ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 17, 2018

ಜಮ್ಮುವಿನ ಹಿಂದೂಗಳ ಮೇಲೆ ಕಣ್ಣಿಟ್ಟಿರುವ ಮಾಫಿಯಾಗಳು ಯಾವುವು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

೬ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದು ಇಡೀ ದೇಶದ ಅಂತಃಕರಣವನ್ನೇ ಕಲುಕಿಹಾಕಿತ್ತು.ಸಾರ್ವಜನಿಕರು, ಭಿನ್ನ ಭಿನ್ನ ನಿಲುವುಳ್ಳ ಸಂಘಟನೆಗಳೆಲ್ಲ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದ ಕೇಸು ಅದು.ದೆಹಲಿಯ ವಿದ್ಯಾರ್ಥಿಗಳು,ಸಾರ್ವಜನಿಕರು ನೋಡು ನೋಡುತ್ತಿದಂತೆಯೇ ರಾಷ್ಟ್ರಪತಿಭವನದ ರಸ್ತೆಗೆ ಮುತ್ತಿಗೆ ಹಾಕಿಬಿಟ್ಟಿದ್ದರು. ಹಾಗೆ ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗವನ್ನು ಆಗಿನ ಯುಪಿಎ ಸರ್ಕಾರ ನಡೆಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.ದೆಹಲಿಯಲ್ಲಿ ಹೊತ್ತಿಕೊಂಡ ಕಿಡಿ ದೇಶದ ಮೂಲೆಯಲ್ಲೂ ಪ್ರತಿಧ್ವನಿಸಿತ್ತು.ಮೊದಲು ಮೊದಲು ಮೊಂಡತನ ತೋರಿದ್ದ ದೆಹಲಿಯ ಶೀಲಾ ದೀಕ್ಷಿತ್ ಸರ್ಕಾರ ಆ ನಂತರ ತಲೆಬಾಗಿ,ಅತ್ಯಾಚಾರ ಪ್ರಕರಣಗಳ ಕುರಿತ ಕಾನೂನುಗಳ ಸುಧಾರಣೆಗೆ ನ್ಯಾ.ವರ್ಮಾ ಅವರ ನೇತೃತ್ವದ ಸಮಿತಿಯನ್ನು ನೇಮಿಸಿತ್ತು,ಅಂತಿಮವಾಗಿ Criminal Amendment Bill, 2013 ಹೊರಬಂದಿತ್ತು.

ಆ ಭೀಕರ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗಳೆಲ್ಲ ಆತ್ಮಹತ್ಯೆ ಮಾಡಿಕೊಂಡು ತೊಲಗಿದ್ದಾರಾದರೂ,ಅತ್ಯಾಚಾರಿಗಳ ಅತಿಕ್ರೂರಿ ಎನಿಸಿಕೊಂಡಿದ್ದವ ಮಾತ್ರ ‘ಅಪ್ರಾಪ್ತ’ ಎಂಬ ಸ್ಲೇಟು ಹಿಡಿದು ಇಂದಿಗೂ ಎಲ್ಲೋ ಬದುಕಿಕೊಂಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದವನಿಗೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರವೇ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಇಡೀ ದೇಶದಲ್ಲಿ ಕಿಚ್ಚು ಹಚ್ಚಿಹೋದ ಆ ಹೆಣ್ಣುಮಗಳ ನಿಜವಾದ ಹೆಸರು ಬಿಬಿಸಿ ಸುದ್ದಿ ಸಂಸ್ಥೆ ಹೇಳುವ ತನಕ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ. ದೇಶ ಆ ಹೆಣ್ಣುಮಗಳಿಗೆ ‘ನಿರ್ಭಯ’ ಎಂಬ ಹೆಸರಿಟ್ಟಿತ್ತು. ಈ ದೇಶದ ಎಷ್ಟೋ ತಾಯಂದಿರು ಆಕೆಗಾದ ಅನ್ಯಾಯ ತಮ್ಮದೇ ಕುಟುಂಬದವರ ಮೇಲಾದ ಅನ್ಯಾಯವೆಂಬಂತೆ ಮರುಗಿದರು,ಬೀದಿಗಿಳಿದರು.ಹಾಗೆ ಬೀದಿಗಿಳಿದವರಿಗೆ ನಿರ್ಭಯಳ ಜಾತಿ ಯಾವುದು,ರಿಲಿಜನ್ ಯಾವುದು? ಆಕೆಯ ಹಿಂದುವೋ?ಮುಸ್ಲಿಮೋ?ಕ್ರಿಶ್ಚಿಯನ್ನೋ?ಇದ್ಯಾವುದರೋ ಪರಿವೆಯೂ ಇರಲಿಲ್ಲ. ಮುಖ್ಯವಾಗಿ ಅದರ ಅವಶ್ಯಕತೆಯೂ ಇರಲಿಲ್ಲ. ಇಡೀ ದೇಶ ಆ ಹೆಣ್ಣುಮಗಳ ನೋವಿಗೆ ಜೊತೆಯಾಗಿ ನಿಂತಿದ್ದು ಆಕೆಯ ಮೇಲಾದ ದೌರ್ಜ್ಯನ್ಯಕ್ಕಾಗಿ,ಆಕೆಯ ಪ್ರಾಣ ತೆಗೆದ ರಾಕ್ಷಸರಿಗೆ ಶಿಕ್ಷೆಯಾಗಲೇ ಬೇಕೆಂಬ ಏಕೈಕ ಕಾರಣಕ್ಕಾಗಿ!

ನಿರ್ಭಯ ಪ್ರಕರಣದ ನಂತರವೂ ಈ ದೇಶದಲ್ಲಿ ಬಹಳಷ್ಟು ಅತ್ಯಾಚಾರ ಪ್ರಕರಣಗಳು ನಡೆದು ಹೋಗಿವೆ. ಮೀಡಿಯಾಗಳ ಮೂಲಕ ಕೆಲವು ಸುದ್ದಿಯಾದವು ಬಿಟ್ಟರೆ,ಜನಸಾಮಾನ್ಯರು ನಿರ್ಭಯ ಪ್ರಕರಣದಂತೆ ಅದಕ್ಕೆ ಸ್ಪಂದಿಸಲಿಲ್ಲ.ಜನರ ವರ್ತನೆಗೂ ಒಂದು ಕಾರಣವಿದೆ. ಈ ದೇಶದಲ್ಲಿ ಜಾತಿಪ್ರಜ್ಞೆ ಆಳವಾಗಿ ಬೇರೂರಿದೆ ಅಂತೆಲ್ಲ ಪಾಶ್ಚಾತ್ಯ ಪಂಡಿತರ ಗುಲಾಮಿ ಸಂತಾನಗಳು ಗಂಟೆಗಟ್ಟಲೇ ಕೊರೆಯಬಹುದು,ಆದರೆ ಸಾಮಾನ್ಯ ಜನರಿಗೆ ಜಾತಿಗಳನ್ನು ಎಲ್ಲಿ,ಹೇಗೆ ಮತ್ತು ಎಷ್ಟು ಬಳಸಬೇಕು ಎನ್ನುವುದು ಈ ಸೋ-ಕಾಲ್ಡ್ ಪಂಡಿತರಿಗಿಂತ ಬಹಳ ಚೆನ್ನಾಗಿಯೇ ತಿಳಿದಿದೆ.ಯಾವೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ದೌರ್ಜನ್ಯ/ಕ್ರೈಮಿಗಿಂತಲೂ ದೌರ್ಜನ್ಯಕ್ಕೊಳದಾವರ ಜಾತಿ/ರಿಲಿಜನ್ ಪ್ರಾಮುಖ್ಯತೆ ಪಡೆದುಕೊಂಡಿದೆಯೋ,ಕೊಳ್ಳುತ್ತಿದೆಯೋ ಅಂತಹ ಪ್ರಕರಣಗಳಿಂದ ನಾಗರೀಕ ಸಮಾಜ ದೂರ ಸರಿದರೆ ಜಾತಿ ಹೆಸರಿನಿಂದ ಜೀವನ ಸಾಗಿಸುವ ಗಂಜಿಗಿರಾಕಿಗಳು,ಮೀಡಿಯಾ ಮಾಫಿಯಾಗಳು, ರಾಜಕೀಯ ಪಕ್ಷಗಳು ಒಳ ನುಸುಳಿಕೊಳ್ಳುತ್ತವೆ.ದೌರ್ಜ್ಯನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವುದಕ್ಕಿಂತ, ಜಾತಿ ಬೇಳೆ ಬೇಯಿಸಿಕೊಂಡು ರಾಜಕೀಯ ಫಸಲು ತೆಗೆಯುವುದೇ  ಗಂಜಿಗಿರಾಕಿಗಳಿಗೆ ಮುಖ್ಯವಾಗುತ್ತದೆ. ಅಂತಹದ್ದೇ ಪ್ರಕರಣವೊಂದಕ್ಕೆ ಜಮ್ಮು-ಕಾಶ್ಮೀರ ರಾಜ್ಯ ಈಗ ಸಾಕ್ಷಿಯಾಗಿದೆ.

ಜಮ್ಮುವಿನ ಕಥುವಾ ಜಿಲ್ಲೆಯ ರಸನ್ನ ಗ್ರಾಮದಲ್ಲಿ ನಡೆದ ೮ ವರ್ಷದ ಮಗುವಿನ ಅತ್ಯಾಚಾರ ಹಾಗೂ ಹತ್ಯೆಯ ಪ್ರಕರಣವೀಗ ದೇಶದಾದ್ಯಂತ ಸುದ್ದಿಯಾಗಿದೆ. ಆದರೆ ದುರಾದೃಷ್ಟವಶಾತ್ ಈ ಸುದ್ದಿಯ ಹಿಂದೆ, ನರರಾಕ್ಷಸರ ಕೈಗೆ ಸಿಕ್ಕಿ ಹತಳಾದ ಆ ಮಗುವಿಗೆ ನ್ಯಾಯ ಕೊಡಿಸುವುದಕ್ಕಿಂತ ಮಿಗಿಲಾಗಿ,ಆ ಮಗುವಿನ ರಿಲಿಜನ್,ಅತ್ಯಾಚಾರಿಗಳ ಜಾತಿಗಳು ಹಾಗೂ ರಾಜಕೀಯ ಜಿದ್ದಾಜಿದ್ದಿ ಮುಖ್ಯವಾದಂತೆ ಕಾಣುತ್ತಿದೆ.

ಮೀಡಿಯಾಗಳಲ್ಲಿ ಬರುತ್ತಿಯುವ ಪ್ರಕರಣದ ಒಂದು ಮಗ್ಗುಲು ಹೀಗಿದೆ : ಗುಜ್ಜರ್/ಬಕ್ರೆವಾಲ್ ಎಂಬ ಮುಸ್ಲಿಂ ಸಮುದಾಯಕ್ಕೆ ಸೇರಿದ ೮ ವರ್ಷದ ಹೆಣ್ಣುಮಗಳನ್ನು,ಆಕೆಯ ಸಮುದಾಯದ ಮೇಲೆ ಇದ್ದ ಕೋಪದ ಕಾರಣಕ್ಕಾಗಿ, ಆ ಗ್ರಾಮದ ದೇವಸ್ಥಾನದ ಮುಖ್ಯಸ್ಥ,ಆತನ ಸಹಚರರು ಹಾಗೂ ಕೆಲವು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಅಪಹರಿಸಿ,ಒಂದು ವಾರಗಳ ಕಾಲ ಆಕೆಯನ್ನು ದೇವಸ್ಥಾನದಲ್ಲಿ ಬಂಧಿಸಿ ಡ್ರಗ್ಸ್ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿರಿಸಿ ನಿರಂತರ ಅತ್ಯಾಚಾರ ನಡೆಸಿ,ವಾರದ ನಂತರ ಆ ಪುಟ್ಟ ಬಾಲಕಿಯನ್ನು ಭೀಕರವಾಗಿ ಹತ್ಯೆಗೈದು ಶವವನ್ನು ಕಾಡಿನಲ್ಲಿ ಎಸೆದುಹೋಗಿದ್ದಾರೆ. ಬಾಲಕಿ ಕಾಣೆಯಾಗಿರುವ ಬಗ್ಗೆ ಆಕೆಯ ಕುಟುಂಬಸ್ಥರು ದೂರು ನೀಡಿದರೂ ಸ್ಥಳೀಯ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ.ಈ ಅತ್ಯಾಚಾರ ಹಾಗೂ ಕೊಲೆಯ ಮುಖ್ಯ ಉದ್ದೇಶ,ಗುಜ್ಜರ್/ಬಕ್ರೆವಾಲ್ ಸಮುದಾಯವನ್ನು ಈ ಗ್ರಾಮದಿಂದ ಹೊರಗೆ ಓಡಿಸುವ ಸಂಚು ಇತ್ತೆಂದು ಪೊಲೀಸ್ ವರದಿ ಹೇಳುತ್ತಿದೆ.

ಕಾರ್ಗಿಲ್ ಯುದ್ಧ ನಿಮಗೆ ನೆನಪಿರಬೇಕಲ್ಲ.ಗಡಿಯೊಳಗೆ ನುಗ್ಗಿಬಂದಿದ್ದ ಪಾಪಿಸ್ತಾನಾದ ಸೈನಿಕರ ಬಗ್ಗೆ ನಮ್ಮ ಸೈನ್ಯಕ್ಕೆ ಮಾಹಿತಿ ನೀಡಿದ್ದು ಇದೇ ಗುಜ್ಜರ್/ಬಕ್ರೆವಾಲ್ ಸಮುದಾಯದವರು. ಅಂತಹ ಸಮುದಾಯ ಈ ಭಾಗದಲ್ಲಿ ಮೊದಲಿನಿಂದಲೂ ವಾಸವಾಗಿದೆ. ಈ ಪ್ರಕರಣ ನಡೆದಿರುವುದು ಜನವರಿ ತಿಂಗಳಿನಲ್ಲಿ,ಆದರೆ ಸುದ್ದಿಯಾಗುತ್ತಿರುವುದು ಮೂರು ತಿಂಗಳ ನಂತರ.ಹಾಗೆ ಸುದ್ದಿಯಾಗಲು ಕಾರಣವಾಗಿದ್ದು ಜಮ್ಮು ಬಾರ್ ಅಸೋಸಿಯೇಶನ್ ಹಾಗೂ ಹಿಂದೂ ಏಕ್ತಾ ಮಂಚ್ ನಡೆಸಿದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮುಫ್ತಿ ಸರ್ಕಾರದಲ್ಲಿದ್ದ ಬಿಜೆಪಿಯ ಸಚಿವರು (ಈಗ ಅವರಿಬ್ಬರೂ ರಾಜೀನಾಮೆ ನೀಡಿದ್ದಾರೆ).

ಮೀಡಿಯಾಗಳಲ್ಲಿ ಹೇಳದ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿರುವ ಪ್ರಕರಣದ ಗ್ರೌಂಡ್ ರಿಪೋರ್ಟ್ ಎನ್ನಲಾಗುತ್ತಿರುವ ಇನ್ನೊಂದು ಮಗ್ಗುಲು ಹೀಗಿದೆ : ಬಾಲಕಿಯ ಶವ ಪತ್ತೆಯಾದಾಗ ನಡೆಸಿದ್ದ ಮೊದಲ ಪೋಸ್ಟ್ ಮಾರ್ಟಮ್ ವರದಿಯ ಪ್ರಕಾರ, ಆಕೆಯ ಹತ್ಯೆಯಾಗಿರುವುದು ನಿಜ,ಆದರೆ ಅತ್ಯಾಚಾರವಾಗಿಲ್ಲ. ಹಾಗೆಯೇ ಬಾಲಕಿಯ ಸಮುದಾಯ ಹಾಗೂ ಆರೋಪಿಗಳ ಸಮುದಾಯಕ್ಕೂ ಅಂತಹ ಹಗೆತನಗಳೂ ಇಲ್ಲ. ಇನ್ನು ಯಾವ ದೇವಸ್ಥಾನದಲ್ಲಿ ಆ ಪುಟ್ಟ ಬಾಲಕಿಯನ್ನು ಬಂಧನದಲ್ಲಿಟ್ಟು ನಿರಂತರ ಅತ್ಯಾಚಾರ ನಡೆಸಲಾಯಿತು ಎನ್ನಲಾಗುತ್ತಿದೆಯೋ ಆ ದೇವಸ್ಥಾನವಿರುವುದು ಊರಿನ ನಡುವೆ. ಯಾವುದೇ ಬಾಗಿಲು,ಗೇಟ್ ಗಳಿಲ್ಲದ ಆ ದೇವಸ್ಥಾನದಲ್ಲಿ ಜನರು ಓಡಾಡುತ್ತಲೇ ಇರುತ್ತಾರೆ.ಇಂತಹ ಜಾಗದಲ್ಲಿ ಆಕೆಯನ್ನು ಯಾರಿಗೂ ಕಾಣದಂತೆ ಅಷ್ಟು ದಿನ ಬಂಧಿಸಿಟ್ಟಿದ್ದು ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆ. ಇಲ್ಲಿ ಸ್ಥಳೀಯರನ್ನು ಬಿಟ್ಟರೆ ಇತ್ತೀಚಿಗೆ ಅಕ್ರಮವಾಗಿ ಬಂದು ಸೇರಿ ಕೊಂಡಿರುವುದು ಮಯನ್ಮಾರಿನ ರೋಹಿಂಗ್ಯಾ ಮುಸ್ಲಿಮರು.ಅವರ ಮೇಲೂ ಸ್ಥಳೀಯರಿಗೆ ಸಂದೇಹಗಳಿವೆ.

ತನಿಖೆಯ ಈ ಹಂತದವರೆಗೂ ಸ್ಥಳೀಯರು ತಣ್ಣಗೇ ಇದ್ದರು.ಯಾವಾಗ ಮುಫ್ತಿ ಸರ್ಕಾರ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ತೆಗೆದುಕೊಂಡು ಪ್ರಕರಣದ ಹೊಣೆಯನ್ನುSIT ತನಿಖೆಗೆ  ನೀಡಿತೋ ಅಲ್ಲಿಂದ ಕೇಸು ತಿರುವು ಪಡೆಯಲಾರಂಭಿಸಿತು, ದಶಕಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿಯೇ ಹಿಂದೂ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರ ಹಾಗೂ ಆಕೆಯ ಸಹೋದರನನ್ನು ಕೊಂದ ಆರೋಪವಿರುವ ಟ್ರಾಕ್ ರೆಕಾರ್ಡ್ ಇರುವ ಇರ್ಫಾನ್ ವಾನಿ ಎಂಬುವ ಅಧಿಕಾರಿಯೂ ಭಾಗವಾಗಿರುವ ಈ ತಂಡ, ತನಿಖೆಯ ನೆಪದಲ್ಲಿ ಸ್ಥಳೀಯರಿಗೆ ಹಿಂಸೆ ನೀಡಲಾರಂಭಿಸಿದ್ದೇ ಸ್ಥಳೀಯರ ಕೋಪ ಹಾಗೂ ಮುಂದಿನ ಘಟನೆಗಳಿಗೆ ಕಾರಣವಾಯಿತು ಎನ್ನಲಾಗುತ್ತಿದೆ.

ಕ್ರುದ್ಧರಾದ ಸ್ಥಳೀಯರೆಲ್ಲರೂ ಸೇರಿಕೊಂಡು ಹಿಂದೂ ಏಕ್ತಾ ಮಂಚ್ ಹೆಸರಿನಲ್ಲಿ ಪ್ರತಿಭಟನೆ ಶುರುವಿಟ್ಟುಕೊಂಡರು. ಅವರ ಬೇಡಿಕೆಯಿದ್ದಿದ್ದು ರಾಜ್ಯಸರ್ಕಾರದ SIT ತನಿಖೆ ಪಕ್ಷಪಾತಿಯಾಗಿದ್ದು ನಮಗಿದರಲ್ಲಿ ನಂಬಿಕೆಯಿಲ್ಲ ಹಾಗಾಗಿ ಪ್ರಕರಣವನ್ನು CBI ಗೆ ವಹಿಸಬೇಕು ಎನ್ನುವುದಾಗಿತ್ತು. ಬಹುಶಃ ಅದೊಂದೇ ಬೇಡಿಕೆಯಾಗಿದ್ದರೆ, ಈ ಪ್ರಕರಣ ರಾಷ್ಟ್ರೀಯ ,ಅಂತರರಾಷ್ಟ್ರೀಯ ಸುದ್ದಿಯಾಗುತ್ತಿರಲಿಲ್ಲವೇನೋ? ಪ್ರತಿಭಟನಾಕಾರರ ಮತ್ತೊಂದು ಮುಖ್ಯವಾದ ಬೇಡಿಕೆ “ಅಕ್ರಮ ರೋಹಿಂಗ್ಯಾ”ಗಳನ್ನು ಜಮ್ಮುವಿನಿಂದ ಹೊರಹಾಕಿ ಎನ್ನುವುದೂ ಆಗಿತ್ತು. ಆ ಬೇಡಿಕೆ ಜಮ್ಮು ಭಾಗವನ್ನು ಕಾಶ್ಮೀರದಂತೆ ರೋಹಿಂಗ್ಯಾಗಳನ್ನು ಮುಂದಿಟ್ಟುಕೊಂಡು ಇಸ್ಲಾಮೀಕರಣ ಮಾಡಲು ಹೊರಟಿದ್ದ ಮಾಫಿಯಾಗಳಿಗೆ ಯಾವಪರಿ ಸಿಟ್ಟು ತರಿಸಿದೆಯೆಂದರೇ, ಖುದ್ದು ವಿಶ್ವಸಂಸ್ಥೆಯೇ ಈ ಅತ್ಯಾಚಾರ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸುವಷ್ಟು! ಅತ್ತ ಸಿರಿಯಾದಲ್ಲಿ ಅಮೇರಿಕ-ರಷ್ಯಾ ಮುಖಾಮುಖಿಯಾಗಿರುವುದನ್ನು ತಡೆಯುವ ಯೋಗ್ಯತೆಯಿಲ್ಲದ ವಿಶ್ವಸಂಸ್ಥೆಗೆ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೋರಿಸುವ ಚಟವೇಕೆ? ವಿಶ್ವಸಂಸ್ಥೆಯ ಬಾಯಿಂದ ಮಾತನಾಡಿಸಿದ ಮಿದುಳು ಯಾರದು? ಇದು ನಮ್ಮ ಪ್ರಶ್ನೆಯಾಗಬೇಕು. ಎಲ್ಲಾ ಪ್ರಕರಣಗಳನ್ನು ಬಿಟ್ಟು ಕಾಶ್ಮೀರದ ಈ ಪ್ರಕರಣದ ಮೇಲೇಕೆ ಇವರಿಗೆ ಇಷ್ಟೊಂದು ಆಸಕ್ತಿ? ರೋಹಿಂಗ್ಯಗಳ ಪರವಾಗಿ ಸುಪ್ರೀಂ ಕೋರ್ಟಿನವರೆಗೆ ಹೋದ ದೆಹಲಿ/ಮುಂಬೈನ ಎಲೈಟ್ ಕ್ಲಾಸ್ ಜನರ ಕಣ್ಣು ಕುಕ್ಕಲು ಇದೇ ಬೇಡಿಕೆ ಕಾರಣವಾಗಿದ್ದಿರಬಹುದು.

ಈ ವಿಷಯದಲ್ಲಿ ಆ ಹೆಣ್ಣುಮಗುವಿಗೆ ನ್ಯಾಯ ಕೊಡಿಸುವುದಕ್ಕಿಂತಲೂ ಹಿಂದೂ ಆಚರಣೆ,ದೇವರು ನಮ್ಮ ಧಾರ್ಮಿಕ ನಂಬಿಕೆಗಳ ಜೊತೆ ಚೆಲ್ಲಾಟ ಶುರುವಾಗಿದೆ.ತ್ರಿಶೂಲಕ್ಕೆ ಕಾಂಡೋಮ್ ಸಿಕ್ಕಿಸಿದಂತೆ,ದೇವನೊಬ್ಬ ಹೆಣ್ಣುಮಗುವನ್ನು ಹಿಡಿದು ಕೇಕೆ ಹಾಕುತ್ತ ಓಡುತ್ತಿರುವಂತೆ ಹೀಗೆ ನಾನಾ ವಿಕೃತ ಕಾರ್ಟೂನುಗಳನ್ನು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡಿಸುತ್ತಿದ್ದಾರೆ. ಮಿದುಳನ್ನು ಅವರಿವರಿಗೆ ಅಡವಿಟ್ಟಿರುವ ಕೆಲವು ಬಾಲಿವುಡ್ ಸ್ಟಾರ್ ಗಳು ಸಹ ಹಿಂದೂಸ್ತಾನಿ ಎನ್ನಲು,ಹಿಂದೂ ಎನ್ನಲು ನಾಚಿಕೆಯಾಗುತ್ತಿದೆ ಅಂತೆಲ್ಲಾ ಬಾಯಿಬಡಿದುಕೊಂಡು ಅತಿರೇಕದ ವರ್ತನೆ ತೋರಿಸುತ್ತಿದ್ದಾರೆ. ಚರ್ಚು,ಮದರಾಸಗಳಲ್ಲಿಯೂ ಇಂತಹ ಬಹಳಷ್ಟು ಕೇಸುಗಳು ಆಗಿ ಹೋಗಿವೆ,ಆಗ ಯಾರು ಅವರ ಧಾರ್ಮಿಕ ಚಿಹ್ನೆಗಳನ್ನು ಹಿಡಿದು ಹೀಗೆ ವರ್ತಿಸಿಲ್ಲ.(ವರ್ತಿಸಿದರೆ ಉಳಿಗಾಲವಿಲ್ಲವೆನ್ನುವುದು ಬೇರೆ ಮಾತು) ಆದರೆ ಹಿಂದೂಗಳನ್ನು ಕೆಣಕಿದರೆ ಏನೂ ಆಗುವುದಿಲ್ಲವೆಂಬ ಧೈರ್ಯ ಅಥವಾ ಏನಾದರೂ ಮಾಡಿದರೆ ಇಂಟಾಲರೆನ್ಸ್ ಎಂದು ಕೂಗುಹಾಕುವ ಸ್ಯಾಡಿಸ್ಟ್ ಗಳು ಸೇರಿಕೊಂಡು ಪ್ರಕರಣದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ.ಈ ಗಂಜಿಗಿರಾಕಿಗಳು ಕಾಲಿಟ್ಟ ಕಡೆಯಲ್ಲಿ ಗರಿಕೆ ಹುಲ್ಲು ಸಹ ಬೆಳೆಯಲಾರದು.

ಆ ನತದೃಷ್ಟ ಹೆಣ್ಣು ಮಗು ಕೆಲವರ್ಷಗಳ ಹಿಂದೆಯೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡು,ಬೇರೆಯವರ ಆಶ್ರಯದಲ್ಲಿತ್ತು. ಆಕೆಯ ಮೇಲೆ ಕಣ್ಣು ಹಾಕಿದ ದುರುಳರು ಯಾರೇ ಆಗಿದ್ದರೂ ಅವರಿಗೆ ಮರಣದಂಡನೆಯ ಶಿಕ್ಷೆಯೂ ಕಡಿಮೆಯೇ.ಹಿಂದೂ ಏಕ್ತಾ ಮಂಚಿನವರು,ಜಮ್ಮು ಬಾರ್ ಕೌನ್ಸಿಲ್ಲಿನವರೂ,ಗ್ರಾಮಸ್ಥರೂ ಬಯಸುತ್ತಿರುವುದು ಸಹ ನ್ಯಾಯವನ್ನೇ.ಖುದ್ದು ಆ ಹೆಣ್ಣುಮಗುವಿನ ಸಾಕು ತಂದೆಯೇ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳುತ್ತಿರುವುದೂ ಇದನ್ನೇ. ಮಗುವಿನ ಶವ ಸಿಕ್ಕಾಗ ನಮ್ಮವರು ಮಾತ್ರವಲ್ಲ,ಹಿಂದೂ ಹೆಣ್ಣುಮಕ್ಕಳು ಅಳುತ್ತಿದ್ದರು.ಅವರು ಮತ್ತು ನಾವು ಬಯಸುತ್ತಿರುವುದು ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂದೇ ಎನ್ನುತ್ತಾರೆ ಅವರು.ಆ ಸಂದರ್ಶನ ನಡುವಿನಲ್ಲಿ ಮಗುವಿನ ಶವ ಕೊಟ್ಟಿಗೆಯಲ್ಲಿ ಸಿಕ್ಕಿತು ಎನ್ನುತ್ತಾರೆ ಆಕೆಯ ಸಾಕು ತಂದೆ.ಅವರೂ ಸಹ CBI ತನಿಖೆಯ ಕೂಗಿಗೆ ದನಿಗೂಡಿಸುತ್ತಿದ್ದಾರೆ.ಎಲ್ಲರಿಗೂ ಸಹಮತಿಯಿರುವಾಗ ಪ್ರಕರಣವನ್ನು CBIಗೆ ವಹಿಸಿದ ರಾಜ್ಯ ಸರ್ಕಾರದ ಉದ್ದೇಶವೇನಿರಬಹುದು? ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಓಲೈಕೆ ನಡೆಸಿ ಪಂಡಿತರ Ethnic Cleansing ನಡೆಸಿದಂತೆ, ಹಿಂದೂ ಬಹುಸಂಖ್ಯಾತ ಜಮ್ಮುವನ್ನು ತಮ್ಮ ಮುಂದಿನ ಶಿಕಾರಿ ಮಾಡಿಕೊಳ್ಳುತ್ತಿದ್ದಾರೆಯೇ ಕಣಿವೆಯ ಮುಸ್ಲಿಂ ರಾಜಕಾರಣಿಗಳು? ಕಣಿವೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಮೆಹಬೂಬ ಮುಫ್ತಿ ಹಾಗೊಂದು ಪ್ರಯತ್ನದಲ್ಲಿದ್ದಾರೆ ಎನ್ನುವ ವಿಶ್ಲೇಷಣೆಗಳೂ ನಡೆಯುತ್ತಿವೆ.ಇವೆಲ್ಲದರ ನಡುವೆ,ಈ ಪ್ರಕರಣದಲ್ಲಿ ಸರ್ಕಾರದ ಅಂಗಪಕ್ಷವಾಗಿರುವ ಬಿಜೆಪಿ ಪಕ್ಷದ ನಡೆಯು ತೃಪ್ತಿದಾಯಕವಾಗಿಲ್ಲವೆಂದು ಬಹಿರಂಗವಾಗಿಯೇ ಹೇಳಬೇಕಾಗಿದೆ. ಸರ್ಕಾರದ ಭಾಗವಾಗಿರುವ ಸಚಿವರು, ಮುಖ್ಯಮಂತ್ರಿಯನ್ನೋ ಅಥವಾ ತಮ್ಮ ಪಕ್ಷದ ಉನ್ನತ ನಾಯಕರಿಗೋ ಪ್ರಕರಣವನ್ನು CBIಗೆ ಒಪ್ಪಿಸುವಂತೆ ಒತ್ತಡ ತರಬೇಕಿತ್ತೇ ಹೊರತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕವಲ್ಲ. ಒಟ್ಟಿನಲ್ಲಿ ಈ ಪ್ರಕರಣ ಗೋಜಲು ಗೋಜಲಾಗಿದೆ.ಸದ್ಯಕ್ಕೆ ಸಮಾಧಾನಕರ ಸಂಗತಿಯೆಂದರೆ ಖುದ್ದು ಸುಪ್ರೀಂ ಕೋರ್ಟ್ ಈ ಪ್ರಕರಣದ ಮೇಲೆ ನಿಗಾ ಇಟ್ಟು ಕುಳಿತಿದೆ. ಅಂತಿಮವಾಗಿ,ತನ್ನದಲ್ಲದ ತಪ್ಪಿಗೆ ರಣಹಿಂಸೆ ಅನುಭವಿಸಿ,ಭೀಕರವಾಗಿ ಹತ್ಯೆಯಾದ ಆ ೮ ವರ್ಷದ ಹೆಣ್ಣುಮಗುವಿಗೆ ನ್ಯಾಯ ಸಿಗಲಿ,ಹಂತಕರು ನೇಣು ಗಂಭಕ್ಕೇರಲಿ ಎನ್ನುವುದೇ ಆಶಯ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments