ಹಿಂದೂಧರ್ಮದಿಂದ ಹೊರಹೋಗುವುದು ಎಂದರೇನು?
– ರಾಕೇಶ್ ಶೆಟ್ಟಿ
ಅರ್ಧ ಸೌಟು ಲಾರ್ಡ್ ಕರ್ಜನ್,ಒಂದು ಹಿಡಿಯಷ್ಟು ನೆಹರೂ-ಜಿನ್ನಾ ಮಿಶ್ರಣಕ್ಕೆ ಅರ್ಧ ಗ್ಲಾಸು ತುಘಲಕ್-ಟಿಪ್ಪು ಎಂಬ ದ್ರಾವಣ ಬೆರೆಸಿದರೇ ಸಿದ್ದರಾಮಯ್ಯ ತಯಾರಾಗಿಬಿಡುತ್ತಾರೆ. ಲಾರ್ಡ್ ಕರ್ಜನ್ ಸಾಧನೆ ಬಂಗಾಳ ವಿಭಜನೆಯದ್ದು. ಭಾರತ ವಿಭಜನೆಯ ಸಾಧನೆ ಜಿನ್ನದ್ದಾದರೂ,ಕಾಂಗ್ರೆಸ್-ನೆಹರೂ ಯೋಗದಾನವನ್ನು ಮರೆಯುವಂತಿಲ್ಲವಲ್ಲ.ಅದೇ ಸಾಲಿಗೆ ಸೇರುವುದು ಹಿಂದೂ ವಿಭಜನೆ ಮಾಡಿದ ಸನ್ಮಾನ್ಯ ಸಿದ್ದರಾಮಯ್ಯ. ಕರ್ಜನ್ ಬಂಗಾಳ ವಿಭಜನೆಗೆ ಕೈ ಹಾಕಿದ್ದು ಮತೀಯ ಆಧಾರದ ಮೇಲೆ,ಕರ್ಜನ್ ಹಾದಿಯನ್ನೇ ದಾರಿದೀಪವಾಗಿಸಿಕೊಂಡವ ಜಿನ್ನಾ,ದೇಶವನ್ನೇ ಮತೀಯವಾಗಿ ವಿಭಜಿಸಿದರು.ಇಬ್ಬರೂ ನೆಮ್ಮದಿಯಿಂದಿದ್ದ ಸಮಾಜವನ್ನು ವಿಭಜಿಸಿದ್ದು ಅಧಿಕಾರಕ್ಕಾಗಿ. ಈಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತವರ ಸಚಿವರು ವೀರಶೈವ-ಲಿಂಗಾಯಿತ ವಿಭಜನೆ ಮಾಡಿದ್ದು ಚುನಾವಣೆ ಗೆಲ್ಲಬೇಕೆಂಬ ಏಕೈಕ ಕಾರಣಕ್ಕಾಗಿ.ರಾಜಕೀಯ ಕಾರಣದಾಚೆಗೆ ಈ ವಿಭಜನೆಯಲ್ಲಿರುವುದು ವ್ಯಾವಹಾರಿಕ ಕಾರಣಗಳು, ಅಲ್ಪಸಂಖ್ಯಾತ ಬ್ಯಾಡ್ಜಿನಡಿ ಸಿಗುವ ಸೌಲಭ್ಯಗಳ ಆಧಾರವಷ್ಟೇ.ರಾಜಕೀಯ,ವ್ಯಾವಹಾರಿಕ ಕಾರಣಗಳಿಗಿಂತ , ಈ ವಿಷಯದ ವೈಚಾರಿಕ ಆಯಾಮದ ಬಗ್ಗೆ ಗಮನಹರಿಸುವುದು ಈ ಲೇಖನದ ಉದ್ದೇಶ.
ಲಿಂಗಾಯಿತರು “ಹಿಂದೂ ಧರ್ಮ” ಭಾಗವಲ್ಲ,ಅವರದ್ದು ಪ್ರತ್ಯೇಕ “ಧರ್ಮ” ಎಂದು ನಡೆಯುತ್ತಿರುವ ಈ ಚರ್ಚೆಯಲ್ಲಿ ಮುಖ್ಯವಾಗುವುದು ಹಿಂದೂ+ಧರ್ಮ ಪದಗಳು. ಒಂದು ಉದಾಹರಣೆಯ ಮೂಲಕ ಈ ಚರ್ಚೆಯೊಳಗೆ ಹೋಗೋಣ :ಶಾಲಾ ಪಠ್ಯವೊಂದರಲ್ಲಿ “ಭಾರತ ವೈವಿಧ್ಯಮಯ ದೇಶ.ಇಲ್ಲಿ ಹಿಂದೂ,ಜೈನ,ಬೌದ್ಧ,ಸಿಖ್,ಇಸ್ಲಾಂ,ಕ್ರಿಶ್ಚಿಯಾನಿಟಿ, ಪಾರ್ಸಿ (ಮುಂದೆ ಲಿಂಗಾಯತ ?) ಹೀಗೆ ಬಹಳಷ್ಟು ಧರ್ಮಗಳಿವೆ” ಎಂಬ ಪಾಠವನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿಕೊಂಡು ಹೊರಗೆ ಬಂದಾಗ,ಅವನಿಗೆ ಎದುರಾದ ಭಿಕ್ಷುಕನೊಬ್ಬ “ಧರ್ಮ ಮಾಡಪ್ಪ” ಅಂತಾನೇ.ಆಗ ಆ ಪಾಪದ ಹುಡುಗನಿಗೆ “ತರಗತಿಯಲ್ಲಿ ಮೇಷ್ಟ್ರು ಹೇಳಿದ ಅಷ್ಟೊಂದು ವೈವಿಧ್ಯಮಯ “ಧರ್ಮ”ಗಳಲ್ಲಿ ಯಾವ ಧರ್ಮವನ್ನು ಈ ಭಿಕ್ಷುಕನಿಗೆ ಮಾಡಬೇಕು? ಅಷ್ಟಕ್ಕೂ ಧರ್ಮ ಮಾಡುವುದೆಂದರೇನು?” ಎಂಬಿತ್ಯಾದಿ ಪ್ರಶ್ನೆಗಳು ಕಾಡಿದರೆ,ನಮ್ಮ ಬುದ್ಧಿಜೀವಿಗಳ ಬಳಿ ಆ ಹುಡುಗನ ಪ್ರಶ್ನೆಗೆ ಉತ್ತರವಿದೆಯೇ?
ಆ ವಿದ್ಯಾರ್ಥಿಯಂತೆಯೇ ನಮ್ಮಲ್ಲಿ ಹಲವರ ಈ ಗೊಂದಲಕ್ಕೆ ಮೂಲ,ಇಂಗ್ಲೀಷಿನ “Religion” ಪದಕ್ಕೆ ಅನುವಾದವಾಗಿ “ಧರ್ಮ” ಎಂಬ ಪದವು ಬಳಸಲ್ಪಟ್ಟಿರುವುದು ಮತ್ತು ಬಳಸಲ್ಪುಡುತ್ತಿರುವುದು.ಧರ್ಮ ಎನ್ನುವುದು ನಮ್ಮ ಬುದ್ಧಿಜೀವಿಗಳ ಪ್ರಕಾರ “Religion” ಆಗಿದ್ದರೆ,ಗಾಳಿಗೆ ಬೀಸುವುದು ಧರ್ಮ,ನೀರಿಗೆ ಹರಿಯುವುದು ಧರ್ಮ ಅಂತೆಲ್ಲ ಹೇಳುತ್ತಾರಲ್ಲ ಅದಕ್ಕೇನರ್ಥ? ಮಾತೃಧರ್ಮ, ಪಿತೃಧರ್ಮ,ರಾಜಧರ್ಮ ಇತ್ಯಾದಿ ಧರ್ಮಗಳಿವೆಯಲ್ಲ ಅದಕ್ಕೇನರ್ಥ? ಅವುಗಳೂ ಸಹ ಹಿಂದೂ,ಇಸ್ಲಾಂ,ಕ್ರಿಶ್ಚಿಯಾನಿಟಿಗಳಂತೇಯೇ ಧರ್ಮಗಳೇ? ಅಲ್ಲವೆಂದಾದರೆ “ಧರ್ಮ” ಎನ್ನುವುದಕ್ಕೆ ನಮ್ಮ ಪಂಡಿತರು ಅನ್ವಯಿಸಿರುವ “Religion” ಎಂಬ ಪದಕ್ಕಿರುವ ಅರ್ಥವಿದ್ದಂತಿಲ್ಲ.ಅದೆಲ್ಲಾ ಹೋಗಲಿ ಅಸಲಿಗೆ ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದಂತ ಯಾವುದಾದರೂ “Religion” ಇದೆಯೇ?
“ಭಾರತೀಯ ನೆಲದಲ್ಲಿ ಹುಟ್ಟಿ ಬೆಳೆದ ಯಾವ ರಿಲಿಜನ್ನುಗಳೂ ಇಲ್ಲ.ಹಾಗಾಗಿ ರಿಲಿಜನ್ ಎಂಬುದರ ಭಾಷಾಂತರವಾಗಿ ಹಿಂದೂ ಧರ್ಮ ಎಂಬ ಶಬ್ದವನ್ನು ಪ್ರಯೋಗಿಸಿದರೆ ಧರ್ಮ ಎಂಬುದಕ್ಕೆ ಯಾವ ನೆಲೆಯಲ್ಲೂ ಅರ್ಥವಿರಲು ಸಾಧ್ಯವಿಲ್ಲ; ಧರ್ಮ ಎಂಬ ನೆಲೆಯಲ್ಲೂ ಇರಲು ಸಾಧ್ಯವಿಲ್ಲ,ರಿಲಿಜನ್ ಎಂಬ ನೆಲೆಯಲ್ಲೂ ಸಾಧ್ಯವಿಲ್ಲ.ಒಟ್ಟಿನಲ್ಲಿ ಧರ್ಮದ ಅರ್ಥವು ರಿಲಿಜನ್ನಿನಿಂದಾಗಿ ದಿಕ್ಕುಗೆಟ್ಟಿರುವುದು ಸ್ಪಷ್ಟ” – ಪ್ರೊ.ರಾಜಾರಾಮ್ ಹೆಗಡೆ (ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕದಲ್ಲಿ).
ಭಾರತದಲ್ಲಿ ಯಾವುದೇ ರಿಲಿಜನ್ನುಗಳು ಹುಟ್ಟಿಲ್ಲವೆಂದರೆ,”ಹಿಂದೂ ಧರ್ಮ” ವಿಲ್ಲ ಎಂದಂತಾಗುವುದಿಲ್ಲ.ಮೊದಲಿಗೆ ವಿವರಿಸಿದಂತೆ “ಧರ್ಮ” ಎಂಬ ಪದ ನಮ್ಮಲ್ಲಿ ಬಳಕೆಯಾಗುವ ರೀತಿಯೇ ಬೇರೆ.ಹಾಗಾಗಿ ಸದ್ಯಕ್ಕೆ ಧರ್ಮವನ್ನು ಹಿಂದುವಿನಿಂದ ಬೇರ್ಪಡಿಸೋಣ.”ಹಿಂದೂ” ಎಂಬುದು ಉಪಖಂಡದ ಜನರನ್ನು ಜನಾಂಗೀಯವಾಗಿ ಗುರುತಿಸಲು ಬಳಸಲ್ಪಡುತಿದ್ದ ಪದ.ಯುರೋಪಿಯನ್ನರ ಪಾಲಿಗೆ ರಿಲಿಜನ್ ಎಂಬುದು ಜಗತ್ತಿನೆಲ್ಲೆಡೆಯೆಲ್ಲಾ ಬೇರೆ ಬೇರೆ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ ಎಂಬ ನಂಬಿಕೆಯೊಂದಿತ್ತು.ಅವರು ಭಾರತಕ್ಕೆ ಬಂದ ನಂತರ ಆ ನಂಬಿಕೆಯ ಮೇಲೆಯೇ ಇಲ್ಲೊಂದು ರಿಲಿಜನ್ ಹುಡುಕಿಕೊಂಡರು.ಸೆಮೆಟಿಕ್ ರಿಲಿಜನ್ ಗಳಾದ ’ಇಸ್ಲಾಂ,ಕ್ರಿಶ್ಚಿಯಾನಿಟಿ’ ಗಳಂತೆಯೇ ಇಲ್ಲಿನ “ಹಿಂದೂ” ಎಂದು ಗುರುತಿಸಲ್ಪಡುತಿದ್ದ ಜನರಿಗೂ ಒಂದು ರಿಲಿಜನ್ ಇರಬೇಕೆಂದು ಊಹಿಸಿ ಅದಕ್ಕೆ “ಹಿಂದೂ ರಿಲಿಜನ್” ಎಂದು ನಾಮಕರಣ ಮಾಡಿದರು.ಆ ನಂತರ ರಿಲಿಜನ್ನಿನ ಗ್ರಂಥವೊಂದು ಬೇಕಿತ್ತಲ್ಲ,ಅವರಿಗೆ ಭಗವದ್ಗೀತೆ ಸಿಕ್ಕಿತು.ಕಡೆಗೆ ಅವರಿಗೆ ವೇದಗಳು ಸಿಕ್ಕವು.ಹುಡುಕುತ್ತ ಹೋದಂತೆ ಇನ್ನೊಂದಿಷ್ಟು ಗ್ರಂಥಗಳೂ ಸಿಕ್ಕವೆನ್ನಿ.ಹಾಗೇ ಯುರೋಪಿಯನ್ನರ ಭ್ರಮೆಯಲ್ಲಿ ಹುಟ್ಟುಪಡೆದ “ಹಿಂದೂ ರಿಲಿಜನ್” ಎಂಬುದು ನಮ್ಮ ಪಂಡಿತರ ಕೈಯಲ್ಲಿ “ಹಿಂದೂ ಧರ್ಮ”ವೆಂದು ಅನುವಾದವಾಗಿದೆ ಮತ್ತು ಧರ್ಮ ಎಂಬ ಪದದ ಅರ್ಥವು ಕುಲಗೆಡುತ್ತಿದೆ.ಅದರ ಮುಂದುವರೆದ ಭಾಗವೇ ಒಬ್ಬರು ಇಲ್ಲಿ ಯಾವ ಧರ್ಮ ಇಲ್ಲವೆನ್ನುವುದು,ಇನ್ನೊಬ್ಬರು ಇಲ್ಲೊಂದು ಧರ್ಮವಿದೆ ಎಂದು ಹೇಳುವುದು, ಮತ್ತಿನ್ಯಾರೋ ಒಬ್ಬರು ನಮ್ಮದು ಪ್ರತ್ಯೇಕ ಧರ್ಮ ಎನ್ನುವುದು.
ಭಾರತದಲ್ಲಿ “ಹಿಂದೂ ಧರ್ಮ” ವಿಲ್ಲವೆಂದ ಮೇಲೆ ಇರುವುದಾದರೂ ಏನು? “ಇಲ್ಲಿ ಸಂಪ್ರದಾಯಗಳಿವೆ…ಭಾರತದಲ್ಲಿ ಹಿಂದೂಯಿಸಂ ಎಂದು ಏನನ್ನು ಪಾಶ್ಚಾತ್ಯರು ಕಂಡರೋ,ನಾವು ಕೂಡ ಏನನ್ನು ಉದ್ದೇಶಿಸಿ ಹಿಂದೂ ಧರ್ಮ ಎಂದು ಹೇಳುತ್ತೆವೆಯೋ ಅದು ಅನೇಕ ಸಂಪ್ರದಾಯಗಳ ಸಾಗರ” (ಪ್ರೊ.ರಾಜಾರಾಮ್ ಹೆಗಡೆ – ಬೌದ್ಧಿಕ ದಾಸ್ಯದಲ್ಲಿ ಭಾರತ).
ನಮ್ಮಲ್ಲಿರುವುದು “ರಿಲಿಜನ್” ಅಲ್ಲ “ಸಂಪ್ರದಾಯ”ಗಳು.ರಿಲಿಜನ್ ಎಂಬುದು ರಿಲಿಜನ್ನಿನ ಗ್ರಂಥ, ಡಾಕ್ಟ್ರಿನ್, ಸತ್ಯದೇವ, ಏಕದೇವೋಪಾಸನೆಯ ಮೇಲೆ ನಿಂತಿದ್ದರೆ, ಸಂಪ್ರದಾಯಗಳು ಯಾವುದೇ ಗ್ರಂಥಗಳ ಮೇಲೆ ಆಧಾರಿತವಾಗದೇ,ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಆಚರಣೆಗಳ ಮೇಲೆ ಅಸ್ತಿತ್ವ ಹೊಂದಿರುತ್ತವೆ.ರಿಲಿಜನ್ ಎಂಬುದು ಧರ್ಮವಲ್ಲ ಎಂದ ತಕ್ಷಣ ಕೆಲವರು ಹಾಗಿದ್ದರೆ ಅದನ್ನು “ಮತ”ಗಳು ಎನ್ನಬಹುದು ಎನ್ನುತ್ತಾರೆ.ಆದರೆ “ಮತ”ವೂ ಸಹ “ರಿಲಿಜನ್” ಆಗುವುದಿಲ್ಲ.ಏಕೆಂದರೆ ಮತದ ಅನುಯಾಯಿಗಳಲ್ಲಿ ತಾರ್ಕಿಕ ಚರ್ಚೆಗೆ ಜಾಗವಿರುತ್ತದೆ (ಉದಾ: ಶಂಕರಾಚಾರ್ಯ ಮತ್ತು ಮಂಡನಾ ಮಿಶ್ರ).
ವೈಷ್ಣವ,ಶೈವ,ಜೈನ,ಬೌದ್ಧ,ದ್ವೈತ,ಅದ್ವೈತ ಮುಂತಾದ ಮತಗಳು,ವಿಭಿನ್ನ ಸಂಪ್ರದಾಯಗಳ ಆತ್ಮ/ ಪರಮಾತ್ಮ/ಶೂನ್ಯ ಮುಂತಾದ ಆಧ್ಯಾತ್ಮಿಕ ತತ್ವಗಳನ್ನು ಪ್ರತಿಪಾದಿಸುತ್ತವೆ ಮತ್ತು ಆ ತತ್ವಗಳನ್ನು ಸಾಧಿಸುವ,ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗಗಳ ಕುರಿತು ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತವೆ.ಹಾಗಾಗಿಯೇ ಒಂದು ಮತ,ಇನ್ನೊಂದು ಮತದ ಆಧ್ಯಾತ್ಮಿಕ ನಿಲುವಿನ ಬಗ್ಗೆ ನಿರಂತರ ಟೀಕೆ,ವಿಮರ್ಶೆಗಳನ್ನು ಮಾಡುತ್ತಲೇ ಬಂದಿವೆ.ಆದರೆ ಸೆಮೆಟಿಕ್ ರಿಲಿಜನ್ನುಗಳ ಗ್ರಹಿಕೆಯ ಚೌಕಟ್ಟಿನೊಳಗೆ ಈ ಆಧ್ಯಾತ್ಮಿಕ ತತ್ವಗಳು ಬರುವುದೇ ಇಲ್ಲ ಇನ್ನು ಚರ್ಚಿಸುವುದೆಲ್ಲಿಂದ ಬಂತು? ರಿಲಿಜನ್ ಗಳಿಗೆ ಬಹುಮುಖ್ಯವಾದ ’ಗಾಡ್,ಸೋಲ್,ಸಾಲ್ವೇಶನ್,ಥಿಯಾಲಜಿ’ ಇತ್ಯಾದಿಗಳು “ಮತ”ಗಳಿಗೆ ಚರ್ಚೆಯ ವಿಚಾರಗಳೇ ಅಲ್ಲ! ಮತಗಳು ಚರ್ಚಿಸುವ ಆಧ್ಯಾತ್ಮಿಕ ತತ್ವಗಳು ರಿಲಿಜನ್ನುಗಳ ಲೋಕದೃಷ್ಟಿಯಲ್ಲಿ ಅಸ್ತಿತ್ವದಲ್ಲೇ ಇಲ್ಲ! ಹಾಗಾಗಿ “ಮತ”ಗಳೂ ಸಹ “ರಿಲಿಜನ್” ಗಳಾಗಲು ಸಾಧ್ಯವಿಲ್ಲ.
ಹೀಗಿರುವಾಗ ನಾವು ಇನ್ನೆಷ್ಟು ದಿನ ಹೀಗೆ ತಪ್ಪು ತಪ್ಪಾಗಿ ನಮ್ಮಲ್ಲೂ ಒಂದು ರಿಲಿಜನ್ ಇದೇ ಎಂಬ ಭ್ರಮೆಯಲ್ಲಿಯೇ ಬಿದ್ದು, ಅದಕ್ಕೆ “ಧರ್ಮ” ಅಥವಾ “ಮತ” ಎಂಬ ಪದವನ್ನೋ ಬಳಸಿಕೊಂಡು,ಹಿಂದೂ ಧರ್ಮವನ್ನು ತೊರೆಯುತ್ತಾರೆ ಎಂದು ಬೇಸರಿಸಿಕೊಳ್ಳಬೇಕು? ಇಲ್ಲದಿರುವುದನ್ನು ತೊರೆಯುವುದು ಹೇಗೆ? ಇಲ್ಲದಿರುವ “ರಿಲಿಜನ್” ಚೌಕಟ್ಟಿನೊಳಗೆ ನಮ್ಮ ಸಂಪ್ರದಾಯಗಳನ್ನು ನಾವೇ ಏಕೆ ಕಟ್ಟಿಹಾಕಿಕೊಳ್ಳಬೇಕು? ಈಗ ಲಿಂಗಾಯಿತ ಎನ್ನುವುದು ಪ್ರತ್ಯೇಕ ಮಾಡಲು ಹೊರಟಿರುವವರ ಕತೆಯನ್ನೇ ತೆಗೆದುಕೊಳ್ಳಿ.ಅವರ ಚಿಂತನಾ ಶೈಲಿಯಲ್ಲಿ ರಿಲಿಜನ್ ಹೇಗೆ ಆವರಿಸಿದೆಯೆಂದರೇ, ಹೊಸ ರಿಲಿಜನ್ ಎನ್ನುವಾಗ ನಮಗೊಂದು Holy Book ಇರಲೇಬೇಕು ಎನ್ನುವವರಂತೆ “ವಚನ ಸಾಹಿತ್ಯ”ವೇ ನಮ್ಮ ಹೋಲಿ ಬುಕ್ ಎನ್ನುತ್ತಿದ್ದಾರೆ.
2013ರಲ್ಲಿ ವಚನ ಸಾಹಿತ್ಯ-ಜಾತಿ ವ್ಯವಸ್ಥೆ ಕುರಿತು ಪ್ರೊ.ಬಾಲು ಮತ್ತು ಡಂಕಿನ್ ಝಳಕಿಯವರ ಸಂಶೋಧನೆಯು ನಾಡಿನ ಬೌದ್ಧಿಕ ಲೋಕದಲ್ಲೊಂದು ಚರ್ಚೆ ಹುಟ್ಟುಹಾಕಿತ್ತು. ವಚನಸಾಹಿತ್ಯವು ಜಾತಿವಿರೋಧಿ ಚಳವಳಿಯೆಂದು ಪ್ರಚಲಿತವಿರುವ ಜನಪ್ರಿಯವಾದವನ್ನು ತರ್ಕಬದ್ಧವಾಗಿ ಈ ಸಂಶೋಧನೆ ನಿರಾಕರಿಸಿ, ವಚನಸಾಹಿತ್ಯವೆನ್ನುವುದು “ಅಧ್ಯಾತ್ಮ ಸಾಹಿತ್ಯ” ಎಂದು ಸಮರ್ಥವಾಗಿ ಪ್ರತಿಪಾದಿಸಿತ್ತು. ಇವತ್ತಿನವರೆಗೂ ಅವರ ಸಂಶೋಧನೆಯನ್ನು ತರ್ಕಬದ್ಧವಾಗಿ ಅಲ್ಲಗಳೆಯಲು ಬುದ್ಧಿಜೀವಿಗಳಿಗೆ ಆಗಲಿಲ್ಲ.ಇಂದು ಅಂತಹದ್ದೇ ಬುದ್ಧಿಜೀವಿಗಳ ಸಮಿತಿಯೊಂದನ್ನು ಮಾಡಿದ ಸಿದ್ಧರಾಮಯ್ಯನವರು,ಅವರಿಂದಲೇ ವಚನಸಾಹಿತ್ಯ ಲಿಂಗಾಯಿತ ಧರ್ಮದ ಧರ್ಮಗ್ರಂಥ ವೆಂದು ವರದಿ ಬರೆಸಿಕೊಂಡಿದ್ದಾರೆ. (ಈ ಸಂಶೋಧನೆಯ ಕುರಿತ ಪೂರ್ಣ ಮಾಹಿತಿಗಾಗಿ, ನಿಲುಮೆ ಪ್ರಕಾಶನದ ‘ಕೊಟ್ಟಾಕುದುರೆಯನೇರಲರಿಯದೆ” ಪುಸ್ತಕ ಓದಿ)
ಈಗ ಲಿಂಗಾಯತರು ಪ್ರತ್ಯೇಕವಾದರೇ,ನಮ್ಮ ಸಮಾಜದಲ್ಲಿ,ಅಥವಾ ಸಾಮಾನ್ಯ ಲಿಂಗಾಯತರ ಬದುಕಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ನಮ್ಮ ಸಂಪ್ರದಾಯದಲ್ಲಿರುವ ಹಬ್ಬಗಳು,ಆಯಾ ಜಾತಿಗಳ ಆಚರಣೆಗಳು ಹಾಗೆಯೇ ಮುಂದುವರಿಯುತ್ತವೆ. ಬದಲಾಗುವುದು ಕೇವಲ ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡವರ ಸಂಸ್ಥೆಗಳ ಲಾಭಾಂಶ ಮಾತ್ರವೇ!
ಹಿಂದೂ ಎನ್ನುವುದು ಜೀವನ ಪದ್ಧತಿ ಎನ್ನುತ್ತಾ, ಮತ್ತೆ ನಮ್ಮಲ್ಲಿ ಇಲ್ಲದ ಧರ್ಮಗ್ರಂಥಗಳನ್ನು ನಮಗೆ ನಾವೇ ಹೇರಿಕೊಂಡು, ಮತ್ತೆ ಮತ್ತೆ “ಧರ್ಮ”ದ ಅರ್ಥವನ್ನು ಕುಲಗೆಡಿಸುವ ಬದಲು, ಭಾರತದಲ್ಲಿರುವುದು ಭಿನ್ನ ಭಿನ್ನ ಅಧ್ಯಾತ್ಮ ಪಥಗಳು ಹಾಗೂ ಸಂಪ್ರದಾಯಗಳು ಎನ್ನುವುದನ್ನು ಅರ್ಥಮಾಡಿಕೊಂಡರೇ,ವಿಭಜನೆ,ಅಲ್ಪಸಂಖ್ಯಾತ ಸ್ಥಾನಮಾನದ ವ್ಯವಹಾರ ಮಾಡುತ್ತಿರುವ ಸಿದ್ದರಾಮಯ್ಯನವರಂತಹ ರಾಜಕಾರಣಿಗಳ ಬೂಟಾಟಿಕೆ ಬಯಲಾಗುತ್ತದೆ.
ಭಾರತದಲ್ಲಿ ರಿಲಿಜನ್ ಇಲ್ಲ ಹಾಗೂ ಧರ್ಮವೆನ್ನುವುದು ರಿಲಿಜನ್ ಅಲ್ಲ ಎನ್ನುವುದು ನಮಗೇಕೆ ಮುಖ್ಯ ಎನ್ನುವುದನ್ನು ಪ್ರೊ.ರಾಜಾರಾಮ್ ಹೆಗಡೆಯವರು, ಬೌದ್ದಿಕ ದಾಸ್ಯದಲ್ಲಿ ಭಾರತ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ “… ಭಾರತದಲ್ಲಿ ರಿಲಿಜನ್ ಇಲ್ಲ ಹಾಗೂ ಧರ್ಮ ಎಂಬುದು ರಿಲಿಜನ್ ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ನಿರ್ಣಾಯಕವಾದ ಹೆಜ್ಜೆಯಾಗಿದೆ ಎಂಬುದು ನನ್ನ ವಾದವಾಗಿದೆ.ಅದನ್ನು ತಿಳಿದುಕೊಳ್ಳದಿದ್ದರೆ ನಮ್ಮ ಸಂಪ್ರದಾಯಗಳ ಕುರಿತು ನಮಗೆ ಸಿಗುವುದು ಈ ಮೇಲಿನಂತಹ ವಿಕೃತ ಚಿತ್ರಣಗಳು ಮಾತ್ರ.ಈ ಚಿತ್ರಣಗಳು ವಜ್ರ ಕವಚಗಳಂತೆ ಭಾರತೀಯ ಸಂಸ್ಕೃತಿಯ ಕುರಿತ ನಮ್ಮ ಅಜ್ಞಾನವನ್ನು ರಕ್ಷಿಸುತ್ತಿವೆ”.
ಹಿಂದೂ ಹಾಗೂ ಧರ್ಮದ ಕುರಿತ ನಮ್ಮ ಅಜ್ಞಾನದಿಂದ ಹೊರಬಂದು ಯೋಚಿಸಿದರೇ, ಸೋ-ಕಾಲ್ಡ್ ಪ್ರತ್ಯೇಕ ಧರ್ಮದ ಹೋರಾಟವೆನ್ನುವುದು ಕೇವಲ ಸರ್ಕಾರಿ ಸೌಲಭ್ಯಗಳ ಹೋರಾಟವೆನ್ನುವುದು ಅರ್ಥವಾಗುತ್ತದೆ.
ಧರ್ಮದ ವ್ಯಾಖ್ಯೆಗೆ ಸಿಲುಕುವುದಂತಹುದು ಕೇವಲ ಸನಾತನ ವೈದಿಕ ಧರ್ಮ. ಜೀವನದ ಎಲ್ಲಾ ಆಯಾಮಗಳನ್ನೊಳಗೊಂಡು ಪ್ರಕೃತಿಯ ಎಲ್ಲಾ ಅಂಶಗಳಿಗೆ ವ್ಯಾಖ್ಯೆ ನೀಡುತ್ತಾ ಸಮಗ್ರ ವಿಚಾರದ ಒಂದು ಧರ್ಮವಿರುವುದಾದರೆ ಅದು ಕೇವಲ ವೈದಿಕ ಧರ್ಮ ಮಾತ್ರ. ವೇದಗಳಲ್ಲಿ ಚರ್ಚಿತವಾಗದಿರುವ ಅಂಶಗಳೇ ಇಲ್ಲ. ಇದಕ್ಕೆ ವಿರುದ್ಧವಾಗಿ ಇರುವುದು ಕೇವಲ ಮತಗಳು, ಮತಗಳು ಒಬ್ಬ ವೈಕ್ತಿಯ ಅನಿಸಿಕೆ, ಪೂಜಾ ಪದ್ದತಿಗಳ ಮೇಲೆ ಅವಲಂಬಿತವಾಗಿವೆ. ಇಂದು ಚರ್ಚೆಗೆ ಇರುವ ಲಿಂಗಾಯತ ಒಂದು ಪೂಜಾ ಪದ್ಧತಿ ಮತ್ತು ಸಾಮಾಜಿಕ ಸಮರಸತೆಯನ್ನು ಸಾಧಿಸಲು ಬೇಕಾಗಿರುವ ಅಂಶಗಳನ್ನೊಳಗೊಂಡಿದೆ ಮಾತ್ರ. ಶಿಕ್ಷಣ, ರಾಜಧರ್ಮ, ಮನುಷ್ಯನು ಹುಟ್ಟಿದಾಗಿನಿಂದ ಸಾಯುವವರೆಗೂ ಅವನು ವಿಭಿನ ಆಶ್ರಮ, ಸ್ಥಾನಗಳಲ್ಲಿರುತ್ತಾನೆ. ಇಂತಹ ಸಂದರ್ಭದಲ್ಲಿ ಮಾನವನ ಎಲ್ಲಾ ಅವಸ್ಥೆಗಳಿಗೆ ಅನ್ವಯವಾಗುವ ಭೋದನೆಗಳು ವಚನ ಸಾಹಿತ್ಯದಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಅದು ಮತ ವೆನಿಸಬಹುದೇ ಹೊರತು ಆದು ಧರ್ಮವಲ್ಲ. ಇದೇ ಮಾತು ನಿರೀಶ್ವರ ಮತಗಳಾದ ಜೈನ ಮತ್ತು ಬುದ್ಧ ಮತಗಳಿಗೂ ಅನ್ವಯ. ಹಾಗೆಯೇ, ಹಿಂದೂಗಳ ರಕ್ಷಣೆಗೆ ನಿಂತ ಹೋರಾಟ ಪಡೆಯಾದ ಸಿಖ್ ಸಹ ಒಂದು ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ವಿಚಾರಗಳನ್ನೊಳಗೊಂಡಿದಿಯೇ ಹೊರತು ಅಲ್ಲಿಯೂ ಸಮಗ್ರ ಚಿಂತನೆಯಿಲ್ಲ. ಇವೆಲ್ಲವೂ ಮತಗಳು, ಭಾರತ ಸಂಜಾತ ಮತಗಳಿಗೆ ಅಲ್ಪಸಂಖ್ಯಾತ ಹಣೆ ಪಟ್ಟಿಯನ್ನು ಕೊಟ್ಟಿದ್ದು ಕಾಂಗ್ರೆಸ್ ಮಾಡಿದ ಮೂಲಭೂತ ತಪ್ಪು, ಇದರ ಮುಂದುವರಿಕೆಯೇ ಲಿಂಗಾಯತ ಮತಕ್ಕೆ ಪ್ರತ್ಯೇಕ ಬೇಡಿಕೆ.
ವೇದಗಳನ್ನು ಓದದ,ಅನುಸರಿಸದ ಅಥವಾ ಯಾವುದೇ ಮತವನ್ನು ಪಾಲಿಸದೇ, ತಮ್ಮ ಜಾತಿ/ಕುಟುಂಬದ ಪೂರ್ವಜರ ಸಂಪ್ರದಾಯ ಪಾಲಿಸವ ಭಾರತೀಯರಿದ್ದಾರಲ್ಲವೇ ಅದನ್ನು ಹೇಗೆ ವ್ಯಾಖ್ಯಾನಿಸುತ್ತಿರಿ?