ವಿಷಯದ ವಿವರಗಳಿಗೆ ದಾಟಿರಿ

ಮೇ 31, 2018

ದೇಶಾಭಿಮಾನದ ಮುಂದೆ ದೇಹಾಭಿಮಾನವನ್ನು ಮರೆಯಾಗಿಸಿದ ನಾಯಕ..

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಗುಡಾಣ ದೇಹದ ಮೇಲಿನ ಕರಿ ಕೋಟು, ತಲೆಯ ಮೇಲೊಂದು ಹಾಂಬರ್ಗ್ ಹ್ಯಾಟು, ಹುಟ್ಟುವಾಗಲೇ ಅಂಟಿಕೊಂಡು ಬಂದಿತ್ತೇನೋ ಎಂಬಂತೆ ಬಾಯನ್ನು ಬಿಟ್ಟಿರದ ಹೊಗೆಯಾರದ ಸಿಗಾರಿನೊಂದು ತುಂಡು, ಕೈಯಲ್ಲೊಂದು ಭಯ ಹುಟ್ಟಿಸುವ ವಾಕಿಂಗ್ ಸ್ಟಿಕ್ಕು. ಇವಿಷ್ಟೇ ಸಾಕು ಇಪ್ಪತ್ತನೇ ಶತಮಾನದ ಕಾಂಟ್ರವೇರ್ಷಿಯಲ್ ವ್ಯಕ್ತಿತ್ವವೊಂದನ್ನು ಬಣ್ಣಿಸಲು. ಭಾರತೀಯರ ಮಟ್ಟಿಗೆ ಗಾಂಧಿಯನ್ನು ಜರಿಯುತ್ತಿದ್ದ, ಭಾರತವನ್ನು ನಿಂತ ನೆರಳಿಗೆ ಆಗದ ಅಲ್ಲದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಕಾರಣನಾದ ಈತ ದೇಶಪ್ರೇಮಿಗಳಿಗೆ ಅಕ್ಷರ ಸಹ ವಿಲನ್ನಂತಾದರೂ ಬ್ರಿಟನ್ನಿಗರ ಪಾಲಿಗೆ ಮಾತ್ರ ಸಾಕ್ಷಾತ್ ದೇವಧೂತ! ಪ್ರಪಂಚವನ್ನೇ ನುಂಗಿ ನೀರು ಕುಡಿಯುವಂತೆ ಧಾವಿಸುತಿದ್ದ ಹಿಟ್ಲರ್ ಎಂಬ ರಾಕ್ಷಸನಿಂದ ಬ್ರಿಟನ್ನನ್ನು ರಕ್ಷಿಸಿದನಲ್ಲದೆ ಎರಡನೇ ಮಹಾಯುದ್ದಕ್ಕೂ ಅಂತ್ಯವನ್ನು ಹಾಡಿಸಿದವನೀತ. ಎರಡು ಬಾರಿ ಬ್ರಿಟನಿನ್ನ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ ಈತ ಒಬ್ಬ ಬರಹಗಾರ, ಅಧಿಕೃತ ಪತ್ರಕರ್ತ, ಸೇನಾನಾಯಕ ಹಾಗು ಒಬ್ಬ ಖ್ಯಾತ ಚಿತ್ರಗಾರನೂ ಹೌದು. ಕೆಲವು ನೆಗೆಟಿವ್ ಅಂಶಗಳನ್ನು ಬದಿಗಿರಿಸಿ ಈತನನ್ನು ನೋಡಬಯಸಿದವರಿಗೆ ವಿಶ್ವವನ್ನೇ ಆಳಿದ ದೇಶವೊಂದು ಹಿಟ್ಲರ್ನ ನಾಝಿ ಜರ್ಮನಿಯ ಗುಲಾಮನಾಗಬೇಕಿದ್ದ ಸಂದಿಗ್ಧ ಘಳಿಗೆಯಲ್ಲಿಯೂ ತಲೆ ತಗ್ಗಿಸದೆ ಹೋರಾಡಿದ ಧೈರ್ಯಶಾಲಿ ನಾಯಕನೊಬ್ಬ ಅನಾವರಣಗೊಳ್ಳುತ್ತಾನೆ. ಅವನ ಹೆಸರು ವಿನ್ಸ್ಟನ್ ಲಿಯೊನಾರ್ಡ್ ಸ್ಪೆನ್ಸರ್ ಚರ್ಚಿಲ್.

ಇಂಗ್ಲೆಂಡಿನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರೂ ಯುದ್ಧ ಭೂಮಿಯ ಸದ್ದು ಗದ್ದಲಗಳ ಕತೆಯನ್ನೇ ಕೇಳುತ್ತಾ ಬೆಳೆದವನೀತ. ಮುಂದೊಂದು ದಿನ ಬಂದೆರಗುವ ಯುದ್ಧನಾಯಕನ ಸ್ಥಾನಕ್ಕೆ ಇಂದೇ ತಯಾರಿ ನಡೆಸುವಂತೆ! ತನ್ನ ಓದು ಮುಗಿದ ಕೂಡಲೇ ಬ್ರಿಟನ್ ಸೈನ್ಯಕ್ಕೆ ಸೇರಿ ಅದರ ನಿಮಿತ್ತ ಕ್ಯೂಬಾ, ಸೂಡಾನ್ ಅಲ್ಲದೆ ಭಾರತಕ್ಕೂ ಈತ ಬಂದು ಹೋಗಿರುವುದುಂಟು. 1895 ರಿಂದ 1899 ರ ಮಧ್ಯೆ ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಈತ ನೆಲಸಿದ್ದನೆಂದು ಇತಿಹಾಸ ತಿಳಿಸುತ್ತದೆ. ಅಂದು ಒಬ್ಬ ಪತ್ರಕರ್ತನಗಾಗಿ ದೇಶದ ಹಲವೆಡೆ ಸಂಚರಿಸಿ ಆ ಕಾಲಕ್ಕೆ ಜರುಗುತಿದ್ದ ಯುದ್ಧ ಹಾಗು ಬಂಡಾಯಗಳ ಸುದ್ದಿಯನ್ನು ಇಂಗ್ಲೆಂಡಿನ ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಿದ್ದ. ಅದೇ ಸಮಯದಲ್ಲಿ ಯುದ್ಧ ಹಾಗು ದಂಗೆಗಳ ಕುರಿತ ಹಲವಾರು ಪುಸ್ತಕಗಳನ್ನೂ ಈತ ರಚಿಸುತ್ತಾನೆ. ಗುಣಸಹಜವಾಗಿ ಬಂದಿತ್ತೇನೋ ಎಂಬಂತಿದ್ದ ವಾಕ್ ಚಾತುರ್ಯ, ಎಂತದೇ ವಿಷಮ ಪರಿಸ್ಥಿಯಲ್ಲೂ ಕಳೆಗುಂದದ ದೃಢ ವ್ಯಕ್ತಿತ್ವವನ್ನೊಂದಿದ್ದ ಈತನಿಗೆ ಮುಂದೆ ಬ್ರಿಟನ್ನಿನ ಪಾರ್ಲಿಮೆಂಟನ್ನೇರುವುದು ತೀರಾ ಕಷ್ಟದ ಕಾಯಕವೇನಾಗಲಿಲ್ಲ.

ಪಾರ್ಲಿಮೆಂಟಿನ ವಿದೇಶಾಂಗ ಖಾತೆಯಿಂದ ಹಿಡಿದು ಸೈನ್ಯದ ಉಸ್ತುವಾರಿಯನ್ನೂ ಸಂಭಾಳಿಸುವ ಹುದ್ದೆಯನ್ನು ನಲ್ವತ್ತು ವರ್ಷದ ಚರ್ಚಿಲ್ ತನ್ನ ಹೆಗಲ ಮೇಲೇರಿಸಿಕೊಂಡಿರುತ್ತಾನೆ ಎಂದರೆ ಬ್ರಿಟನ್ನಿನಲ್ಲಿ ಅಂದು ಆತನ ಪ್ರಭಾವ ಎಷ್ಟಿತೆಂದು ನಾವು ಊಹಿಸಬಹುದು. ಆದರೆ ಮಾನವ ತಾನೊಂದು ಬಯಸಿದರೆ ಕಾಲ ಬೇರೊಂದು ದಿಕ್ಕಿನಲ್ಲಿ ಆತನನ್ನು ಎಳೆದೊಯ್ಯುತ್ತದೆ. ಅದು ಮೊದಲನೇ ಮಹಾಯುದ್ಧ ಶುರುವಾದ ಕಾಲ. ಪ್ರಸುತ್ತ ಇಸ್ತಾನ್ ಬುಲ್ ನನ್ನು ಆಕ್ರಮಿಸುವ ನಿರ್ಧಾರವನ್ನು ಕೈಗೊಂಡ ಚರ್ಚಿಲ್, ಹಲವರ ಅಸಮಾಧಾನದ ನಡುವೆಯೇ ರಷ್ಯಾ ಹಾಗು ಫ್ರಾನ್ಸ್ ಸೈನಿಕರ ಸಹಯೋಗದಿಂದ ಇಸ್ತಾನ್ ಬುಲ್ ನ ನಿಜಶಕ್ತಿಯನ್ನು ಅರಿಯದೆಯೇ ಅದರ ಮೇಲೆ ಮುಗಿಬೀಳುತ್ತಾನೆ. ಪರಿಣಾಮ ಕೆಲ ತಿಂಗಳ ಅಂತರದಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಾವಿನ ಕೂಪದೊಳಗೆ ತಳ್ಳಿದ ಅಪವಾದವನ್ನು ಹೊತ್ತು ಸರ್ಕಾರದಲ್ಲಿದ್ದ ತನ್ನೆಲ್ಲ ಸ್ಥಾನಗಳಿಗೆಲ್ಲ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಇಂದು ತುಘಲಕ್ ನನ್ನು ಹೇಗೆ ಭಾರತದ ಇತಿಹಾಸ ಪರಿಹಾಸ್ಯ ಮಾಡುತ್ತದೆಯೂ ಹಾಗೆಯೆ ಅಂದು ಹಲವರು ಚರ್ಚಿಲ್ ನನ್ನು ಉಗಿಯತೊಡಗಿದರು. ಆದರೆ ಅಪಮಾನದ ಮಾತುಗಳಿಗೆ ನೊಂದು ಮುಖ ಮುಚ್ಚಿಕೊಂಡು ಮಲಗುವ ವ್ಯಕ್ತಿತ್ವ ಚರ್ಚಿಲ್ ನದ್ದಾಗಿರಲಿಲ್ಲ. ಅಲ್ಲಿಯವರೆಗೂ ಹೇಳಿ ಮಾಡಿಸುತ್ತಿದ್ದ ಆತ ಈಗ ಮಾಡಿ ತೋರಿಸುವ ಹಾದಿಯನ್ನು ಹಿಡಿಯುತ್ತಾನೆ. ಗನ್ನು ಬಾಂಬುಗಳೊಟ್ಟಿಗೆ ನೇರವಾಗಿ ಯುದ್ಧರಂಗವನ್ನು ಪ್ರವೇಶಿಸುತ್ತಾನೆ. ಮೊದಲ ಮಹಾಯುದ್ಧದ ತೀವ್ರತೆ ಉತ್ತುಂಗದಲ್ಲಿದ್ದ ಆ ಕಾಲದಲ್ಲಿ ಲೆಫ್ಟಿನೆಂಟ್ ಕರ್ನಲ್ ನಾಗಿ ಸೇನಾತುಕಡಿಯೊಂದನ್ನು ಮುನ್ನೆಡೆಸುತ್ತಾನೆ. ವಿಶೇಷವೆಂದರೆ ಇತ್ತಕಡೆ ಚರ್ಚಿಲ್ ಯುದ್ಧಭೂಮಿಯಲ್ಲಿ ರಣತಂತ್ರ ರಚಿಸುತ್ತಿದ್ದರೆ ಅದೇ ಸಮಯಕ್ಕೆ ಅತ್ತ ಕಡೆ ಯುವ ಹಿಟ್ಲರ್ ಜರ್ಮನಿಯ ಪರವಾಗಿ ತನ್ನ ರಕ್ತ ಬೆವರನ್ನು ಸುರಿಸಿ ಸೆಣೆಸಾಡುತಿದ್ದ. ಇಬ್ಬರು ಒಬ್ಬರನೊಬ್ಬರು ಸಂಧಿಸದಿದ್ದರೂ, ಅಂದು ಯುದ್ಧಭೂಮಿಯಲ್ಲಿ ಏಕಕಾಲಕ್ಕೆ ವೈರಿಗಳಾಗಿ ಸೆಣೆಸಿದ ಸೈನಿಕರಿಬ್ಬರು ಇನ್ನು ಕೆಲವೇ ವರ್ಷಗಳಲ್ಲಿ ಆಯಾ ದೇಶಗಳ ಉನ್ನತ ಹುದ್ದೆಯನ್ನು ಅಲಂಕರಿಸಿ ಒಬ್ಬರ ಮೇಲೊಬ್ಬರು ಮುಗಿಬೀಳುತ್ತಾರೆ ಎಂದು ಯೋಚಿಸಿರಲು ಯಾರಿಂದಲೂ ಸಾಧ್ಯವಿರಲಿಲ್ಲ. ನೆನ್ನೆ ಮೊನ್ನೆಯವರೆಗೂ ಸರ್ಕಾರವನ್ನು ನಡೆಸುತ್ತಿದ್ದ ಚರ್ಚಿಲ್ ಇಂದು ಯುದ್ಧರಂಗಕ್ಕೆ ಬಂದು ನಿಂತ ಆತನ ನಡೆ ಸೈನಿಕರ ಆತ್ಮಸ್ಥೈರ್ಯವನ್ನು ನೂರುಪಟ್ಟು ಹೆಚ್ಚಿಸಿದಂತೂ ಸುಳ್ಳಲ್ಲ. ಅಲ್ಲದೆ ಅತ್ತ ಕಡೆ ಚರ್ಚಿಲ್ ನನ್ನು ಮನಸೋಇಚ್ಛೆ ಬಯ್ಯುತಿದ್ದವರಿಗೂ ಆತನ ಈ ನಡೆಯಿಂದ ಕೊಂಚ ಮುಜುಗರವಾಗತೊಡಗಿತು. ಎಷ್ಟಿದ್ದರೂ ಆತನ ನಿರ್ಧಾರ ಅಂದು ಬಿಟನ್ನಿಗರ ಒಳಿತಿಗಾಗಿಯೇ ಆಗಿದ್ದಿತು ಎಂಬೊಂದು ಅಭಿಪ್ರಾಯ ಒಬ್ಬೊಬ್ಬರಲ್ಲೇ ಮೂಡತೊಡಗಿತು. ಪರಿಣಾಮ ಪಾರ್ಲಿಮೆಂಟಿನ ಬಾಗಿಲುಗಳು ಆತನಿಗಾಗಿ ತಾನಾಗಿಯೇ ತೆರೆಯತೊಡಗಿದವು. 1917 ರಲ್ಲಿ ಯುದ್ಧಸಾಮಗ್ರಿಗಳ ಸಚಿವನಾಗಿ ಪುನಃ ಆತ ಸರ್ಕಾರದ ಕುರ್ಚಿಯನ್ನು ಅಲಂಕರಿಸುತ್ತಾನೆ.

1920 ರ ಸುಮಾರಿಗಾಗಲೇ ಚರ್ಚಿಲ್ ನ ಮಾತುಗಳೆಂದರೆ ಬೆಂಕಿಯ ಕಿಡಿಗಳಂತೆ ಬ್ರಿಟನ್ನಿನಾದ್ಯಂತ ಸದ್ದುಮಾಡುತ್ತಿದ್ದವು. ನೇರ ನುಡಿಯ ಕಟು ಪದಗಳ ಆಗರವಾಗಿದ್ದ ಆತ ಗಾಂಧಿಯನ್ನಂತೂ ಮನ ಬಂದಂತೆ ಜರಿಯುತ್ತಿದ್ದ. ಅವರ ಚಳುವಳಿಯ ತೀವ್ರತೆಗೆ ಬೇಸತ್ತು ‘ಗಾಂಧಿಯನ್ನು ಕೈ ಕಾಲು ಕಟ್ಟಿ ನಮ್ಮ ವೈಸ್ ರಾಯ್ ಯೊಬ್ಬರು ಕುಳಿತಿರುವ ಆನೆಯಿಂದ ತಿವಿದು- ತಿವಿದು ಸಾಯಿಸಬೇಕು’ ಎಂದಿದ್ದ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಉಪವಾಸನಿರತರಾಗಿ ಬ್ರಿಟಿಷ್ ರಾಜ್ ನ ದಬ್ಬಾಳಿಕೆಯ ವಿರುದ್ದ ಅಹಿಂಸಾ ಅಸ್ತ್ರವನ್ನು ಪ್ರಯೋಗಿಸಿ ದಿನಗಳನ್ನು ತಳ್ಳುತ್ತಿದ್ದಾಗ ‘ಗಾಂಧಿ ಇನ್ನೂ ಸಾಯಲಿಲ್ಲವೇಕೆ? ಆತ ಇದೆ ಚಳುವಳಿಯಲ್ಲಿ ಹಸಿವಿನಿಂದ ಸತ್ತರೆ ನನಗೆ ಅಭ್ಯಂತರವೇನೂ ಇಲ್ಲ’ ಎಂದಿದ್ದ ಸಿಡುಕು ಮೋರೆಯ ಚರ್ಚಿಲ್. 1942-43 ರಲ್ಲಿ, ಪ್ರಧಾನಿಯಾಗಿ ಎರಡನೇ ವಿಶ್ವಯುದ್ಧವನ್ನು ಎದುರಿಸುತ್ತಿದ್ದಾಗ, ಒಂದೊತ್ತು ತುತ್ತಿಗೂ ಹಾಹಾಕಾರವೆದ್ದಿದ್ದ ಬಂಗಾಳದ ಜನರಿಗೆ ಆಹಾರ ಪೂರೈಸುವ ಬದಲು ರಾಶಿ ರಾಶಿ ಆಹಾರವನ್ನು ಬ್ರಿಟನ್ನಿನ ಹಾಗು ಇತರೆ ಯುರೋಪಿಯನ್ ರಾಷ್ಟ್ರಗಳ ಗೋದಾಮುಗಳಲ್ಲಿ ಜಮಾವಣೆಗೊಳಿಸಿದ. ಅಂದು ಹಸಿವಿನ ಬೇಗೆಯಿಂದಲೇ ಸತ್ತ ಭಾರತೀಯರ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಮಿಗಿಲು!!

ಎರಡನೇ ಮಹಾಯುದ್ಧ (1939-1945)
1939 ರಷ್ಟರಲ್ಲಾಗಲೇ ವಿಶ್ವದ ಭಾಗಶಃ ರಾಷ್ಟ್ರಗಳೆಲ್ಲ ಎರಡು ಬಣಗಳಾಗಿ ವಿಂಗಡಣೆಗೊಂಡವು. ಜರ್ಮನಿ, ಜಪಾನ್ ಹಾಗು ಇಟಲಿ ಒಂದೆಡೆಯಾದರೆ ಬ್ರಿಟನ್, ಫ್ರಾನ್ಸ್, ಅಮೇರಿಕ, ರಷ್ಯಾ(ಸೋವಿಯತ್ ಯೂನಿಯನ್), ಚೀನಾ, ಆಸ್ಟ್ರೇಲಿಯಾ ಹಾಗು ಕೆನಡಾ ದೇಶಗಳು ಮುಂದೆ ಕಾಲಾನುಕ್ರಮವಾಗಿ ಒಂದುಗೊಂಡು ಮೇಲಿನ ಮೂರು ರಾಷ್ಟ್ರಗಳ ವಿರುದ್ಧ ಮುಗಿಬಿದ್ದವು. 1939 ರಲ್ಲಿ ಜರ್ಮನಿ ಪೋಲೆಂಡ್ ನನ್ನು ಆಕ್ರಮಿಸುವ ಮೂಲಕ ಶುರುವಾದ ಯುದ್ಧ 1945 ರಲ್ಲಿ ಜಪಾನ್ ಶರಣಾಗತಿಯಾಗುವ ವರೆಗೂ ಮುಂದುವರೆಯಿತು. ಪೋಲೆಂಡ್ ನ ಮೇಲಿನ ಆಕ್ರಮಣದ ರುಚಿಯನ್ನು ಕಂಡ ಹಿಟ್ಲರ್ ತನ್ನೆಲ್ಲ ಶಕ್ತಿಯನ್ನು ಮೀರಿ ಸುತ್ತಮುತ್ತಲಿನ ದೇಶಗಳನ್ನು ಬಡಿದುರುಳಿಸಲು ಹವಣಿಸತೊಡದ. ತದಾನಂತರ ನೆದರ್ಲ್ಯಾಂಡ್, ಬೆಲ್ಜಿಯಂ, ಲೆಕ್ಸೆಮ್ ಬರ್ಗ್, ಫ್ರಾನ್ಸ್, ಡೆನ್ಮಾರ್ಕ್, ಯುಗೋಸ್ಲೋವಿಯಾ, ಗ್ರೀಸ್, ನಾರ್ವೆ ಹೀಗೆ ಹೆಚ್ಚುಕಡಿಮೆ ಅರ್ಧಕರ್ದ ಯೂರೋಪ್ ಖಂಡವನ್ನೇ ಕಬಳಿಸತೊಡಗುತ್ತಾನೆ. ಮೊದಲನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸೋಲು ಹಾಗು ಯೂರೋಪಿನ ಇತರೆಡೆ ಜರ್ಮನಿಗರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನೇ ಮಿಗಿಲಾಗಿಕೊಂಡು ಜರ್ಮನಿಗರನ್ನು ಹುರಿದುಂಬಿಸಿ, ಮತಾಂಧತೆಯ ಕ್ರೌರ್ಯದಲ್ಲಿ ಯಹೂದಿಗಳನ್ನು ಪ್ರಾಣಿಗಳಂತೆ ಚಿತ್ರಹಿಂಸೆ ಕೊಟ್ಟು ಸಾಯಿಸಿ, ವಿಶ್ವವನ್ನೇ ಗೆಲ್ಲಬೇಕೆಂಬ ಹುಚ್ಚುಕುದುರೆಯ ಮೇಲೇರಿ ಹೊರಟವನಿಗೆ ಕಂಡ ನಂತರದ ಹಾಗು ಕೊನೆಯ ರಾಷ್ಟ್ರ ಬ್ರಿಟನ್. ಬ್ರಿಟನ್ನಿನ ಮೇಲಿನ ಈ ಆಕ್ರಮಣ ಬಹುಷಃ ತನ್ನ ಜೀವನದ ಕೊನೆಯ ಆಕ್ರಮಣವಾದಿತೆಂದು ಹಿಟ್ಲರ್ ಊಹಿಸಿರಲೂ ಸಾಧ್ಯವಿಲ್ಲ. ಹಿಟ್ಲರ್ ಅಂದು ತಾನು ಕಬಳಿಸಿದ ದೇಶಗಳು ಶಸ್ತಾಸ್ರ ಹಾಗು ಸೇನಾಬಲದಲ್ಲಿ ಅಸಮರ್ಥವಾಗಿದ್ದವು ಎನ್ನುವುದಕ್ಕಿಂತ ಮಿಗಿಲಾಗಿ ಅವುಗಳಿಗೆ ಕಾಡಿದ ಅತಿ ದೊಡ್ಡ ಸಮಸ್ಯೆ ಎಂದರೆ ಒಬ್ಬ ಸಮರ್ಥ ನಾಯಕನದಾಗಿದ್ದಿತು. ಆದರೆ ಇದೆ ಮಾತು ಬ್ರಿಟನ್ನಿನ ವಿಷಯದಲ್ಲಿ ಮಾತ್ರ ಸುಳ್ಳಾಯಿತು. ಏಕೆಂದರೆ ಯುದ್ಧವೆಂಬ ಸಂದಿಘ್ನ ಸ್ಥಿತಿಯಲ್ಲೂ ಹಿಟ್ಲರ್ ನೆಂಬ ನರರಾಕ್ಷಸನ ಮುಂದೆ ಎದೆಯುಬ್ಬಿಸಿ ನಿಲ್ಲುವ ಧೈರ್ಯ ತೋರಿ ಅಂದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸಮ್ಮತಿಸಿದ ವಿನ್ಸೆಟ್ ಚರ್ಚಿಲ್ ಎಂಬ ಅಜಾತಶತ್ರು ಬ್ರಿಟನ್ನಿನ ಪ್ರಧಾನಿಯಾಗಿದ್ದರಿಂದ.

ಅಂದಿನ ಬ್ರಿಟನ್ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ಜರ್ಮನಿಯ ಮೇಲೆ ಮಾನ ಉಳಿಸಿಕೊಳ್ಳಲು ಎಂಬಂತೆ ಬಾಯಿಮಾತಿಗೆ ಯುದ್ಧ ಸಾರಿದರೂ ಹಿಟ್ಲರ್ ನ ರಣಶಕ್ತಿಯ ಭಯದ ನಡುಕ ಒಳಗೊಳಗೇ ಹರಿದಾಡುತ್ತಿತ್ತು. ಅಲ್ಲದೆ ಅಂದಿನ ಸರ್ಕಾರದ ಅದೆಷ್ಟೋ ಮಂತ್ರಿಗಳಿಗೇ ಯುದ್ದದಲ್ಲಿ ಬ್ರಿಟನ್ನಿನ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಮನವರಿಕೆಯೂ ಆದಂತಿತ್ತು. ಆದದ್ದು ಆಗಲಿ ಹಿಟ್ಲರ್ ನೊಟ್ಟಿಗೆ ಶಾಂತಿ ಮಾತುಕತೆಯನ್ನು ಮಾಡಿ ಮುಂದೆ ಬಂದೆರಗುವ ಸಾವುನೋವುಗಳಿಗೆ ಫುಲ್ಸ್ಟಾಪ್ ಒಂದನ್ನು ಜಡಿಯೊಣ ಎಂದರೆ ಪ್ರಪಂಚವನ್ನೇ ಆಳಿದ ‘ಗ್ರೇಟ್’ ರಾಷ್ಟ್ರವೊಂದು ಯುದ್ಧ ಸಾರಿ, ಗುಂಡಿನ ಒಂದು ಸದ್ದನ್ನೂ ಕೇಳುವ ಮೊದಲೇ ಸೋಲನೊಪ್ಪಿಕೊಂಡಿತೆಂದರೆ ಅದರಿಂದಾಗುವ ಅವಮಾನ ಮಾತ್ರ ಮುಂದಿನ ಸಾವಿರ ವರ್ಷಗಳು ಬಂದರೂ ಅಳಿಸಿಹಾಕಲಾಗದು. ಹಾಗಾದರೆ ಗೆಲ್ಲಲು ತಾಕತ್ತಿಲ್ಲದಾದರೂ ಅಮಾಯಕ ಸೈನಿಕರ ಜೀವವನ್ನು ಬಲಿಕೊಡಬೇಕೆ? ಹಿಟ್ಲರ್ನ ಮುಂದೆ ಕೈಚಾಚಿ ‘ಹೇಯ್ಲ್ ಹಿಟ್ಲರ್’ ಎಂದು ನಾಝಿ ಸಲಾಂ ಒಂದನ್ನು ಹೊಡೆದರೆ ಸಬ್ ಕುಚ್ ಕತಮ್ ಆಗಿಬಿಡುವುದಿಲ್ಲವೇ? ಸೈನಿಕರ ಪ್ರಾಣ, ವಿಶ್ವವನ್ನು ಕೊಳ್ಳೆಹೊಡೆದ ಹಣ ಎಲ್ಲವು ಉಳಿಯುದಿಲ್ಲವೇ? ಈ ದ್ವಂದ್ವದ ಪರಿಸ್ಥಿತಿಯಲ್ಲಿ ಪ್ರಧಾನಿಗೆ ಕೂಡಲೇ ನೆನಪಾದ ಹೆಸರು ಬೊಜ್ಜು ಬೆಳೆಸಿಕೊಂಡು ಊದುಬಿದ್ದಿದ್ದ ಚರ್ಚಿಲ್. ಬ್ರಿಟನಿನ್ನ ಸೈನ್ಯವನ್ನು ನಡೆಸಲು ಒಬ್ಬ ಸಮರ್ಥ ನಾಯಕ ಯಾರಾಗಬೇಕೆಂದು ಚರ್ಚೆಯಾದಾಗ ಬಹುಪಾಲು ಜನರೂ ಚರ್ಚಿಲ್ ನೆಡೆಗೆ ಬೊಟ್ಟುಮಾಡಿದರು. ಆದರೆ ಹಿಂದೊಮ್ಮೆ ಅದೇ ಹುದ್ದೆಯಲ್ಲಿ ಲಕ್ಷಾಂತರ ಸೈನಿಕರ ಪ್ರಾಣವನ್ನು ಮನ ಬಂದಂತೆ ಬಲಿಕೊಟ್ಟು, ಅಶ್ರುವಾಯುವನ್ನು (ಟಿಯರ್ ಗ್ಯಾಸ್ / ರಾಸಾಯನಿಕ ಶಸ್ತ್ರಾಸ್ತ್ರ) ಬಳಸಲು ಅನುಮತಿ ನೀಡಿದ್ದನೆಂಬ ಅಪವಾದವೂ ಈತನ ಮೇಲಿದ್ದಿದ್ದರಿಂದ ಒಂದು ಬಣ ಈತನನ್ನು ಕ್ರೂರತೆಯ ಆಗರವೆಂದು ಜರಿಯತೊಡಗಿತು. ಪ್ರಧಾನಿಗೂ ಇಂತಹ ವ್ಯಕ್ತಿಯೇ ಬೇಕಾಗಿದ್ದಿತು. ಹಿಟ್ಲರ್ ನೆಂಬ ನರರಾಕ್ಷಸನ ಮುಂದೆ ತಲೆಯೆತ್ತಿ ನಿಲ್ಲಲು ಈ ವ್ಯಕ್ತಿತ್ವವಲ್ಲದೇ ಮತ್ಯಾವುದೂ ಸಮನಾಗುತ್ತಿರಲಿಲ್ಲ. ಪ್ರಧಾನಿ ಈ ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರಿಂದ ಚರ್ಚಿಲ್ನನ್ನು ಸುಮಾರು ಇಪ್ಪತೈದು ವರ್ಷಗಳ ನಂತರ ಪುನಃ ಸೇನ್ಯಾಧಿಪತಿಯ ಸ್ಥಾನಕ್ಕೆ ಬರುವಂತೆ ಕೋರಿಕೊಳ್ಳುತ್ತಾರೆ. ಜೀವನವೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಯುದ್ಧ ಹಾಗು ಸೈನ್ಯಗಳ ನಡುವೆ ಬೆಳೆದಿದ್ದ ಚರ್ಚಿಲ್ ತನ್ನ ಜೀವನದ ಅಷ್ಟೂ ಏಳುಬೀಳುಗಳು ಈ ಒಂದು ಸ್ಥಾನವನ್ನೇರಲೇ ಬಂದವೇನೋ ಅಂದುಕೊಳ್ಳುತ್ತಾನೆ. ಆದರೆ ಕೆಲದಿನಗಳ ಒಳಗೇ ಈ ಮಾತು ಸುಳ್ಳಾಗುತ್ತದೆ! ಆತನ ಜೀವನದ ಮಹಾಗುರಿ ಇನ್ನು ಒಂದು ಸ್ತರ ಮೇಲಿರುತ್ತದೆ! ಎರಡನೇ ಮಹಾಯುದ್ಧದ ಕಾವು ಬೆಂಕಿಯ ಉಂಡೆಗಳಾಗಿ ಬ್ರಿಟನನ್ನು ಅವರಿಸತೊಡಗಿದಾಗ ಜನರಲ್ಲಿ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ನ ಮೇಲೆ ವಿಶ್ವಾಸವೇ ಇಲ್ಲದಂತಾಗುತ್ತದೆ. ಹಿಟ್ಲರ್ನ ಗುಡುಗು ಮಿಂಚಿನಂತಹ ಮಾತುಗಳಿಗೆ ಚೇಂಬರ್ಲೇನ್ ನ ಬತ್ತಳಿಕೆಯಲ್ಲಿ ಮಾತುಗಳೇ ಕಾಣೆಯಾಗಿರುತ್ತವೆ. ಆದರೆ ಸೈನ್ಯಾದ್ಯಕ್ಷನಾಗಿದ್ದ ಚರ್ಚಿಲ್ ಮಾತ್ರ ಒಂದಿಲ್ಲೊಂದು ಬಗೆಯಲ್ಲಿ ಜರ್ಮನಿಯನ್ನು ಹೆಡೆಮುರಿಕಟ್ಟಲು ಆವಣಿಸುತ್ತಿರುವುದು ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಸೈನ್ಯಾಧ್ಯಾಕ್ಷರ ಮೇಲಿದ್ದ ಬ್ರಿಟನ್ನಿಗರ ನಂಬುಗೆ ಪ್ರಧಾನಿಯ ಮೇಲೇಯೇ ಇರುವುದಿಲ್ಲ! ಪರಿಣಾಮ ಚೇಂಬರ್ಲೇನ್ ತನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಹಾಗಾದರೆ ಈಗ ದೇಶವನ್ನು ಯುದ್ಧಕಾಲದಲ್ಲಿ ಸಮರ್ಥವಾಗಿ ನಡೆಸಬಲ್ಲ ನಾಯಕನ್ಯಾರು ಎಂದರೆ ಅಲ್ಲಿಯವರೆಗೂ ನಾ ಮುಂದು ತಾ ಮುಂದು ಎನ್ನುತ್ತಿದ್ದವರು ಹಿಟ್ಲರ್ ನೊಟ್ಟಿಗೆ ಬಡಿದಾಡುವ ಸಂದರ್ಭ ಬಂದೆರಗಿದಾಗ ತೆರೆಮರೆಯ ಹಿಂದೆ ಸರಿಯತೊಡಗಿದರು! ಇನ್ನು ಕೆಲವರು ಆತನೊಟ್ಟಿಗೆ ಶಾಂತಿಮಾತುಕತೆಯನ್ನು ನಡೆಸುವ ಪ್ರಧಾನಿಯಾಗಬಯಸಿದರು. ಆದರೆ ಬ್ರಿಟನ್ನಿನ ಜನತೆ ಯಾವುದೇ ಕಾರಣಕ್ಕೂ ಹಿಟ್ಲರ್ನ ಮುಂದೆ ತಲೆಬಾಗುವಂತೆ ಕಾಣಲಿಲ್ಲ. ದೇಹ ಸತ್ತರೂ ಆತ್ಮ ಸೋಲಬಾರದು ಎಂಬಂತೆ ಸಿಡಿದೆದ್ದ ಅವರಿಗೆ ತಮ್ಮನ್ನು ನಡೆಸಲು ಚರ್ಚಿಲ್ ನಂತಹ ಮೊಂಡ ನಾಯಕನೇ ಬೇಕೆಂಬ ಹಠವನ್ನು ಹುಟ್ಟುಹಾಕಿದರು. ಮೇ 10, 1940. ಬ್ರಿಟನ್ನಿನ 61 ನೇ ಪ್ರಧಾನಿಯಾಗಿ ವಿನ್ಸೆಟ್ ಚರ್ಚಿಲ್ ಅಧಿಕಾರವಹಿಸಿಕೊಳ್ಳುತ್ತಾನೆ. ಮುಂದೆ ನಡೆಯುವುದೆಲ್ಲ ಗ್ರೇಟ್ ಬ್ರಿಟನ್ನಿನ, ದಿ ಗ್ರೇಟ್ ಹಿಸ್ಟರಿ. ಇಪ್ಪತೈದು ವರ್ಷಗಳ ಕೆಳಗೆ ಮೊದಲ ವಿಶ್ವಯುದ್ಧದ ರಣರಂಗದಲ್ಲಿ ಬಾಗಿಯಾಗಿದ್ದ ಸೈನಿಕರಿಬ್ಬರು ಅಂದು ದೇಶದ ಅತ್ಯುನ್ನತ ಹುದ್ದೆಗಳ ಮೇಲೆ ಕೂತು ಸಮರ ಸಾರುತ್ತಿರುವುದನ್ನು ವಿಶ್ವವೇ ಕುತೂಹಲದಿಂದ ನೋಡತೊಡಗಿತ್ತು. ಅತ್ತ ಕಡೆ ಜಪಾನ್, ತಟಸ್ಥವಾಗಿದ್ದ ಅಮೆರಿಕವನ್ನು ಕೆಣಕಿ ತಪ್ಪು ಮಾಡಿದರೆ ಇತ್ತ ಜರ್ಮನಿ ಚರ್ಚಿಲ್ ನೇತೃತ್ವದ ಬ್ರಿಟನ್ ಹಾಗು ಸ್ಟಾಲಿನ್ ನೇತೃತ್ವದ ರಷ್ಯಾವನ್ನು ಎದುರು ಹಾಕಿಕೊಂಡು ಪೇಚಾಡತೊಡಗಿತು.

“Success is going from failure to failure without loss of enthusiasm (ಗೆಲುವು ಎನ್ನುವುದು ಉತ್ಸಾಹವನ್ನು ಕಳೆದುಕೊಳ್ಳದೆ ಸೋಲಿನಿಂದ ಸೋಲಿನೊಳಗೆ ಚಲಿಸುವ ಪಯಣ) ಎಂಬ ಮಾತಿನಿಂದ ಮುನ್ನೆಡದ ಚರ್ಚಿಲ್ ತನ್ನ ಇಳಿವಯಸ್ಸಿನ ಅಷ್ಟೆಲ್ಲ ಶಕ್ತಿಯನ್ನು ಒಂದುಗೂಡಿಸಿ ದೇಶವನ್ನು ಸಮರಕ್ಕೆ ಸಿದ್ಧಗೊಳಿಸಿದ. ಬೆಂಗಾಲದ ಮಹಾಕ್ಷಾಮದಲ್ಲಿ ಭಾರತಕ್ಕೆ ಬರಬೇಕಿದ್ದ ಆಹಾರಧಾನ್ಯಗಳು ಯುದ್ಧ ನಿರತ ಬ್ರಿಟನ್ನಿನ ಗೋದಾಮು ಸೇರತೊಡಗಿದ್ದು ಇದೇ ಕಾರಣಕ್ಕೆ. ಭಾರತೀಯರಾದ ನಾವು ಚರ್ಚಿಲ್ನನ್ನು ಅದೆಷ್ಟೇ ದ್ವೇಷಿಸಿದರೂ ತನ್ನ ದೇಶದ ಹಿತಾಸಕ್ತಿಯಿಂದ ಕೈಗೊಂಡ ಆತನ ಕ್ರಮ ಭಾಗಶಃ ಬ್ರಿಟನ್ನಿಗರಿಗೆ ಸರಿಯಾಗಿಯೇ ಇದೇ ಎಂದನಿಸಿತ್ತು. ಅಲ್ಲದೆ ಯುದ್ಧದಲ್ಲಿ ದೇಶದ ಗಡಿಯನ್ನು ಉಳಿಸಿಕೊಳ್ಳಲು ಆತ ಹಿಡಿಯದಿರುವ ಹಾದಿಯೇ ಇಲ್ಲ. ಈ ಹಾದಿಯಲ್ಲೂ ಆತ ಸಾವಿರಾರು ಸೈನಿಕರನ್ನು ಎದ್ವಾ ತದ್ವಾ ಕಳೆದುಕೊಂಡು ಮತ್ತೊಮ್ಮೆ ದೇಶಿಗರ ದ್ವೇಷವನ್ನು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ನಿರ್ಧಾರಗಳ ಬಗ್ಗೆ ಎಂದಿಗೂ ಆತ ದ್ವಂದ್ವನಾಗಿರುವುದಿಲ್ಲ. ಇಟ್ಟ ಹೆಜ್ಜೆಯನ್ನು ಆಕಾಶವೇ ಕುಸಿದರೂ ಹಿಂದಿಡಲಿಲ್ಲ. ದ್ವಿತೀಯ ಮಹಾಯುದ್ಧದಲ್ಲಿ ಬ್ರಿಟನ್ನಿನ ಶಕ್ತಿ ಅಂತಹ ಹೇಳಿಕೊಳ್ಳುವ ಮಟ್ಟದಲ್ಲಿದ್ದಿಲ್ಲದಾದರೂ ಚರ್ಚಿಲ್ ಎಂಬ ಅಜಾತಶತ್ರು ಅದನ್ನು ಸಮರ್ಥವಾಗಿ ಎದುರಿಸಿದ. ಸರ್ಕಾರದ ತನ್ನ ಮಂತ್ರಿಗಳೇ ಹಿಟ್ಲರ್ನ ಮುಂದೆ ಶರಣಾಗಿ ಎಂದು ಅದೆಷ್ಟೇ ಒತ್ತಾಯಪಡಿಸಿದರೂ ದೃತಿಗೆಡದ ಆತನ ವ್ಯಕ್ತಿತ್ವ ಮುಂದೆ ವಿಶ್ವದ ಅದೆಷ್ಟೋ ನಾಯಕರಿಗೆ ಸ್ಫೂರ್ತಿಯಾಯಿತು. ದೇಶಾಭಿಮಾನ ಎಂಬುದು ದೇಹಾಭಿಮಾನದ ಮುಂದೆ ಕ್ಷೀಣಿಸಬಾರದು ಎಂಬುದನ್ನು ಚರ್ಚಿಲ್ ಬ್ರಿಟನ್ನಿಗರಿಗೆ ಮನವರಿಕೆ ಮಾಡಿಕೊಟ್ಟಿದ್ದ. ಈ ಮನವರಿಕೆಯಲ್ಲಿಯೇ ಬ್ರಿಟನ್ ಅಂದು ಭಾಗಶಃ ಯುದ್ಧವನ್ನು ಜಯಿಸಿದಂತಿದ್ದಿತು. ಇಲ್ಲವಾದರೆ ಅಕ್ಕಪಕ್ಕದ ಇತರೇ ದೇಶಗಳಂತೆ ಬ್ರಿಟನ್ ಹಿಟ್ಲರ್ನ ಕರಾಳ ಕತ್ತಲೆಯಲ್ಲಿ ಲೀನವಾಗಿ ಭೂನಕ್ಷೆಯಿಂದಲೇ ಅಳಿಸಿಹಾಕಲ್ಪಡುತ್ತಿತ್ತೇನೋ ಬಲ್ಲವರ್ಯಾರು?!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments