ವಿಷಯದ ವಿವರಗಳಿಗೆ ದಾಟಿರಿ

ಜುಲೈ 3, 2018

2

ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಾಂಜೆ

ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ‌ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಉಡುಪಿಯ, ನಗರದ ಪ್ರತಿಷ್ಟಿತ ಶಾಲೆಯಲ್ಲಿ ಓದುವ ಮಕ್ಕಳಿಗೆ ಅವರಪ್ಪನಾಣೆ ಈ ಮಹನುಭಾವರ ಹೆಸರು ಗೊತ್ತಿರಲಿಕ್ಕಿಲ್ಲ.. ಅಪ್ಪನಾಣೆ ಅಂದಾಗ ನೆನಪಾಯಿತು.. ಈ ಮಕ್ಕಳ ಅಪ್ಪಂದಿರಿಗೂ ಇವರ ಪರಿಚಯ ಇರಲ್ಲಿಕ್ಕಿಲ್ಲ. ಹಾಜಿ ಅಬ್ದುಲ್ಲಾವರೇ ಸ್ವತಃ ದಾನ ಮಾಡಿದ ಜಾಗದಲ್ಲಿ ನಿರ್ಮಿಸಲಾದ ಅಂಜುಮಾನ್ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಮುಸಲ್ಮಾನರಿಗೂ ಹಾಜಿ ಅಬ್ದುಲ್ಲಾರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಅವರು ಅಂದು ಓದಿದ್ದ ಉಡುಪಿಯ ಅತ್ಯಂತ ಹಳೆಯ ಮತ್ತು ಪ್ರಸಿದ್ದ ಶಾಲೆಗಳಲ್ಲಿ ಒಂದಾದ ಕ್ರಿಶ್ಚನ್ ಹೈಸ್ಕೂಲಿನ ವಿದ್ಯಾರ್ಥಿಗಳಿಗಾಗಲಿ ಅಥವ ಅಲ್ಲಿಯ ಶಿಕ್ಷಕರಿಗೆ ಇವರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಅವರ ಒಂದು ಫೋಟೋ ಕೂಡ ಆ ಶಾಲೆಯ ಗೋಡೆಯ ಮೇಲೆ ನೇತುಹಾಕಿರಲಿಕ್ಕಿಲ್ಲ. ಹಾಳಾಗಿ ಹೋಗಲಿ‌, ಅವರು ಹುಟ್ಟಿದ ದಿನಾಂಕವೇ ನೆನಪಿಟ್ಟುಕೊಳ್ಳದ ಸಮಾಜ ನಮ್ಮದು. ಅಂತಹ ದುರಂತ ನಾಯಕರು ನಮ್ಮ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು. ಅವರ ಹೆಸರು ಇವತ್ತು ಉಡುಪಿಯ ಯಾವುದೋ ಹಳೆಯ ಕಟ್ಟಡದ ಬಿರುಕು ಬಿಟ್ಟ ಗೋಡೆಯ ಸಂದಿಯಲ್ಲೋ, ಅಲ್ಲೇ ತುಕ್ಕು ಹಿಡಿದ ಕಬ್ಬಿಣದ ಗೇಟಿನ ಮೇಲೋ ಅಥವ ಆಸುಪಾಸಿನ ಹಳಿಯಲ್ಲಿ ಬೆನ್ನು ಬಾಗಿ ಹಲ್ಲು ಉದುರಿದ ಬೊಚ್ಚು ಬಾಯಿಯ ವಯೋ ವೃದ್ಧರ ಬಾಯಲ್ಲಿ ಇರಬಹುದೋ ಏನೋ. ಹಾಂ.. ನೆನಪಾಯಿತು ಉಡುಪಿಯ ಕೃಷ್ಣ ಮಠದ ಗೋಡೆಗಳಿಗೆ ಒಮ್ಮೆ ಕಿವಿ ಕೊಟ್ಟು ಕೇಳಿ… ಕೇಳೀತು.. ಆದರೆ ಅದು ಕಾಲಗರ್ಭದಲ್ಲಿ ಹುದುಗಿ ಹೋದ ಕ್ಷೀಣವಾದ ದನಿ.. ಹೊರಗಿನ ಕರ್ಕಶದ ನಡುವೆ ಅದೂ ಕೇಳುತ್ತಿಲ್ಲ.. ಅಥವ ಕೇಳುವ ಮನಃಸ್ಥಿತಿಯಲ್ಲಿ ನಾವಿಲ್ಲವೋ?? ಹೌದು ಕೇಳುವ ಮನಃಸ್ಥಿತಿಯಲ್ಲಿ ನಾವಿಲ್ಲ.. ನಾವುಗಳು ಪೇಜಾವರ ಸ್ವಾಮಿಗಳು ಮಾಡಿದ ಇಫ್ತಿಯಾರ ಕೂಟವನ್ಬು ಟೀಕೆ ಮಾಡುವ ಭರದಲ್ಲಿ ನಮ್ಮ ಆತ್ಮದ ಕೂಗನ್ನ ಕೇಳುವುದೇ ಮರೆತು ಬಿಟ್ಟಿದ್ದೇವೆ.. ಈ ಮನಸ್ಥಿತಿ ಸಮಾಜದ ಬಹು ದೊಡ್ದ ದುರಂತ.‌.

ಹಾಗಿದ್ರೆ ಯಾರು ಈ ಹಾಜಿ ಆಬ್ದುಲ್ಲಾ ಸಾಹೆಬ್ರು? ಇವರಿಗೂ ಉಡುಪಿ, ಉಡುಪಿಯ ರಥ ಬೀದಿ ಮತ್ತು ಕೃಷ್ಣ ಮಠಕ್ಕೂ ಇರುವ ಸಂಭಂದ ಏನು?? ತಿಳಿಯೋಣ ಬನ್ನಿ. ಖಾನ್ ಬಹದ್ದೂರ್ ಹಾಜಿ ಆಬ್ದುಲ್ಲಾ ಸಾಹೇಬರು ಉಡುಪಿಗೆ ಸಿಕ್ಕ ಶಿಭಿ ಚಕ್ರವರ್ತಿ ಎಂದು ಹೇಳಿದರೆ ಅದು ಅತಿಶಯ ಆಗಲಾರದು. ಸುಂಕೇರಿ ಪದ್ಮನಾಭ ನಾಯಕ್ರು ಹೇಳುವಂತೆ ದಾನ ಅನ್ನುವ ಹೆಸರೇ ಹಾಜಿ ಅಬ್ದುಲ್ಲಾ ಅವರಿಂದ ಹುಟ್ಟಿತು, ದಾನಕ್ಕೆ ಇನ್ನೊಂದು ಹೆಸರೇ ಹಾಜಿ ಅಬ್ದುಲ್ಲ ಸಾಹೇಬರು. ಇವರ ಹಿರಿಯರು ಮೂಲತಃ ಗುಜರಾತಿನ.. ಹೌದು ಇಂದು ಕೆಲವು ರಾಜಕಾರಣಿಗಳಿಗೆ ಮತ್ತು ಕೆಲವು ತಥಾ ಕಥಿತ ಬುದ್ದಿಜೀವಿಗಳಿಗೆ ಯಾವ ರಾಜ್ಯದ ಹೆಸ್ರು ಕೇಳಿದರೆ ನಿದ್ದೆ ಬರೋದಿಲ್ವೋ ಅದೇ ಗುಜತರಾತಿನ ಜುನಾ ಘಡದಿಂದ ವಲಸೆ ಬಂದ ಧಖನಿ ಮುಸ್ಲಿಮ್ ಕುಟುಂಬ.

ಹಾಜೀ ಅಬ್ದುಲ್ಲಾ ಅವರ ಅಜ್ಜ ಹಾಜಿ ಬುಡಾನ್ ಸಾಹೇಬರು ಅಂದಿಗೆ ಅಂದ್ರೆ ಸುಮಾರು ಕ್ರಿ.ಶ ೧೮೩೦ ರ ಆಸು ಪಾಸಿನ ಸಮಯ. ಆ ಕಾಲಕ್ಕೆ ಇಡೀ ಮದ್ರಾಸ್ ಪ್ರಾಂತ್ಯಕ್ಕೆ ಭಾರಿ ದೊಡ್ದ ವರ್ತಕರಾಗಿದ್ದವರು. ಇವರ ಮನೆ ಮಲ್ಪೆಯಲ್ಲಿ ಇದ್ದರೆ ಇವರ ಕಚೇರಿ ಉಡುಪಿಯ ಬಡಗು ಪೇಟೆಯಲ್ಲಿ ಇತ್ತು. ಇವರದ್ದು ರಫ್ತು ಉಧ್ಯಮ. ಉಡುಪಿಯಿಂದ ಗಂಧದ ಎಣ್ಣೆ, ಒಣ ಮೀನು, ಗಂದಸಾಲೆ ಅಕ್ಕಿ, ಹಂಚು, ಮಸಾಲೆ ಪದಾರ್ಥಗಳನ್ನು ತಮ್ಮ ಬೃಹತ್ ಗಾತ್ರದ ಹಾವಾಯಿ ಹಡಗಿನಲ್ಲಿ ಶ್ರೀಲಂಕ, ಬರ್ಮ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಿ ಅಲ್ಲಿಂದ ಪಿಂಗಾಣಿ ಪಾತ್ರೆಗಳು ವಿಲಾಯಿತಿ ಬಟ್ಟೆಗಳು, ಕರ್ಜೂರ ಮುಂತಾದ ವಸ್ತುಗಳನ್ನು ಆಮದು ಮಾಡಿಕೊಂಡು ಉಡುಪಿ ಮಂಗಳೂರು ಮುಂತಾದ ಕಡೆ ಮಾರಾಟ ಮಾಡುತ್ತಿದ್ದರು. ಹಾಜಿ ಬುಡಾನ್ ಸಾಹೇಬರ ಕಾಲದ ನಂತರ ಅವರ ವ್ಯವಹಾರದ ಜವಾಬ್ಧಾರಿ ಹೊತ್ತದ್ದು ಅವರ ಮಗ, ಹಾಜಿ ಅಬ್ದುಲ್ಲಾರ ತಂದೆ ಹಾಜಿ ಖಾಸಿಮ್ ಸಾಹೇಬರು .. ತನ್ನ ತಂದೆ ಹಾಜೀ ಬುಡಾನ್ ಸಾಹೇಬರ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದರು. ಹಾಜಿ ಅಬ್ದುಲ್ಲಾರು ತಮ್ಮ ೧೯ರ ವಯಸ್ಸಿನಲ್ಲೇ ತಂದೆ ಕಾಸಿಮ್ ಸಾಹೇಬರನ್ನ ಕಳೆದುಕೊಂಡರು.

ಹಾಜಿ ಅಬ್ದುಲ್ಲ ಆ ಕಾಲಕ್ಕೆ ಇಡೀ ದಕ್ಷಿಣ ಭಾರತದಲ್ಲೆ ಅತ್ಯಂತ ಪ್ರಸಿದ್ದ ಕಂಪೆನಿಯಾದ ಹೆಚ್ ಬಿ ( ಇದು ಹಾಜಿ ಅಬ್ದುಲ್ಲ ಅವರ ಅಜ್ಜ ಹಾಜಿ ಬುಡಾನ ಸಾಹೇಬರ ಹೆಸರಿನಲ್ಲಿ ಇದ್ದ ಕಂಪೆನಿ) ಕಂಪೆನಿಯ ಮಾಲೀಕರಾಗಿದ್ದರು. ಅಂದಿನ ಕಾಲಕ್ಕೆ ಇಡೀ ಮದ್ರಾಸ ಸಂಸ್ಥಾನದಲ್ಲೇ ಇವರ ಕಂಪೆನಿ ‌ಅಷ್ಟು ಹೆಸರುವಾಸಿಯಾಗಿತ್ತು. ಇವರಿಗೆ ಇವರ ಪೂರ್ವಜರಿಂದ ಬಂದ ಸುಮಾರು ಏಳುನೂರು ಎಕ್ರೆಯಷ್ಟು ಕೃಷಿ ಭೂಮಿ ಉಡುಪಿ, ಕಾರ್ಕಳ, ಕಾಪು, ಬ್ರಹ್ಮವಾರದ ಆಸುಪಾಸಿನ ಪ್ರದೇಶಗಳಲ್ಲಿ ಇದ್ದವು. ಇವುಗಳಿಂದ ರೈತರು ವಾರ್ಷಿಕ ಮೂರು ಬಾರಿ ಬತ್ತದ ಬೆಳೆಯನ್ನು ತೆಗೆಯುತ್ತಿದ್ದರು. ಅದರಿಂದ ರೈತರು ಹಾಜಿ ಅಬ್ದುಲ್ಲ ಸಾಹೇಬರಿಗೆ ಗೇಣಿಯನ್ನು ಕೊಡುತ್ತಿದ್ದರು. ಆದರೆ ಹಾಜಿ ಅಬ್ದುಲ್ಲಾರ ಔದಾರ್ಯ ಎಂತಾದ್ದಾಗಿತ್ತು ಅಂದರೆ ಇವರು ಯಾವತ್ತೂ ತಮ್ಮ ಗೇಣಿದಾರರಿಗೆ ಇಷ್ಟೆ ಗೇಣಿ ಕೊಡಿ ಎಂದೂ ತಾಕೀತು ಮಾಡಿದವರಲ್ಲ. ಅವರು ಕೊಟ್ಟಷ್ಟು ಗೇಣಿ ಪಡೆದರು. ಕೆಲವು ರೈತರು ಗೇಣಿ ಕೊಡದಿದ್ದಲ್ಲಿ ಆ ಬಗ್ಗೆ ತಲೆ ಕೆಡಿಸಿಕೊಂಡವರೂ ಅಲ್ಲ. ಇವರು ಆ ಕಾಲಕ್ಕೆ ಮಾಡುತ್ತಿದ್ದ ದಾನ ಧರ್ಮಗಳು ನಮಗೆ ಮೈಸೂರಿನ ರಾಜ ಮನೆತನದ ನೆನಪು ಮಾಡಿ ಕೊಡುತ್ತದೆ. ಅಂದಿನ ಕಾಲಕ್ಕೆ ಉಡುಪಿಯ ಕೃಷ್ಣ ಮಠದಿಂದ ಕೇವಲ 150 ಮೀಟರ್‌ಗಳಷ್ಟು ದೂರದಲ್ಲಿ ಇದ್ದ ಇವರ ಮನೆಯಲ್ಲಿ, ಮನೆ ಅಲ್ಲ ಅಂದಿನ‌ ಕಾಲಕ್ಕೆ ಅದನ್ನ ಅರಮನೆ ಎಂದೇ ಹೇಳಬೇಕು. ಅಂತಾ ಮನೆಯಲ್ಲಿ ದಿನ ನಿತ್ಯ ಸುಮಾರು ಮೂರುವರೆ ಮುಡಿಗಳಷ್ಟು ಅಕ್ಕಿಯನ್ನ ದಾನವಾಗಿ ಕೊಡುತ್ತಿದ್ದರು. ಇವರ ದಾನ ಎಷ್ಟು ಮನೆ ಮಾತಾಗಿತ್ತು ಎಂದರೆ ಆ ಕಾಲದಲ್ಲಿ ಯಾರಾದರೂ ಮನೆಯ ಹಿರಿಯರು ಮಕ್ಕಳಿಗೆ ಜೋರಾಗಿ ಗದರಿಸಿದರೆ ಮಕ್ಕಳು ಮನೆಯಲ್ಲಿ. “ಯಂಕು ನಿಗೆಲೆನ ಹಂಗ್ ದ ನುಪ್ಪು ಬೊಡ್ಚಿ ಯಾನು ಹಾಜೀ ಸಾಹೇಬರನ ಇಲ್ಲಡ್ ಪಡಿಗೆ ಉಂತುವೆ” ಎನ್ನುತ್ತಿದ್ದರು. ಅವರು ಅಕ್ಕಿ ಮಾತ್ರ ದಾನ ಮಾಡುತ್ತಿರಲಿಲ್ಲ, ಅವರ ಮನೆಗೆ ಕಷ್ಟ ಹೇಳಿಕೊಂಡು ಬಂದ ಜನರಿಗೆ ಆ ಕಾಲದಲ್ಲಿ ಕೊಡುತ್ತಿದ್ದ ಕನಿಷ್ಠ ದಾನ ಐವತ್ತು ರುಪಾಯಿ.. ಅದು ಸರಿ ಸುಮಾರು ‌ಇಂದಿನ ಐದು ಸಾವಿರ ರುಪಾಯಿಗೆ ಸಮ. ತೀರಾ ಆವಶ್ಯಕತೆ ಬಿದ್ದಾಗ ಇವರು ತಮ್ಮ ಉಂಗುರವನ್ನೂ ದಾನವಾಗಿ ಕೊಟ್ಟದ್ದುಂಟು. ಇವರ ಇನ್ನೊಂದು ಪ್ರಮುಖ ವಿಷಯ ಅಂದ್ರೆ ಇವರು ದಾನ ಕೊಟ್ಟವರಲ್ಲಿ ಇದರ ಬಗ್ಗೆ ಯಾವುದೇ ಪ್ರಚಾರ ಮಾಡಬೇಡಿ ಎಂದು ಆಣೆ ತೆಗೆದುಕೊಳ್ಳುತ್ತಿದ್ದರಂತೆ. ಅಕ್ಷರಶಃ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದೆ ಇರೋ ಹಾಗೆ ನೊಡಿಕೊಂಡಿದ್ದರು. ಅದಕ್ಕೆ ಇವರನ್ನ ರಾಮದಾಸ ಸಾಮಗರು ಅವರ ಒಂದು ಪುಸ್ತಕದಲ್ಲಿ ಉಡುಪಿಯ ಅಕ್ಬರ ಅಂತಲೇ ಕರೆದಿದ್ದಾರೆ. ಇವರು ತಾವು ಮಾಡಿದ ದಾನ ಧರ್ಮಗಳನ್ನ‌ ಯಾವುದೇ ಟ್ರಸ್ಟ್ ಮುಖಾಂತರ ಮಾಡಿದವರಲ್ಲ, ಯಾವುದೇ ಅಮೃತ ಶಿಲೆಗಳ ಮೇಲೆ ತಮ್ಮ ಕೆಲಸಗಳನ್ನ ಕೆತ್ತಿಸಿಕೊಂಡವರಲ್ಲ.. ಹಾಗಾಗಿ ಇವತ್ತು ಇವರು ದಂತ ಕಥೆಯಾಗಿ ಉಳಿದು ಅಳಿದು ಹೋಗುತ್ತಿದ್ದಾರೆ.

ಅದು ಮೊದಲ ವಿಶ್ವ ಯುದ್ದ ಕಾಲ ಇಡೀ ಜಗತ್ತೆ ಎರಡು ಬಣಗಳಾಗಿ ಒಬ್ಬರ ವಿರುದ್ದ ಇನ್ಬೊಬ್ಬರು ತೊಡೆ ತಟ್ಟಿ ನಿಂತ ಕಾಲ. ಬ್ರಿಟೀಶರ ಅಧೀನದಲ್ಲಿ ಇದ್ದ ಭಾರತವೂ ಯುದ್ದಕ್ಕೆ ನೂಕಲ್ಪಟ್ಟಿತು. ಅಷ್ಟೂ ಜನ ಸೈನಿಕರಿಗೆ ಅಹಾರದ ಒದಗಿಸುವುದು ನಮ್ಮನ್ನು ಆಳುತ್ತಿದ್ದ ಬ್ರಿಟೀಶ್ ಸರ್ಕಾರಕ್ಕೆ ಕಷ್ಟವಾಗಿತ್ತು. ಆ ಕಾರಣಕ್ಕೆ ದೇಶದ ರೈತರನ್ನು ಸುಲಿದು ಸರ್ಕಾರ ಅವರು ಬೆಳೆದ ದವಸ ದಾನ್ಯಗಳನ್ನೆಲ್ಲಾ ದೋಚಿ ಒಯ್ಯುತಿತ್ತು. ಆ ಕಾಲಕ್ಕೆ ರೈತರ ಬಳಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇದಕ್ಕೆ ಉಡುಪಿ ಪರಿಸರದ ರೈತರೂ ಹೊರತಾಗಿರಲಿಲ್ಲ. ಆಗ ಈ ಉಡುಪಿಯ ಹಾಜೀ ಅಬ್ದುಲ್ಲಾ ಎನ್ನುವ ಮಹಾನುಭಾವ ತನ್ನ ಸ್ವಂತ ಖರ್ಚಿನಲ್ಲಿ ಸಾಗರದಾಚೆಗಿನ ಬರ್ಮಾ ದೇಶದಿಂದ ತನ್ನದೇ ಹಡಗಿನಲ್ಲಿ ತನ್ನ‌ ಸ್ವಂತ ಖರ್ಚಿನಲ್ಲಿ ಅಕ್ಕಿ ತರಿಸಿ ಬಡ ರೈತರಿಗೆ ಹಂಚಿದ ಪುಣ್ಯಾತ್ಮ ಈತ. ಒಮ್ಮೊಮ್ಮೆ ಇವರು ಮಾಡುತ್ತಿದ್ದ ದಾನ ಧರ್ಮಗಳನ್ನ ಕೇಳಿದರೆ ಇವರ ದೇಹದೊಳಗೆ ಸಮಾಜ ಸುಧಾರಣೆಯ ಬೂತವೇನಾದರೂ ಹೊಕ್ಕಿತ್ತೋ ಅನ್ನಿಸಿಬಿಡುತ್ತದೆ. ತಾನು ದುಡಿದ, ತನ್ನ ಹಿರಿಯರಿಂದ ಬಂದ ಅಷ್ಟೂ ಅಸ್ತಿ ಸಂಪತ್ತನ್ನ ಸಮಾಜಕ್ಕಾಗಿ ಹಂಚಿ ಬಿಟ್ಟ ಕಾರ್ಣಿಕ ಪುರುಷ ಈತ. ಇದೇ ಕಾರಣಕ್ಕೆ ಜನ ಅವರ ಮನೆಯ ಮುಂದೆ ತಿರುಗಾಡುವಾಗ ಕಾಲಿನ ಚಪ್ಪಲಿ‌ ತೆಗೆದು ಕೈಯಲ್ಲಿ ಹಿಡಿದು ನಡೆಯುತ್ತಿದ್ದರು. ಜನರ ಪಾಲಿಗೆ ಈತ ಸಾಕ್ಷಾತ್ ದಾನಶೂರ ಕರ್ಣ.

ಇವರು ತಮ್ಮ ದಾನ ಧರ್ಮದ ಕಾರ್ಯದಲ್ಲಿ ಯಾವತ್ತೂ ಜಾತಿ ಮತ ಪಂಗಡಳ ಭೇದ ಮಾಡಿದವರಲ್ಲ, ದೇಹಿ ಎಂದು ಯಾರೇ ತಮ್ಮ ಮನೆಯ ಬಾಗಿಲಿಗೆ ಬಂದರು ಅವರನ್ನ ಬರಿಗೈಯಲ್ಲಿ ವಾಪಾಸು ಕಳಿಸಿದ್ದು ಇತಿಹಾಸದಲ್ಲಿ ಇಲ್ಲ.. ಆ ದಿನಗಳಲ್ಲಿ ಅಸ್ಪರ್ಶತೆ ವಿರುದ್ಧ ಗಾಂದೀಜಿ ಸೇರಿದಂತೆ ಅನೇಕ‌ ಸಮಾಜ ಸುಧಾರಕರು ದಲಿತರ ಉದ್ದಾರಕ್ಕೆ ಆಂದೋಲನ‌ ನಡಸುತ್ತಿದ್ದ ಕಾಲ ಅದು ೧೯೦೯ ರ ಇಸವಿ. ದಲಿತರಿಗೆ ಆಧುನಿಕ ಶಿಕ್ಷಣದ ಆವಶ್ಯಕತೆಯನ್ನು ಮನಗೊಂಡ ಹಾಜೀ ಅಬ್ದುಲ್ಲಾ ಸಾಹೇಬರು ಬನ್ನಂಜೆಯಲ್ಲಿ ತಮ್ಮ ಒಂದು ಎಕರೆಯಷ್ಟು ಭೂಮಿಯನ್ನು ದಾನವಾಗಿ ಕೊಟ್ಟು ಅಲ್ಲಿ ತಮ್ಮ ಸ್ವಂತ ಕಟ್ಟಡವನ್ನು ಶಾಲೆಗಾಗಿ ಬಿಟ್ಟುಕೊಟ್ಟು ದೂರದ ಮಂಗಳೂರಿನಿಂದ ಒಬ್ಬ ಅಧ್ಯಾಪಕರನ್ನು ನಿಯುಕ್ತಿ ಮಾಡಿ ಅವರಿಗೆ ತಮ್ಮದೇ ಜೇಬಿಂದ ಸಂಬಳವನ್ನು ಕೊಟ್ಟು ದಲಿತರಿಗಾಗಿ ಒಂದು ಶಾಲೆಯನ್ನು ತೆರೆದ ಮಹಾನ್ ಸಮಾಜ ಸುಧಾರಕ ಆತ. ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ತಮ್ಮ ಕೈಲಾದಷ್ಟು ಸಹಾಯವನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ್ದಾರೆ ೧೯೨೦ ರಲ್ಲಿ ಮಹಾತ್ಮಾ ಗಾಂಧಿಯವರು ಮಂಗಳೂರು ಮತ್ತು ಉಡುಪಿಗೆ ಪ್ರವಾಸ ಬಂದಾಗ ಅವರ ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿದ್ದು ಸ್ವತಃ ಹಾಜಿ ಅಬ್ದುಲ್ಲಾ ಸಾಹೇಬರೆ.

ಅದು ೧೯೨೦ ಕಾಲ ಉಡುಪಿ ಕೃಷ್ಣ ಮಠ ಸೇರಿದಂತೆ ಅಷ್ಟ ಮಠಗಳ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಮಠದ ಗೋಡೆ ಚಾವಣಿಗಳು ಸೋಗೆ ಮರದ್ದಾಗಿದ್ದವು. ಮಠಗಳು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದ್ದ ಕಾಲ ಅದು. ಪರ್ಯಾಯ ಬಂತೆಂದೆರೆ ಸ್ವಾಮೀಜಿಗಳು ಮಠ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಅಷ್ಟೋಂದು ಭಯ ಮತ್ತು ಮುಜುಗರ. ಕಾರಣ ಪರ್ಯಾಯದ ಖರ್ಚಿಗೂ ಮಠದ ಬಳಿ ಹಣವಿಲ್ಲದ ಕಾಲ. ಅಂತಾ ಕಾಲದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರು ಉಡುಪಿಯ ಮಠಕ್ಕೆ ತಮ್ಮ ಭಂಡಾರದ ಬಾಗಿಲನ್ನೇ ತೆರದಿಟ್ಟಿದ್ದರು. ಪರ್ಯಾಯಕ್ಕೆ ಏನೆಲ್ಲಾ ಸಾಮಗ್ರಿಗಳು ಎಷ್ಟು ಬೇಕೋ ಅಷ್ಟನ್ನೂ ತಮ್ಮ ಅಂಗಡಿಯಿಂದಲೇ ಕೊಟ್ಟರು . ಪರ್ಯಾಯ ಮುಗಿದ ಮೇಲೆ ಅದರ ಲೆಕ್ಕ ಮಾಡಿ ಮಠದಿಂದ ಹಣ ಸಂದಾಯವಾಗುತ್ತಿತ್ತು. ಆದರೆ ಮಠಕ್ಕೆ ಯಾವತ್ತೂ ಪೂರ್ಣ ಹಣ ಕೊಡಲು ಸಾಧ್ಯವೂ ಆಗುತ್ತಿರಲಿಲ್ಲ.. ಹಾಜಿ ಅಬ್ದುಲ್ಲಾ ಸಾಹೇಬರು ಅದರ ಬಗೆಗೆ ತಲೆ ಕೆಡಿಸಿಕೊಂಡವರೂ ಅಲ್ಲ.. ಒಮ್ಮೆ ಕೃಷ್ಣಾಪುರ ಮಠದಲ್ಲಿ ಕೃಷ್ಣನಿಗೆ ಚಿನ್ನದ ಪಲ್ಲಕ್ಕಿ ಮಾಡಬೇಕು ಎಂದು ತೀರ್ಮಾನಿಸಿದರಂತೆ. ಸಾಮಾನ್ಯವಾಗಿ ಆ ಕಾಲದಲ್ಲಿ ಹಾಜೀ ಅಬ್ದುಲ್ಲಾ ಸಾಹೇಬರ ಪ್ರಭಾವ ಉಡುಪಿ ಸುತ್ತಮತ್ತಲಿನಲ್ಲಿ ಒಂದು ಸರ್ಕಾರಕ್ಕಿಂತ ಜಾಸ್ತಿ ಇತ್ತು. ಉಡುಪಿ ಕೃಷ್ಣ ಮಠ, ಅವರು ಮಠಕ್ಕೆ ಮಾಡಿದ ಸೇವೆಗಳನ್ನ ಪರಿಗಣಿಸಿ “ಹಗಲು ದೀವಟಿಗೆ”ಯ ಮರ್ಯಾದೆ ಕೊಟ್ಟಿತ್ತು. ಮಠ ತೆಗೆದುಕೊಳ್ಳತ್ತಿದ್ದ ಪ್ರತಿಯೊಂದು ಮಹತ್ವದ ನಿರ್ಣಯಗಳಲ್ಲಿ ಹಾಜೀ ಸಾಹೇಬರನ್ನ ಒಮ್ಮೆ ಕೇಳಿ ಚರ್ಚೆ ಮಾಡುತಿದ್ದರು. ಅಂದಾಗೆ ಆ ಕಾಲದಲ್ಲಿ ಮಠ ಮತ್ತು ಮಠದ ಭಕ್ತರಿಗೆ ಈತ ಮುಸಲ್ಮಾನ ಎನ್ನುವ ಭಾವನೆಯಾಗಲಿ ಅಥವ ಹಾಜೀ ಸಾಹೇಬರಿಗೆ ಅದು ಹಿಂದೂ ದೇವಸ್ಥಾನ, ಅದಕ್ಕೆ ನಾನು ಯಾಕೆ ಸಹಾಯ ಮಾಡಬೇಕು ಎನ್ನು ಭಾವನೆಯಾಗಲಿ ತಿಲ ಮಾತ್ರವೂ ಇರಲಿಲ್ಲ. ಅವರಿಬ್ರ ನಡುವೆ ಇದ್ದದ್ದು ಹಾಲಿನಷ್ಟೇ ಪರಿಶುದ್ದ ಮಾನವೀಯ ಸಂಭಂದ. ಆ ಕಾರಣಕ್ಕಾಗಿಯೇ ಇಂದಿಗೂ ಅಷ್ಟ ಮಠದ ಯತಿಗಳು ಅವರನ್ನ ಸ್ಮರಿಸುತ್ತಾರೆ. ಕೃಷ್ಣಾಪುರ ಮಠದ ಸ್ವಾಮಿಗಳು ಈ ಚಿನ್ನದ ಪಲ್ಲಕ್ಕಿಯ ಬಗ್ಗೆ ಒಂದು ಸುದ್ದಿ ಮುಟ್ಟಿಸಲು ಮಠದ ಒಬ್ಬ ಸಾಮಾನ್ಯ ಪರಿಚಾರಕನನ್ನ ಹಾಜಿ ಸಾಹೇಬರ ಮನೆಗೆ ಕಳುಹಿಸಿ ಕೊಡುತ್ತಾರೆ. ಆದರೆ ಹಾಜಿ ಸಾಹೇಬರ ಔದಾರ್ಯ ಏಂತಾದ್ದು ನೋಡಿ. ಬಂದವನು ಒಬ್ಬ ಸಾಮಾನ್ಯ ಸೇವಕನೇ ಆಗಿದ್ದರೂ ವಿಷಯ ತಿಳಿದ ತಕ್ಷಣ ಅವರು ಮನೆಯ ಒಳಗೆ ಹೋಗಿ ಒಂದು ಸೇರು ಚಿನ್ನದ ನಾಣ್ಯವನ್ನು ಚಿನ್ನದ ಪಲ್ಲಕ್ಕಿ ಮಾಡಲು ಕೊಡುತ್ತಾರೆ. ಅಂತಹಾ ಮಾನವೀಯ ಅಂತಃಕರಣ ಇರುವ ಮನುಷ್ಯ ಆತ.. ಈಗ ಹೇಳಿ ಇಮಾಮ್ ಸಾಹೇಬರಿಗೂ ಜನ್ಮಾಷ್ಟಮಿಗೂ ಸಂಬಂಧ ಇಲ್ವಾ..? ಖಂಡಿತಾ ಇದೆ. ಆದರೆ ಇವತ್ತಿನ ಪರಿಸ್ಥಿತಿ ನೋಡಿ. ಯಾವ ಕೃಷ್ಣ ಮಠದ ಮೇಲೆ ಯಾವ ಹಾಜಿ ಅಬ್ದುಲ್ಲ ತನ್ನಲ್ಲಾ ಸಂಪತ್ತನ್ನ ಮಠದ ಅಭ್ಯುದಯಕ್ಕಾಗಿ ಕೊಟ್ಟಿದ್ದಾರೋ ಅದೇ ಮಠದ ಆವರಣದಲ್ಲಿ ಸ್ವಾಮೀಜಿಗಳು ಒಂದು ಇಫ್ತಿಯಾರ್ ಕೂಟ ಮಾಡಿದಾಕ್ಷಣ ಮಠವೇ ಮುಳುಗಿ ಹೋಯಿತು, ಹಿಂದೂ ಸಂಪ್ರದಾಯವೇ ಪಕ್ಕದ ಅರಬ್ಬೀ ಸಮುದ್ರಲ್ಲಿ ಜಲ ಸಮಾಧಿ ಆಯಿತು ಅನ್ನುವಂತೆ ಆಡುತ್ತಾರೆ ಅಂದ್ರೆ ಇವರಿಗೆ ಉಡುಪಿ ನೆಲದ ಇತಿಹಾಸದ ಕ್ಲೇಶ ಮಾತ್ರವಾದರೂ ಗೊತ್ತಿದೆಯಾ ? ಪೇಜಾವರ ಶ್ರೀ ಗಳನ್ನು ಪುಂಖಾನು ಪುಂಖಾವಾಗಿ ನಿಂದಿಸುವರಿಗೆ ಉಡುಪಿ ಮಠವನ್ನು ಹಾಜಿ ಅಬ್ದುಲ್ಲಾರ ಋಣದಿಂದ ಮುಕ್ತ ಮಾಡಲು ಆದೀತಾ..?? ಎಂತಹಾ ಸಮಾಜ ನಮ್ಮದು ಎತ್ತಕಡೆಗೆ ಹೋಗುತ್ತಿದ್ದೇವೆ..??

ಹಾಜಿ ಅಬ್ದುಲ್ಲಾ ಅವರ ಮತ್ತೊಂದು ಮಹತ್ತರವಾದ ಕೆಲಸ ಅಂದ್ರೆ ಕರ್ನಾಟಕದ ಮೊದಲ ಖಾಸಗೀ ಬ್ಯಾಂಕಿನ ಸ್ಥಾಪನೆ ಮಾಡಿದ್ದು. ಕ್ರಿ ಶ ೧೯೦೬ರ ಸಮಯ, ಭಾರತದಲ್ಲಿ ಸ್ವದೇಶಿ ಚಳುವಳಿ ಉತ್ತುಂಗದಲ್ಲಿ ಇತ್ತು. ಬ್ರಿಟೀಶರ ಸರ್ಕಾರಿ ಬ್ಯಾಂಕುಗಳು ಮೇಲ್ವರ್ಗದ ದೇಶಿ ಉದ್ಯಮಿಗಳ ರಕ್ತ ಹೀರುತಿತ್ತು. ಅಂತಹಾ ಸಂದರ್ಭದಲ್ಲಿ ಉಡುಪಿಯಂತಹಾ ಒಂದು ಸಾಮಾನ್ಯ ನಗರದಲ್ಲಿ ಸ್ವದೇಶೀ ಬ್ಯಾಂಕ್ ಸ್ಥಾಪನೆ ಮಾಡುವ ಸಾಹಸಕ್ಕೆ ಕೈ ಹಾಕಿ, ಕೊನಗೆ ತನ್ನ ಸರ್ವಸ್ವವನ್ನೂ ಅದಕ್ಕೆ ಅರ್ಪಿಸಿ ಅದನ್ನ ದಡ ಸೇರಿಸಿದ ಮಹಾನ್ ದೂರದರ್ಶಿ ನಾಯಕ ಹಾಜಿ ಅಬ್ದುಲ್ಲಾ ಸಾಹೇಬರು. ಮಾರ್ಚ್ ೧೨,೧೯೦೬ರಂದು ಉಡುಪಿಯ ಬಡುಗೆ ಪೇಟೆಯ ತಮ್ಮ‌ ಮನೆಯಲ್ಲೇ ಒಂದು ಚಿಕ್ಕ ಕೋಣೆಯಲ್ಲಿ “ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್” ಎನ್ನುವ ಒಂದು ಖಾಸಗೀ ಬ್ಯಾಂಕ್ ಒಂದನ್ನು ಪ್ರಾರಂಭ ಮಾಡಿದರು. ಈ ಬ್ಯಾಂಕಿನ ಮೊದಲ ದಿನದ ವಹಿವಾಟು ೩೮ ರುಪಾಯಿ ೧೩ಆಣೆ ೨ ಪೈಸೆ. ಇವತ್ತು ಈ ಬ್ಯಾಂಕಿನ ಒಟ್ಟು ವಹಿವಾಟು ಹತ್ತೊಂಬತ್ತು ಸಾವಿರ ಕೋಟಿಗೂ ಅಧಿಕ. ಹಾಜಿ ಅಬ್ದುಲ್ಲಾರು ೧೧೨ ವರ್ಷದ ಹಿಂದೆ ಇಂತಹಾ ಒಂದು ಸಾಹಸಕ್ಕೇ ಕೈ ಹಾಕಿದಾಗ ಅವರಂತೆಯೇ ಇನ್ನೂ ಆರೇಳು ಖಾಸಗೀ ಬ್ಯಾಂಕುಗಳು ಹುಟ್ಟಿಕೊಂಡವಾದರೂ ಅವು ಹೆಚ್ಚು ಕಾಲ‌ ಉಳಿಯಲಿಲ್ಲ.

ಹಾಜಿ ಅಬ್ದುಲ್ಲ ಅವರ ಈ ಸಮಾಜ ಸೇವೆ ಗುರುತಿಸಿ ಅವರಿಗೆ ಅಂದಿನ ಬ್ರಿಟೀಶ್ ಸರ್ಕಾರ “ಸಾಹೇಬ್”, “ಖಾನ ಬಹದ್ದೂರ್” ಎಂಬ ಬಿರುದನ್ನೂ ಕೊಟ್ಟಿತು. ೧೯೨೦ರಿಂದ ೧೯೩೫ ರ ತನಕ ಹಾಜಿ ಅಬ್ದುಲ್ಲಾ ಸಾಹೇಬರು ಉಡುಪಿ, ಮಂಗಳೂರಿನ ಬಹುತೇಕ ಎಲ್ಲಾ ಸಂಘ ಸಂಸ್ಥೆಯ ಪೋಷಕರು ಮತ್ತು ಅದರಲ್ಲಿ ಮುಖ್ಯ ಜಾವಬ್ದಾರಿಯನ್ನು ನಿರ್ವಹಿಸುತ್ತಿದ್ದರು ಹಾಗೂ ಈ ಭಾಗದಲ್ಲಿ ಸಮಾಜದ ಯಾವುದೇ ಸತ್ಕಾರ್ಯಗಳು ಇವರ ಕೊಡುಗೆ ಇಲ್ಲದೇ ಆಗುತ್ತಿರಲಿಲ್ಲ. ಅದರಲ್ಲೂ ಇವರದ್ದೆ ಸಿಂಹ ಪಾಲು ಇರುತಿತ್ತು. ಈ ೧೫ ವರ್ಷದಲ್ಲಿ ಇವರು ಉಡುಪಿ ಲೋಕಲ್ ಬೋರ್ಡಿನ ಸದಸ್ಯರಾದರು, ಉಡುಪಿ ಕೋ ಆಪರೇಟಿವ್ ಸೊಸೈಟಿಯನ್ನ ಹುಟ್ಟು ಹಾಕಿದರು. ಕುಂದಾಪುರದ ತಾಲ್ಲೂಕ್ ಬೋರ್ಡಿನ ಅಧ್ಯಕ್ಷರಾದರು, ಉಡುಪಿಯ ತಾಲ್ಲೂಕ್ ಬೋರ್ಡಿನ ಅಧ್ಯಕ್ಷರಾದರು, ಮದ್ರಾಸ್ ವಿಧಾನ ಸಭೆಯ ಸದಸ್ಯರಾದರು, ಮದ್ರಾಸ್ ಅಸಂಬ್ಲಿಗೆ ಅವಿರೋಧವಾಗಿ ಆಯ್ಕೆಯಾದರು. ಎಲ್ಲಾಕ್ಕಿಂತ ಮುಖ್ಯವಾಗಿ ೧೯೩೫ ರಂದು ರಚನೆಗೊಂಡ ಉಡುಪಿಯ ನಗರ ಸಭೆಯ ಮೊದಲ ಅಧ್ಯಕ್ಷರಾದರು. ಇಂದಿಗೂ ಹಾಜೀ ಸಾಹೇಬರು ಅಂದು ಅಧ್ಯಕ್ಷರಾಗಿ ಕುಳಿತ್ತಿದ್ದ ಕುರ್ಚಿಗೆ ನಮಸ್ಕರಿಸಿ ಇಂದಿನ ಅಧ್ಯಕ್ಷರುಗಳು ತಮ್ಮ ಅಧಿಕಾರವನ್ನು ವಹಿಸಿಕೊಳ್ಳುತ್ತಿದ್ದಾರೆ..

ಹಾಜಿ ಅಬ್ದುಲ್ಲಾರ ಈ ಪರಿಯ ಸಮಾಜ ಸೇವೆ ಅವರ ಹಿರಿಯರು ಮಾಡಿಟ್ಟ, ಇವರೇ ಗಳಿಸಿದ ಸಂಪತ್ತು ಎಲ್ಲವನ್ನೂ ಕರಗಿಸುತ್ತಾ ಬಂತು. ವ್ಯವಹಾರದಲ್ಲಿ‌ ಎಲ್ಲರನ್ನೂ ನಂಬುತ್ತಾ ಬಂದವರಿಗೆ ಆ ನಂಬಿಕೆಯೇ ಜೀವನದ ಕೊನೆಯ ದಿನಗಳಲ್ಲಿ‌ ಮುಳುವಾಯಿತು.. ಅವರ ಆಸ್ತಿ ಕರಗಿತು.. ಇತ್ತ ಸಾಗರೋತ್ತರ ವ್ಯವಹಾರಗಳಿಗೆ ತಾವೇ ಹುಟ್ಟಸಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಬೆಳಿಸಿದ ಬ್ಯಾಂಕಿನಿಂದ ಪಡೆದ ಒಂದು ಓವರ್ ಡ್ರಾಫ್ಟ್ ಕೊನೆಯ ಕಾಲದಲ್ಲಿ ಇವರ ಜೀವನಕ್ಕೆ ಮುಳುವಾಯಿತು. ತಾವು ಸಾಲ ಮಾಡಿ ಸರಕು ತುಂಬಿಸಿ ಶೀಲಂಕಾಕ್ಕೆ ಕಳುಹಿಸಿದ ಹಡಗುಗಳು ಚಂಡಮಾರುತಕ್ಕೆ ಸಿಕ್ಕಿ ಮುಳುಗಿದವು.. ಇತ್ತ ಇವರ ಆಸ್ತಿಯೂ ಕರಗಿತ್ತು ಇವರದ್ದೆ ಅನ್ನ ಉಂಡ ಬ್ಯಾಂಕ್ ಅಧಿಕಾರಿಗಳೇ ಮಾಡಿದ ಕುತಂತ್ರದಿಂದ ಇವರ ಎಲ್ಲಾ ಆಸ್ತಿಗಳು ಇವರದ್ದೇ ಕಾರ್ಪೊರೇಷನ್ ಬ್ಯಾಂಕ್ ಮುಟ್ಟುಗೋಲು ಹಾಕುವುದು ಖಾತರಿಯಾದಾಗ ಅದೇ ಕೊರಗಿನಲ್ಲಿ ದಿನ ರಾತ್ರಿ ಕಳೆಯುವ ಪರಿಸ್ಥಿತಿ ಬಂತು ಇಲ್ಲಿಯ ತನಕ ಸಮಾಜಕ್ಕೆ ಕೊಡುತಿದ್ದ ಕೈ ಮುಂದೆ ದೇಹಿ ಎಂಬ ಪರಿಸ್ಥಿತಿ ಬರುವುದನ್ನ ನೆನದು ನೊಂದರು ಒಳಗೇ ಬೆಂದರು, ಅದೆ ಕೊರಗಿನಲ್ಲಿ‌ ಆಗಸ್ಟ್ ೧೧, ೧೯೩೫ ಮಲಗಿದವರು ಅಗಸ್ಟ್ ೧೨ ರ ಬೆಳಿಗ್ಗೆ ಹೆಣವಾಗಿದ್ದರು. ಅದು ಅವತ್ತು ಉಡುಪಿಯ ಮಾನವತೆ ಸತ್ಯ, ಧರ್ಮ, ನ್ಯಾಯ ನೀತಿ ಸತ್ತ ದಿನ.

ಇವರ ಮರಣದ ನಂತರ ಕೆಲವು ದುಷ್ಟ ಬ್ಯಾಂಕ್ ಅಧಿಕಾರಿಗಳಿಂದ ಇವರ ಸಂಪೂರ್ಣ ಇತಿಹಾಸ ಸಾರ್ವಜನಿಕ‌ ಜೀವನದಿಂದ ಅಳಿಸಿ ಹಾಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಅದರಲ್ಲಿ ಅವರು ಯಶಸ್ಸು ಕೂಡ ಆದರು. ಖಾನ್ ಬಹದ್ದೂರು ಹಾಜಿ ಅಬ್ದುಲ್ಲಾ ಸಾಹೇಬರ ಒಂದೇ ಒಂದು ಕುರಹು ಸ್ಮಾರಕ ಕೂಡ ಇಂದು ಉಡುಪಿಯಲ್ಲಿ ಇಲ್ಲ. ಅವರು ಅಂದು ವಾಸವಿದ್ದ ಉಡುಪಿ ಬಡುಗುಪೇಟೆಯ ಮನೆ ಈಗ ಕಾರ್ಪೊರೇಶನ್ ಬ್ಯಾಂಕಿನ ಮುಖ್ಯ ಕಛೇರಿ ಆಗಿದೆ. ಅದೇ ಮನೆಯ ಒಂದು ಭಾಗ ಹಳೆಯ ನಾಣ್ಯಗಳ ವಸ್ತು ಸಂಗ್ರಹಾಲಯ ಆಗಿದೆ. ಹಾಜಿ ಅಬ್ದುಲ್ಲಾರು ದಾನದ ಭೂಮಿಯಲ್ಲಿ ನಿರ್ಮಾಣವಾಗಿದ್ದ ಅಂಜುಮಾನ್ ಮಸೀದಿ ಆವರಣದಲ್ಲಿ ಇದ್ದ ಅವರ ಇಂದೇ ಒಂದು ಮೂರ್ತಿ ಮುಸ್ಲಿಮ್ ಸಮುದಾಯದವರು ಧಾರ್ಮಿಕ ಕಾರಣ ಹೇಳಿ ಮಸೀದಿಯಿಂದ ಹೊರಗೆ ಹಾಕಿದರು. ಕಾರ್ಪೊರೇಷನ್ ಬ್ಯಾಂಕಿಗೆ ನಂತರ ಬಂದ ಅಧಿಕಾರಿಗಳು ಹಿಂದಿನ ಅಧಿಕಾರಿಗಳಿಂದ ಆದ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಿ ಆ ಮಸೀದಿಯಲ್ಲಿ ಇಡಲು ನಿರಾಕರಿಸಿದ ಹಾಜಿ ಅಬ್ದುಲ್ಲಾರ ಮೂರ್ತಿಯನ್ನು ಕಾರ್ಪೊರೇಷನ್ ಬ್ಯಾಂಕಿನ ಆವರಣದ ಒಳಗೆ ಇಟ್ಟರು. ಹಾಜಿ ಅಬ್ದುಲ್ಲಾರ ಬಗ್ಗೆ ಅವರ ಜೀವನದ ಬಗ್ಗೆ ಯಾವುದೇ ಅಧ್ಯಯನ ನಡೆಯಲಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಬಂದ ಸರ್ಕಾರವಂತೂ ತಮ್ಮ ಸ್ವಂತ ಮನೆತನವನ್ನಷ್ಟೇ ಪ್ರಮೋಟ್ ಮಾಡೋದರಲ್ಲಿ‌ ನಿರತರಾಗಿದ್ದರು. ಸ್ಥಳೀಯ ರಾಜಕಾರಣಿಗಳಿಗೆ ಇವರ ಹೆಸರು ಹೇಳುವುದರಿಂದ ಯಾವುದೇ ಲಾಭವೂ ಇರಲಿಲ್ಲ…. ಹಾಜಿ ಅಬ್ದುಲ್ಲಾರ ದಾನದ ಭೂಮಿಯಲ್ಲಿ ಅವರದ್ದೆ ಹೆಸರಿನಲ್ಲಿ ಉಡುಪಿಯ ಹೃದಯ ಭಾಗದಲ್ಲಿ ಇದ್ದ ಒಂದೇ ಒಂದು ಸಾರ್ವಜನಿಕ ಆಸ್ಪತ್ರೆಯನ್ನು ಹಿಂದಿನ ಕಾಂಗ್ರೇಸ್ ಸರ್ಕಾರ ದುಬೈಯ ಒಬ್ಬ ಉದ್ಯಮಿಗೆ ಕೊಟ್ಟು ಹಾಜೀ ಅಬ್ದುಲ್ಲಾ ಹೆಸರಿನಲ್ಲಿ ಇದ್ದ ಒಂದೇ ಒಂದು ಕೊನೆಯ ನಿಶಾನೆಯನ್ನು ಸಮಾಜದಿಂದ ಅಳಿಸಿ ಹಾಕಿತು. ಇದನ್ನ ಉಡುಪಿಯ ಈಗಿನ ಶಾಸಕ ರಘುಪತಿ ಭಟ್ ಪ್ರತಿಭಟಿಸಿದರೂ ಅದರಿಂದ ಅಂತಹಾ ವಿಶೇಷ ಪ್ರಯೋಜ‌ನ ಆಗಲಿಲ್ಲ.

ನನಗೆ ನೆನಪಿದ್ದಂತೆ ಉಡುಪಿ ಯಾವುದೇ ರಾಜಕಾರಣಿಗಳು ಉಡುಪಿಯಲ್ಲಿ ಹಾಜಿ ಅಬ್ದುಲ್ಲ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಲಿ, ಅವರ ಸಾಧನೆ ಅವರು ಉಡುಪಿಗೆ ಕೊಟ್ಟ ಕೊಡುಗೆಗಳನ್ನ ಮುಂದಿನ ತಲೆಮಾರಿಗೆ ಪರಿಚಯ ಮಾಡುವ ಪ್ರಯತ್ನ ಮಾಡಲೇ ಇಲ್ಲ. ಅದೂ ಅಂದಿನ ಅಸ್ಕರ್ ಫೆರ್ನಾಂಡಿಸ್ ಇರಲಿ ಇಂದಿನ ಶೋಭಾ ಕರಾಂದ್ಲಾಜೆಯವರೇ ಇರಲಿ. ಇಂದು ಉಡುಪಿಯ ಕೃಷ್ಣ ಮಠದ ಆವರಣದಲ್ಲಿ ಇಫ್ತಿಯಾರ್ ಕೂಟ ಮಾಡಿದಾಗ ಪೇಜಾವರ ಶ್ರೀ ಗಳನ್ನ ಅಣಕಿಸುವ ಅವರ ಬಗ್ಗೆ ಕೊಂಕು ಮಾತಾಡುವ ತಾವೇ ಹಿಂದೂ ಸಂಪ್ರದಾಯಗಳ ಪ್ರವರ್ತಕರು ಎಂಬಂತ ತಮ್ಮನ್ನು ತಾವು ಬಿಂಬಿಸಿಕೊಳ್ಳು ಯಾವುದೇ ಸೇನೆ ದಳಗಳಿಗೆ ಈ ಹಾಜಿ ಅಬ್ದುಲ್ಲಾ ಎನ್ನುವ ಧಕ್ಕನಿ ಮುಸಲ್ಮಾನ ಉಡುಪಿ‌ ಕೃಷ್ಣ ಮಠಕ್ಕೆ ಕೊಟ್ಟ ಕೊಡುಗೆಗಳು ಅದರ ಕಷ್ಟಕಾಲದಲ್ಲಿ ಮಠದ ಕೈ ಹಿಡಿದು ದಡ ಸೇರಿಸಿದ ಯಾವುದೇ ವಿವರಗಳು ಗೊತ್ತಿರಲಿಕ್ಕೆ ಇಲ್ಲ… ತಾನು ಟಿಪ್ಪು ಜಯಂತಿ ಮಾಡಿಯೇ ತೀರುತ್ತೇನೆ ಎಂದು ಅವರ ವಂಶಸ್ತರೆ ತನ್ನ‌ ಪೂರ್ವಜರು ಎಂಬಂತೆ ಆಡಿಕೊಳ್ಳತ್ತಿದ್ದ ಹಿಂದಿನ ಮುಖ್ಯಮಂತ್ರಿಗೆ ಉಡುಪಿಯ ಈ ಮಹಾನ್ ಮಾನವತವಾದಿ ಧರ್ಮ ಸಹಿಷ್ಣುವಿನ ನೆನಪೇ ಅಗಲಿಲ್ಲ..

ದುರಂತ ಅಂದ್ರೆ ಅಂದಿನ ಉಡುಪಿಯ ಶಾಸಕರಿಗೂ ಇವರ ನೆನಪು‌ ಇರಲಿಲ್ಲ.. ಟಿಪ್ಪು ಜಯಂತಿಯನ್ನು ವಿರೋಧಿಸಿ ಹಾಜಿ ಅಬ್ದುಲ್ಲಾರ ಜಯಂತಿನ್ನು ಅಂದು ಉಡುಪಿಯಲ್ಲಿ ಆಚರಿಸುತ್ತಿದ್ದರೆ ನಿಜವಾದ ಅರ್ಥದಲ್ಲಿ ಸರ್ವಧರ್ಮ ಸಮನ್ವಯತೆಯ‌ ಆಶಯ ನೆರವೇರುತಿತ್ತು. ಆದರೆ ಹಾಗೆ ಮಾಡಿದರೆ ಸಿದ್ದರಾಮಯ್ಯನಿಂದ ಹಿಡಿದು ಜಿಗನೇಶ್ ಮೇವಾನಿ‌, ದಿನೇಶ್ ಮಟ್ಟು, ಶೋಭಾ ಕರಾಂದ್ಲಾಜೆಯವರ ತನಕ ಯಾವುದೆ ರಾಜಕಾರಣಿಗಳ ರಾಜಕೀಯ ಬೇಳೆ ಬೇಯುತ್ತಿರಲಿಲ್ಲ. ಆದರೆ ಇವರೆಲ್ಲರೂ ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಬೇಕು.. ಅಂದು ಹಾಜಿ ಸಾಹೇಬನಾಗಲಿ‌, ಇಂದಿನ ಪೇಜಾವರ ಶ್ರೀ ಗಳೇ ಆಗಿರಲಿ ಹೇಳುವುದು, ಪಾಲಿಸುವುದು ಒಂದೇ. ಯಾವುದೇ ಧರ್ಮ, ಸಂಪ್ರದಾಯ, ಪರಂಪರೆ ಯಾವುದೇ ರಾಜಕೀಯ ಪಕ್ಷದ ಪಿತ್ರಾರ್ಜಿತ ಆಸ್ತಿ ಅಲ್ಲ.. ಅದು ಸಮಾಜ ಸ್ವತ್ತು ಅವುಗಳು ಇರುವುದು ಸಮಾಜದ ಒಳಿತಿಗಾಗಿ. ಇನ್ನಾದರೂ ‌ಪೇಜಾವರ ಶ್ರೀಗಳು ಇಫ್ತಿಯಾರ್ ಕೂಟ ಮಾಡಿದಾಗ ಬಿಜೆಪಿಯ ಕೆಲವು ನಾಯಕರು ಇದು ಹಿಂದೂ ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂಬಂತಯೋ ಅಥವು ಉಳಿದ ಎಲ್ಲಾ‌ ಕಾರಣಕ್ಕೆ ಪೇಜಾವರ ಸ್ವಾಮೀಜಿಯನ್ನ ವಿರೋಧಿಸುತ್ತಿದ್ದ ಜಾತ್ಯಾತೀತ ಮುಖವಾಡ ಹಾಕಿರುವ ಕಾಂಗ್ರೆಸ್ ನಂತಹಾ ರಾಜಕೀಯ ಪಕ್ಷಗಳು ಕೇವಲ ತಮ್ಮ ಪ್ರತಿದ್ವಂದ್ವೀ ರಾಜಕೀಯ ಪಕ್ಷವನ್ನು ಕುಹಕ ಮಾಡಲಷ್ಟೇ ಸ್ವಾಮಿಜಿಯವರನ್ನ ಹೊಗಳುವುದು ಅತ್ಯಂತ ನಿಕೃಷ್ಟ ಮಟ್ಟದ ರಾಜಕಾರಣ.

ದಯವಿಟ್ಟು ಇಂತವುಗಳನ್ನ‌ ನಿಲ್ಲಿಸಿ. ಸಾಧ್ಯವಾದ್ರೆ ಹಾಜಿ ಅಬ್ದಲ್ಲಾರಂತೆ ಬದುಕುವ ಪ್ರಯತ್ನ ಮಾಡಿ. ಹಾಜಿ ಅಬ್ದುಲ್ಲಾ ಅವರ ಜೀವನದ ಕುರಿತು ಉಡುಪಿ ಖ್ಯಾತ ಪತ್ರಕರ್ತ ಶ್ರೀಕಾಂತ್ ಶೆಟ್ಟಿಯವರು ಮಾಜಿ ಸಚಿವ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತೆ ಇನ್ನೂ ಕೆಲವು ಹಿರಿಯರ ಸಹಾಯದಿಂದ ಒಂದು ಸಾಕ್ಷ್ಯಚಿತ್ರ ಮಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ.  https://youtu.be/YgbzD0Oad1U

ಸಾಧ್ಯವಾದರೆ ಒಮ್ಮೆ ನೋಡಿ. ನಿಮ್ಮ ಮನೆಯ ಇತರರಿಗೂ ತೋರಿಸಿ. ಹಾಜಿ ಅಬ್ದುಲ್ಲಾನಂತಹಾ ಮಹಾನ್ ಸಮಾಜ ಸುಧಾರಕನ ನೆನೆಪು , ಸಾಧನೆ ವರ್ತಮಾನ ಕಾಲದಲ್ಲಿ ಸಮಾಧಿಯಾಗಿ ಹೋಗುವುದು ಬೇಡ.

2 ಟಿಪ್ಪಣಿಗಳು Post a comment
 1. MANJUNATHA AJJAMPURA
  ಜುಲೈ 3 2018

  Hats Off

  ಉತ್ತರ
 2. BNS
  ಜುಲೈ 3 2018

  ತುಂಬ ಸೊಗಸಾದ ನಿರೂಪಣೆ. ಇಂತಹ ದಾನಿಗಳು ಇದ್ದರೆಂದು ಊಹಿಸಿಕೊಳ್ಳುವುದೂ ಕಷ್ಟವಾದ ಇಂದಿನ ಕಾಲದಲ್ಲಿ, ಇವರ ಹೆಸರಿನಲ್ಲಿ ಇರಬಹುದಾದ ಒಂದೇ ಒಂದು ಸ್ಮಾರಕವನ್ನೂ ಉಳಿಸದೆ ಬಿಟ್ಟ ಕೃತಘ್ನ ಸಮಾಜಕ್ಕೆ ಏನು ಹೇಳುವುದು? ಇಲ್ಲಿ ಹಿಂದು, ಅಥವಾ ಮುಸ್ಲಿಮರ ಬಗ್ಗೆ ಹೇಳುತ್ತಿಲ್ಲ, ಇಡೀ ಉಡುಪಿ ಜಿಲ್ಲೆಯ ಸಮಸ್ತ ಜನರ ಬಗ್ಗೆ ಬೇಸರ ಬರುತ್ತದೆ.

  ಲೇಖನದಲ್ಲಿ ಒಂದು ಸಣ್ಣ ದೋಷ ನುಸುಳಿದೆ ಅನ್ನಿಸುತ್ತಿದೆ. ಅವರು ರಫ್ತು ಸರಕನ್ನು ‘ಹಾವಾಯಿ’ ಹಡಗಿನಲ್ಲಿ ಹಾಕಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದರು, ಅಂತ ಬರೆದಿದ್ದೀರಿ. ‘ಹವಾಯಿ ಜಹಜ್’ ಅಥವಾ ‘ಹಾವಾಯಿ’ ಹಡಗು ವಿಮಾನಕ್ಕೆ ಹಿಂದಿಯ ಪದವಲ್ಲವೆ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments