ವಿಷಯದ ವಿವರಗಳಿಗೆ ದಾಟಿರಿ

ಮೇ 22, 2018

1

ಆ ಕ್ಷಣ..

‍ನಿಲುಮೆ ಮೂಲಕ

– ಗೀತಾ ಜಿ.ಹೆಗಡೆ

ಜೀವನ ಅನ್ನೋದು ಎಷ್ಟು ವಿಚಿತ್ರ. ಕೆಲವೊಮ್ಮೆ ಎಷ್ಟೊಂದು ಅಸಹಾಯಕರಾಗಿಬಿಡುತ್ತೇವೆ. ಕಣ್ಣ ಮುಂದಿರುವ ಹತ್ತಾರು ಕೆಲಸಗಳು, ಹೇಗೆ ನಿಭಾಯಿಸಲಿ ಅನ್ನುವ ಚಿಂತೆ ಮನವನಾವರಿಸಿ ದಿಕ್ಕು ತೋಚದಂತಾಗಿ ತುಂಬಾ ತುಂಬಾ ಸಂಕಟವಾಗುತ್ತದೆ. ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟ ಅನುಭವ. ಏನು ಮಾಡ್ಲಿ? ಯಾರ ಹತ್ತಿರ ಹೇಳಿಕೊಳ್ಳಲಿ? ಯಾರಿದ್ದಾರೆ ನನಗೆ ಸಹಾಯ ಮಾಡುವವರು? ಮನಸ್ಸು ಬರೀ ಹುಡುಕಾಟದಲ್ಲಿ ಯಾರಿಲ್ಲಪ್ಪ ನನಗೆ. ತೀರಾ ತೀರಾ ಸೋತ ಅನುಭವ. ಹತಾಶೆ, ನೋವು, ಸಂಕಟ.  ಯಾರೊಂದಿಗೆ ಮಾತು ಬೇಡಾ, ಎಲ್ಲಿ ಹೋಗೋದು ಬೇಡಾ, ಯಾವುದರಲ್ಲೂ ಆಸಕ್ತಿನೇ ಇಲ್ಲ.  ಹೇಳಿಕೊಳ್ಳಲು ನೂರಾರು ಜನ ಇರ್ತಾರೆ. ಒಬ್ಬೊಬ್ಬರನ್ನೇ ನೆನಪಿಸಿಕೊಳ್ಳುವ ಮನಸ್ಸು ತನ್ನಷ್ಟಕ್ಕೇ ತಟಸ್ತವಾಗುತ್ತ ಬೇಡಾ ಬೇಡಾ ಇವರತ್ತಿರ ಏನೂ ಹೇಳೋದು ಬೇಡಾ. ನನ್ನಿಂದ ಅವರಿಗೆಲ್ಲ ಯಾಕೆ ತೊಂದರೆ. ಒಂದೊಮ್ಮೆ ಏನಾರೂ ಹೇಳಿದರೆ ತೋರುಗಾಣಿಕೆಯ ಕಾಟಾಚಾರಕ್ಕೆ ಬರ್ತಾರೊ ಏನೊ? ಇಷ್ಟಕ್ಕಾಗಿ ಯಾಕೆ ಹೇಳಿಕೊಳ್ಳಬೇಕು. ನಾಳೆ ಇದೂ ಒಂದು ಹಂಗಾಗುತ್ತೋ ಏನೋ? ಆದದ್ದು ಆಗಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ನಂಬಿದ ಆ ದೇವರೆ ದಾರಿ ತೋರಿಸುತ್ತಾನೆ.

ರಾತ್ರಿ ಹೀಗೆಲ್ಲಾ ಏನೇನೊ ಅಸಹಾಯಕತೆಯ ಯೋಚನೆ, ರೋಧನೆ ಕಣ್ಣು ನಿದ್ದೆ ಕಾಣದಾಗ ಭಗವಂತನಲ್ಲಿ ಮೊರೆ. ರೆಪ್ಪೆ ಕೂಡುವವರೆಗೂ ಗೋಗರೆವ ಹೃದಯದ ಕೂಗು ಆ ಭಗವಂತನ ಪಾದ ಅಲುಗಾಡಿಸಿತೋ ಏನೋ. ಸಹಾಯಕ್ಕೆ ಬರುವ ಮನುಷ್ಯ ಯಾವ ರೂಪದಲ್ಲಾದರೂ ಬರಬಹುದಲ್ಲವೆ? ಎಲ್ಲಾ ಅವನ ಲೀಲೆ.   “ಆ ಕ್ಷಣ” ಮಂಜಂತೆ ತಿಳಿಯಾಗುವುದು ವಿಸ್ಮಯವೆ ಸರಿ.

ಇಂತಹ ಅನುಭವಗಳು ಆಗಾಗ ಜೀವನದಲ್ಲಿ ಘಟಿಸುತ್ತಲೇ ಇರುತ್ತವೆ. ಬೆಟ್ಟದಷ್ಟು ಸಮಸ್ಯೆ ಭಗವಂತ ಮನಸ್ಸು ಮಾಡಿದರೆ ಕ್ಷಣ ಮಾತ್ರದಲ್ಲಿ ಮಂಜಂತೆ ಕರಗಿಬಿಡುತ್ತದೆ. ಎಲ್ಲಿಯವರೆಗೆ ನಮ್ಮ ನಂಬಿಕೆ, ಆತ್ಮ ಸ್ಥೈರ್ಯ, ಛಲ, ಸ್ವಾಭಿಮಾನ ನಮ್ಮ ಜೊತೆಗೆ ಇರುತ್ತದೋ ಅಲ್ಲಿಯವರೆಗೆ ಎದುರಾಗುವ ಘಟನೆ, ಸಂದರ್ಭಗಳಲ್ಲಿ ನಮಗರಿವಿಗೆ ಬಾರದ ರೀತಿಯಲ್ಲಿ ಪರಿಹಾರ ಕೂಡಾ ತನ್ನಷ್ಟಕ್ಕೆ ಕಂಡುಕೊಂಡುಬಿಡುತ್ತೇವೆ. ಇದು ಹೇಗೆ ?  ಒಂದು ರೀತಿ ನಿಗೂಢವೆಂದರೂ ತಪ್ಪಾಗಲಾರದು.

ಅದು ಯಾವುದು? ಏನದು? ಹೇಗಿದೆ? ಎಲ್ಲಿದೆ? ಅಗೋಚರವಾದ ಆ ಬಿಂದುವಿನೆಡೆಗೆ ವಾಲುವ ಮನಸ್ಸು ಇದನ್ನೇ “ಭಗವಂತ” ಎಂದು ಹೆಸರಿಟ್ಟನೆ ಈ ಮನುಷ್ಯ? ನಿಮಿತ್ತ ಮಾತ್ರದಲ್ಲಿ ಎಲ್ಲವನ್ನೂ ಪರಿಹಾರ ಮಾಡಿದ ಅದನ್ನೇ ಒಂದು ಶಕ್ತಿ ಎಂದು ಪರಿಗಣಿಸಿದನೆ? ಯಾರು ಎಷ್ಟೇ ನಾಸ್ತಿಕರಾಗಿರಲಿ ಮನದ ಮೂಲೆಯಲ್ಲಿ ಎಲ್ಲವನ್ನೂ ಆಡಿಸುವ ಈ ಶಕ್ತಿಗೆ ಶರಣಾಗದವರುಂಟೆ? ಅದರ ರೂಪ ಕಾಣದ ಮನುಷ್ಯ ಕೇವಲ ತನ್ನ ಕಲ್ಪನೆಗಳಿಗನುಗುಣವಾಗಿ ಅವನ ರೂಪ ಚಿತ್ರಿಸುತ್ತ ನಡೆದಿರಬಹುದೆ?

ಎಷ್ಟೋ ಸಂದರ್ಭದಲ್ಲಿ ಇತಿಹಾಸದಲ್ಲಿ ನಡೆದ ಘಟನೆಗಳು ಕೇವಲ ಕಥೆಯಾಗಿ ಪರಿಗಣಿಸಿ ಇಂದಿನ ಜನರ ಬಾಯಲ್ಲಿ ಒಬ್ಬ ಬರಹಗಾರ ತನಗೆ ಬೇಕಾದಂತೆ ಬರೆದಿದ್ದಾನೆ. ಅದೆಲ್ಲ ನಡೆದಿದ್ದಲ್ಲಾ, ಕೇವಲ ಕಥೆ ಅಷ್ಟೆ ಎಂದನ್ನುವಂತೆ ಈ ದೇವರು ಎಂಬ ಶಕ್ತಿ ಮನುಷ್ಯನ ಕಲ್ಪನೆ ಅಷ್ಟೆ ಅಂದನ್ನಿಸುವುದು ಸಹಜ.

ಹಾಗಾದರೆ ಆ ಶಕ್ತಿ ಅಥವಾ ಆ ದೇವರು ಎಲ್ಲಿದ್ದಾನೆ? ಹುಡುಕುವ ಒಂದಷ್ಟು ಪ್ರಯತ್ನ, ವಿಚಾರ, ಚಿತ್ತಕ್ಕೊಂದಷ್ಟು ಕೆಲಸ ಕೊಡಲು ಶುರು ಈ ಮನಸ್ಸು. ಹಾಗಾದರೆ ಈ ಮನಸ್ಸು ಎಲ್ಲಿದೆ? ಅದು ಹೇಗಿದೆ?  ಮತ್ತೆ ಈ ಬುದ್ದಿಯ ಪ್ರಶ್ನೆ.

ಅಯ್ಯೋ! ಈ ರೀತಿಯ ಯೋಚನೆ ತಲೆ ಸುತ್ತಿ ಬರುವಷ್ಟು ಒದ್ದಾಟ. ಎಲ್ಲಿಂದೆಲ್ಲಿಗೋ ಹೋಗುವ ಮನಸ್ಸಿಗೆ ಸಮಸ್ಯೆಗಳು ಪರಿಹಾರವಾಯಿತಲ್ಲ ಸಾಕು ತೆಪ್ಪಗಿರೋದು ಬಿಟ್ಟು ಇಲ್ಲದ ತರ್ಕ ನಿನಗ್ಯಾಕೆ ಎಂದು ಕುಟುಕುವ ಬುದ್ಧಿ. ಒಂದಕ್ಕೊಂದು ತಿಕ್ಕಾಟಕ್ಕೊಳಗಾಗಿ ಕೊನೆಗೆ ದೇಹವೆಲ್ಲ ನಿತ್ರಾಣ. ಗಡದ್ದಾಗಿ ಒಂದಷ್ಟು ನಿದ್ದೆ ಮಾಡಿದರೆ ಈ ದೇಹಕ್ಕೆ ಸಮಾಧಾನ. ಅಂದರೆ ಆ ದೇವರು ದೇಹದಲ್ಲಿ ಇಲ್ಲ. ಮನಸ್ಸು ಅದೇ ಬೇರೆ. ಬುದ್ಧಿ ಅದೂ ಬೇರೆ. “ದೇಹವೇ ದೇಗುಲ”  ಬಸವಣ್ಣ ಹೇಳಿದ್ದಾರೆ. ಆದರೆ ದೇವರೆಲ್ಲಿ ಇದ್ದಾನೆ? ಅದು ನಿಗೂಢ.  ಆತ್ಮ! ಆತ್ಮವೇ ದೇವರಾ? ಎಲ್ಲವಕ್ಕೂ ಸೂಚನೆ ಕೊಡುವದು ಇದೇನಾ? ಕಣ್ಣಿಗೆ ಕಾಣೋದಿಲ್ಲ ಇದೂ ಕೂಡಾ ಮನಸ್ಸು ಬುದ್ಧಿಯಂತೆ ಇರೋದು ತಾನೆ.

ಮನುಷ್ಯನ ಎಪ್ಪತ್ತೆರಡು ಸಾವಿರ  ನರ ಮಂಡಲದಲ್ಲಿ ಒಂದೊಂದು ಒಂದೊಂದು ಕಾರ್ಯ ನಿರ್ವಹಿಸುತ್ತಿರುವಾಗ ಯಾವುದಾದರೂ ಒಂದಕ್ಕೆ ಡ್ಯಾಮೇಜಾದರೂ ತನ್ನ ಕಾರ್ಯ ನಿರ್ವಹಿಸುವುದು ಬಲೂ ಕಷ್ಟ.  ವಿಜ್ಞಾನ ಎಷ್ಟೇ ಮುಂದುವರಿದಿರಬಹುದು ಆದರೆ ಈಗೊಂದು ಎಂಟು ವರ್ಷಗಳಿಂದ ಕಣ್ಣಾರೆ ಕಾಣುತ್ತಿರುವ ಸತ್ಯ ನನಗೆ ಇದುವರೆಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ ಬಚ್ಚಲಲ್ಲಿ ಜಾರಿ ಬಿದ್ದ ಒಂದು ಸಣ್ಣ ನೆವ. ಇದುವರೆಗೂ ಹಾಸಿಗೆಯಿಂದೇಳಲಾಗದ ಅರೆ ಪ್ರಜ್ಞಾವಸ್ಥೆಯಲ್ಲಿ ದಿನ ದೂಡುತ್ತಿರುವ ನನ್ನ ಆಪ್ತ ಗೆಳತಿ. ವಾಡಿಕೆಯ ಮಾತಲ್ಲಿ ಹೇಳುವ “ಹೀಗೆ ಮಾಡೆನ್ನುವ ನರ ಮಂಡಲ ಸ್ಥಗಿತವಾಗಿದೆ” ವಿಜ್ಞಾನದ ಭಾಷೆ ಬೇರೆ.

ಇನ್ನೊಂದು ಮೂಗಿಗೆ ಯಾವ ವಾಸನೆಯನ್ನೂ ಗೃಹಿಸುವ ಶಕ್ತಿ ಇಲ್ಲ. ಹಲವು ಪರೀಕ್ಷೆಯ ಪರಿಣಾಮದಲ್ಲಿ ವೈದ್ಯರಿಂದ ಬಂದ ಉತ್ತರ ಯಾವಾಗಲೋ ವೈರಲ್ ಜ್ವರ ಬಂದಾಗ ವಾಸನೆಯನ್ನು ಗೃಹಿಸುವ ನರ ಮಂಡಲ ನಿಷ್ಕ್ರಿಯವಾಗಿದೆ.

ಹಾಗಾದರೆ ದೇವರು ದೇಹದಲ್ಲೇ ಇದ್ದಿದ್ದೇ ಆದರೆ ಅವನ್ಯಾಕೆ ತಾನಿರುವ ದೇಹ ಊನವಾಗಲು ಬಿಡುತ್ತಾನೆ?  ಅವನೇ ಸರಿಪಡಿಸಬಹುದಲ್ಲಾ?

ಇಂತಹ ವಿಚಾರ ತಲೆ ಹೊಕ್ಕು ಒಂದಷ್ಟು ಹೊತ್ತು ತಲೆ ಕೆಟ್ಟು, ಕೆಟ್ಟಿರೊ ತಲೆ ವಿಚಾರ ತಮ್ಮ ಮುಂದೆ ಇಟ್ಟು ಇವಳೆಂತಾ ದಡ್ಡಿ ಅಂದುಕೊಂಡರೂ ಪರವಾಗಿಲ್ಲ, ಒಂದಷ್ಟು ಜೀವಕ್ಕೆ ಬಂದ ಅಡ್ಡಿ ಆತಂಕಗಳು “ಅದೇ ದೇವರಂತೆ ಬಂದು ಎಲ್ಲಾ ಪರಿಹಾರ ಆಯಿತು” ಅಂತ ಹೇಳುತ್ತೇವಲ್ಲ ಹಾಗೆ ಇಂದು ನಡೀತು.  ಅದೇ ಖುಷಿ ತಲೆ ಎಂತೆಂಥದಕ್ಕೊ ತಗಲಾಕ್ಕಂಡು ಬರೆಯೋ ಹಾಗಾಯಿತು.

ಇವೆಲ್ಲ “ಆ ಕ್ಷಣ”ದ ಅನಿಸಿಕೆಗಳು ಅಷ್ಟೆ. ತಪ್ಪೊ ಒಪ್ಪೊ, ವಿಮರ್ಶೆ ಮಾಡಿಲ್ಲ, ನೆನಪಿಗಾಗಿ ಇರಲಿ ಅಂತ ಬರೆದೆ. ಮತ್ತೆ ವಾಸ್ತವಕ್ಕೆ ಬಂದಾಗ ಎಲ್ಲಾ ಮಾಮೂಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments