ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2018

ಮತಾಂಧರ ಮುಂದೆ ಸಧ್ಭಾವನೆಯ ಕನಸೇ?

‍ನಿಲುಮೆ ಮೂಲಕ

-ರಾಕೇಶ್ ಶೆಟ್ಟಿ

images (1)ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ.

ಅದು ಮೊದಲೇ ಕಾಶ್ಮೀರ. ಅಲ್ಲಿನ ಮತಾಂಧತೆಯ ಅಫೀಮಿನಲ್ಲಿ ತೇಲಾಡುತ್ತಿರುವ ಯುವಕರ ಕೈಗೆ ನೂರು ಚಿಲ್ಲರೆ ರೂಪಾಯಿ ಕೊಟ್ಟು ಡಜನ್ ಗಟ್ಟಲೆ ಕಲ್ಲನ್ನು ಭದ್ರತಾಪಡೆಗಳು, ಪೋಲೀಸರ ಮೇಲೆ ತೂರಿಸುವುದೇ ದೊಡ್ಡ ದಂಧೆಯಾಗಿದೆ. ಅಂತಹ ರಾಜ್ಯದಲ್ಲಿ ನಿಂತು ಪವಿತ್ರ ಮಾಸದಲ್ಲಿ ಉಗ್ರರ ವಿರುದ್ಧ ಯಾವುದೇ ಕಾರ್ಯಾಚರಣೆ ಬೇಡ ಎನ್ನುವ ಕೇಂದ್ರ ಗೃಹಸಚಿವಾಲಯಕ್ಕೆ ತಲೆಕೆಟ್ಟಿದೆಯೇ? ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಉಗ್ರರ ಒಳನುಸುಳುವಿಕೆ, ಗುಂಡಿನಚಕಮಕಿ, ಹಿಂಸಾಚಾರದಂತಹ 18 ಘಟನೆಗಳು ನಡೆದ ಬಗ್ಗೆ ವರದಿಯಾಗಿದ್ದರೆ, ಮೇ-ಜೂನ್ ತಿಂಗಳ ಇವರ ಸೋ-ಕಾಲ್ಡ್ ಕದನವಿರಾಮದ ಸಮಯದಲ್ಲಿ ದಾಖಲಾಗಿದ್ದು 50 ಕೇಸುಗಳು. ಆರಂಭದಿಂದಲೂ ಸೈನ್ಯದ ಉನ್ನತ ಅಧಿಕಾರಿಗಳೂ ಕದನ ವಿರಾಮದ ಪ್ರಸ್ತಾಪವನ್ನು ವಿರೋಧಿಸಿದ್ದರು. ಹಾಗೆ ವಿರೋಧಿಸಲು ಅವರಿಗೆ ವಾಸ್ತವದ ಕಾರಣವಿತ್ತು. ಆದರೆ ವಾಸ್ತವವನ್ನು ಅಲ್ಲಗಳೆದು ಬೊಗಳೆ ಭಾವನಾತ್ಮಕ ನಿರ್ಧಾರ ತೆಗೆದುಕೊಂಡ ಕೇಂದ್ರಗೃಹ ಇಲಾಖೆ ಈಗ ಮುಖಕ್ಕೆ ಮಸಿ ಮೆತ್ತಿಸಿಕೊಂಡಿದೆ. ಅಷ್ಟಕ್ಕೂ ಈ ಕದನವಿರಾಮ ಘೋಷಣೆಯಿಂದ ಕೇಂದ್ರಸರ್ಕಾರ ಏನನ್ನು ಸಾಧಿಸಲು ಹೊರಟಿತ್ತು? ತನ್ನ ಸರ್ಕಾರ ಸಧ್ಭಾವನೆಯ ಹಸ್ತ ಚಾಚಲು ತಯಾರಿದೆ ಎಂದು ವಿಶ್ವಸಂಸ್ಥೆಗೆ ತೋರಿಸಲು ಬಯಸಿತ್ತೇ ಅಥವಾ ಉಗ್ರಗಾಮಿಗಳು, ಕಲ್ಲುತೂರುವ ಜಿಹಾದಿಗಳ ಮನ ಪರಿವರ್ತನೆಯ ಕನಸು ಕಂಡಿತ್ತೇ ಎನ್ನುವುದನ್ನು ಸಚಿವ ರಾಜನಾಥ್ ಸಿಂಗ್ ಅವರೇ ತಿಳಿಸಬೇಕು. ವಿಶ್ವಸಂಸ್ಥೆ, ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ಮಾನವಹಕ್ಕುಗಳ ಉಲ್ಲಂಘನೆ ಎನ್ನುವ ಕುರಿತು ಇತ್ತೀಚಿಗೆ ಬಿಡುಗಡೆ ಮಾಡಿದ ವರದಿ ಸರ್ಕಾರ ಶಾಂತಿದೂತ ಪ್ರಯತ್ನ ಎಂತಹ ತಿರುಕನ ಕನಸು ಎನ್ನುವುದನ್ನು ಸಾಬೀತು ಮಾಡಿದೆ.

ಆಪರೇಷನ್ ಆಲ್-ಔಟ್ ಕಾರ್ಯಾಚರಣೆಯ ಮೂಲಕ ಕಣಿವೆಯಲ್ಲಿ ಹಾವಳಿಯಿಡುತ್ತಿದ್ದ ಉಗ್ರರನ್ನೆಲ್ಲ ಯಮಪುರಿಗೆ ಅಟ್ಟುವ ಮೂಲಕ ಆತ್ಮವಿಶ್ವಾಸದಲ್ಲಿದ್ದ ಸೈನ್ಯಕ್ಕೆ ಕೇಂದ್ರದ ಈ ನಿರ್ಧಾರ ಆಘಾತಕಾರಿಯಾಗಿತ್ತು. ರಾಜಕೀಯ ಕಾರಣಗಳನ್ನು ಮುಂದಿಟ್ಟು ಇದನ್ನು ಸಮರ್ಥಿಸಿಕೊಳ್ಳುವವರು ಹಲವರಿರಬಹುದು. ಆದರೆ ಇಂತಹದ್ದೊಂದು ನಿರ್ಧಾರ ಐತಿಹಾಸಿಕವಾಗಿಯೂ ವೈಫಲ್ಯ ಕಂಡಿತ್ತು ಎನ್ನುವುದನ್ನು ಕೇಂದ್ರ ಮರೆಯಿತೇ? ಅಥವಾ ಜಮ್ಮುಕಾಶ್ಮೀರದ ತನ್ನ ದೋಸ್ತಿ ಪಕ್ಷ ಪಿಡಿಪಿಯನ್ನು ಸಂತಸ ಪಡಿಸಲು ಇಂತಹ ಜೂಜಾಟಕ್ಕೆ ಕೈಯಿಟ್ಟಿತೆ? 2000ನೇ ಇಸವಿಯಲ್ಲಿ ವಾಜಪೇಯಿಯವರ ಕಾಲದಲ್ಲೂ ಸಧ್ಭಾವನೆ ಹೆಸರಿನಲ್ಲಿ ರಂಜಾನ್ ತಿಂಗಳಲ್ಲಿ ಉಗ್ರರ ವಿರುದ್ಧ ಸೈನಿಕ ಕಾರ್ಯಾಚರಣೆಯಿಲ್ಲ ಎಂದು ಸರ್ಕಾರ ಘೋಷಿಸಿತು. ಅದಕ್ಕೆ ಲಷ್ಕರ್ ಈ ತೊಯ್ಬಾ ಉಗ್ರರಿಂದ ಸಿಕ್ಕ ಉತ್ತರ ಶ್ರೀನಗರದ ವಿಮಾನನಿಲ್ದಾಣದ ಮೇಲೆ ದಾಳಿಯದ್ದು! ಇಂತಹ ಟ್ರ್ಯಾಕ್ ರೆಕಾರ್ಡ್ ಇದ್ದ ಸದ್ಭಾವನೆಯನ್ನು ಮತ್ತೆ ಮುಂದುವರೆಸಿ ಮೋದಿಯವರ ಸರ್ಕಾರ ಮತ್ತದೇ ಉತ್ತರ ಪಡೆದಿದೆ. ಕೇಂದ್ರದ ಕದನವಿರಾಮ ಘೋಷಿಸಿದ ಮರುಕ್ಷಣವೇ ಉಗ್ರರು ಇದೊಂದು ನಾಟಕ ಎಂದರೇ, ಪ್ರತ್ಯೇಕತಾವಾದಿಗಳು ಇವೆಲ್ಲ ಕೆಲಸಕ್ಕೆ ಬಾರದವು ಎಂದರು. ಹಾಗಿದ್ದೂ ಕೇಂದ್ರ ಸರ್ಕಾರ ಮುಂದುವರೆಯಿತು, ಈಗ ಫಲಿತಾಂಶ ನಮ್ಮ ಕಣ್ಣ ಮುಂದಿದೆ. ಉಗ್ರಗಾಮಿಗಳನ್ನು ಸದೆಬಡೆಯುತ್ತಿದ್ದ ಯೋಧ ಔರಂಗಜೇಬ್ ಅದೇ ಉಗ್ರರಿಂದ ಅಪಹರಣಕ್ಕೊಳಗಾಗಿ ರಂಜಾನ್ ಹಬ್ಬದ ಹಿಂದಿನ ದಿನವೇ ಹುತಾತ್ಮನಾಗಿದ್ದಾನೆ, ಹಬ್ಬದ ಸಂಭ್ರಮ ಸೂತಕದಿಂದ ತುಂಬಿ ಹೋಗಿದೆ. ಉಗ್ರ ಬರ್ಹಾನ್ ವಾನಿಯನ್ನು ಯೋಧರು ಎನ್ಕೌಂಟರ್ ಮಾಡಿ ಬಿಸಾಡಿದಾಗ ಕಣ್ಣೀರಿಟ್ಟಿದ್ದ ಗಂಜಿಗಿರಾಕಿಗಳದು ಔರಂಗಜೇಬನ ವಿಷಯದಲ್ಲಿ ದಿವ್ಯ ಮೌನ!

ಈಗಿನ ಬಿಜೆಪಿ-ಪಿಡಿಪಿ ಮಿತ್ರ ಸರ್ಕಾರದ ಕುರಿತು ಹಲವರು, ಮೋದಿಯವರ ಮುಖ ನೋಡಿ ಜಮ್ಮು-ಕಾಶ್ಮೀರದ ಕಾನೂನು ಸುವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಹಾಗೆ ಮಾಡುವುದು ಹಿಪಾಕ್ರಸಿಯಲ್ಲದೇ ಮತ್ತೇನೂ ಅಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿ ನವಮನ್ವಂತರ ಸೃಷ್ಟಿಯಾಗಿದೆ ಎನ್ನುವುದೇನೋ ನಿಜ. ಅಭಿವೃದ್ಧಿ ಕಾರ್ಯಗಳೂ ಆಗಲಿ. ಆದರೆ, ಶಾಂತಿ-ಸುವ್ಯವಸ್ಥೆಯಿಲ್ಲದ ಅಭಿವೃದ್ಧಿಯನ್ನು ಕಟ್ಟಿಕೊಂಡು ಏನು ಮಾಡುವುದು? ಸರ್ಕಾರ ಇಷ್ಟೆಲ್ಲಾ ಮಾಡುತ್ತಿದ್ದರೂ ನಮ್ಮ ಯೋಧರನ್ನು ದ್ವೇಷಿಸುವ, ಕಲ್ಲು ತೂರಿ ಪ್ರಾಣ ತೆಗೆಯುವ ಮತಾಂಧರು ಬೀದಿ ಬೀದಿಗಳಲ್ಲಿ ಕಾಣಸಿಗುತ್ತಾರೆ ಎಂದರೆ, ಇಂತವರ ಮುಂದೆ ನಿಂತು ಸಧ್ಭಾವನೆಯ ಭಾಷಣ ಬಿಗಿದು ಏನು ಪ್ರಯೋಜನ?

90ರ ದಶಕದಲ್ಲಿ ಫಾರೂಕ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ಸ್ ಜೋಡಿಯ ಸರ್ಕಾರದ ಸಮಯದಲ್ಲಿ ಹೇಗೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರರು, ಉಗ್ರಗುಂಪುಗಳು ಕಣಿವೆಯಲ್ಲಿ ರಾಜಾರೋಷವಾಗಿ ಹಿಂಸಾಚಾರ ನಡೆಸುತ್ತಿದ್ದವೋ, ಈಗಿನ ಪಿಡಿಪಿ-ಬಿಜೆಪಿ ಸರ್ಕಾರದ ಅವಧಿಯೂ ಅಂತದ್ದೇ ವಿದ್ಯಾಮಾನಗಳಿಗೆ ಸಾಕ್ಷಿಯಾಗುವತ್ತ ಹೆಜ್ಜೆಯಿಟ್ಟಿರುವುದನ್ನು ನಿರಾಕರಿಸುವುದೇಗೆ?

ಪ್ರತ್ಯೇಕತಾವಾದಿಗಳಿಡೆಗೆ ಮೃಧು ಧೋರಣೆ ಹೊಂದಿರುವ ಪಿಡಿಪಿ ಪಕ್ಷ, ರಂಜಾನ್ ತಿಂಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಬೇಡಿ ಎನ್ನುತ್ತದೆ, ಕಲ್ಲು ತೂರುವ ದ್ರೋಹಿಗಳಿಗೆ ಬುದ್ಧಿ ಹೇಳೋಣ ಎನ್ನುತ್ತದೆ. ಅಸಿಫಾ ಎಂಬ ಪುಟ್ಟ ಹೆಣ್ಣುಮಗಳ ಭೀಕರ ಹತ್ಯೆಯ ತನಿಖೆಯನ್ನು ಹಳ್ಳಹಿಡಿಸಲು ನೋಡುತ್ತದೆ. ಇನ್ನೊಂದೆಡೆ ಪೆಲೆಟ್ ಬುಲೆಟ್ಟುಗಳನ್ನು ಬಳಸದಂತೆ ಸರ್ಕಾರ ಮತ್ತು ವ್ಯವಸ್ಥೆ ನಮ್ಮ ಯೋಧರ ಕೈ ಕಟ್ಟಿ ಹಾಕುತ್ತಿದೆ. ಕಳೆದ ವರ್ಷ ನಡೆದಿದ್ದ ಉಪಚುನಾವಣೆಯ ಸಂದರ್ಭದಲ್ಲಂತೂ ನಿರಾಯುಧರಾಗಿದ್ದ CRPF ಯೋಧರ ಮೇಲೆ ಹಲ್ಲೆ ಅಲ್ಲಿನ ದ್ರೋಹಿಗಳು ನಡೆಸುತ್ತಿದ್ದ ಹಲ್ಲೆ ಮತ್ತು ಆ ಹಲ್ಲೆಯನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದ ಆ ಯೋಧರನ್ನು ನೋಡಿದರೆ ನಮ್ಮ ರಕ್ತಕುದಿಯುವುದಿಲ್ಲವೇ? ಯೋಧರ ಕೈಕಟ್ಟಿ ಹಾಕಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳೇ ತಾನೇ? ಅದನ್ನೇಕೆ ನಾವು ಪ್ರಶ್ನೆ ಮಾಡುತ್ತಿಲ್ಲ. ಒಂದು ವೇಳೆ ಇದೇ ಘಟನೆ ಯುಪಿಎ ಕಾಲದಲ್ಲಿ ನಡೆದಿದ್ದರೇ!? ಸರ್ಕಾರಗಳು ಬರುತ್ತವೆ ಹೋಗುತ್ತವೆ.ದೇಶ,ದೇಶ ಕಾಯುವ ಯೋಧರು ಇದ್ದೇ ಇರುತ್ತಾರೆ ಅವರ ಆತ್ಮಗೌರವ ಕಾಪಾಡುವುದು ಪ್ರತಿ ಸರ್ಕಾರ ಹೊಣೆಗಾರಿಕೆಯಲ್ಲವೇ?

ಹಿಂದಿನ ಸರ್ಕಾರಗಳ ಭ್ರಷ್ಟಚಾರ, ನಿರುದ್ಯೋಗದ ಸಮಸ್ಯೆಯಿಂದಾಗಿ ಕಾಶ್ಮೀರಿ ಯುವಕರು ಕಲ್ಲನೆತ್ತಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಈಗ ಹೊಸ ಸರ್ಕಾರ ಬಂದ ನಂತರವೂ ಅದು ಮುಂದುವರೆದಿದೆ ಎಂದರೇ, ಈಗಲೂ ಕಲ್ಲು ಬೀಸುವ ಕೈಗಳಿಗೆ ಉದ್ಯೋಗ ಕೊಡುತ್ತಿಲ್ಲ ಅಥವಾ ಬೀಸುವುದೇ ಆ ಯುವಕರಿಗೆ ಉದ್ಯೋಗವಾಗಿದೆ. ರಿಪಬ್ಲಿಕ್ ಟೀವಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ 2ನೇ ವಾದಕ್ಕೆ ಪುಷ್ಟಿ ನೀಡುವ ಅಂಶಗಳಿವೆ.

ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು ಹಿಂದೊಮ್ಮೆ, ನರೇಂದ್ರ ಮೋದಿಯವರೊಬ್ಬರಿಂದಲೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದಿದ್ದರು. ಇರಬಹುದು ಮೋದಿಯವರಂತಹ ಗಟ್ಟಿಗುಂಡಿಗೆಯ ನಾಯಕನ ಕಾಲದಲ್ಲಿ ಅಲ್ಲದೇ ಇನ್ಯಾರ ಕಾಲದಲ್ಲಿ ಈ ಸಮಸ್ಯೆ ಪರಿಹಾರವಾದೀತು. ಆದರೆ, ಸದ್ಯದ ಜಮ್ಮುಕಾಶ್ಮೀರ ಸಮಸ್ಯೆಯ ಪರಿಹಾರದ ಮಾರ್ಗವಾಗಿ ಕಾಣುವುದು 90ರ ದಶಕದಲ್ಲಿ ಜಮ್ಮುಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು. ಕೇಂದ್ರಸರ್ಕಾರ ಜಗಮೋಹನ್ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದಾಗ, ಕಾಶ್ಮೀರದ ಆಜಾದಿಗಾಗಿ ಗಂಟಲು ಹರಿದುಕೊಳ್ಳುವವರೆಲ್ಲ ಸೇರಿಕೊಂಡು #JagmohanTheMurderer ಎಂಬ ಹ್ಯಾಷ್ ಟ್ಯಾಗಿನಡಿಯಲ್ಲಿ ಬೊಬ್ಬೆ ಹೊಡೆದರು. ಕಾಶ್ಮೀರದ ರಾಜ್ಯಪಾಲ ಹುದ್ದೆಯಿಂದಿಳಿದು 17 ವರ್ಷಗಳ ಬಳಿಕವೂ ದೇಶದ್ರೋಹಿಗಳ ನೆನಪಿನಲ್ಲಿ ಉಳಿದಿರಬೇಕೆಂದರೇ ಪ್ರತ್ಯೇಕತಾವಾದಿಗಳು ಕನಸಿನಲ್ಲೂ ಮರೆಯದಂತಹ ಕಠಿಣಕ್ರಮಗಳೇ ಕಾರಣವೆಂದು ಪ್ರತ್ಯೇಕವಾಗಿಯೇನೂ ಹೇಳಬೇಕಾಗಿಲ್ಲ.

ಜನವರಿ 26,1990ರಂದು ಜಮ್ಮುಕಾಶ್ಮೀರ ರಾಜ್ಯವನ್ನು ಭಾರತದ ಒಕ್ಕೂಟದಿಂದ ಪ್ರತ್ಯೇಕಗೊಳಿಸಿ ಆಜಾದ್ ಕಾಶ್ಮೀರವನ್ನು ಮಾಡಿಬಿಡುವಂತಹ ಅನಾಹುತಕಾರಿ ಯೋಜನೆಯೊಂದು ಇನ್ನೇನೂ ಸಫಲವಾಗಿಬಿಟ್ಟಿತು ಎನ್ನುವಾಗ, ತನ್ನ ಅಡ್ಮಿನಿಸ್ಟ್ರೇಷನ್ ಸ್ಕಿಲ್ ಮತ್ತು ಕಠಿಣ ನೀತಿಯಿಂದಾಗಿ ಆ ಯೋಜನೆಯನ್ನು ವಿಫಲಗೊಳಿಸಿದವರು ಜಗಮೋಹನ್. ಈಗ 91 ವರ್ಷದವರಾಗಿರುವ ಜಗಮೋಹನ್ ಅವರಂತೂ ಮತ್ತೆ ಜಮ್ಮುಕಾಶ್ಮೀರಕ್ಕೆ ಕಾಲಿಡಲಾರರು. ಆದರೆ ಮೋದಿ ಸರ್ಕಾರ ಈಗ ಜಗಮೋಹನ್ ಅವರಂತೆ ನಡೆದುಕೊಳ್ಳದೇ ಇದ್ದರೇ ಜಮ್ಮುಕಾಶ್ಮೀರ ಸಮಸ್ಯೆ ಬಿಗಡಾಯಿಸುವುದಂತು ಖಚಿತ.

ಕೇಂದ್ರ ಸರ್ಕಾರ ಈಗಲಾದರೂ ತನ್ನ ಜಮ್ಮುಕಾಶ್ಮೀರದ ಕುರಿತ ದ್ವಂಧ್ವ ನೀತಿಯನ್ನು ಬದಲಾಯಿಸಿಕೊಂಡು ಜಗಮೋಹನ್ ಅವರನ್ನೊಮ್ಮೆ ನೆನೆಸಿಕೊಳ್ಳಲಿ. ಜಗತ್ತು ಗುರುತಿಸುವುದು ಶಕ್ತಿಯನ್ನೇ ಹೊರತು ಬಲಹೀನತೆಯನ್ನೆಲ್ಲ. ಟಿಬೇಟನ್ನು ಆಕ್ರಮಿಸಿಕೊಂಡ ಚೀನಾ, ಈಗ ಹೇಗೆ ಜಗತ್ತಿನಾದ್ಯಂತ ತನ್ನ “ಒನ್ ಚೀನಾ ಪಾಲಿಸಿ”ಗೆ ಎಲ್ಲರೂ ಬದ್ಧರಾಗಿರುವಂತೆ ಮಾಡಿದೆ ನೋಡಿ. ಆದರೆ ಜಮ್ಮುಕಾಶ್ಮೀರದ ವಿಷಯದಲ್ಲಿ ಭಾರತದ ಪರಿಸ್ಥಿತಿ ಹೇಗಿದೆ? ಕಳೆದ ವರ್ಷ ಟರ್ಕಿಯ ಅಧ್ಯಕ್ಷ ಕಾಶ್ಮೀರಕ್ಕಾಗಿ ಸಂಧಾನ ನಡೆಸಲು ಸಿದ್ದ ಎನ್ನುವ ಅಹಂಕಾರ ತೋರಿಸಿದ್ದ. ಮೊನ್ನೆ ಮೊನ್ನೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ವರದಿಯಲ್ಲಿ ಭಾರತ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಸಮಸ್ಯೆಯೆಡೆಗೆ ಸರ್ಕಾರವೊಂದು ಮೃಧು ಧೋರಣೆ ತೋರಿದಾಗ ನಾಯಿ-ನರಿಗಳೆಲ್ಲ ಊಳಿಡುತ್ತವೆ. ತೊಡೆತಟ್ಟಿ ನಿಂತು ಕಠಿಣವಾಗಿ ವರ್ತಿಸಿದರೆ ಇವೆಲ್ಲ ಬಿಲ ಸೇರಿಕೊಳ್ಳುತ್ತವೆ. ನರೇಂದ್ರ ಮೋದಿ ಸರ್ಕಾರದ ಪ್ರಸ್ತುತ ಕಾಶ್ಮೀರ ನೀತಿ ನಾಯಿ-ನರಿಗಳಿಗೂ ಊಳಿಡಲು ಅವಕಾಶ ಕೊಟ್ಟಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments