ದಲಿತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?
– ಶಿವಾನಂದ ಸೈದಾಪೂರ
ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್
ಬೆಳಗಾವಿ.
ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಸಿಸುವಾಗ ನಡೆದಂತದ್ದವುಗಳು. ಘಟನೆ ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ.
ಘಟನೆ ಎರಡು; ರಾಯಬಾಗ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದೇ ಹೆಸರಾದ ಹಿಡಕಲ್ ನಲ್ಲಿ ನಡೆದದ್ದು. ಇದೇ ಒಂದು ವಾರದಲ್ಲಿ ನಡೀದಿದೆ. ದಲಿತರ ಓಣಿಯಲ್ಲಿ ಮಹಿಳೆಯೊಬ್ಬಳು ಬೈಗುಳಗಳುಳ್ಳ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿರುವುದೇನು ಸಾಮಾನ್ಯ ಸಂಗತಿಯೇನಲ್ಲ. ಹಾಲಿ ಶಾಸಕ ಮತ್ತು ಈ ಸಲದ ಕುಡಚಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜು ಅವರನ್ನು ಅತ್ಯಂತ ಕೀಳು ಮಟ್ಟಕ್ಕಿಳಿದು ಬಾಯಿಗೆ ಬಂದಂತೆ ನಿಂದಿಸುತ್ತಿರುವುದು. ಸ್ವತಃ ತಾನು ಒಬ್ಬ ಹೆಣ್ಣು ಅನ್ನೋದನ್ನು ಮರೆತು ಪಿ.ರಾಜು ಅವರ ತಾಯಿಯನ್ನು ಬೈಯುತ್ತಿರುವುದು. ಹೇಳುವುದಕ್ಕೆ ಸಾಧ್ಯವೇ ಇಲ್ಲದ ಕನಿಷ್ಠ ಮಟ್ಟದ ಶಬ್ದಗಳನ್ನು ಬಳಸಿ ಬೈಯುತ್ತಿರುವುದನ್ನು ನೋಡಿದರೆ ಎಂಥವರಿಗಾದರೂ ಮೈ ಬೆವರುತ್ತದೆ. ಆ ಕೀಳುಮಟ್ಟದ ಶಬ್ದಗಳನ್ನು ಕೇಳಿದರೆ ಯಾವ ಸ್ತ್ರೀ ಪುರುಷರು ಅಸಹ್ಯ ಪಡುವದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಆ ವಿಡಿಯೋದಲ್ಲಿ ಮಹಿಳೆ ಮಾಡುತ್ತಿರುವುದಾದರೇನು ಗೊತ್ತೇ? ಈ ಸಲದ ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮಿತ್ ಘಾಟಗೆ ಪರ ಪ್ರಚಾರ ಮಾಡುತ್ತಿದ್ದಾಳೆ. ಸ್ವತಃ ಅವಳೇ ಹೇಳುತ್ತಾಳೆ ದಲಿತಕೇರಿಗಳಲ್ಲಿ ಅಮಿತ್ ಘಾಟಗೆ ಮತ್ತು ಸಿದ್ದರಾಮಯ್ಯನವರನ್ನು ಬಿಟ್ಟರೆ ಬೇರೆ ಯಾರೂ ಬರಬಾರದಂತೆ! ಉಳಿದವರ್ಯಾರು ದಲಿತ ಕೇರಿಯ ಸಮೀಪ ಕೂಡ ಸುಳಿಬಾರದಂತೆ! ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಲ್ಲಿ ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಈ ದೇಶವನ್ನು ಆಳಿದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಅಭಿವೃದ್ಧಿಗಿಂತ ಜನಸಾಮಾನ್ಯರಲ್ಲಿ ಯಾವ ರೀತಿ ಜಾತಿಯತೆಯನ್ನು ಬಿತ್ತಿ ಬೆಳೆಸಿದೆ ಎಂಬುವುದು ಇದರಿಂದಲೇ ಸ್ಪಷ್ಟವಾಗುತ್ತದೆ.
ಇಷ್ಟಕ್ಕೂ ಕುಡಚಿಯೊಂದು ಮೀಸಲಾತಿ ಕ್ಷೇತ್ರ. ಇದುವರೆಗೂ ಇದು ರಾಜ್ಯದಲ್ಲಿ ಕಾಂಗ್ರೆಸ್ನ ಭದ್ರ ಕೋಟೆಯಂತೆ ಕಾಯ್ದುಕೊಂಡು ಬರಲಾಗಿದೆ. ಅಮಿತ್ ಘಾಟಗೆ ಅವರ ತಂದೆ ಶ್ಯಾಮ ಘಾಟಗೆ ಸತತ ನಾಲ್ಕು ಸಾರಿ ಇಲ್ಲಿನ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಮಾಡಿದ ಕೆಲಸ ಮಾತ್ರ ಅವರಿಗೆ ಗೊತ್ತು! ಮೀಸಲಾತಿ ಕ್ಷೇತ್ರವಾಗಿದ್ದರೂ ಇದು ಬೆರಳಣಿಕೆಯಷ್ಟು ಜನರ ಸ್ವತ್ತಾಗಿದೆ ಹೊರತು ಇನ್ನುಳಿದ ದಲಿತ ಜನವನ್ನು ಮುಖ್ಯ ವೇದಕೆಗೆ ತರುವ ಕೆಲಸವೇ ಆಗಿಲ್ಲ .ಯಾವುದೇ ಕೆಲಸವನ್ನು ಮಾಡಲಾಗಿಲ್ಲ ಎಂಬುವುದೇನು ಸುಳ್ಳಲ್ಲ.
ಇದುವರೆಗೂ ಆಳಿದ ಜನನಾಯಕರಿಗೆ ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ದಲಿತ ಸಮುದಾಯದ ಉದ್ಧಾರವೆಂಬುವ ಮಂತ್ರ ಜಪ. ಚುನಾವಣೆ ಮುಗಿದ ನಂತರ ಅದರ ಬಗ್ಗೆ ಕನಸಿನಲ್ಲಿಯೂ ಸಹ ಯೋಚಿಸುವುದಿಲ್ಲ. ಎಲ್ಲ ರಾಜಕೀಯ ಮುಖಂಡರಿಗೆ ಈ ಹೊತ್ತಲ್ಲಿ ಮಾತ್ರ ದಲಿತ ಕುಟುಂಬಗಳ ಸಂವಾದ, ಅವರ ಜೊತೆ ಊಟ ಎಂಬ ಹೈಡ್ರಾಮಾಗೋಳು. ಈ ಹೊತ್ತಿಗೆ ಮಾತ್ರವೇ ಅಂಬೇಡ್ಕರ್ ಅವರ ನೆನಪು! ಚುನಾವಣೆ ಮುಗಿತು ಅಂದರೆ ಈ ಎಲ್ಲ ರೀತಿಯ ನಾಟಕಗಳು ಬಂದ. ಮತ್ತೆ ನೆನಪಿಗೆ ಬರುವುದು ನಾಲ್ಕು, ನಾಲ್ಕುವರೆ ವರ್ಷದ ನಂತರವೇ. ಪ್ರತಿಯೊಂದು ಪಕ್ಷವು ತನ್ನ ಅಸ್ತಿತ್ವಕ್ಕಾಗಿ ದಲಿತ ಮತವನ್ನೆ ಅವಲಂಬಿಸಿಕೊಂಡಿವೆ. ಆದರೆ ಅವು ಯಾವುವೂ ಗನಿಷ್ಠವಾಗಿ ದಲಿತರ ಏಳಿಗೆಗಾಗಿ ಶ್ರಮಿಸಿದ್ದು ಮಾತ್ರ ವಿರಳ.
ಇವತ್ತು ದಲಿತನೆಂದು ರಾಜಕೀಯ ಲಾಭ ಅನುಭವಿಸುವ ಯಾವುದೇ ದಲಿತ ರಾಜಕಾರಣಿಯ ಅಂಬೇಡ್ಕರ್ ರಷ್ಟು ಕಷ್ಟ ಅನುಭವಿಸಿಲ್ಲ. ಅಂಬೇಡ್ಕರ್ ಅವರಿಗಾಗಿಯೇ ಅನುವು ಮಾಡಿಕೊಟ್ಟ ದಾರಿಯನ್ನು ಇವತ್ತಿನವರೆಗೆ ಆಳಿದ ಯಾವುದೇ ರಾಜಕಾರಣಿ ದಲಿತರಿಗಾಗಿ ಬಳಕೆ ಮಾಡಿಲ್ಲ. ಒಂದು ವೇಳೆ ಮಾಡಿದ್ದಿದ್ದರೆ ಇವತ್ತು ನಮ್ಮ ದೇಶದಲ್ಲಿ ಯಾವುದೇ ದಲಿತರು ಊರಗುಳಿಯುತ್ತಿರಲಿಲ್ಲ. ಅಂದಿನಿಂದ ಇಂದಿನವರೆಗೂ ಅವರನ್ನು ಲಾಭಕ್ಕಾಗಿ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನಾಗಿ ಬಳಕೆ ಮಾಡಲಾಗಿದೆ ಹೊರತು ಅವರನ್ನು ಸ್ಪರ್ಶ ಸಮಾಜ ವಾಸಿಯಾಗಲು ಯಾರೂ ಕೂಡ ಮನಸು ಮಾಡಲಿಲ್ಲ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದರೂ ಕೂಡ ಅವರ ಆತ್ಮ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ಇದುವರೆಗೆ ಯಾರೂ ಮಾಡಲಿಲ್ಲ ಕೆಳಮಟ್ಟದ ಕೀಳುಗನನ್ನಾಗಿ ಬಳಸಿಕೊಳ್ಳುತ್ತ ಬರಲಾಗಿದೆ.
ಸಮಾಜವಾದಿಗಳು ಮಾರ್ಕ್ಸ್ವಾದಿಗಳ ಮಾಜಿ ನಕ್ಸಲ್ ವಾದಿಗಳು ಭೀಮನ ಹೆಸರಿನಲ್ಲಿ ದಲಿತರನ್ನು ಬಳಸಿಕೊಳ್ಳುವದಲ್ಲದೆ ತಮ್ಮ ವಿಚಾರಧಾರೆ ಇತರರ ಮೇಲೆ ತುಂಬುತ್ತಾ ಮುಂದೆ ಸಾಗುತ್ತಿದ್ದಾರೆ. ದಲಿತರನ್ನು ಮುಂದಿಟ್ಟುಕೊಂಡು ಬ್ರಾಹ್ಮಣರನ್ನು ಇನ್ನುಳಿದ ಮೇಲುಸ್ತರದವರನ್ನು ವಿರೋಧಿಸಲು ಅಂಬೇಡ್ಕರ್ ಎಂಬುವ ಅಸ್ತ್ರವನ್ನು ಬೇಕಾದಂತೆ ಬಳಸಿಕೊಳ್ಳುವ ಕೆಟ್ಟ ಚಾಳಿ ಕೆಲವು ಮತಿಹಿನರಿಗಿದೆ. ಇವತ್ತು ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇದೆ ಕಾಂಗ್ರೆಸ್ ಅದೇ ಬಿ ಆರ್ ಅಂಬೇಡ್ಕರ್ ಅವರನ್ನು ಎರಡೆರಡು ಬಾರಿ ಚುನಾವಣೆಯಲ್ಲಿ ಸೋಲಿಸಿತ್ತು. ಇವತ್ತು ವೋಟಿಗಾಗಿ ಕಸರತ್ತು ನಡೆಸುವ ಕಾಂಗ್ರೆಸ್ನ ನೀತಿಯನ್ನು ಪ್ರಜ್ಞಾವಂತರು ಯಾವತ್ತೂ ಮರೆತಿಲ್ಲ; ಮರೆಯಲುಬಾರದು.
ಹಲವಾರು ಬಾರಿ ಚರ್ಚೆಗೆ ಗ್ರಾಸವಾಗುತ್ತಿರುವ ಮೀಸಲಾತಿ ವಿಷಯಕ್ಕೆ ಬರುವುದಾದರೆ ಅದರಲ್ಲಿಯೂ ರಾಜಕಾರಣ! ದಲಿತರ ಹೆಸರಿನಲ್ಲಿ ರಾಜಕಾರಣ ಮಿತಿಮೀರಿದಲ್ಲದೇ ಫಲಾನುಭವಿ ದಲಿತನಿಗೆ ಏನು ದೊರೆತ್ತಿಲ್ಲ. ಈಗಲೂ ಆತ ಹರಕು ಚಪ್ಪರದಲ್ಲಿಯೇ ವಾಸಿಸುತ್ತಿದ್ದಾರೆ. ಉಂಡವರ ಎಲೆ ಎತ್ತವುದರಲ್ಲಿಯೇ ಜೀವನ ಸಾಗಿಸುತ್ತಿದ್ದಾನೆ. ಇನ್ನು ಅವರ ಪಾಲಿಗೆ ದೇವಾಲಯಗಳು ಬಾಗಿಲು ತೆರೆದೇ ಇಲ್ಲ. ಇನ್ನು ಕೂಡ ಕಟ್ಟೆ ಕೆಳಗೆ ಕುಳಿತು ಕೊಳ್ಳುವುದಲ್ಲದೆ ಬೊಗಸೆಯಿಂದ ನೀರು ಕುಡಿಯುವ ಸಾಕಷ್ಟು ನಿದರ್ಶನಗಳು ಕಣ್ಣಿಗೆ ಬೀಳುತ್ತಿವೆ! ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆಯಿತು. ಈ ಎಪ್ಪತ್ತು ವರ್ಷದಲ್ಲಿ ಐವತ್ತು ವರ್ಷ ದೇಶವನ್ನು ಸಂಪೂರ್ಣವಾಗಿ ಆಳಿದ್ದು ಕಾಂಗ್ರೆಸ್! ಆದರೆ ಕಾಂಗ್ರೆಸ್ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಶ್ರಮಿಸುತ್ತಾ ಬಂತೇ ಹೊರತು ದಲಿತರ ಏಳಿಗೆಗಾಗಿ ಯಾವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲೇ ಇಲ್ಲ. ಬಹುಸಂಖ್ಯೆಯಲ್ಲಿರುವ ದಲಿತರ ಯಾರು ಅಸ್ಪೃಶ್ಯತೆಯ ಕತ್ತಲೆಯಿಂದ ಬೆಳಕಿಗೆ ಬರಲಿಲ್ಲ! ಮೀಸಲಾತಿ ಹೆಸರಿನಲ್ಲಿ ಹಲವಾರು ಕ್ಷೇತ್ರಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಯಾವುದೇ ದಲಿತ ನಾಯಕ ಸ್ವ-ಆಸ್ತಿಯನ್ನು ಗಳಿಸಿದನ್ನು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾತ್ರ ಸೊನ್ನೆಯೆ ಇದೆ. ಕುಟುಂಬ ರಾಜಕಾರಣ ಹೊರತಾಗಿ ಮತ್ತೊಬ್ಬ ಹಿಂದುಳಿದ ದಲಿತನನ್ನು ಗಾದಿ ಕುರ್ಚಿಯತ್ತ ಬಿಟ್ಟುಕೊಳಲಿಲ್ಲ. ರಾಜಕೀಯ ವಾರಸುದಾರರನ್ನಾಗಿ ತಮ್ಮ ಮಕ್ಕಳನ್ನೋ, ಸಂಬಂಧಿಕರನ್ನೋ ತಮ್ಮ ಜಾಗಗಳಿಗೆ ತಂದು ಕಳಿಸಿಬಿಟ್ಟರು!
ಒಂದು ಅಂದಾಜಿನ ಪ್ರಕಾರ ಕರ್ನಾಟಕದ ಪ್ರಖ್ಯಾತ ದಲಿತ ರಾಜಕಾರಣಿಯೊಬ್ಬರು ಸಾವಿರಾರು ಕೋಟಿ ರೂ ಆಸ್ತಿ ಮಾಡಿರುವುದರ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತಿದೆ. ಇಷ್ಟೆಲ್ಲಾ ಆಸ್ತಿ ಮಾಡಿದರೂ ಆ ರಾಜಕಾರಣಿ ತನ್ನ ರಾಜಕೀಯ ಸ್ಥಾನವನ್ನು ಮತ್ತೊಬ್ಬ ಹಿಂದುಳಿದ ದಲಿತರಿಗೆ ಬಿಟ್ಟುಕೊಡಲಿಲ್ಲ. ಬದಲಾಗಿ ತನ್ನ ಮಗನನ್ನೇ ಸರಿಸಮಾನಾಗಿ ಬೆಳೆಸಿಬಿಟ್ಟರು! ಇಷ್ಟೆಲ್ಲಾ ಆದರೂ ಆ ನಾಯಕ ಇನ್ನೂ ಮೀಸಲಾತಿ ಕ್ಷೇತ್ರದಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಹೊರತಾಗಿ ಹರಕಲು ಚಪ್ಪರದಲ್ಲಿ ಜೀವನ ತಳ್ಳುತ್ತಿರುವ ಬಡದಲಿತ ಸಮಾಜದ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಆ ವ್ಯಕ್ತಿ ಒಬ್ಬರೇ ಮಾತ್ರವಲ್ಲ! ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇನ್ನೂ ಸಾಕಷ್ಟಿದ್ದಾರೆ. ಅವರೆಲ್ಲರೂ ಹಿಂದುಳಿದವರಿಗಾಗಿ ತಮ್ಮ ಸೌಲಭ್ಯಗಳನ್ನು ಮತ್ತೊಬ್ಬರಿಗೆ ಬಿಟ್ಟು ಕೊಟ್ಟಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ರ ಕನಸು ನನಾಸಗಲು ಸಾದ್ಯ! ತುಳಿತಕ್ಕೊಳಗಾದವರು ಬದುಕು ಹಸನಾಗಬೇಕಾದರೆ ಇನ್ನೂ ಈ ಸಮಾಜದಲ್ಲಿ ಹಲವಾರು ಬದಲಾವಣೆಗಳು ಆಗಲೇಬೇಕು. ಏಸಿ ರೂಮುಗಳಲ್ಲಿ ಕುಳಿತು ಪ್ರಗತಿಶೀಲದ ಹೆಸರಿನಲ್ಲಿ ದಲಿತ ಸಾಹಿತ್ಯದ ರಚನೆಯಾದರೆ ದಲಿತರು ಮುಖ್ಯ ವೇದಕೆಗೆ ಬರಲಾಗದು! ಬರಿ ಸಾಹಿತ್ಯ ರಚನೆಯಿಂದ ಏಳಿಗೆ ಸಾದ್ಯವಿದ್ದರೆ ಇಷ್ಟೋತ್ತಿಗೆ ಏನೊ ಆಗಿಬೀಡುತಿತ್ತು ಈ ಸಮಾಜ! ಯಾವುದೋ ಪಕ್ಷದ ಪರ ವಕಾಲತು ವಹಿಸಿ ಪ್ರಚಾರ ದ್ರುಷ್ಠಿಯಿಂದ ಸಾಹಿತ್ಯ ಹರಿ ಬಿಟ್ಟರೆ ಕೆಳ ವರ್ಗ ಮೇಲ ಬರಲು ಸಾಧ್ಯವಿಲ್ಲ. ಇದರಿಂದ ತನ್ನ ಕುಟುಂಬವಷ್ಟೇ ಯಾವುದಕ್ಕೂ ತೊಂದರೆ ಇಲ್ಲದೆ ಮುಂದೆ ಸಾಗುವುದಷ್ಟೇ. ನೊಂದು ಬೆಂದವರ ಬದುಕು ಹಸನಾಗುವುದಿಲ್ಲ!