ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2018

ದಲಿತ-ಮುಸ್ಲಿಂ ರಾಜಕಾರಣದ ‘ಭ್ರಮೆ’ ಮತ್ತು J.N ಮಂಡಲ್ ಎಂಬ ‘ವಾಸ್ತವ’- ಭಾಗ 3

‍ನಿಲುಮೆ ಮೂಲಕ

ರಾಕೇಶ್ ಶೆಟ್ಟಿ

  1. ಮುಸ್ಲಿಂ ಲೀಗಿನ ಪ್ರಾಂತೀಯ ಅಧ್ಯಕ್ಷರಾಗಿದ್ದ ಮೌಲಾನಾ ಅಕ್ರಮ್ ಖಾನ್ ಅವರು ಬೈಸಾಕ್ ಪತ್ರಿಕೆಯಲ್ಲಿ ಬರೆದಿದ್ದನ್ನು ಓದಿದ ನಂತರ ಮುಸ್ಲಿಂ ಲೀಗ್ ನಾಯಕರ ಇರಾದೆಗಳು ನನಗೆ ಸ್ಪಷ್ಟವಾದವು. ಬೈಸಾಕ್ ಪತ್ರಿಕೆಯಲ್ಲಿ ಬರೆಯುತ್ತ ಅಕ್ರಮ್ ಖಾನ್,’ದೆಹಲಿ ಒಪ್ಪಂದದ ನಂತರ, ಪಾಕಿಸ್ತಾನದ ಅಲ್ಪಸಂಖ್ಯಾತರ ಸಚಿವ ಡಾ.ಎ.ಎಂ ಮಲೀಕ್ ,ರೇಡಿಯೋದಲ್ಲಿ “ಪ್ರವಾದಿ ಮಹಮ್ಮದರು ಕೂಡ ಅರಬ್ಬಿನಲ್ಲಿ ಯಹೂದಿಗಳಿಗೆ ಜಾಗ ನೀಡಿದ್ದರು” ಎಂದಿದ್ದಾರೆ, ಅರಬ್ಬಿನ ಯಹೂದಿಗಳ ಬಗ್ಗೆ ಮಾತನಾಡದೇ ಇದ್ದಿದ್ದರೆ ಮಲೀಕ್ ಅವರ ಮಾತು ಸರಿಯಿರುತ್ತಿತ್ತು. ಪ್ರವಾದಿ ಮಹಮ್ಮದರು ಅರಬ್ಬಿನಲ್ಲಿ ಯಹೂದಿಗಳಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಸತ್ಯವೇ. ಆದರೆ ಇದು ಕೇವಲ ಮೊದಲ ಅಧ್ಯಾಯ. ಕಡೆಯ ಅಧ್ಯಾಯದಲ್ಲಿ ಅವರನ್ನು ಅರಬ್ಬಿನಿಂದ ಓಡಿಸಲು ಹೇಳಿದ್ದರು…’ ಅಕ್ರಮ ಖಾನ್ ಅವರ ಈ ಲೇಖನದ ಕುರಿತು ಮುಖ್ಯಮಂತ್ರಿ ನೂರ್ ಉಲ್ ಅಮೀನ್ ಮತ್ತು ಮುಸ್ಲಿಂ ಲೀಗ್ ನಾಯಕರು ಮೌನವಾಗಿರುವುದು ನೋಡಿ, ಅಲ್ಪಸಂಖ್ಯಾತರ ರಕ್ಷಣೆಗಾಗಿ ದೆಹಲಿ ಒಪ್ಪಂದ ಜಾರಿ ತರುವ ಇರಾದೆ ಇವರಿಗೆ ಇಲ್ಲವೇ ಇಲ್ಲ ಎನ್ನುವುದು ಮನದಟ್ಟಾಯಿತು.
  2. ದೆಹಲಿ ಒಪ್ಪಂದದಂತೆ ಅಲ್ಪಸಂಖ್ಯಾತರ ರಕ್ಷಣೆಗಾಗಿ, ಹೊಸ ಸಚಿವರ ನೇಮಕಾತಿ ಮಾಡಬೇಕಿತ್ತು. ನಾನು ಆ ಸ್ಥಾನಕ್ಕೆ 3 ಜನ ಅರ್ಹ ಅಭ್ಯರ್ಥಿಗಳನ್ನು ಸೂಚಿಸಿದ್ದೆ. ಆದರೆ ಅವರೆಲ್ಲರನ್ನು ಬಿಟ್ಟು ದಲಿತ ವಿರೋಧಿ ಮತ್ತು ಹಣಬಲವಿದ್ದ ಕಾಂಗ್ರೆಸ್ಸಿನ ಡಾ. ಬರಾರಿ ಅವರನ್ನು ನೇಮಿಸಿದ ರೀತಿಯಿಂದಲೇ, ಪಾಕಿಸ್ತಾನ ಸರ್ಕಾರದ ಹಿಂದೂ ವಿರೋಧಿ ಧೋರಣೆಯ ಅರಿವಾಯಿತು. ಈಗಾಗಲೇ ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಮುಗಿಸಲಾಗಿದೆ, ಈಗ ಅದೇ ಕಾರ್ಯವನ್ನು ಪೂರ್ವ ಪಾಕಿಸ್ತಾನದಲ್ಲೂ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಈಗ ಅವರಿಗೆ ಹಿಂದೂ ಮತ್ತು ಹಿಂದೂ ಪ್ರಭಾವಿಗಳು, ಬುದ್ಧಿಜೀವಿಗಳ ನಿರ್ನಾಮವಾಗಬೇಕಿದೆ. ಪಾಕಿಸ್ತಾನದ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಗಳಲ್ಲಿ ಹಿಂದೂಗಳ ಪ್ರಭಾವ ಅವರಿಗೆ ಬೇಕಿಲ್ಲ. ದಲಿತರಿಗೆ ಚುನಾವಣೆಯಲ್ಲಿ ಮೀಸಲಾತಿ ಬೇಡಿಕೆಯನ್ನು ಈಡೇರಿಸಲಿಲ್ಲ.
  3. ಪೂರ್ವ ಬಂಗಾಳದ ಇಂದಿನ ಪರಿಸ್ಥಿತಿಯೇನು?: ವಿಭಜನೆಯ ನಂತರ ಐವತ್ತು ಲಕ್ಷದಷ್ಟು ಹಿಂದೂಗಳು ಭಾರತಕ್ಕೆ ವಲಸೆ ಹೋಗಿದ್ದಾರೆ. ಇದಕ್ಕೆ ಕಾರಣ ಕೇವಲ ಗಲಭೆಗಳು ಮಾತ್ರವಲ್ಲ. ಹಿಂದೂ ವಕೀಲರ ಬಳಿ, ಹಿಂದೂ ಡಾಕ್ಟರ್ ಗಳ ಬಳಿ, ಹಿಂದೂ ವರ್ತಕರ ಬಳಿ ಮುಸ್ಲಿಮರು ವ್ಯವಹಾರ ನಡೆಸುತ್ತಿಲ್ಲ. ಹಿಂದೂಗಳ ಮನೆಯನ್ನು ಕಾಯ್ದೆ ಕಾನೂನು ಇಲ್ಲದೇ ವಶಪಡಿಸಿ ಕೊಳ್ಳಲಾಗುತ್ತಿದೆ. ಹಿಂದೂ ಮನೆ ಒಡೆಯನ ಮನೆಯಲ್ಲಿರುವ ಮುಸ್ಲಿಮರು ಬಾಡಿಗೆ ನೀಡುತ್ತಿಲ್ಲ. ಶಿಕ್ಷಣದ ಇಸ್ಲಾಮೀಕರಣ ವಾಗುತ್ತಿದೆ. ಹಿಂದೂ ಶಿಕ್ಷಕರಿಗೂ ಶಾಲೆ ಆರಂಭಕ್ಕೆ ಮುನ್ನ ಕುರಾನ್ ಪಠಣವನ್ನು ಕಡ್ಡಾಯಮಾಡಲಾಗಿದೆ. ಜೀವ ಭಯ ಮತ್ತು ಬದುಕಲಿಕ್ಕಾಗಿ ಇವರೆಲ್ಲರೂ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ.

ಹಿಂದೂಗಳ ರಕ್ಷಣೆಗಾಗಿ ಯಾವುದೇ ಕ್ರಮಕೈಗೊಳ್ಳಲು ಮುಸ್ಲಿಂ ಲೀಗ್ ಮತ್ತು ಪೂರ್ವ ಬಂಗಾಳ ಸರ್ಕಾರ ತಯಾರು ಇಲ್ಲದಿರುವುದು ಹಿಂದೂಗಳಲ್ಲಿ ತಮ್ಮ ಭವಿಷ್ಯದ ಬಗ್ಗೆ ಭಯ ಮೂಡಿಸಿದೆ. ಮುಖ್ಯವಾಗಿ ದಲಿತರು ತಮ್ಮ ಕೃಷಿ ಭೂಮಿಯನ್ನು ಹಾಗೆಯೇ ಬಿಟ್ಟು,ಬದುಕಿದರೆ ಸಾಕೆಂದು ಭಾರತಕ್ಕೆ ಹೋಗುತ್ತಿದ್ದಾರೆ.

ದೇವಸ್ಥಾನಗಳು ಪಾಳು ಬಿದ್ದಿವೆ, ಮನೆಯಲ್ಲೂ ಪೂಜೆಗಳು ನಡೆಯುತ್ತಿಲ್ಲ. ಪೂಜಾರಿಗಳೆಲ್ಲ ಊರು ಬಿಟ್ಟಿದ್ದಾರೆ. ಸರ್ಕಾರಿ ಹುದ್ದೆಯಲ್ಲಿರುವ ಹಿಂದುಗಳನ್ನು ವ್ಯವಸ್ಥಿತವಾಗಿ ಕೆಳಗಿಳಿಸಿ ಮುಸ್ಲಿಮರನ್ನು ತುಂಬಲಾಗುತ್ತಿದೆ. ಚಿತ್ತಗಾಂಗಿನ ಹಿಂದೂ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ವಿನಾಕಾರಣ ಹುದ್ದೆಯಿಂದ ವಜಾ ಮಾಡಲಾಗಿದೆ.

ಹಿಂದೂ ಹೆಣ್ಣುಮಕ್ಕಳ ಅಪಹರಣ, ಮಾನಭಂಗದಂತಹ ಪ್ರಕರಣಗಳು ಈಗ ದಾಖಲಾಗದೇ ಇರುವ ಕಾರಣವೇನೆಂದರೆ, ಪೂರ್ವ ಬಂಗಾಳದಲ್ಲಿ 12 ರಿಂದ 30ರ ವಯೋಮಾನದ ಹಿಂದೂ ಹೆಣ್ಣು ಮಕ್ಕಳೇ ಉಳಿದಿಲ್ಲ! ಹಳ್ಳಿಗಳಲ್ಲಿ ಉಳಿದಿರುವ ಬಡಪಾಯಿ ಸಮುದಾಯದ ಹೆಣ್ಣುಮಕ್ಕಳನ್ನು ಮುಸ್ಲಿಂ ಗೂಂಡಾಗಳು ಬಿಡುತ್ತಿಲ್ಲ.ಹಿಂದೂ ರೈತರಿಂದ ಪಡೆಯುವ ಬೆಳೆಗಳಿಗೆ ಪೂರ್ತಿ ಹಣವನ್ನು ಮುಸ್ಲಿಮರು ಕೊಡುವುದೇ ಇಲ್ಲ. ಒಟ್ಟಾರೆಯಾಗಿ ಕಾನೂನು ಕಟ್ಟಳೆಗಳು ಹಿಂದುಗಳಿಗೆ ಇಲ್ಲಿ ಇಲ್ಲವೇ ಇಲ್ಲ.

22.ಪಶ್ಚಿಮ ಪಾಕಿಸ್ತಾನದಲ್ಲಿ ಮತಾಂತರ ಪರ್ವ:  ವಿಭಜನೆಯ ನಂತರ ಪಶ್ಚಿಮ ಪಂಜಾಬಿನಲ್ಲಿ 1 ಲಕ್ಷದಷ್ಟು ದಲಿತರಿದ್ದರು. ಈಗ ಅವರೆಲ್ಲರನ್ನೂ ಇಸ್ಲಾಮ್ಗೆ ಮತಾಂತರಿಸಲಾಗಿದೆ. ಮುಸ್ಲಿಮರಿಂದ ಅಪಹರಣವಾದ ಡಜನ್ನಿಗೂ ಹೆಚ್ಚು ದಲಿತ ಹೆಣ್ಣು ಮಕ್ಕಳಲ್ಲಿ 4 ಜನ ಮಾತ್ರ ಪತ್ತೆಯಾಗಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಪದೇ ಪದೇ ಮನವಿ ಪತ್ರ ಕಳಿಸಲಾಗುತ್ತಿದೆ. ಕಡೆಯ ಬಾರಿ ಸರ್ಕಾರದ ನಿಯೋಜಿತ ಅಧಿಕಾರಿಯಿಂದ ಬಂದ ಉತ್ತರವೇನು ಗೊತ್ತೇ? “”ನನ್ನ ಅಧಿಕಾರವಿರುವುದು ಹಿಂದೂ ಹೆಣ್ಣುಮಕ್ಕಳ ಪತ್ತೆಗಾಗಿ, ದಲಿತರ ಹೆಣ್ಣು ಮಕ್ಕಳು ಹಿಂದೂಗಳಲ್ಲ” ಎಂದು!

ಸಿಂಧ್, ಲಾಹೋರಿನಲ್ಲಿ ಬದುಕುತ್ತಿರುವ ಬೆರಳೆಣಿಕೆಯಷ್ಟು ಹಿಂದೂಗಳ ಪರಿಸ್ಥಿತಿ ಹೇಳುವಂತೆಯೇ ಇಲ್ಲ. ಮುಸ್ಲಿಮರ ವಶದಲ್ಲಿರುವ ಸುಮಾರು 363 ದೇವಸ್ಥಾನ, ಗುರುದ್ವಾರಗಳ ಪಟ್ಟಿ ನನ್ನ ಬಳಿಯಿದೆ. ಕೆಲವು ದೇವಸ್ಥಾನಗಳನ್ನು ಕಸಾಯಿಖಾನೆ, ಹೋಟೆಲ್ಲುಗಳನ್ನಾಗಿ ಪರಿವರ್ತಿಸಲಾಗಿದೆ. ಹಿಂದೂಗಳ ಆಸ್ತಿಪಾಸ್ತಿಯನ್ನು ಸ್ಥಳೀಯ ಮುಸ್ಲಿಮರು ಬಲವಂತವಾಗಿ ವಶಮಾಡಿಕೊಂಡಿದ್ದಾರೆ.

ಕರಾಚಿಯಿಂದ ನನಗೆ ಹಲವಾರು ಹೆಣ್ಣು ಮಕ್ಕಳ ಪೋಷಕರಿಂದ ಅಪಹರಣ, ಮಾನಭಂಗದ ದೂರುಗಳು ಬಂದಿವೆ. ಇವರಲ್ಲಿ ಹೆಚ್ಚಿನವರು ದಲಿತರು. ಸರ್ಕಾರದ ಗಮನ ಸೆಳೆದರು ಯಾವುದೇ ಪ್ರಯೋಜನವಾಗಲಿಲ್ಲ. ಸಿಂಧ್ ಪ್ರಾಂತ್ಯದಲ್ಲಿದ್ದ ದಲಿತರನ್ನೆಲ್ಲ ಇಸ್ಲಾಮಿಗೆ ಮತಾಂತರಿಸಲಾಗಿದೆ.

22.ಒಟ್ಟಾರೆಯಾಗಿ ಪಾಕಿಸ್ತಾನಿ ಹಿಂದೂಗಳು ತಮ್ಮದೇ ದೇಶದಲ್ಲಿ ದೇಶಭ್ರಷ್ಟರಾಗಿ ಬಾಳುತ್ತಿದ್ದಾರೆ. ಅವರು ಮಾಡಿರುವ ಒಂದೇ ತಪ್ಪೆಂದರೆ ಅವರು ಹಿಂದೂ ಧರ್ಮದವರಾಗಿರುವುದು. ಪ್ರಜಾಪ್ರಭುತ್ವ, ಸಮಾಜವಾದ, ಬಂಡವಾಳಶಾಹಿ ಇವೆಲ್ಲ ರೋಗಗಳಿಗೂ ಏಕೈಕ ಮದ್ದು ಇಸ್ಲಾಮಿಕ್ ಸ್ಟೇಟ್ ಎಂದೂ ಪಾಕಿಸ್ತಾನ ಸಂಪೂರ್ಣ ಇಸ್ಲಾಮಿಕ್ ಸ್ಟೇಟ್ ಆಗಲಿದೆಯೆಂದು ಮುಸ್ಲಿಂ ಲೀಗ್ ನಾಯಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಮುಸ್ಲಿಮರ ಶರಿಯತ್ ಪ್ರಕಾರ, ಮುಸ್ಲಿಮರು ಮಾತ್ರವೇ ಆಳುವವರು, ಇನ್ನುಳಿದ ಅಲ್ಪಸಂಖ್ಯಾತರು ತಮ್ಮ ಜೀವಕ್ಕೆ ಬೆಲೆ ತೆತ್ತು ಬದುಕಬೇಕಾದವರು. ಆ ಬೆಲೆ ಎಂತದ್ದು ಎನ್ನುವುದು ನಿಮಗೆ ಚೆನ್ನಾಗಿಯೇ ತಿಳಿದಿದೆಯಲ್ಲವೇ ಪ್ರಧಾನಮಂತ್ರಿಗಳೇ? ನನ್ನ ಈ ಸುಧೀರ್ಘ ಹೋರಾಟ ಮತ್ತು ನೋವಿನ ಪ್ರಯಾಣದ ನಂತರ, ಪಾಕಿಸ್ತಾನ ಹಿಂದುಗಳಿಗೆ ಸುರಕ್ಷಿತವಲ್ಲವೆನ್ನುವುದು ಹಾಗೂ ಅವರ ಭವಿಷ್ಯವೂ ಮರಣ ಅಥವಾ ಮತಾಂತರದ ನಡುವೆ ಸಿಲುಕಿದೆಯೆಂದು ನನಗೆ ಅರ್ಥವಾಗಿದೆ. ಬೇರೆ ಜಾತಿಯ ಹಿಂದೂಗಳು ಹಾಗೂ ರಾಜಕೀಯ ಜ್ಞಾನವಿದ್ದ ದಲಿತರು ಈಗಾಗಲೇ ಪೂರ್ವ ಬಂಗಾಳವನ್ನು ತೊರೆದಿದ್ದಾರೆ. ಪಾಕಿಸ್ತಾನದಲ್ಲೇ ಉಳಿಯುವ ಹಿಂದೂಗಳು ಕಾಲಾಂತರದಲ್ಲಿ ಒಂದೋ ಮತಾಂತರವಾಗಲಿದ್ದಾರೆ ಅಥವಾ ಅವರನ್ನು ಕೊಲ್ಲಲಾಗುತ್ತದೆ ಎನ್ನುವ ಭಯ ನನ್ನದು.

ಪಾಕಿಸ್ತಾನದ ಸರ್ಕಾರದಲ್ಲಿ ನನ್ನ ಉಪಸ್ಥಿತಿಯಿಂದಾಗಿ, ಇಲ್ಲಿ ಬದುಕುತ್ತಿರುವ ಹಿಂದೂಗಳಲ್ಲಿ ನಾನು ಅವರ ರಕ್ಷಣೆಗೆ ನಿಲ್ಲುತ್ತೇನೆ ಎನ್ನುವ ಭ್ರಮೆ ಇನ್ಮುಂದೆ ಬಾರದಿರಬೇಕು ಹಾಗೂ ಪಾಕಿಸ್ತಾನದ ಹೊರಗಿರುವ ಹಿಂದೂಗಳಿಗೂ ಈ ದೇಶ ವಾಸ ಯೋಗ್ಯವಲ್ಲ ಎನ್ನುವುದು ಅರಿವಾಗಬೇಕು. ಈ ಎಲ್ಲ ಭ್ರಮೆಯ ಭಾರವನ್ನು ಇನ್ನು ಹೊರುವುದು ನನಗೆ ಸಾಧ್ಯವಿಲ್ಲವಾದ್ದರಿಂದ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಿಮ್ಮ ಇಸ್ಲಾಮಿಕ್ ಸ್ಟೇಟ್ ನಿಯಮದ ಅನುಸಾರ ಇದನ್ನು ಅಂಗೀಕರಿಸಿ

ಇಂತಿ,

ಜೆ. ಎನ್ ಮಂಡಲ್ ,8th October 1950

ಹೀಗೆ ವಾಸ್ತವದ ವಿಷಾದದ ದನಿಯಲ್ಲಿ ಮಂಡಲ್ ಅವರ ಪತ್ರ ಮುಕ್ತಾಯವಾಗುತ್ತದೆ. ಈ ಪತ್ರದ ಶೇ.50 ಭಾಗವನ್ನಷ್ಟೇ ನಾನು ಅನುವಾದಿಸಿದ್ದೇನೆ. ಮೂಲ ಪತ್ರದಲ್ಲಿ ಇನ್ನಷ್ಟು ರಕ್ತಸಿಕ್ತ ಘಟನೆ ಹಾಗೂ ಮುಸ್ಲಿಂ ಲೀಗ್ ನಾಯಕರ ವಿಶ್ವಾಸಘಾತುಕತನದ ಉಲ್ಲೇಖಗಳಿವೆ. ಈ ಪತ್ರವನ್ನು ಓದುವಾಗ ಗಮನಿಸಿಬೇಕಾದ ಪ್ರಮುಖ ಅಂಶ, “ದಲಿತ ರಕ್ಷಣೆ, ಹಕ್ಕುಗಳು” ಎಂದು ಶುರುವಾಗುವ ಮಂಡಲ್ ಅವರ ದನಿ ಪತ್ರದ ಕೊನೆ ಕೊನೆಗೆ “ಹಿಂದೂಗಳ ರಕ್ಷಣೆ, ಹಕ್ಕುಗಳು” ಎನ್ನುವಲ್ಲಿಗೆ ಭ್ರಮೆ ಕಳಚಿ ವಾಸ್ತವದ ದರ್ಶನದ ಅರಿವಾಗುತ್ತದೆ.

ಈ ಪತ್ರದ ಓದುವವರಿಗೇ ಅಪಾರ ವೇದನೆ ಉಂಟಾಗುವಾಗ, ಇನ್ನು ಮುಸ್ಲೀಂ ಲೀಗ್ ಮಾತನ್ನು ನಂಬಿ, ಭಾರತ ವಿಭಜನೆಗೆ ಜೊತೆಯಾಗಿ ನಿಂತು, ಕಡೆಗೆ ತನ್ನದೇ ತಪ್ಪಿನಿಂದಾಗಿ, ತನ್ನ ಮೇಲೆ ಭರವಸೆಯಿಟ್ಟುಕೊಂಡು ಪಾಕಿಸ್ತಾನದಲ್ಲುಳಿದ ಲಕ್ಷಾಂತರ ಜನರ ದುಸ್ಥಿತಿಯ ಹೊಣೆಗಾರಿಕೆ ಹೊತ್ತಿದ್ದ ಮಂಡಲ್ ಅವರ ಸ್ಥಿತಿ ಹೇಗಿದ್ದಿರಬೇಡ? ಖುದ್ದು ಅಂಬೇಡ್ಕರ್ ಅವರೇ,ಮುಸ್ಲಿಂ ಬಹುಸಂಖ್ಯಾತರಿರುವ ದೇಶ ತನ್ನ ಅಲ್ಪಸಂಖ್ಯಾತರ ಜೊತೆಗೆ ಹೇಗೆ ವರ್ತಿಸುತ್ತದೆ ಎಂದು Pakistan Or The Partition of India ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಬಹುಶಃ ಮಂಡಲ್ ಅವರಿಗೆ ಅದೆಲ್ಲಾ ಆಗ ಅರ್ಥವಾಗಿರಲಿಲ್ಲವೇನೋ? ಆಗಿದ್ದಿದ್ದರೇ, ಅವರು ತಮ್ಮ ಪತ್ರದಲ್ಲಿ “ಇಸ್ಲಾಮ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ಏನು ಬರುತ್ತಿದೆ?”  ಎನ್ನುವ ಪ್ರಶ್ನೆಯನ್ನೇ ಕೇಳಿಕೊಳ್ಳುವ ಸಂದರ್ಭ ಬರುತ್ತಿರಲಿಲ್ಲ. ಅವರಿಗದು  ಅರ್ಥವಾಗುವ ವೇಳೆಗೆ ಲಕ್ಷಾಂತರ ಹಿಂದೂ ಜೀವಗಳು ಬಲಿಯಾಗಿದ್ದವು, ಬದುಕು ಮೂರಾಬಟ್ಟೆಯಾಗಿತ್ತು.

ಎಲ್ಲಾ ಭ್ರಮೆಗಳು ಒಂದಲ್ಲ ಒಂದು ದಿನ ಕಳಚಲೇಬೇಕಲ್ಲ? ಮಂಡಲ್ ಅವರಿಗೆ,ದಲಿತ-ಮುಸ್ಲಿಂ ಐಕ್ಯತೆ ಎಂಬ ಭ್ರಮಾಲೋಕದಿಂದ ವಾಸ್ತವ ಲೋಕಕ್ಕೆ ಇಳಿದು ಬರಲು 3 ವರ್ಷಗಳ ಅನುಭವವೇ ಸಾಕಾಯಿತು. ಅಂತಿಮವಾಗಿ ಅವರೇನೋ ರಾಜೀನಾಮೆ ನೀಡಿ ಭಾರತಕ್ಕೆ ಬಂದು ತಮ್ಮ ಜೀವನದ 18 ವರ್ಷಗಳನ್ನು ಇಲ್ಲಿ ನೆಮ್ಮದಿಯಾಗಿ ಕಳೆದರು. ಆದರೆ ಅವರನ್ನು ನಂಬಿ ಪಾಕಿಸ್ತಾನಕ್ಕೆ ಹೋಗಿ ಸಿಕ್ಕಿಹಾಕಿಕೊಂಡ ಜನಸಾಮಾನ್ಯರ ಗತಿಯೇನಾಯಿತೋ ಗೊತ್ತಿಲ್ಲ, ಬಹುಶಃ ಮಂಡಲ್ ಅವರೇ ಊಹಿಸಿದಂತೆ ಒಂದೋ ಮರಣ ಹೊಂದಿರಬೇಕು ಅಥವಾ ಮತಾಂತರವಾಗಿರಬೇಕು. ಅದರಲ್ಲೂ ಈಗಿನ “Blasphemy Law” ಬಂದ ನಂತರ, ಒಂದಿಲ್ಲೊಂದು ಧಾರ್ಮಿಕ ನಿಂದನೆಯ ನೆಪವೊಡ್ಡಿ ಹಿಂದೂಗಳು, ಕ್ರೈಸ್ತ್ರರನ್ನು ಬಲಿಹಾಕಲಾಗುತ್ತಿದೆ. ಬ್ಲಾಸ್ಪೆಮಿ ಲಾ ಅನ್ನು ವಿರೋಧಿಸಿದ ಪಂಜಾಬಿನ ಗವರ್ನರ್ ಅವರನ್ನೇ ಕೊಂದು ಹಾಕಲಾಯಿತು. ಇನ್ನು ಜನಸಾಮಾನ್ಯರು ಯಾವ ಲೆಕ್ಕ?

ನಾನೊಮ್ಮೆ ದಲಿತ ಸಂಘಟನೆಯ ಮುಖಂಡರನ್ನು ಭೇಟಿಯಾದ ಸಂದರ್ಭದಲ್ಲಿ,ಹೀಗೆ ಮಾತನಾಡುತ್ತ,”ಅಂಬೇಡ್ಕರ್ ಅವರನ್ನು ಪೂರ್ತಿಯಾಗಿ ಓದಿಕೊಂಡಿದ್ದೀರಾ?” ಎಂದು ಕೇಳಿದೆ. ಇಲ್ಲಾ ಬ್ರದರ್,ಚಳವಳಿಗೆ ಬರುವ ಕಾಲದಲ್ಲಿ ಸ್ವಲ್ಪ ಓದಿಕೊಂಡಿದ್ದೀನಿ,ಆ ನಂತರ ಹೋರಾಟ ಅಂತೆಲ್ಲ ಇಳಿದ ಮೇಲೆ ಓದಲಿಕ್ಕೆ ಸಾಧ್ಯವಾಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು. ಇಂದಿನ ದಲಿತ ಚಳವಳಿಗಳ ಮೂಲ ಸಮಸ್ಯೆ ಇರುವುದೇ ಇಲ್ಲಿ,ಅವರು ಅಂಬೇಡ್ಕರ್ ಬಗ್ಗೆ ಬುದ್ಧಿಜೀವಿಗಳು/ರಾಜಕಾರಣಿಗಳು ಹೇಳುವುದನ್ನು ಕೇಳಿದ್ದಾರೆಯೇ ಹೊರತು,ತಾವೇ ಖುದ್ದು ಓದಲು ಹೋಗಿಲ್ಲ.

‘ಟಿಪ್ಪುವಿನ ಖಡ್ಗ, ಅಂಬೇಡ್ಕರ್ ಸಂವಿಧಾನ’ ಎಂಬೆಲ್ಲ ಪದಗಳ ಆಟದ ಮೂಲಕ ‘ದಲಿತರನ್ನು ಬಳಸಿಕೊಂಡು ಮುಸ್ಲಿಂ ರಾಜಕಾರಣ ಮಾಡಲು ಹೊರಟಿರುವವರ ಮರ್ಮವೇನು ಎನ್ನುವುದನ್ನು ಅರಿಯಬೇಕಾದರೇ,ಯುವದಲಿತರು ಜೆ. ಎನ್ ಮಂಡಲ್ ಅವರ ಬದುಕು ಹಾಗೂ ಅಂಬೇಡ್ಕರ್ ಅವರ ಪಾಕಿಸ್ತಾನ ಹಾಗೂ ಇಸ್ಲಾಮ್ ಕುರಿತ ಪುಸ್ತಕವನ್ನು ಓದಬೇಕು,ಆಗ ಭ್ರಮೆ ಕಳಚಿಕೊಂಡು ವಾಸ್ತವಕ್ಕಿಳಿದು ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments