ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)
– ಪ್ರೇಮಶೇಖರ
ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…
ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ.
ಕಳೆದ ಶತಮಾನದ ಇಪ್ಪತ್ತು-ಮೂವತ್ತರ ದಶಕಗಳಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಸೋವಿಯೆತ್ ವಿದೇಶನೀತಿ ಹಾಗೂ ಯಶಸ್ವೀ ಅರ್ಥವ್ಯವಸ್ಥೆ ಕೋಟ್ಯಂತರ ಭಾರತೀಯರ ಮನಸ್ಸನ್ನು ಗೆದ್ದು ಬೌದ್ಧಿಕವರ್ಗದ ಜತೆಗೆ ಸಮಾಜದ ಕೆಳಸ್ತರದ ಜನಸಮುದಾಯದಲ್ಲೂ ಮನ್ನಣೆ ಗಳಿಸಿತು. ಆದರೆ ನಲವತ್ತರ ದಶಕದಲ್ಲಿ ಪ್ರತಿಕೂಲ ಬೆಳವಣಿಗೆಗೆಗಳು ಕಾಣಿಸಿಕೊಂಡವು. ೧೯೪೨ರಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ವಿರುದ್ಧ ಗಾಂಧೀಜಿಯವರು ಆರಂಭಿಸಿದ “ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ದೇಶದಾದ್ಯಂತ ವ್ಯಾಪಕ ಸಮರ್ಥನೆ ದೊರೆಯಿತು. ಆದರೆ ಈ ಆಂದೋಲನದಿಂದ ದೂರ ಉಳಿದು ಬ್ರಿಟಿಷ್ ಸರ್ಕಾರಕ್ಕೇ ಸಹಾನುಭೂತಿ ತೋರಿಸಿದ್ದು ಮುಸ್ಲಿಂ ಲೀಗ್ ಮತ್ತು ಭಾರತೀಯ ಕಮ್ಯೂನಿಸ್ಟ್ ಪಕ್ಷ. ತನ್ನ ಗುರಿಯಾದ ದೇಶವಿಭಜನೆ ಮತ್ತು ಪಾಕಿಸ್ತಾನ ರಚನೆಯಲ್ಲಿ ಬ್ರಿಟಿಷರ ಸಹಕಾರವನ್ನು ಬಯಸಿದ್ದ, ಆ ಬಗ್ಗೆ ಬ್ರಿಟಿಷರ ಜತೆ ರಹಸ್ಯ ಒಪ್ಪಂದಗಳ ಕಟ್ಟುಪಾಡಿಗೆ ಒಳಗಾಗಿದ್ದ ಮುಸ್ಲಿಂ ಲೀಗ್‌ನ ವರ್ತನೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಬ್ರಿಟಿಷರೊಡನೆ ಸಹಕರಿಸಬೇಕೆಂದು ಸ್ಟ್ಯಾಲಿನ್ ನೀಡಿದ ಸೂಚನೆಯನ್ನು ಒಪ್ಪಿಕೊಂಡು ಭಾರತೀಯರ ಹಿತಾಸಕ್ತಿಗಿಂತಲೂ ಸೋವಿಯೆತ್ ಯೂನಿಯನ್‌ನ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ನೀಡಿದ ಭಾರತದ ಕಮ್ಯೂನಿಸ್ಟರ ವರ್ತನೆ ಕ್ಷಮಾರ್ಹವಲ್ಲ. ಜತೆಗೇ, ಇನ್ನೇನು ಸ್ವಾತಂತ್ತ್ಯ ಹತ್ತಿರಾಗುತ್ತಿದೆಯೆನ್ನುವಾಗ ದೇಶವನ್ನು ಹದಿನೇಳು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಬೇಕೆಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಬ್ರಿಟಿಷ್ ಆಳರಸರ ಮುಂದೆ ಬೇಡಿಕೆಯಿತ್ತದ್ದು ಈ ದೇಶದ ಬಗ್ಗೆ ಕಮ್ಯೂನಿಸ್ಟರ ಅಸಂವೇದನಾಶೀಲತೆಗೆ ದ್ಯೋತಕ. ಕಮ್ಯೂನಿಸ್ಟರ ಈ ಭಾರತ-ವಿರೋಧಿ ನೀತಿಗಳು ದೇಶದ ವಿದ್ಯಾವಂತ ಸಮುದಾಯದ ಒಂದು ದೊಡ್ಡ ವರ್ಗ ಕಮ್ಯೂನಿಸಂನಿಂದ ದೂರ ಸರಿಯುವಂತೆ ಮಾಡಿದವು. ಇಷ್ಟಾಗಿಯೂ, ಈ ಕಮ್ಯೂನಿಸ್ಟರ ಪ್ರತಿಗಾಮಿ ಪಿತೂರಿಗಳು ಹಳ್ಳಿಗಾಡಿನ ಅರೆವಿದ್ಯಾವಂತ ಜನಸಾಮಾನ್ಯರಿಗೆ ತಿಳಿಯದ ಕಾರಣ ನಲವತ್ತರ ದಶಕವಲ್ಲದೇ ಐವತ್ತರ ದಶಕದ ಆದಿಯಲ್ಲೂ ಅವರು ಎಡಪಂಥಕ್ಕೆ ತಮ್ಮ ಬೆಂಬಲವನ್ನು ಮುಂದುವರೆಸಿದರು. ತೆಲಂಗಾಣ, ಛೋಟಾನಾಗಪುರ, ಬಸ್ತರ್‍ಗಳಲ್ಲಿ ಕಮ್ಯೂನಿಸ್ಟ್ ಅಂದೋಲನಗಳು ತಲೆಯೆತ್ತಲು ಮತ್ತು ಕಮ್ಯೂನಿಸ್ಟ್ ಅಭ್ಯರ್ಥಿಗಳು ಅಲ್ಲಲ್ಲಿ ಚುನಾವಣೆಗಳಲ್ಲಿ ಜಯಶಾಲಿಯಾದದ್ದಕ್ಕೆ ಇದು ಕಾರಣ. ಆದರೆ ನಂತರದ ವರ್ಷಗಳಲ್ಲಿ ಜನಸಾಮಾನ್ಯರೂ ಎಚ್ಚೆತ್ತುಕೊಳ್ಳತೊಡಗಿದರು. ತನ್ನದೇ ಆರ್ಥಿಕ ಗೊಂದಲದಲ್ಲಿ ಮುಳುಗಿದ್ದ ಸೋವಿಯೆತ್ ಯೂನಿಯನ್ ನಮಗೆ ಅಗತ್ಯ ಆರ್ಥಿಕ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಸಾಮಾನ್ಯ ಭಾರತೀಯರ ಗಮನ ಸೆಳೆಯುವುದರಲ್ಲಿ ಆ ಕಮ್ಯೂನಿಸ್ಟ್ ದೈತ್ಯ ಸೋತುಹೋಯಿತು. ಜತೆಗೆ, ಶಿಕ್ಷಣ ಸಾರ್ವತ್ರಿಕವಾಗತೊಡಗಿದಂತೇ ಭಾರತದ ವೈಜ್ಞಾನಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಅಮೆರಿಕಾ ಮತ್ತು ಪಶ್ಚಿಮ ಯೂರೋಪಿನ ಪಾತ್ರವನ್ನು ಗುರುತಿಸಿದ ಶಿಕ್ಷಿತ ಭಾರತೀಯರಿಗೆ ಆ ದೇಶಗಳು ಮಾದರಿಯಾಗಿ ಕಾಣತೊಡಗಿದವು. ಹೀಗಾಗಿ ನೆಹರು ವಿರಚಿತ ಸರ್ಕಾರೀ ನೀತಿ ಸೋವಿಯೆತ್ ಪರವಾದರೂ ಸಾಮಾನ್ಯ ಭಾರತೀಯರು ಅಮೆರಿಕಾದ ಕಡೆ ಆಕರ್ಷಿತರಾಗತೊಡಗಿದರು. ಕಮ್ಯೂನಿಸ್ಟರ ಮಕ್ಕಳೂ ಅಮೆರಿಕಾದಲ್ಲಿ ಶಿಕ್ಷಣ, ಅವಕಾಶವಿದ್ದರೆ ಅಲ್ಲೇ ಉದ್ಯೋಗಗಳನ್ನೂ ಬಯಸುವ ಸ್ಥಿತಿ ನಿರ್ಮಾಣವಾಯಿತು.
ಇದರ ಜತೆಗೇ ವಿಶ್ವದ ವಿವಿಧೆಡೆ ಕಮ್ಯೂನಿಸ್ಟ್ ಸರ್ಕಾರಗಳು ಹಮ್ಮಿಕೊಂಡ ದಮನಕಾರಿ ನೀತಿಗಳು ಆಗಷ್ಟೇ ರೆಕ್ಕೆ ಬಿಚ್ಚತೊಡಗಿದ್ದ ಭಾರತೀಯ ಮುದ್ರಣಮಾಧ್ಯಮಗಳ ಮೂಲಕ ನವಸಾಕ್ಷರರಿಗೆ ತಲುಪತೊಡಗಿದ್ದು ಕಮ್ಯೂನಿಸಂ ಬಗ್ಗೆ ಜನತೆಯ ಭ್ರಮನಿರಸನ ವೃದ್ಧಿಗೊಳ್ಳಲು ಕಾರಣವಾದವು. ಸ್ಟ್ಯಾಲಿನ್‌ನ ವಿರೋಧಿ ಟ್ರಾಟ್ಸ್‌ಕಿ ೧೯೨೪ರಲ್ಲಿ ರಶಿಯಾವನ್ನೇ ತೊರೆದು ಓಡಿಹೋದದ್ದು, ಹದಿನಾರು ವರ್ಷಗಳವರೆಗೆ ಅವನಿಗಾಗಿ ಪ್ರಪಂಚವನ್ನೇ ಜಾಲಾಡಿದ ಸ್ಟ್ಯಾಲಿನ್‌ನ ಹಸ್ತಕರು ಅಂತಿಮವಾಗಿ ೧೯೪೦ರಲ್ಲಿ ಅವನನ್ನು ಮೆಕ್ಸಿಕೋದಲ್ಲಿ ಕೊಂದದ್ದು ಕಮ್ಯೂನಿಸ್ಟರು ಅಭಿಪ್ರಾಯಭೇದವನ್ನು ಸಹಿಸಲಾರರು ಎಂಬುದನ್ನು ಜಗತ್ತಿಗೇ ಸಾರಿತ್ತು. (ಈ ಬಗ್ಗೆ ಜಾರ್ಜ್ ಆರ್ವೆಲ್ ಬರೆದ “Animal Farm” ಕೃತಿ ಇಂದಿಗೂ ಜನಪ್ರಿಯ). ಮಹಾಯುದ್ಧಾನಂತರ ಪೂರ್ವ ಯೂರೋಪಿಯನ್ ದೇಶಗಳಲ್ಲಿ ಮತ್ತು ಚೀನಾದಲ್ಲಿ ಅಸ್ತಿತ್ವಕ್ಕೆ ಬಂದ ಕಮ್ಯೂನಿಸ್ಟ್ ಸರ್ಕಾರಗಳು ಎಸಗತೊಡಗಿದ ಮಾನವಹಕ್ಕುಗಳ ಸಾರಾಸಗಟು ಉಲ್ಲಂಘನೆ, ಮುಖ್ಯವಾಗಿ ಟಿಬೆಟ್‌ನಲ್ಲಿ ಘಟಿಸತೊಡಗಿದ ಭಯಾನಕ ಘಟನೆಗಳು ಶಿಕ್ಷಿತ ಭಾರತೀಯರ ಅಂತಃಸಾಕ್ಷಿಯನ್ನೇ ಕಲಕತೊಡಗಿದವು. ಇದರ ಜತೆಗೆ ೧೯೬೪ರಲ್ಲಿ ಜಾಗತಿಕ ಕಮ್ಯೂನಿಸ್ಟ್ ಆಂದೋಲನ ವಿಭಜನೆಗೊಂಡು ಸೋವಿಯೆತ್ ನೇತೃತ್ವದಲ್ಲೊಂದು, ಅದಕ್ಕೆ ವಿರುದ್ಧವಾಗಿ ಚೀನಾ ನೇತೃತ್ವದಲ್ಲೊಂದು ಪರಸ್ಪರ ವಿರೋಧಿ ಕಮ್ಯೂನಿಸ್ಟ್ ಬಣಗಳು ಹುಟ್ಟಿಕೊಂಡಾಗ ಭಾರತೀಯ ಕಮ್ಯೂನಿಸ್ಟ್ ಪಕ್ಷವೂ ಸೀಳಾಯಿತು. ಸೋವಿಯೆತ್ ಬೆಂಬಲಿಗರು ಮೂಲಪಕ್ಷದಲ್ಲೇ (ಸಿಪಿಐ) ಉಳಿದರೆ ಚೀನೀ ಸಮರ್ಥಕರು ಸಿಪಿಐ-ಎಂ ಎಂಬ ಹೊಸ ಪಕ್ಷ ಕಟ್ಟಿಕೊಂಡರು. ಇದು ಎತ್ತಿತೋರಿದ್ದು ಭಾರತೀಯ ಕಮ್ಯೂನಿಸ್ಟರ ಸ್ವತಂತ್ರ ಚಿಂತನೆಯ ದಿವಾಳಿತನವನ್ನು. ರಶಿಯನ್ ಕಮ್ಯೂನಿಸ್ಟರು ರಶಿಯಾ ಪರವಾಗಿಯೂ, ಚೀನೀ ಕಮ್ಯೂನಿಸ್ಟರು ಚೀನಾ ಪರವಾಗಿಯೂ, ವಿಯೆಟ್ನಾಮೀ ಕಮ್ಯೂನಿಸ್ಟರು ವಿಯೆಟ್ನಾಂ ಪರವಾಗಿಯೂ, ಕ್ಯೂಬನ್ ಕಮೂನಿಸ್ಟರು ಕ್ಯೂಬಾ ಪರವಾಗಿಯೂ ಇದ್ದರೆ ಭಾರತೀಯ ಕಮ್ಯೂನಿಸ್ಟರು ಮಾತ್ರ ರಶಿಯಾ ಪರವಾಗಿ ಅಥವಾ ಚೀನಾ ಪರವಾಗಿ! ಭಾರತದ ಪರವಾಗಿ ಅಲ್ಲ!! ಅವರ ಈ ವೈಚಾರಿಕ ದಾಸ್ಯವನ್ನು ಚಿತ್ರಿಸಲು ಸೃಷ್ಟಿಯಾದ ಜೋಕ್ ಒಂದು ಹೀಗಿತ್ತು: “ಮಾಸ್ಕೋ ಅಥವಾ ಬೀಜಿಂಗ್‌ನಲ್ಲಿ ಮಳೆಯಾದರೆ ಭಾರತೀಯ ಕಮ್ಯೂನಿಸ್ಟರು ದೆಹಲಿಯಲ್ಲಿ ಕೊಡೆ ಬಿಡಿಸುತ್ತಾರೆ.”
ನಂತರ ಎಪ್ಪತ್ತರ ದಶಕದ ಮಧ್ಯದಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಸೋವಿಯೆತ್ ಸರದಾರರ ಸಲಹೆಗನುಗುಣವಾಗಿ ಸಿಪಿಐ ಇಂದಿರಾರ ಪರವಾಗಿ ನಿಂತಿತು. ಆದರೆ ಅದನ್ನು ವಿರೋಧಿಸಿದ ಸಿಪಿಐ-ಎಂ ಪಕ್ಷ ೧೯೭೭ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ವಿಜಯಿಯಾಯಿತು. ಇದಕ್ಕೆ ಕಾರಣ ಕಮ್ಯೂನಿಸ್ಟರು ಏಕಾಏಕಿ ಜನಪ್ರಿಯರಾದರು ಎನ್ನುವುದಕ್ಕಿಂತಲೂ ಆ ರಾಜ್ಯದಲ್ಲಿ ಇಂದಿರಾರ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನತಾ ಪಕ್ಷಕ್ಕೆ ಸಮರ್ಥ ನಾಯಕತ್ವವಿರಲಿಲ್ಲ ಎನ್ನುವುದು ವಾಸ್ತವಕ್ಕೆ ಹೆಚ್ಚು ಹತ್ತಿರ. ಆದರೆ ಒಮ್ಮೆ ಅಧಿಕಾರವನ್ನು ಕೈಗೆ ತೆಗೆದುಕೊಂಡ ಮೇಲೆ ಅದನ್ನು ತಮ್ಮ ಕೈಯಲ್ಲೇ ಇರಿಸಿಕೊಳ್ಳಲು ವಿಶ್ವದ ಬೇರೆಲ್ಲಾ ಕಮ್ಯೂನಿಸ್ಟ್ ಸರ್ಕಾರಗಳು ಅನುಸರಿಸಿದ ನೀತಿಯನ್ನೇ ಸಿಪಿಐ-ಎಂ ಸಹಾ ಅನುಸರಿಸಿತು. ಹಳ್ಳಿಹಳ್ಳಿಗಳಲ್ಲಿ ಹುಟ್ಟಿಕೊಂಡ ಪಕ್ಷದ ಶಾಖೆಗಳು ಜನಸಾಮಾನ್ಯರ ಮೇಲೆ ನಿರಂಕುಶಾಧಿಕಾರ ಚಲಾಯಿಸತೊಡಗಿದವು. ಅದು ಯಾವ ಮಟ್ಟಕ್ಕಿತ್ತೆನ್ನುವುದರ ಬಗ್ಗೆ ಒಂದು ಉದಾಹರಣೆಯೆಂದರೆ ಜನರ ರೇಶನ್ ಕಾರ್ಡ್‌ಗಳು ಇರುತ್ತಿದ್ದುದು ಹಳ್ಳಿಯ ಸಿಪಿಐ-ಎಂ ಕಾರ್ಯದರ್ಶಿಯ ಕೈಯಲ್ಲಿ! ಮುಂದಿನ ಮೂರು ದಶಕಗಳವರೆಗೆ ಪ್ರತಿ ಚುನಾವಣೆಯಲ್ಲೂ ಜನ ಸಿಪಿಐ-ಎಂಗೆ ಮತ ಚಲಾಯಿಸುವ ಒತ್ತಡಕ್ಕೊಳಗಾದದ್ದರ ಹಿಂದಿನ ಮರ್ಮ ಇದು. ಪಶ್ಚಿಮ ಬಂಗಾಳದ ಜನತೆ ಕೊನೆಗೂ ಸಿಡಿದೆದ್ದದ್ದು ತಮ್ಮ ಬೆಂಬಲಕ್ಕೆ ದೃಢಸಂಕಲ್ಪದ ನಾಯಕಿಯೊಬ್ಬಳಿದ್ದಾಳೆ ಎಂದರಿತಾಗ. ಈ ಕಾರಣಕ್ಕಾಗಿ ಮಮತಾ ಬ್ಯಾನರ್ಜಿ ಅಭಿನಂದನಾರ್ಹರಾಗುತ್ತಾರೆ.
ಭಾರತೀಯ ಕಮ್ಯೂನಿಸ್ಟರ ಬಣ್ಣವನ್ನು ದೇಶಕ್ಕೆ ಢಾಳಾಗಿ ತೋರಿದ್ದು ನಂದಿಗ್ರಾಮ ಘಟನೆಗಳು. ಚೀನಾ ಮಾದರಿಯ ಸ್ಪೆಷಲ್ ಎಕನಾಮಿಕ್ ಜ಼ೋನ್ ಯೋಜನೆಗಳಿಗಾಗಿ ತಮ್ಮ ವ್ಯವಸಾಯದ ಜಮೀನುಗಳನ್ನು ಬಿಟ್ಟುಕೊಡಲು ತಯಾರಿಲ್ಲದ ರೈತರ ವಿರೋಧದಿಂದಾಗಿ ಅನೇಕ ರಾಜ್ಯಗಳಲ್ಲಿ ಆ ಯೋಜನೆ ನೆನೆಗುದಿಗೆ ಬಿತ್ತು. ಇತರ ರಾಜ್ಯಗಳಲ್ಲಿ ರೈತರ ಮನವೊಲಿಸುವ ಪ್ರಯತ್ನ ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದಂತೇ ಪಶ್ಚಿಮ ಬಂಗಾಳದ ಎಡಪಂಥೀಯ ಸರಕಾರ ಶಕ್ತಿ ಪ್ರಯೋಗ ಹಾಗೂ ಹಿಂಸೆಯ ಮೂಲಕ ವಿರೋಧವನ್ನು ಹತ್ತಿಕ್ಕುವ ಹಾದಿ ಹಿಡಿಯಿತು. ಇದರ ಪರಿಣಾಮವೇ ಮಾರ್ಚ್ ೧೪, ೨೦೦೭ರಂದು ನಂದಿಗ್ರಾಮದಲ್ಲಿ ನಡೆದ ಬರ್ಬರ ನರಮೇಧ. ಅಂದು ಇಂಡೋನೇಶಿಯಾದ ಸಂಸ್ಥೆಯೊಂದರಿಂದ ರಾಸಾಯನಿಕ ಸ್ಥಾವರದ ಸ್ಥಾಪನೆಗಾಗಿ ತಮ್ಮ ವ್ಯವಸಾಯದ ಜಮೀನನ್ನು ಬಿಟ್ಟುಕೊಡಲು ತಯಾರಿಲ್ಲದ ರೈತರ ಮೇಲೆ ಗುಂಡಿನ ಮಳೆಗರೆದು ಮುಗ್ಧ ಹೆಂಗಸರು ಮಕ್ಕಳು ಸೇರಿದಂತೆ ಹದಿನಾಲ್ಕು ಜನರ ಕಗ್ಗೂಲೆ ನಡೆಸಿ, ಎಪ್ಪತ್ತು ಜನರನ್ನು ಗಾಯಗೊಳಿಸಿದ್ದು ಕೇವಲ ಪೋಲೀಸರಲ್ಲ, ಇದರಲ್ಲಿ ಸಿಪಿಐ-ಎಂನ ಕಾರ್ಯಕರ್ತರದ್ದೇ ಸಿಂಹಪಾಲಿತ್ತು ಎಂಬ ವಿಷಯ ಇಡೀ ದೇಶವನ್ನೇ ತಲ್ಲಣಿಸಿಬಿಟ್ಟಿತು. ಈ ಕಾರ್ಯಕರ್ತರ ಕುಕೃತ್ಯದ ಹಿಂದೆ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ವಾಮವಾದೀ ಸರಕಾರದ ಕೈ ಇರುವ ಕಹಿಸತ್ಯ ರಾಷ್ಟ್ರದ ಅಂತಃಸಾಕ್ಷಿಯನ್ನೇ ಕಲಕಿತು. ಜತೆಗೇ, ಪತ್ರಕರ್ತರನ್ನು ದೂರವಿರಿಸಿ ಇಡೀ ಪ್ರಕರಣವನ್ನು ದೇಶದ ಕಣ್ಣಿನಿಂದ ಮರೆಯಾಗಿಸುವ ಪ್ರಯತ್ನವನ್ನೂ ಪಶ್ಚಿಮ ಬಂಗಾಳ ಸರಕಾರ ಕೈಗೊಂಡಿತ್ತು ಎಂಬ ಸುದ್ಧಿ ತೀರಾ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತು. ರಶಿಯಾ ಆಗಲಿ, ಚೀನಾ ಆಗಲಿ, ಉತ್ತರ ಕೊರಿಯಾ ಆಗಲೀ, ಕಂಪೂಚಿಯಾ ಆಗಲಿ, ಅಥವಾ ಭಾರತವೇ ಆಗಲಿ, ಕಮ್ಯೂನಿಸ್ಟರು ಕಮ್ಯೂನಿಸ್ಟರೇ; ಯಾವುದೇ ವಿರೋಧಕ್ಕೆ ಅವರ ಪ್ರತಿಕ್ರಿಯೆ ಬಲಪ್ರದರ್ಶನ ಮತ್ತು ಹಿಂಸೆ ಎಂಬ ಕಹಿಸತ್ಯವನ್ನು ನಂದಿಗ್ರಾಮ ಬಿಂಬಿಸಿತು.
ಈ ನಡುವೆ ವಿಶ್ವರಂಗದಲ್ಲಿ ಕಮ್ಯೂನಿಸ್ಟ್ ಸರ್ಕಾರಗಳು ಕುಸಿದುಬಿದ್ದು ಎಲ್ಲೆಡೆ ಪ್ರಜಾಪ್ರಭುತ್ವದ ಗಾಳಿ ಬೀಸತೊಡಗಿತ್ತು. ತಮ್ಮ ದೇಶದಲ್ಲೂ ಪ್ರಜಾಪ್ರಭುತ್ವವನ್ನು ಬಯಸಿದ ವಿದ್ಯಾರ್ಥಿಗಳ ಮೇಲೆ ಚೀನೀ ಕಮ್ಯೂನಿಸ್ಟ್ ಸರ್ಕಾರ ಜೂನ್ ೪, ೧೯೮೯ರಂದು ತೋರಿದ ಕ್ರೌರ್ಯ ಈಗ ತಿಯೆನಾನ್‌ಮೆನ್ ಹತ್ಯಾಕಾಂಡ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಕಮ್ಯೂನಿಸ್ಟರ ಮನುಷ್ಯವಿರೋಧಿ ನೀತಿಗಳಿಗೊಂದು ಹೊಸ ರಕ್ತಸಿಕ್ತ ಉದಾಹರಣೆಯಾದ ಇದು ಭಾರತೀಯರನ್ನು, ಮುಖ್ಯವಾಗಿ ಯುವಜನತೆಯನ್ನು ಕಮ್ಯೂನಿಸಂನಿಂದ ಮತ್ತಷ್ಟು ದೂರ ಒಯ್ದಿತು. ಈ ನಡುವೆ ಕಮ್ಯೂನಿಸ್ಟರ ಧನದಾಹದ ಬಗೆಗಿನ ವಿವರಗಳೂ ಹೊರಬೀಳತೊಡಗಿದವು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಎಂಬತ್ತರ ದಶಕದಲ್ಲೇ ತಮ್ಮ ಸ್ಥಿರ ಆಸ್ತಿಗಳ ಬಾಡಿಗೆಗಳಿಂದಲೇ ತಿಂಗಳಿಗೆ ಎಂಬತ್ತು ಸಾವಿರ ರೂಪಾಯಿ ಗಳಿಸುತ್ತಿದ್ದುದರಿಂದ ಹಿಡಿದು ೨೦೦೮ರಲ್ಲಿ ಭಾರತ-ಅಮೆರಿಕಾ ಅಣು ಒಪ್ಪಂದವನ್ನು ಸಂಸತ್ತಿನಲ್ಲಿ ವಿರೋಧಿಸಿ ಬೀಳಿಸಲು ಕಮ್ಯೂನಿಸ್ಟ್ ಧುರೀಣರು ಚೀನಾದಿಂದ ಲಕ್ಷಾಂತರ ಡಾಲರ್‌ಗಳನ್ನು ಪಡೆದುಕೊಂಡದ್ದರ ನಡುವಿನ ಮೂರು ದಶಕಗಳಲ್ಲಿ ಸಮತಾವಾದಿಗಳ ಹಣಕಾಸೀಯ ಆಷಾಡಭೂತಿತನಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ. ನಮ್ಮಲ್ಲೇ ಎಡಪಂಥೀಯ ವೈಚಾರಿಕತೆಯನ್ನೆತ್ತಿಕೊಂಡು ಬಹಳವಾಗಿ ಸದ್ದುಮಾಡುತ್ತಿದ್ದ ಅಧ್ಯಾಪಕ-ಸಾಹಿತಿ-ಪತ್ರಕರ್ತರೊಬ್ಬರು ಸ್ವಂತ ಆಸ್ತಿ, ಹಣ ಮಾಡಿಕೊಂಡದ್ದು, ‘ನನ್ನದೇ ಫಾರ್ಮ್ ಒಂದನ್ನು ಹೊಂದಲು ನನಗೆ ಬಹಳ ಆಸೆಯಿತ್ತು’ ಎಂದು ‘ಪ್ರಾಮಾಣಿಕ’ವಾಗಿ ಹೇಳಿಕೊಂಡದ್ದು ಅವರ ಕೆಲವರಾದರೂ ಅನುಯಾಯಿಗಳ ಕಣ್ಣು ತೆರೆಸಿರಲಿಕ್ಕೆ ಸಾಕು. ತೆರೆಯದೇ ಮುಚ್ಚಿಕೊಂಡೇ ಇರುವವರನ್ನು ಪಕ್ಕಕ್ಕಿಡೋಣ. ಅವರ ನೋಟಗಳು ನಮ್ಮ ಸಮಾಜದ ಒಳಿತಿಗೆ ಯಾವ ಒಳನೋಟವನ್ನೂ ನೀಡಲಾರವು. ಹೀಗಾಗಿಯೇ ಅವರ ಹುಯಿಲುಗಳಿಗೆ ಜನತೆ ಗಮನ ನೀಡುತ್ತಿಲ್ಲ.
ಹೀಗೆ, ಕಳೆದೊಂದು ಶತಮಾನದಲ್ಲಿ ಭಾರತದ ಹೊರಗೆ, ಒಳಗೆ ಘಟಿಸಿದ ಎಡಪಂಥೀಯರ ವೈಚಾರಿಕ, ರಾಜಕೀಯ, ಆರ್ಥಿಕ ಕರ್ಮಕಾಂಡಗಳು ಕಮ್ಯೂನಿಸಂ ಎಂಬ ಸುಂದರ ಕನಸನ್ನು ಹಳವಂಡವಾಗಿಸಿಬಿಟ್ಟವು. ಹೀಗಾಗಬಾರದಿತ್ತು…