– ಸಂತೋಷ್ ತಮ್ಮಯ್ಯ

ಚುನಾವಣೆ ಸಮೀಪಿಸಿದಾಗಲೆಲ್ಲಾ ಕಾಂಗ್ರೆಸಿಗರು, “ನಮ್ಮ ಇತಿಹಾಸ ತೆರೆದ ಪುಸ್ತಕವಿದ್ದಂತೆ’,‘ದೇಶಕ್ಕೆ ಕಾಂಗ್ರೆಸಿನ ಕೊಡುಗೆಯೇನೆಂಬುದನ್ನು ಯಾರಿಗೂ ನಿರೂಪಿಸುವ ಆವಶ್ಯಕತೆಯಿಲ್ಲ’ಎಂದು ಆಲಾಪಿಸತೊಡಗುತ್ತಾರೆ. ಅವರ ತೆರೆದ ಪುಸ್ತಕದ ಕೆಲವೇ ಪುಟಗಳನ್ನು ನೋಡಿದರೆ ಅಲ್ಲಿ ವಿಚಿತ್ರಗಳೇ ಕಾಣಿಸುತ್ತವೆ. ಇದು ಅಂಥ ಒಂದು ಸ್ಯಾಂಪಲ್.
ಲಾಲ್ ಬಹೂದ್ದೂರ್ ಶಾಸ್ತ್ರಿಗಳ ಬಾಯಿಂದ ಭಾರತ್ ಕೀ ಆಯೂಬ್ ಎಂದು ಬೆನ್ನು ತಟ್ಟಿಸಿಕೊಂಡ ಒರ್ವ ಯೋಧ ಕ್ಯಾ.ಆಯೂಬ್ ಖಾನ್. ವೀರ ಚಕ್ರ ಪುರಷ್ಕೃತ ಕ್ಯಾ.ಖಾನ್‌ಗೆ ಶಾಸ್ತ್ರಿ ಮೇಲೆ ಅದೆಷ್ಟು ಅಭಿಮಾನವಿತ್ತೆಂದರೆ ನಿವೃತ್ತಿಯ ನಂತರ ಅವರು ಕಾಂಗ್ರೆಸ್‌ಗೆ ಸೇರಿದರು. ಎರಡು ಬಾರಿ ರಾಜಾಸ್ಥಾನದ ಜುಂಜುನು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಸಂಸದರೂ ಆದರು. ಆದರೆ ಆಯೂಬ್ ಖಾನರಿಗೆ ಶಾಸ್ತ್ರಿಗಳ ನಿಧನಾನಂತರ ಯಾಕೋ ತನ್ನ ಆಯ್ಕೆ ತಪ್ಪಿದೆ ಎನಿಸತೊಡಗಿತು. ಇಂದಿರಾ ಸರ್ವಾಧಿಕಾರ ಮತ್ತು ರಾಜೀವ್ ಗಾಂಧಿ ಪಟಾಲಮ್ಮಿನ ಸೈನಿಕ ವಿರೋಧಿ ನೀತಿಗಳನ್ನು ಸಹಿಸುವಷ್ಟು ದಿನ ಸಹಿಸಿದರು. ಕೊನೆಗೆ ಶಾಸ್ತ್ರಿಗಳಿಗಾದ ಸ್ಥಿತಿ ನರಸಿಂಹರಾಯರಿಗೂ ಬಂದಾಗ ಹಿಂದೆ ಮುಂದೆ ನೋಡದೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸಂನ್ಯಾಸ ಸ್ವೀಕರಿಸಿದರು. ಕೊನೆ ಕಾಲದಲ್ಲಿ ಆಯೂಬ್ ಖಾನರಿಗೆ ಕಾಂಗ್ರೆಸ್ ಸೇರಿದ್ದ ಬಗ್ಗೆ ಎಷ್ಟು ಪಾಪಪ್ರಜ್ಞೆ ಕಾಡುತ್ತಿತ್ತೆಂದರೆ ಆರೋಗ್ಯ ವಿಚಾರಿಸಲು ಬಂದ ವಾಜಪೇಯಿಯವರ ಪಾದಸ್ಪರ್ಶಕ್ಕೆ ಅನುಮತಿಯನ್ನೂ ಆ ಯೋಧ ಕೇಳಿದ್ದರು. ಏಕೆಂದರೆ ಒಬ್ಬ ದೇಶಭಕ್ತ ಯೋಧ ಮತ್ತು ಕಾಂಗ್ರೆಸಿಗ ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ ಎಂಬ ಸತ್ಯ ಆಯೂಬ್ ಖಾನರಿಗೆ ತಮ್ಮ ಕೊನೆಕಾಲದಲ್ಲಿ ಅರ್ಥವಾಗಿತ್ತು.
ಹಾಗಾಗಿಯೋ ಏನೋ ಸ್ವಾತಂತ್ರ್ಯಾನಂತರ ರಾಜಕಾರಣಕ್ಕೆ ಬಂದ ಶೇ.೯೯ರಷ್ಟು ಮಾಜಿ ಯೋಧರು ಕಾಂಗ್ರೆಸಿಗೆ ಸೇರಲಿಲ್ಲ. ಕ್ಯಾ.ಅಮರೀಂದರ್ ಸಿಂಗರನ್ನೇ ನೋಡಿ. ಅವರೋರ್ವ ಕಾಂಗ್ರೆಸಿಗ ಎಂಬುದಕ್ಕಿಂತ ಹೆಚ್ಚಾಗಿ ಸಿಕ್ಖ್ ನಾಯಕನಾಗೇ ದೇಶಕ್ಕೆ ಕಾಣುತ್ತಾರೆ. ಇತ್ತೀಚೆಗೆ ಕೆನಡಾದ ಪ್ರಧಾನಿ ಭಾರತಕ್ಕೆ ಬಂದಾಗ ಅವರು ನಡೆದುಕೊಂಡ ರೀತಿಯಿಂದ ಹಿಡಿದು ಕಾರ್ಗಿಲ್ ಯುದ್ಧ, ಉರಿ ಆಕ್ರಮಣ, ಪಟಾನ್‌ಕೋಟ್ ದಾಳಿಗಳ ಸಂದರ್ಭದಲ್ಲೆಲ್ಲಾ ಅವರು ಮುಖ್ಯಮಂತ್ರಿಯಾಗಿ ಕಂಡದ್ದಕ್ಕಿಂತಲೂ ಮಾಜಿ ಯೋಧನಾಗಿಯೇ ಕಂಡರು. ರಾಜೇಶ್ ಪೈಲೆಟ್ ಎಂಬ ಸೋನಿಯಾ ಮನೆಯ ನಿಯತ್ತಿನ ಪ್ರಾಣಿಯೊಂದನ್ನು ಬಿಟ್ಟರೆ ಅಣ್ಣಾ ಹಜಾರೆ, ರಾಜ್ಯವರ್ಧನ ಸಿಂಗ್ ರಾಥೋಡ್, ಜ. ವಿಕೆ ಸಿಂಗ್, ಬಿ.ಸಿ ಖಂಡೂರಿ, ಜೆಎಫ್‌ಆರ್ ಜೆಕಬ್, ಕುಂಜ್ಞಿರಾಮನ್ ಪಾಲಟ್ ಕಂಡೇತ್, ಜಸ್ವಂತ್ ಸಿಂಗ್, ಕ್ಯಾ.ಜಗತ್ ರ್ ಸಿಂಗ್ ದ್ರೋಣ, ಅಡ್ಮಿರಲ್ ವಿಷ್ಣು ಭಾಗ್ವತ್‌ರಂಥಾ ನೂರಾರು ಮಾಜಿ ಯೋಧರು ರಾಜಕಾರಣದಲ್ಲಿದ್ದರೂ ಅವರಾರೂ ಕಾಂಗ್ರೆಸಿದ್ದೆಡೆ ಮಗ್ಗುಲು ಕೂಡಾ ಬದಲಿಸಿಲ್ಲ!
ಯಾಕೆಂದರೆ ಸೈನಿಕನನ್ನ್ನು ಗೌರವಿಸಿದ ಒಂದೇ ಒಂದೇ ಒಂದು ಉದಾಹರಣೆ ಕಾಂಗ್ರೆಸಿನಲ್ಲಿ ಕಾಣಸಿಕ್ಕುವುದಿಲ್ಲ. ಕಾಂಗ್ರೆಸಿನ ಮನೆದೇವರು ನೆಹರೂ ಪ್ರತಿಷ್ಠಾಪನೆಯಾದಂದಿನಿಂದಲೂ ಆ ಗುಣ ಅವರ ‘ತೆರೆದ ಪುಸ್ತಕ ’ದಲ್ಲಿ ಕಂಡುಬರುತ್ತವೆ. ಏಕೆಂದರೆ ದೇಶ ಸ್ವಾತಂತ್ರ್ಯದ ಆನಂದದಲ್ಲಿ ತೇಲುತ್ತಿದ್ದರೆ ಅತ್ತ ಸೇನೆಗಿನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ! ೧೯೪೭ರ ಆಗಸ್ಟ್ ೧೫ರಂದು ಮೌಂಟ್ ಬ್ಯಾಟನ್ ಜಾಗಕ್ಕೆ ನೆಹರೂ ಬಂದು ಕೂತಾಗ ನೆಹರೂಗೆ ಸೇನಾ ಮುಖ್ಯಸ್ಥ ಕೂಡಾ ಭಾರತೀಯನೇ ಆಗಿರಲಿ ಎಂಬ ಮನಸ್ಸು ಬಂದಿರಲಿಲ್ಲ. ಯಾವ ಹಿಂಜರಿಕೆಯೂ ಇಲ್ಲದೆ ನೆಹರೂ ಅದೇ ದಿನ ರಾಬ್ ಲೊಖಾರ್ಟ್ ಎಂಬವನನ್ನು ಸೇನಾ ದಂಡನಾಯಕನನ್ನಾಗಿ ನೇಮಿಸಿದರು. ಕೊನೆಗೆ ಈ ಲೊಖಾರ್ಟನಿಗೇ ನಾಚಿಕೆಯಾಗಿ ಇಂಗ್ಲೆಂಡಿಗೆ ಹೊರಟುಹೋದ. ನಂತರ ಕೂಡಾ ನೆಹರೂ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಗುಣ ಭಾರತೀಯರಿಗೆಲ್ಲಿದೆ ಎನ್ನುತ್ತಾ ಮತ್ತೊಬ್ಬ ಬಿಳಿಯ ರಾಯ್ ಬುಷರ್ ನನ್ನು ನೇಮಕ ಮಾಡಿದರು. ಒಂದು ವರ್ಷದವರೆಗೆ ಸೇನಾ ಮುಖ್ಯಸ್ಥನಾಗಿದ್ದ ಬುಷರ್ ಮತ್ತಷ್ಟು ವರ್ಷ ಮುಂದುವರಿಯುತ್ತಿದ್ದನೋ ಏನೋ. ಆದರೆ ದೇಶೀ ಸೇನಾ ನಾಯಕನ ಕೂಗು ಸೈನ್ಯದೊಳಗೆ ಗಟ್ಟಿಯಾಗುತ್ತಿತ್ತು. ಆಗ ನೆಹರೂ ಅಂದಿನ ರಕ್ಷಣಾ ಸಚಿವ ಬಲವಂತ್ ಸಿಂಗ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಲ್ಲದ ಮನಸ್ಸಿನಿಂದ ಕೆ.ಎಂ ಕಾರ್ಯಪ್ಪನವರನ್ನು ಸೇನಾ ಮಹಾದಂಡನಾಯಕನನ್ನಾಗಿ ನೇಮಕ ಮಾಡಿದರು. ಮತ್ತು ಕಾರ್ಯಪ್ಪರ ಮೇಲೆ ಒಂದು ಕಣ್ಣಿಡಲಾರಂಭಿಸಿದರು. ಸರಿಯಾಗಿ ಅದೇ ಹೊತ್ತಲ್ಲಿ ಪಾಕಿಸ್ಥಾನದ ಆಕ್ರಮಣದ ಸೂಚನೆಯೂ ಇದ್ದುದರಿಂದ ನೆಹರೂಗೆ ಹಾಗೆ ಮಾಡದೆ ಬೇರೆ ದಾರಿ ಇರಲಿಲ್ಲ. ಕಾಶ್ಮೀರ ಆಕ್ರಮಣವನ್ನು ಹಿಮ್ಮೆಟ್ಟಿಸಲು ಕಾರ್ಯಪ್ಪ ಕಳುಹಿಸಿದ ಮತ್ತೊಬ್ಬ ಅಧಿಕಾರಿ ತಿಮ್ಮಯ್ಯ ಕೆಲವೇ ದಿನಗಳಲ್ಲಿ ಕಾಶ್ಮೀರಿಗಳ ಮನಸ್ಸು ಗೆದ್ದಿದ್ದು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ತಿಮ್ಮಯ್ಯ ಆಳಿದರೆ ನಾವು ಭಾರತ ಒಕ್ಕೂಟಕ್ಕೆ ಸೇರುವೆವು ಎಂದದ್ದೆಲ್ಲವೂ ನೆಹರೂಗೆ ನಡುಕ ಹುಟ್ಟಿಸಿ ಕಾರ್ಯಪ್ಪ ಮತ್ತು ತಿಮ್ಮಯ್ಯರಿಬ್ಬರನ್ನೂ ತಣ್ಣಗೆ ದ್ವೇಷಿಸತೊಡಗಿದರು. ಇವೆಲ್ಲವನ್ನೂ ಜಾರಿಗೆ ತರುತ್ತಿದ್ದವನು ಹಿಟ್ಲರನ ಹಿಂದಿದ್ದ ಹಿಮ್ಲರ್ ನಂಥ ಸರ್ದಾರ್ ಬಲವಂತ್ ಸಿಂಗ್. ಅಂದರೆ ‘ಕಾರ್ಯಪ್ಪ-ತಿಮ್ಮಯ್ಯರನ್ನು ನೆಹರೂ-ಮೆನನ್‌ಗಳು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂಬ ಮೋದಿ ಹೇಳಿಕೆ ಕಾಂಗ್ರೆಸಿನ ‘ತೆರೆದ ಪುಸ್ತಕ’ದಲ್ಲೇ ಇವೆ ಎಂದಂತಾಯಿತು!
‘ತೆರೆದ ಪುಸ್ತಕ’ ಮತ್ತಷ್ಟನ್ನು ತೋರಿಸುತ್ತವೆ. ಕಾರ್ಯಪ್ಪ ಜನರಲ್ ಆಗಿದ್ದಷ್ಟೂ ದಿನ ಸರ್ಕಾರ ಸೈನ್ಯದ ಯಾವ ಬೇಡಿಕೆಯನ್ನೂ ಈಡೇರಿಸಲಿಲ್ಲ! ಬ್ರಿಟಿಷ್ ಸೈನ್ಯದಲ್ಲಿ ಏನಿತ್ತೋ ನೆಹರೂ ಕಾಲದಲ್ಲೂ ಅವು ಮಾತ್ರ ಇದ್ದವು. ದಿನೇ ದಿನೇ ಜನಪ್ರೀಯರಾಗುತ್ತಿದ್ದ ಕಾರ್ಯಪ್ಪನವರ ಬಳಿ ಮೂರೂ ಮಹಾಪಡೆಗಳ ಅಧಿಕಾರವಿದ್ದುದನ್ನು ನೆನೆದು ನೆಹರೂ ಬೆಚ್ಚಿಬೀಳುತ್ತಿದ್ದರು. ಹೇಗಾದರೂ ಆ ಅಧಿಕಾರವನ್ನು ಮೊಟಕುಗೊಳಿಸಬೇಕೆಂದು ಸದಾ ಹವಣಿಸುತ್ತಿದ್ದರು. ಆದರೆ ಕಾರ್ಯಪ್ಪಅಧಿಕಾರದಲ್ಲಿರುವವರೆಗೂ ಅದು ಸಾಧ್ಯವಿರಲಿಲ್ಲ. ಅಲ್ಲದೆ ಮೈಮನಸ್ಸುಗಳಲ್ಲಿ ಇನ್ನೂ ಕಸುವಿದ್ದ ಕಾರ್ಯಪ್ಪಸದ್ಯದಲ್ಲಿ ಸ್ವಯಂ ನಿವೃತ್ತಿಯಾಗಲಾರದೆಂಬುದೂ ನೆಹರೂಗೆ ಗೊತ್ತಿತ್ತು. ಅದಕ್ಕಾಗಿ ನೆಹರೂ ಒಂದು ಹೂಟ ಹೂಡಿದರು. ಹೇಗೋ ನಾಲ್ಕು ವರ್ಷಗಳನ್ನು ದೂಡಿದ ನೆಹರೂ ಅಕಾಲದಲ್ಲಿ ಅವರನ್ನು ನಿವೃತ್ತಿಗೊಳಿಸಿಬಿಟ್ಟರು! ದೇಶದ ಮುಂದೆ ಅದನ್ನು ಮರೆಮಾಚಲು ಆಸ್ರೈಲಿಯಾ-ನ್ಯೂಜಿಲೆಂಡ್‌ಗಳ ರಾಯಭಾರಿಗಳನ್ನಾಗಿ ಅಟ್ಟಿದರು. ನೆಹರೂರ ಕುತಂತ್ರಿ ಬುದ್ಧಿ ತಿಳಿದಿದ್ದರೂ ಕಾರ್ಯಪ್ಪನವರು ಸೈನ್ಯದ ಸ್ಥೈರ್ಯ ಕುಸಿಯಬಾರದೆಂದು ಅದನ್ನು ಸಹಿಸಿಕೊಂಡರು. ಒಂದೇ ಏಟಿಗೆ ಮೂರೂ ಪಡೆಗಳಿಗೆ ತಮ್ಮ ಬಾಲಬಡುಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ ನೆಹರೂ ನಿಟ್ಟುಸಿರುಬಿಟ್ಟರು. ಇವೆಲ್ಲವೂ ನಡೆಯುವಾಗಲೂ ಅವರ ಬಲಗೈಯಂತಿದ್ದವನು ಅದೇ ಹಿಮ್ಲರ್‌ನಂಥಾ ಬಲವಂತ್ ಸಿಂಗ್. ಹಾಗಾದರೆ ಪ್ರಧಾನಮಂತ್ರಿಗಳ ಹೇಳಿಕೆಯಲ್ಲಿ ತಪ್ಪೇನಿದೆ? ಕಾರ್ಯಪ್ಪನವರು ೫೪ನೇ ವಯಸ್ಸಿನಲ್ಲಿ ಮಹಾದಂಡನಾಯಕ ಸ್ಥಾನದಿಂದ ಕೆಳಗಿಳಿದಿದ್ದು ಸುಳ್ಳೇ?
ಮುಂದೆ ೧೯೫೭ರ ಹೊತ್ತಿಗೆ ತಿಮ್ಮಯ್ಯನವರ ಜನಪ್ರೀಯತೆ ವಿಶ್ವವ್ಯಾಪಿಯಾಗದೇ ಇರುತ್ತಿದ್ದರೆ ಕಾವೇರಮ್ಮನಾಣೆಗೂ ಅವರು ಸೇನಾಮುಖ್ಯಸ್ಥರಾಗುತ್ತಿರಲಿಲ್ಲ. ಅದೊಂದೇ ಕಾರಣಕ್ಕೆ ನೆಹರೂ ಒಲ್ಲದ ಮನಸ್ಸಿನಿಂದ ತಿಮ್ಮಯ್ಯನವರನ್ನು ಸೇನಾಮುಖ್ಯಸ್ಥರನ್ನಾಗಿ ಮಾಡಿದರು. ಅಂದು ಕಾರ್ಯಪ್ಪನವರನ್ನು ಹೇಗೆ ಆಟವಾಡಿಸಿದರೋ ಅದಕ್ಕಿಂತ ಹತ್ತುಪಟ್ಟು ಕಿರುಕುಳವನ್ನು ನೆಹರೂ ಮತ್ತು ತಂಡ ತಿಮ್ಮಯ್ಯನವರಿಗೆ ಕೊಟ್ಟಿತು. ಗಡಿ ಗಟ್ಟಿಯಾಗಲಿ ಎಂದಾಗ ತುಂಬಿದ ಸಭೆಯಲ್ಲಿ ತಿಮ್ಮಯ್ಯರನ್ನು ಅವಮಾನಿಸಿದರು, ಶಸ್ತ್ರಾಸ್ತ್ರ ಒದಗಿಸಿ ಎಂದಾಗ ಹಿಂಸೆಯನ್ನು ಪ್ರಚೋದಿಸುತ್ತಿದ್ದಾನೆ ಎಂದು ಹಂಗಿಸಿದರು. ಸೈನಿಕರಿಗೆ ಯೋಗ್ಯ ಉಡುಪುಗಳನ್ನಾದರೂ ನೀಡಿ ಎಂದಾಗ ಈಗಿರುವುದೇ ಹೆಚ್ಚಾಗಿದೆ ಎಂದು ಉದ್ಧಟತನ ಮೆರೆದರು. ಕೊನೆಗೆ ಚೀನಾ ಬಗ್ಗೆ ಎಚ್ಚರದಿಂದಿರಬೇಕು ಎಂದಾಗ ಬ್ರಿಟಿಷ್ ಕಾಲದ ಮನುಷ್ಯ ಎಂದು ಹೀಯಾಳಿಸಿದರು. ಸುಸಂಸ್ಕೃತ ಕುಟುಂಬದಿಂದ ಬಂದಿದ್ದ, ಸೋಲ್ಜರ್ಸ್ ಜನರಲ್ ಎಂದು ಕರೆಸಿಕೊಳ್ಳುತ್ತಿದ್ದ ತಿಮ್ಮಯ್ಯನವರು ಇವೆಲ್ಲದರಿಂದ ಬೇಸತ್ತು ನೆಹರೂ ಮುಖದ ಮೇಲೆ ರಾಜೀನಾಮೆ ಬಿಸಾಕಿದರು. ಸ್ವಾಭಿಮಾನಿಯ ಧೈರ್ಯಕ್ಕೆ ಹೆದರಿದ ನೆಹರೂ ಪುಸಲಾಯಿಸಿ ರಾಜಿನಾಮೆ ಹಿಂಪಡೆದರು. ಕೆಲವೇ ತಿಂಗಳುಗಳಲ್ಲಿ ತಿಮ್ಮಯ್ಯ ನಿವೃತ್ತಿಯೂ ಆದರು. ಮುಂದೆ ನಡೆಯಬಾರದ್ದು ನಡೆಯಿತು. ನೆಹರೂ ತಿಮ್ಮಯ್ಯನವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೂ ವಿಶ್ವಸಂಸ್ಥೆ ಅವರನ್ನು ಶಾಂತಿಪಾಲನಾ ಪಡೆಯ ಜನರಲ್ ಆಗಿ ನೇಮಿಸಿ ಸೈಪ್ರಸ್ಸಿಗೆ ಕಳುಹಿಸಿತು. ದೊಡ್ಡ ದೇಶವೊಂದರ, ಸುಮಾರು ೧೦ ಲಕ್ಷ ಯೋಧರ ಮುಖ್ಯಸ್ಥರಾಗಿದ್ದ ತಿಮ್ಮಯ್ಯ ಪುಟ್ಟ ದೇಶ ಸೈಪ್ರಸ್ಸಿನಲ್ಲಿ ಕೇವಲ ೫೦೦೦ ಯೋಧರ ಮುಖ್ಯಸ್ಥರಾದರು. ಕೊನೆಗೆ ಅಲ್ಲಿಯೇ ಮರಣಹೊಂದಿದರು. ಹೀಗೆ ತಿಮ್ಮಯ್ಯನವರಿಗೆ ಹಿಂಸೆ ಕೊಟ್ಟ ನೆಹರೂ ಹಿಂದಿದ್ದವನು ಆಗಿನ ರಕ್ಷಣಾ ಮಂತ್ರಿ, ಮತ್ತೊಬ್ಬ ಹಿಮ್ಲರನಂತಿದ್ದ ಕೃಷ್ಣ ಮೆನನ್. ಮೋದಿ ಹೇಳಿದ ಯಾವ ಮಾಹಿತಿ ತಪ್ಪಾಗಿತ್ತು? ‘ತೆರೆದ ಪುಸ್ತಕ’ದಲ್ಲೂ ಸುಳ್ಳಿನ ಅಕ್ಷರಗಳೇ? ಕೊನೆಗೆ ಸೈಪ್ರಸ್ಸಿನಿಂದ ಬಂದ ತಿಮ್ಮಯ್ಯರ ಕಳೆಬರವನ್ನೂ ಕೂಡಾ ಕಾಂಗ್ರೆಸ್ ಸರ್ಕಾರ ಗೌರವದಿಂದ ನಡೆಸಿಕೊಳ್ಳಲಿಲ್ಲ. ಅಂದಿನ ನಗರಪಾಲಿಕೆಯ ವಿಲ್ಸನ್‌ಗಾರ್ಡನ್ ಸ್ಮಶಾನದಲ್ಲಿ ಅನಾಥ ಶವವನ್ನು ಮಣ್ಣುಮಾಡುವಂತೆ ಸಂಸ್ಕಾರ ಮಾಡಲಾಯಿತು. ಮೋದಿ ಹೇಳಿದ್ದರಲ್ಲಿ ತಪ್ಪೇನಿದೆ?
ಕಾಂಗ್ರೆಸಿನ ‘ತೆರೆದ ಪುಸ್ತಕ’ವನ್ನು ನೋಡಿದರೆ ನರೇಂದ್ರ ಮೋದಿಯವರು ಹೇಳಿದ್ದು ಕೊಂಚ ಕಡಿಮೆಯಾಯಿತೆಂದೇ ಹೇಳಬೇಕು. ಏಕೆಂದರೆ ಕಾರ್ಯಪ್ಪ ನಿವೃತ್ತಿಯಾಗಿ ಬಂದನಂತರ ಮಡಿಕೇರಿಯಿಂದ ನೆಹರೂಗೆ ಬರೆಯುತ್ತಿದ್ದ ಪತ್ರಗಳಿಗೆ ಉತ್ತರ ಬರೆಯದೇ ಇದ್ದದ್ದನ್ನು ಮೋದಿ ಹೇಳಿರಲಿಲ್ಲ. ಸೇವಾ ಹಿರಿತನವನ್ನು ಪರಿಗಣಿಸದೆ ಮಾಡುತ್ತಿದ್ದ ನೇಮಕಗಳನ್ನು, ಸೇನೆಯ ಆವಶ್ಯಕತೆಯೇ ಇಲ್ಲ ಎಂದಿದ್ದನ್ನು ಮೋದಿ ಹೇಳಲಿಲ್ಲ. ಸೈನ್ಯವನ್ನು ಚಿಲ್ಲರೆ ಸಂಬಳಕ್ಕೆ ದುಡಿಸಿಕೊಂಡದ್ದನ್ನು, ಕಾಶ್ಮೀರವನ್ನು ವಿವಾದಾತ್ಮಕ ರಾಜ್ಯ ಮಾಡಿದ ಎಡವಟ್ಟನ್ನು ಅವರು ಹೇಳಲಿಲ್ಲ. ಸೈನ್ಯವನ್ನು ಜೀತದಂತೆ ಕಾಣುತ್ತಿದ್ದ ಇಂದಿರಾ ಅಹಂಕಾರವನ್ನು, ಶ್ರೀಲಂಕಾಕ್ಕೆ ಪಡೆ ಕಳುಹಿಸಿ ಅಮಾನುಷವಾಗಿ ಬಲಿಕೊಟ್ಟಿದ್ದು ಹೇಳಲಿಲ್ಲ. ಇಂದಿನವರೆಗೂ ಯುದ್ಧ ವಿಮಾನಗಳನ್ನೂ, ವಿಮಾನ ವಾಹಕ ಹಡಗುಗಳನ್ನೂ ಉತ್ಪಾಧಿಸಲಾಗದ್ದಕ್ಕೆ ಕಾರಣವನ್ನು, ಫಿಲ್ಡ್ ಮಾರ್ಷಲ್ ಆಗಿದ್ದರೂ ಮಾಣಿಕ್ ಷಾರ ಪಿಂಚಣಿಯನ್ನು ತಡೆಹಿಡಿದಿದ್ದನ್ನು, ರಣರಂಗದಲ್ಲಿ ಬಲಿಯಾದವರ ಮೃತದೇಹಗಳಿಗೆ ಗೌರವ ಕೊಡದ ಪರಂಪರೆಯನ್ನು ಪ್ರಾರಂಭಿದ್ದನ್ನು, ರಕ್ಷಣಾ ಸಚಿವಾಲಯವನ್ನು ಯೋಗ್ಯರಿಗೆ ಕೊಡಲಾರದ ಅವಿವೇಕತನವನ್ನು ಮೋದಿ ಹೇಳಲಿಲ್ಲ. ಅಡ್ಮಿರಲ್ ಜೋಷಿ ಏಕಾಏಕಿ ರಾಜಿನಾಮೆ ನೀಡಿದ್ದೇಕೆ? ಲೆ.ಜ. ಎಸ್.ಕೆ ಸಿನ್ಹಾ, ಲೆ.ಜ. ಭಗತ್, ಲೆ.ಜ. ಚಂದ್ರಶೇಖರರನ್ನು ಸೇನಾ ಮುಖ್ಯಸ್ಥನನ್ನಾಗಿ ಮಾಡಲಿಲ್ಲವೇಕೆ? ಏರ್ ಮಾರ್ಷಲ್ ಶಿವದೇವ್, ಏರ್ ಮಾರ್ಷಲ್ ಡೇಯಂಥವರ ಸೇವಾ ಹಿರಿತನಕ್ಕೆ ಏಕೆ ಬೆಲೆ ಕೊಡಲಿಲ್ಲ, ವಾಯುಪಡೆಯ ಮುಖ್ಯಸ್ಥರನ್ನಾಗದಂತೆ ತಡೆದ ಕಾಣದ ಕೈಗಳಾವುವು ಎಂಬುದನ್ನು ಮೋದಿ ಕೇಳಿರಲಿಲ್ಲ.
ಕಾರ್ಯಪ್ಪ-ತಿಮ್ಮಯ್ಯರನ್ನು ಕಸದಂತೆ ಕಂಡ ಒಂದೇ ಸಂಗತಿಗೆ ಕಾಂಗ್ರೆಸಿಗರ ‘ತೆರೆದ ಪುಸ್ತಕ’ ಹರಿದುಹೋಗುತ್ತಿದೆಯೆಂದರೆ, ಮುಧೋಳ ನಾಯಿಗಳ ಪ್ರಸ್ಥಾಪಕ್ಕೂ ಅವರು ಬೆತ್ತಲಾಗುತ್ತಾರೆಂದರೆ ದೇಶಕ್ಕೆ ಕಾಂಗ್ರೆಸಿನ ವ್ಯಾಲಿಡಿಟಿ ಮುಗಿದಿದೆ ಎಂದೇ ಅರ್ಥ.
Like this:
Like ಲೋಡ್ ಆಗುತ್ತಿದೆ...
Related