ಆಡುವ ಮಾತು….!!
– ಗೀತಾ ಜಿ.ಹೆಗಡೆ
ಕಲ್ಮನೆ
ಕೆಲವೊಮ್ಮೆ ಮನುಷ್ಯರ ಮಾತು, ನಡವಳಿಕೆ ಎಷ್ಟೊಂದು ಇರುಸು ಮುರುಸು ತರಿಸುತ್ತದೆ. ಕೆಲವರು ಆಡುವ ಮಾತುಗಳು ಅದೆಷ್ಟು ಕಿರಿ ಕಿರಿ ಬೇಸರ ತರಿಸುವುದೆಂದರೆ ಕೇಳೋದಕ್ಕೇ ಆಗೋದಿಲ್ಲ. ಏನಾದರೂ ತಿರುಗಿ ಹೇಳೋದಕ್ಕೂ ಸ್ವಲ್ಪ ಕಷ್ಟ. ಅದರಲ್ಲೂ ಕೆಲವು ಹತ್ತಿರದ ಸಂಬಂಧಿಕರಾದರಂತೂ ಮುಗಿದೇ ಹೋಯಿತು. ಅವರ ವಾಕ್ ಚಾತುರ್ಯ ಸದಾ ಕಿವಿಗೆ ಬೀಳುತ್ತಲೇ ಇರುತ್ತದೆ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ರೀತಿಯ ಮಾತುಗಳು ಅವರಿಗೆ ಅದೇನೋ ಅಚ್ಚು ಮೆಚ್ಚು. ತಾನೇನೊ ಗಹನವಾಗಿ ಮಾತನಾಡುವವರೆಂಬ ಹುಸಿ ಭ್ರಮೆ ಮನೆ ಮಾಡಿರಬಹುದೇನೊ? ಏಕೆಂದರೆ ಕೇಳಿಸಿಕೊಳ್ಳುವ ಎದುರಾಳಿಯ ಕಡೆ ಕಿಂಚಿತ್ತೂ ಗಮನವಿಲ್ಲದೆ ತಮ್ಮದೇ ಮಾತಿನ ದಾಟಿ ಮುಂದುವರಿಸಿಕೊಂಡು ಹೋಗುತ್ತಿರುತ್ತಾರೆ. ಇದು ಅವರ ಹುಟ್ಟು ಗುಣವಾದರೂ ಇದು ಎಷ್ಟು ಸರಿ? ವಯಸ್ಸಾಗುತ್ತ ಮನುಷ್ಯನಿಗೆ ತಿಳಿವಳಿಕೆ ಬಂದಂತೆ ನಮ್ಮ ಮಾತು ನಡೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂಬ ಪರಿಜ್ಞಾನವೂ ಇದ್ದಂತೆ ಕಾಣುವುದಿಲ್ಲ. ಆನೆ ನಡೆದಿದ್ದೇ ದಾರಿ ಅನ್ನುವಂತೆ ಅವರ ಮಾತು ಮುಂದುವರಿದಿರುತ್ತದೆ.
ಇನ್ನು ನೀವೇನಾದರೂ ಅವರಿಂದ ಕಿಂಚಿತ್ತು ಸಹಾಯ ಬಯಸಿದರೆ ಸಿಕ್ಕಿದ್ದೇ ಚಾನ್ಸು ಅಂತ ನಮ್ಮ ಮೇಲೆ ಸವಾರಿ ಮಾಡುವಷ್ಟು ರೆಡಿಯಾಗಿಬಿಡುತ್ತಾರೆ. ಇದುವರೆಗೂ ಎಲ್ಲಾ ತಾವೇ ಮಾಡಿ ಇವರ ಬದುಕು ಉದ್ದಾರ ಮಾಡಿದ್ದೇವೆ ಅನ್ನುವ ರೀತಿ ಇಂಥವರ ನಡೆ. ಅಯ್ಯೋ ಶಿವನೆ ಯಾಕಾದರೂ ಹೇಳಿದೆ. ಸುಮ್ಮನೆ “ಬಂದಿದ್ದೆಲ್ಲಾ ಬರಲಿ, ಗೋವಿಂದನ ದಯೆ ಇರಲಿ” ಅಂತ ತೆಪ್ಪಗಿರೋದು ಬಿಟ್ಟು ನಾನ್ಯಾಕೆ ಇವರ ಸಹಾಯ ಕೇಳಿದೆ ಅನ್ನುವ ಮಟ್ಟಿಗೆ ಮನ ನೊಂದುಕೊಳ್ಳುತ್ತದೆ. “ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ” ಅನ್ನುವ ಹಿರಿಯರ ಗಾದೆಯಂತೆ ಆ ಪರಮಾತ್ಮ ಮನಸ್ಸು ಮಾಡಿದರೆ ನಮ್ಮ ಕಷ್ಟಕ್ಕೆ ಪರಿಹಾರ ಸಿಗಲು ಕ್ಷಣ ಮಾತ್ರ ಸಮಯ ಸಾಕು. ಆದರೆ ಅಸಹಾಯಕತೆಯಲ್ಲಿ ಹತಾಶವಾದ ಮನಸ್ಸು ದುಃಖಗೊಂಡು ನಮ್ಮ ಸಮಸ್ಯೆ ಕಷ್ಟಗಳನ್ನು ಇನ್ನೊಬ್ಬರಲ್ಲಿ ಹೇಳಿಕೊಂಡುಬಿಡುತ್ತೇವೆ. ಆಗ ಹೇಳಬಹುದೋ ಅಥವಾ ಬೇಡವೋ ಅನ್ನುವ ವಿವೇಚನೆ ಕಳೆದುಕೊಂಡುಬಿಟ್ಟಿರುತ್ತೇವೆ. ಇನ್ನೊಬ್ಬರ ಸಾಂತ್ವನಕ್ಕಾಗಿ, ಅವರ ಸಹಾಯಕ್ಕಾಗಿ ಮನಸ್ಸು ಹಾತೊರೆಯುತ್ತದೆ. ಕೊನೆಗೆ ಮನಸ್ಸು ಸಮಾಧಾನದ ಸ್ಥಿತಿಗೆ ಬಂದಾಗ ಛೆ! ಎಂತಾ ಕೆಲಸ ಆಗೋಯ್ತು. ನಾನು ಯಾರ ಹತ್ತಿರವೂ ಏನು ಹೇಳದೆ ನನ್ನಷ್ಟಕ್ಕೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕಿತ್ತು. ಯೋಗ್ಯವಲ್ಲದ ವ್ಯಕ್ತಿಯ ಹತ್ತಿರ ಹೇಳಿಬಿಟ್ಟೆನಲ್ಲಾ. ನನ್ನ ಮನಸ್ಸು ಯಾಕಿಷ್ಟು ದುರ್ಬಲವಾಯಿತು. ಸ್ವಲ್ಪ ಯೋಚನೆ ಮಾಡಬೇಕಿತ್ತು. ಎಷ್ಟೆಲ್ಲಾ ಅನುಭವಿಸಿ ಈಜಿ ದಡ ಸೇರಿದೆ; ಈಗ್ಯಾಕೆ ಬೇರೆಯವರ ಹತ್ತಿರ ಕೈ ಒಡ್ಡಿದೆ. ನನ್ನ ಮನಸ್ಸು ವಿಚಲಿತವಾಗಲು ಬಿಡಬಾರದಿತ್ತು. ತಪ್ಪು ಮಾಡಿದೆ. “ಮಿಂಚಿ ಹೋದ ಕಾಲ ಚಿಂತಿಸಿ ಫಲವಿಲ್ಲ” ಅಂದ ಹಾಗೆ ಆಯ್ತಲ್ಲಾ. ಮನದೊಳಗೆ ಕೊರಗುವ ಪರಸ್ಥಿತಿ ತಂದುಕೊಂಡೆನಲ್ಲ. ಕೈ ಕೈ ಹಿಸುಕಿಕೊಳ್ಳುತ್ತ ವಿಲಿವಿಲಿ ಒದ್ದಾಡುತ್ತದೆ ಮನಸ್ಸು.
ಇನ್ನು ಇಂಥವರು ಕಂಡವರ ಹತ್ತಿರವೆಲ್ಲ ವಿಷಯ ಹೇಳಿ ಚರ್ಚೆ ಮಾಡುತ್ತಾರೆ. ನಗೆಪಾಟಲಿಗೆ ನಾವೇ ದಾರಿಮಾಡಿಕೊಟ್ಟಂತಾಗುತ್ತದೆ. ಇವರು ಎಷ್ಟು ಪ್ರಚಾರ ಪ್ರಿಯರು ಅಂದರೆ ಒಂದಕ್ಕೆ ಹತ್ತು ಸುಳ್ಳು ಸೇರಿಸಿ ತಾವು ಬಹಳ ಸಂಭಾವಿತರು. ನಾನು ಅಷ್ಟು ಸಹಾಯ ಮಾಡಿದೆ. ಇಷ್ಟು ಸಹಾಯ ಮಾಡಿದೆ. ನೋಡ್ದಾ ಒಂದು ಚೂರು ನೆನಪಿಲ್ಲ. ಏನೋ ಪಾಪ ಅಂತ ಹೋದರೆ ನಮ್ಮ ಮಾತೇ ಧಿಕ್ಕರಿಸುತ್ತಾರೆ ಈಗ. ನಾನೂ ಅಷ್ಟೆ. ಆಗಲೇ ಹೇಳಿ ಬಿಟ್ಟೆ. ಇನ್ನು ನಾನು ಯಾವ ವಿಷಯಕ್ಕೂ ಬರೋದಿಲ್ಲ. ಏನಾದರೂ ಮಾಡಿಕೊಳ್ಳಿ. ಇದು ಅವರ ಒಕ್ಕಣೆಯ ಮಾತು.
ನೋಡಿ ಸಕಲ ಕಲಾ ವಲ್ಲಭರು ಇವರು. ಬಹಳ ತಿಳಿದವರು ನಮ್ಮನ್ನು ಉದ್ಧಾರ ಮಾಡಲು ಬಂದವರು. ಕಾಸಿಲ್ಲ ಕವಡೆ ಖರ್ಚಿಲ್ಲ. ಪುಕ್ಕಟೆ ಪ್ರಚಾರ ಪ್ರಿಯರು. ಸಾಕಪ್ಪಾ ಇವರ ಸಹವಾಸದಿಂದ ದೂರ ಇರೋಣ. ಯಾಕೆ ಸುಮ್ಮನೆ ಮಾತು. ನಾವು ಒಂದು ಹೇಳೋದು ಅವರು ಇನ್ನೊಂದು ಹೇಳೋದು. ಇದರಿಂದ ಸ್ವಲ್ಪವಾದರೂ ಉಪಯೋಗವಿದೆಯಾ? ಖಂಡಿತಾ ಹಾಳು. ಅದೇನೊ ಗಾದೆ ಹೇಳುತ್ತಾರಲ್ಲ ” ಮಾಡೊ ಕೆಲಸ ಬಿಟ್ಟು ಹಾಡೊ ದಾಸನ ಕಟ್ಟಿಕೊಂಡ ಹಾಗೆ”. ಈ ಪರಿಸ್ಥಿತಿ ಬೇಡ ಬೇಡವೆಂದರೂ ನಿರ್ಮಾಣವಾಗುತ್ತದೆ. ಬಿಸಿ ತುಪ್ಪ ಉಗುಳೋ ಹಾಗಿಲ್ಲ ನುಂಗೋ ಹಾಗೂ ಇಲ್ಲ. ಮಾಡಿದ್ದುಣ್ಣೊ ಮಾರಾಯಾ. ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಂಡಂತೆ ಆಗುವುದರಲ್ಲಿ ಸಂಶಯವೇ ಇಲ್ಲ.
ಆದುದರಿಂದ ಕೆಲವೊಂದು ವಿಚಾರಗಳನ್ನು, ಸಮಸ್ಯೆಗಳನ್ನು ನಮ್ಮಲ್ಲೆ ನಾವು ವಿಶ್ಲೇಷಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಕೆಲವೊಂದು ಸಾರಿ ಪರಿಹಾರ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಜನರ ಬಾಯಿಗೂ ಬೀಳಬೇಕಾಗಬಹುದು. ಹಾಗಂತ ತರಾತುರಿಯಲ್ಲಿ ಕೆಲವೊಂದು ಕಾರ್ಯ ಮಾಡಿ ಮುಗಿಸಲು ಸಾಧ್ಯ ಇಲ್ಲ. ಜನರೇನು ಹೇಗಿದ್ದರೂ ಆಡಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಸಮಾಜ ನಿಂತಿರುವುದೆ ಅಂತಹವರ ಮೇಲೆ ಅನಿಸುತ್ತದೆ. ಮನಸ್ಸಿಗೆ ಅತೀವ ಹಿಂಸೆ, ಅವಮಾನ, ಸಂಕಟ ಆಗುತ್ತದೆ. ಆದರೆ ವಿಧಿ ಇಲ್ಲ. ಜನರಾಡುವ ಮಾತುಗಳು ಚುಚ್ಚಿ ಚುಚ್ಚಿ ಕೊಲ್ಲುತ್ತಿರುವಾಗ ಅದಕ್ಕೆ ಅಂಜಿ ಇನ್ನೊಬ್ಬರ ಮುಂದೆ ಹಸ್ತ ಚಾಚುವುದರಿಂದ ಒಳಿತಾಗುವ ಬದಲು ಕೆಡುಕಾಗುವುದೇ ಹೆಚ್ಚು. ಇನ್ನೊಬ್ಬರ ಕಷ್ಟ ತನ್ನದೂ ಎಂದು ಪರಿಗಣಿಸಿ ಮುಕ್ತ ಮನಸ್ಸಿನಿಂದ ಸಹಾಯ ಹಸ್ತ ನೀಡುವವರು ಕೇವಲ ಬೆರಳೆಣಿಕೆಯಷ್ಟು. ಹೆಚ್ಚಿನ ಜನ ವಿಷಯ ಏನು ಎತ್ತ ಎಂದು ಗೊತ್ತಿದ್ದರೂ ಸಂಭಾವಿತರಂತೆ ನಟಿಸಿ ಹಿಂದಿನಿಂದ ತಮ್ಮದೇ ದಾಟಿಯಲ್ಲಿ ಮಾತನಾಡುವುದು ಜವಾಬ್ದಾರಿ ಸ್ಥಾನದಿಂದ ವಿಮುಖರಾಗುವುದು ಈಗಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ಆದುದರಿಂದ ಮನುಷ್ಯ ಎಷ್ಟೇ ಕಷ್ಟ ಬರಲಿ ತನ್ನ ಸಮಸ್ಯೆ ಇನ್ನೊಬ್ಬರಲ್ಲಿ ಹೇಳಿಕೊಳ್ಳುವಾಗ ಸ್ವಲ್ಪ ತಾಳ್ಮೆ ವಹಿಸಿ ಶಾಂತವಾಗಿ ಕುಳಿತು ಒಮ್ಮೆ ಯೋಚಿಸಿ ಯಾರಲ್ಲಿ ಹೇಳಬೇಕು, ಯಾರಲ್ಲಿ ಹೇಳಬಾರದು ಅಥವಾ ಯಾರಲ್ಲೂ ಹೇಳದೆಯೇ ತಾನೊಬ್ಬನೇ ನಿಭಾಯಿಸಬಹುದೆ ಎಂದೆಲ್ಲ ವಿಚಾರ ಮಾಡಿ ಮುನ್ನಡೆಯುವುದು ಒಳ್ಳೆಯದು.
ಹಾಗೆಯೇ ನಾವು ಮಾತನಾಡಬೇಕಾದರೂ ಬಹಳ ಎಚ್ಚರಿಕೆ ಅಗತ್ಯ. ನಮ್ಮ ಮಾತಿನಿಂದ ಇನ್ನೊಬ್ಬರಿಗೆ ನೋವಾಗುವಂತಿರಬಾರದು. ಮನಸ್ಸು ಘಾಸಿಗೊಂಡು ಬಹು ದಿನಗಳವರೆಗೆ ಮಾನಸಿಕವಾಗಿ ನರಳುವಂತಾಗಬಾರದು. ಆಡುವ ಮಾತಿನಲ್ಲಿ ಪ್ರೀತಿ, ವಾತ್ಸಲ್ಯ ತುಂಬಿದ್ದರೆ ಎಷ್ಟು ಚೆನ್ನ. ಮತ್ತೊಬ್ಬರ ಅಸಹಾಯಕತೆ ಸಿಕ್ಕಿದ್ದೇ ಚಾನ್ಸು ಅಂತ ಮೂದಲಿಸಿ ಕೊಂಕು ಮಾತನಾಡಿ ಇನ್ನಷ್ಟು ನೋವುಂಟು ಮಾಡುವುದರ ಬದಲು ನಾಲ್ಕು ಹಿತವಾದ ಮಾತನಾಡಿ ಅವರ ಕಷ್ಟಕ್ಕೆ, ಅವರ ದುಃಖಕ್ಕೆ ಕಿಂಚಿತ್ತಾದರೂ ಪ್ರತಿಸ್ಪಂಧಿಸಿದರೆ ಅವರ ಖುಷಿ ನೋಡಿ ನಮ್ಮ ಮನಸ್ಸೂ ಎಷ್ಟು ನಿರಾಳವಾಗುವುದು. ಏನೋ ಒಂದು ರೀತಿ ಸಮಾಧಾನ ನಮಗೂ ಸಿಗುವುದು ನಿಶ್ಚಿತ.
ಮಾತು ಮುತ್ತು ಎರಡೂ ಒಂದೇ. ಮಾತು ಆಡಿದರೆ ಮತ್ತೆ ಸಿಗೋಲ್ಲ, ಮುತ್ತು ಒಡೆದರೆ ಉಪಯೋಗಕ್ಕೆ ಬರೋದಿಲ್ಲ.
Trackbacks & Pingbacks