ವಿಷಯದ ವಿವರಗಳಿಗೆ ದಾಟಿರಿ

ಮೇ 29, 2018

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ…?

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರಶ್ನಿಸುವುದೂ ಒಂದು. ಅದು ‘ಏನಲೇ..!?’ ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರಶ್ನೆಗಳನ್ನು ಕೇಳುವ ‘ಅಧಿಕಾರ’  ಹಾಗು ‘ಧೈರ್ಯ’ ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು. ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲೀ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು!

ಚುನಾವಣೆ. ಸಧ್ಯಕಂತೂ ಆಡುವ ಮಕ್ಕಳ ಬಾಯಲ್ಲೂ ರಾರಾಜಿಸುತ್ತಿರುವ ಏಕಮಾತ್ರ ಪದವಿದು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈ ಮಟ್ಟಿನ ಉತ್ಸುಕತೆ, ಭಾಗವಹಿಸುವಿಕೆ, ಅರಚಾಡುವಿಕೆ ಬಹುಶಃ ಹಿಂದೆಲ್ಲೂ ನಮಗೆ ಸಿಗದು. ಇಂದು ಬದುಕಲು ಬೇಕಾಗಿರುವ ಗಾಳಿ, ನೀರು ಹಾಗು ಆಹಾರದಂತಹ ಕೆಟಗರಿಗಳಿಗೆ ಬಂದು ಸೇರಿರುವ ಇಂಟರ್ನೆಟ್ ಎಂಬ ಮಹಾ ಮಾಯಾವಿಯೇ ಇದಕ್ಕೆಲ್ಲ ಕಾರಣವೆಂಬುದು ಸರ್ವರಿಗೂ ತಿಳಿದಿರುವ ವಿಷಯ. ಇಲ್ಲಿ ಪ್ರತಿಯೊಬ್ಬನೂ ವಾಗ್ಮಿಯೇ. ಟ್ವೀಟು, ಕಾಮೆಂಟು, ಸ್ಟೇಟಸ್ಸು ಎನ್ನುತ್ತಾ ಡೆಮೋಕ್ರಸಿಯ ಸ್ವಾತಂತ್ರ್ಯವನ್ನು ಅಕ್ಷರಃ ಸಹ ಪಾಲಿಸುವ ಆತ ತಾನು ಅರಚಿ ವ್ಯಕ್ತ ಪಡಿಸಲಾಗದದನ್ನು ಕೀಬೋರ್ಡಿನ ಕೀಲಿಗಳನ್ನು ಕುಟ್ಟುತ್ತಾ ತೋರ್ಪಡಿಸ ಬಯಸುತ್ತಾನೆ. ಪದಗಳಿಗೆ, ಅವುಗಳಿಂದ ಮೂಡುವ ಹೊಲಸು ವಾಕ್ಯಗಳಿಗೆ ಬ್ರೇಕೇ ಇಲ್ಲದ ಇಲ್ಲೂ ಸಹ ಸಿಕ್ಕ ಸಿಕ್ಕವರ ಮಾನಹಾನಿ ಎಂಬುದು ನೀರು ಕುಡಿದಷ್ಟೇ ಸುಲಭ. ಜಾತಿ, ಮತ, ಪಂಥ ಎಂಬ ಅಸ್ತ್ರಗಳು ಯಾವುದೇ ಮುಲಾಜಿಲ್ಲದೆ ಇಲ್ಲಿ ಎಲ್ಲಡೆಯೂ ಬೇರುಬಿಟ್ಟಿವೆ. ಮೊದಲೆಲ್ಲ ಹೆದರಿ ಆಡಲಾಗುತ್ತಿದ್ದ ಮಾತುಗಳಿಗೀಗ ಶಿಳ್ಳೆ ಚಪ್ಪಾಳೆಗಳ ಜೊತೆಗೆ ಲೈಕು ಕಾಮೆಂಟುಗಳ ಪ್ರೋತ್ಸಾಹಗಳೂ ಸಿಗತೊಡಗಿವೆ. ನೀನು ಸೇರಾದರೆ ನಾನು ಸವಾಸೇರು! ನೀನು ಒಂದೆಂದರೆ ನಾನು ಹತ್ತನ್ನು ‘ಕುಟ್ಟ’ಬಲ್ಲೆ!! ಇಂಥಹ ಮನಸ್ಥಿತಿ ಇಂದು ಎಲ್ಲೆಡೆ ಮೂಡುತ್ತಿದೆ. ಪ್ರಸ್ತುತ ಚುನಾವಣೆಯಲ್ಲಂತೂ ಇಂತಹ ಕೆಸರೆರಚಾಟಗಳು ಯಾರ ಹಂಗಿಲ್ಲದೆಯೇ ಸಾಗಿವೆ. ಅದು ಪಿಎಂ ನಿಂದಿಡಿದು ಸಿಎಮ್ ರ ವರೆಗೂ ಪ್ರಸ್ತುತವಾಗಿದೆ. ಇಂಟರ್ನೆಟ್ ಲೋಕದಿಂದಿಡಿದು ಬೆಳಕು ಕಾಣದ ಗುಡಿಸಿಲಿನವರೆಗೂ ಅದು ಹರಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚೆಹರೆಯಾಗಿ, ಕೋಟಿ ಕೋಟಿ ದೇಶಾಭಿಮಾನಿಗಳ ಹೆಮ್ಮೆಯ ನಾಯಕನಾಗಿ, ಭಾರತದ ಪ್ರಧಾನಿಯ ಸ್ಥಾನದಲ್ಲಿ ಕೂತು ಚುನಾವಣೆಯ ಪ್ರಚಾರದ ಭರದಲ್ಲಿ ತಮ್ಮದೇ ದೇಶದ ಮುಖ್ಯಮಂತ್ರಿಗಳನ್ನು, ಮಾಜಿ ಪ್ರಧಾನಿಗಳನ್ನು ಸಾಮೂಹಿಕವಾಗಿ ಜರಿಯುವ ಪರಿ ಅದೆಷ್ಟರ ಮಟ್ಟಿಗೆ ಸರಿ? ರಾಜ್ಯದ ಘನವೆತ್ತ ಮುಖ್ಯಮಂತ್ರಿಯಾಗಿ, ಆರು ಕೋಟಿ ಜನರ ಮುಂದಾಳುವಾಗಿ, ಸಮಾಜದ ಅತಿ ಗೌರವಾನ್ವಿತ ಸ್ಥಾನದಲ್ಲಿ ಕೂತಿರುವ ಹಿರಿಯರಾಗಿ, ಸಿಗುವ ಕೇವಲ ಬೆರಳೆಣಿಕೆಯ ಮತಗಳ ದುರಾಸೆಯಲ್ಲಿ ದೇಶದ ನೂರು ಕೋಟಿ ಜನರ ಪ್ರಧಾನಮಂತ್ರಿಯನ್ನು ತೆಗಳುವಂತಹ ಮಾತುಗಳು ಆ ಸ್ಥಾನಕ್ಕೆ ಶೋಭೆ ತರುವಂಥಹದ್ದೇ? ಇಂತಹ ವೈಮನಸ್ಸಿನಿಂದ, ತಾರತಮ್ಯದಿಂದ, ಸರಿಹೊಂದದ ತಾಳಮೇಳದಿಂದ ಏಕರೂಪವಾದ ದೇಶದ ಅಭಿವೃದ್ಧಿ ನಿಜವಾಗಿಯೂ ಸಾಧ್ಯವವಿದೆಯೇ? ಇನ್ನು ಇವರುಗಳ ಹಿಂದಕ್ಕೂ ಮುಂದಕ್ಕೂ ಅಡ್ಡಾಡಿಕೊಂಡು ಕೈ ಮುಗಿದು ಕಾಲಿಗೆರಗಿ ದೇವತಾಮನುಷ್ಯರ ಸ್ಟೇಟಸ್ ಅನ್ನು ಗಿಟ್ಟಿಸಿಕೊಡಬಲ್ಲ ಇತರೆ ನಾಯಕರುಗಳನಂತೂ ಕೇಳುವುದೇ ಬೇಡ. ಘಂಟೆಗೊಂದು, ನಿಮಿಷಕ್ಕೊಂದರಂತೆ ಫೇಸ್ ಬುಕ್ಕಿನ ‘ನೇರಪ್ರಸಾರ’ದ ವಾಚಕರಾಗಿ, ನಾವೇ ಸರಿ, ಉಳಿದೆಲ್ಲವೂ ಸುಳ್ಳು ಎಂಬಂತೆ ಬೊಬ್ಬೆಯೊಡೆದು ಬೀಗುವ ಇವರುಗಳ ಮನಸ್ಥಿತಿಯಿಂದ ಸಮಾಜ ಕಲಿಯುವುದೇನು? ನಾಯಿ, ಸಗಣಿ, ಕಪಿ ಎಂಬ ಮೂಕಪ್ರಾಣಿಗಳಗೆ ಎದುರು ಪಕ್ಷದವರನ್ನು ಹೋಲಿಸಿ ಅವುಗಳ ಮರ್ಯಾದೆಯನ್ನೂ ಹಾಳುಮಾಡುವುದಲ್ಲದೆ ಹುಚ್ಚ, ಅರೆಹುಚ್ಚ, ಪಾಪಿ, ಕಳ್ಳ, ಸುಳ್ಳ ಎಂಬ ಹಣೆಪಟ್ಟಿಯನ್ನು ಮನಬಂದಂತೆ ಮನಬಂದವರಿಗೆ ಕಟ್ಟುವ ನ್ಯಾಯಾಧೀಶರಂತೆ ಆಗಿರುವ ನಾಯಕರನ್ನು ಹದ್ದುಬಸ್ತಿನಲ್ಲಿಡುವವರು ಯಾರು? ಇಂತಹ ಕೀಳುಮಟ್ಟದ ಪ್ರಚಾರದಿಂದ ನಾಗರಿಕತೆಯ ನಮ್ಮ ಪಯಣ ಹಿಮ್ಮುಖವಾಗಿ ಸಾಗುವುದರಲ್ಲಿ ದೂಸ್ರಾ ಮಾತೇ ಇಲ್ಲ ಅಲ್ಲವೇ?

ಕೋಟಿ ಕೋಟಿ ಜನರ ಬೆವರ ಹಣವನ್ನು ಕೊಳ್ಳೆಯೊಡೆದು ಸೆರೆವಾಸದ ಸುಖವನ್ನನುಭವಿಸಿ ಬಂದ ಭಂಡ ವ್ಯಕ್ತಿಗಳಿಗೆ ಟಿಕೇಟನ್ನು ನೀಡಿ, ಸಾಲದಕ್ಕೆ ಡೆಲ್ಲಿಯಿಂದ ಹಾರಿಕೊಂಡು ಬಂದು ಅವರ ಪರವಾಗಿ ಭಾಷಣಯೊಡೆಯುವ ಮುನ್ನ ತಾವು ಮಾಡುತ್ತಿರುವ ಕಾರ್ಯ ಅಕ್ಷರ ಸಹ ತಪ್ಪೆಂದು ಅವರುಗಳಾಗಲಿ ಅಥವಾ ಸತ್ಯವೇ ತನ್ನ ತಾಯಿ ತಂದೆ ಸತ್ಯವೇ ನನ್ನ ಬಂಧು ಬಳಗ ಎನ್ನುತ್ತಾ ‘ನೆಟ್ಟಿ’ನಲ್ಲಿ ನಲಿಯುವ ಇತರೆ ನಾಯಕರುಗಳಾಗಲಿ ಉಸಿರೆತ್ತಬಲ್ಲರೇ? ಪ್ರಶ್ನಿಸಬಲ್ಲರೇ? ಇಲ್ಲ ಖಂಡಿತವಾಗಿಯೂ ಇಲ್ಲ! ಏಕೆಂದರೆ ತಾವು ಒಂದು ಪಕ್ಷವನ್ನು ಅನುಸರಿಸಿದ ಮಾತ್ರಕ್ಕೆ ಅದರ ನಾಯಕರುಗಳು ಏನೇ ಅಂದರೂ ಅದು ವೇದವಾಕ್ಯಕ್ಕೆ ಸಮ! ಅವರ ಪ್ರತಿಯೊಂದು ನಡೆಯನ್ನು ಕಣ್ಣು ಕಟ್ಟಿ, ಕಿವಿಯ ಮುಚ್ಚಿ ಹಿಂಬಾಲಿಸುವ ಸುಶಿಕ್ಷಿತರ ಗುಂಪೊಂದೇ ಇಂದು ನಿರ್ಮಾಣವಾಗಿದೆ. ಆಧುನಿಕ ಜಗತ್ತಿನ ಹೊಸ ಬಗೆಯ ಗುಲಾಮಗಿರಿ ಇದ್ದಲ್ಲದೆ ಮತ್ತೇನು? ಅಲ್ಲದೆ ಇಂತಹ ಕಪಟ ನಾಯಕರ ದೌಲು, ಹುಂಬುತನ, ಹಗೆ, ದ್ವೇಷ ಹಾಗು ವೈರತ್ವದಿಂದ ಕೂಡಿದ ಮಾತುಗಳಿಗೆ ಮರುಳಾಗಿ ನಾವು ವೋಟನ್ನು ಒತ್ತಬೇಕೆ? ಅಷ್ಟಾಗಿಯೂ ಅಂತವರಿಗೇ ಓಟನ್ನು ಒತ್ತಿ ಸುಶಿಕ್ಷಿತರಾಗಿಯೂ ನಾವು ಅಶಿಕ್ಷಿತರಾಗಿದ್ದೀವಿ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಿದೆಯೇ? ದೇಶದ, ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಭರಾಟೆಯಲ್ಲಿ ಇಂದು ಚುನಾವಣೆಗಳು ನಡೆಯುತ್ತಿವೆ. ಜಾತಿ ಹಾಗು ಧರ್ಮದ ರಾಜಕಾರಣ ಸಮಾಜವನ್ನೇ ಒಡೆದು ಹೋಳಾಗಿಸುವ ಭರದಲ್ಲಿ ಮುನ್ನುಗ್ಗುತ್ತಿದೆ. ಇಂದಿನ ಯಾವೊಬ್ಬ ರಾಜಕಾರಣಿಯ ಬಾಯಲ್ಲೂ ಏಕತೆ, ಅನ್ಯೂನ್ಯತೆ, ಸಹಬಾಳ್ವೆ ಎಂಬ ಪದಗಳೇ ಮೂಡದಾಗಿವೆ. ಪ್ರತಿಯೊಂದು ಕ್ಷೇತ್ರದ ಟಿಕೆಟ್ಟಿಗೂ ಜಾತಿವಾರು ಸರ್ವೆಗಳೇ ಮೂಲಾಧಾರವಾಗಿರುತ್ತವೆ.  ಅಲ್ಲ ಸ್ವಾಮಿ, ನಮ್ಮ ಹಿರೀಕರೇನೋ ತಿಳಿದೋ ತಿಳಿಯದೆಯೋ ನೂರಾರು ಜಾತಿ ಪಂಗಡಗಳನ್ನು ಸೃಷ್ಟಿಸಿ ಮರೆಯಾದರು. ಇಷ್ಟೆಲ್ಲಾ ಜಾತಿಗಳಿರುವುದರಿಂದ ಗುಂಪು ಪಂಗಡಗಳನ್ನು ಲೆಕ್ಕ ಹಾಕುತ್ತೀರಾ. ಒಂದು ಪಕ್ಷ ಇಂತಹ ಜಾತಿ ಧರ್ಮಗಳೇ ಇಲ್ಲದ ನಾಡು ನಮ್ಮದಾಗಿದ್ದರೆ ಯಾವ ಆಧಾರದ ಮೇಲೆ ನಿಮ್ಮ ಟಿಕೇಟುಗಳು ಹಂಚಿಕೆಯಾಗುತ್ತಿದ್ದವು?! ಅದ್ಯಾವ ಬಗೆಯ ಸಮೀಕರಣ ನಿಮ್ಮನ್ನು ಗೆಲ್ಲಿಸುತಿತ್ತು? ಒಂದು ಧರ್ಮವನ್ನು ನಿಂದಿಸಿ ಮತಯಾಚಿಸುವ ಮನಸ್ಸುಗಳು ಇಂದು ಬದಲಾಗಬೇಕಿದೆ.

‘ನಾನು ಸಾಯುತ್ತೀನಿ, ಸಾಯುವ ಮೊದಲೊಮ್ಮೆ ಗೆಲ್ಲಿಸಿ’ ಎಂಬ ನಾಟಕೀಯ ಮಾತುಗಳಿಗೆ ಮಣೆಯಾಕುವುದನ್ನು ನಿಲ್ಲಿಸಬೇಕಿದೆ. ಭಾರತ ರತ್ನ ವ್ಯಕ್ತಿಯ ಹೆಸರನ್ನೇ ಕತ್ತರಿಸಿ ಉಚ್ಚರಿಸಬಲ್ಲದ ನಾಯಕರಿಂದ ನಾವುಗಳು ಕಲಿಯಬೇಕೇ? ಹಣಕೊಟ್ಟು ಕಟ್ಟಿದ ಗುಂಪಿನ ಮುಂದೆ ದೇಶಾಭಿಮಾನದ ಮಾತುಗಳನ್ನು ಸುರಿದರೆ ಸಮಾಜ ಉದ್ಧಾರವಾದೀತೇ? ಇಂತಹ ಪರಿಸ್ಥಿಯಲ್ಲಿ ಎಲ್ಲೆಲ್ಲಿಯೂ ಅಂಧ ಗುಂಪುಗಾರಿಕೆಯೆ ರಾರಾಜಿಸುತ್ತಿರುವಾಗ ಯಾವ ಗುಂಪನ್ನು ನಾವು ಸೇರಬೇಕು ಅಥವ ಯಾವ ಗುಂಪಿಗೆ ನಮ್ಮ ಬೆಂಬಲ ಮೂಡಬೇಕು? ಈ ಆಯ್ಕೆಯೂ ಬೇಡ ಮುಂದೆ ಅದರಿಂದುಟಾಗುವ ಕಹಿ ಅನುಭವವೂ ಬೇಡವೆಂದನ್ನುತ್ತಿದೆ ಮನದ ಮಾತು!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments