ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370
– ರಾಕೇಶ್ ಶೆಟ್ಟಿ
“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು ಸಂವಿಧಾನ ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ ಮುಚ್ಚಿಸಲು “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ ನೆಹರೂ ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್ 370 ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…!
ಇವತ್ತಿಗೆ ಪರಿಸ್ಥಿತಿ ಹೇಗಾಗಿದೆಯೆಂದರೆ, ಆರ್ಟಿಕಲ್ 370 ರದ್ಧತಿ ಹಾಳಾಗಿ ಹೋಗಲಿ, ಅದರ ಬಗ್ಗೆ ಚರ್ಚೆ ನಡೆಯಲಿ ಎಂದು ಕೇಂದ್ರ ಸರ್ಕಾರದ ಯಾವುದಾದರೂ ಸಚಿವರು ಒಂದು ಹೇಳಿಕೆ ಕೊಟ್ಟರೂ ಅದನ್ನು “ವಿವಾದಾಸ್ಪದ ಹೇಳಿಕೆ” ಎಂದು ಟಿ ಆರ್ಪಿ ಮೀಡಿಯಾಗಳು ಕರೆಯುತ್ತವೆ. ಇನ್ನು ರದ್ದು ಮಾಡುತ್ತೇವೆ ಎಂದೇನಾದರೂ ಹೇಳುವಷ್ಟು ಧೈರ್ಯ ಯಾರಿಗಾದರೂ ಬಂದರೆ, ಅದನ್ನು ಕಾಶ್ಮೀರಿ ರಾಜಕಾರಣಿಗಳಿಗಿಂತ ಮೊದಲು ವಿರೋಧಿಸುವವರು ಸೊ-ಕಾಲ್ಡ್ ಸಂವಿಧಾನ ರಕ್ಷಕರು ಮತ್ತು ಪ್ರಗತಿಪರರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಳಿದೆಲ್ಲ ಸಮಯದಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುವ ಈ ಸೋ-ಕಾಲ್ಡ್ ಸಂವಿಧಾನ ರಕ್ಷಕರು ಆರ್ಟಿಕಲ್ 370 ವಿಷಯ ಬಂದಾಗ ಮಾತ್ರ ಅವರನ್ನು ಮರೆತು ಬಿಜೆಪಿಯ ಮೇಲೆ ಮುಗಿ ಬೀಳುತ್ತಾರೆ. ಈ ಜನರ ಹಿಪೊಕ್ರೆಸಿ ಹೇಗಿದೆ ನೋಡಿ, ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದ ಅನಂತಕುಮಾರ್ ಹೆಗಡೆಯವರ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದರು, ಮೋದಿ ಸರ್ಕಾರ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಬೊಬ್ಬಿಟ್ಟರು. ಅದೇ ಸಂವಿಧಾನದಲ್ಲಿ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಆರ್ಟಿಕಲ್ 370, 35A ಸೇರಿಸಲಾಗಿದೆಯೆನ್ನುವುದನ್ನು ಈ ಗಂಜಿಗಿರಾಕಿಗಳು ಮರೆತುಬಿಡುತ್ತಾರೆ.
370ನೇ ಆರ್ಟಿಕಲ್ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವ ಹಾಗೂ ವಿಸ್ತರಿಸುವ ಸಂಸತ್ತಿನ ಅಧಿಕಾರವನ್ನು Instrument of Accession ದಲ್ಲಿ ಸೂಚಿಸಿರುವ ವಿಷಯಗಳಿಗೆ ಮಾತ್ರ ಸೀಮಿತಗೊಳಿಸುತ್ತದೆ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಮತ್ತು ಪೂರಕ ವಿಷಯಗಳನ್ನು ಹೊರತುಪಡಿಸಿ ಭಾರತೀಯ ಗಣರಾಜ್ಯರೂಪಿಸಿದ ಉಳಿದ ಕಾನೂನುಗಳನ್ನು ಜಾರಿಗೆ ತರಲು ಜಮ್ಮುಕಾಶ್ಮೀರ ರಾಜ್ಯ ಸರ್ಕಾರದ ಸಮ್ಮತಿ ಬೇಕಾಗಿರುತ್ತದೆ. ತಾತ್ಕಾಲಿಕ ಎಂಬ ಹೆಸರಿನಲ್ಲಿ ಹಿಂಬಾಗಿಲ ಮೂಲಕ ಬಂದ ಆರ್ಟಿಕಲ್370, ಜಮ್ಮು ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಸುಗಮವಾಗಿ ಸೇರಿಸಿಕೊಳ್ಳುವ ಹೆಚ್ಚುವರಿ ವ್ಯವಸ್ಥೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಇದೇ 370ನೇ ವಿಧಿಯ ನೆಪದಲ್ಲಿ ನಡೆದಿದ್ದು, ನಡೆಯುತ್ತಿರುವುದು ನಿರಂತರ ರಾಜಕೀಯ ವಂಚನೆ ಮತ್ತು ಸಾಂವಿಧಾನಿಕ ನಿಂದನೆ ಮಾತ್ರವೇ.
370ನೇ ವಿಧಿಯನ್ನು ಮುಂದುವರಿಸಬೇಕೆಂದು ಪ್ರತಿಪಾದಿಸುವವರು (‘Constitution (Application to state of J&K) Order, 1954’) ರ ಅನ್ವಯ ಸಂವಿಧಾನದ ಮೂರನೇ ಭಾಗದಲ್ಲಿ ಸೇರಿಸಲಾದ ವಿಧಿ 35Aಯನ್ನು ಸಾಮಾನ್ಯವಾಗಿ ಪ್ರಸ್ತಾಪಿಸುತ್ತಾರೆ. 35A ವಿಧಿ ಕೇವಲ ಜಮ್ಮುಕಾಶ್ಮೀರ ರಾಜ್ಯದಲ್ಲಿ ಇದೆಯೇ ಹೊರತು ಭಾರತದ ಇನ್ಯಾವುದೇ ರಾಜ್ಯಗಳಲ್ಲೂ ಇಲ್ಲ. ಈ ವಿಧಿಯು ಉದ್ಯೋಗ, ರಾಜ್ಯದಲ್ಲಿ ಶಾಶ್ವತವಾಗಿ ನೆಲೆಗೊಳ್ಳುವುದು, ಸ್ಥಿರಾಸ್ತಿಯನ್ನು ಹೊಂದುವುದು, ವಿದ್ಯಾರ್ಥಿವೇತನ ಮತ್ತು ಇತರೆ ಸರ್ಕಾರಿ ಸಹಾಯಗಳಿಗೆ ಸಂಭಂಧಿಸಿದಂತೆ ಜಮ್ಮುಕಾಶ್ಮೀರ ರಾಜ್ಯದ ಶಾಶ್ವತ ನಿವಾಸಿಗಳಿಗೆ ಕೆಲವು ವಿಶೇಷ ಹಕ್ಕು ಮತ್ತು ಅಧಿಕಾರಗಳನ್ನು ಕೊಡುವುದರ ಜೊತೆಗೆ ಬೇರೆ ರಾಜ್ಯಗಳ ಜನರಿಗೆ ಕೆಲವೊಂದು ಪ್ರತಿಬಂಧಗಳನ್ನು ವಿಧಿಸುತ್ತದೆ. ಭಾರತ ಸಂವಿಧಾನವು ತನ್ನ ದೇಶದ ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಕೊಡುವಾಗ , ಕೇವಲ ಒಂದು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ವಿಶೇಷಾಧಿಕಾರ ನೀಡುವುದು ಹೇಗೆ ಸಾಧ್ಯ? ಇದು ಭಾರತೀಯ ನಾಗರಿಕರಿಗೆ ಸಂವಿಧಾನದ 14ನೇ ವಿಧಿಯು ನಿಡುವ ಸಮಾನತೆ (equality before law) ಯ ಅಧಿಕಾರವನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ ? ಹಾಗೆಯೇ 15ನೇ ವಿಧಿಯು ಮತ, ಜಾತಿ, ಲಿಂಗ, ಜನ್ಮಸ್ಥಾನ ಹಾಗೂ ಜನಾಂಗಗಳನ್ನು ಆಧರಿಸಿದ ತಾರತಮ್ಯವನ್ನು ನಿಷೇಧಿಸುತ್ತದೆ. ಆದರೆ ಈ ತಲೆ ಕೆಟ್ಟ ವಿಶೇಷಾಧಿಕಾರದಿಂದಾಗಿ ಭಾರತದ ನಾಗರಿಕರ ಹಕ್ಕುಗಳನ್ನೇ ಕಿತ್ತುಕೊಂಡಂತಾಗಿದೆ.
370ನೇ ವಿಧಿಯನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದರೇ, ಉಳಿದ ರಾಜ್ಯಗಳ ಶಾಸನ ಸಭೆಯ ಕಾಲಾವಧಿ ಐದು ವರ್ಷವಾದರೇ, ಜಮ್ಮುಕಾಶ್ಮೀರದ್ದು ಆರು ವರ್ಷ. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಶಬ್ದಗಳಿಗೆ ಜಾಗವಿಲ್ಲ. ಆದರೂ ಯಾವ ಜಾತ್ಯತೀತರೂ, ಸಮಾಜವಾದಿಗಳೂ ಬಾಯಿಬಿಡುವುದಿಲ್ಲ! ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ದಂಡಸಂಹಿತೆ, ಕೌಟುಂಬಿಕ ದೌರ್ಜನ್ಯ ಪರಿಹಾರ ಕಾಯ್ದೆ, ಅರಣ್ಯ ಹಕ್ಕು, ವನ್ಯಜೀವಿ ಸಂರಕ್ಷಣಾ ಕಾನೂನು, ನಗರ ಭೂ ಮಿತಿ ಕಾನೂನು, ಆರ್ಟಿಐ ಇತ್ಯಾದಿಗಳು ಜಮ್ಮು ಕಾಶ್ಮೀರ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಕೂಡ ರಾಜ್ಯದಲ್ಲಿ ದಾಖಲಾದ ದೂರಿನ ಮೇಲೆ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯದ ಕಾನೂನು ವ್ಯಾಪ್ತಿ ಅಪೀಲಿಗೆ ಮಾತ್ರ ಸೀಮಿತವಾಗಿದೆ.
ಜನ ಪ್ರತಿನಿಧಿ ಕಾಯ್ದೆ ಇಲ್ಲಿ ಅನ್ವಯವಾಗದೇ ಇರುವುದರಿಂದ ಚುನಾವಣಾ ಕ್ಷೇತ್ರಗಳ ಮರುವಿಂಗಡನೆಯನ್ನು ಜಾರಿಗೆ ತರುವ ಯಾವುದೇ ಅಧಿಕಾರ ಕೇಂದ್ರಕ್ಕಿಲ್ಲ. 2002ರಲ್ಲಿ ಜಮ್ಮುಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಕ್ಷೇತ್ರ ಪುನರ್ವಿಂಗಡನೆಯನ್ನು ಕೈಗೊಳ್ಳಲಾಯಿತು. ಜಮ್ಮು ಪ್ರಾಂತ್ಯದ ಜನಸಂಖ್ಯೆ, ಭೌಗೋಳಿಕ ವಿಸ್ತಾರ ಹಾಗೂ ಮತದಾರರ ಸಂಖ್ಯೆ ಹೆಚ್ಚಿದ್ದರೂ ಕಾಶ್ಮೀರದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಕಾಶ್ಮೀರ 47 ಸ್ಥಾನಗಳನ್ನು ಹೊಂದಿದ್ದರೆ ಜಮ್ಮು ಕೇವಲ 37 ಸ್ಥಾನಗಳನ್ನು ಹೊಂದಿದೆ. ಸರಿಯಾಗಿ ಕ್ಷೇತ್ರ ಪುನರ್ವಿಂಗಡನೆ ನಡೆದದ್ದೇ ಆದಲ್ಲಿ ಜಮ್ಮುವಿಗೆ 48-50 ಸ್ಥಾನಗಳು ಹಾಗೂ ಕಾಶ್ಮೀರಕ್ಕೆ 35-36 ಸ್ಥಾನಗಳು ದೊರೆಯುತ್ತಿದ್ದವು. ಹೀಗೆ ಮಾಡಿಬಿಟ್ಟರೆ ರಾಜ್ಯವನ್ನು ಆಳುತ್ತಿರುವ ಕಾಶ್ಮೀರಿ ರಾಜಕಾರಣಿಗಳ ಆಟ ನಡೆಯಲಾರದಲ್ಲ, ಹಾಗಾಗಿ ಅವರೂ ಸುಲಭವಾಗಿ ಬಿಟ್ಟುಕೊಡುವುದಿಲ್ಲ.
ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಮಂಡಲ ಆಯೋಗದ ವರದಿ ಜಾರಿಗೆ ಬಂದಿಲ್ಲ, ಹಿಂದುಳಿದ ವರ್ಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಮೀಸಲಾತಿ ಸೌಕರ್ಯಗಳು ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿ/ಪಂಗಡ ಮುಂತಾದ ಸಮಾಜದ ವಂಚಿತ ವರ್ಗಗಳಿಗೆ 1991 ರವರೆಗೂ ಯಾವುದೇ ಮೀಸಲಾತಿ ದೊರೆಯುತ್ತಿರಲಿಲ್ಲ. 1991ರಿಂದ ಅವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ದೊರೆತರೂ ರಾಜಕೀಯ ಮತ್ತು ರಾಜ್ಯ ಶಾಸನ ಸಭೆಯಲ್ಲಿ ಇನ್ನೂ ಮೀಸಲಾತಿ ದೊರೆತಿಲ್ಲ. ಈ ವಿಷಯದಲ್ಲಿ ಬುದ್ಧಿಜೀವಿಗಳು, ಸೊ-ಕಾಲ್ಡ್ ಸಂವಿಧಾನ ರಕ್ಷಕರು ಮೌನವಾಗಿರುವುದೇಕೆ?
1947ರಲ್ಲಿ ಜಮ್ಮು ಕಾಶ್ಮೀರಕ್ಕೆ ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಅಲ್ಪಸಂಖ್ಯಾತ ಸಿಖ್ ಮತ್ತು ಹಿಂದುಳಿದ, ದಲಿತ ವರ್ಗಗಳ ಹಿಂದುಗಳ ಬಗ್ಗೆಯೂ ಬುದ್ಧಿಜೀವಿಗಳು-ದಲಿತ ಮುಖಂಡರು ಎಂದೂ ದನಿಯೆತ್ತುವುದಿಲ್ಲ. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ 6ನೇ ವಿಧಿಯನ್ವಯ ಈ ಅಲ್ಪ ಸಂಖ್ಯಾತರನ್ನು ರಾಜ್ಯದ ನಾಗರಿಕರೆಂದು ಪರಿಗಣಿಸಲಾಗುವುದಿಲ್ಲ, ಕಾರಣ ಅವರು ಅವಿಭಜಿತ ಜಮ್ಮು ಕಾಶ್ಮೀರ ರಾಜ್ಯದ ಹೊರಗಿನಿಂದ ಬಂದವರು. ಇದಕ್ಕೆ ವ್ಯತಿರಿಕ್ತವಾಗಿ ಜಮ್ಮು ಕಾಶ್ಮೀರ ಪುನರ್ವಸತಿ ಕಾಯ್ದೆಯು ವಿಭಜನೆಯ ಸಂದರ್ಭದಲ್ಲಿ ಸ್ವಇಚ್ಛೆಯಿಂದ ಪಾಕಿಸ್ತಾನಕ್ಕೆ ವಲಸೆ ಹೋದವರ ಅಧಿಕಾರಗಳನ್ನು ಖಾತ್ರಿಪಡಿಸುತ್ತದೆ. ಈ ಕಾಯ್ದೆಯಂತೆ ಅಂತಹ ವಲಸೆ ಹೋದವರು ಪುನಃ ವಾಪಾಸು ಬರಬಹುದು, ತಮ್ಮ ಆಸ್ತಿಗಳನ್ನು ಮರಳಿ ಪಡೆಯಬಹುದು ಅಥವಾ ತಕ್ಕ ಪರಿಹಾರವನ್ನು ಪಡೆದುಕೊಳ್ಳಬಹುದು. ಆದರೆ, ಇದೇ ಜಮ್ಮು ಕಾಶ್ಮೀರದಲ್ಲಿ 70 ವರ್ಷಗಳಿಂದ ಟೆಂಟುಗಳಲ್ಲಿ ವಾಸವಾಗಿರುವ, ನ್ಯಾಯಸಮ್ಮತವಾಗಿ ಭಾರತದ ನಾಗರಿಕರಾಗಿರುವ ನಿರಾಶ್ರಿತರನ್ನು ಪುನರ್ವಸತಿಗೊಳಿಸಲು ನಿರಾಕರಿಸುತ್ತದೆ!
ಇದೇ ರೀತಿಯ ಅನ್ಯಾಯ ಪಂಜಾಬಿನಿಂದ ವಲಸೆ ಬಂದ ವಾಲ್ಮೀಕಿ ಸಮಾಜದವರು ಅನುಭವಿಸುತ್ತಿದ್ದಾರೆ. ನಗರದ ಮುನ್ಸಿಪಾಲಿಟಿ ಮತ್ತು ಸ್ವಚ್ಛತಾ ಕೆಲಸಗಳಿಗಾಗಿ 1956ರಲ್ಲಿ ಪಂಜಾಬಿನಿಂದ ವಾಲ್ಮೀಕಿ ಸಮಾಜದ ಸುಮಾರು 150 ಕುಟುಂಬಗಳನ್ನು ಕರೆತರಲಾಯಿತು ಮತ್ತು ಅವರಿಗೆ ರಾಜ್ಯ ನಾಗರಿಕರ ಹಕ್ಕುಗಳನ್ನು ನೀಡುವ ಆಶ್ವಾಸನೆಯನ್ನು ನೀಡಲಾಗಿತ್ತು. ತದನಂತರ ಭಂಗಿ/ ಜಾಢಮಾಲಿ ಉದ್ಯೋಗದಲ್ಲಿದ್ದವರಿಗೆ ಮಾತ್ ಅಂತಹ ಹಕ್ಕುಗಳನ್ನು ನೀಡಲಾಯಿತು. ರಾಜ್ಯದಲ್ಲಿ ಪ್ರಸ್ತುತ ವಾಲ್ಮೀಕಿ ಸಮಾಜದ ಸುಮಾರು 600 ಕುಟುಂಬಗಳಿವೆ. ಆದರೆ ಇದುವರೆಗೂ ಅವರ ವಸತಿ ಇರುವ ಜಾಗಗಳನ್ನು ಜಮ್ಮು ಕಾಶ್ಮೀರ ಸರ್ಕಾರ ಸಕ್ರಮಮಾಡಿಲ್ಲ! ಸರಳವಾಗಿ ಹೇಳುವುದಾದರೆ, ಜಮ್ಮುಕಾಶ್ಮೀರದಲ್ಲಿ ಜಾತಿ,ರಿಲಿಜನ್ ಆಧಾರದ ಮೇಲೆ ತಾರತಮ್ಯಗಳಾಗುತ್ತಿವೆ. ಸಮಾನತೆಯ ಚಾಂಪಿಯನ್ ಗಳು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಜಾತಿ-ರಿಲಿಜನ್ ಮಾತ್ರ ಏಕೆ ಆರ್ಟಿಕಲ್ 35A ನಿಂದಾಗಿ ಮಹಿಳೆ-ಪುರುಷರ ನಡುವೆಯೂ ಅಲ್ಲಿ ತಾರತಮ್ಯ ನಡೆಯುತ್ತದೆ. ಅನ್ಯರಾಜ್ಯದವನ್ನು ಜಮ್ಮುಕಾಶ್ಮೀರದ ಪುರುಷ ಮದುವೆಯಾದರೇ ಯಾವುದೇ ಸಮಸ್ಯೆಯಿಲ್ಲ. ಆದರೆ ಮಹಿಳೆಯೊಬ್ಬಳು ಅನ್ಯರಾಜ್ಯದ ಪುರುಷನನ್ನು ಮದುವೆಯಾದರೆ ಆಕೆಯ ಕುಟುಂಬಕ್ಕೆ ಜಮ್ಮುಕಾಶ್ಮೀರದಲ್ಲಿ ವಲಸಿಗರ ಸ್ಥಾನವೇ ಇರುತ್ತದೆ. ಬಿಂದಿ ಬ್ರಿಗೇಡ್ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದಿಲ್ಲ. ದೇಶದ ಮಾನವ ಹಕ್ಕು ರಕ್ಷಣೆಯ ಚಾಂಪಿಯನ್ಗಳು ಪೋಲಿಸ್ ಕಸ್ಟಡಿಯಲ್ಲಿನ ಸಾವು ಅಥವಾ ನಕಲಿ ಎನ್ಕೌಂಟರ್ನ ಕೆಲವು ಪ್ರಕರಣಗಳನ್ನು ಹಿಡಿದು ಆಗಾಗ ಗದ್ದಲ ಎಬ್ಬಿಸುವುದನ್ನು ನೋಡುತ್ತಿರುತ್ತೇವೆ. ಆದರೆ ಈ ಕಳ್ಳರು Protection of Human Rights Act, 1993 ಜಮ್ಮು ಕಾಶ್ಮೀರಕ್ಕೆ ಅನ್ವಯವಾಗದೇ ಇರುವ ಬಗ್ಗೆ ಚಕಾರವನ್ನು ಎತ್ತುವುದಿಲ್ಲ.
ಬರೆಯುತ್ತ ಹೋದರೆ ಪುಟಗಳಾದೀತು. ಸಮಾನತೆ-ಸಂವಿಧಾನ ಎಂದೆಲ್ಲ ಬೊಬ್ಬೆ ಹೊಡೆಯುವ ಗಂಜಿಗಿರಾಕಿಗಳು, ಸೋ-ಕಾಲ್ಡ್ ಸಂವಿಧಾನ ರಕ್ಷಕರು, ಮಹಿಳಾವಾದಿಗಳು ಜಮ್ಮುಕಾಶ್ಮೀರದ ವಿಷಯದಲ್ಲಿ ಕಣ್ಣಿಗೆ ಪಟ್ಟಿಕೊಂಡಿದ್ದಾರೆ. ಬಾಯಿಬಿಟ್ಟರೆ ಗಂಜಿಗೆ ತತ್ವಾರವಾದೀತು ಎಂಬ ಭಯ ಇದ್ದಿರಬಹುದು. ಮಾತಿಗೊಮ್ಮೆ ಅಂಬೇಡ್ಕರ್ ಎನ್ನುವ ಈ ನಕಲಿ ಅಂಬೇಡ್ಕರ್ ವಾದಿಗಳು, ಇದೇ ಅಂಬೇಡ್ಕರ್ ಅವರು ಆರ್ಟಿಕಲ್ 370ರ ಬಗ್ಗೆ ಶೇಖ್ ಅಬ್ದುಲ್ಲಾನಿಗೆ ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳಬಲ್ಲರೇ? ದೇಶದಾದ್ಯಂತ ಸುಳ್ಳೇ ಸಂವಿಧಾನ ಉಳಿಸಿ ಎಂದು ಊಳಿಡುತ್ತಿರುವ ಗಂಜಿಗಿರಾಕಿಗಳು ಜಮ್ಮು ಕಾಶ್ಮೀರದಲ್ಲೇಕೆ ಸಂವಿಧಾನ ಉಳಿಸಿ ಎಂದು ಊಳಿಡಬಾರದು? ಆರ್ಟಿಕಲ್ 370ರ ರದ್ಧತಿ ನಿಜವಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ಮೋದಿಯವರ ಸರ್ಕಾರ ಅಂತಹ ಪುಣ್ಯ ಕಾರ್ಯಮಾಡಲಿ ಎನ್ನುವುದು ಆಶಯ.