ಇರುವುದೆಲ್ಲವ ಬಿಟ್ಟು …
– ಗುರುರಾಜ ಕೊಡ್ಕಣಿ, ಯಲ್ಲಾಪುರ
ಯಶವಂತಪುರದ ಬಸ್‌ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಬಸ್ಸಿನೊಳಗೆ ಅವಸರವಸರವಾಗಿ ತೂರಿಕೊಂಡ ಪ್ರಸನ್ನ. ಹಾಗೆ ಕ್ಷಣಮಾತ್ರದಲ್ಲಿ ತೂರಿಕೊಳ್ಳದಿದ್ದರೇ ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲವೆನ್ನುವುದು ಬೆಂಗಳೂರಿನಲ್ಲಿನ ಅವನ ಐದು ವರ್ಷಗಳ ಒಡನಾಟದಲ್ಲಿ ಕಂಡುಕೊಂಡ ಸತ್ಯ. ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತು ’ಮೆಜೆಸ್ಟಿಕ್, ಮೆಜೆಸ್ಟಿಕ್,ಮೆಜೆಸ್ಟಿಕ್’ ಎಂದು ನಿರ್ವಾಹಕ ಕೂಗುವಷ್ಟರಲ್ಲಿ ಬಸ್ಸು ಸಂಪೂರ್ಣವಾಗಿ ತುಂಬಿ ಹೋಗಿ ಸ್ವತ: ನಿರ್ವಾಹಕನಿಗೆ ಬಸ್ಸಿನೊಳಕ್ಕೆ ಓಡಾಡುವುದು ಕಷ್ಟವಾದಂತಾಯಿತು. ’ಮುಂದಕ್ಕೆ ಹೋಗ್ರಿ , ಇಲ್ಲೇ ಡೋರ್‌ನಲ್ಲಿ ನಿಲ್ಬೇಡಿ’ ಎಂದು ಜನರನ್ನು ಗದರುತ್ತ, ’ಪಾಸಿನೋರು, ಪಾಸು, ಟಿಕೆಟಿನವರು ಕಾಸು ಕೈಯಲ್ಲಿ ಹಿಡ್ಕೊಳ್ಳಿ’ ಎಂದು ಪ್ರಾಸಬದ್ಧವಾಗಿ ಧ್ವನಿಯೇರಿಸಿದ ಕಂಡಕ್ಟರ್ ತುಂಬಿಹೋಗಿದ್ದ ಬಸ್ಸಿನೊಳಕ್ಕೆ ಕಷ್ಟಪಟ್ಟು ನಡೆಯಲಾರಂಭಿಸಿದ. ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಗಂಡಸರನ್ನು ಬಯ್ಯುತ್ತ ಎಬ್ಬಿಸುತ್ತಿದ್ದ ಮಹಿಳೆಯರು, ಸ್ಕೂಲ್ ಬ್ಯಾಗನ್ನು ಬೆನ್ನಿನಿಂದಿಳಿಸಿ ’ಅಂಕಲ್ ಸ್ವಲ್ಪ ಬ್ಯಾಗ್ ಹಿಡ್ಕೊಳ್ಳಿ’ ಎನ್ನುತ್ತ, ಕುಳಿತವರ ಉತ್ತರಕ್ಕೂ ಕಾಯದೇ ಅವರ ತೊಡೆಯ ಮೇಲೆ ತಮ್ಮ ಚೀಲಗಳನ್ನಿಡುತ್ತ ತಮ್ಮ ಹೋಂ ವರ್ಕಿನ ಬಗ್ಗೆ ಜೋರಾದ ಧ್ವನಿಯಲ್ಲಿ ಚರ್ಚಿಸುತ್ತಿದ್ದ ಮಕ್ಕಳು, ’ಇನ್ನೇನು ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ಕಿಗೆ ಬಂದುಬಿಡ್ತೇನೆ ಕಣೊ, ಇಲ್ಲಿ ಫುಲ್ ಟ್ರಾಫಿಕ್ ಜಾಮ್’ ಎಂದು ಎಲ್ಲರೆದುರೇ ರಾಜಾರೋಷವಾಗಿ ಫೋನಿನಲ್ಲಿ ಸುಳ್ಳು ಹೇಳುತ್ತಿದ್ದ ಕಾಲೇಜು ಯುವಕರ ಗಲಾಟೆಯ ನಡುವೆಯೇ ಬಸ್ಸು ನಿಧಾನವಾಗಿ ಚಲಿಸಲಾರಂಭಿಸಿತ್ತು. ಬಸ್ಸು ಶುರುವಾಗುತ್ತಲೇ ಸಣ್ಣಗೆ ಬೀಸಿದ್ದ ಗಾಳಿ, ಕಿಟಕಿಯ ಪಕ್ಕಕ್ಕೆ ಕುಳಿತಿದ್ದ ಪ್ರಸನ್ನನಿಗೆ ಕೊಂಚ ನೆಮ್ಮದಿಯನ್ನು ಕೊಟ್ಟಿತ್ತು. ಬೆಳಿಗ್ಗೆ ಆರುಗಂಟೆಗೆಲ್ಲ ಎದ್ದು, ಸ್ನಾನ ಮಾಡಿ, ತಿಂಡಿ ತಿಂದು ಬಸ್ಸು ಹತ್ತುವಷ್ಟರಲ್ಲಿ ಮೈಯೆಲ್ಲ ಬೆವತು ಹೋಗುವುದು ಪ್ರಸನ್ನನಿಗೆ ದಿನನಿತ್ಯದ ರೂಢಿ. ಬಹುಶಃ ಕೆಲಸಕ್ಕಾಗಿ ಸಿಟಿಬಸ್ಸುಗಳನ್ನು ಅವಲಂಬಿಸುವ ಪ್ರತಿಯೊಬ್ಬ ಬೆಂಗಳೂರಿಗನಿಗೂ ಅದು ಅಭ್ಯಾಸವಾಗಿ ಹೋಗಿರುತ್ತದೆ. ಹಾಗಾಗಿ ಬಸ್ಸಿನ ಕಿಟಕಿಯಿಂದ ಹಾದು ಬರುವ ಗಾಳಿ ತಂಪಾಗಿರದಿದ್ದರೂ ಮೈತುಂಬ ಆವರಿಸಿಕೊಂಡ ಬೆವರಿನ ಪರಿಣಾಮವಾಗಿ ಮೈಯೆಲ್ಲ ತಂಪಾದ ಅನುಭವ. ಕ್ಷಣಕಾಲ ಹಾಯೆನಿಸಿ ತಲೆಯನ್ನು ಸಿಟಿಗೊರಗಿಸಿ ಕಣ್ಣು ಮುಚ್ಚಿದ ಪ್ರಸನ್ನ. ಮುಚ್ಚಿದ ಕಣ್ಣುಗಳ ಹಿಂದೆ ಹತ್ತು ಹಲವು ಆಲೋಚನೆಗಳು. ಯಶವಂತಪುರದಿಂದ ಮೆಜೆಸ್ಟಿಕ್ಕಿನ ಬಸ್ ನಿಲ್ದಾಣಕ್ಕೆ ತೆರಳಲು ಕನಿಷ್ಟ ಅರ್ಧ ತಾಸು ಬೇಕು. ವಾಹನದಟ್ಟಣೆ ಜಾಸ್ತಿಯಿದ್ದರಂತೂ ಇನ್ನೂ ಹೆಚ್ಚೇ ಸಮಯ ಬೇಕಾಗಬಹುದು. ಅಲ್ಲಿಳಿದು ಮತ್ತೊಂದು ಬಸ್ಸು ಹಿಡಿದು ಬನ್ನೆರುಘಟ್ಟ ರಸ್ತೆಯಲ್ಲಿರುವ ತನ್ನ ಕಚೇರಿಗೆ ತೆರಳುವಷ್ಟರಲ್ಲಿ ಇನ್ನೊಂದು ಗಂಟೆಯ ಪ್ರಯಾಣ. ಬೆಳಿಗ್ಗೆ ಎರಡು ಗಂಟೆಗಳ ಪ್ರಯಾಣವಾದರೆ ಸಾಯಂಕಾಲದ ವಾಹನದಟ್ಟಣೆಯಿಂದಾಗಿ ಸಂಜೆ ಅದೇ ಮಾರ್ಗದಲ್ಲಿ ಮರಳಿ ಬರಲು ಕನಿಷ್ಟ ಮೂರು ಗಂಟೆಗಳ ಕಾಲಾವಕಾಶವಂತೂ ಬೇಕು. ಕಚೇರಿಯ ಒಂಭತ್ತು ಗಂಟೆಗಳ ಕಾರ್ಯಾವಧಿಯನ್ನು ಸೇರಿಸಿಕೊಂಡರೆ ಪ್ರತಿದಿನ ಹದಿನಾಲ್ಕು ಗಂಟೆಗಳಷ್ಟು ಕಾಲದ ತನ್ನ ಬದುಕು ಬೀದಿಯಲ್ಲಿಯೇ ಮುಗಿದುಹೋಗಿರುತ್ತದೆ ಎಂದುಕೊಂಡ ಪ್ರಸನ್ನ. ಈ ಗಡಿಬಿಡಿಯ ಬದುಕಿಗಾಗಿ ಬೆಂಗಳೂರಿಗೆ ಬರಬೇಕಿತ್ತೇ ತಾನು ಎಂದೆನ್ನಿಸಿತು ಅವನಿಗೆ. ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೇ ಪುನಃ ಮನೆ ಸೇರಿಕೊಳ್ಳುವುದು ರಾತ್ರಿಯ ಒಂಭತ್ತು ಗಂಟೆಗೆ. ಆಫೀಸಿನ ಕೆಲಸದಿಂದ ಸುಸ್ತಾಗಿ ಹೋದ ದೇಹಕ್ಕೆ ರಾತ್ರಿ ಊಟ ಮುಗಿಯುವಷ್ಟರಲ್ಲಿ ನಿದ್ರೆಯ ಸೆಳೆತ. ಬೆಳಗೆದ್ದರೆ ಮತ್ತದೇ ಅಡಾವುಡಿಯ ಓಟ. ಕೊಂಚ ಸಮಾಧಾನ ಸಿಗುವುದು ವಾರಾಂತ್ಯದಲ್ಲಿ ಎನ್ನಿಸಿದರೂ, ಕೋಣೆಯ ಸ್ವಚ್ಛತೆ, ಬಟ್ಟೆ ಒಗೆತದಂತಹ ಕೆಲಸ ಮುಗಿಸುವಷ್ಟರಲ್ಲಿ ವಾರಾಂತ್ಯವೂ ಮುಗಿದುಹೋಗಿರುತ್ತದೆ. ಅದೆಷ್ಟೋ ಸಲ ವಾರಾಂತ್ಯಕ್ಕೂ ರಜೆಯಿಲ್ಲದೇ ಕೆಲಸ ಮಾಡಿದ್ದಿದೆ. ಇಂಥಹ ಅವಸರದ ಜೀವನಕ್ಕೆ ದುಡಿಮೆಯಾದರೂ ಜಾಸ್ತಿಯಿದೆಯಾ ಎಂದುಕೊಂಡರೆ ತನ್ನ ಕೈಗೆ ಸಿಗುವ ಸಂಬಳವೂ ಇಪ್ಪತ್ತೈದು ಸಾವಿರ ಮಾತ್ರ. ದುಬಾರಿ ಮನೆಯ ಬಾಡಿಗೆ, ಕರೆಂಟು, ನೀರಿನ ಬಿಲ್ಲುಗಳ ಪಾವತಿಯ ನಂತರ ಕೈಯಲ್ಲುಳಿಯುವ ದುಡ್ಡಾದರೂ ಎಷ್ಟು ಎಂಬ ಪ್ರಶ್ನೆ ಅವನ ಮನದಲ್ಲಿ ಮೂಡಿ ಅವನಿಗರಿವಿಲ್ಲದಂತೆ ಮುಖದಲ್ಲೊಂದು ಪೆಚ್ಚುನಗೆ ಅರಳಿತ್ತು. ಹಾಳಾದ್ದು ತನ್ನ ಕಚೇರಿಯಲ್ಲಿ ಕಂಪನಿ ಬಸ್ಸಿನ ಸವಲತ್ತು ಸಹ ಇಲ್ಲ. ಹಾಗಾಗಿ ತನ್ನ ಖರ್ಚಿಗೆ ಬಸ್ ಪಾಸಿನ ಎರಡು ಸಾವಿರಗಳ ಹೆಚ್ಚುವರಿ ಹೊರೆ ತಪ್ಪಿದ್ದಲ್ಲ ಎಂದುಕೊಳ್ಳುವಷ್ಟರಲ್ಲಿ ಬಸ್ಸು ಮೆಜೆಸ್ಟಿಕ್ ನಿಲ್ದಾಣವನ್ನು ತಲುಪಿತ್ತು. ನಿಲ್ದಾಣದಲ್ಲಿ ಇಳಿಯುವ ಜನರ ನಡುವೆಯೇ ಹತ್ತಿಕೊಳ್ಳುವ ಆತುರದಲ್ಲಿದ್ದ ಜನರನ್ನು ತಳ್ಳುತ್ತ ಕೆಳಗಿಳಿದ ಪ್ರಸನ್ನ ತನ್ನ ಕಚೇರಿಯತ್ತ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟಫಾರ್ಮಿನತ್ತ ನಡೆದ.
ಹಾಗೆ ಪ್ಲಾಟ್ ಫಾರ್ಮಿನಲ್ಲಿ ಅವನು ನಿಂತ ಒಂದೆರಡು ನಿಮಿಷಗಳಿಗೆಲ್ಲ ಬನ್ನೇರುಘಟ್ಟಕ್ಕೆ ತೆರಳುವ ವೋಲ್ವೊ ಬಸ್ಸು ಅವನೆದುರಿಗೆ ಬಂದು ನಿಂತಿತ್ತು. ಅದು ದುಬಾರಿಯಾದ ಏಸಿ ಬಸ್ಸಾದರೂ ಜನಜಂಗುಳಿಯಿರುವುದಿಲ್ಲ ಎಂಬ ಕಾರಣಕ್ಕೆ ದಿನವೂ ಅದರಲ್ಲಿಯೇ ಪ್ರಯಾಣಿಸುತ್ತಿದ್ದ ಪ್ರಸನ್ನ. ಬಸ್ಸಿನ ಬಾಗಿಲ ಸಮೀಪದ ಸೀಟನ್ನೇರಿ ಕುಳಿತವನಿಗೆ ಏಸಿಯ ಕೃತಕ ತಂಪು ಹಿತ ನೀಡಿತು. ಬಸ್ಸಿನ ಬಾಗಿಲು ಹಾಕಿಬಿಟ್ಟರೇ ಹೊರಗಿನ ಗದ್ದಲವೂ ಒಳಗಿನವರಿಗೆ ಕೇಳದು. ಯಶವಂತಪುರದಿಂದ ಮೆಜೆಸ್ಟಿಕ್ಕಿನವರೆಗೂ ವೋಲ್ವೋ ಬಸ್ಸುಗಳಿದ್ದರೆ ಒಳ್ಳೆಯದಿತ್ತು ಎಂದುಕೊಳ್ಳುವಷ್ಟರಲ್ಲಿ ಬಸ್ಸು ನಿಧಾನವಾಗಿ ಚಲಿಸುತ್ತ ನಿಲ್ದಾಣದಿಂದ ಹೊರಬಂದಿತು. ಬಸ್ಸು ಬನ್ನೇರುಘಟ್ಟ ರಸ್ತೆಯ ದಿಕ್ಕಿನತ್ತ ಚಲಿಸುತಿದ್ದರೆ ಪ್ರಸನ್ನನ ಮನಸಿನ ತುಂಬೆಲ್ಲ ಮತ್ತೆ ತುಂಬಿಕೊಂಡ ಆಲೋಚನೆಗಳು. “ಒಂದು ಸಣ್ಣ ತಪ್ಪಿಗೆ ನಿನ್ನೆ ಆ ಮ್ಯಾನೇಜರ್ ಬೋ.ಮಗ ಬಾಯಿಗೆ ಬಂದಂಗ ಬಯ್ದನಪ್ಪ. ಇದೆಷ್ಟನೇ ಸಲಾನೋ ಏನೋ ಅಂವ ಹಂಗ ಬಯ್ತಾ ಇರುದು ಲೆಕ್ಕವೇ ಇಲ್ಲ. ನಾನು ಕಂಪನಿಲಿ ಇರುದೇ ವೇಸ್ಟು ಅನ್ನೋ ಹಂಗ್ ನೋಡ್ತಾ ಕಾರಣ ಸಿಕ್ರೆ ಸಾಕು ಟರ್ಮಿನೇಟ್ ಮಾಡಿ ಒದ್ದ್ ಕಳಿಸ್ಲಿಕ್ಕ ಕಾಯ್ತಾ ಇದ್ದಾ ಬಡ್ಡಿಮಗ. ನನ್ನ ಕರ್ಮಕ್ಕೆ ಬೇರೆ ಕಡೆ ಕೆಲಸಾ ಹುಡ್ಕೊಳ್ಳೋ ಯೋಗತ್ಯೆನೂ ನಂಗಿಲ್ಲ. ಬೆಂಗಳೂರಿಗ್ ಬಂದು ದೊಡ್ಡ ತಪ್ಪು ಮಾಡ್ಬಿಟ್ಟೆ ನಾನು. ನನ್ನಂಥಾ ದಡ್ರಿಗಲ್ಲ ಈ ಊರು. ನನ್ನ ಕ್ಲಾಸ್‌ಮೇಟ್ಸ್ ಅಷ್ಟು ಉಷಾರ್ ಹುಡುಗಾನೂ ಅಲ್ಲ ನಾನು. ದೋಸ್ತರು ಡಿಸ್ಟಿಂಕ್ಷನ್ನು, ಫಸ್ಟ್ ಕ್ಲಾಸು ಅಂತೆಲ್ಲ ಕುಣದಾಡ್ತಿದ್ರೆ ನಂದು ಮಾತ್ರ ಸೆಕೆಂಡ್ ಕ್ಲಾಸ್ ಪಿಯೂಸಿ. ನಂಗ್ ಭಯಂಕರ ಬೇಜಾರು, ಅಪ್ಪನಿಗೆ ಭಾರಿ ಖುಷಿ. ’ಊರಲ್ಲೇ ಒಂದ್ ಡಿಗ್ರಿ ಅಂತ ಮಾಡ್ಕಳಾ ಸಾಕು’, ಅಂತೇಳಿದ್ದ ಅಪ್ಪನ ಮಾತಿಗೆ ಎದುರಾಡದೇ ಒಪ್ಕೊಂಡಿದ್ದೆ. ನಾ ತಗಂಡಿದ್ದ ಮಾರ್ಕ್ಸಿಗೆ ಬೆಂಗಳೂರು ಸಾಯ್ಲಿ, ಸಮೀಪದ ಸಿರಸಿ, ಹುಬ್ಬಳ್ಳಿ ಕಾಲೇಜ್‌ನಲ್ಲೂ ಅಡ್ಮಿಶನ್ ಸಿಗುದಿಲ್ಲ ಅಂತ ನಂಗ್ ಗ್ಯಾರಂಟಿಯಿತ್ತು. ಎಲ್ರೂ ಬೆಂಗಳೂರು ಮೈಸೂರು ಅಂತೆಲ್ಲ ಹೋದ್ರೆ ಊರಿನ ಕಾಲೇಜಲ್ಲಿ ಉಳ್ಕಂಡಿದ್ದು ನಾನು ಗಣೇಶ್ ಮಾತ್ರ. ಅಂವದೊಂದ್ನಮ್ನಿ ವಿಚಿತ್ರ, ಎಂಬತ್ತಾರು ಪರ್ಸೆಂಟು ಮಾರ್ಕ್ಸು ಬಂದವ ಕ್ಲಾಸಿಗೆ ಎರಡನೇ ರ‍್ಯಾಂಕು, ಆದರೂ ನನ್ಜೊತೆನೇ ಊರಲ್ಲೇ ಕಾಲೇಜು ಸೇರ್ಕೊಂಡ.. ’ಅಲ್ಲಾ ಮಾರಯಾ, ನಿಂಗೆ ಪಿಯುಸಿಯಲ್ಲಿ ಎಂಬತ್ತಾರು ಪರ್ಸೆಂಟ್ ಬಂದಿದೆ, ಆರಾಮಾಗಿ ಬೆಂಗಳೂರಿನ ಒಳ್ಳೆ ಟಾಪ್ ಕಾಲೇಜಿಗೆ ಹೋಗ್ಬಹುದಿತ್ತಪ್ಪ’ಎಂದರೆ. ’ನಾ ಎಂತಾ ಮಾಡ್ಲಿ ಟಾಪ್ ಕಾಲೇಜಿಗೆ ಹೋಗಿ..?? ನಾ ಎಂತಾ ಜಾಬ್ ಮಾಡ್ಲಿಕ್ ಹೋಗ್ಬೇಕಾ..? ಹೆಸರಿಗೊಂದ್ ಡಿಗ್ರಿ ಮಾಡ್ಕೊಂಡ್ ಅಪ್ಪನ ಅಡ್ಕೆ ತೋಟ, ಬಾಳೆ ತೋಟ ನೋಡ್ಕಂಡ್ ಇಲ್ಲೇ ಆರಾಮ್ ಇರ್ತೆ, ಹ್ಯಾಂಗೂ ಸುಮಾರು ಆಕ್ಳು ಎಮ್ಮೆ ಎಲ್ಲಾ ಉಂಟು ನಮ್ದು’ ಅಂದಿದ್ದ. ರಾಶ್ರಾಶಿ ಮಾರ್ಕ್ಸು ತಗೊಂಡು ನಮ್ಮೂರಲ್ಲೇ ಕೊಳಿತೆ ಅಂದ ಗಣೇಶ ಅವತ್ತಿಗಂತೂ ನಂಗ್ ದೊಡ್ಡ ಹುಚ್ಚನಂಗೆ ಕಂಡಿದ್ದ. ಈಗ ವಿಚಾರಾ ಮಾಡಿದ್ರೆ ಅಂವ ಹೇಳಿದ್ದೇ ಸರಿ ಅನ್ನಿಸ್ತಾ ಉಂಟು. ನಂಗಾದ್ರೂ ಊರಲ್ಲಿ ಎಂತಾ ಕಮ್ಮಿಯಿತ್ತು.? ಅಪ್ಪನಿಗೂ ಸುಮಾರ್ ಅಡಿಕೆ ತೋಟ, ಗದ್ದೆ ಎಲ್ಲಾವುಂಟು. ವಿಳ್ಯದೆಲೆ, ಕರಿಮೆಣಸು ಎಲ್ಲಾ ಬೆಳಿತೇವೆ ನಾವು. ಊರಲ್ಲಿ ನಮ್ಮ ಬಾಳೆತೋಟದಷ್ಟು ಚಂದ ಮತ್ತೊಂದು ತೋಟ ಇಲ್ಲ ಅಂತ ಜನ ಮಾತಾಡ್ತಾರೆ. ನಮ್ಮನೆ ಕೊಟ್ಗೆಲೂ ಸುಮಾರು ಆಕ್ಳು ಎಮ್ಮೆ ಇವತ್ತಿಗೂ ಮಲಗ್ತವೆ. ಅದೆಲ್ಲ ಬಿಟ್ಟಾಕಿ ಬೆಂಗಳೂರಿಗೆ ಬಂದು ನಾನು ಸಾಧಿಸಿದ್ದಾದ್ರೂ ಎಂತಾ ಅಂತ. ಡಿಗ್ರಿ ಮುಗ್ದ ಕೂಡ್ಲೇ ನೌಕರಿಗೆ ಬೆಂಗಳೂರಿಗೆ ಹೋಗ್ತೇ ಅಂದಾಗ ದೊಡ್ಡ ರಾದ್ಧಾಂತವೇ ಆಯ್ತಲ್ಲ ಮನೆಲಿ. ’ಎಂತದಾ ಮಗಾ, ನೀ ಬೆಂಗಳೂರಿಗ್ ಹೋಗ್ ಎಂತಾ ಮಾಡ್ತೆ. ಒಬ್ನೇ ಮಗ ಬೆಂಗಳೂರಿಗ್ ಹೋಗಿ ಬಿಟ್ರೆ ಇಷ್ಟೆಲ್ಲ ಆಸ್ತಿ ನಾವೆಂತಾ ಮಾಡುದು..’? ಅಂತ ಅಪ್ಪ ಕೇಳಿದ್ ಕೂಡ್ಲೇ ಸಿಟ್ ಬಂದಿತ್ತಲ್ಲ ನಂಗೆ. ’ಅದೆಂತಾರೂ ಆಗ್ಲಿ ಅಪ್ಪ, ಡಿಗ್ರಿ ಮಾಡ್ಕಂಡ್ ಇಲ್ಯಾರ್ ಸಾಯ್ತಾರೆ, ನಾ ಬೆಂಗ್ಳೂರಿಗೆ ಹೋಗವಾ ಅಂದ್ರೆ ಹೋಗವ್ನೇ’ ಅಂತೇಳಿ ಹಟ ಹಿಡಿದ್ರೆ ಪಾಪ..!! ಅಪ್ಪನಾದ್ರೂ ಎಂತಾ ಮಾಡ್ತಾ..? ಛೇ.!! ಅವತ್ತು ಅಪ್ಪನ ಮಾತು ಕೇಳಬೇಕಿತ್ತು ” ಎಂದು ಅವನು ಯೋಚನಾಮಗ್ನನಾಗಿರುವಾಗಲೇ ಬಸ್ಸು ಶಾಂತಿನಗರದ ಬಸ್ ನಿಲ್ದಾಣ ತಲುಪಿಕೊಂಡಿತ್ತು. ’ಉಸ್ಸ್’ಎಂದು ಸದ್ದು ಮಾಡುತ್ತ ತೆರೆದುಕೊಂಡ ಬಸ್ಸಿನ ಬಾಗಿಲಿನಿಂದ ಒಂದಿಬ್ಬರು ಪ್ರಯಾಣಿಕರು ಹತ್ತಿಕೊಳ್ಳುತ್ತಲೇ ಬಾಗಿಲು ಮುಚ್ಚಿದ ಚಾಲಕ ಪುನಃ ಬಸ್ಸಿಗೆ ಜೀವ ಕೊಟ್ಟ.
ಬಸ್ಸು ಮತ್ತೆ ಚಲಿಸಲಾರಂಭಿಸಿದರೆ ಐದು ವರ್ಷಗಳ ಬೆಂಗಳೂರಿನ ತನ್ನ ಬದುಕಿನ ಬಗ್ಗೆ ಯೋಚಿಸಲಾರಂಭಿಸಿದ ಪ್ರಸನ್ನ.ಈ ಐದು ವರ್ಷಗಳಲ್ಲಿ ತಾನು ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆಗೆ ನಿಜಕ್ಕೂ ಅವನ ಬಳಿ ಉತ್ತರವಿರಲಿಲ್ಲ. ತಿಂದುಂಡು ಸಣ್ಣ ಊರಿನಲ್ಲಿ ಆರಾಮವಾಗಿದ್ದ ತನಗೆ ಬೆಂಗಳೂರಿನ ಜೀವನ ಒಗ್ಗಿಕೊಳ್ಳಲೇ ಇಲ್ಲ. ಬೆಂಗಳೂರಿಗೆ ಬಂದ ಆರಂಭದಲ್ಲಿ ತನಗೆ ಸಿಕ್ಕ ಮೊದಲ ಕೆಲಸದಲ್ಲಿಯೇ ತಾನಿನ್ನೂ ಇದ್ದೇನೆ. ಒಳ್ಳೆಯ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿಕೊಳ್ಳೋಣವೆಂದರೆ ತನಗಿರುವ ಜ್ನಾನ ಸಾಲದು. ಏನೇ ಹರಸಾಹಸ ಪಟ್ಟರೂ ಇಂಗ್ಲೀಷು ಸಹ ತನಗೆ ಒಲಿಯಲಿಲ್ಲ. ಕತ್ತೆಯಂತೆ ದುಡಿಸಿಕೊಳ್ಳುವ ಕಂಪನಿಯವರು ಸಂಬಳ ಜಾಸ್ತಿ ಕೇಳಿದ ತಕ್ಷಣ ತನ್ನ ದೌರ್ಬಲ್ಯಗಳ ಪಟ್ಟಿಮಾಡಿ ತನ್ನ ಕೀಳರಿಮೆ ಹೆಚ್ಚಿಸಿಬಿಡುತ್ತಾರೆ. ಇರುವಷ್ಟು ದಿನ ಬಾಯ್ಮುಚ್ಚಿಕೊಂಡು ಇದೇ ಕಂಪನಿಯಲ್ಲಿಯೇ ಕಡಿಮೆ ಸಂಬಳದಲ್ಲಿಯೇ ಸಾಯಬೇಕು ತಾನು ಎಂದುಕೊಂಡ. ಊರಿನಲ್ಲಿಯೇ ತೋಟಗಾರಿಕೆಯನ್ನು ನಂಬಿಕೊಂಡ ಗಣೇಶ ಮೊದಲ ವರ್ಷವೇ ಕಾರು ಖರೀದಿಸಿದ್ದು ಪ್ರಸನ್ನನಿಗೆ ನೆನಪಿತ್ತು. ತಾನು ಬೆಂಗಳೂರಿಗೆ ಬಂದು ಐದು ವರ್ಷವಾದರೂ ಒಂದು ಸಣ್ಣ ಬೈಕ್ ಕೂಡ ಖರೀದಿಸಲಿಕ್ಕಾಗಲಿಲ್ಲ ಎಂಬ ಆಲೋಚನೆಯೊಂದು ಮನದಲ್ಲಿ ಸುಳಿದಾಗ ಸಣ್ಣದ್ದೊಂದು ವಿಷಾದಭಾವ ಅವನಲ್ಲಿ. ಅಪ್ಪ ಬೈಕು ಕೊಡಿಸುತ್ತೇನೆ ಎಂದಾಗ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿ ತಾನೇ ಬೇಡವೆಂದುಬಿಟ್ಟಿದ್ದ. ಏನಿಲ್ಲವಾದ್ದರೂ ಬಿಟ್ಟಿ ಸ್ವಾಭಿಮಾನವೊಂದು ಕೇಡು ತನಗೆ ಎಂದು ಹಳಿದುಕೊಂಡ ಪ್ರಸನ್ನ. ಬೆಂಗಳೂರಿನ ಈ ಎಲ್ಲ ಜಂಜಡಗಳನ್ನು ತೊರೆದು ಪುನಃ ತನ್ನೂರು ಸೇರಿಬಿಡಲಾ ಎಂದು ತುಂಬ ಸಲ ಅನ್ನಿಸಿದ್ದಿದೆ. ಆದರೆ ತಾನು ಊರಿಗೆ ಮರಳಿ ಬರುತ್ತೇನೆ ಎಂದರೆ ಅಪ್ಪ ಏನೆಂದಾರು ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತ್ತು. ಬೆಂಗಳೂರು ಸೇರಿಕೊಂಡ ನಂತರ ಊರಿನ ಬಗ್ಗೆ ತೀರ ನಿರ್ಲಕ್ಷ್ಯ ತೋರಿದ್ದೇನೆ ತಾನು. ದಿನವೂ ಅಪ್ಪನಿಗೆ ಫೋನು ಮಾಡಿದರೂ ನೆಪಮಾತ್ರಕ್ಕಾದರೂ ತೋಟದ ಕೆಲಸದ ಬಗ್ಗೆ, ಅಪ್ಪನ ಪ್ರೀತಿಯ ಜಾನುವಾರುಗಳ ಬಗ್ಗೆ ವಿಚಾರಿಸಿದವನಲ್ಲ. ಹೀಗಿರುವಾಗ ಏಕಾಏಕಿ ಊರಿಗೆ ಬಂದು ತೋಟ, ಗದ್ದೆಗಳನ್ನು ನೋಡಿಕೊಂಡಿರುತ್ತೇನೆ ಎಂದರೆ ತನ್ನನ್ನು ಹೇಡಿಯೋ, ಸ್ವಾರ್ಥಿಯೋ ಎಂದು ಭಾವಿಸಲಾರನೇ ಅಪ್ಪ ಎಂಬ ಯೋಚನೆ ಸುಳಿದಿತ್ತು ಅವನ ಮನದಲ್ಲಿ. ಛೇ, ಹಾಗಾಗಲಿಕ್ಕಿಲ್ಲ, ಅಪ್ಪ ತನ್ನನ್ನು ತುಂಬ ಪ್ರೀತಿಸುತ್ತಾನೆ. ಒಬ್ಬನೇ ಮಗ ಊರಿಗೆ ಮರಳಿ ಬರುತ್ತಾನೆ ಎಂದರೆ ಯಾವ ತಂದೆಗೆ ಸಂತೋಷವಾಗದು..?, ತನ್ನದು ಅರ್ಥವಿಲ್ಲದ ಆಲೋಚನೆ ಎನ್ನಿಸಿದಾಗ ಸಣ್ಣದ್ದೊಂದು ಸಮಾಧಾನ. ಬೆಂಗಳೂರು ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಆದರೆ ತನ್ನಂಥವನಿಗಲ್ಲ ಈ ಐಟಿಸಿಟಿ. ಏನಾದರೂ ಆಗಲಿ ಈ ತಿಂಗಳ ಸಂಬಳ ಪಡೆದು ರಾಜಿನಾಮೆ ಕೊಟ್ಟು ಬಿಡಬೇಕು ಕೆಲಸಕ್ಕೆ. ಊರಿಗೆ ತೆರಳಿ ನೆಮ್ಮದಿಯಾಗಿ ಬದುಕಬೇಕು ಎಂದು ಅವನು ನಿಶ್ಚಯಿಸುವಷ್ಟರಲ್ಲಿ ಬಸ್ಸು ಜಯದೇವ ಆಸ್ಪತ್ರೆಯ ಸ್ಟಾಪಿಗೆ ಬಂದು ನಿಂತಿತು. ಸುಮ್ಮನೇ ವಾಚಿನತ್ತ ಕಣ್ಣಾಡಿಸಿದರೆ ಸಮಯ ಎಂಟುವರೆ. ಎಂದಿನ ವಾಹನದಟ್ಟಣೆ ರಸ್ತೆಯಲ್ಲಿ ಕಾಣಲಿಲ್ಲ. ಹದಿನೈದಿಪ್ಪತ್ತು ನಿಮಿಷಗಳಿಗೆಲ್ಲ ಆಫೀಸಿನಲ್ಲಿರಬಹುದು ಎಂದುಕೊಂಡ ಪ್ರಸನ್ನನ ಮೊಬೈಲು ’ಅನಿಸುತಿದೆ ಯಾಕೋ ಇಂದು’ಎಂದು ಹಾಡಲಾರಂಭಿಸಿತು. ಮೊಬೈಲನ್ನು ಕಿಸೆಯಿಂದೆತ್ತಿ ನೋಡಿದಾಗ ’ಗಣೇಶ್ ಭಟ್’ಎನ್ನುವ ಹೆಸರು ಫೋನಿನ ತೆರೆಯ ಮೇಲೆ ಮಿಂಚುತ್ತಿತ್ತು.
ಗಣೇಶನ ಹೆಸರು ನೋಡುತ್ತಲೇ ತುಟಿಯಂಚಿನಲ್ಲಿ ಸಣ್ಣಗೆ ನಸುನಕ್ಕಿದ್ದ ಪ್ರಸನ್ನ. ತಾನು ಇಷ್ಟೊತ್ತು ಯಾರ ಬಗ್ಗೆ ಯೋಚಿಸುತ್ತಿದ್ದೇನೋ ಅವನೇ ಫೋನು ಮಾಡಿದ್ದಾನೆ, ಬಡ್ಡಿಮಗನಿಗೆ ನೂರು ವರ್ಷ ಆಯಸ್ಸು ಎಂದುಕೊಂಡು ಫೋನೆತ್ತಿ, ’ಹೇಳ್ರಿ ಭಟ್ರೇ’ಎಂದ. ’ಹಲೋ ಪ್ರಸನ್ನಾ ,ಎಲ್ಲಿದ್ದಿಯೋ, ಆಫೀಸಿನಲ್ಲಿದ್ದೀಯಾ ಅಥವಾ ಇನ್ನೂ ಹೋಗ್ಬೇಕಾ’ ಎಂದು ಕೇಳಿದ ಗಣೇಶ. ’ಆಫೀಸಿಗೆ ಹೋಗ್ತಾ ಇದ್ದೆ ಮಾರಾಯಾ , ಬಸ್ಸಲ್ಲಿದ್ದೇನೆ’ ಎಂಬ ಪ್ರಸನ್ನನ ಮಾತಿಗೆ, ’ ಮಾತಾಡಬಹುದಾ ಹಾಗಿದ್ರೆ ಅಥವಾ ಆಮೇಲ್ ಮಾಡ್ಲಾ’ಎಂಬ ಮರುಪ್ರಶ್ನೆ ಗಣೇಶನದ್ದು. ’ಮಾತಾಡಾ ಮಾರಾಯಾ, ಇನ್ನೂ ಅರ್ಧ ತಾಸು ಉಂಟು ಆಫೀಸಿಗೆ. ಆರಾಮ್ ಮಾತಾಡು’ ಎಂದರೆ ಸಣ್ಣಗೆ ನಕ್ಕ ಗಣೇಶ. ’ಮತ್ತೆ ಹ್ಯಾಂಗಿದ್ದೆ ಪ್ರಸನ್ನ. ಕೆಲಸ ಜೋರಾ..? ಸುಮಾರ್ ದಿವ್ಸಾ ಆಯ್ತಪ್ಪ ಫೋನ್ ಮಾಡ್ದೆ’ಎಂದವನಿಗೆ ಉತ್ತರಿಸುತ್ತ, ’ಹೂಂ, ಕೆಲಸ ಸ್ವಲ್ಪ ಜಾಸ್ತಿಯೇ ಹಾಗಾಗಿ ಫೋನ್ ಮಾಡ್ಲಿಕ್ ಆಗ್ಲಿಲ್ಲ. ನಾ ಮಾಡ್ಲಿಲ್ಲ ಅಂದ್ರೆ ನಿಂಗ್ ಫೋನ್ ಮಾಡ್ಲಿಕ್ಕೆಂತ ರೋಗ, ಕಳ್ಳ ನನ್ನ ಮಗ್ನೆ’ ಎಂದು ಸ್ನೇಹಪೂರ್ವಕವಾಗಿ ಗದರಿದ ಪ್ರಸನ್ನ. ’ಹೌದು ನಾನೇ ಮಾಡ್ಬೇಕಿತ್ತು ಮಾರಾಯಾ. ನಿಂಗ್ ಫೋನ್ ಮಾಡ್ಬೇಕು ಅಂತ ದಿನಾ ಅಂದ್ಕೊಳ್ಳೋದು, ದಿನಾ ಮರ್ತ್ ಹೋಗುದು. ಸುಮಾರ್ ದಿವ್ಸದಿಂದ ಹಿಂಗೆ ಆಗ್ತಾ ಉಂಟು. ಅದ್ಕೆ ಇವತ್ತು ಹೆಂಗಾದ್ರೂ ಆಗ್ಲಿ ಅಂತ ಬೆಳಬೆಳಿಗ್ಗೇನೆ ನಿಂಗ್ ಫೋನ್ ಮಾಡ್ದೆ ನೋಡು’ ಎಂದ ಗಣೇಶ. ಒಂದೆರಡು ನಿಮಿಷಗಳ ಕಾಲ ಉಭಯಕುಶಲೋಪರಿಯ ಮಾತುಗಳನ್ನಾಡಿಕೊಂಡರು ಸ್ನೇಹಿತರು. ’ಬೆಂಗಳೂರಿನಲ್ಲಿ ನೀನು ಒಬ್ನೇ ಅಲ್ವೇನಾ ಮನೆ ಮಾಡ್ಕೊಂಡ್ ಇರುದು ಅಥ್ವಾ ಇನ್ಯಾರಾದರೂ ರೂಮ್‌ಮೇಟ್ಸ್ ಇದ್ದಾರಾ’? ಎಂದು ಕೇಳಿದ ಗಣೇಶನಿಗೆ ’ಸಧ್ಯಕ್ಕಂತೂ ನಾನೊಬ್ನೆ ಇರುದು. ಇನ್ನೂ ಇಬ್ರಿಗೆ ಇರುವಷ್ಟು ಜಾಗವುಂಟು ಮನೆಲಿ’ ಎಂಬುದು ಉತ್ತರವಾಯ್ತು. ಕ್ಷಣಕಾಲ ಮೌನದ ನಂತರ ಮಾತನಾಡಿದ ಗಣೇಶ, ’ಹೌದಾ..!! ಹಂಗಾರೆ ನಾನು ಬಂದ ಇರಬಹುದಾ ನಿಂಜೊತೆ ಸ್ವಲ್ಪ ದಿನ’ ಎಂದು ಕೇಳಿದ. ಅವನ ಪ್ರಶ್ನೆಯ ಧಾಟಿಯೇ ವಿಚಿತ್ರವೆನ್ನಿಸಿತು ಪ್ರಸನ್ನನಿಗೆ. ’ಆರಾಮಾಗಿ ಬಾ ಮಾರಾಯಾ, ನಿಂಗ್ಯಾರೂ ಬೇಡ ಅಂತಾರೆ. ಇರುವಷ್ಟ ದಿನ ಇದ್ದೋಗು’ ಎಂದ ಪ್ರಸನ್ನನ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳುವ ಮುನ್ನವೇ, ’ನಾನೂ ಬೆಂಗಳೂರಿಗೆ ಬಂದು ಜಾಬ್ ಮಾಡ್ವಾ ಅಂತ ಡಿಸೈಡ್ ಮಾಡಿದ್ದೇನೆ ಪ್ರಸನ್ನ’ಎಂದುಬಿಟ್ಟ ಗಣೇಶ.
ಸಿಡಿಲು ಬಡಿದಂತಾಯ್ತು ಪ್ರಸನ್ನನಿಗೆ. ಯಾರನ್ನು ಆದರ್ಶವನ್ನಿಟ್ಟುಕೊಂಡು ತಾನು ಊರಿಗೆ ಮರಳೋಣವೆಂದುಕೊಂಡಿದ್ದೆನೋ ಅಂಥವನೇ ಈಗ ಬೆಂಗಳೂರಿಗೆ ಬರುತ್ತೇನೆ ಎನ್ನುತ್ತಿದ್ದಾನೆ. ’ಅರೇ ..! ಎಂತಕಾ ಮಾರಾಯಾ, ಊರಲ್ಲೇ ಆರಾಮ ಇದ್ದೇನೆ ಅಂದೆ. ದುಡ್ಡು ಕಾಸು ಎಲ್ಲ ಬೇಕಷ್ಟು ಉಂಟು, ನಮ್ಮೂರೇ ನಮ್ಗೆ ಸ್ವರ್ಗ ಅಂತೆಲ್ಲ ಮಾತಾಡ್ತಿದ್ದವನಿಗೆ ಈಗೆಂತಾ ಏಕಾಏಕಿ ಬೆಂಗಳೂರು ಜಪ’ ಎಂದು ಪ್ರಶ್ನಿಸಿದವನಿಗೆ ಸ್ನೇಹಿತನ ಉತ್ತರ ತಿಳಿದುಕೊಳ್ಳುವ ಕುತೂಹಲ.
’ದುಡ್ಡು ಕಾಸು ಎಲ್ಲಾ ಇದ್ದಿದ್ದೇನೋ ಹೌದು. ಆದರೆ ಸಮಸ್ಯೆನೂ ಹಾಂಗೆ ಉಂಟು ಪ್ರಸನ್ನ’ಎಂಬ ಗಣೇಶನ ಮಾತುಗಳು ತಕ್ಷಣಕ್ಕೆ ಅರ್ಥವಾಗಲಿಲ್ಲ ಅವನಿಗೆ.
’ನೀ ಹೇಳಿದ್ದೇ ಸರಿಯಿತ್ತಾ ಪ್ರಸನ್ನ. ನಾನೂ ನಿಂಜೊತೆನೇ ಬೆಂಗಳೂರಿಗೆ ಬಂದ್ಬಿಡಬೇಕಿತ್ತು. ಈಗ ನೋಡು ಒಂದೆರಡು ವರ್ಷ ಅಡಿಕೆಗೆ ಒಳ್ಳೆ ರೇಟು ಬಂತು ಅಂತ ಸುಮಾರ್ ದುಡ್ಡು ಮಾಡ್ದೆ. ಒಳ್ಳೆ ಕಾರ್ ತಗಂಡೆ. ಇಲ್ಲೇ ಸ್ವರ್ಗ ಅನ್ಸಿತ್ತು. ಆದರೆ ಕಳೆದ ವರ್ಷ ಅಡಿಕೆಗೆಲ್ಲ ಕೊಳೆರೋಗ. ಸಿಕ್ಕಾಪಟ್ಟೆ ಲುಕ್ಷಾನು’ ಎನ್ನುತ್ತ ಕೊಂಚ ಹೊತ್ತು ಸುಮ್ಮನಾದ ಗಣೇಶ.
ಅವನ ಮಾತುಗಳನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ ಪ್ರಸನ್ನ. ’ಈಗೆಲ್ಲ ತೋಟ ಗದ್ದೆ ಕೆಲಸ ಎಲ್ಲ ಮೊದಲಿನಷ್ಟು ಸುಲಭ ಅಲ್ಲ ಪ್ರಸನ್ನ. ಮೊದಲಿನಂಗ ಕೆಲಸಕ್ಕ್ ಜನ ಸಿಕ್ಕುದಿಲ್ಲ ಈಗ. ಸಿಕ್ರು ಬಾಯಿಗ್ ಬಂದಂಗ್ ಕೂಲಿ ಕೇಳ್ತಾರೆ. ಅವ್ರ ಕೇಳ್ದಷ್ಟೇ ಸಂಬಳ ಕೊಟ್ರ ಮಾತ್ರ ಕೆಲಸಕ್ಕ್ ಬರ್ತಾರೆ. ಇಷ್ಟೆಲ್ಲ ಮಾಡಿದ ಮೇಲೆ ಮಳೆದೊಂದ್ ವಿಚಿತ್ರ ಕಾಟ. ಟೈಮಿಗ್ ಸರಿ ಬರ್ದೆ ಬ್ಯಾಡಾದ್ ಹೊತ್ನಲ್ಲಿ ಸಮಾ ಸುರಿತದೆ. ಬೇಸಾಯ ಅಂದ್ರೆ ಒಂದ್ನಮ್ನಿ ಜೂಜಾಟ ಆಗೋಗದೆ. ಬಂದ್ರ ಬಂತು ಇಲ್ಲಾಂದ್ರ ಇಲ್ಲ ಮಾರಾಯಾ’ ಎನ್ನುತ್ತ ಒಂದೇ ಸಮನೇ ಮಾತನಾಡುತ್ತಿದ್ದ ಗಣೇಶ.
’ಹೌದೇನಾ ಮಾರಾಯಾ..’? ಎಂದು ನಂಬಲಾಗದವನಂತೆ ಕೇಳಿದ ಪ್ರಸನ್ನನಿಗೆ ಸಣ್ಣದ್ದೊಂದು ಅಪನಂಬಿಕೆ.
’ಹೌದು ಮಾರಾಯಾ..ಇದೊಂದೆ ಸಮಸ್ಯೆಯಲ್ಲ. ನಮ್ಮ ಜಾತಿಲಿ ಹುಡ್ಗೀರ್ ಕಮ್ಮಿ ಅನ್ನೊದಂತೂ ನಿಂಗ್ ಗೊತ್ತುಂಟಲ್ಲ. ಇರೋ ಅಲ್ಪ ಸ್ವಲ್ಪ ಹುಡ್ಗೀರಿಗೆ ಭಾರಿ ಡಿಮಾಂಡು. ಗದ್ದೆ ತೋಟ ನೋಡ್ಕೊಳ್ಳೋ ಹುಡುಗ್ರು ಅಂದ್ರೆ ಅವರಿಗೆಲ್ಲ ಒಂಥರಾ ಅಸಡ್ಡೆ. ಹಂಗಾಗಿ ನಮ್ಮಂಥವರ ಮದುವೆನೂ ಕಷ್ಟ ಆಗೋಗದೆ’ ಎಂದ ಗಣೇಶನ ಮಾತುಗಳಿಗೆ ಏನೇನ್ನುವುದೋ ತಿಳಿಯದಾಯಿತು ಪ್ರಸನ್ನನಿಗೆ.
’ಇಲ್ಲೆಂತ ಉಂಟಾ ಪ್ರಸನ್ನ. ದಿನಕ್ಕ ಹತ್ತು ತಾಸಿಗಿಂತ ಹೆಚ್ಚ್ ಕರೆಂಟ್ ಇರುದಿಲ್ಲ. ಯಾರಿಗಾದ್ರೂ ಆರಾಮ್ ಇಲ್ಲಾಂದ್ರೆ ಸಮಾ ಒಂದು ಆಸ್ಪತ್ರೆನೂ ಇಲ್ಲ. ಹಾರ್ಟ್ ಅಟ್ಯಾಕ್ ಆದ್ರೂ ಹುಬ್ಳಿಗೇ ಓಡ್ಬೇಕು. ಈ ಕರ್ಮಕ್ಕೆ ಇಲ್ಲಿದ್ದೆಂತಾ ಮಾಡುದು..’? ಎನ್ನುತ್ತ ಒಂದೇ ಸಮನೇ ತನ್ನೂರನ್ನು ಗಣೇಶ ದೂಷಿಸುತ್ತಿದ್ದರೆ ಪ್ರಸನ್ನನ ಮನಸ್ಸಿನಲ್ಲೊಂದು ಅವ್ಯಕ್ತ ಗಲಿಬಿಲಿ. ಬಂದುಬಿಡು ಬೆಂಗಳೂರಿಗೆ ಎಂದು ಗಣೇಶನನ್ನು ಕರೆಯಲು ತನಗೆ ಧೈರ್ಯವಿಲ್ಲ. ತನಗಿಂತ ಸಾವಿರಪಟ್ಟು ಬುದ್ಧಿವಂತನಾದ ಅವನಿಗೆ ಬೇಡವೆನ್ನಲು ಮನಸೊಪ್ಪದು. ಬೇಕುಬೇಡಗಳ ಜಿಜ್ಞಾಸೆಯಲ್ಲಿ ಅವರಿಬ್ಬರ ನಡುವಣ ಸಂಭಾಷಣೆ ಕ್ಷಣಕಾಲದ ಮೌನವನ್ನು ಕಂಡುಕೊಂಡಿತ್ತು. ಅಷ್ಟರಲ್ಲಿ ಅವನ ಆಫೀಸಿನ ಸ್ಟಾಪ್ ಸಮೀಪಿಸಿತ್ತು.
ಒಂದು ದೊಡ್ಡ ನಿಟ್ಟುಸಿರನ್ನು ಹೊರಚೆಲ್ಲಿದ ಪ್ರಸನ್ನ, ’ಸರಿ ಗಣೇಶ. ಯಾವಾಗ ಬರ್ತೆ ಹೇಳು. ಒಂದು ಬಯೋಡಾಟಾ ರೆಡಿ ಮಾಡ್ಕೊಂಡ ನಂಗೆ ಕಳ್ಸಿಕೊಡು. ನಾನೂ ಪ್ರಯತ್ನ ಮಾಡ್ತೆ. ಈಗ ಆಫೀಸಿಗೆ ಹೋಗ್ಬೇಕು. ಆಮೇಲೆ ಫೋನು ಮಾಡ್ತೆ’ಎನ್ನುತ್ತ ಗಣೇಶನ ಉತ್ತರಕ್ಕೂ ಕಾಯದೇ ಫೋನಿಟ್ಟು ಬಸ್ಸಿನಿಂದಿಳಿದು ಆಫೀಸಿನತ್ತ ನಡೆದ. ಅವನನ್ನು ಇಳಿಸಿದ ಬಸ್ಸು ಮುಂದಕ್ಕೆ ಸಾಗಿತ್ತು.
Thanks for writing such an amazing article. Like your style of writing. It truly was worth the read.