ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2018

ಬಂಗಾಳದ ಹಿಂದೂಗಳ ಆಕ್ರಂದನ ಕೇಂದ್ರಕ್ಕೆ ಕೇಳುತ್ತಿಲ್ಲವೇಕೆ?

by ನಿಲುಮೆ

– ರಾಕೇಶ್ ಶೆಟ್ಟಿ

ಅದು ೧೯೯೦ರ ಇಸವಿ ಆಗ ಮಮತಾ ಬ್ಯಾನರ್ಜಿ ಕಾಂಗ್ರೆಸ್ಸಿನಲ್ಲಿದ್ದರು.ಅದೇ ವರ್ಷದ ಆಗಸ್ಟ್ ತಿಂಗಳ ೧೬ನೇ ದಿನ ಕೋಲ್ಕತ್ತಾದ ಹಜಾರಿ ಕ್ರಾಸ್ ಬಳಿ, ಮಮತಾ ಅವರ ಮೇಲೆ ಸಿಪಿಎಂನ ಗೂಂಡಾ ಪಡೆ ಮುಗಿಬಿದ್ದಿತ್ತು.ಸಿಪಿಎಂನ ಯುವನಾಯಕನಾಗಿದ್ದ ಲಾಲೂ ಆಲಂ ಲಾಠಿಯಿಂದ ಮಮತಾ ಬ್ಯಾನರ್ಜಿಯವರ ತಲೆಗೆ ಹೊಡೆದಿದ್ದ.ಗಟ್ಟಿಗಿತ್ತಿ ಹೆಣ್ಮಗಳು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಬದುಕಿಬಂದರು.ನೆಹರೂ ಕಾಲದಿಂದಲೂ ಕಮ್ಯುನಿಸ್ಟರು ಕಾಂಗ್ರೆಸ್ಸಿನ ಪ್ರಾಕ್ಸಿಗಳಂತೆಯೇ ಇದ್ದರು. ಈ ವಾಸ್ತವ ಮಮತಾ ಬ್ಯಾನರ್ಜಿಗೆ ಅರ್ಥವಾಗಲು ಮೂವತ್ತು ವರ್ಷಗಳ ಸುಧೀರ್ಘ ರಾಜಕೀಯ ಅನುಭವವೇ ಬೇಕಾಯಿತು.೯೭ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಪಕ್ಷ ಸ್ಥಾಪಿಸಿದಾಗ,ಕಮ್ಯುನಿಸ್ಟ್ ಗೂಂಡಾ ಪಡೆಯ ವಿರುದ್ಧ ಸೆಟೆದುನಿಲ್ಲುವ ಫೈಟರ್ ಒಬ್ಬಳು ನಮಗೆ ಸಿಕ್ಕಳು ಎನ್ನುವ ಸಮಾಧಾನ ಬೆಂಗಾಲಿಗಳಿಗೆ ದೊರೆತಿತ್ತು. ಮುಂದೆ ಜ್ಯೋತಿಬಸು ಪಟ್ಟದಿಂದ ಇಳಿದು ಬುದ್ಧದೇಬ್ ಭಟ್ಟಾಚಾರ್ಯ ಮುಖ್ಯಮಂತ್ರಿಯಾಗಿ ಸಿಂಗೂರು,ನಂದಿಗ್ರಾಮದಲ್ಲಿ SEZ ಮಾಡಲು ಹೋಗಿ, ಪ್ರತಿರೋಧ ತೋರಿದ ಜನರ ಮೇಲೆ ತನ್ನದೇ ಪ್ರಜೆಗಳ ಮೇಲೆ ಗೋಲಿಬಾರ್ ಮಾಡಿ ಕೊಂದು ಹಾಕಿತ್ತು. ಆಗ ಕಮ್ಯುನಿಸ್ಟರ್ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿರೋಧ ತೋರಿದ್ದು ಮಮತಾ.ಕಡೆಗೂ ಈಕೆಯ ಹೋರಾಟಕ್ಕೆ ಕಮ್ಯುನಿಸ್ಟ್ ಸರ್ಕಾರ ಮಂಡಿಯೂರಲೇಬೇಕಾಗಿತ್ತು. ಅಂತಿಮವಾಗಿ ೨೦೧೧ರ ಚುನಾವಣೆಯಲ್ಲಿ ೩೫ ವರ್ಷಗಳ ಕಮ್ಯುನಿಸ್ಟ್ ಸರ್ಕಾರವನ್ನು ಚಾಪೆ ಸುತ್ತಿಕೊಂಡು ಹೋಗುವಂತೆ ಮಾಡಿದ್ದರು ಮಮತಾ. ಹಾಗಂತ ಆಕೆಯ ಹೋರಾಟವೇನು ಹೂವಿನ ಹಾಸಿಗೆಯದ್ದಾಗಿರಲಿಲ್ಲ,ಕಮ್ಯುನಿಸ್ಟರಿಂದ ಆಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಬದುಕಿಬಂದರು. ಆಕೆಯ ಪಕ್ಷದ ಕಾರ್ಯಕರ್ತರನ್ನು ಕಮ್ಯುನಿಸ್ಟರು ಕುಖ್ಯಾತ ಬೆಂಗಾಲ್ ಮಾಡೆಲ್ ಮೂಲಕ ಕೊಂದೂ ಹಾಕಿದ್ದರು.ಕಮ್ಯುನಿಸ್ಟರ ರಕ್ತಸಿಕ್ತ ಕ್ರೌರ್ಯವನ್ನು ಎದುರಿಸಿ ಗೆದ್ದಿದ್ದ ಮಮತಾ ಬ್ಯಾನರ್ಜಿ ಮತ್ತವರ ಪಕ್ಷ ಇತಿಹಾಸದಿಂದ ಪಾಠ ಕಲಿಯುವ ಬದಲು ಅಧಿಕಾರಕ್ಕೇ ಏರಿದ ಕ್ಷಣದಿಂದಲೇ ಕಮ್ಯುನಿಸ್ಟರ ರಕ್ತಚರಿತ್ರೆಯ ಭೂತವನ್ನೇ ಆವಾಹನೆ ಮಾಡಿಕೊಂಡರು.

ಒಂದು ಕಾಲದಲ್ಲಿ ಕಮ್ಯುನಿಸ್ಟ್ ಗೂಂಡಾ ಪಡೆ ಪಾರ್ಟಿ ವಿಲೇಜ್ ಹೆಸರಿನಲ್ಲಿ ಗ್ರಾಮದ ಪ್ರತಿ ಮನೆಯ ಮೇಲೂ ಹಿಡಿತ ಸಾಧಿಸಿಕೊಂಡು ಜನರನ್ನು ಹೆದರಿಸಿಯೇ ಅಧಿಕಾರವನ್ನು ಸತತವಾಗಿ ತಮ್ಮ ಬಳಿಯೇ ಇಟ್ಟುಕೊಂಡು ಬಂದಿದ್ದರು.ಚುನಾವಣೆ ಎನ್ನುವುದು ಬಂಗಾಳದಲ್ಲಿ ದೊಡ್ಡ ಜೋಕಿನಂತೆ ಆಗಿತ್ತು,ರಿಗ್ಗಿಂಗ್ ಎಗ್ಗಿಲ್ಲದೆ ನಡೆಯುತ್ತಿತ್ತು.ಈಗ ಕಮ್ಯುನಿಸ್ಟ್ ಭೂತವನ್ನು ಆವಾಹಯಿಸಿಕೊಂಡಿರುವ ಮಮತಾ ಕಾಲದಲ್ಲೂ ನಡೆಯುತ್ತಿರುವುದು ಅದೇ.ಈಗಲೂ ಬಂಗಾಳದಲ್ಲಿ ನ್ಯಾಯಸಮ್ಮತ-ಪಾರದರ್ಶಕ ಚುನಾವಣೆಯೆನ್ನುವುದು ಜೋಕ್ ಆಗಿಯೇ ಇದೆ.ಒಂದೇ ವ್ಯತ್ಯಾಸವೇನೆಂದರೆ ಆಗ ಕಮ್ಯುನಿಸ್ಟರು ಟಿಎಂಸಿ,ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸುತ್ತಿದ್ದರು.ಈಗ ಟಿಎಂಸಿ ಕಾರ್ಯಕರ್ತರು ಮತ್ತು ಸರ್ಕಾರಿ ಪೊಲೀಸರು ಅದೇ ಹಿಂಸಾಚಾರದ ಅಸ್ತ್ರವನ್ನು ಬಿಜೆಪಿ,ಕಮ್ಯುನಿಸ್ಟ್,ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಸುತ್ತಿದೆ.

ಲಾಲೂ ಆಲಂನಿಂದ ತಲೆಗೆ ಪೆಟ್ಟು ತಿಂದಿದ್ದ ಮಮತಾ ಬ್ಯಾನರ್ಜಿ ರಾಜಕೀಯ ಹಿಂಸಾಚಾರದ ವಿರುದ್ಧ ನಿಲ್ಲಬೇಕಿತ್ತು.ಆದರೆ,ಆಕೆ ಅದನ್ನೇ ಮುಂದುವರೆಸಿದ್ದಾರೆ. ಈಕೆಯ ಸರ್ಕಾರದ ಅಹಂಕಾರ,ಅನಾಚಾರ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ,ಖುದ್ಧು ಕಲ್ಕತ್ತಾ ಹೈಕೋರ್ಟು ವಾಟ್ಸಾಪ್ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿಗಳ ನಾಮಪತ್ರವನ್ನು ಅಧಿಕೃತವೆಂದು ಪರಿಗಣಿಸಬೇಕೆಂದು, ರಾಜ್ಯ ಸರ್ಕಾರದ ಕೈಗೊಂಬೆಯಂತಾಗಿರುವ ಬಂಗಾಳದ ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು. ಸಿಪಿಎಂ ಪಕ್ಷ ಕೂಡ ತನ್ನ ಅಭ್ಯರ್ಥಿಗಳ ಈ-ನಾಮಿನೇಷನ್ನು ಅಧಿಕೃತವೆಂದು ಪರಿಗಣಿಸಬೇಕೆಂದು ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯ ಚುನಾವಣಾ ಆಯೋಗಕ್ಕೆ ತಪರಾಕಿ ನೀಡಿದ ಕೋರ್ಟ್ ಮನವಿಯನ್ನು ಪುರಸ್ಕರಿಸಿತ್ತು. ಈ-ನಾಮಿನೇಷನ್, ವಾಟ್ಸಾಪ್ ಮೂಲಕ ನಾಮಪತ್ರ ಸಲ್ಲಿಸುವಂತಹ ತಾಲಿಬಾನಿ ಆಡಳಿತ ಬಂಗಾಳದಲ್ಲಿದೆ ಎನ್ನುವುದು ಖಾತ್ರಿಯಾಯಿತಲ್ಲ.ಎದುರಾಳಿ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಹೋದರೆ ಮೊದಲ ಹಂತದಲ್ಲೇ ಅವರಿಗೆ ಬೆದರಿಕೆ ಹಾಕಲಾಗುತ್ತಿತ್ತು. ಬೆದರಿಕೆಗೆ ಬಗ್ಗದೇ ನಾಮಪತ್ರ ಸಲ್ಲಿಕೆಗೆ ಹೋದರೆ,ಅಲ್ಲಿ ಅಧಿಕಾರಿಗಳು ಸಬೂಬು ನೀಡಿ ಕಾಯಿಸುತ್ತಿದ್ದರು,ಅಷ್ಟರಲ್ಲಿ ಅಲ್ಲಿಗೆ ದಾಳಿಯಿಡುತ್ತಿದ್ದ ಸರ್ಕಾರಿ ಗೂಂಡಾಗಳು,ನಾಮಪತ್ರ ಸಲ್ಲಿಸಲು ಬಂದವರನ್ನು ಮನಸೋ ಇಚ್ಛೆ ಬಡಿದು ಹೊರಗಟ್ಟುತ್ತಿದ್ದರು.ಈಕೆಯ ಸರ್ಕಾರ ಸೃಷ್ಟಿಸಿರುವ ಭಯೋತ್ಪಾದನೆ ಯಾವ ಪರಿಯಿದೆ ಎಂದರೇ, ಗ್ರಾಮಪಂಚಾಯಿತಿಯ ಸುಮಾರು 16,846 ,ಪಂಚಾಯತ್ ಸಮಿತಿಯ 3,092 ಹಾಗೂ 203 ಜಿಲ್ಲಾ ಪರಿಷತ್ ಸ್ಥಾನಗಳಿಗೆ ನಾಮಪತ್ರವನ್ನೇ ಸಲ್ಲಿಸಲು ಬಿಡಲಾಗಿಲ್ಲ! ಇದನ್ನು ತಾಲಿಬಾನ್/ಐಸಿಸ್ ಆಡಳಿತವೆನ್ನದೆ ಇನ್ನೇನು ಹೇಳಬೇಕು? ಚುನಾವಣಾ ಹಿಂಸಾಚಾರಕ್ಕೆ ೧೫ಕ್ಕೂ ಹೆಚ್ಚು ಬಲಿಗಳಾಗಿವೆ,ವ್ಯಾಪಕ ಹಿಂಸಾಚಾರವಾಗಿದೆ. ಚುನಾವಣೆ ಮುಗಿದ ನಂತರವೂ ಸರ್ಕಾರಿ ಭಯೋತ್ಪಾದನೆ ಮುಂದುವರೆದಿದೆ.

ಮಿನಿ ಅಫ್ಘಾನಿಸ್ತಾನವೆಂದೇ ಕುಖ್ಯಾತಿ ಪಡೆದಿರುವ ಮಾಲ್ಡಾ ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಬಿಜೆಪಿ ಅಭ್ಯರ್ಥಿ ಬಿನಾ ಮಂಡಲ್ ಅವರು ಜೀವ ಭಯದಿಂದ ಊರು ಬಿಟ್ಟಿದ್ದಾರೆ. ಆಕೆಯ ಮನೆಗೆ ಬೆಂಕಿ ಹಚ್ಚಲಾಗಿದೆ. ಸೋಮರಾಣಿ ಕೋಯಲ್ ಅವರ ಕತೆಯೂ ಇದೆ ಆಕೆಯು ಬಿಜೆಪಿಯಿಂದ ಗೆದ್ದು ಬಂದಿದ್ದಾರೆ.ಆದರೆ ಟಿಎಂಸಿ ಗೂಂಡಾಗಳು ಆಕೆಯ ಮನೆಯನ್ನು ಸುಟ್ಟು ಹಾಕಿದ್ದಾರೆ,ಊರಿಗೆ ಹಿಂತಿರುಗಿದರೆ ಜೀವಕ್ಕೆ ಆಪತ್ತು ಎಂದು ಪಕ್ಷದ ಕಚೇರಿಯಲ್ಲಿ ಇವರೆಲ್ಲ ದಿನದೂಡುತ್ತಿದ್ದಾರೆ. ಇನ್ನು ಕಮ್ಯುನಿಸ್ಟ್ ಕಾರ್ಯಕರ್ತರು/ಗೆದ್ದವರ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಈ ಬಾರಿ ಮಮತಾ ಮತ್ತವಳ ಪಕ್ಷದ ನೇರ ನಿಶಾನಾ ಇರುವುದು ಬಿಜೆಪಿಯ ಮೇಲೆ.

ರಾಜ್ಯದ ೪೮,೬೬೦ ಗ್ರಾಮ ಪಂಚಾಯಿತಿಯಲ್ಲಿ, ೨೧,೧೩೯ ಸೀಟು ಟಿಎಂಸಿ ಗೆದ್ದಿದ್ದರೆ, ಬಿಜೆಪಿ ೫,೭೫೯ ಸೀಟುಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್-ಕಮ್ಯುನಿಸ್ಟರು (ಕಾಕ) ಸಾವಿರ ಚಿಲ್ಲರೆ ಸೀಟುಗಳನ್ನು ಪಡೆದಿದ್ದಾರೆ. ೯,೨೧೭ ಸೀಟುಗಳಿರುವ ಗ್ರಾಮಸಮಿತಿಯಲ್ಲಿ, ೪,೯೧೮ ಸೀಟುಗಳು ಟಿಎಂಸಿ ಪಾಲಾದರೆ,ಬಿಜೆಪಿ ೭೬೪ ಸೀಟುಗಳನ್ನು ಬಾಚಿಕೊಂಡಿದೆ. ಕಾಕಗಳು ಪಡೆದಿರುವುದು ನೂರು ಚಿಲ್ಲರೆ ಸೀಟುಗಳನ್ನು.೮೨೫ ಜಿಲ್ಲಾ ಪರಿಷತ್ ಸೀಟುಗಳಲ್ಲಿ ೫೮೦ ಟಿಎಂಸಿ ಪಾಲಾದರೆ,ಬಿಜೆಪಿ ೨೩ ಹಾಗೂ ಕಾಕಗಳು ಒಂದಕಿಯ ಬಲದಲ್ಲಿದ್ದಾರೆ. ಒಂದು ಕಾಲದಲ್ಲಿ ಕಮ್ಯುನಿಸ್ಟರ ಭದ್ರಕೋಟೆಯಾಗಿದ್ದ, ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದ ಬಂಗಾಳದಲ್ಲಿ ಈಗ, ಟಿಎಂಸಿ ಪಕ್ಷಕ್ಕೆ ನಿಜವಾದ ಎದುರಾಳಿಯಾಗಿರುವುದು ಬಿಜೆಪಿ.ಕಾಕಗಳದ್ದು ಅಸ್ತಿತ್ವಕ್ಕಾಗಿನ ಹೋರಾಟವಷ್ಟೇ. ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಮಮತಾ ಪಕ್ಷಕ್ಕೆ ಸೆಡ್ಡು ಹೊಡೆಯುವುದು ಬಿಜೆಪಿಯೇ ಎನ್ನುವುದು ಆಕೆಗೆ ಅರ್ಥವಾಗಿ ಹೋಗಿದೆ.ಅಮಿತ್ ಶಾ ಕೂಡ ಕನಿಷ್ಠ ೨೦ ಲೋಕಸಭಾ ಸೀಟುಗಳನ್ನು  ಗೆಲ್ಲುವ ಉಮ್ಮೇದಿಯಲ್ಲಿದ್ದಾರೆ. ೧೯ರ ಚುನಾವಣೆಯ ನಂತರ ಮುಂದಿನ ಗುರಿ ೨೧ರ ಬಂಗಾಳ ವಿಧಾನಸಭಾ ಚುನಾವಣೆ. ಹಾಗಾಗಿಯೇ ಪಂಚಾಯಿತಿ ಚುನಾವಣೆಯಲ್ಲಿಯೇ ಬಿಜೆಪಿಯ ಬೇರುಗಳನ್ನು ಬೆದರಿಸಿ ಸುಟ್ಟು ಹಾಕಿದರೆ, ಮುಂದಿನ ಚುನಾವಣೆಗಳಲ್ಲಿ ತನ್ನ ಪಕ್ಷಕ್ಕೆ ಸವಾಲೆಸೆಯುವ ಧೈರ್ಯ ಬೇರೆ ಯಾರು ಮಾಡಲಾರರು ಎನ್ನುವುದು ಮಮತಾಳ ಪಕ್ಷದ ಲೆಕ್ಕಾಚಾರ ಅದರ ಭಾಗವಾಗಿಯೇ ಈ ಸರ್ಕಾರಿ ಭಯೋತ್ಪಾದನೆ.

ಈಕೆಯ ಭಯೋತ್ಪಾದಕ ಪಡೆ ಮೊನ್ನೆ ಮೊನ್ನೆ ಪುರುಲಿಯಾ ಜಿಲ್ಲೆಯ,೧೮ ವರ್ಷದ ದಲಿತ ಯುವಕ ತ್ರಿಲೋಚನ್ ಮಹಾತೋನನ್ನು ಬಡಿದು ಕೊಂದು,ಮರಕ್ಕೆ ನೇಣು ಹಾಕಿ,ಬಿಜೆಪಿ ಕಾರ್ಯಕರ್ತನಾಗಿರುವ ತಪ್ಪಿಗೆ ಹತ್ಯೆಗೈದಿದ್ದೇವೆ ಎಂದು ಬರೆದುಹೋಗಿದೆ.ಅದಾಗಿ ಮೂರನೇ ದಿನಕ್ಕೆ ಅದೇ ಪುರುಲಿಯಾ ಜಿಲ್ಲೆಯ ಬಲರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೩೨ ವರ್ಷದ ಕುಮಾರ್ ದಲಾಲ್ ಎಂಬ ಮತೊಬ್ಬ ಬಿಜೆಪಿ ಕಾರ್ಯಕರ್ತನನ್ನು ಅದೇ ರೀತಿಯಲ್ಲಿ ಕೊಲ್ಲಲಾಗಿದೆ.ಪುರುಲಿಯಾ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕನಾಗಿದ್ದವರು ದುಲಾಲ್ ಕುಮಾರ್. ಈ ಎರಡು ಹತ್ಯೆಗಳನ್ನು ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷವೇ ಮಾಡಿದೆ ಎನ್ನುವುದು ಅಲ್ಲಿನ ಜನರ ಆರೋಪ. ಪುರುಲಿಯಾ ಅದರಲ್ಲೂ ಬಲರಾಮಪುರದಲ್ಲಿ ಈ ರಾಜಕೀಯ ಹತ್ಯಾಗಳಿಗೆ ಮುಖ್ಯಕಾರಣವಾಗಿದ್ದೂ ಕೂಡ ಇದೆ ಪಂಚಾಯತ್ ಚುನಾವಣೆಗಳು. ಬಿಜೆಪಿಯ ಪಾಲಿಗೆ ಬಲರಾಮಪುರ ಭದ್ರವಾದ ಸ್ಥಾನವಾಗುತ್ತಿರುವುದು. ಪುರುಲಿಯಾ ಜಿಲ್ಲೆಯ ೩೮ ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ೨೬ರಲ್ಲಿ ಟಿಎಂಸಿ ಗೆದ್ದಿದ್ದರೆ,ಬಿಜೆಪಿ ೯ರಲ್ಲಿ ಬಾವುಟ ಹಾರಿಸಿದೆ.ಗ್ರಾಮಪಂಚಾಯಿತಿ ಸೀಟುಗಳಲ್ಲಿ ೮೩೯ ಟಿಎಂಸಿ ಪಾಲಾದರೆ, ೬೪೫ ಸೀಟುಗಳನ್ನು ಬಿಜೆಪಿ ಬಾಚಿಕೊಂಡಿದೆ.ಇನ್ನು ಹೀಗೆ ಬಿಟ್ಟರೆ ಇಡೀ ಜಿಲ್ಲೆಯೇ ಕೈತಪ್ಪುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರನ್ನು ಭೀಕರವಾಗಿ ಹತ್ಯಗೈದು ಭಯಭೀತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.

ತಾನೇ ಸೃಷ್ಟಿಸಿದ ರಾಜಕೀಯ ಹತ್ಯೆಯ ಭೂತಕ್ಕೆ ಬಲಿಯಾಗುತ್ತಿರುವ ಕಮ್ಯುನಿಸ್ಟರು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.ರಾಷ್ಟ್ರಮಟ್ಟದಲ್ಲಿ ಮೋದಿ ಸರ್ಕಾರದಿಂದ  ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿಕಾರವಾಗಿ ಕಿರುಚುತ್ತಿದ್ದ ಯೆಚೂರಿಗೆ ಈಗ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಜ್ಞಾನೋದಯವಾಗಿದೆ.ಆದರೆ ಎಷ್ಟಾದರೂ ಕಮ್ಯುನಿಸ್ಟರು ಎರಡು ತಲೆಯ ಹಾವುಗಳೇ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ ಇದೇ ಯೆಚೂರಿ ಮೊನ್ನೆ ಕುಮಾರಸ್ವಾಮಿಯವರ ಪ್ರಮಾಣವಚನದಲ್ಲಿ ಮಮತಾ ಜೊತೆ ಕೈ ಜೋಡಿಸಲಿಲ್ಲವೇ? ಬಿಜೆಪಿ ಆಡಳಿತವಿರುವ,ಇಲ್ಲದಿರುವ ರಾಜ್ಯಗಳಲ್ಲಿ ನಡೆದಿರುವ,ನಡೆಯುತ್ತಿರುವ ಕ್ರೈಮುಗಳಿಗೆಲ್ಲ ಮೋದಿಯವರನ್ನೇ ಗಲ್ಲೆಗೇರಿಸುವಂತೆ ದಿನಗಟ್ಟಲೆ ಸುದ್ದಿಮಾಡುವ ದೆಹಲಿಯ ಲ್ಯುಟೇನ್ ಮೀಡಿಯಾಗಳು ಅದೇ ದನಿಯಲ್ಲಿ ಮಮತಾ ಬ್ಯಾನರ್ಜಿಯನ್ನು ಕಟಕಟೆಯಲ್ಲಿ ನಿಲ್ಲಿಸಲಿಕ್ಕೆ ತಯಾರಿಲ್ಲ!

ಬಂಗಾಳದ ರಾಜ್ಯ ಬಿಜೆಪಿ ಈ ರಾಜಕೀಯ ಹತ್ಯೆಗಳ ವಿರುದ್ಧ ಬೀದಿಗಿಳಿದಿದೆ.ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್,ಸ್ಮೃತಿ ಇರಾನಿ ದನಿಯೆತ್ತಿದ್ದಾರೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಪಶ್ಚಿಮ ಬಂಗಾಳದ ಸರ್ಕಾರದಿಂದ ರಾಜಕೀಯ ಹತ್ಯೆಯ ವರದಿ ಕೇಳಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಎಲ್ಲವೂ ಸರಿ.ಕೇಂದ್ರ ಸರ್ಕಾರವೇನು ಮಾಡುತ್ತಿದೆ? ಕಾನೂನು ಸುವ್ಯವಸ್ಥೆಯೆನ್ನುವುದೇ ಇಲ್ಲದ ರಾಜ್ಯದ ಬಗ್ಗೆ ಗೃಹಇಲಾಖೆ ವರದಿ ಕೇಳಿದೆಯೇ?ರಾಷ್ಟ್ರಪತಿ ಆಳ್ವಿಕೆಯೆರುವುದು ಅತ್ಲಾಗಿರಲಿ ಕಡೇ ಪಕ್ಷ ಗುಟುರು ಹಾಕುವ ಕೆಲಸವನ್ನಾದರೂ ಮಾಡಿದ್ದರೆ,ಮಮತಾ ಬ್ಯಾನರ್ಜಿ ಎಂಬ ಹುಂಬ ಹೆಂಗಸಿನ ಸರ್ಕಾರಕ್ಕೆ ಕನಿಷ್ಟ ಮಟ್ಟದ ಭಯವಾದರೂ ಮೂಡುತ್ತಿತ್ತು.ಅದು ಕೇರಳದ ರಾಜಕೀಯ ಹತ್ಯೆ ಹಿಂಸಾಚಾರದ ವಿಷಯವಾಗಿರಬಹುದು,ಬಂಗಾಳದ ರಾಜಕೀಯ ಹತ್ಯೆಗಳ ವಿಷಯವಾಗಿರಬಹುದು ಅಥವಾ ಕಾಶ್ಮೀರದಲ್ಲಿ ರಂಜಾನ್ ಕಾರಣ ನೀಡಿ ಕದನ ವಿರಾಮ ಘೋಷಿಸಿದ್ದಿರಬಹುದು,ಕೇಂದ್ರ ಸರ್ಕಾರಕ್ಕೇಕೆ ಈ ಪರಿಯ ಅತಿಯಾದ ಸುಭಗತನ? ದಾರ್ಷ್ಟ್ಯ ತೋರುವುದೂ ಬೇಡ,ತನ್ನ ಅಧಿಕಾರವನ್ನಾದರೂ ಚಲಾಯಿಸುವುದು ಬೇಡವೇ? ಇಂತಹ ವಿಷಯದಲ್ಲಿ ಬಿಜೆಪಿ ಒಂದು ಪಕ್ಷವಾಗಿ ಕಾಂಗ್ರೆಸ್ಸಿನಿಂದ,ಗಂಜಿಗಿರಾಕಿಗಳಿಂದ ಕಲಿಯಲಿಕ್ಕಿದೆಯೆನಿಸುತ್ತದೆ.ಆ ಧ್ವಂಸರಾಜ್ ಕರ್ನಾಟಕದಲ್ಲಿದ್ದಾಗ ಸರ್ಕಾರ ಏನು ಮಾಡಿದರೂ ವರದಿ ಕೇಳುತ್ತಿದ್ದರು. ಅದ್ಯಾವುದೋ ಪಬ್ ದಾಳಿಯಾದರೆ,ಹೋಮ್ ಸ್ಟೇ ದಾಳಿಯಾದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ಪ್ರಳಯವಾಯಿತೇನೋ ಎನ್ನುವಂತೆ ವರದಿ ಕೇಳುತ್ತಿತ್ತು. ಪುತ್ತೂರಿನ ಚರ್ಚಿಗೆ ಕಲ್ಲು ಬಿದ್ದರೆ ಫ್ರಾನ್ಸಿನ ಅಧ್ಯಕ್ಷ ನಮ್ಮ ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದ.ಆದರೆ ಈಗಿನ ಕೇಂದ್ರ ಸರ್ಕಾರವೇಕೋ ಇಂತಹ ವಿಷಯದಲ್ಲಿ ಅತಿಯಾದ ಒಳ್ಳೆಯತನಕ್ಕೆ  ಇಳಿದಿರುವುದು ಆಶ್ಚರ್ಯವೆನಿಸುತ್ತಿದೆ.

ಅಷ್ಟಕ್ಕೂ ಈ ಪರಿಯ ಒಳ್ಳೆಯತನದ ಟ್ರೀಟ್ಮೆಂಟಿಗೆ ಮಮತಾ ಸರ್ಕಾರ ಅರ್ಹವೇ ಅಲ್ಲ. ಮೊಹರಂ ಆಚರಣೆಯ ನೆಪ ಹೇಳಿಕೊಂಡು ದುರ್ಗಾದೇವಿಯ ಮೂರ್ತಿ ವಿಸರ್ಜನೆಯನ್ನು ತಡೆಹಿಡಿದವಳು ಈಕೆ. ಬಂಗಾಳದಲ್ಲಿ ರಾಮನವಮಿ ಆಚರಿಸಿದರೆ ಮತಾಂಧರು ಗಲಾಟೆಯೆಬ್ಬಿಸುತ್ತಾರೆ,ಅಂತ ಮತಾಂಧರ ಬೆಂಬಲಕ್ಕೆ ಈಕೆನಿಲ್ಲುತ್ತಾರೆ.ಈಕೆಯ ಆಡಳಿತದಲ್ಲಿ ೨೦೧೩ರ ಕ್ಯಾನಿಂಗ್ ,೨೦೧೫ರ ನಾಡಿಯಾ,೨೦೧೬ರಲ್ಲಿ ಮಾಲ್ಡಾ,ಕಾಲಿಯಾಚಾಕ್,ಧುಲಾಘರಾ,೨೦೧೭ರಲ್ಲಿ ಬಡೂರಿಯದಲ್ಲಿ  ಹೀಗೆ ಸಾಲು ಸಾಲು ಕೋಮುಗಲಭೆಗಳು ನಡೆದಿವೆ.ಅದರ ಸಂತ್ರಸ್ತರೆಲ್ಲ ಹಿಂದೂಗಳೇ. ಒಂದೆಡೆ ಬಾಂಗ್ಲಾ ಅಕ್ರಮನಿವಾಸಿಗಳು ಮತ್ತೊಂದೆಡೆ ಮಮತಾಳ ಮುಸ್ಲಿಂ ತುಷ್ಟಿಕರಣ ನೀತಿಯಿಂದ ಕೊಬ್ಬಿ ಹೋಗಿರುವ ಮತಾಂಧರು ಮಗದೊಂದು ಕಡೆಯಿಂದ ರಾಜಕೀಯ ಹತ್ಯೆಗಳು.ಬಂಗಾಳದ ಹಿಂದೂಗಳು ಕಮ್ಯುನಿಸಂನ್ನು ಬೆಳೆಸಿದ ತಪ್ಪಿಗೆ ಇಂದು ತೆರಿಗೆ ಕಟ್ಟುತ್ತಿದ್ದಾರೆ.

ಹೇಗಿತ್ತು ಸ್ವತಂತ್ರ ಪೂರ್ವ ಬಂಗಾಳ? ’ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ’ ಎನ್ನುವ ಕಾಲವೊಂದಿತ್ತು.ಇರದೇ ಏನು ಹೇಳಿ. ರಾಮಕೃಷ್ಣ ಪರಮಹಂಸರು,ಸ್ವಾಮಿ ವಿವೇಕಾನಂದರು,ರವೀಂದ್ರನಾಥ್ ಟ್ಯಾಗೋರ್,ಬಂಕಿಮ ಚಂದ್ರ ಚಟರ್ಜಿ,ಸುಭಾಷ್ ಚಂದ್ರ ಬೋಸ್, ಪರಮಹಂಸ ಯೋಗಾನಂದ,ಜಗದೀಶ್ ಚಂದ್ರ ಬೋಸ್,ಶ್ಯಾಂ ಪ್ರಸಾದ್ ಮುಖರ್ಜಿ,ಹೀಗೆ ಖ್ಯಾತ ನಾಮ ಬಂಗಾಳಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಆದರೆ ಈಗ, “ಭಾರತ ಇಂದು ಸಾಧಿಸುವುದನ್ನು ಬಂಗಾಳ ನಾಳೆ ಸಾಧಿಸಬಲ್ಲದೇ?” ಎಂದು ಕೇಳಿಕೊಳ್ಳುವ ಸಮಯ ಬಂಗಾಳಿಗಳಿಗೇ ಬಂದಿದೆ.ರಾಜಕೀಯ ಹಿಂಸಾಚಾರಕ್ಕೆ ಶ್ರೀಕಾರ ಹಾಕಿದ ಕಮುನಿಸ್ಟರು ಮತ್ತು ಮುಸ್ಲಿಮರನ್ನು ಅತಿಯಾಗಿ ಓಲೈಸುವ ಬ್ಯಾನರ್ಜಿಯಂತಹ ರಾಜಕಾರಣಿಗಳ ಕೈಯಲ್ಲಿ ಸಿಕ್ಕ ಬಂಗಾಳ ಶತಮಾನಗಳಷ್ಟು ಹಿಂದಕ್ಕೆ ಸಾಗುತ್ತಿದೆ. ಹಳಿ ತಪ್ಪಿರುವ ಮಮತಾಳ ಬಂಗಾಳಕ್ಕೆ ಮೋದಿ-ಶಾ ಜೋಡಿ ಮದ್ದು ಅರೆಯಬಲ್ಲದೇ? ಕಾಲವೇ ಉತ್ತರಿಸಬೇಕಷ್ಟೇ…

ಚಿತ್ರಕೃಪೆ: ಸತೀಶ್ ಆಚಾರ್ಯ

Advertisements

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments