ಅರಬ್ ರಾಷ್ಟ್ರವಾದ ಎಂಬ ಟ್ಯಾಂಕು; ಷರಿಯಾ ಎಂಬ ಪೈಪು!
– ಸಂತೋಷ್ ತಮ್ಮಯ್ಯ
ಬಹುತೇಕರಿಗೆ ರಾಮಾಯಣದ ಈ ಚಿರಪರಿಚಿತವಾದ ಪ್ರಸಂಗ ವಿಚಿತ್ರವಾಗಿ ಕಾಣಿಸಬಹುದು.
ಸುಬಾಹು ಮತ್ತು ಮಾರೀಚರು ಪದೇ ಪದೇ ಅಡ್ಡಿ ಪಡಿಸುತ್ತಿದ್ದರೂ ವಿಶ್ವಾಮಿತ್ರನೇಕೆ ಪದೇ ಪದೇ ಅಲ್ಲೇ ಯಾಗ ಮಾಡುತ್ತಿದ್ದ ಎನಿಸಬಹುದು. ಜನ್ಮತಃ ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನೇ ಏಕೆ ಸುಬಾಹು ಮಾರೀಚರನ್ನು ಕೊಲ್ಲಲಿಲ್ಲ ಎಂಬ ಪ್ರಶ್ನೆಯೂ ಮೂಡಬಹುದು. ಹಾಗಾದರೆ ಸುಬಾವು-ಮಾರೀಚರು ವಿಶ್ವಾಮಿತ್ರನಿಗಿಂತಲೂ ಪರಾಕ್ರಮಿಗಳಾಗಿದ್ದರೇ ಎಂದು ಸಂಶಯವನ್ನೂ ಹುಟ್ಟಿಸಬಹುದು. ಅಂಥ ಪ್ರಶ್ನೆ, ಸಂಶಯ, ಗೊಂದಲಗಳು ಹುಟ್ಟುವುದಕ್ಕೆ ಕಾರಣಗಳೂ ಇವೆ. ಏಕೆಂದರೆ ಪ್ರತೀ ಭಾರಿ ಉಪಟಳ ಕೊಟ್ಟಾಗಲೂ ವಿಶ್ವಾಮಿತ್ರ ಅಷ್ಟೇ ಶ್ರದ್ಧೆಯಿಂದ ಯಾಗಕ್ಕೆ ಅಣಿಯಾಗುತ್ತಿದ್ದ. ಪ್ರತೀ ಬಾರಿಯೂ ರಾಕ್ಷಸರು ಹೊಸ ಹೊಸ ವಿಧಾನಗಳ ಮೂಲಕ ಯಾಗಕ್ಕೆ ಅಡ್ಡಿಪಡಿಸುತ್ತಲೇ ಇದ್ದರು. ರಾಕ್ಷಸರು ವಿಶ್ವಾಮಿತ್ರನಿಗಿಂತ ಒಂದು ಹೆಜ್ಜೆ ಮುಂದಿದ್ದರು. ಪ್ರತೀ ಬಾರಿಯೂ ದಾಳಿಯಾಗುವುದೆಂದು ತಿಳಿದಿದ್ದ ಮಿಶ್ವಾಮಿತ್ರ ತಕ್ಕ ಕ್ರಮವನ್ನೂ ಕೈಗೊಳ್ಳುತ್ತಿದ್ದ, ಪ್ರತಿ ಬಾರಿಯೂ ಸೋಲುತ್ತಿದ್ದ. ಕೊನೆಗೆ ವಿಶ್ವಾಮಿತ್ರ ರಾಮ ಲಕ್ಷ್ಮಣರನ್ನು ಕರೆತರುವ ಹೊತ್ತಿಗೆ ಹಣ್ಣುಗಾಯಿ ನೀರುಗಾಯಿ ಅಗಿಹೋಗಿದ್ದ.
ಏಕೆಂದರೆ ವಿಶ್ವಾಮಿತ್ರನಿಗೆ ರಾಕ್ಷಸರ ಆಚರಣೆಗಳು ತಿಳಿದಿತ್ತೇ ಹೊರತು, ಅವರ ಸಿದ್ಧಾಂತ ಮತ್ತು ಪ್ರವೃತ್ತಿಗಳು ತಿಳಿದಿರಲಿಲ್ಲ ಅಥವಾ ಅವನ್ನು ತಿಳಿಯಲು ಅತ ಬಹುಕಾಲ ತೆಗೆದುಕೊಂಡಿದ್ದ!
ಭಾರತದಲ್ಲಿ ಷರಿಯಾ ಅಥವಾ ಷರಿಯತ್ ಎಂದರೂ ಹಾಗೆಯೇ. ಇಂದಿಗೂ ಮುಸಲ್ಮಾನೇತರರಿಗೆ ಷರಿಯತ್ ಸರಿಯಾ, ತಪ್ಪಾಎಂಬ ಚರ್ಚೆಯೇ ದೊಡ್ಡದಾಗುತ್ತದೆಯೇ ಹೊರತು ಅದರಾಚೆಗೆ ಇಣುಕಿದವರು ಕಡಿಮೆ. ಆದರೆ ಮುಸಲ್ಮಾನರಲ್ಲಿ ಹಾಗಿಲ್ಲ. ಅವರಲ್ಲಿ ಷರಿಯಾ ಏಕಾಗಿ ಇದೆ? ಯಾಕಾಗಿರಬೇಕು? ಅದರ ಮೂಲ ಉದ್ದೇಶವೇನಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿದೆ. ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಪ್ರತೀ ಜಿಲ್ಲೆಯಲ್ಲೂ ಷರಿಯಾ ನ್ಯಾಯಾಲಗಳಿರಬೇಕೆಂದು ಹೇಳುತ್ತಿರುವುದಕ್ಕೂ ಗಹನವಾದ ಕಾರಣವಿದೆ.
ಏಕೆಂದರೆ ಷರಿಯಾ ಪ್ರಬಲವಾದರೆ ಮಾತ್ರ ಇಸ್ಲಾಮಿಗೆ ಅಸ್ತಿತ್ವ, ಷರಿಯಾ ಜಾರಿಯಲ್ಲಿದ್ದರೆ ಮಾತ್ರ ಇಸ್ಲಾಂ ಸಮಾಜದ ಕನಸ್ಸು ಸಾಕಾರ. ಹಾಗಾಗಿ ಇಸ್ಲಾಮಿನ ಬೇರುಗಳನ್ನರಿಯದೆ ಷರಿಯಾ ಬಗ್ಗೆ ಪ್ರತಿಕ್ರಿಯಿಸುವುದು ವ್ಯರ್ಥ. ಆದರೆ ಷರಿಯಾವನ್ನು ವಿವರಿಸುತ್ತಲೇ ಮುಸಲ್ಮಾನ ಮಾನಸಿಕತೆಯನ್ನೂ ವಿವರಿಸಬಿಡಬಹುದು, ಇಂದು ಜಗತ್ತು ಅನುಭವಿಸುತ್ತಿರುವ ಸಕಲ ಅಪಾಯಗಳೆಲ್ಲವನ್ನೂ ಷರಿಯತ್ ಒಂದರ ವಿವರಣೆಯಿಂದಲೇ ಹೇಳಿಬಿಡಬಹುದು. ಅಂತಿಮವಾಗಿ ಷರಿಯಾದ ಉದ್ದೇಶ ಅರಬ್ ರಾಷ್ಟ್ರವಾದ ಎಂದೂ ತೀರ್ಪುಕೊಟ್ಟುಬಿಡಬಹುದು.
ಅದರಲ್ಲೇನೂ ಸಂಶಯವಿಲ್ಲ, ಏಕೆಂದರೆ ಅಸಲಿಗೆ ಈ ಷರಿಯಾ ಇರುವುದೇ ಹಾಗೆ.
ಸರಳವಾಗಿ ಹೇಳಬೇಕೆಂದರೆ ಕುರಾನ್ ಮತ್ತು ಹದೀಸ್‌ಗಳಲ್ಲಿ ಏನನ್ನು ಹೇಳಲಾಗಿದೆಯೋ ಅದನ್ನು ಪಾಲಿಸುವ ನಿಯಮಗಳು ಅಥವಾ ಕಾನೂನುಗಳು ಈ ಷರಿಯತ್‌ಗಳು. ಕುರಾನ್ ಹೇಳುವ ನಿಯಮಗಳನ್ನು ಅಳವಡಿಸಲು ಹೊರಡಿಸಿದ ಆದೇಶಗಳು ಮತ್ತು ರಚಿಸಲಾದ ನಿಯಮಾವಳಿ ಈ ಷರಿಯಾ. ನಮಾಜ್, ಉಪವಾಸ, ಹಜ್ ಮುಂತಾದವುಗಳನ್ನು ಯಾಕೆ ಮಾಡಬೇಕು ಎಂದು ಹೇಳುವುದು ಕುರಾನಾದರೆ ಇಸ್ಲಾಂ ಹೇಗಿರಬೇಕು ಎಂಬುದನ್ನು ಕಟ್ಟುನಿಟ್ಟಾಗಿ ಹೇಳುವುದು ಷರಿಯಾ. ಕುರಾನ್ ಮತ್ತು ಹದೀಸ್ ಗ್ರಾಂಥಿಕವಾದರೆ, ಅದರ ಆಚರಣಾ ಸ್ವರೂಪ ಈ ಷರಿಯತ್. ಹಾಗಾಗಿ ಕುರಾನ್ ಮತ್ತು ಹದೀಸ್‌ಗಳಲ್ಲಿ ಏನೇನಿದೆಯೋ ಷರಿಯತ್‌ನಲ್ಲೂ ಅವೆಲ್ಲವೂ ಇವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕುರಾನ್ ಮತ್ತು ಹದೀಸ್‌ಗಳು ಟ್ಯಾಂಕುಗಳಾದರೆ ಷರಿಯತ್ ಎನ್ನುವುದು ಪೈಪುಗಳು. ಹಾಗಾಗಿ ಕುರಾನ್ ಹೇಗೆ ಪ್ರಶ್ನಾತೀತವೋ ಷರಿಯತ್ ಕೂಡಾ ಪ್ರಶ್ನಾತೀತ ಎಂಬ ನಂಬಿಕೆ ಮುಸಲ್ಮಾನರದ್ದು.
ಅಂಥಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶದ ಪ್ರತೀ ಜಿಲ್ಲೆಯಲ್ಲೂ ಷರಿಯಾ ಕೋರ್ಟುಗಳು ಸ್ಥಾಪನೆಯಾಗಬೇಕೆಂದು ಒತ್ತಾಯಿಸಿದ್ದರಲ್ಲಿ ಆಶ್ಚರ್ಯವೇನೂ ಕಾಣುತ್ತಿಲ್ಲ. ಕುರಾನನ್ನು ನಂಬುವ ಪ್ರತೀ ವ್ಯಕ್ತಿಯ ಕರ್ತವ್ಯ ಷರಿಯತ್ ಅನುಷ್ಠಾನವಾಗಿರುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿದೆ? ಹಾಗಾಗಿ ಚರ್ಚಿತವಾಗಬೇಕಿರುವುದು ಇಸ್ಲಾಮೇ ಹೊರತು ಷರಿಯತ್ ಅಲ್ಲ.
ಉದಾಹರಣೆಗೆ ಜಿಹಾದನ್ನೇ ತೆಗೆದುಕೊಂಡರೆ ಹೊರನೋಟಕ್ಕೆ ಜಿಹಾದ್‌ಗೂ ಷರಿಯಾಕ್ಕೂ ಏನೇನೂ ಸಂಬಂಧವಿಲ್ಲ ಎನಿಸಬಹುದು. ಆದರೆ ಮುಸಲ್ಮಾನನೊಬ್ಬ ಜಿಹಾದನ್ನು ಹೇಗೆ ಮಾಡಬೇಕೆಂಬುದನ್ನು ಎಳೆಎಳೆಯಾಗಿ ವಿವರಿಸುವುದು ಈ ಷರಿಯತ್. ಜಿಹಾದಿನ ಬಗೆಗಿನ ಗೊಂದಲಗಳನ್ನು ಇಸ್ಲಾಮಿನಲ್ಲಿ ಪರಿಹರಿಸುವುದು ಷರಿಯತ್ ಮಾತ್ರ. ಹಾಗಾಗಿ ಷರಿಯತ್ ಎಂದರೆ ಯಾವನೋ ಪಿಎಫ್‌ಐ ಪೋಷಕನಂತಿರುವ ಮುಲ್ಲಾನೋ, ಇಮಾಮನೋ, ಮೂರ್ಖತನದ ಫತ್ವಾ ಕೊಡುವವನದ್ದೋ ಅಸಡ್ಡಾಳ ಹೇಳಿಕೆ ಅಲ್ಲ. ಷರಿಯತ್‌ನ ಮೂಲ ಪುರುಷ ಸಾಕ್ಷಾತ್ ಪ್ರವಾದಿಯವರೇ ಆಗಿರುವುದರಿಂದ ಅದಕ್ಕೆ ಇಸ್ಲಾಮಿನಲ್ಲಿ ಪವಿತ್ರದ ಸ್ಥಾನವಿದೆ. ಇಸ್ಲಾಂ ಅರಬ್ ರಾಷ್ಟ್ರವಾದದಂತೆ ಏಕೆ ಕಾಣುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ?
ವಿಶ್ವಾಮಿತ್ರ ಸುಬಾಹು ಮತ್ತು ಮಾರೀಚರ ಪ್ರವೃತ್ತಿಯನ್ನು ಅರಿಯಲು ಎಡವಿದಂತೆ ಇಂದು ನಾವು ಷರಿಯತ್ ಅನ್ನು ಅರಿಯುವಲ್ಲಿ ಎಡವುತ್ತಿದ್ದೇವೆ. ಕಾರಣ ನಾವು ಇಸ್ಲಾಂ ಅನ್ನು ಸೆಮಿಟಿಕ್ ಆಗಿ ವ್ಯಾಖ್ಯಾನಿಸುವ ಹಂತವನ್ನು ಇನ್ನೂ ನಾವು ತಲುಪಿಲ್ಲ, ಅಥವಾ ಇಸ್ಲಾಮನ್ನು ಅದು ಹೇಗಿದೆಯೋ ಹಾಗೆ ಹೇಳುವ ಧೈರ್ಯ ನಮ್ಮಲ್ಲಿಲ್ಲ. ಅಷ್ಟೇ ಏಕೆ? ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರತೀ ಜಿಲ್ಲೆಯಲ್ಲಿ ಷರಿಯಾ ಕೋರ್ಟ್ ಸ್ಥಾಪನೆ ಮಾಡಿ ಏನು ಸಾಧಿಸಲು ಹೊರಟಿದೆ ಎಂಬ ಪ್ರಶ್ನೆಗಳನ್ನು ಹಿಡಿದು ಹೆಚ್ಚು ದೂರ ಹೋಗುವ ರಿಸ್ಕ್ ಅನ್ನು ಕೂಡಾ ನಾವು ತೆಗೆದುಕೊಳ್ಳಲಾರೆವು. ಹೆಚ್ಚೆಂದರೆ ಷರಿಯಾ ಕೋರ್ಟುಗಳು ಮುಸ್ಲಿಂ-ಮುಸ್ಲಿಂ ವ್ಯಾಜ್ಯಗಳನ್ನು ಮಾತ್ರ ಪರಿಹರಿಸುತ್ತದೋ ಅಥವಾ ಮುಸ್ಲಿಂ ಮತ್ತು ಅನ್ಯರ ನಡುವಿನ ವ್ಯಾಜ್ಯಗಳನ್ನು ಮಾತ್ರ ವಿಚಾರಣೆ ಮಾಡುತ್ತದೋ? ಒಂದು ವೇಳೆ ಅದು ಮುಸ್ಲಿಂ ಮತ್ತು ಮುಸ್ಲಿಂ ವ್ಯಾಜ್ಯಗಳನ್ನು ಮಾತ್ರ ವಿಚಾರಣೆ ನಡೆಸುವುದೇ ಆದರೆ ದೇಶದಲ್ಲಿ ಸಂವಿಧಾನ ಮತ್ತು ನ್ಯಾಯಾಂಗದ ಪ್ರಶ್ನೆಯೇನು? ಒಬ್ಬ ಮುಸ್ಲಿಮೇತರ, ಮುಸ್ಲಿಂ ವ್ಯಕ್ತಿಯ ವಿರುದ್ಧ ದೂರನ್ನು ನ್ಯಾಯಾಲಯಕ್ಕೆ ನೀಡಿದರೆ ಮುಸ್ಲಿಂ ವ್ಯಕ್ತಿ ತನ್ನದು ಷರಿಯತ್ ಕಾನೂನಾಗಿರುವುದರಿಂದ, ತಾನು ಷರಿಯತ್‌ಗೆ ಮಾತ್ರ ನಿಷ್ಠ ಎನ್ನುವುದಿಲ್ಲವೇ? ಅದು ನ್ಯಾಯಾಂಗ ನಿಂದನೆಯಾಗುವುದಿಲ್ಲವೇ? ಎಂಬ ತರ್ಕಗಳಿಗೆ ಕೊನೆಯಾಗಿಹೋಗುತ್ತೇವೆ. ಆದರೆ ಷರಿಯಾ ಅಷ್ಟಕ್ಕೇ ತೃಪ್ತಿಪಡುವ ಜಾಯಮಾನದ್ದಲ್ಲವೇ ಅಲ್ಲ. ಅದು ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡಿಗೂ ಗೊತ್ತು.
ಇಸ್ಲಾಂ ಅನ್ನು ಹರಡಲು ಈ ಷರಿಯಾ ಒಂದು ಬ್ರಹ್ಮಾಸ್ತ್ರವಿದ್ದಂತೆ. ಏಕೆಂದರೆ ಯಾವ ಪ್ರದೇಶದಲ್ಲೂ ಯಾವ ಕಾಲದಲ್ಲೂ ಮುಸಲ್ಮಾನ ಸಮುದಾಯ ಹೊರನೋಟಕ್ಕೆ ಕಾಣುವಂತೆ ಕೇವಲ ಒಂದು ಸಮುದಾಯವೋ ಅಥವಾ ಸಂಖ್ಯೆಯ ಆಧಾರದಲ್ಲಿ ಗುರುತ್ತಿಸಲ್ಪಡುವ ಒಂದು ವರ್ಗ ಮಾತ್ರ ಆಗಿರುವುದಿಲ್ಲ. ಗೂಡಂಗಡಿ, ಗುಜರಿ ಇಟ್ಟುಕೊಂಡು ತನ್ನ ಪಾಡಿಗೆ ತಾನು ನಮಾಜ್ ಮಾಡಿಕೊಳ್ಳುವ ಸಾಮಾನ್ಯ ಮುಸಲ್ಮಾನನೂ ಷರಿಯತಿನ ಮೂಲಕ ಅರಬ್ ರಾಷ್ಟ್ರವಾದವೊಂದರ ವಾಹಕನಾಗಿರುತ್ತಾನೆ. ಅದನ್ನು ಭಾರತದ ಇತಿಹಾಸವೇ ಸಾರಿ ಹೇಳುತ್ತದೆ. ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಹುಟ್ಟಿದ್ದೇ ಮತೀಯ ಆಧಾರದಲ್ಲಿ. ಅದನ್ನು ನಡೆಸಿದ್ದು ಷರಿಯಾ. ಮತೀಯ ಆಧಾರದಲ್ಲಿ ಪ್ರತ್ಯೇಕ ದೇಶಕ್ಕೆ ಒತ್ತಾಯಿಸಿ ಭಾರತದಲ್ಲಿ ಉಳಿದವರಲ್ಲಿ ಮತಾಂಧತೆ ನಾಶವಾಗದ್ದಕ್ಕೆ ಕಾರಣ ಕೂಡಾ ಇದೇ ಷರಿಯಾ. ಇಂದು ದೇಶದ ಅಲ್ಲಲ್ಲಿರುವ ಮುಸ್ಲಿಂ ಯೂನಿವರ್ಸಿಟಿಗಳೆಲ್ಲವೂ ಷರಿಯತ್ತಿನ ಕೂಸುಗಳೆ. ಮುಸಲ್ಮಾನ ಸಮಾಜ ಯಾವ ಸಹಿಷ್ಣು ಸಮಾಜದೊಡನೆಯೂ ಬಾಳಲು ಸಾಧ್ಯವಿಲ್ಲ ಎಂಬುದಕ್ಕೂ ಕಾರಣ ಈ ಷರಿಯತ್. ಅಂಥ ಷರಿಯತ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆನ್ನುವುದರ ನೇರ ಧ್ವನಿ, ತಾವು ದೇಶ, ಅದರ ನಿಯಮ, ಕಾನೂನುಗಳಿಗೆ ಅತೀತರು ಎಂಬುದನ್ನು ಬಹಿರಂಗವಾಗಿ ಘೋಷಿಸಿದಂತೆ.
ಅಷ್ಟಕ್ಕೂ ಷರಿಯತ್ ಈಗಾಗಲೇ ಭಾರತವನ್ನು, ಹಿಂದೂ ಸಮಾಜವನ್ನು ಹಿಂಡಿ ಹಿಪ್ಪೆ ಮಾಡಿದ್ದೂ ಕೂಡಾ ನಮಗೆ ತಿಳಿದಿಲ್ಲ. ಜಿಹಾದಿ ದಾಳಿಗೆ ಮುನ್ನ ಕಾಫಿರರಿಗೆ ಮುನ್ಸೂಚನೆ ನೀಡಬೇಕೆ, ಬೇಡವೇ ಎಂಬ ಗೊಂದಲವನ್ನು ಪರಿಹರಿಸುವುದು ಇಸ್ಲಾಮಿನಲ್ಲಿ ಷರಿಯತ್ ಮಾತ್ರ. ಅದನ್ನದು ಎಷ್ಟು ಸ್ಪಷ್ಟವಾಗಿ ಹೇಳಿದೆಯೆಂದರೆ ‘ಮತದ ಕಾರಣಕ್ಕಾಗಿಯೇ ತಮ್ಮ ಮೇಲೆ ಆಕ್ರಮಣ ನಡೆದಿದೆ ಎನ್ನುವುದನ್ನು ಕಾಫಿರರಿಗೆ ತಿಳಿಸಲು ದಾಳಿಯ ಮುನ್ಸೂಚನೆಯನ್ನು ನೀಡಬಹುದು’ ಎಂದು ಹೇಳುತ್ತದೆ (ಜಿಹಾದ್-ಎಂದೂ ಮುಗಿಯದ ಇಸ್ಲಾಮೀ ಯುದ್ಧ ಸಿದ್ಧಾಂತ, ಸುಹಾಸ್ ಮಜುಮದಾರ್) ಷರಿಯತ್‌ನ ಈ ಹೇಳಿಕೆಯ ಆಧಾರದಲ್ಲೇ ನಿಜಾಮರು ವಿಜಯನಗರವನ್ನೂ, ವೊಘಲರು ರಜಪೂತರನ್ನೂ, ಘೋರಿ ಪ್ರಥ್ವಿರಾಜನನ್ನೂ ಸೋಲಿಸಿದ್ದ!
ಧರ್ಮಯುದ್ಧದ ಗುಂಗಲ್ಲಿದ್ದ ಹಿಂದೂ ಅರಸರೆಲ್ಲರೂ ಸೋತಿದ್ದು ನೈತಿಕತೆ ಇಲ್ಲದ ಇದೇ ಷರಿಯತ್ತಿನ ನಿಯಮಗಳಿಗೆ ಬಲಿಯಾಗಿಯೇ. ‘ಕಾಫಿರರ ಸಂಗಡ ಅಸ್ತಿತ್ವದಲ್ಲಿರುವ ಯಾವುದೇ ಶಾಂತಿ ಒಪ್ಪಂದವನ್ನೂ ಅವಶ್ಯವೆನಿಸಿದಲ್ಲಿ ಮುರಿಯಬಹುದು’ ಎಂದೂ ಷರಿಯತ್ ಕಾನೂನು ಹೇಳುತ್ತದೆ. ಪಾಕಿಸ್ತಾನದ ಹುಟ್ಟಿನಿಂದಲೇ ಭಾರತ ಇದನ್ನು ನೋಡುತ್ತ ಬಂದಿದೆ. ಶೃಂಗ ಸಭೆಯಲ್ಲಿ ಕೈ ಕುಲುಕಿ, ಲಾಹೋರ್ ಬಸ್ಸಿಗೆ ಸ್ವಾಗತ ಕೋರಿದ ಕೆಲವೇ ದಿನಗಳಲ್ಲಿ ಕಾರ್ಗಿಲ್‌ನಲ್ಲಿ ಚೂರಿಹಾಕಿದ್ದರ ಹಿಂದೆ ಪಾಕಿಸ್ತಾನಕ್ಕಿದ್ದ ನೈತಿಕ ಬಲ ಷರಿಯತ್ ಒಂದೆ! ಯುದ್ಧದಲ್ಲಿ ಹೀನಾಯವಾಗಿ ಸೋತು, ಗೆದ್ದ ಹಿಂದೂ ರಾಜನನ್ನೇ ಮಾತುಕತೆಗೆ ಕರೆದು ಕತ್ತು ಕುಯ್ದ ಮುಸಲ್ಮಾನ ರಾಜರೆಲ್ಲರೂ ಪಾಲಿಸಿದ್ದು ಇದೇ ಷರಿಯತ್ತಿನ ಇದೇ ನಿಯಮವನ್ನು. ಷರಿಯತ್ ಹಾಗೆ ಹೇಳುವುದರಿಂದ ಭಯೋತ್ಪಾದಕನಾಗಿರಲಿ ಅಥವಾ ಪಾಕಿಸ್ತಾನಿ ಸೈನಿಕನಾಗಿರಲಿ ಅವರ ಯುದ್ಧ ನೀತಿಯಲ್ಲಿ ಯಾವುದೇ ನಾಗರಿಕ ನಿಯಮಗಳಿರುವುದಿಲ್ಲ.
ಇಸ್ಲಾಮಿನ ಪ್ರತೀ ನಡೆ ನುಡಿಯನ್ನು ಯಾವ ಮೃದು ಧೋರಣೆಯೂ ಇಲ್ಲದೆ ಪಾಲಿಸುವ ಷರಿಯತ್ ಅನ್ನು ಭಾರತದಲ್ಲಿ ಲಾಗೂ ಮಾಡಲು ಹೊರಟಿರುವ ಉದ್ದೇಶದ ಬಗ್ಗೆ ಇನ್ನೇನು ಸಂಶಯವಿದೆ?
ಪ್ರತೀ ಜಿಲ್ಲೆಗಳಲ್ಲಿ ಷರಿಯಾ ನ್ಯಾಯಾಲಯಗಳ ಸ್ಥಾಪನೆ ಅರಾಜಕ ಸಮಾಜವೊಂದರ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದಂತೆ. ಸದ್ಯಕ್ಕೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಷರಿಯಾ ಕಾನೂನುಗಳು ವೈಯಕ್ತಿಕ ಕಾನೂನುಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನುತ್ತಿದೆ. ಆದರೆ ಷರಿಯಾ ಕಾನೂನು ವೈಯಕ್ತಿಕವಾಗಿರುವ ಜಾಯಮಾನದವಲ್ಲ. ಅದು ಸಮುದಾಯ ಕೇಂದ್ರಿತ. ಅದರ ಹುಟ್ಟು-ಬೆಳವಣಿಗೆ-ಅನುಷ್ಠಾನ ಎಲ್ಲವೂ ಸಮುದಾಯ ಕೇಂದ್ರಿತವಾಗಿಯೇ ಇದೆ ಎನ್ನುವುದನ್ನು ಷರಿಯತ್ ಬಗ್ಗೆ ವಿಶ್ಲೇಷಿಸುವರಲ್ಲಿ ಬಹುತೇಕರು ಮರೆಯುತ್ತಾರೆ.
ಷರಿಯತ್ ಕೋರ್ಟುಗಳು ಸ್ಥಾಪನೆಯಾಗುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ. ಅಂಥ ಧ್ವನಿಯೊಂದು ಮೊಳಗಿದ್ದು ಶತ್ರುಗಳು ಬಗಲಲ್ಲೇ ತಯಾರಿ ನಡೆಸುತ್ತಿದ್ದಾರೆ ಎಂಬುದರ ಸಂಕೇತ.
ಆಚರಣೆಗಳನ್ನು ಅರಿತರಷ್ಟೇ ಸಾಲದು, ಸಿದ್ಧಾಂತ ಮತ್ತು ಪ್ರವೃತ್ತಿಗಳನ್ನೂ ಅರಿಯಬೇಕು. ಅದನ್ನರಿಯುವವರೆಗೂ ಸುಬಾಹು-ಮಾರೀಚರ ಆಕ್ರಮಣ ಆಗುತ್ತಲೇ ಇರುತ್ತದೆ.
ಸಂತೋಷ ತಮ್ಮಯ್ಯ ಅವರ ಈ ಮೇಲಿನ ಲೇಖನ ತುಂಬಾ ಚೆನ್ನಾಗಿದೆ, ನಿಜವಾದ ವಿಷಯ ಚಿಂತನೆ ಎಂಬುದರಲ್ಲಿ ಅನುಮಾನವೇ ಇಲ್ಲ 🙏🙏