ವಿಷಯದ ವಿವರಗಳಿಗೆ ದಾಟಿರಿ

ಜೂನ್ 13, 2018

ಭಾರತದ ನಾಯಕರ ಹತ್ಯೆಯ ಹಿಂದಿನ ಕಾಣದ ಕೈಗಳು

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಆ ಮನುಷ್ಯ ಮನಸ್ಸು ಮಾಡಿದ್ದರೆ, ಬ್ರಿಟಿಷ್ ಸರ್ಕಾರದಲ್ಲಿ ‘ಐ.ಸಿ.ಎಸ್’ ಅಧಿಕಾರಿಯಾಗಿ ನೆಮ್ಮದಿಯ ಬದುಕು ಬದುಕಬಹುದಿತ್ತು, ಆದರೆ ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ ಅನ್ನು ಎಡಗಾಲಲ್ಲಿ ಒದ್ದು, ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಭಾರತಕ್ಕೆ ಬಂದ ಸುಭಾಷ್ ರವರು ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ತಮ್ಮ ಸಾಮರ್ಥ್ಯದಿಂದಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆಗಲಾದರೂ ಅವರು ಸುಮ್ಮನೇ ಇದ್ದಿದ್ದರೂ ಸ್ವತಂತ್ರ ಭಾರತದಲ್ಲಿ ಯಾವುದಾದರೊಂದು ಸಚಿವ ಸ್ಥಾನ ಪಡೆದು ಇರುತ್ತಿದ್ದರೋ ಏನೋ. ಆದರೆ ಹುಟ್ಟಾ ಸ್ವಾಭಿಮಾನಿ ಮತ್ತು ಹೋರಾಟಗಾರರಾಗಿದ್ದ ನೇತಾಜಿಯವರು ಕಾಂಗ್ರೆಸ್ಸನ್ನೇ ಬದಲಿಸ ಹೊರಟರು. ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಹೇಗೆ ನೆಹರೂ ಮನೆತನದ ಅಡಿಯಾಳಾಗಿದೆಯೋ, ಆಗ ಗಾಂಧೀಜಿಯವರ ಕೈಯಲ್ಲೇ ಇತ್ತು. ಅದನ್ನು ಧಿಕ್ಕರಿಸಿ ನಿಂತ ಸುಭಾಷರನ್ನು ಗಾಂಧೀ ಬೆಂಬಲಿಗರು ಬಿಟ್ಟಾರೇನು? ಬೆಂಬಲಿಗರು ಬಿಟ್ಟರೂ, ಗಾಂಧೀಜಿ ಪಕ್ಷದ ಮೇಲಿನ ತನ್ನ ಪಾರುಪತ್ತೇದಾರಿಕೆಯನ್ನು ಬಿಡಲು ಸಿದ್ಧರಿದ್ದರಿರಲಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯವೊಂದೇ ಅಂತಿಮ ಗಮ್ಯವಾಗಿದ್ದ ಸುಭಾಷರಿಗೆ ಗಾಂಧೀಜಿಯವರ ಚಿಲ್ಲರೆ ರಾಜಕೀಯದ ಜಂಜಾಟಗಳು ಬೇಕಿರಲಿಲ್ಲ. ಕಾಂಗ್ರೆಸ್ಸಿನಿಂದ ಹೊರ ಬಂದ ಅವರು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಬ್ರಿಟಿಷರಿಗೆ ಸುಭಾಷ್ Potential Threat ಎನ್ನುವುದು ಅರಿವಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿದ್ದರು, ಈ ಪುಣ್ಯಾತ್ಮ ಅಲ್ಲಿಂದ ತಪ್ಪಿಸಿಕೊಂಡರು. ನಂತರದ್ದು ಭಾರತ ಸ್ವಾತಂತ್ರ್ಯ ಇತಿಹಾಸದ ರೋಚಕ ಅಧ್ಯಾಯ, ಬರಿಗೈಯಲ್ಲಿ ದೇಶಬಿಟ್ಟ ಸುಭಾಷ್, ೪೫ ಸಾವಿರ ಜನರ ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್ ಜೊತೆ ಸೇರಿಕೊಂಡು ೪೪ರಲ್ಲೇ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು, ಅಂತಿಮವಾಗಿ ಜಪಾನ್ ಹಾಗೂ ಆಜಾದ್ ಹಿಂದ್ ಫೌಜಿಗೆ ಈಶಾನ್ಯ ಭಾರತದಲ್ಲಿ ಹಿನ್ನಡೆಯಾಯಿತಾದರೂ, ಸುಭಾಷರು ಹೊತ್ತಿಸಿದ್ದ ಕ್ರಾಂತಿಯ ಕಿಡಿ ಸರ್ವವ್ಯಾಪಿಯಾಗಿತ್ತು. ಆಜಾದ್ ಹಿಂದ್ ಫೌಜಿನ ರುದ್ರನರ್ತನ ಬ್ರಿಟಿಷ್ ಭಾರತೀಯ ಆರ್ಮಿಯನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಅತ್ತ ಜಪಾನ್ ಶರಣಾಗಾತಿಯಾಗುವುದರಲ್ಲಿತ್ತು, ಇತ್ತ ಬ್ರಿಟಿಷರಿಗೆ ಭಾರತದಲ್ಲಿ ಉಳಿಗಾಲವಿರಲಿಲ್ಲವಾಗಿತ್ತು, ಆಗಲೇ ಶುರುವಾಗಿದ್ದು ಸುಭಾಷರ ನಿಗೂಢ ವಿಮಾನಾಪಘಾತದ ಕತೆ. ಅಪಘಾತದಲ್ಲಿ ಸುಭಾಷರು ಅಸುನೀಗಿದರು ಎನ್ನುವುದನ್ನು ಯಾರೆಂದರೇ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಮೇರಿಕನ್/ಬ್ರಿಟಿಷ್ ಗುಪ್ತಚರರು ವರ್ಷಗಟ್ಟಲೆ ಸುಭಾಷರ ಇರುವಿಕೆಯ ಪತ್ತೆ ಹಚ್ಚಲೆಂದೇ ಹಿಂದೆ ಬಿದ್ದಿದ್ದರು. ಇತ್ತ ಭಾರತದಲ್ಲಿ ಬ್ರಿಟಿಷರ ಹೈಫೈ ಆತಿಥ್ಯದ ಜೈಲಿನಲ್ಲಿದ್ದುಕೊಂಡೇ ಆಜಾದ್ ಹಿಂದ್ ಫೌಜಿನವರು ಭಾರತಕ್ಕೆ ಬಂದರೆ ಕತ್ತಿ ಹಿಡಿದು ಹೋರಾಡುತ್ತೇನೆಂದಿದ್ದ ಕಠಾರಿ ವೀರ ನೆಹರೂ ಸಾಹೇಬರಿಗೆ, ಸುಭಾಷ್ ವಾಪಸ್ ಬಂದರೆ ತನ್ನ ಖುರ್ಚಿಯ ಗತಿಯೇನು ಎಂದು ಚಿಂತೆ ಹತ್ತಿತ್ತು. ಅದೇ ಕಾರಣಕ್ಕೆ, ಬ್ರಿಟನ್ ಪ್ರಧಾನಿ ಆಟ್ಲಿಯವರಿಗೆ ಬರೆದ ಪತ್ರದಲ್ಲಿ, ನಿಮ್ಮ ಯುದ್ಧ ಖೈದಿ ಸುಭಾಷ್ ಗೆ ರಷ್ಯಾ ಆಶ್ರಯ ಕೊಟ್ಟಿದೆ ಎಂದು ಚಿಲ್ಲರೆ ದೂರು ನೀಡಿದ್ದರು. ಅಂದು ತೈಪೆಯಲ್ಲಿ ಯಾವುದೇ ವಿಮಾನ ಹಾರಾಟ ನಡೆದಿಲ್ಲವೆನ್ನುವುದು ಈಗ ಅಧಿಕೃತವಾಗಿದೆ. ವಿಮಾನವೇ ಹಾರದೇ, ಅಪಘಾತವಾಗಿದ್ದು ಎಲ್ಲಿಂದ? ಅಪಘಾತವೇ ನಡೆಯದಿದ್ದ ಮೇಲೆ ಸುಭಾಷರು ಹೋದರೆಲ್ಲಿ? ಹಾಗೆ ನಾಪತ್ತೆಯಾದವರನ್ನು ಹುಡುಕಿ ಕೊಲ್ಲಲಾಯಿತೇ? ಈ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತಂತ್ರ ಭಾರತದ ಮೊದಲ ನಿಗೂಢ ರಾಜಕೀಯ ಕಣ್ಮರೆ/ಹತ್ಯೆಯ ಸಾಲಿಗೆ ಸೇರುವುದು ಸುಭಾಷರ ಹೆಸರು. ಸುಭಾಷರು ಮಾಡಿದ ತಪ್ಪೆಂದರೆ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದು. ಸುಭಾಷರಿಂದ ಶುರುವಾದ ಈ ನಿಗೂಢ ರಾಜಕೀಯ ಹತ್ಯೆ/ಕಣ್ಮರೆಯ ಸರಣಿ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಲೇ ಹೋಯಿತು.

ಗಾಂಧೀಜಿಯವರ ಹತ್ಯೆಯ (ಅವರ ಹತ್ಯೆಯಲ್ಲೂ ಹಲವು ನಿಗೂಢತೆಗಳಿವೆ!) ನಂತರ ಮೂಗುದಾರವಿಲ್ಲದ ಎಮ್ಮೆಯಂತೆ ಎರ್ರಾಬಿರ್ರಿ ಕುಣಿದಾಡುತ್ತಿದ್ದ ನೆಹರೂ ಸಾಹೇಬರಿಗೆ ಸೆಡ್ಡು ಹೊಡೆದು ನಿಲ್ಲಬಲ್ಲ ಕೆಲವೇ ಕೆಲವರಲ್ಲಿ ಪಂಡಿತ್ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಅಗ್ರಗಣ್ಯರು. ಕಾಶ್ಮೀರದ ವಿಷಯದಲ್ಲಿ ಅದ್ಯಾರದೋ ಮರ್ಜಿಗೆ ಬಿದ್ದು ತುಘಲಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ನೆಹರೂ. ಅಂತದ್ದೊಂದು ತುಘಲಕ್ ನಿರ್ಧಾರವೇ ಭಾರತೀಯರು ಕಾಶ್ಮೀರಕ್ಕೆ ಹೋಗಲು ಪರ್ಮಿಟ್ ವ್ಯವಸ್ಥೆ ಹಾಗೂ ಕಾಶ್ಮೀರಕ್ಕೊಬ್ಬ ಪ್ರಧಾನಿ, ಧ್ವಜ ಎಂಬ ನಿರ್ಧಾರ. ಇದನ್ನು ವಿರೋಧಿಸಿ ಏಕ್ ದೇಶ್ ಮೇ, ದೋ ವಿಧಾನ್, ದೋ ನಿಶಾನ್, ದೋ ಪ್ರಧಾನ್ ನಹಿ ಹೋ ಸಕ್ತೆ ಎಂದು ಘೋಷಿಸಿದವರು ಮುಖರ್ಜಿಯವರು. ನೆಹರೂ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಾಶ್ಮೀರ ಪ್ರವೇಶಿಸಿದ ಮುಖರ್ಜಿಯವರನ್ನು ಅಬ್ದುಲ್ಲಾ ಸರ್ಕಾರ ಬಂಧಿಸಿತು. ಜೈಲಿನಲ್ಲೇ ಅವರ ನಿಗೂಢ ಅಂತ್ಯವಾಯಿತು. ಮುಖರ್ಜಿಯವರ ತಾಯಿ ತನಿಖೆ ಮಾಡಿ ಎಂದು ನೆಹರುಗೆ ಪತ್ರ ಬರೆದರೆ, ಅವರಿಗೆ ಜ್ವರ ಬಂದು ಸತ್ತರು ಎಂದು ಷರಾ ಬರೆದು ಕೈ ತೊಳೆದುಕೊಂಡ ಪುಣ್ಯಾತ್ಮ. ಅಲ್ಲಿಗೇ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದ ಮತ್ತೊಬ್ಬ ರಾಜಕೀಯ ನಾಯಕನ ನಿಗೂಢ ಹತ್ಯೆಯಾಯಿತು.

ಮುಂದಿನ ಸಾಲಿನಲ್ಲಿ ಬರುವವರು ಲಾಲ್ ಬಹಾದ್ದೂರ್ ಶಾಸ್ತ್ರಿ. ನೆಹರೂ ಸಾಹೇಬರ ಎಡವಟ್ಟಿನಿಂದ ೬೨ರಲ್ಲಿ ಚೀನಾ ಯುದ್ಧ ಸೋತಿದ್ದ ಭಾರತದ ಮೇಲೆ ಮೂರೇ ವರ್ಷದಲ್ಲಿ ಪಾಕಿಸ್ತಾನ ಕಾಲು ಕೆರೆದು ಯುದ್ಧಕ್ಕೆ ನಿಂತಿತ್ತು. ಶಾಸ್ತ್ರೀಜಿಯವರ ದಿಟ್ಟ ನಿಲುವಿನಿಂದ ಭಾರತೀಯ ಸೇನೆ ಲಾಹೋರಿನವರೆಗೂ ನುಗ್ಗಿತ್ತು. ಕಡೆಗೆ ರಷ್ಯಾದ ಮಧ್ಯಸ್ಥಿಕೆಯಲ್ಲಿ ತಾಷ್ಕೆಂಟಿನ ಸಭೆಗೆ ಹೋದ ಶಾಸ್ತ್ರಿಯವರು ನಿಗೂಢವಾಗಿ ಸಾವನ್ನಪ್ಪಿದರು. ಹೊರಜಗತ್ತಿಗೆ ಹೃದಾಯಘಾತದಿಂದ ಶಾಸ್ತ್ರಿಗಳು ಕೊನೆಯುಸಿರೆಳೆದಿದ್ದರು. ಆದರೆ, ‘ಅವರ ಮೃತ ದೇಹದ ಶವ ಪರೀಕ್ಷೆ ಕೂಡ ಆಗಲಿಲ್ಲ, ಹಾಗೂ ಅವರ ಎದೆ, ಹೊಟ್ಟೆ, ಬೆನ್ನಿನ ಮೇಲೆ ನೀಲಿ ಗುರುತುಗಳಿದ್ದವು!’ ಎಂದು ಅವರ ಮನೆಯವರು ಹೇಳಿದ್ದು ಯಾರಿಗೂ ಕೇಳಿಸಲೇ ಇಲ್ಲ. ಶಾಸ್ತ್ರಿ ಅವರ ಅಂತ್ಯ ಇಂದಿಗೂ ನಿಗೂಡವಾಗಿಯೇ ಉಳಿದಿದೆ. ಸಾಯುವಂತಹ ತಪ್ಪು ಶಾಸ್ತ್ರಿಗಳು ಏನು ಮಾಡಿದ್ದರು ಎಂದರೆ ಮತ್ತದೇ ಸ್ವಾಭಿಮಾನಿ ಭಾರತದ ಕನಸು ಕಂಡಿದ್ದು.

ಇದೇ ರೀತಿ ನಿಗೂಢವಾಗಿ ಸಾವನ್ನಪ್ಪಿದವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು. ಅಪ್ರತಿಮ ಚಿಂತಕ, ರಾಜಕಾರಣದೊಳಗಿನ ಸಂತನಂತಿದ್ದ, ಉಪಾಧ್ಯಾಯರನ್ನು ಮೊಘಲ್ ಸರಾಯ್ ರೈಲ್ವೆ ಹಳಿಗಳ ಮೇಲೆ ಕೊಂದು ಬಿಸಾಡಿ ಹೋಗಿದ್ದರು ಹಂತಕರು. ಕಳ್ಳತನ ಮಾಡಲು ಬಂದವರು ಕೊಂದರು ಎಂದರು ಪೊಲೀಸರು. ಜೋಳಿಗೆ ಹಾಕಿಕೊಂಡು ತಿರುಗುವ ಸಂಘದ ಪ್ರಚಾರಕರಲ್ಲಿ ಕಳ್ಳರು ದೋಚಲಿಕ್ಕೆ ಪುಸ್ತಕಗಳು ಬಿಟ್ಟು ಸಿಗುವುದಾದರೂ ಏನು? ಹಾಗೆ ಅವರ ಹತ್ಯೆಯೂ ಇಂದಿಗೂ ನಿಗೂಢವೇ. ಭಾರತದ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪ್ರಬಲ ರಾಜಕೀಯ ನಾಯಕನ ದಾರಿಯಿಂದ ನಿವಾರಿಸಲಾಗಿತ್ತು. ಅವರು ಯಾರ ದಾರಿಗೆ ತೊಡಕಾಗಿದ್ದರು!?

ಇಂದಿರಾ ಗಾಂಧಿಯವರ ಕಾಲದ ನಿಗೂಢತೆಗಳು ಒಂದನ್ನೊಂದು ಮೀರಿಸುವಂತವು. ಇಂದಿರಾ-ರಾಜೀವ್ ಹತ್ಯೆಯೂ ನಿಗೂಢವೇ. ನಗರ್ವಾಲ ಹಗರಣವೆಂದೇ ಕರೆಯಲ್ಪಡುವ ಬ್ಯಾಂಕ್ ದರೋಡೆ ಪ್ರಕರಣ ನಿಮಗೆ ಗೊತ್ತಿರಬಹುದು. ಸ್ಟೇಟ್ ಬ್ಯಾಂಕಿನ ಕ್ಯಾಶಿಯರ್ ಮಲ್ಹೋತ್ರಾ ಅವರಿಗೆ, ಇಂದಿರಾ ಗಾಂಧಿಯವರ ಮನೆಯಿಂದ, ಅವರದೇ ದನಿಯನ್ನು ಅನುಕರಿಸಿ ಮಾಡಲಾಗಿದ್ದ ಕರೆಯಲ್ಲಿ, ಬಾಂಗ್ಲಾದೇಶಿಯೊಬ್ಬರಿಗೆ 60 ಲಕ್ಷ ರೂಪಾಯಿಗಳನ್ನು ಕೊಡುವಂತೆ ಹೇಳಿತ್ತು. ನಂತರ ತಿಳಿದು ಬಂದಿದ್ದು ಇಂದಿರಾ ಗಾಂಧಿಯವರಿಂದ ಆ ಕರೆ ಬಂದಿಲ್ಲವೆಂದು! ಹಾಗಿದ್ದರೆ ಇಂದಿರೆಯ ಮನೆಯ ಒಳ ಹೊಕ್ಕು ಅವರ ದನಿ ಅನುಕರಿಸಿದ್ದು ಯಾರು? ಗೂಬೆಯನ್ನು ಸೈನ್ಯದ ನಿವೃತ್ ಕ್ಯಾಪ್ಟನ್ ನಗರ್ವಾಲ ಅವರ ಮೇಲೆ ಹೊರಿಸಲಾಯಿತು. ಗಂಡಸೊಬ್ಬ ಇಂದಿರಾರಂತೆ ಮಾತನಾಡಿದ್ದನಂತೆ! ಈ ಕೇಸಿನ ತನಿಖೆಗೆ ಇಳಿದ ಅಧಿಕಾರಿ ಕಶ್ಯಪ್ ಅವರು ನಿಗೂಢವಾಗಿಯೇ ಸತ್ತರು. ಅದಾಗಿ ಒಂದು ವರ್ಷಕ್ಕೆ ನಗರ್ವಾಲರಿಗೂ ಹಾರ್ಟ್ ಅಟ್ಯಾಕ್ ಆಯಿತಂತೆ! ಅಲ್ಲಿಗೆ ಇಂದಿರಾ ಗಾಂಧಿಯವರ ಮನೆಯ ಆ ಹೆಣ್ಣು ಧ್ವನಿ ಯಾವುದೆಂದು ಅಧಿಕೃತವಾಗಿ ಹೊರಬರಲೇ ಇಲ್ಲ. ಅಂದ ಹಾಗೇ, ಆ ಸಮಯಕ್ಕಿನ್ನು ಸಂಜಯ್ ಗಾಂಧಿಗೆ ಮದುವೆಯಾಗಿರಲಿಲ್ಲ.

ಈ ಬ್ಯಾಂಕ್ ದರೋಡೆಯಂತೆ ಸುದ್ದಿಯಾದ ಮತ್ತೊಂದು ಘಟನೆ, ಜೀವನ್ ವಿಮಾ ನಿಗಮದ ಕಿಣಿಯೆನ್ನುವವರಿಗೆ, ಇಂದಿರಾ ಅವರಿಂದ ಬಂದಿತ್ತು ಎನ್ನಲಾದ ಫೋನ್ ಕಾಲ್. ಸಂತ್ರಸ್ತೆಯೊಬ್ಬರಿಗೆ ಅವರು ವಿಮೆ ಮಾಡಿಸಿಲ್ಲವಾದರೂ ಹಣ ಕೊಡಲೇಬೇಕು ಇಲ್ಲದಿದ್ದರೆ ನಿನ್ನ ಕೆಲಸ ಉಳಿಯುವುದಿಲ್ಲವೆಂದು ಧಮಕಿ ಹಾಕಿತ್ತು ಆ ಧ್ವನಿ. ಕರೆ ಮಾಡಿದ್ದು ಸ್ವತಃ ಪ್ರಧಾನಿ ಇಂದಿರಾ ಗಾಂಧಿಯವರೇ ಎಂದುಕೊಂಡ ಕಿಣಿಯವರ ಹೃದಯ ಸ್ತಬ್ಧವಾಯಿತು. LIC ನೌಕರರು ಬೀದಿಗಿಳಿದು ಬೊಬ್ಬೆ ಹೊಡೆದರೂ ಸತ್ಯ ಹೊರಗೇ ಬರಲೇ ಇಲ್ಲ. ಅದನ್ನೂ ಇಂದಿರಾ ಮನೆಯ ನೌಕರನೊಬ್ಬ ತಮಾಷೆಗೆ ಮಾಡಿದ್ದು ಎಂದು ಮುಚ್ಚಿ ಹಾಕಲಾಯಿತು.

ಇಂದಿರಮ್ಮನಿಗೆ ತನ್ನ ಸುತ್ತಲೇ ಇರುವ ಯಾರಿಂದ ಈ ಕೆಲಸಗಳು ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲದೇ ಏನು? ಆ ವ್ಯಕ್ತಿಯ ಹೆಸರು ಬಯಲು ಮಾಡಿದರೇ ಏನು ಅನಾಹುತವಾಗುತ್ತಿತ್ತೋ ಏನೋ, ಹಾಗಾಗಿ ಈ ಕೇಸು ನಿಗೂಢವಾಗಿಯೇ ಹೋಯಿತು. ಈ ನಿಗೂಢತೆಯ ಸಾಲಿಗೆ ಮೆಚ್ಚಿನ ಪುತ್ರ ಸಂಜಯ್ ಸಾವು ಕೂಡ ಸೇರಿಕೊಂಡಿತು. ಇಷ್ಟೆಲ್ಲಾ ನಿಗೂಢತೆಯನ್ನು ಅರಿತಿದ್ದ ಇಂದಿರಮ್ಮನ ಹತ್ಯೆಯೂ ನಿಗೂಢವಾಗಿಯೇ ಹೋಯಿತು. ಮೇಲ್ನೋಟಕ್ಕೆ ಆಕೆಯ ಗಾರ್ಡುಗಳೇ ಕೊಂದವರು ಎಂದರೂ, ಆಕೆ ಸಾಯುವ ದಿನದ ಘಟನೆಗಳು, ನಂತರ ಹಳ್ಳ ಹಿಡಿದ ತನಿಖೆ ಎಲ್ಲವೂ ಈ ನಿಗೂಢತೆಯನ್ನು ಹೆಚ್ಚಿಸುತ್ತವೆ. ಖುದ್ದು ಮಗನೇ ಪ್ರಧಾನಿಯಾಗಿದ್ದರೂ ತನಿಖಾ ವರದಿ ಸಂಸತ್ತಿನಲ್ಲಿ ಮಂಡನೆಯಾಗಲೇ ಇಲ್ಲ.

ಇಂದಿರಾ ಗಾಂಧಿಯವರ ನಂತರ ಪ್ರಧಾನಿಯಾದ ರಾಜೀವ್ ಗಾಂಧಿಯವರ ಹತ್ಯೆಯ ಕುರಿತ ತನಿಖಾ ವರದಿಗಳನ್ನು ಓದಿದರಂತೂ, ಇಂತಹದ್ದೊಂದು ವ್ಯವಸ್ಥಿತ ಕೊಲೆಯಲ್ಲಿ LTTE ಸಂಘಟನೆ ಪಾತ್ರಧಾರಿಯಷ್ಟೇ ಎನ್ನುವುದು ತಿಳಿದುಬಿಡುತ್ತದೆ. ತಮಿಳುನಾಡಿನಿಂದ ಸ್ಥಳೀಯ ಗುಪ್ತಚರ ಅಧಿಕಾರಿಗಳು ಸಾಲು ಸಾಲು ಸಂದೇಶ ಕಳುಹಿಸಿ ರಾಜೀವ್ ಗಾಂಧಿಯವರ ಜೀವಕ್ಕೆ ಅಪಾಯವಿದೆ, ಸ್ಪೋಟಕ ಸಾಮಗ್ರಿ ತುಂಬಿಕೊಂಡ ಹಡಗು ಶ್ರೀಲಂಕಾದಿಂದ ತಮಿಳುನಾಡಿಗೆ ಬಂದಿದೆ, ಇಂತಿತ ಜಾಗದಲ್ಲಿ LTTE ಯವರು ಇದ್ದಾರೆ ಎಂಬೆಲ್ಲ ಮಾಹಿತಿಗಳನ್ನು ಕಳುಹಿಸಿದರೂ ಆಗ ಕೇಂದ್ರ ಗುಪ್ತಚರ ಮುಖ್ಯಸ್ಥರು ಕ್ಯಾರೇ ಎನ್ನಲೇ ಇಲ್ಲ. ಮುಂದೆ ಸೋನಿಯಾ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅದೇ ವ್ಯಕ್ತಿ ರಾಷ್ಟ್ರೀಯ ಭದ್ರತಾ ಸಲೆಹಗಾರರಾಗಿ, ರಾಜ್ಯಪಾಲರಾಗಿ ನಿವೃತ್ತರಾದರು. ಇಂದಿರಾ ಮಾಡಿದ ತಪ್ಪು ಭಾರತ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತೋರಿಸಿದ್ದು ಹಾಗೂ ತಾನೂ ಸಹ ಯಾರ ಅಂಕೆಗೂ ಸಿಗುವುದಿಲ್ಲ ಎಂದು ತೋರಿಸಿದ್ದು. ಇನ್ನು ರಾಜೀವ್ ಪಾಪ, ಯಾವ ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡರೋ!

ಇದು ಭಾರತದ ರಾಜಕೀಯ ನಾಯಕರ ನಿಗೂಢ ಅಂತ್ಯದ ಪುಟ್ಟ ಇತಿಹಾಸ. ಮೊನ್ನೆ ಪುಣೆ ಪೊಲೀಸರು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜೀವ್ ಗಾಂಧಿಯವರ ಹತ್ಯೆಯ ರೀತಿಯಲ್ಲೇ ಕೊಲ್ಲಲು ಹೊರಟಿದ್ದಾರೆ ಎಂದಾಗ ಹಳೆಯದನ್ನೆಲ್ಲ ಮತ್ತೊಮ್ಮೆ ಹೇಳಬೇಕೆನಿಸಿತು. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಕನಸು ಕಂಡವರನ್ನೆಲ್ಲ ಕಾಣದ ಕೈಗಳು ಕೊಲ್ಲುತ್ತಲೇ ಬಂದಿವೆ. ಆ ದೃಷ್ಟಿಯಲ್ಲಿ ನೋಡಿದಾಗ, ಭಾರತ ವಿರೋಧಿ ಶಕ್ತಿಗಳಿಗೆ ಮೋದಿಯವರು ಯಾವತ್ತಿಗೋ ಅತಿದೊಡ್ಡ ಶತ್ರುವಾಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನದ ಉಗ್ರಗಾಮಿಗಳು, ನಕ್ಸಲರು ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಲಾಗದ ರಾಜಕೀಯ ಎದುರಾಳಿಗಳೆಲ್ಲ ಒಂದಾಗಿ ಹೆಣೆದಿರುವ ಸಂಚು ಇದು. ಈ ಸಂಚುಕೋರರು ಒಂದು ವಿಷಯ ಅರ್ಥಮಾಡಿಕೊಳ್ಳಲಿ ಮೋದಿಯನ್ನು ಮುಟ್ಟಿದರೆ ಸುಮ್ಮನೇ ನೋಡುತ್ತಾ ಕೂರಲಿಕ್ಕೆ ಇದು ನೆಹರೂ ಕಾಲವಲ್ಲ! ಭಾರತದ ತಾಳ್ಮೆಗೂ ಒಂದು ಮಿತಿಯಿದೆಯಲ್ಲವೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments