ವಿಷಯದ ವಿವರಗಳಿಗೆ ದಾಟಿರಿ

ಮೇ 11, 2018

ಹಿಟ್ಲರನ ಗೊಬೆಲ್ಸ್ ಮತ್ತು ನೆಹರೂವಿನ ಗಂಜಿಗಿರಾಕಿಗಳು

‍ನಿಲುಮೆ ಮೂಲಕ

 – ರಾಕೇಶ್ ಶೆಟ್ಟಿ

‘ಸುಳ್ಳನ್ನೇ ಪದೇ ಪದೇ ಜನರ ಕಿವಿಗೆ ಬೀಳುವಂತೆ ಬೊಬ್ಬೆ ಹೊಡೆಯುತ್ತಾ ಹೋದರೆ ಅದೇ ಸತ್ಯವಾಗುತ್ತ ಹೋಗುತ್ತದೆ’ ಹೀಗೊಂದು ಮಾತನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸರ್ಕಾರದಲ್ಲಿ Public Enlightenment & Propaganda ಸಚಿವನಾಗಿದ್ದ ಗೊಬೆಲ್ಸ್ ಹೇಳಿದ್ದನೆಂಬ ಮಾತಿದೆ.ಈ ಮಾತನ್ನು ಗೊಬೆಲ್ಸ್ ಹೇಳಿದ್ದನೋ ಇಲ್ಲವೋ,ಆದರೆ ಈ ಮಾತು ಪ್ರಾಕ್ಟಿಕಲಿ ಸತ್ಯವಂತೂ ಹೌದು.ಬೇಕಿದ್ದರೆ ಗೊಬೆಲ್ಸ್ ಹೇಳಿಕೊಟ್ಟ ಈ ಸೂತ್ರವನ್ನು ಬಳಸುತ್ತಿರುವ ಭಾರತದ ಗಂಜಿಗಿರಾಕಿಗಳನ್ನು ಈ ಬಗ್ಗೆ ಕೇಳಿ ನೋಡಿ. ಉದಾಹರಣೆಗೆ, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಾವೇಶವೊಂದರಲ್ಲಿ ನರೇಂದ್ರ ಮೋದಿಯವರು ಮಾತನಾಡುತ್ತ ‘ ಲೂಟಿಕೋರ-ಕಳ್ಳರು ವಿದೇಶದ ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣವಿಟ್ಟಿದ್ದಾರೆಂದರೆ,ಅದನ್ನು ವಾಪಸ್ ತಂದರೆ ಭಾರತದ ಪ್ರತಿ ಬಡವನಿಗೆ ೧೫ ಲಕ್ಷದಷ್ಟು ಹಣವನ್ನು ಉಚಿತವಾಗಿ ಕೊಡುವಷ್ಟಿದೆ’ ಎಂದಿದ್ದರು(ಈ ವಿಡಿಯೋ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ).ಇದೇ ಮಾತನ್ನು ಈಗ ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು ‘ಮೋದಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಕೌಂಟಿಗೆ ೧೫ ಲಕ್ಷ ಹಣ ಹಾಕ್ತಿನಿ ಅಂದಿದ್ರು.ಹಾಕಿಯೇ ಇಲ್ಲ’ ಎಂದು ಊರಿಡಿ ಬೊಬ್ಬೆ ಹೊಡೆಯಲು ಶುರುವಿಟ್ಟುಕೊಂಡರು. ಈಗ ಈ ಸುಳ್ಳು ಯಾವ ಪರಿ ಹರಡಿದೆಯೆಂದರೆ,ಮೋದಿಯನ್ನು ವಿರೋಧಿಸಲು ಕಾರಣವೇ ಸಿಗದವರು ಎಲ್ರಿ ನಮ್ಮ ೧೫ ಲಕ್ಷ ಎಂದು ಕೇಳುವಷ್ಟು. ವಿಚಿತ್ರವೆಂದರೆ,ಇದು ಗಂಜಿಗಿರಾಕಿಗಳ ಅಪಪ್ರಚಾರದ ಕ್ಯಾಮ್ಪೇನು ಎಂದು ಹೇಳಬೇಕಾದವರೇ ತಡಬಡಾಯಿಸುವಂತಾಗಿದೆ.ಇದೇ ನೋಡಿ GGG Lying Formula (ಗಂಜಿ ಗಿರಾಕಿ ಗೊಬೆಲ್ಸ್ ಸುಳ್ಳಿನ ಸೂತ್ರ)ದ ತಾಕತ್ತು.

ಭಾರತದ ಗಂಜಿಗಿರಾಕಿಗಳ ಗೊಬೆಲ್ಸ್ ಕಾರ್ಯಾಚರಣೆಯ ಬಗ್ಗೆ ಮಾತನಾಡುವ ಮುನ್ನ, ಜರ್ಮನಿಯ ಗೊಬೆಲ್ಸ್ ಪರಿಚಯ ಮಾಡಿಕೊಳ್ಳಬೇಕು,ಆಗ ಅವರಿಬ್ಬರ ಸಾಮ್ಯತೆ ಅರ್ಥವಾದೀತು. ಜರ್ಮನಿಯಲ್ಲಿ National Socialist German Workers’ (Nazi) Party ಹಿಟ್ಲರನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ, ಪ್ರಪೋಗ್ಯಾಂಡ ಸಚಿವನಾಗಿ ಬಂದವನು ಗೊಬೆಲ್ಸ್. ಹೈಡಲ್ ಬರ್ಗ್ ವಿವಿಯಿಂದ ಸಾಹಿತ್ಯದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದ ಚಾಣಾಕ್ಷ ಈತ. ಈತನಿಗೆ ಯಾವುದೇ ಸುಳ್ಳನ್ನು ಸತ್ಯವೆಂದು ಓದುಗರನ್ನು ಮರುಳು ಮಾಡುವ ಬರವಣಿಗೆ ಒಲಿದಿತ್ತು. ಇದರ ಜೊತೆಗೆ ಸಾಹಿತ್ಯ,ಸಿನಿಮಾ,ಕಲೆ ಇವನ ಆಸಕ್ತಿಕರ ಕ್ಷೇತ್ರಗಳು. ಇಷ್ಟೆಲ್ಲಾ ಆಸಕ್ತಿ ಮತ್ತು ಸಾಮರ್ಥ್ಯವಿದ್ದ  ವ್ಯಕ್ತಿ ದೇಶದ ಸಾಂಸ್ಕೃತಿಕ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಸಮರ್ಥ ವ್ಯಕ್ತಿಯಾಗಿ ಹಿಟ್ಲರನಿಗೆ ಅನ್ನಿಸಿದ್ದು ಸಹಜವೇ. ಅಧಿಕಾರಕ್ಕೆ ಬಂದ ಗೊಬೆಲ್ಸ್ ಕೂಡ ಹಿಟ್ಲರ್ ಸುತ್ತ ನಕಲಿ ಪ್ರಭಾವಳಿಯನ್ನು ಸೃಷ್ಟಿಸುವಲ್ಲಿ ಸಫಲನಾಗಿದ್ದ,  ಇವನಿಲ್ಲದಿದ್ದರೆ ಜರ್ಮನಿ ಮತ್ತೊಮ್ಮೆ ಗೌರವಯುತವಾಗಿ ತಲೆ ಎತ್ತಲಾರದು ಎಂದ, ಜನರು ನಂಬಿದರು.

ಯಹೂದಿಗಳ ಮೇಲೆ ವಿಪರೀತ ದ್ವೇಷಕಾರುತ್ತಿದ್ದ ಇವನ ಪಕ್ಷದ ನಿಲುವಿನಂತೆ ಯಹೂದಿ ಲೇಖಕರು,ಕಲಾವಿದರಿಗೆ,ಬುದ್ಧಿಜೀವಿಗಳಿಗೆ ಬಹಿಷ್ಕಾರ ಹಾಕಿಸಿದ,ಅವರ ಪುಸ್ತಕಗಳನ್ನು ಸುಟ್ಟು ಹಾಕಿಸಿದ,ನಾಟಕ,ಕಲೆಗಳನ್ನು ಜರ್ಮನಿಯಿಂದ ಹೊರಗೆಹಾಕಿಸಿದ.  ತನ್ನ ಪಕ್ಷದ ತುತ್ತೂರಿ ಊದಬಲ್ಲ ಗಂಜಿಗಿರಾಕಿಗಳನ್ನೇ ಸಾಹಿತಿಗಳು,ಕಲಾವಿದರೆಂದು,ಆಯಕಟ್ಟಿನ ಹುದ್ದೆಗಳ ಮೂಲಕ ಮನ್ನಣೆ ನೀಡಿ ಇವರೇ ಬುದ್ಧಿಜೀವಿಗಳೆಂದು ಜರ್ಮನ್ನರನ್ನು ನಂಬಿಸಿದ.ಯಾವುದೇ ನಕಲಿ ಪ್ರಭೆಗಳು ಒಂದಲ್ಲ ಒಂದು ದಿನ ಕಳಚಲೇ ಬೇಕಿತ್ತಲ್ಲ,ಎರಡನೇ ವಿಶ್ವ ಯುದ್ಧದಲ್ಲಿ ಸೋತು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಗೊಬೆಲ್ಸ್ ತನ್ನ ಎರಡನೇ ಹೆಂಡತಿ ಮಾಲ್ಡಾ ಹಾಗೂ ತನ್ನ ಆರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಆತ್ಮಹತ್ಯೆ ಮಾಡಿಕೊಂಡ. ತನ್ನ ಬುದ್ಧಿಮತ್ತೆಯನ್ನು ಸಮಾಜದ ಒಳಿತಿಗಲ್ಲದೇ, ತನ್ನನ್ನು ಸಾಕಿಕೊಂಡವನ ಗಂಜಿಯ ಋಣ ತೀರಿಸಿಲಿಕ್ಕಾಗಿ ಸಮಾಜ ನಾಶಕ್ಕಾಗಿ ಬಳಸಿಕೊಂಡವನೇನೋ ದೈಹಿಕವಾಗಿ ಹೊರಟನೇನೋ ನಿಜ.ಆದರೆ,ಹೋಗುವ ಮುನ್ನ GGG Lying Formula (ಗಂಜಿ ಗಿರಾಕಿ ಗೊಬೆಲ್ಸ್ ಸುಳ್ಳಿನ ಸೂತ್ರ)ವನ್ನು ಇಲ್ಲಿಯೇ ಬಿಟ್ಟು ಹೋದ. ಹಾಗೆ ನೋಡುವುದಾದರೆ, ಈ ಸೂತ್ರದ ಸಂಪೂರ್ಣ ಕ್ರೆಡಿಟನ್ನು ಗೊಬೆಲ್ಸ್ ಒಬ್ಬನಿಗೆ ಕೊಡುವುದು ಸರಿಯಾಗಲಾರದು. ಹಿಟ್ಲರ್ ಸಮಕಾಲೀನನಾದ ಕಮ್ಯುನಿಸ್ಟ್ ಸರ್ವಾಧಿಕಾರಿ ರಷ್ಯಾದ ಸ್ಟಾಲಿನ್ ಕಾಲದಲ್ಲಿಯೂ ಈ ಫಾರ್ಮುಲಾ ಬಳಕೆಯಾಗಿತ್ತು. ಕ್ರೌರ್ಯ ಮತ್ತು ನರಮೇಧದಲ್ಲಿ ಹಿಟ್ಲರನನ್ನ ಮೀರಿಸಿದ್ದವನು ಸ್ಟಾಲಿನ್. ಆದರೆ ಕಮ್ಯುನಿಸ್ಟ್ ಗೊಬೆಲ್ಸ್ ಗಳು ಈಗಲೂ ಸೃಷ್ಟಿಸಿರುವ ನಕಲಿ ಪ್ರಭೆ ಹೇಗಿದೆಯೆಂದರೆ, ಸರ್ವಾಧಿಕಾರಿಗಳು ಎಂದ ತಕ್ಷಣ ಜನರ ಕಣ್ಣಿಗೆ ಕಟ್ಟುವುದು ಹಿಟ್ಲರ್ ಮುಖ ಕಾಣಿಸುತ್ತದೆಯೇ ಹೊರತು ಸ್ಟಾಲಿನ್ನದಲ್ಲ! ಇದನ್ನು ಕಮ್ಯುನಿಸ್ಟ್ ಗಂಜಿ ಗೊಬೆಲ್ಸ್ ಗಳ ಸಾಧನೆ ಎಂದರೂ ತಪ್ಪಲ್ಲವೇನೋ? ಇದನ್ನು ಸಾಧನೆ ಎನ್ನದೇ ಮತ್ತಿನ್ನೇನು ಹೇಳೋಣ ಹೇಳಿ.

ಸರ್ವಾಧಿಕಾರಿಗಳಾದ ಹಿಟ್ಲರ್-ಸ್ಟಾಲಿನ್ ಕುರಿತು ಇರುವ ಒಂದು ಹಳೇ ಜೋಕ್ ಅನ್ನು ಉಲ್ಲೇಖಿಸಿದರೆ ಇವರಿಬ್ಬರ ನಡುವಿನ ವ್ಯತ್ಯಾಸಕ್ಕೊಂದು ಉದಾಹರಣೆಯಾದೀತು.

ಪ್ರ : ೨೧೦೦ರ ಭವಿಷ್ಯದ ಎನ್ಸೈಕ್ಲೊಪಿಡಿಯಾದಲ್ಲಿ ಹಿಟ್ಲರ್ ಹಾಗೂ ಸ್ಟಾಲಿನ್ ಬಗ್ಗೆ ಏನೆಂದು ಬರೆಯಬಹುದು?

ಉ : ಸ್ಟಾಲಿನ್ ಕಾಲದಲ್ಲಿದ್ದ ಸಣ್ಣಪುಟ್ಟ ಪಾಳೆಗಾರಿಕೆಯ ಸರ್ವಾಧಿಕಾರಿಗಳಲ್ಲಿ ಹಿಟ್ಲರ್ ಒಬ್ಬನಾಗಿದ್ದ…

ಹಿಟ್ಲರ್ ಯಹೂದಿಗಳನ್ನು ದ್ವೇಷಿಸುತ್ತಿದ್ದ,ಅವರನ್ನೂ ಹಾಗೂ ತನ್ನ ರಾಜಕೀಯ ವಿರೋಧಿಗಳನ್ನು ನಾಮಾವಶೇಷ ಮಾಡಬೇಕೆಂದು ಬಯಸುತ್ತಿದ್ದ,ಜೊತೆಗೆ ತನ್ನ ಪಕ್ಷದ ಐಡಿಯಾಲಜಿಯನ್ನೇ ಎಲ್ಲಾ ದೇಶಗಳಿಗೂ ಹಬ್ಬಿಸುವ ಹವಣಿಕೆಯಲ್ಲಿದ್ದ,ಇತ್ತ ಸ್ಟಾಲಿನ್ ಮಾಡುತ್ತಿದ್ದಿದ್ದು ಅದನ್ನೇ ತಾನೇ. ತನ್ನ ಸೋವಿಯೆಟ್ ಯೂನಿಯನ್ನಿನಲ್ಲಿ ಮಿಲಿಯನ್ಗಟ್ಟಲೆ ಜನರನ್ನು Ethnic Cleansing ಮಾಡಿದ್ದ.ರಾಜಕೀಯ ದ್ವೇಷಿಗಳ ಪ್ರಾಣ ತೆಗದು ರಣಹಿಂಸೆ ಕೊಡುವ ಕ್ಯಾಮ್ಪಿನಲ್ಲಿ ಇಡುತ್ತಿದ್ದ. ಆತನ ದ್ವೇಷ ಯಾವ ಮಟ್ಟಿಗೆ ಇತ್ತೆಂದರೆ,ಖುದ್ದು ಕಮ್ಯುನಿಸ್ಟನೇ ಆದರೂ ಸ್ಟಾಲಿನ್ನನ ಜೊತೆಗೆ ಕಮ್ಯುನಿಸಂನ್ನು ವಿಶ್ವದಲ್ಲಿ ಹರಡುವ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಟ್ರಾಟ್ಸ್ಕಿಯನ್ನು ದಶಕಗಳ ಕಾಲ ಹೊರದೇಶದಲ್ಲಿ ಹುಡುಕಾಡಿ ಹತ್ಯೆಮಾಡಿಸಿದವನು ಸ್ಟಾಲಿನ್. ಅಂತಹ ಭೀಕರ ದ್ವೇಷಿಯಾಗಿದ್ದ ಸರ್ವಾಧಿಕಾರಿಯ ಹೆಸರು ಹಿಟ್ಲರನಿಗಿಂತ ಮುಂಚೆ ಕಾಣಿಸದಂತೆ ತಡೆಹಿಡಿಯುವಲ್ಲಿ ಕಮ್ಯುನಿಸ್ಟ್ ಗೊಬೆಲ್ಸ್ ಗಳ ಕೆಲಸ ಪ್ರಮುಖವಾದದ್ದು.ಇದೇ ಕೆಲಸವನ್ನು ಭಾರತದಲ್ಲಿಯೂ ಗಂಜಿ ಗೊಬೆಲ್ಸ್ ಗಳು ಮಾಡಿದ್ದಾರೆ,ಮಾಡಿಕೊಂಡು ಬರುತ್ತಿದ್ದಾರೆ.

ಭಾರತದಲ್ಲಿ ಅಂತಹದ್ದೊಂದು ಗೊಬೆಲ್ಸ್ ಗಂಜಿಕೇಂದ್ರ ಸೃಷ್ಟಿಯಾಗಿದ್ದು ನೆಹರೂ ಕಾಲದಲ್ಲಿ.ತನ್ನ Propaganda ಹರಡುವಲ್ಲಿ ಗೊಬೆಲ್ಸ್ ಅನ್ನು ಮೀರಿಸುವ ಬುದ್ದಿಮತ್ತೆಯಿದ್ದ ನೆಹರೂ  ತಾನು ಬದುಕಿದ್ದಾಗಲೇ ತನ್ನದೇ ಹೆಸರಿಗೆ ತಾನೇ ಭಾರತರತ್ನ ಕೊಟ್ಟುಕೊಂಡು,ತನ್ನದೇ ಹೆಸರಿನಲ್ಲಿ ವಿವಿಯನ್ನು ಸ್ಥಾಪಿಸಿದ ಆತ್ಮರತಿಯುಳ್ಳ ವ್ಯಕ್ತಿ ಮತ್ತು ಆತನ ಕುಟುಂಬದ ಸುತ್ತ ಈ ಗಂಜಿ ಗೊಬೆಲ್ಸ್ ಸೃಷ್ಟಿಸಿದ ನಕಲಿ ಪ್ರಭಾವಳಿಯೇನು ಕಡಿಮೆ ಮಟ್ಟದ್ದಲ್ಲ.ಹಾಗೇ ಸೃಷ್ಟಿಯಾಗುವಂತೆ ನೋಡಿಕೊಂಡಿದ್ದು ಖುದ್ದು ನೆಹರೂ ಹಾಗೂ ನೆಹರೂ ರಾಜಕೀಯ ಆಶ್ರಯದಾತನಂತಿದ್ದ ಆಗಿನ ಸೋವಿಯೆಟ್ ಯೂನಿಯನ್. ಜರ್ಮನಿಯಲ್ಲಿ ನಾಜಿ ಐಡಿಯಾಲಜಿಗಾಗಿ ಕೆಲಸ ಮಾಡುತ್ತಿದ್ದ ಗೊಬೆಲ್ಸ್ ಸೂತ್ರವೇ,ಸೋವಿಯೆಟ್ ಯೂನಿಯನ್ನಿನಲ್ಲಿ ಕಮ್ಯುನಿಸ್ಟ್ ಐಡಿಯಾಲಜಿಗಾಗಿ ಕೆಲಸ ಮಾಡುತ್ತಿತ್ತು. ಆದರೆ ಭಾರತದ ರಾಜಕೀಯ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್-ಕಾಂಗ್ರೆಸ್ ಐಡಿಯಾಲಜಿಗಳು ಜೊತೆಗೆ ಪಲ್ಲಂಗವೇರಿಕೊಂಡು ಈ ಕೆಲಸ ಶುರುವಿಟ್ಟುಕೊಂಡವು. ನೆಹರೂ ಹೆಸರಿನ ವಿವಿಯಲ್ಲಿ,ದೇಶದ ಸಾಂಸ್ಕೃತಿಕ ರಾಜಕಾರಣವನ್ನ ಮುಷ್ಟಿಯಲ್ಲಿಡಬಲ್ಲ ಎಲ್ಲಾ ವಿವಿಗಳು,ಕಲೆ,ನಾಟಕ,ಸಿನಿಮಾ,ಸಾಹಿತ್ಯ,ಇತಿಹಾಸದ ಕುರಿತ ಮಂಡಳಿಗಳಲ್ಲೆಲಾ ಇದೆ ಗಂಜಿ ಗೊಬೆಲ್ಸ್ ಗಳನ್ನು ಕೂರಿಸಲಾಯಿತು.

ಜರ್ಮನಿಯಲ್ಲಿ ಗೊಬೆಲ್ಸ್ ಹೇಗೆ ಯಹೂದಿ ಲೇಖಕರು,ಸಾಹಿತಿಗಳು,ಕಲಾವಿದರನ್ನು ಮೂಲೆಗುಂಪು ಮಾಡಿದ್ದನೋ ಅದೇ ರೀತಿಯಲ್ಲಿ ಭಾರತದ ಗಂಜಿ ಗೊಬೆಲ್ಸ್ ಗಳು ಕಾಂಗಿ-ಕಮ್ಮಿ ಐಡಿಯಾಲಜಿಗೆ ವಿರುದ್ಧವಾಗಿದ್ದ RSS,ರಾಷ್ಟ್ರೀಯ,ಭಾರತೀಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಲೇಖಕರು,ಸಾಹಿತಿಗಳು,ಕಲಾವಿದರು,ಜ್ಞಾನ ಜೀವಿಗಳನ್ನು ಸರ್ಕಾರದ ನೆರವಿನಿಂದಲೇ ದೂರವಿಟ್ಟರು. ರೋಮಿಲಾ ಥಾಪರ್,ಇರ್ಫಾನ್ ಹಬೀಬ್ ರಂತಹ ನೆಹರೂ ಆಸ್ಥಾನ ಪಂಡಿತರಿಂದ ಈ ದೇಶದ ಸುಳ್ಳು ಇತಿಹಾಸ,ಪಠ್ಯಪುಸ್ತಕಗಳನ್ನು ಸೃಷ್ಟಿಸಿಕೊಂಡು ನವಪೀಳಿಗೆಯ ಮೇಲೂ ಗೊಬೆಲ್ಸ್ ಗಳು ಪ್ರಭಾವ ಬೀರಿದರು. ಮಜುಂದಾರ್,ಸೀತಾರಾಮ್ ಗೋಯೆಲ್ ರಂತಹ ನೈಜ ಇತಿಹಾಸಕಾರರನ್ನು ತಮ್ಮ ವಿಚಾರಧಾರೆಗೆ ಹೊಂದುವವರಲ್ಲವೆಂದು ಮೂಲೆಗುಂಪು ಮಾಡಲಾಯಿತು.ಮುಂದಿನ ವಿದ್ಯಾರ್ಥಿ ಪೀಳಿಗೆ ತಮ್ಮದೇ ರಾಜಕೀಯ ಐಡಿಯಾಲಜಿಯಂತೆ ಯೋಚಿಸಬೇಕೆನ್ನುವ ದೃಷ್ಟಿಯಲ್ಲೇ ಪಠ್ಯಗಳನ್ನು ರಚಿಸಿದರು,ಯೋಚಿಸುವಂತಹ ಸಿನಿಮಾ,ನಾಟಕಗಳನ್ನು ಸೃಷ್ಟಿಸಿದರು.

ಈ ಗೊಬೆಲ್ಸ್ ಗಳು ಗಂಜಿಯ ಋಣಸಂದಾಯವನ್ನು ಮಾಡದೇ ಇರುತ್ತಾರೆಯೇ? ಸ್ವತಂತ್ರ ಭಾರತವು ಛಿಧ್ರವಾಗದಂತೆ ಕಾಪಾಡಿದ ದೇವದೂತ ನೆಹರೂ ಎಂಬಂತೆ ಚಿತ್ರಿಸಿದರು.ಅಸಲಿಯತ್ತು ಏನೆಂದರೆ, ಹಿಂದೂ ಬಹುಸಂಖ್ಯಾತರಿರುವಾಗ ಈ ದೇಶವನ್ನು ಯಾವ ಮೂರುಕಾಸಿನವನು ವಿಭಜಿಸಲಾಗದು.ಏಕೆಂದೆಂದರೆ ಸ್ವಭಾವತಃ ನಾವುಗಳು ನಿರ್ಲಿಪ್ತರು.ಆದರೆ ನೆಹರೂ ಸುತ್ತ ನಕಲಿಪ್ರಭೆ ಸೃಷ್ಟಿಸಲು ಕತೆಯೊಂದು ಬೇಕಲ್ಲ. ಇದೆ ಕಾರಣಕ್ಕಾಗಿ ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್,ದೊಡ್ಡ ಸೈನ್ಯವನ್ನೇ ಕಟ್ಟಿ ಬ್ರಿಟಿಷರ ಬೆನ್ನುಮೂಳೆಯಲ್ಲಿ ಚಳುಕು ಮೂಡಿಸಿ,ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಶುರುಮಾಡುವ ಅನಿವಾರ್ಯತೆ ತಂದಿಟ್ಟ ನೇತಾಜಿ ಸುಭಾಷ್ ಚಂದ್ರ ಬೋಸ್,ದೇಶದ ಯುವಜನತೆಯ ಕ್ರಾಂತಿಯಕಿರಣದಂತಿದ್ದ ಭಗತ್ ಸಿಂಗ್,ಚಂದ್ರಶೇಖರ್ ಆಜಾದ್ ರಂತಹ ಎಲ್ಲಾ ಕ್ರಾಂತಿಕಾರಿಗಳ ಹೆಸರನ್ನು ಒಂದೆರಡು ಸಾಲಿನ ಪರಿಚಯಕ್ಕಷ್ಟೇ ಸೀಮಿತಗೊಳಿಸಲಾಯಿತು.ಶ್ಯಾಮ್ ಪ್ರಸಾದ್ ಮುಖರ್ಜಿ,ದೀನ್ ದಯಾಳ್ ಉಪಾಧ್ಯಾಯರ ಕೊಲೆಯ ಬಗ್ಗೆಯೂ ಸದ್ದಾಗದಂತೆ ಮ್ಯಾನೇಜ್ ಮಾಡಲಾಯಿತು. ಖುದ್ದು ನೆಹರೂ ಅಂಬೇಡ್ಕರ್ ,ಜನರಲ್ ತಿಮ್ಮಯ್ಯ ಅವರಿಗೆ ಅವಮಾನ ಮಾಡಿ ರಾಜೀನಾಮೆ ನೀಡಿ ಹೋಗುವಂತೆ ಮಾಡಿದ್ದನ್ನು ಗೊಬೆಲ್ಸ್ ಗಳು ಮುಚ್ಚಿಟ್ಟುಕೊಂಡು ಬಂದಿದ್ದರು. ಸತ್ಯ ಎನ್ನುವ ಸೂರ್ಯ ಎಂದಾದರೊಮ್ಮೆ ಉದಯಿಸದೇ ಇರುತ್ತಾನೆಯೇ? ಆ ಸತ್ಯವೆಲ್ಲ ಇಂದು ಬಯಲಾಗಿದೆ.ಆದರೆ ಗಂಜಿ ಗೊಬೆಲ್ಸ್ ಗಳಿಗೆ ಮುಖ ಮುಚ್ಚಿಕೊಂಡು ಓಡಾಡುವಷ್ಟೇನು ಮಾನ-ಮರ್ಯಾದೆ ಇದ್ದಂತಿಲ್ಲ.ಅವರ ಸುಳ್ಳಿನ ಪ್ರಚಾರಗಳು ಈಗಲೂ ಮುಂದುವರೆದಿದೆ.

ನೆಹರೂ ಸತ್ತ ನಂತರ ಇಂದಿರಾ,ಇಂದಿರಾ ನಂತರ ರಾಜೀವ್,ರಾಜೀವ್ ನಂತರ ಸೋನಿಯಾ ಸುತ್ತ ನಕಲಿ ಪ್ರಭೆ ಸೃಷ್ಟಿ ಮಾಡಿಕೊಂಡು, ಕಾಂಗ್ರೆಸ್ ಹಾಗೂ ನೆಹರೂ ಕುಟುಂಬವಿಲ್ಲದೇ ಹೋದರೇ ದೇಶದಲ್ಲಿ ಪ್ರಜಾಪ್ರಭುತ್ವ,ಸಂವಿಧಾನವೆನ್ನುವುದು ಉಳಿಯುವುದಿಲ್ಲವೆನ್ನುವ ತುತ್ತೂರಿಯನ್ನು ಪದೇ ಪದೇ ಊದುತ್ತಲೇ ಬರುತ್ತಿದ್ದಾರೆ.ಕೇವಲ ನೆಹರೂ ಕುಟುಂಬದ ಹೆಸರು ಮಾತ್ರ ಸಾಕಾಗುವುದಿಲ್ಲವೆನ್ನುವ ಕಾರಣಕ್ಕೆ ‘ಬಸವ-ಬುದ್ಧ-ಅಂಬೇಡ್ಕರ್’ ಎಂದು ಸೇರಿಸಿಕೊಳ್ಳುತ್ತಾರೆ. ಆದರೆ ಹಾಗೆ ಸೇರಿಸಿಕೊಳ್ಳುವಾಗ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಸೋಲಿಸಿ ಮುಗಿಸಿ ಹಾಕಿದ್ದು ಇದೇ ನೆಹರೂ ಅವರ ಕಾಂಗ್ರೆಸ್ ಎನ್ನುವುದನ್ನು ಮರೆಮಾಚುತ್ತಾರೆ. ಕಾಂಗ್ರೆಸ್ಸಿಗೆ ಮತ ನೀಡುವದು ಆತ್ಮಹತ್ಯೆ ಮಾಡಿಕೊಂಡಂತೆ – ಕಮ್ಯುನಿಸಂ ನಲ್ಲಿ ನನಗೆ ನಂಬಿಕೆಯಿಲ್ಲ ಎಂದು ಅಂಬೇಡ್ಕರ್ ಹೇಳಿದ್ದನ್ನು ಕಾಂಗಿ-ಕಮ್ಮಿ ಗಂಜಿ ಗೊಬೆಲ್ಸ್ ಗಳು ಜನರಿಂದ ಮುಚ್ಚಿಡುತ್ತಾರೆ. ನಮ್ಮ ಮೈಸೂರು ಅರಸರ ಪಾರಂಪರಿಕ ಆಚರಣೆ ಪಟ್ಟಾಭಿಷೇಕ ಕಾರ್ಯಕ್ರಮಗಳಾದಾಗ,ಕಣ್ಣಿಗೆ ಹಸಿರುಮೆಣಸಿನಕಾಯಿ ಬಿದ್ದವರಂತೆ ಚೀರಾಡುವ ಇದೇ ಗಂಜಿಗಿರಾಕಿಗಳು, ನೆಹರೂ ಕುಟುಂಬ ಮಾತ್ರವೇ ದೇಶ ಆಳಲು ಸಮರ್ಥವೆಂದು ಬೂಟು ನೆಕ್ಕುತ್ತಿರುತ್ತದೆ. ಈ  ಗೊಬೆಲ್ಸ್ ಗಳಿಗೆ ಭಾರತದಲ್ಲಿ ಪ್ರಬಲ ವಿರೋಧ ಒಡ್ಡಿದ್ದು ಆರೆಸ್ಸೆಸ್ ಮಾತ್ರವೇ. ಇವರ ಗಂಜಿದಾತೆ ಇಂದಿರಾ ಈ ದೇಶದ ಪ್ರಜಾಪ್ರುಭುತ್ವದ ಕತ್ತು ಹಿಸುಕಿದಾಗ,ಬಲಿದಾನ ನೀಡಿ ಪ್ರಜಾಪ್ರಭುತ್ವವನ್ನು ಉಳಿಸಿದವರು ಸಂಘದ ಸ್ವಯಂ ಸೇವಕರು.ತುರ್ತು ಪರಿಸ್ಥಿತಿಯ ಸಮಯವನ್ನು ಬಳಸಿಕೊಂಡು ಸಂವಿಧಾನದ Preamble ಅನ್ನೇ ಬದಲಿಸುವ ಮೂಲಕ, ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಿದ್ದೇ ಇಂದಿರಾ ಗಾಂಧೀ.ಅಂದು ಗಂಜಿಯ ಋಣಕ್ಕಾಗಿ ತೆಪ್ಪಗಿದ್ದ ಗಂಜಿಗಿರಾಕಿಗಳು ಇವತ್ತಿಗೆ ಸಂವಿಧಾನ ಉಳಿಸಿ ಎಂದು ಸುಳ್ಳು ಸುಳ್ಳೇ ಭಯಭೀತಿಯ ವಾತಾವರಣ ಸೃಷ್ಟಿಸಲು ಹೊರಟಿವೆ.

ನೆಹರೂ ಕಾಲದಿಂದಲೂ ತಮ್ಮ ವೈಚಾರಿಕ,ರಾಜಕೀಯ ವಿರೋಧಿಗಳನ್ನು ಗಂಜಿಗಳು ಹೇಗೆ ಮಟ್ಟ ಹಾಕುತ್ತ ಬಂದರೋ ಅವೆಲ್ಲ ಗುಣಲಕ್ಷಣಗಳನ್ನು ಮೋದಿಯವರ ಮೇಲೆ ಆರೋಪಿಸುತ್ತ ಬಂದರು. ಈತ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಬೆಂಕಿ ಬೀಳುತ್ತದೆ ಎಂದರು. ಸಾಬರನ್ನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದರು.ಸಂವಿಧಾನ ಬದಲಾಗುತ್ತದೆ ಎಂದರು. ಗಂಜಿಗಳ ದುರಾದೃಷ್ಟಕ್ಕೆ ಇದ್ಯಾವುದೂ ಆಗಲೇ ಇಲ್ಲ. ಆಗ ಸಿಕ್ಕ ಸಿಕ್ಕ ಕ್ರೈಮುಗಳಿಗೆಲ್ಲ ಜಾತಿ-ರಿಲಿಜನ್ ಬಣ್ಣ ಬಳಿಯಲಾರಂಭಿಸಿದರು. ನೆಹರೂ ಕಾಲದಿಂದ ಸಾಕಿಕೊಂಡು ಬಂದ ಗಂಜಿಗಿರಾಕಿಗಳಿಗೆಲ್ಲ, ಋಣಸಂದಾಯದ ಸಮಯ ಬಂದಿದೆ ನಿಮ್ಮ ಪ್ರಶಸ್ತಿ ಪತ್ರಗಳನ್ನು ಹಿಂತಿರುಗಿಸಿ ಎಂದರು.ದೇಶದಲ್ಲಿ ಇಲ್ಲದಿರುವ ಇಂಟಾಲರೆನ್ಸ್ ಎಂಬ ಗೊಬೆಲ್ಸ್ ಭೂತದ ಸೃಷ್ಟಿಯಾಯಿತು,ಗೊಬೆಲ್ಸ್ ಗಳ ಮಾಫಿಯಾ ಎಷ್ಟು ದೊಡ್ಡದೆಂದರೇ, ಇವರು ಪ್ರತಿಬಾರಿ ಭಾರತದಲ್ಲಿ ಬೊಬ್ಬೆ ಹೊಡೆದಾಗಲೆಲ್ಲ,ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರೊಂದಿಗೆ ಗೊಬೆಲ್ಸ್ ಮಾಫಿಯಾಗಳು ಕೈ ಜೋಡಿಸುತ್ತವೆ. ಕಾಶ್ಮೀರದಲ್ಲಿ ಮುಸ್ಲಿಂ ಹೆಣ್ಣುಮಗಳ ಹತ್ಯೆಯ ವಿಷಯವನ್ನು ಈ ಗೊಬೆಲ್ಸ್ ಮಾಫಿಯಾಗಳು ಭಾರತದಲ್ಲಿ ಸಾಬರಿಗೆ ಉಳಿಗಾಲವಿಲ್ಲವೆಂದು ಚಿತ್ರಿಸಲು ಹೊರಡುತ್ತವೆ.ಅದೇ ಸಮಯಕ್ಕೆ ಹಿಂದೂ ಹೆಣ್ಣುಮಗಳ ಹತ್ಯೆಯ ಬಗ್ಗೆ ಮೌನವಹಿಸುತ್ತವೆ.

ಇಷ್ಟೆಲ್ಲಾ ಅವಾಂತರಗಳನ್ನು ಮಾಡುವ ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು, ತಮ್ಮೆಲ್ಲ ಪಾಪದ ಕೊಡವನ್ನು ಎದುರಾಳಿಗಳಿಗೆ ವರ್ಗಾಯಿಸಿ, RSS ಮತ್ತು ಅದರ ಅನುಯಾಯಿಗಳೇ ಗೊಬೆಲ್ಸ್ ಗಳು ಎಂದು ಜನಮಾನಸದಲ್ಲಿ ಅಚ್ಚು ಒತ್ತಲು ಪ್ರಯತ್ನಿಸುತ್ತಿದೆ. ಆದರೆ ನಿಜವೇನೆಂದರೆ, ಕಾಂಗ್ರೆಸ್ ಎಂಬ ಪಕ್ಷದ ಗೊಬೆಲ್ಸ್ ಗಳಿಗೆ ತಮ್ಮ ವೈಯುಕ್ತಿಕ ಲಾಭ ಮುಖ್ಯವೇ ಹೊರತು ಈ ದೇಶದ ಹಿತ ಮುಖ್ಯವಲ್ಲ.

ಕ್ವಿಟ್ ಇಂಡಿಯಾ ಚಳವಳಿಗೆ ಬೆಂಬಲ ನೀಡದ ಎರಡೇ ಸಂಘಟನೆಗಳು ಮುಸ್ಲಿಂ ಲೀಗ್ ಹಾಗೂ ಕಮ್ಯುನಿಸ್ಟರು. ಕಮ್ಯುನಿಸ್ಟರಿಗೆ ಹಾಗೆ ಸೂಚನೆ ಕೊಟ್ಟಿದ್ದು ಅವರ ಪಿತೃ ದೇಶ ರಷ್ಯಾ.ಇವತ್ತಿಗೆ ಇದೆ ಕಮ್ಯುನಿಸ್ಟರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಭಾಷಣ ಬಿಗಿಯುತ್ತಾರೆ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ ಅವರ ಜೊತೆ ನಿಂತವರು ಇದೇ ಕಮ್ಯುನಿಸ್ಟರು,ಇವತ್ತು ಪ್ರಜಾಪ್ರಭುತ್ವದ ಬಗ್ಗೆ ಗಂಟೆಗಟ್ಟಲೇ ಕೊರೆಯುತ್ತಾರೆ!

ಈ ಸತ್ಯವನ್ನು ದೇಶದ ನವಪೀಳಿಗೆ ಅರ್ಥಮಾಡಿಕೊಂಡಿದೆ. ಪ್ರಜಾಪ್ರಭುತ್ವವಾದಿ ನರೇಂದ್ರ ಮೋದಿಯವರು ಅದನ್ನು ಪ್ರತಿಪ್ರಜೆಗೂ ಅರ್ಥಮಾಡಿಸಿಕೊಂಡು ಸಾಗಿದ್ದಾರೆ. ಗಂಜಿ ಕೇಂದ್ರದ ಗೊಬೆಲ್ಸ್ ಗಳ ಬುಡಕ್ಕೆ ಬೆಂಕಿ ಬಿದ್ದಿದೆ.ಗಾಯವನ್ನು ನೆಕ್ಕಿಕೊಂಡು ‘ಪ್ರಜಾಪ್ರಭುತ್ವ ಉಳಿಸಿ,ಸಂವಿಧಾನ ಉಳಿಸಿ’ ಎಂದು ಸುಳ್ಳೇ ಬೊಬ್ಬಿಡುತ್ತಿವೆ.ಗೊಬೆಲ್ಸ್ ಸುಳ್ಳಿನ ಸೂತ್ರ ಹೆಚ್ಚು ದಿನ ಉಳಿಯಲಾರದು ಎನ್ನುವ ಸತ್ಯ ಜಗತ್ತಿಗೆ ಎಂದೋ ಅರಿವಾಗಿ ಹೋಗಿತ್ತು, ಭಾರತದ ಗಂಜಿಗಿರಾಕಿಗಳಿಗೆ ಅದಿನ್ನೂ ಅರ್ಥವಾಗಿಲ್ಲ.2019ರಲ್ಲಿ ದೇಶದ ಮತದಾರ ಮತ್ತೊಮ್ಮೆ ಅರ್ಥ ಮಾಡಿಸಲಿದ್ದಾನೆ. ಮತ್ತೊಮ್ಮೆ ಗೆದ್ದ ನಂತರ ನರೇಂದ್ರ ಮೋದಿಯವರು ಬೇರೇನೂ ಮಾಡದಿದ್ದರೂ, ದೇಶದ ಸಾಂಸ್ಕೃತಿಕ ರಾಜಕಾರಣವನ್ನು ಅಧಿಕಾರವಿಲ್ಲದೆ ಆಳುತ್ತಿರುವ ಗೊಬೆಲ್ಸ್ ಗಳ ಗಂಜಿಕೇಂದ್ರವನ್ನು ನಿರ್ನಾಮ ಮಾಡಬೇಕು,ಆ ಮೂಲಕ ಭಾರತದ ನೈಜ ಜ್ಞಾನ ಪರಂಪರೆಯ ಪುನರುತ್ಥಾನಕ್ಕೆ ನಾಂದಿ ಹಾಡಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments