ವಿಷಯದ ವಿವರಗಳಿಗೆ ದಾಟಿರಿ

ಮೇ 22, 2018

2

ಕರ್ನಾಟಕದ ರಮಣರು,ಬಿಜೆಪಿಯೆಂಬ ಯು.ಜಿ ಕೃಷ್ಣಮೂರ್ತಿ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಕಳೆದೊಂದು ವಾರದಲ್ಲಿ ರಾಜ್ಯದ ಜನ ಸಾಕ್ಷಿಯಾಗಿದ್ದ ರಾಜಕೀಯ ಹಗ್ಗ-ಜಗ್ಗಾಟಕ್ಕೆ ತಾತ್ಕಾಲಿಕ ಪರದೆ ಬಿದ್ದಿದೆ. ರಾಜಕಾರಣಿಗಳ ಬೃಹನ್ನಾಟಕದಿಂದಾಗಿ ಟಿಆರ್ಪಿ ಕಳೆದುಕೊಂಡಿದ್ ಮೆಗಾ ಸಿರಿಯಲ್ಲುಗಳ ನಿರ್ಮಾಪಕರು ನಿಟ್ಟುಸಿರು ಬಿಟ್ಟಿರಬಹುದು.ಗೋವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯಿಂದ ಹಲ್ವಾ ತಿಂದಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಅಂತ ಉದಾಸೀನಕ್ಕೆ ಜಾರಲಿಲ್ಲ.ಜಾರಲಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಬಹುದಾದ ಸಾಧ್ಯತೆಯಿರುವ ದೇಶದ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಮಾತ್ರವೇ ಉಳಿದಿದ್ದರಿಂದ,ಕರ್ನಾಟಕವೆನ್ನುವುದು ಕಾಂಗ್ರೆಸ್ ಪಾಲಿಗೆ ಅಸ್ತಿತ್ವದ ಪ್ರಶ್ನೆಯೂ ಆಗಿತ್ತು. PIN ಇಲ್ಲದ ATMನಂತಾಗಿರುವ ರಾಜ್ಯವನ್ನು ಅವರಾದರೂ ಹೇಗೆ ಬಿಟ್ಟುಕೊಟ್ಟಾರು ಹೇಳಿ?

ಚುನಾವಣಾ ಪ್ರಚಾರದಲ್ಲಿ, ಕುಮಾರಸ್ವಾಮಿಯವರ ಬಗ್ಗೆ ‘ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ” ಎಂದು ಪದೇ ಪದೇ ಹೀಯಾಳಿಸಿದ್ದ ಸಿದ್ಧರಾಮಯ್ಯನವರೇ ಖುದ್ದಾಗಿ ಮುಂದೆ ಬಂದು ನೀವೇ ನಮ್ ಸಿಎಂ ಎಂದೂ ನಡುಬಗ್ಗಿಸಿ ನಿಲ್ಲಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದ್ದು ಚುನಾವಣಾ ಫಲಿತಾಂಶ.ಕಳೆದ ೫ ವರ್ಷಗಳಲ್ಲಿ ಉಡಾಫೆ,ಅಹಂಕಾರವೇ ಮೈವೆತ್ತಂತೆ ವರ್ತಿಸುತ್ತಿದ್ದ ವ್ಯಕ್ತಿಗೆ ಮತದಾರ ಮಹಾಪ್ರಭು ಭರ್ಜರಿ ಏಟನ್ನೇ ಕೊಟ್ಟಿದ್ದಾನೆ. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯನವರು ದೊಡ್ಡ ಮಟ್ಟದ ಅಂತರದಲ್ಲಿ ಸೋತಿದ್ದಾರೆ, ಇನ್ನು ಬಾದಾಮಿಯಲ್ಲಿ 2000 ದಷ್ಟು NOTA ಚಲಾವಣೆಯಾಗಿದೆ,ಸಿದ್ಧರಾಮಯ್ಯ ಗೆದ್ದಿರುವುದು 1600 ಚಿಲ್ಲರೆ ಮತಗಳ ಅಂತರದಲ್ಲಿ ಮಾತ್ರ.ಎರಡು ಕಡೆ ಏಕೆ ನಿಲ್ಲುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಸಿದ್ಧರಾಮಯ್ಯನವರು ನಿಂತರೆ ಆ ಭಾಗದಲ್ಲಿ ಹೆಚ್ಚು ಸೀಟು ಗೆಲ್ಲಬಹುದು ಎನ್ನುತ್ತಿದ್ದರು ಅವರ ಬೆಂಬಲಿಗರು. ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು 2 ಮಾತ್ರ ಉಳಿದೆಲ್ಲವೂ ಬಿಜೆಪಿಯ ಪಾಲಾಗಿದೆ? ಎಲ್ಲೋಯ್ತು ಸಿದ್ಧರಾಮಯ್ಯನವರ ಪ್ರಭಾವಳಿ? ಖುದ್ದು ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋತಿದ್ದು ಆಡಳಿತ ವಿರೋಧಿ ಅಲೆಯ ಸಂದೇಶ ಅಲ್ಲವೇ? ಸಿದ್ಧರಾಮಯ್ಯನವರ ಸಂಪುಟದ 16 ಸಚಿವರು ಸೋತು ಮನೆ ಸೇರಿದ್ದಾರೆ.ಸಿದ್ಧರಾಮಯ್ಯ ಆಪ್ತ ಬಳಗದಲ್ಲಿದ್ದ ಮಹದೇವಪ್ರಸಾದ್,ಆಂಜನೇಯ,ಉಮಾಶ್ರಿಯಂತವರು ಸೋಲಿನ ರುಚಿ ಸವಿದಿದ್ದಾರೆ.ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೂ ಕಾಂಗ್ರೆಸ್ ಮೂಲೆ ಸೇರಿದೆ.

ಮತದಾರರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದಿದ್ದರೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿತ್ತು. ಆದರೆ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯಾದ್ದರಿಂದ, “ಕೋಮುವಾದಿಗಳನ್ನು ದೂರವಿಡಲು,ಸೆಕ್ಯುಲರಿಸಂ ರಕ್ಷಿಸಲು’ ಎಂಬ ತಗಡು ಸ್ಲೋಗನ್ ಇಟ್ಟುಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ತುಘಲಕ್ ಸರ್ಕಾರವನ್ನು ಜನರು ತಿಪ್ಪೆಗೆ ಎಸೆದರೂ, ತಿಪ್ಪೆಯಿಂದ ಎದ್ದು ಬಂದು ಜೆಡಿಎಸ್ ಜೊತೆ ಕೈಜೋಡಿಸಿ ಕಾಂಗ್ರೆಸ್ ಉಸಿರಾಡುತ್ತಿದೆ,ಜೆಡಿಎಸ್ ಪಕ್ಷದ ಕತೆಯೂ ಅಸ್ತಿತ್ವ ಉಳಿಸಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ಸಿಗಿಂತ ಭಿನ್ನವಾಗೇನೂ ಇಲ್ಲ. ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಇರುವ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇನ್ನೇನೂ ಮಾಡೀತು ಹೇಳಿ?ಚುನಾವಣೆಗೆ ಮೊದಲು ಕಾಂಗ್ರೆಸ್ ಸರ್ಕಾರದ ಅಧ್ವಾನಗಳ ಬಗ್ಗೆ ಮಾತನಾಡಿ ಮತ ಪಡೆದ ಜೆಡಿಎಸ್ ಇಂದು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಈಗ ಇಬ್ಬರೂ ಸೇರಿಕೊಂಡು ಪ್ರಜಾಪ್ರಭುತ್ವ ಉಳಿಸುವ ತುತ್ತೂರಿ ಊದಿದರೆ ಜನರಿಗೆ ಸತ್ಯ ಅರ್ಥವಾಗುವುದಿಲ್ಲವೇ?

ಮೋದಿ-ಶಾ ಬಿರುಗಾಳಿಗೆ ಬೆದರಿರುವ ಕಾಂಗ್ರೆಸ್ ಮತ್ತಿತ್ತರ ವಿಪಕ್ಷಗಳಿಗೆ 2019ರ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಿದೆ. ಕರ್ನಾಟಕದ ಚುನಾವಣಾ ಫಲಿತಾಂಶ ಇವರಿಗೆಲ್ಲ ಮುಂದೆ ಕಿಚಡಿ ಸರ್ಕಾರ ಬಂದರೇ ಹೇಗೆ ಆಟವಾಡಬೇಕು ಎಂಬ ತಾಲೀಮಿನಂತಿದೆ.ಉತ್ತರ ಭಾರತದ ರಾಜಕಾರಣಿಗಳೇಕೆ ಕರ್ನಾಟಕಕ್ಕೇ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ರೊಳ್ಳೆ ತೆಗೆಯುತ್ತಿದ್ದವರೇ ಈಗ ಉತ್ತರದ ರಾಜಕಾರಣಿಗಳನ್ನು ಕುಮಾರಸ್ವಾಮಿಯವರ ಪ್ರಮಾಣವಚನ ಸಮಾರಂಭಕ್ಕೆ ಸ್ವಾಗತಿಸಲು ತಯಾರಾಗಿ ನಿಂತಿದ್ದಾರೆ.ಯಾರು ಬಂದರೂ ಯಾರು ಹೋದರೂ, ಈ ಸರ್ಕಾರದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಅಥವಾ ಚುನಾವಣೆಯ ನಂತರದ ಕೆಲವು ತಿಂಗಳುಗಳು ಅಷ್ಟೇ.ಒಟ್ಟಾರೆಯಾಗಿ ಈ ಎಲ್ಲಾ ನಾಟಕದಿಂದ ರಾಜ್ಯ ಬಿಜೆಪಿಗೆ ತರೇವಾರಿ ಪಾಠಗಳು ಕಲಿಯಲಿಕ್ಕಿವೆ.ಅದರಲ್ಲಿ ಮೊದಲನೆಯದು, ರಾಜ್ಯದಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರುವ ಸಂಪೂರ್ಣ ಶಕ್ತಿಯನ್ನು ಬಿಜೆಪಿಯಿನ್ನೂ ಪಡೆಯಲು ಸಾಧ್ಯವಾಗಿಲ್ಲವೆಂದರೇ ಅದಕ್ಕೆ ಮುಖ್ಯ ಕಾರಣ ದಕ್ಷಿಣ ಕರ್ನಾಟಕ,ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸದೇ ಇರುವುದು.

ರಾಜಧಾನಿ ಬೆಂಗಳೂರಿನಲ್ಲೇ ಗೆಲ್ಲಬಹುದಾದ ಕ್ಷೇತ್ರಗಳನ್ನು ಒಳಜಗಳ,ಹೊಂದಾಣಿಕೆ ರಾಜಕೀಯಗಳಿಂದಾಗಿ ಎದುರಾಳಿಗಳಿಗೆ ಬಿಟ್ಟುಕೊಡುತ್ತಿರುವುದರ ಬಗ್ಗೆ ಈಗಲಾದರೂ ಕೇಂದ್ರದ ನಾಯಕರು ಗಂಭೀರವಾಗಿ ಯೋಚಿಸಬೇಕು. ಬಿಬಿಎಂಪಿಯಲ್ಲಿ 100 ಸೀಟು ಗೆದ್ದರೂ ಅಧಿಕಾರಕ್ಕೆ ಏರಲಾಗದ ಸ್ಥಿತಿಯಿಂದ ಬೆಂಗಳೂರಿನ ಸೋ-ಕಾಲ್ಡ್ ನಾಯಕರು ಪಾಠ ಕಲಿಯಲೇ ಇಲ್ಲ,ಅದರ ಪ್ರತಿಫಲವೇ ಈಗ ಪಕ್ಷ ಅಧಿಕಾರದ ಹತ್ತಿರಕ್ಕೆ ಬಂದು ಸುಸ್ತಾಗಿ ಕುಳಿತಿರುವುದು. ರಾಜಧಾನಿಯಂತಹ ಸುಶಿಕ್ಷಿತರಿರುವಲ್ಲೇ ಸಂಪೂರ್ಣ ಹಿಡಿತ ಸಾಧಿಸದ ಬಿಜೆಪಿ ಸ್ವಂತ ಬಲದಿಂದ ಅಧಿಕಾರದ ಗದ್ದುಗೆಯೇರುವ ಕನಸು ಕಾಣುತ್ತಿರುವುದು ಹೇಗೆ? 150 ಸೀಟುಗಳು ಬರುವುದು ಯಾವ್ಯಾವ ಜಿಲ್ಲೆಯಿಂದ?

ಗೆಲುವಿಗೆ ಸಾವಿರಾರು ಅಪ್ಪಂದಿರು,ಸೋಲು ಅನಾಥವೆನ್ನುವುದು ಗಾದೆ ಮಾತು. ಆದರೆ ಬಿಜೆಪಿಯ ಸೋಲಿಗೆ ಕಾರಣರಾದವರನ್ನು ಹುಡುಕುವುದು ಕಷ್ಟವೇನಲ್ಲ.ಬಿಜೆಪಿ ಅಧಿಕಾರಕ್ಕೇರಿದ್ದರೇ ಪ್ರಭಾವಿ ಖಾತೆ/ಡಿಸಿಎಂ ಹುದ್ದೆಯಿಂದ ಹಿಡಿದು ಕೊಡುವುದಾದರೆ ಮುಖ್ಯಮಂತ್ರಿ ಕುರ್ಚಿಯನ್ನೇ ಕೊಡಿ ಎನ್ನುವ ಡಜನ್ನಿನಷ್ಟು ನಾಯಕರು ಬಿಜೆಪಿಯಲ್ಲಿದ್ದಾರೆ. ಆದರೆ ಇವರಲ್ಲಿ ಎಷ್ಟು ಜನರು ತಾವು ಅನಾದಿಕಾಲದಿಂದ ಸ್ಪರ್ಧಿಸುತ್ತ ಬಂದಿರುವ ಕ್ಷೇತ್ರದಿಂದ ಹೊರಹೋಗಿ ಸ್ಪರ್ಧಿಸಬಲ್ಲರು ಅಥವಾ ಹೊರಗಿನ ಕ್ಷೇತ್ರಗಳಲ್ಲಿ ಸ್ವ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎನ್ನುವುದನ್ನು ಕೇಂದ್ರದ ನಾಯಕರು ಹುಡುಕಿದರೂ ಸಾಕು.ಉತ್ತರ ಸಿಕ್ಕಿಬಿಡುತ್ತದೆ. ಹೊಂದಾಣಿಕೆ ರಾಜಕೀಯದಲ್ಲೇ ಜೀವನ ಹೊರೆಯುತ್ತಿರುವ ಇಂತಹ ಡಜನ್ ಗಟ್ಟಲೇ ನಾಯಕರನ್ನು ಕಟ್ಟಿಕೊಂಡು,ಸ್ವಂತ ಬಲದ ಸರ್ಕಾರದ ಬಗ್ಗೆ ಅನುಮಾನವಿದ್ದಿದ್ದರಿಂದಲೋ ಏನೋ,ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ-ಶಾ ಹಾಗೂ ಇನ್ನಿತರೇ ಬಿಜೆಪಿ ನಾಯಕರು ಟಾರ್ಗೆಟ್ ಮಾಡಿದ್ದು ಕಾಂಗ್ರೆಸ್ಸನ್ನು ಮಾತ್ರವೇ. ಜೆಡಿಎಸ್ ತಂಟೆಗೆ ಅಷ್ಟಾಗಿ ಹೋಗಲೂ ಇಲ್ಲ. ಇನ್ನು ಚಾಮುಂಡೇಶ್ವರಿಯಲ್ಲಿ ಬಿಜೆಪಿಯ ಮತಗಳನ್ನೂ ಜೆಡಿಎಸ್ಸಿಗೆ ವರ್ಗಾಯಿಸಲಾಯಿತು ಎನ್ನುವ ಮಾತುಗಳಿವೆ,ಇವೆಲ್ಲಕ್ಕೂ ಪ್ರತಿಯಾಗಿ ಜೆಡಿಎಸ್, ಬಾದಾಮಿಯಲ್ಲಿ ಬಿಜೆಪಿಗೆ ಗೆಲುವಿಗೆ ಅಡ್ಡಗಾಲು ಹಾಕಿತು. ಇಂತಹ ಪಕ್ಷವನ್ನು ನಂಬಿಕೊಂಡು ಬಿಜೆಪಿ ಗೆಲುವಿನ ಬಾಗಿಲಿಗೆ ಬಂದು ಅಧಿಕಾರದಲ್ಲಿ ವಂಚಿತವಾಗಬೇಕಾಯಿತು ಎನ್ನುವ ವಾದವೂ ಇದೆ.

ಇದೇ ವಾದದ ಜೊತೆಗೆ ಪ್ರಮುಖವಾಗಿ ಕೇಳಿಬರುತ್ತಿರುವ ಮತ್ತೊಂದು ಮಾತು ಹಳೇ ಮೈಸೂರು ಭಾಗವನ್ನು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಅಥವಾ ನಿರಾಸಕ್ತಿಯಿಂದಲೇ ಕಳೆದುಕೊಳ್ಳುತ್ತಿದೆ ಎನ್ನುವುದು. ಈ ವಾದ ನಿಜವೂ ಇದ್ದಿರಬಹುದು. 1999ರಲ್ಲೇ ಮಾಜಿ ಸಚಿವ ದಿ.ಹನುಮೇಗೌಡರು, ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದರು.19 ವರ್ಷಗಳ ನಂತರ ಈಗ ಮತ್ತೆ ಹಾಸನದಲ್ಲಿ ಬಿಜೆಪಿ ಗೆದ್ದಿದೆ.ಹಾಸನದಲ್ಲಿ ಸಾಧ್ಯವಾಗಿದ್ದು ಹಳೇ ಮೈಸೂರಿನ ಬೇರೆ ಭಾಗಗಳಲ್ಲಿ ಸಾಧ್ಯವಿಲ್ಲವೇ? ಹಳೇ ಮೈಸೂರು ಭಾಗವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದರೆ,ಜೆಡಿಎಸ್ ಬುಟ್ಟಿಯಿಂದ ಮೂರ್ನಾಲ್ಕು ಸೀಟುಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಹಾಗೂ ಗೆಲ್ಲಲೇಬೇಕು ಎಂಬ ಛಲವಿಲ್ಲದ ನಾಯಕರ ಕೈಗೆ ಈ ಜಿಲ್ಲೆಗಳನ್ನು ಕೊಟ್ಟು ಬಿಜೆಪಿ ತನ್ನ ಕಾಲಮೇಲೆ ತಾನೇ ಚಪ್ಪಡಿ ಎಳೆದುಕೊಂಡಿದೆ.

ಈ ಬಾರಿಯ ಸೋಲು ಮತ್ತು ಮೋಸದಿಂದಲಾದರೂ ಪಾಠ ಕಲಿತುಕೊಂಡು ಹಳೇ ಮೈಸೂರು ಜಿಲ್ಲೆಗಳನ್ನು ಉತ್ಸಾಹಿ ಹುಡುಗರ ಕೈಗೆ ಕೊಟ್ಟರೆ ಬದಲಾವಣೆ ಕಾಣುವುದು ಕಷ್ಟದ ಮಾತೇನೂ ಅಲ್ಲ. ಕೇರಳದ ಕೆಂಪು ರಕ್ಕಸರು,ಬಂಗಾಳದ ಜಿಹಾದಿಗಳ ನಡುವೆ ಜಿದ್ದಿಗೆ ಬಿದ್ದು ಹೋರಾಡಿ ಅಧಿಕಾರದ ಪೀಠಕ್ಕೆ ಪೈಪೋಟಿ ನೀಡುತ್ತಿರುವ ಬಿಜೆಪಿಗೆ,25 ವರ್ಷಗಳ ಕಾಲ ಕಮ್ಯುನಿಸ್ಟ್ ಕಪಿಮುಷ್ಟಿಯಲ್ಲಿದ್ದ ತ್ರಿಪುರಾ ರಾಜ್ಯದಲ್ಲಿ ಕೇಸರಿ ಧ್ವಜ ಅರಳಿಸಿದವರಿಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬೇರು ಬಿಡಲು ಸಾಧ್ಯವಾಗುತ್ತಿಲ್ಲವೆಂದರೇ, ಅದಕ್ಕಿರುವ ಕಾರಣಗಳು ನಿರಾಸಕ್ತಿ ಅಥವಾ ಹೊಂದಾಣಿಕೆ ರಾಜಕಾರಣ ಅಥವಾ ಕೈಲಾಗದ ಭಾವನೆಗಳಷ್ಟೇ.Out of Box ಥಿಂಕಿಂಗ್ ಮಾಡಬಲ್ಲಂತವರ ಕೈಗೆ ಈ ಜಿಲ್ಲೆಗಳ ಚುಕ್ಕಾಣಿ ಕೊಟ್ಟರೆ ಬಿಜೆಪಿಗೆ ಲಾಭವಿದೆ.ಹಳೆತಲೆಗಳ ಕೈಗೆ ಕೊಟ್ಟರೆ ಜೆಡಿಎಸ್ ಗೆಲ್ಲುವುದನ್ನು ಧಾರಾಳವಾಗಿ ನೋಡುತ್ತಾ ಕುಳಿತಿರಬಹುದು.

ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ಸರಳವಾಗಿ ವಿವರಿಸಲು, ಫಿಲಾಸಫರ್ ಯುಜಿ ಕೃಷ್ಣಮೂರ್ತಿ ಹಾಗೂ ರಮಣ ಮಹರ್ಷಿಗಳ ನಡುವೆ ನಡೆದ ಸಂಭಾಷಣೆಯೊಂದನ್ನು ಹೇಳುವುದು ಸೂಕ್ತವೆನಿಸುತ್ತದೆ.ರಮಣರ ಬಳಿಗೆ ಗೆಳೆಯರೊಬ್ಬರ ಒತ್ತಾಸೆಯಿಂದ ಹೋದ ಯುಜಿ,”ನನಗೆ ನಿಮ್ಮಲ್ಲಿರುವುದನ್ನು (ಮೋಕ್ಷ) ಕೊಡಬಲ್ಲಿರಾ?” ಎಂದು ಪ್ರಶ್ನಿಸುತ್ತಾರೆ, ಉತ್ತರವಾಗಿ ರಮಣರು “ನಾನೇನೋ ಕೊಡಬಲ್ಲೇ.ಆದರೆ ನೀನು ಸ್ವೀಕರಿಸಬಲ್ಲೆಯಾ?” ಎನ್ನುತ್ತಾರೆ. ಇದೊಂದು ಮಾತು ಯುಜಿಯವರ ಅಹಂಗೆ ಕೊಟ್ಟ ಭರ್ಜರಿ ಪೆಟ್ಟಾಗಿತ್ತು. ಕೊಡುವ ಯೋಗ್ಯತೆ ರಮಣರಲ್ಲಿತ್ತು,ಸ್ವೀಕರಿಸಲು ಬೇಕಾದ ತಯಾರಿ ಯುಜಿಯವರಲ್ಲಿರಲಿಲ್ಲ!

ರಾಜ್ಯ ಬಿಜೆಪಿಯು ಯುಜಿಯವರಿದ್ದ ಅಹಂನ ಸ್ಥಿತಿಯಲ್ಲೇ ಸದ್ಯಕ್ಕಿದೆ. ಕರ್ನಾಟಕದ ಮತದಾರರೆಂಬ ರಮಣರು ಬಿಜೆಪಿಗೆ ಅಧಿಕಾರದ ಮೋಕ್ಷ ಕರುಣಿಸಬಲ್ಲರು,ಆದರೆ ಪಡೆಯಲು ರಾಜ್ಯ ಬಿಜೆಪಿ ಸಿದ್ಧವಾಗಿದೆಯೇ? ಆತ್ಮಾವಲೋಕನ ಮಾಡಿಕೊಳ್ಳಲು ಇದು ಸುಸಂಧರ್ಭ.

2 ಟಿಪ್ಪಣಿಗಳು Post a comment
 1. ಶ್ರೀರಂಗ ಯಲಹಂಕ
  ಮೇ 22 2018

  ಪ್ರಿಯ ರಾಕೇಶ್ ಅವರಿಗೆ– ಉತ್ತಮವಾದ ವಿಶ್ಲೇಷಣೆ. ಬಿ.ಜೆ.ಪಿ. ಕೇವಲ ಉತ್ರರ ಕರ್ನಾಟಕದಲ್ಲಿ ಮತ್ತು ಹಳೇ ಮೈಸೂರಿನಲ್ಲಿ ಇರುವ ಒಂದೆರೆಡು
  ಬಹುಸಂಖ್ಯಾತ ಜಾತಿಯವರ ಬೆಂಬಲದಿಂದ ಮಾತ್ರವೇ ಸರ್ಕಾರದ ಗದ್ದುಗೆ ಹಿಡಿಯಬಲ್ಲೆ ಎಂಬ ಅತಿ ವಿಶ್ವಾಸವನ್ನು ಬಿಡಬೇಕು. ತಾವು ಹೇಳಿರುವಂತೆ ಬೆಂಗಳೂರು ನಗರದಲ್ಲಿ ಮತ್ತು ಹಳೇ ಮೈಸೂರಿನ ಜಿಲ್ಲೆಗಳ ಜನರಲ್ಲಿ ತಾನು ನಿಮಗೂ ಸೇರಿದವನು ಎಂಬ ನಂಬಿಕೆ, ವಿಶ್ವಾಸವನ್ನು ಹುಟ್ಟಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಜತೆಗೆ ಈ ಭಾಗದಲ್ಲಿ ಕೆಲವು ಜನಗಳಿಂದ ವ್ಯವಸ್ಥಿತವಾಗಿ ಹರಡುತ್ತಿರುವ ಬಿ.ಜೆ.ಪಿ. ವಿರುದ್ಧದ ಅಲೆಯನ್ನು ಜಾಣತನದಿಂದ ಎದುರಿಸಬೇಕು.ಆ ಮೂಲಕ ಯಾವ ತಂತ್ರ-ಕುತಂತ್ರ, ಆಪರೇಷನ್ ಗಳಿಲ್ಲದೆ ತಮ್ಮ ಗುರಿ ಮುಟ್ಟುವ ತನಕ ಶ್ರಮಿಸಬೇಕು. ಪಕ್ಷದ ಒಳಗೆ ಇರುವ ಭಿನ್ನಮತಗಳು ಅಲ್ಲೇ ಶಮನವಾಗಬೇಕು. ಮಾಧ್ಯಮಗಳ ಮೂಲಕ ಅಲ್ಲ. 2008-13ರ ತಪ್ಪನ್ನು ಮತ್ತೆ ಮಾಡಿದರೆ ಜನರು ಕ್ಷಮಿಸಲಾರು.

  ಉತ್ತರ
 2. s.dinni
  ಮೇ 23 2018

  ಬಹು ಮಹತ್ವದ ಮಾತು. ಇದು ಇಡೀ ದೇಶಕ್ಕೆ ಎಲ್ಲ ಕಡೆಯೂ. ಎಲ್ಲ ಸಂದರ್ಭದಲ್ಲಿ ಹೇಳುವಂತದ್ದು.
  ಈ ದರ್ಪವೇ ಮನುಷ್ಯನ ಅವನತಿಗೆ ಕಾರಣವಾಗಿದೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments