ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2018

ನಾಯಕರುಗಳಿಗೇ ಇಲ್ಲದ ‘ಮುಲಾಜು’ ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಈ ವರ್ಷದ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಒಂದಾದ ‘ಸಂಜು’ ಕೊನೆಗೂ ತೆರೆಯ ಮೇಲೆ ಬಂದಿದೆ. ಚಿತ್ರ ಜನಮಾನಸದಲ್ಲಿ ಕುತೂಹಲವನ್ನು ಮೂಡಿಸಲು ಹಲವಾರು ಕಾರಣಗಳಿದ್ದಿರಬಹುದು. ಮೊತ್ತ ಮೊದಲನೆಯದಾಗಿ ನಿರ್ದೇಶಕ ರಾಜ್ಕುಮಾರ್ ಹಿರಾನಿ. ಹಿರಾನಿ ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಪಕ್ಕ ‘ಹೀರಾ’ ರೆಂದೇ ಹೇಳಬಹುದು. ತಾನು ನಿರ್ದೇಶನ ಮಾಡಿರುವ ಅಷ್ಟೂ ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿ ಪ್ರತಿ ಬಾರಿಯೂ ಸೆಂಚೂರಿಯನ್ನು ಬಾರಿಸುತ್ತಿದರೆ ಆತ ಅದ್ಯಾವ ಹೀರೊ ಅಥವಾ ಹೀರೋಯಿನ್ ಗಳಿಗೂ ಕಮ್ಮಿ ಇರುವುದಿಲ್ಲ. ಮೇಲಾಗಿ ಹಿರಾನಿ ಕೇವಲ ನಿರ್ದೇಶನವಲ್ಲದೆ ಕಥೆ, ಚಿತ್ರಕತೆ, ಎಡಿಟಿಂಗ್ ಹಾಗು ಪ್ರೊಡಕ್ಷನ್ ಗಳಲ್ಲೂ ತಮ್ಮ ಕೈಯಾಡಿಸಿದವರು. ಇಂತಹ ಒಬ್ಬ ಕಲಾಸಾಮ್ರಾಟ್ ಬರೆದು, ನಿರ್ದೇಶಿಸಿ ನಿರ್ಮಿಸಿರುವ ಚಿತ್ರವೊಂದು ಬರುತ್ತಿದೆ ಎಂದರೆ ಸಿನಿಪ್ರಿಯರ ಹಪಾಹಪಿ ಹೆಚ್ಚಾಗದೇ ಇರದು. ಇದು ಅತಿ ಸಹಜವಾದ ವಿಷಯ. ಆದರೆ ಈ ಬಾರಿ ಸಂಜು ಚಿತ್ರ ಇನ್ನೂ ಹೆಚ್ಚಿನ ಗುಲ್ಲೆಬ್ಬಿಸಲು ಇರುವ ಕಾರಣ ಬೇರೆಯೇ ಇದೆ. ಅದು ಸರಿಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದ ಸುದ್ದಿಯೊಂದರಿಂದ ಹಾಗು ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಯೊಬ್ಬನಿಂದ. ಸಂಜಯ್ ದತ್ತ್. ದೇಶದಲ್ಲಿ ಇಂದು ಸಿನಿಮಾಗಳನ್ನು ನೋಡದಿರದ ಮಂದಿ ಕೇವಲ ಬೆರಳಣಿಕೆಯಷ್ಟಿರಬಹುದು. ಅಂತಹ ಬೆರಳೆಣಿಕೆಯ ಮಂದಿಗೂ ಈ ಒಂದು ಹೆಸರು ಚಿರಪರಿಚಿತ! ನಟನಾಗಿ, ನಾಯಕನಾಗಿ ಅನ್ನುವುದಕ್ಕಿಂತ ಹೆಚ್ಚಾಗಿ 1993 ರ ಮುಂಬೈ ಸರಣಿ ಬಾಂಬಿನ ವಿಚಾರಣೆಯ ಸಲುವಾಗಿ. 50% ನಷ್ಟು ಚಿತ್ರ ಆತನ ಆತ್ಮಕತೆಯಾದರೆ ಉಳಿದರ್ದ ಭಾಗ ಚಿತ್ರದ ಕಲ್ಪಿತ ಚಿತ್ರಕತೆಯೆಂದೇ ಹೇಳಬಹುದು! ಚಿತ್ರವನ್ನು ಚಿತ್ರಗಳಾಗಿಯೇ ನೋಡಬಯಸುವವರಿಗೆ ಸಿಗುವ ಮತ್ತೊಂದು ರೋಮಾಂಚನಕಾರಿ ವ್ಯಕ್ತಿ ರಣಬೀರ್ ಕಪೂರ್. ನಟನೆಯಲ್ಲೇನಾದರೂ ಭಾರತಕ್ಕೆ ಆಸ್ಕರ್ ತಂದುಕೊಡಬಲ್ಲ ನಟರಿದ್ದಾರೆಂದರೆ ಆದರಲ್ಲಿ ರಣಬೀರ್ ಕಪೂರ್ನ ಹೆಸರು ಇರದಿರಲು ಸಾಧ್ಯವೇ ಇಲ್ಲ.. ಸಂಜಯ್ ದತ್ತ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಭಾಯಿಸಿ ಈ ಮಾತಿಗೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾನೆ ಚಿತ್ರದಲ್ಲಿ. ಈ ಎಲ್ಲ ಕಾರಣಗಳಿಂದ ಚಿತ್ರ ತೆರೆಯ ಮೇಲೆ ದೂಳೆಬ್ಬಿಸುತ್ತಿದೆ. ನೋಡುಗರನ್ನು ಎರಡೂವರೆ ಘಂಟೆಗಳ ಕಾಲ ರಂಜಿಸುತ್ತಿದೆ. ಆದರೆ ಚಿತ್ರಕತೆಯ ಸತ್ಯಾಸತ್ಯತೆಯನ್ನು ಅರಿಯಬಯಸುವವರಿಗೆ, ಹಿಂದಿನ ಇತಿಹಾಸವನ್ನು ಅರೆಬರೆ ಮರೆತಿರುವವರಿಗೆ ಎರಡೂವರೆ ದಶಕಗಳ ವಿದ್ಯಮಾನಗಳನ್ನು ಕೇವಲ ಎರಡೂವರೆ ಘಂಟೆಯಷ್ಟೇ ನೋಡಿ ಇದು ಸರಿ ಅದು ತಪ್ಪೆಂದು ಖಡಾಖಂಡಿತವಾಗಿ ನಿರ್ಧರಿಸುವುದು ದುಡುಕುತನವಾದೀತು. ಚಿತ್ರ ಮಾಡಿದ್ದು ನಿಜವನ್ನು ಬಿಚ್ಚಿಡಲೋ ಅಥವಾ ಮುಖ್ಯವಾದ ಸಂಗತಿಯನ್ನು ಮುಚ್ಚಿಡಲೋ ಎಂಬೊಂದು ಪ್ರಶ್ನೆ ಮಾತ್ರ ಚಿತ್ರಮಂದಿರದಿಂದ ಹೊರಬರುವ ಒಂದಿಷ್ಟು ಮಂದಿಗಂತೂ ಕಾಡದಿರದು!

1993 ರ ಮುಂಬೈ ಸರಣಿ ಸ್ಫೋಟಗಳ ನೋವು ಆಕ್ರಂದನಗಳು ಭಾಗಶಃ ಭಾರತೀಯರಿಗೆ ತಿಳಿದಿರುವ ವಿಷಯವೇ. 1992 ರಲ್ಲಿ ಬಾಬ್ರಿ ಮಸೀದಿಯ ಕೆಡಹುವಿಕೆಯಿಂದ ಹುಟ್ಟಿಕೊಂಡ ಸಂಘರ್ಷ ಇಂದಿಗೂ ಒಂದು ತಾರ್ಕಿಕ ನೆಲೆಯನ್ನು ಮುಟ್ಟದಿರುವುದು ನಮ್ಮೆಲ್ಲರ ವಿಪರ್ಯಾಸವೇ ಸರಿ. ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಭಾಗಿಗೊಂಡ ಹಲವಾರು ತಲೆಮರೆಸಿಕೊಂಡು ಬದುಕುತಿದ್ದರೆ ಪರೋಕ್ಷವಾಗಿ ಭಾಗಿಗೊಂಡ ಹಲವರು ಇಂದಿಗೂ ಸಾವು ಬದುಕಿನ ಹೋರಾಟವನ್ನು ನಡೆಸುತ್ತಿದ್ದಾರೆ. ಈ ಮಾತಿನ ಒಂದಿಷ್ಟು ಪ್ರಭಾವಳಿ ಹಿಂದಿ ಚಿತ್ರರಂಗದ ಖ್ಯಾತ ಜೋಡಿ ಸುನಿಲ್ ದತ್ತ್ ಹಾಗು ನರ್ಗೀಸರ ಮಗನಾದ ಸಂಜಯ್ ದತ್ತ್ ನಿಗೂ ಅನ್ವಹಿಸುತ್ತದೆ. ಹುಟ್ಟಿನಿಂದಲೇ ‘ಅಮೀರ್ ಬಾಪ್ ಕ ಬಿಗ್ದಾ ಹೂಹ ಓಲಾತ್’ ಎಂಬಂತೆ ಬೆಳೆದ ಸಂಜಯ್ಗೆ ಸಹಜವಾಗಿಯೇ ಚಿತ್ರರಂಗದ ಆಕರ್ಷಣೆ ಮೂಡತೊಡಗಿತು. ಕಾಲೇಜಿನ ವಯಸ್ಸಿನಲ್ಲಿಯೇ ಕುಡಿತ, ಸಿಗರೇಟು ಹಾಗು ವಿಪರೀತವೆಂಬಂತೆ ಡ್ರಗ್ಸ್ ದಾಸನಾಗಿದ್ದ ಈತ ಬಯಸದೆ ಸಿಗುವ ಸ್ಟಾರ್ ದಮ್ ಅನ್ನು ಜೊತೆಜೊತೆಗೆ ಎಂಜಾಯ್ ಮಾಡುತ್ತಾನೆ. ಚಿತ್ರದ ಸೆಟ್ಟಿಗೂ ಡ್ರಗ್ಸ್ ನ ಮತ್ತಿನಲ್ಲಿ ಬಂದಿರುವುದುಂಟು. ಅಪ್ಪನಿಂದ ಬೈಗುಳ ತಿಂದಿರುವುದುಂಟು. ಸಾಲದಕ್ಕೆ ಸಾಲು ಸಾಲು ಹುಡುಗಿಯರ ನಂಟು. ಒಟ್ಟಿನಲ್ಲಿ ಮೀಸೆಚಿಗುರುವ ವೇಳೆಗಾಗಲೇ ವ್ಯಸನಿ ಎಂಬೊಂದು ಹಣೆಪಟ್ಟಿಯನ್ನು ಕಟ್ಟಿಕೊಂಡು ಅಲೆಯುತ್ತಿರುತ್ತಾನೆ. ಒಂದೆಡೆ ಈತನ ರಂಪಾಟನ್ನು ಹತೋಟಿಗೆ ತರಲಾಗದೆ ಕೊರಗುತ್ತಿದ್ದ ಅಪ್ಪ ಮತ್ತೊಂದೆಡೆ ಇಂದೋ ನಾಳೆಯೋ ಎಂಬಂತೆ ಕಾಲವನ್ನು ತಳ್ಳಿಕೊಂಡು ಕ್ಯಾನ್ಸರಿನೊಟ್ಟಿಗೆ ಬದುಕುತ್ತಿದ್ದ ಅಮ್ಮ. ತಂಗಿಯರಿಬ್ಬರೂ ಅಣ್ಣನ ಪಾಡನ್ನು ಕಂಡು ಸೊರಗಿಕೊಂಡಿದ್ದರು. ಕೆಲ ದಿನಗಳಲ್ಲೇ ನರ್ಗೀಸ್ ಳ ಸಾವು. ತದಾನಂತರ ಕಾಡಿ ಬೇಡಿಯೋ ಅಮೆರಿಕದೊಂದು ರಿಹ್ಯಾಬಿಟೇಷನ್ ಕ್ಯಾಂಪ್ಗೆ ಸೇರ್ಪಡೆ. ಹೀಗೆ ಹೇಗೋ ಒದ್ದಾಡಿ ಗುದ್ದಾಡಿ ತನ್ನ ವ್ಯಸನವನ್ನು ಬಿಟ್ಟು ಬಂದ ಈತನಿಗೆ ಸಿನಿಮಾರಂಗಕ್ಕೆ ಮತ್ತೊಮ್ಮೆ ಎಂಟ್ರಿ ಕೊಡುವುದೇನು ಕಷ್ಟವಿರಲಿಲ್ಲ. ಪೋಷಕರ ಹೆಸರು. ಇನ್ನೇನು ಬೇಕು. ಸರಿ, ಎಲ್ಲ ಆಯಿತು, ಬಿಸಿ ರಕ್ತ. ಚಟಗಳು ಸಾಮಾನ್ಯ. ಇನ್ನು ಮುಂದೆಯಾದರೂ ತಿಳಿದು ಅರಿತು ಹೆಜ್ಜೆಯಿಡಬೇಕು ಎಂಬಂತ ಅರಿವು ಇಪ್ಪತೈದು ವರ್ಷದ ಈತನಿಗೆ ಬಂದಿರಬೇಕಿತ್ತು. ಆದರೆ ಈತ ಮಾಡಿದ್ದೇನು? ಡ್ರಗ್ಸ್ ಎಂಬೊಂದು ಚಟವನ್ನು ಬಿಟ್ಟು ಬೇರೆಲ್ಲ ವ್ಯಸನಗಳು ಮೊದಲಿನಂತೆಯೇ ಸರಾಗವಾಗಿ ಮುಂದುವರೆಸಿದ. ಆದರೆ ಈ ಬಾರಿ ಅವುಗಳೊಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ. ಅಂಡರ್ ವರ್ಲ್ಡ್! ತೆರೆಯ ಮೇಲಷ್ಟೇ ಅಲ್ಲದೆ ನಿಜಜೀವನದಲ್ಲೂ ಹೀರೋಗಿರಿಯ ಶೋಕಿಗೋ ಅಥವ ತನ್ನ ಅರೆಪುಕ್ಕಲುತನವನ್ನು ಮರೆಮಾಚಿಕೊಳ್ಳಲೋ ಅಥವಾ ‘ಸಂಜು ಬಾಬಾ’ ಎಂಬ ಬಾಬಾನಾಗುವ ಕನಸಿಗೋ ಅಥವಾ ಚಿತ್ರದಲ್ಲಿ ‘ಮಾರ್ಮಿಕ’ವಾಗಿ ತೋರಿಸಿರುವಂತೆ ತನ್ನ ಹಾಗು ತನ್ನ ಕುಟುಂಬದ ರಕ್ಷಣೆಗೋಸ್ಕರ ಮುಂಬೈ ಅಂಡರ್ ವರ್ಲ್ಡ್ ಡಾನ್ಗಳ ಸಾಂಗತ್ಯ ಈತನಿಗೆ ಹೆಚ್ಚಾಗತೊಡಗಿತು. ಆ ಡಾನ್ ಗಳೋ ಇಂತಹ ಶೋಕಿಲಾಲರನ್ನೇ ಕಾದು ಕುಳಿತು ಸಮಯ ಬಂದಾಗ ತಮ್ಮ ಕೈಚಳಕವನ್ನು ತೋರಿಸಿಬಿಡುತ್ತಾರೆ. 93 ರ ಮುಂಬೈ ಅಟ್ಯಾಕ್ ಮಾಡುವ ಸಮಯದಲ್ಲಿ ಮೂರು ಏಕೆ47, ಒಂಬತ್ತು ಮ್ಯಾಗಜಿನ್ಗಳು, ನೂರಾರು ಗುಂಡುಗಳು ಹಾಗು ಹತ್ತಾರು ಹ್ಯಾಂಡ್ ಗ್ರಾನೈಟ್ಗಳನ್ನು ಈತನ ಮನೆಯಲ್ಲಿ ಅಡಗಿಸಿ ಇಟ್ಟಿರುತ್ತಾರೆ. ದಂಗೆಯ ಉತ್ತುಂಗದ ಕಾಲದಲ್ಲಿ ಹೀಗೆ ರಾಶಿಗಟ್ಟಲೆ ಶಸ್ತ್ರಾಸ್ತಗಳನ್ನು ಮನೆಯಲ್ಲಿರಿಸಿಕೊಂಡಿದ್ದ ‘ಏನೂ ಅರಿಯದ ಮುಗ್ದ’ ಸಂಜು ಕೊನೆಗೂ ಸಿಕ್ಕಿಬೀಳುತ್ತಾನೆ. ಅಷ್ಟೇ. ಅಲ್ಲಿಂದ ಶುರುವಾದ ಆತನ ಜೈಲು, ಕೋರ್ಟು ಕಚೇರಿಗಳ ಪರದಾಟ ತನ್ನ ಮುಪ್ಪಿನ ವಯಸ್ಸಿಗೂ ಮುಂದುವರೆಯಿತು. (ಸಂಜಯ್ ಗೀಗ ಆಲ್ಮೋಸ್ಟ್ 60 ವರ್ಷಗಳು!).

ಇದು ನಿಜಕಥೆ. ಇಂತಹ ವ್ಯಕ್ತಿಯ ಒಬ್ಬ ಆಪ್ತಮಿತ್ರ ಕಮ್ ಡೈರೆಕ್ಟರ್ ಏನಾದರೂ ಈತನ ಜೀವನವನ್ನು ಕುರಿತು ಕತೆಯನ್ನು ಬರೆದರೆ ಅದು ಸಹಜವಾಗಿಯೇ ತನ್ನ ಗೆಳೆಯನ ಪರವಾಗಿಯೇ ವಾಲಿಕೊಂಡಿರುತ್ತದೆ. ಅದು ಗೆಳೆತನಕ್ಕೆ ಕೊಡುವ ಒಂದು ಕಾಣಿಕೆ ಎನ್ನಬಹುದು. ಆದರೆ ಹಿರಾನಿ ಈ ಬಾರಿ ಕೈಗೆತ್ತಿಕೊಂಡ ಕಥೆ ಕೇವಲ ಗೆಳೆತನಕ್ಕೆ ಸಮರ್ಪಿಸಬಹುದಾದ ಕಾಣಿಕೆಯಾಗಿರಲಿಲ್ಲ. ಬದಲಾಗಿ ಅದು ಸಮಾಜದ ಮೂಲ ಅಡಿಪಾಯಕ್ಕೆ ಆನೆಯೊಡೆತವನ್ನು ಕೊಡುವ ಕಾರ್ಯವಾಗಿತ್ತು. ದೇಶದ ಅತ್ಯುನ್ನತ ನಿರ್ದೇಶಕನಾದ ಆತ ಚಿತ್ರವೊಂದರ ಮೂಲಕ ಸಮಾಜಕ್ಕೆ ಹೇಳಹೊರಟಿರುವುದಾದರೂ ಏನನ್ನು? ಮನಸ್ಸು ಮಾಡಿದ್ದರೆ ನೂರಾರು ಜನರ ಜೀವವನ್ನು ರಕ್ಷಿಸಬಲ್ಲ ಅವಕಾಶವನ್ನು ಕೈಚೆಲ್ಲಿ ಬದಲಾಗಿ ಆ ಕುಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳಿಗೇ ಶಸ್ತ್ರಾಸ್ತಗಳನ್ನು ಬಚ್ಚಿಡಲು ಸಹಕಾರಿಯಾದ ವ್ಯಕ್ತಿಯೊಬ್ಬನನ್ನು ಬಿಂಬಿಸಲು ಹೋಗಿ ಹಿರಾನಿ ಎಲ್ಲೋ ಒಂದೆಡೆ ತಪ್ಪು ಮಾಡಿದ್ದಾರೆ ಎಂದೆನಿಸದಿರದು. ಮೇಲಾಗಿ ಕೋರ್ಟಿನಲ್ಲಿ ನಡೆದ ವಾದವಿವಾದಗಳನ್ನಾಗಲಿ, ಸುಪ್ರೀಂ ಕೋರ್ಟಿನ ತೀರ್ಪಿನ ಪ್ರತಿಯಾಗಲಿ ನೂರಕ್ಕೆ 99 ಜನ ಕಂಡೇ ಇರುವುದಿಲ್ಲ. ಅಂತವರಿಗೆಲ್ಲ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕತೆ ಹೇಳಿದಂತೆ ಘಟನೆಗಳನ್ನು ಬರೆಯಬಾರದಿತ್ತು. ಟ್ರಿಪಲ್ ಸೆಂಚೂರಿ ಯಷ್ಟು ಹುಡುಗಿಯರ ಸಹವಾಸ ಒಂದುಪಕ್ಷ ಒಂದಿಷ್ಟು ಜಿಗರಿ ದೋಸ್ತಿಗಳು ಸೇರಿದಾಗ ಹೇಳಿ ಕಿಚಾಯಿಸುವ ವಿಷಯವಾಗಬಹುದೇ ವಿನಃ ಕೋಟ್ಯಾನುಕೋಟಿ ಜನಮಾನಸದ ಮುಂದೆ ಹೇಳಿ ನಗಲು ಅಣಿಮಾಡಿಕೊಡುವ ವಿಷಯವಂತು ಅಲ್ಲವೇ ಅಲ್ಲ. ‘ಅದು ಹಾಗಲ್ಲ ಸಾರ್, ನಮ್ಮ್ ಸಂಜು ಬಾಬಾ ಎಷ್ಟು ಓಪನ್ ಅಂತ ಅದು ತೋರ್ಸಿ ಕೊಡುತ್ತೆ ಆ ಡೈಲಾಗು. ಯಾರ್ ತಾನೇ ಇಷ್ಟೆಲ್ಲಾ ಪ್ರೈವೇಟ್ ವಿಷಯಗಳನ್ನ ಹಿಂಗೇ ಖುಲ್ಲಂ ಖುಲ್ಲಾ ಹೇಳ್ತಾರೆ .. ಹೇಳಿ ನೋಡನ ?’ ಎಂದು ಅನ್ನುವವರೂ ಇದ್ದಾರೆ. ಅಲ್ಲಾ ಸ್ವಾಮಿ. ಈ ಮಾತನ್ನು ಒಬ್ಬ ಗಂಡಸು ಹೇಳ್ತಾ ಇದ್ದಾನೆ ಅಂತ ಇಷ್ಟೆಲ್ಲಾ ವಾದಮಾಡ್ತಾ ಇದ್ದೀರಾ. ಅವನನ್ನು ಅಪರಂಜಿಯಂತಹ ನಾಯಕನೇನೋ ಎಂಬ ಮಟ್ಟಿಗೆ ಏರಿಸಿ ಕೂರಿಸುತ್ತೀರಾ. ಇದೆ ಕೆಲಸವನ್ನು ಒಬ್ಬ ನಟಿ ಏನಾದರು ಮಾಡಿ ಹೇಳಿದ್ದರೆ ಹೇಗಿರುತ್ತಿತ್ತು? ಆಕೆಯ ಹಿಂದೆ ಮುಂದೆ ಅದೆಷ್ಟು ನೀಚ ಕತೆಗಳು ಹುಟ್ಟಿ ಆ ಹೆಸರನ್ನು ಪಾತಾಳ ಮುಟ್ಟಿಸುತ್ತಿತ್ತು? ಅಲ್ಲವೇ? ಅದನ್ನೇ ಹೇಳೋದು ಪರ್ಸೆಪ್ಷನ್ ! ನಮ್ಮಲ್ಲಿ ‘ಆತ’ನಿಗೊಂದು ನೀತಿ ‘ಈಕೆ’ಗೆ ಬೇರೆಯೇ ರೀತಿ!

ಚಿತ್ರದಲ್ಲಿ ಕಾಣಸಿಗುವ ಮತ್ತೊಂದು ಮಹತ್ವದ ವಿಷಯ ಮಾಧ್ಯಮಗಳ ಬಗೆಗೆ. ಸಹಜವಾಗಿಯೇ ಮಾಧ್ಯಮಗಳನ್ನು ಜರಿಯ ಬಯಸುವವನಿಗೆ ಅಕ್ಷಯ ಪಾತ್ರೆಯಂತೆ ವಿಷಯಗಳು ಒಂದರಿಂದೊಂದು ಸಿಗುತ್ತವೆ. ಒಬ್ಬ ವ್ಯಕ್ತಿಯ, ವ್ಯಕ್ತಿ ಅನ್ನುವುದಕ್ಕಿಂತ ಸೆಲೆಬ್ರಿಟಿಯ, ಪರ್ಸನಾಲಿಟಿ ಸಮಾಜದಲ್ಲಿ ಹೇಗೆ ನೆಲೆಯೂರುತ್ತದೆ ಎಂಬುದರಲ್ಲಿ ಮಾಧ್ಯಮಗಳ ಅಡಿಪಾಯ ಬಹುವಾಗಿಯೇ ಇರುತ್ತದೆ. ಪ್ರಸ್ತುತ ಪೇಯ್ಡ್ ಮೀಡಿಯಾಗಳಂತೂ ಇಂತಹ ಕಾರ್ಯಗಳಿಗೆ ಹೇಳಿ ಮಾಡಿಸಿರುವವು. ಸಂಜಯ್ ದತ್ತ್ ನಾದರೂ ತಪ್ಪು ಮಾಡಿ ಬೆಪ್ಪಾದವ, ಆದರೆ ಇನ್ನೂ ಅದೆಷ್ಟೋ ವ್ಯಕ್ತಿತ್ವಗಳು ಕಡ್ಡಿಯನ್ನು ಮುರಿಯದೆಯೇ ಮರಕೆಡವಿದ ಅಪಾದನೆಯನ್ನು ಹೊರುತ್ತವೆ. ಎಲ್ಲೋ ಕೂತು ಆತ ಹೀಗೆ, ಈಕೆ ಹಾಗೆ ಎಂದು ಬರೆಯುವ, ಅರಚುವ ಮಾಧ್ಯಮಗಳು ಇಂದು ತಮ್ಮ ‘ಮೂಲ’ಗಳ ಮಾತಿಗೆ ಬೆಲೆ ಕಟ್ಟುತ್ತಾವೋ ಅಥವಾ ಧ್ಯಾನಶಕ್ತಿಯಿಂದ ತಾವು ಕಣ್ಣುಮುಚ್ಚಿಯೇ ಎಲ್ಲವನ್ನು ಗ್ರಹಿಸಿ ಬಿತ್ತರಿಸುತ್ತಾವೆಯೋ ತಿಳಿಸಬೇಕು. ಹಾಗಾಗಿ ಇಂದು ಸಂಜಯ್ ದತ್ತ್ ನಮಗೆ ಹೀರೋವಾಗಿ ಅಥವಾ ವಿಲನ್ನಾಗಿ ಕಾಣಲು ಇಂತಹ ಮಾಧ್ಯಮಗಳ ಮಾತುಗಳೇ ಅಡಿಪಾಯವಲ್ಲವೆ ? ಹಾಗಾದರೆ ಆ ಅಡಿಪಾಯ ಅದೆಷ್ಟರ ಮಟ್ಟಿಗೆ ದೃಢವಾಗಿದೆ? ಈ ಅಂಕಣವನ್ನು ಬರೆಯುವಾಗಲೂ, ಅಲ್ಲೊಂದು ಇಲ್ಲೊಂದು ವಿಷಯಗಳನ್ನು ಹುಡುಕುವಾಗಲೂ ಇದೇ ಪ್ರಶ್ನೆ ಬಹುವಾಗಿ ಕಾಡುತ್ತದೆ! ಸುದ್ದಿ ನಿಜವೋ, ಸುಳ್ಳೋ, ಕಲ್ಪಿತವೋ, ಕುಚೇಷ್ಠೆಯೋ .. ಪರಾಮರ್ಶಿಸಿ ಹೇಳುವವರ್ಯಾರು?! ಹಿರಾನಿ ಚಿತ್ರದಲ್ಲಿ ಈ ಅಂಶವನ್ನು ಬಿತ್ತರಿಸಿರುವ ರೀತಿ ಸರಿಯಾಗಿಯೇ ಇದೆ. ಆದರೆ ಹೀಗೆ ಬಿತ್ತರಪಡಿಸುತ್ತಿರುವ ತನ್ನ ಚಿತ್ರವೂ ಸಹ ಒಂದು ಬಗೆಯ ಮಾಧ್ಯಮದ ಕೆಟಗರಿಗೆ ಬರುತ್ತದೆ, ತಾನು ಬರೆದಿರುವ ಕತೆಯ ಸತ್ಯಾಸತ್ಯತೆಯನ್ನು ನೋಡುಗ ಯಾರಲ್ಲಿ ಕೇಳಿ ಪರಾಮರ್ಶಿಸಿಕೊಳ್ಳಬೇಕು? ಎಂಬೊಂದು ಪ್ರಶ್ನೆಯನ್ನೂ ತಾವಾಗಿಯೇ ಕೇಳಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.
ಸಾಮಾಜಿಕ ಕಾಳಜಿ ಎಂಬ ನೈತಿಕ ಕಲೆ ಪ್ರತಿಯೊಬ್ಬ ಕಲಾಕಾರನಿಗೆ ಇರಲೇಬೇಕಾದದ್ದು. ಮೇಲಾಗಿ ರಾಜ್ಕುಮಾರ್ ಹಿರಾನಿಯಂತಹ ಪ್ರಭುದ್ದ ಕ್ರಿಯಾಶೀಲ ನಿರ್ದೇಶಕರೇ ಹೀಗೆ ಎಡವಿದರೆ ಕಾಲ ಕೆಟ್ಟಂತೆಯೇ ಸರಿ. ಮುನ್ನಾಭಾಯಿ, 3 ಈಡಿಯಟ್ಸ್, ಪಿ.ಕೆ ಯಂತಹ ಮಾಸ್ಟರ್ ಪೀಸ್ ಗಳನ್ನು ಕೊಟ್ಟ ಹಿರಾನಿ ಈ ಬಾರಿ ತನ್ನ ಸ್ನೇಹಿತನ ಎಲ್ಲಾ ಕಾರುಬಾರುಗಳಿಗೂ ಕ್ಲಿನ್ ಚಿಟ್ ಕೊಡಲು ಹೋಗಿ ಮುಜುಗರಕ್ಕೀಡಾಗಿದ್ದಾರೆ. ಕಥೆಯೊಂದನ್ನು ಹೊರತುಪಡಿಸಿ ಚಿತ್ರ ಮಾತ್ರ ಎಕ್ಸಲೆಂಟ್ ಎಂಬೊಂದು ಕೆಟಗರಿಗೆ ಸೇರಲ್ಪಡುತ್ತದೆ. ನಟನೆ, ಹಾಸ್ಯ, ಗೆಳೆತನ ಹಾಗು ಸಂಬಂಧಗಳ ಹೆಣೆದಿರುವಿಕೆ, ಕೆಲವು ಬೋಲ್ಡ್ ಸೀನ್ಗಳು ಎಲ್ಲವು ಸೇರಿ ಒಂದು ಪರಿಪೂರ್ಣ ಚಿತ್ರವಾಗಿಸುತ್ತದೆ. ಯಾವ ದೃಶ್ಯವೂ ನೋಡುಗರನ್ನು ಕೂತ ಕುರ್ಚಿಯಿಂದ ಅಲುಗಾಡಿಸುದಿಲ್ಲ. ಒಂದು ಪಕ್ಷ ಖುದ್ದು ಸಂಜಯ್ ದತ್ತೇ ಚಿತ್ರದಲ್ಲಿ ನಟಿಸಿದ್ದರೂ ರಣಬೀರ್ನ ನಟನ ಚಾತುರ್ಯಕ್ಕೆ ಸಮದೂಗಿಸಲಾಗುತ್ತಿರಲಿಲ್ಲ. ಆ ಮಟ್ಟಿನ ನಟನೆಯನ್ನು ಚಿತ್ರದಲ್ಲಿ ನಾವು ಕಾಣಬಹುದು. ಇದು ರಾಜ್ಕುಮಾರ್ ಹಿರಾನಿಯ ಸತತ ಐದನೇ ಸೂಪರ್ಹಿಟ್ ಚಿತ್ರ ಎಂಬುದರಲ್ಲಿ ದೂಸರಾ ಮಾತೇ ಇಲ್ಲ. ಮುಂದೆಯಾದರೂ ಇಂತಹ ಒಬ್ಬ ಕ್ರಿಯಾಶೀಲ ನಿರ್ದೇಶಕ ಸಮಾಜಕ್ಕೆ ಮಾದರಿಯಾಗದ್ದಿದರೂ ಸರಿಯೇ ಕನಿಷ್ಠ ಪಕ್ಷ ಒಂದಿಷ್ಟು ಸಾಧನೆಮಾಡಿರುವ ವ್ಯಕ್ತಿತ್ವಗಳನ್ನು ನಮಗೆ ಪರಿಚಯಿಸಲಿ. ನಮ್ಮ ನಾಯಕರುಗಳಿಗೇ ಇಲ್ಲದ ‘ಮುಲಾಜು’ ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments