ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2018

ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ ( ಭಾಗ-೧ )

‍ನಿಲುಮೆ ಮೂಲಕ

– ಪ್ರೇಮಶೇಖರ

ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ. ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ. ಇವರ ಇಷ್ಟೆಲ್ಲಾ ಪ್ರಯತ್ನಗಳು ‘ಯಶಸ್ವಿ’ಯಾಗದಿರಲು ಕಾರಣವೇನು? ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು?  ಜನ ದಡ್ಡರೇ?  ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ?  ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ?  ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ.

ಮಾರ್ಕ್ಸ್ ಮತ್ತು ಏಂಗೆಲ್ಸ್‌ರ ಕಮ್ಯೂನಿಸ್ಟ್ ಸಿದ್ಧಾಂತ ಮೊದಲು ಪ್ರಯೋಗಕ್ಕೊಳಗಾದದ್ದು ಅವರ ಜೀವಿತಾವಧಿಯಲ್ಲೇ. ೧೮೭೦-೭೧ರ ಫ್ರಾಂಕೋ-ಪ್ರಶಿಯನ್ ಯುದ್ಧದಲ್ಲಿ ಸೋತ ಫ್ರಾನ್ಸ್‌ನಲ್ಲಿ ಅಸ್ತಿತ್ವಕ್ಕೆ ಬಂದ ಪ್ಯಾರಿಸ್ ಕಮ್ಯೂನ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿತು. ಆದರೆ ಹೀನಾಯ ಸೋಲಿನಿಂದ ಜರ್ಝರಿತಗೊಂಡು ರಾಜಕೀಯವಾಗಿ ಡೋಲಾಯಮಾನವಾಗಿದ್ದ ಫ್ರಾನ್ಸ್ ಅಂದು ಕ್ರಾಂತಿಕಾರಕ ಬದಲಾವಣೆಗೆ ತಕ್ಕ ನೆಲವಾಗಿರಲಿಲ್ಲ. ಹೀಗಾಗಿ ಪ್ಯಾರಿಸ್ ಕಮ್ಯೂನ್ ಮೂರೇ ತಿಂಗಳಲ್ಲಿ ಅವಸಾನ ಹೊಂದಿತು. ನಂತರ ಸುಮಾರು ನಾಲ್ಕು ದಶಕಗಳ ನಂತರ ೧೯೧೭-೨೨ರ ಆವಧಿಯಲ್ಲಿ ಎರಡು ಕ್ರಾಂತಿಗಳು, ನಾಲ್ಕು ವರ್ಷಗಳ ಅಂತರ್ಯುದ್ಧದ ನಂತರ ರಶಿಯಾದಲ್ಲಿ ಕಮ್ಯೂನಿಸಂ ಭದ್ರ ನೆಲೆ ಕಂಡುಕೊಂಡಿತು. ಇದಾದದ್ದು ಅಮೆರಿಕಾದ ಉಗ್ರ ವಿರೋಧದ ನಡುವೆ ಎನ್ನುವುದನ್ನು ನಾವು ಗಮನಿಸಬೇಕು.

ಅಮೆರಿಕಾ ಅದುವರೆಗೆ ನಿಷ್ಟೆಯಿಂದ ಪಾಲಿಸಿಕೊಂಡು ಬಂದದ್ದು laissez-faire ಅಂದರೆ ಉತ್ಪಾದನಾ ಕ್ಷೇತ್ರದಲ್ಲಿ ಸರ್ಕಾರ/ರಾಜ್ಯ ಭಾಗಿಯಾಗದ, ಉತ್ಪಾದನಾ ಸಾಧನಗಳು ಖಾಸಗೀ ಒಡೆತನಲ್ಲದಲ್ಲೇ ಇರುವಂತಹ ನೀತಿಯನ್ನು. ಈ ವ್ಯವಸ್ಥೆಗೆ ಕಮ್ಯೂನಿಸಂನಿಂದ ಮಾರಣಾಂತಿಕ ಪೆಟ್ಟು ಬೀಳುವ ದುಃಸ್ವಪ್ನವನ್ನು ಅಮೆರಿಕಾ ಕಂಡಿತು.  ಯಾಕೆಂದರೆ ಮಾರ್ಕ್ಸ್ ಮತ್ತು ಏಂಗೆಲ್ಸ್‌ರ ಸಿದ್ಧಾಂತ ಖಾಸಗಿ ಒಡೆತನವನ್ನು ಸಾರಾಸಗಟಾಗಿ ತಿರಸ್ಕರಿಸುವ, ಸಾಮೂಹಿಕ ಒಡೆತನವನ್ನು ಪ್ರತಿಪಾದಿಸುವಂಥದಾಗಿತ್ತು. ಹೀಗಾಗಿಯೇ ರಶಿಯನ್ ಅಂತರ್ಯುದ್ಧದಲ್ಲಿ ಅಮೆರಿಕಾ ಲೆನಿನ್‌ನ ವಿರೋಧಿಗಳ ಬೆಂಬಲಕ್ಕೆ ನಿಂತದ್ದು. ಅಂದು ಅಮೆರಿಕಾದ ವಿರೋಧದ ನಡುವೆಯೂ ರಶಿಯಾದಲ್ಲಿ ಕಮ್ಯೂನಿಸಂ ಅಸ್ತಿತ್ವಕ್ಕೆ ಬಂದದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿತ್ತು. ಯಾಕೆಂದರೆ ಕಮ್ಯೂನಿಸಂ ಸಾರುವ ಶೋಷಣೆರಹಿತ ಹಾಗೂ ವರ್ಗರಹಿತ ಸಮಾಜದ ಪರಿಕಲ್ಪನೆ ಮಾನವಜನಾಂಗ ತನ್ನ ಶತಶತಮಾನಗಳ ಹುಡುಕಾಟದ ಹಾದಿಯಲ್ಲಿ ಕಂಡುಕೊಂಡ ಒಂದು ಉದಾತ್ತ ಚಿಂತನೆ. ಆಧುನಿಕ ಜಗತ್ತಿನ ಮಹಾನ್ ಮಾನವತಾವಾದಿ ಕಾರ್ಲ್ ಮಾರ್ಕ್ಸ್ ಕಂಡ, ಅಗತ್ಯವಾಗಿ ನನಸಾಗಲೇಬೇಕಾದ ಸುಂದರ ಕನಸು ಅದು. ಈ ಕಾರಣದಿಂದಾಗಿಯೇ ತನ್ನ ಪ್ರಯೋಗದ ಆರಂಭದ ವರ್ಷಗಳಲ್ಲಿ ಕಮ್ಯೂನಿಸಂ ಅಂದರೆ ಸಮತಾವಾದ ಇಡೀ ವಿಶ್ವದ ಗಮನ ಸೆಳೆಯಿತು.

ಆದರೆ, ಆರಂಭದ ಯಶಸ್ಸು ತಾತ್ಕಾಲಿಕವಾಗಿತ್ತು. ಈ ಸದಾಶಯ, ಸತ್‌ನೀತಿ ಸೈದ್ಧಾಂತಿಕವಾಗಿ ಅದೆಷ್ಟೇ ಉದಾತ್ತವಾಗಿದ್ದರೂ ಆಚರಣೆಯಲ್ಲಿ ಸೋತುಹೋಗುವಂಥವೆಂಬುದು ನಂತರದ ಬೆಳವಣಿಗೆಗಳು ಸಾರಿದ ದಾರುಣ ಸತ್ಯ. ೧೯೨೪ರಲ್ಲಿ ಲೆನಿನ್‌ನ ಮರಣಾನಂತರ ಅಧಿಕಾರಕ್ಕಾಗಿ ಹಣಾಹಣಿ ಶುರುವಾದದ್ದು ರೆಡ್ ಆರ್ಮಿಯ ಸೃಷ್ಟಿಕರ್ತ ಮತ್ತು ಅಂತರ್ಯುದ್ಧದ ವಿಜಯಿ ಲಿಯಾನ್ ಟ್ರಾಟ್ಸ್‌ಕಿ ಮತ್ತು ಜೋಸೆಫ್ ಸ್ಟ್ಯಾಲಿನ್ ಮಧ್ಯೆ. ಎಲ್ಲ ದೇಶಗಳಲ್ಲೂ ಏಕಕಾಲದಲ್ಲಿ ಕಮ್ಯೂನಿಸ್ಟ್ ಕ್ರಾಂತಿಗಳನ್ನು ಆಯೋಜಿಸಬೇಕೆಂದು ಟ್ರಾಟ್ಸ್‌‍ಕಿ ವಾದಿಸಿದರೆ ಸ್ಟ್ಯಾಲಿನ್ ಹೇಳಿದ್ದು ಕಮ್ಯೂನಿಸಂ ಮೊದಲು ಸೋವಿಯತ್ ರಶಿಯಾದಲ್ಲಿ ಭದ್ರವಾಗಿ ಬೇರೂರಲಿ, ಅನಂತರ ಇತರ ದೇಶಗಳ ಉಸಾಬರಿ. ಅಂತಿಮವಾಗಿ ಸ್ಟ್ಯಾಲಿನ್‌‍ನ ಮಾತಿಗೆ ಬೆಂಬಲ ದೊರೆತು ಆತ ಸೋವಿಯೆತ್ ನಾಯಕನಾದ.  ಟ್ರಾಟ್ಸ್‌‍ಕಿ ದೇಶವನ್ನೇ ತೊರೆದು ಓಡಿಹೋದ.

ಆ ದಿನಗಳಲ್ಲಿ ರಶಿಯನ್ನರ ಸ್ಥಿತಿ ದಾರುಣ.  ಮಹಾಯುದ್ಧ, ಕ್ರಾಂತಿ, ಅಂತರ್ಯುದ್ಧ ಎಲ್ಲದರಿಂದ ಜನರಿಗೆ ಶಾಂತಿಯಿರಲಿ ಹೊಟ್ಟೆಗೆ ಊಟವೂ ಸಿಗದಂಥ ಪರಿಸ್ಥಿತಿ. ಕಾಕಸಸ್ ಪ್ರದೇಶದಲ್ಲಿ ಹಸಿವಿನಿಂದ ಕಂಗೆಟ್ಟ ಜನರು ನರಮಾಂಸವನ್ನೂ ತಿಂದ ವರದಿಗಳು ಬರುತ್ತಿದ್ದವು. ಇದೆಲ್ಲವನ್ನೂ ಸರಿಪಡಿಸಲು ಸ್ಟ್ಯಾಲಿನ್ ರೂಪಿಸಿದ ದಶವಾರ್ಷಿಕ ಆರ್ಥಿಕ ಅಭ್ಯುದಯ ಯೋಜನೆಗಳು ತಕ್ಷಣ ಫಲ ನೀಡಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು ವಿಶ್ವರಂಗದಲ್ಲಿ ಮುಂಚೂಣಿಗೆ ತಂದವು.  ಮೂವತ್ತರ ದಶಕದಲ್ಲಿ ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಸೋತು ಸುಣ್ಣವಾಗಿ ನೆಲಕಚ್ಚಿದರೆ ರಶಿಯಾ ಸುಭಿಕ್ಷವಾಗಿ ಮುಂದುವರೆಯುತ್ತಿತ್ತು. ಅದಕ್ಕೆ ಕಾರಣ ಬೇಡಿಕೆಗೂ ಮೀರಿ ಉತ್ಪಾದನೆಯಲ್ಲಿ ತೊಡಗಿ ಹೇರಳ ದಾಸ್ತಾನು ಅಂದರೆ ಅರ್ಥಶಾಸ್ತ್ರೀಯ ಪರಿಭಾಷೆಯಲ್ಲಿ “glut in the market” ಸೃಷ್ಟಿಸಿಕೊಂಡಿದ್ದ ಅವಿವೇಕಿ ಅಮೆರಿಕಾಗೆ ವಿರುದ್ಧವಾಗಿ ಬೇಕಾದ್ದನ್ನು ಮಾತ್ರ ಬೇಕಾದಷ್ಟೇ ಉತ್ಪಾದಿಸುವ ವಿವೇಕಯುತ ನೀತಿಯನ್ನು ಸ್ಟಾಲಿನ್ ಅನುಸರಿಸಿದ್ದು. ಆನಂತರ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅಮೆರಿಕಾ, ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್‌‍ನ ಸಲಹೆಯಂತೆ, ಒಂದು ಮಿತಿಯಲ್ಲಿ ಸಮಾಜವಾದವನ್ನು ಅಪ್ಪಿಕೊಂಡದ್ದು ಮಾರ್ಕ್ಸ್‌‍ನ ಚಿಂತನೆಯ ಮಹತ್ವವನ್ನು ಎತ್ತಿತೋರಿಸುತ್ತದೆ. ಆದರೆ ಅದೆಲ್ಲವನ್ನೂ ಹಾಳುಗೆಡವಿದ್ದು ಎರಡನೆಯ ಮಹಾಯುದ್ಧದ ನಂತರ ಸ್ಟ್ಯಾಲಿನ್ ತಳೆದ ಬೇಜವಾಬ್ದಾರೀ ನಿಲುವು. ಮಹಾಯುದ್ಧದಲ್ಲಿ ಸೋವಿಯೆತ್ ರಶಿಯಾ ಅನುಭವಿಸಿದ ಹಾನಿ ಸೋತ ಜರ್ಮನಿಗಿಂತಲೂ ಹಲವು ಪಟ್ಟು ಅಧಿಕ. ಇಂಥ ಪರಿಸ್ಥಿತಿಯಲ್ಲಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರುವುದು ಸ್ಟ್ಯಾಲಿನ್‌‍ನ ಆದ್ಯ ಕರ್ತವ್ಯವಾಗಿತ್ತು. ಆದರೆ ಆತ ಹದಿನೈದು ವರ್ಷಗಳ ಹಿಂದೆ ತೋರಿದ್ದ ವಿವೇಕವನ್ನು ಕಳೆದುಕೊಂಡು ಪೂರ್ವ ಯೂರೋಪ್ ಮತ್ತು ಮೆಡಿಟರೇನಿಯನ್ ವಲಯಗಳಲ್ಲಿ ಕಮ್ಯೂನಿಸಂ ಹರಡುವ ಭಾರಿ ಯೋಜನೆ ರೂಪಿಸಿದ. ಸ್ಟ್ಯಾಲಿನ್‌‍ನ ಕಾರ್ಯಕ್ರಮಗಳಿಗೆ ತೀವ್ರ ಪ್ರತಿರೋಧ ಒಡ್ಡಿದ ಅಮೆರಿಕಾದ ಕ್ರಮದಿಂದಾಗಿ ಶೀತಲಸಮರ ಆರಂಭವಾಯಿತು. ಪರಿಣಾಮವಾಗಿ ಆರ್ಥಿಕಪ್ರಗತಿಗೆ ಮೀಸಲಾಗಿಡಬೇಕಾಗಿದ್ದ ಸಂಪನ್ಮೂಲಗಳನ್ನು ಶಸ್ತ್ರಾಸ್ತ್ರ ಪೈಪೋಟಿಗೆ ವಿನಿಯೋಗಿಸಬೇಕಾದ ಒತ್ತಡಕ್ಕೆ ಸೋವಿಯೆತ್ ಯೂನಿಯನ್ ಸಿಲುಕಿಕೊಂಡಿತು. ಇದೇ ಆ ಕಮ್ಯೂನಿಸ್ಟ್ ಪ್ರಯೋಗಶಾಲೆಯ ಮುಂದಿನ ಎಲ್ಲಾ ಆರ್ಥಿಕ-ರಾಜಕೀಯ ದುರಂತಗಳಿಗೆ ಮೂಲವಾಯಿತು. ಶಸ್ತ್ರಾಸ್ತ್ರ ಪೈಪೋಟಿಯಿಂದಾಗಿ ಸೀಮಿತಗೊಂಡ ಆಹಾರಧಾನ್ಯ ಮತ್ತಿತರ ಗ್ರಾಹಕ ಸಾಮಗ್ರಿಗಳ ದೊಡ್ಡಭಾಗ ಕಮ್ಯೂನಿಸ್ಟ್ ಪಕ್ಷದ ಸದಸ್ಯರಿಗೆ ಮೀಸಲಾದ ಪರಿಣಾಮವಾಗಿ ದೇಶದಲ್ಲಿ ಸಾರ್ವತ್ರಿಕ ಬಡತನ ತಾಂಡವವಾಡತೊಡಗಿತು. ಆದರೆ ಕಮ್ಯೂನಿಸ್ಟ್ ಸರ್ಕಾರ ಹೊರಜಗತ್ತಿಗೆ ಸುಳ್ಳು ಸುದ್ಧಿಗಳನ್ನು ನೀಡುತ್ತಾ ಸತ್ಯ ಹೊರಬೀಳದಂತೆ ನೋಡಿಕೊಂಡಿತು. ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲಾಗುವುದಿಲ್ಲ. ಇದನ್ನು ನಾನು ಕಂಡಂತೆಯೇ ನಿಮ್ಮ ಮುಂದಿಡುತ್ತೇನೆ, ನನ್ನನ್ನು ವಾರವಾರವೂ ಸಂಪರ್ಕಿಸುವ ನನ್ನ ವಿದ್ಯಾರ್ಥಿ-ಓದುಗರ ಅನುಕೂಲಕ್ಕಾಗಿ.

ಎಪ್ಪತ್ತರ ದಶಕದ ಉತ್ತರಾರ್ಧ ಅದು. ನಾನು ಪಿಯುಸಿಯಲ್ಲಿದ್ದೆ. ಬಾಲ್ಯದಿಂದಲೂ ವಾರವಾರವೂ ಮನೆಗೆ ಬರುತ್ತಿದ್ದ “ಸೋವಿಯೆತ್ ಲ್ಯಾಂಡ್” ಪತ್ರಿಕೆಯಲ್ಲಿ ಸೋವಿಯೆತ್ ಸ್ವರ್ಗದ ಬಗೆಗಿನ ಲೇಖನಗಳನ್ನು ಅಸಕ್ತಿಯಿಂದ ಓದುತ್ತಿದ್ದ ನಾನು  ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅರಿತೊಡನೆ ಅದಕ್ಕೂ ಅಂಟಿಕೊಂಡೆ. ಸಂಜೆ ನಾಲ್ಕೂವರೆಯಿಂದ ಐದು ಹಾಗೂ ಆರೂವರೆಯಿಂದ ಏಳುಗಂಟೆಯವರೆಗೆ ದೂರದ ಮಾಸ್ಕೋದಿಂದ ತೇಲಿಬರುತ್ತಿದ್ದ ಇರೀನಾ ತ್ಯೂರಿನಾಳ ಮುದ್ದುಮುದ್ದಾದ ಕನ್ನಡ ಮಾತುಗಳು ಮತ್ತು ನಮ್ಮ ಕೊಳ್ಳೇಗಾಲದ ಹತ್ತಿರದ ಮುಳ್ಳೂರಿನವರಾದ ಶ್ರೀ ಮಹದೇವಯ್ಯನವರ ಆಕರ್ಷಕ ದನಿಯನ್ನು ಅವಕಾಶವಾದಾಗಲೆಲ್ಲಾ ಕೇಳುತ್ತಿದ್ದೆ. ಅವರು ಬಿಂಬಿಸುತ್ತಿದ್ದ ಭೂಲೋಕದ ಸ್ವರ್ಗ ಸೋವಿಯೆತ್ ಯೂನಿಯನ್‌‍ನ ಚಿತ್ರಗಳನ್ನು ಮನದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ. ನಮ್ಮ ದೇಶದ ಬಗ್ಗೆ ಸೋವಿಯೆತ್ ಆಳರಸರಿಗಿದ್ದ ಅಪರಿಮಿತ ಪ್ರೀತಿಗೆ ನನ್ನ ಕಣ್ಣುಗಳು ತೇವವಾಗುತ್ತಿದ್ದವು. ಆ ಮಹಾನ್ ಸಮತಾವಾದಿ ನಾಡಿನ ಅದ್ಭುತ ಆರ್ಥಿಕ ಪ್ರಗತಿ, ನಿರುದ್ಯೋಗವೇ ಇಲ್ಲದ, ಎಲ್ಲರಿಗೂ ಎಲ್ಲವೂ ಸಿಗುತ್ತಿದ್ದ ಕನಸಿನ ರಾಜ್ಯದ ಬಗ್ಗೆ ದಿನವೂ ಕೇಳುತ್ತಾ ನಮ್ಮ ದೇಶದಲ್ಲಿ ಅಂತಹ ದಿನಗಳು ಯಾವಾಗ ಬರುತ್ತವೆ ಎಂದು ಕನಸು ಕಾಣುತ್ತಾ… ಕಾಣುತ್ತಾ… ಕಮ್ಯೂನಿಸ್ಟನೇ ಆಗಿಬಿಟ್ಟೆ…

ರೇಡಿಯೋ ಮಾಸ್ಕೋಗೆ ಪತ್ರ ಬರೆದೆ. ಅಲ್ಲಿಂದ ಅತ್ಯಾಕರ್ಷಕ ಅಂಚೆಚೀಟಿ ಅಂಟಿಸಿದ್ದ ಲಕೋಟೆಯಲ್ಲಿ ಉತ್ತರ ಬಂದಾಗ ನಾನು ಅಕ್ಷರಶಃ ಕುಣಿದಾಡಿಬಿಟ್ಟೆ. ಪತ್ರಸರಣಿ ಆರಂಭವಾಯಿತು. ಸುಂದರ ವ್ಯೂ ಕಾರ್ಡ್‌ಗಳು, ಪುಸ್ತಕಗಳು, ಕ್ಯಾಲೆಂಡರ್‌ಗಳು, ಹೊಚ್ಚಹೊಸ ಅಂಚೆಚೀಟಿಗಳು ಒಂದಾದ ಮೇಲೊಂದು ಬರತೊಡಗಿ ನನ್ನನ್ನು ಸಮೃದ್ದಗೊಳಿಸತೊಡಗಿದವು…

೧೯೭೯ರ ಒಂದು ಸಂಜೆ. ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್‌ನಿಂದ ಪ್ರಕಟವಾಗುತ್ತಿದ್ದ “ಪ್ರಜಾಪ್ರಭುತ್ವ” ವಾರಪತ್ರಿಕೆಯಲ್ಲಿದ್ದ ಒಂದು ಲೇಖನ ನನ್ನನ್ನು ಕಂಗೆಡಿಸಿಬಿಟ್ಟಿತು. ಮಾಸ್ಕೋದಲ್ಲಿ ವಿದ್ಯಾರ್ಥಿಯಾಗಿದ್ದ ಬಾಬು ಕೊಪ್ಲೆ ಎಂಬ ಭಾರತೀಯ ಯುವಕನನ್ನು ಸೋವಿಯೆತ್ ಗುಪ್ತಚರ ಸಂಸ್ಥೆ “ಕೆಜಿಬಿ” (ಕೊಮಿತೆತ್ ಗೋಸುದರ್ಸ್ತ್ ವೆನ್ನೋನಿ ಬಿಝೋಪಾಸ್ನೋಸ್ತಿ) ಅಪಹರಿಸಿ ಕೊಂದ ಸುದ್ದಿ ಅದಾಗಿತ್ತು. ನನ್ನ ಭಾರತವನ್ನು ಅಪರಿಮಿತವಾಗಿ ಪ್ರೀತಿಸುವ ರಶಿಯನ್ನರು ಹೀಗೇಕೆ ಮಾಡಿದರು ಎಂದು ಚಿಂತಿಸಿದೆ. ಈ ಸುದ್ದಿ ನಿಜವೇ ಎಂದು ನನ್ನ ರೇಡಿಯೋ ಮಾಸ್ಕೋದ ಗೆಳೆಯರಿಗೆ ಪತ್ರ ಬರೆದೆ. ದಿನಗಳು, ವಾರಗಳು, ತಿಂಗಳುಗಳು ಗತಿಸಿದವು. ಉತ್ತರ ಬರಲಿಲ್ಲ. ಹಿಂದೆಲ್ಲಾ ಸೋವಿಯೆತ್ ಸ್ವರ್ಗದ ಬಗ್ಗೆ ನನ್ನೆಲ್ಲಾ ಪ್ರಶ್ನೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಗಳಲ್ಲಿ ತಪ್ಪದೇ ಉತ್ತರಿಸುತ್ತಿದ್ದ ನನ್ನ ರೇಡಿಯೋ ಮಾಸ್ಕೋ ಗೆಳೆಯರು ಈಗ ಮೌನವಾಗಿದ್ದರು. ಅದೇ ಸಮಯದಲ್ಲಿ “ಪ್ರಜಾವಾಣಿ”ಯ ಸಾಪ್ತಾಹಿಕ ಪುರವಣಿಯಲ್ಲಿ ಕೆಜಿಬಿಯ ತರಬೇತಿ ಸಂಸ್ಥೆ “ಗೈಜಾಯಿನಾ” ಬಗ್ಗೆ ಓದಿ ಅದರ ಬಗ್ಗೆ ನನ್ನ ಮಾಸ್ಕೋ ಗೆಳೆಯರಿಗೆ ಮತ್ತೊಂದು ಪತ್ರ ಬರೆದೆ. ಉತ್ತರ ಬರಲಿಲ್ಲ.

ಅದೆಷ್ಟೋ ಕಾಲದ ನಂತರ ಪತ್ರ ಬಂದಾಗ ಅದರಲ್ಲಿದ್ದದ್ದು ಯಾವ ವಿಶೇಷವೂ ಇಲ್ಲದ ಮೂರುನಾಲ್ಕು ಸಾಲುಗಳು, ಜತೆಗೆ ನನ್ನನ್ನು ‘ಮೋಹಗೊಳಿಸುವಂಥ’ ಅಂಚೆಚೀಟಿಗಳು, ವ್ಯೂ ಕಾರ್ಡ್‌ಗಳು. ನನ್ನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ…

ನನಗೆ ಬೇಕಾದ ಉತ್ತರಗಳಿಗಾಗಿ ನಾನು ಬೇರೆಡೆ ಹುಡುಕಾಡತೊಡಗಿದೆ. ಆಗ ಸಿಕ್ಕಿದ ಉತ್ತರಗಳು ನನ್ನನ್ನು ದಿಗ್ಭ್ರಮೆಗೊಳಿಸಿದವು…

ಅದಾದ ಕೆಲವೇ ವರ್ಷಗಳಲ್ಲಿ ರಶಿಯನ್ನನೇ ಅದ ಅರ್ಥಶಾಸ್ತ್ರಜ್ಞ ಅನತೋಲಿ ಶತಾಲಿನ್ ತನ್ನ ಮಾಧ್ಯಮಗಳ ಮೂಲಕ ಮಾಸ್ಕೋ ಹೊರಜಗತ್ತಿಗೆ ನೀಡುತ್ತಿರುವ ಸುದ್ದಿಗಳೆಲ್ಲಾ ಬೊಗಳೆ, ತನ್ನ ಆರ್ಥಿಕ ಪ್ರಗತಿಯ ಬಗ್ಗೆ ನೀಡುತ್ತಿರುವ ಅಂಕಿಅಂಶಗಳೆಲ್ಲಾ ಸುಳ್ಳಿನ ಕಂತೆ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಆಹಾರದ ಕೊರತೆ ದಿಕ್ಕೆಡಿಸುವ ಮಟ್ಟದಲ್ಲಿದೆ ಎಂದು ಆಧಾರಸಮೇತ ಸಾರಿದ. ಅವನ ಲೇಖನಗಳನ್ನು ಯೂರಿ ಆಂದ್ರೊಪೋವ್‌‍ರ ಕ್ರೆಮ್ಲಿನ್ ನಿರಾಕರಿಸಲಿಲ್ಲ. ನಂತರ “ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ನೋವುಗಳೇನೂ ನಿವಾರಣೆಯಾಗುವುದಿಲ್ಲ. ನಮ್ಮ ಬದುಕು ಸುಧಾರಿಸಬೇಕಾದರೆ ನಾವು ವಾಸ್ತವಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದೊಂದೇ ಮಾರ್ಗ. ಅದಕ್ಕನುಗುಣವಾಗಿ ನಾವು ಕಮ್ಯೂನಿಸಂ ಅನ್ನು ಬದಿಗಿರಿಸಿ ಮಾರುಕಟ್ಟೆ ಅರ್ಥವ್ಯವಸ್ಥೆಗೆ ಮೊರೆಹೋಗಬೇಕಾದ ಕಾಲ ಬಂದಿದೆ ಎಂದು ಮಹಾನ್ ನಾಯಕ ಮಿಖಾಯಿಲ್ ಗೋರ್ಬಚೆವ್ ಘೋಷಿಸಿದಾಗ ನನ್ನ ಅರಿವು ವಿಶಾಲವಾಯಿತು.

ನನ್ನ ಟ್ರ್ಯಾನ್ಸಿಸ್ಟರ್‍‌ನ ಶಾರ್ಟ್ ವೇವ್‌‍ನ ಎಲ್ಲ ಮೀಟರ್ ಬ್ಯಾಂಡ್‌‍ಗಳಲ್ಲಿ ಕಿವಿ ಕಿತ್ತುಹೋಗುವಂತೆ ಅರಚುತ್ತಿದ್ದ ರೇಡಿಯೋ ಮಾಸ್ಕೋ, ರೇಡಿಯೋ ತಾಷ್ಕೆಂಟ್‌‍ಗಳು ನಂತರದ ದಿನಗಳಲ್ಲಿ ಗಪ್ಪನೆ ಬಾಯಿ ಮುಚ್ಚಿಕೊಂಡವು. ಸುಳ್ಳಿನ ಮೇಲೆ ಕಟ್ಟಿದ್ದ ಸೋವಿಯೆತ್ ಗೋಪುರ ಕೆಲವೇ ವರ್ಷಗಳಲ್ಲಿ ಕುಸಿದು ಬಿತ್ತು.

ಆಗ ನನ್ನಲ್ಲಿ ಮೂಡಿದ ಪ್ರಶ್ನೆ- ಲಂಕೇಶ್, ಅನಂತಮೂರ್ತಿ ನನಗಿಂತಲೂ ಹಿರಿಯರು, ಜ್ಞಾನಿಗಳು, ವಿವೇಕಿಗಳು, ನನಗೆ ದಕ್ಕಿದ್ದಕ್ಕಿಂತಲೂ ಹೆಚ್ಚಿನ, ನಿಖರ ಮಾಹಿತಿ ಪಡೆದುಕೊಳ್ಳಬಲ್ಲಂಥವರು. ಅವರಿಗೆ ಸತ್ಯ ಗೊತ್ತಿರಲಿಲ್ಲವೇ?

ಮುಂದುವರೆಯುತ್ತದೆ…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments