ನು ನಂಬುವುದಾದರೂ ಹೇಗೆ ? 21 ನೇ ಶತಮಾನದ ಸೂರ್ಯನ ಸ್ಪಷ್ಟ ಬೆಳಕಿನಲ್ಲಿ, ಸಾವಿರಾರು ಜನರ ಕಣ್ಣೆದುರಿಗೆ, ನಡು ರಸ್ತೆಯಲ್ಲೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವಾಗ ಗಾಂಧಿಯ ಮಧ್ಯರಾತ್ರಿ 12 ಗಂಟೆಯ ಕನಸೆಲ್ಲಿ? ಮಹಿಳಾ IAS, IPS ಅಧಿಕಾರಿಗಳು, ಮಹಿಳಾ ರಾಜಕಾರಣಿಗಳು, ಶಿಕ್ಷಕಿಯರಂತಹ ಮಹಿಳೆಯರನ್ನೇ ಹಿಂಸಿಸಿದ ಈ ಸಮಾಜದಲ್ಲಿ ಅಸಹಾಯಕ ಬಡ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಶಾಲಾ ಕಾಲೇಜುಗಳಲ್ಲಿ, ರೈಲು ನಿಲ್ದಾಣ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ, ಸ್ವಂತ ಮನೆಯಲ್ಲಿ ಹೀಗೆ ಹೆಣ್ಣು ಲೈಂಗಿಕ ಕಿರುಕುಳಕ್ಕೆ ಒಳಗಾಗದೇ ಇರುವ ಸ್ಥಳ ನಿಜವಾಗ್ಲೂ ಈ ಭೂಮಿ ಮೇಲೆ ಇದೆಯೇ? ಹೆಣ್ಣಿನ ಮೇಲಿನ ದೌರ್ಜನ್ಯ ಹಿಂದೆಯೇ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.
ಹೆಣ್ಣಿನ ಮೇಲೆ ಯಾಕಿಷ್ಟು ದೌರ್ಜನ್ಯಗಳು ನಡೆಯುತ್ತಲೇ ಇವೆ, ಹೆಣ್ಣಿಗೆ ಯಾಕೆ ರಕ್ಷಣೆ ಸಿಗುತ್ತಿಲ್ಲ? ಮಹಿಳೆ ತನ್ನನ್ನು ತಾನು ಯಾಕೆ ರಕ್ಷಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕೆಲವು ದೇಶಗಳಲ್ಲಿ ಹೆಣ್ಣಿಗೆ ಲೈಂಗಿಕ ಕಿರುಕುಳವನ್ನು ನೀಡಿದರೆ ಮರಣದಂತಹ ಕಠಿಣ ಶಿಕ್ಷೆಯನ್ನು ನೀಡುತ್ತಾರೆ. ಇಂತಹ ಕಠಿಣ ಶಿಕ್ಷೆ ನಮ್ಮ ದೇಶದಲ್ಲಿ ಯಾಕೆ ಜಾರಿ ಇಲ್ಲ ? ಹೆಣ್ಣು ಯಾಕೆ ಪರಾವಲಂಬಿ ಯಾಗಿದ್ದಾಳೆ, ಹೆಣ್ಣನ್ನು ಎರಡನೇ ದರ್ಜೆಯ ನಾಗರಿಕರಾಗಿ ಯಾಕೆ ಕಾಣ್ತಿದ್ದಾರೆ, ವೇತನದಲ್ಲಿ ಯಾಕೆ ತಾರತಮ್ಯ ಇದೆ, ಆರ್ಥಿಕವಾಗಿ ಯಾಕೆ ಸ್ವಾವಲಂಬಿ ಆಗುತ್ತಿಲ್ಲ? ಲಿಂಗಾನುಪಾತದಲ್ಲಿ ಯಾಕಿಷ್ಟು ಅಂತರವಿದೆ? ಪ್ರತಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಯಾಕೆ ಸಿಗುತ್ತಿಲ್ಲ? ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಹೆಣ್ಣು ಮಕ್ಕಳು ಕೇವಲ 6% ರಷ್ಟು ಮಾತ್ರ . ದುರಾದೃಷ್ಟವೆಂದರೆ ಪ್ರಪಂಚದಲ್ಲಿಯೇ ಅತಿ ಹೆಚ್ಚು ಲಿಂಗ ತಾರತಮ್ಯ ಇರುವುದು ನಮ್ಮ ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 50 ಮಿಲಿಯನ್ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ವ್ಯವಸ್ಥಿತವಾದ ಲಿಂಗ ತಾರತಮ್ಯದಿಂದಾಗಿ ಕಾಣೆಯಾಗುತಿದ್ದಾರೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ಮತ್ತು ಕೆಲಸದ ಸ್ಥಳಗಳಲ್ಲಿ ಲಿಂಗ ಆಧಾರಿತ ಅಸಮಾನತೆ ನಿವಾರಣೆ 2186 ಕ್ಕೆ ಸಾಧ್ಯವಿಲ್ಲವೆಂದು ವರದಿಯೊಂದು ಹೇಳಿದೆ.
2000 ಹೆಣ್ಣು ಮಕ್ಕಳು ಹುಟ್ಟುವುದಕ್ಕೂ ಮುನ್ನವೇ ಗರ್ಭಪಾತದಿಂದ ಭ್ರೂಣ ಹತ್ಯೆಗೆ ಒಳಗಾಗುತ್ತಾರೆ. ನಮ್ಮ ದೇಶದಲ್ಲಿ ಶೇ 47 ರಷ್ಟು ಹೆಣ್ಣು ಮಕ್ಕಳು 18 ವರ್ಷ ತುಂಬುವುದರೊಳಗೇ ಮದುವೆಯಾಗುತ್ತಿದ್ದಾರೆ. ಮಕ್ಕಳ ಹಕ್ಕುಗಳ ಸಂಸ್ಥೆಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಬಾಲ್ಯ ವಿವಾಹವಾಗುತ್ತಿದ್ದಾರೆ! ದೇಶದಲ್ಲಿ ಪ್ರತಿ ವರ್ಷ 8000 ಮಹಿಳೆಯರ ವರದಕ್ಷಿಣೆ ಸಾವು ದಾಖಲಾಗುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲೆ ಜರುಗುತ್ತಿರುವ ದೌರ್ಜನ್ಯಗಳ ಪ್ರಮಾಣ ವರ್ಷಕ್ಕೆ 2,44,270 ಕ್ಕೂ ಹೆಚ್ಚು. ವರ್ಷಕ್ಕೆ ಸುಮಾರು 30,947 ಅತ್ಯಾಚಾರದ ಪ್ರಕರಣಗಳು ದಾಖಲಾಗಿ ಇಡೀ ಸ್ತ್ರೀ ಕುಲವೇ ಬೆಚ್ಚಿ ಬೀಳುವಂತಾಗಿದೆ. ಭಾರತದಲ್ಲಿ ಪ್ರತಿ 54 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ತಿಳಿಸುತ್ತದೆ. ಹೀಗಿರುವಾಗ ಇನ್ನು ಸಾವಿರ ಮಹಿಳಾ ದಿನಾಚರಣೆಗಳು ನಡೆದರೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ, ತನ್ನ ರಕ್ಷಣೆ ತಾನೆ ಮಾಡಿಕೊಳ್ಳಬೇಕು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾ ಗಾಂಧಿ, ಪ್ರತಿಭಾ ಪಾಟೀಲ್, ಮಾಯಾವತಿ ಸರೋಜಿನಿ ನಾಯ್ಡುರಂತಹ ಮಹಿಳೆಯರು ಸ್ಪೂರ್ತಿಯಾಗಬೇಕು, ಮಹಿಳೆ ನಿರ್ಣಾಯಕ ಸ್ಥಾನಕ್ಕೆ ಬರಬೇಕು ಇದಕ್ಕಾಗಿ ರಾಜಕಾರಣಿಗಳೇ ರಕ್ಷಣೆ ಕೊಡಿ ಅಥವಾ ಜಾಗ ಖಾಲಿಮಾಡಿ.