ವಿಷಯದ ವಿವರಗಳಿಗೆ ದಾಟಿರಿ

ಜುಲೈ 17, 2018

ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು?

‍ನಿಲುಮೆ ಮೂಲಕ

-ರಾಕೇಶ್ ಶೆಟ್ಟಿ

‘ಈ ಮೊದಲು, ಕಂಡ ಕಂಡಲ್ಲಿ ನಿದ್ದೆ ಮಾಡುವ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿತ್ತು.ಈಗ ಖರ್ಚಿಫು ಒದ್ದೆ ಮಾಡುವ ಮುಖ್ಯಮಂತ್ರಿಯನ್ನು ಕಾಣುತ್ತಿದೆ.’ ಹೀಗೊಂದು ಜೋಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ನಾನೊಬ್ಬ ಸಾಂದರ್ಭಿಕ ಶಿಶು,ನಾನು ಕರ್ಣ,ನಾನು ವಿಷಕಂಠ… ಹೀಗೆ ಗಂಟೆಗೊಮ್ಮೆ- ಘಳಿಗೆಗೊಮ್ಮೆ ತಮ್ಮನ್ನು ಪೌರಾಣಿಕ ಪಾತ್ರಗಳೊಂದಿಗೆ ಹೋಲಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ತರೇವಾರಿ ಜೋಕುಗಳು ಹರಿದಾಡುತ್ತಿವೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರ ಗಾದಿಯನ್ನು ಪಲ್ಲಟಗೊಳಿಸಿ ಬಿಜೆಪಿಯ ಜೊತೆಗೂಡಿ ೨೦-೨೦ ಒಪ್ಪಂದದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಮೂಲಕ, ರಾಜ್ಯ ರಾಜಕೀಯದಲ್ಲಿ ಒಮ್ಮೆಲೇ ಸ್ಟಾರ್ ಆಗಿ ಹೊರಹೊಮ್ಮಿದವರು ಕುಮಾರಸ್ವಾಮಿಯವರು.ಆಗಿನ ಸಂದರ್ಭದಲ್ಲಿ ಅವರೆಂದೂ ತನ್ನನ್ನು ಹೀಗಿನಂತೆ ‘ಸಾಂದರ್ಭಿಕ ಶಿಶು,ಕರ್ಣ” ಅಂತೆಲ್ಲ ಹೋಲಿಸಿಕೊಂಡು ಕಣ್ಣೀರಿಟ್ಟಿರಲಿಲ್ಲ. ಕಣ್ಣೀರಿಡುವ ಸಂದರ್ಭವೂ ಬಂದಿರಲಿಲ್ಲ.ಯಾಕೆಂದರೆ ಅದು ಒಪ್ಪಿಕೊಂಡು ಆಗಿದ್ದ ಮದುವೆ.ಮದುವೆಯ ನಂತರ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಿನ ಸರ್ಕಾರದಲ್ಲಿ ಬಂದರೂ ತಮ್ಮ ೨೦ ತಿಂಗಳ ಅವಧಿಯನ್ನಂತೂ ಕುಮಾರಸ್ವಾಮಿ ಯಶಸ್ವಿಯಾಗಿಯೇ ದಾಟಿದ್ದರು. ಕೇವಲ ದಾಟಿದ್ದು ಮಾತ್ರವಲ್ಲ,ದಶಕಗಳ ಹಿಂದೆ ಅವರು ನೀಡಿದ ೨೦ ತಿಂಗಳ ಆಳ್ವಿಕೆಯನ್ನೇ ಮೊನ್ನೆ ಮೊನ್ನೆಯ ಚುನಾವಣೆಯಲ್ಲೂ ಅವರ ಪಕ್ಷ ಪ್ರಮುಖವಾಗಿ ಬಿಂಬಿಸಿಕೊಂಡಿತ್ತು. ಮಾತೆತ್ತಿದರೆ ಕುಮಾರಸ್ವಾಮಿಯವರ ೨೦ ತಿಂಗಳಲ್ಲಿ ನೀಡಿದ ಆಡಳಿತವನ್ನು ನೋಡಿ ಜನರು ನಮ್ಮ ಪಕ್ಷಕ್ಕೆ ಮತ ನೀಡಬೇಕು ಎನ್ನುತ್ತಿದ್ದರು. ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದ ೨೦ ತಿಂಗಳ ಆಡಳಿತದಲ್ಲಿ ಗಳಿಸಿಕೊಂಡಿದ್ದ ಅಂತಹ ಹೆಸರನ್ನು, ಕಾಂಗ್ರೆಸ್ ಜೊತೆ ಸೇರಿ ೨ ತಿಂಗಳಲ್ಲೇ ಕಳೆದುಕೊಂಡಿದ್ದಾರೆ ಕುಮಾರಸ್ವಾಮಿಯವರು.ಕಳೆದುಕೊಂಡ ನಂತರ ಕಣ್ಣೀರಿಟ್ಟು ಮಾಧ್ಯಮವನ್ನು,ಜನರನ್ನು ದೂಷಿಸಿದರೆ ಏನು ಪ್ರಯೋಜನ? ಅಸಲಿಗೆ ಕುಮಾರಸ್ವಾಮಿಯವರ ಕಣ್ಣೀರಿಗೆ ಕಾರಣ ಯಾರು ಎಂದು ನೋಡಲಿಕ್ಕೆ ಹೋದರೆ ಖುದ್ದು ಅವರು ಹಾಗೂ ಅವರ ತಂದೆಯವರೇ ಎಂದು ಹೇಳಬೇಕಾಗುತ್ತದೆ.

ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದಾಗ, ನಿಮ್ಮ ಪಕ್ಷದ ಸೆಕ್ಯುಲರಿಸಂ,ಜಾತ್ಯಾತೀತ ನಿಲುವು ಏನಾಯಿತೆಂದು ಪತ್ರಕರ್ತರು ಪ್ರಶ್ನೆ ಕೇಳಿದರೆ, ಸೆಕ್ಯುಲರಿಸಂ ಎಂದರೇನು ಅಂತ ನನಗೆ ಗೊತ್ತಿಲ್ಲ,ಜಾತಿ ನೋಡಿಯೇ ಎಲ್ಲಾ ಪಕ್ಷಗಳು ಟಿಕೇಟ್ ನೀಡುತ್ತಾರೆ ಹೀಗಿರುವಾಗ ಜಾತ್ಯಾತೀತ ಎನ್ನುವುದಕ್ಕೇನು ಅರ್ಥ ಎನ್ನುತ್ತಿದ್ದರು ಕುಮಾರಸ್ವಾಮಿ.ಈಗ, ಕಾಂಗ್ರೆಸ್ಸಿನ ಜೊತೆ ಸೇರಿ ಸರ್ಕಾರವೇಕೆ ಮಾಡಿದಿರಿ ಸ್ವಾಮಿ ಅಂತ ಕೇಳಿ ನೋಡಿ, ಕೋಮುವಾದಿಗಳನ್ನು ದೂರವಿಡಲು,ಸೆಕ್ಯುಲರಿಸಂ ಉಳಿಸಲು ಅಂತೆಲ್ಲಾ ಇದೇ ಕುಮಾರಸ್ವಾಮಿಯವರು ಹೇಳದಿದ್ದರೆ ಕೇಳಿ.ಸೆಕ್ಯುಲರಿಸಂ ಉಳಿಸುವುದೆಲ್ಲಾ ಜನರ ಕಣ್ಣಿಗೆ ಮಂಕುಬೂದಿ ಎರಚುವ ನಾಟಕವಷ್ಟೇ. ಅಸಲಿಗೆ ಕಾಂಗ್ರೆಸ್-ಜೆಡಿಎಸ್ ಇಬ್ಬರೂ ಜೊತೆಗೂಡಿರುವುದು ತಮ್ಮ ತಮ್ಮ ಪಕ್ಷಗಳ ಹಾಗೂ ಪಕ್ಷಗಳ ಅಧ್ಯಕ್ಷರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲಿಕ್ಕಾಗಿ ಮಾತ್ರವೇ ಎನ್ನುವುದು ವಾಸ್ತವ.

ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಘೋಷಿಸಿದ್ದ ಕಾಂಗ್ರೆಸ್ ಮುಕ್ತ ಭಾರತ ಚುನಾವಣಾ ರಣಕಹಳೆ ಉತ್ತರ-ಪಶ್ಚಿಮ-ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಹುತೇಕ ಸಾಕಾರವಾಗಿದೆ. ಇನ್ನು ದಕ್ಷಿಣದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕವೂ ಕಾಂಗ್ರೆಸ್ ಮುಕ್ತವಾಗುವುದರಿಂದ ಸ್ವಲ್ಪದರಲ್ಲೇ ಕೈ ತಪ್ಪಿತು. ಪಂಜಾಬನ್ನು ಬಿಟ್ಟರೆ ಕಾಂಗ್ರೆಸ್ ಪಾಲಿಗೆ ಉಳಿದಿರುವ ಏಕೈಕ ದೊಡ್ಡ ಎಟಿಎಂ ಎಂದರೆ ಅದು ರಾಜ್ಯ ಮಾತ್ರವೇ,ಹೀಗಿರುವಾಗ ಇದನ್ನೂ ಬಿಟ್ಟುಕೊಡಲು ಸಾಧ್ಯವೇ? ಹಾಗಾಗಿಯೇ ಚುನಾವಣೆಯಲ್ಲಿ ಜನರಿಂದ ಹಚಾ ಎಂದು ಓಡಿಸಿಕೊಂಡರೂ, ಮುಖ ಒರೆಸಿಕೊಂಡ ಕಾಂಗ್ರೆಸ್,ಚುನಾವಣಾ ಫಲಿತಾಂಶ ಇನ್ನೂ ಪೂರ್ಣವಾಗಿ ಪ್ರಕಟವಾಗುವ ಮುನ್ನವೇ ಜೆಡಿಎಸ್ ಪಕ್ಷಕ್ಕೆ ನಮ್ಮದು ಬೇಷರತ್ ಬೆಂಬಲ ಎಂದು ಘೋಷಿಸಿತ್ತು. (ಇವತ್ತಿಗೆ ಈ ಬೇಷರತ್ ಬೆಂಬಲ ಎನ್ನುವುದು ಮರೆಯಾಗಿ ಸಿದ್ಧರಾಮಯ್ಯನವರು ದಿನಕ್ಕೊಂದು ಷರತ್ತಿನ ಪತ್ರ ಬರೆಯುತ್ತಿದ್ದಾರೆ ಬಿಡಿ).

ಎಲ್ಲಕ್ಕೂ ಮುಖ್ಯವಾಗಿ ಮುಳುಗುತ್ತಿರುವ ಹಡಗಿನಂತಾಗಿರುವ ಸೆಕ್ಯುಲರಿಸಂ ಎಂಬ ಪರಕೀಯ ರಾಜಕೀಯ ಐಡಿಯಾಲಜಿಯನ್ನಿಟ್ಟುಕೊಂಡು ಹೊಟ್ಟೆಹೊರೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ,ಗಂಜಿಗಿರಾಕಿಗಳಿಗೆ ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಅನಿವಾರ್ಯತೆಯಿತ್ತಲ್ಲ ಅದರಿಂದ ಹುಟ್ಟಿಕೊಂಡ ಸರ್ಕಾರವಿದು. ಇದರ ಆಯಸ್ಸು ಹೆಚ್ಚೆಂದರೆ ಲೋಕಸಭಾ ಚುನಾವಣೆಯವರೆಗೂ ಅಥವಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರದ ಕೆಲವೇ ದಿನಗಳು ಮಾತ್ರವೇ ಎನ್ನುವುದನ್ನು ಹೇಳಲಿಕ್ಕೆ ಯಾವ ಜ್ಯೋತಿಷ್ಯದ ಅಗತ್ಯವೂ ಇಲ್ಲ,ರಾಜಕೀಯದ ಕನಿಷ್ಠ ಜ್ಞಾನವಿದ್ದವರಿಗೂ ಇದು ಅರ್ಥವಾದೀತು. ಈ ಸತ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ,ಶಾಸಕ ಸಿದ್ಧರಾಮಯ್ಯನವರಿಗೂ ಗೊತ್ತಿದೆ.ಆ ಕಾರಣಕ್ಕಾಗಿಯೇ ಇನ್ನು ಒಂದು ವರ್ಷಗಳ ಕಾಲ ಯಾರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿಯವರು ಸಮಾರಂಭವೊಂದರಲ್ಲಿ ಬಹಿರಂಗವಾಗಿ ಹೇಳಿದರೆ, ಈ ಸರ್ಕಾರದ ಆಯಸ್ಸು ಲೋಕಸಭೆ ಚುನಾವಣೆಯವರೆಗೆ ಅಂತ ಸಿದ್ಧರಾಮಯ್ಯ ಖಾಸಗಿ ಮಾತುಕತೆಯಲ್ಲಿ ಹೇಳಿಕೊಳ್ಳುತ್ತಾರೆ.ಈ ಸರ್ಕಾರ ಸದ್ಯಕ್ಕೆ ಉಸಿರಾಡುತ್ತಿರುವುದು ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿಯನ್ನಾಗಿಸಬೇಕು ಎನ್ನುವ ಸೋನಿಯಾ-ಕಾಂಗ್ರೆಸ್ ಪಕ್ಷದ ತಿರುಕನ ಕನಸಿನ ಸಾಕಾರಕ್ಕಾಗಿ ಅಥವಾ ತ್ರಿಶಂಕು ಫಲಿತಾಂಶ ಪ್ರಕಟವಾದರೆ ಉಳಿದೆಲ್ಲಾ ಅವಕಾಶವಾದಿಗಳು ಸೇರಿಕೊಂಡು ಚಿತ್ರಾನ್ನ ಸರ್ಕಾರ ರಚಿಸುವುದಕ್ಕಾಗಿ ಮಾತ್ರವೇ.ಇದೆಲ್ಲಾ ಅರ್ಥವಾಗದಷ್ಟು ಮುಗ್ದರು ಕುಮಾರಸ್ವಾಮಿಯವರೂ ಅಲ್ಲ ಅಥವಾ ಅವರಪ್ಪ ದೇವೇಗೌಡರೂ ಅಲ್ಲ.

ಬಿಜೆಪಿ ಜೊತೆ ಸೇರಿಕೊಂಡು ಕುಮಾರಸ್ವಾಮಿ ಸರ್ಕಾರ ಮಾಡಿದಾಗಿನಿಂದ ಉತ್ತರ ಭಾರತದ ಚಿಳ್ಳೆಪಿಳ್ಳೆ ಸೆಕ್ಯುಲರ್ ಪಕ್ಷಗಳ ನಾಯಕರು ಮತ್ತು ಮುಸ್ಲಿಮರು ಅನುಮಾನದಿಂದ ನೋಡುತ್ತಿದ್ದ ಜೆಡಿಎಸ್ ಪಕ್ಷಕ್ಕೆ ಕೋಮುವಾದಿಗಳ ಜೊತೆ ಕೈ ಜೋಡಿಸಿ ಮೈಲಿಗೆ ಮಾಡಿಸಿಕೊಂಡವರು ಎಂಬ ಅಸ್ಪೃಶ್ಯತೆಯಿಂದ ಹೊರಬರಲಿಕ್ಕೆ ಇದೊಂದು ಉತ್ತಮ ಅವಕಾಶದಂತೆ ಗೌಡರಿಗೆ ಕಂಡಿದ್ದರೆ ಅಚ್ಚರಿಯಿಲ್ಲ.ಎಷ್ಟಾದರೂ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವ ಇರುವೆಡೆಯಲ್ಲೆಲ್ಲ ನೇರಾ-ನೇರ ಹೋರಾಟವಿರುವುದು ಕಾಂಗ್ರೆಸ್ ಮತ ಬ್ಯಾಂಕ್ ಜೊತೆಗೆ ಮಾತ್ರವೇ. ಅದರಲ್ಲೂ ಮುಖ್ಯವಾಗಿ ಹರಿದುಹಂಚಿ ಹೋಗುತ್ತಿದ್ದ ಮುಸ್ಲಿಂ ಮತಗಳನ್ನು ಕಳೆದ ಚುನಾವಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಭದ್ರಮಾಡಿಕೊಂಡಿತ್ತು. ಮುಸ್ಲಿಮರು ಯಾವ ಪರಿ ಒಟ್ಟಾಗಿ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದರು ಎಂದರೇ,ವಾಟ್ಸಾಪ್ ನಂತಹ ಜಾಲತಾಣಗಳಲ್ಲಿ, ಮುಸ್ಲಿಮರ ಮತಗಳು ವಿಭಜನೆಯಾಗದೇ ಕೇವಲ ಕಾಂಗ್ರೆಸ್ಸಿಗೆ ಮಾತ್ರ ಹಾಕಬೇಕು.ಜೆಡಿಎಸ್ಸಿಗೆ ಮತ ನೀಡಬೇಡಿ ಅವರು ಅಧಿಕಾರಕ್ಕೆ ಬರುವುದಿಲ್ಲ.ಒಂದು ವೇಳೆ ಗೆದ್ದರೂ ಅವರು ಕೋಮುವಾದಿ ಬಿಜೆಪಿಯ ಜೊತೆ ಸೇರುತ್ತಾರೆ ಹಾಗಾಗಿ ನಿಮ್ಮ ಮತಗಳನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂಬ ಸಂದೇಶಗಳು ಬರುತ್ತಿದ್ದವು. ನನ್ನ ಜೊತೆ ಸಂಪರ್ಕದಲ್ಲಿರುವ ಇಸ್ಲಾಮಿನ ಗುರುವೊಬ್ಬರೂ ಸಹ ಚುನಾವಣೆ ಸಂಧರ್ಭದಲ್ಲಿ ಇದೇ ರೀತಿಯ ಸಂದೇಶಗಳನ್ನು ಕಳಿಸುತ್ತಿದ್ದರು.(ಈಗ ಅವರೇ ಕುಮಾರಸ್ವಾಮಿಯವರನ್ನು ಸೆಕ್ಯುಲರಿಸಂನ ರಕ್ಷಕ ಎಂದು ಹೊಗಳುತ್ತಿರುತ್ತಾರೆ!),ಗೌಡರ ರಾಜಕೀಯ ಜೀವನದ ನಂತರವೂ ಮಕ್ಕಳು-ಮೊಮ್ಮಕಳ ಸ್ಥಾನ ರಾಜಕೀಯವಾಗಿ ಭದ್ರವಾಗಿರಬೇಕಂದರೆ ಸೆಕ್ಯುಲರ್ ಅವಕಾಶವಾದಿ ಕೋಟೆಯೊಳಗೆ ಪಕ್ಷದ ಬಾವುಟ ಹಾರಿಸುತ್ತಲೇ ಇರಬೇಕಲ್ಲ!

ಅದೂ ಅಲ್ಲದೇ ಹೀಗೆ ೩೦-೪೦ ಸೀಟು ಪಡೆದು ಅಧಿಕಾರಕ್ಕೇರದ ಪಕ್ಷದಲ್ಲಿ ಭವಿಷ್ಯವಿಲ್ಲವೆಂದು ಶಾಸಕರು ವಲಸೆ ಹೋದರೆ ಏದುಸಿರು ಬಿಟ್ಟುಕೊಂಡು ಬದುಕಿರುವ ಪಕ್ಷದ ಗತಿಯೇನಾಗಬೇಕು ಹೇಳಿ? ಈ ಎಲ್ಲಾ ಲೆಕ್ಕಾಚಾರಗಳು ಸೇರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯಾವುದೇ ರೀತಿಯಲ್ಲಿ ನೋಡಿದರೂ ಇದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮಾಡಿಕೊಂಡಿರುವ ಹೊಂದಾಣಿಕೆಯೇ ಹೊರತು ರಾಜ್ಯದ ಜನರೇನು ಇವರಿಗೆ ಕೆಂಪು ಹಾಸಿನ ಸ್ವಾಗತ ಕೋರಿ ಸರ್ಕಾರ ರಚಿಸಲು ಹೇಳಿಲ್ಲ. ಹೀಗಿರುವಾಗ ಕುಮಾರಸ್ವಾಮಿಯವರು ಕಣ್ಣೀರಿಟ್ಟು ಪ್ರಶ್ನಿಸಬೇಕಾಗಿರುವುದು ಯಾರನ್ನು?

ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಸಂಪೂರ್ಣ ಸಾಲಮನ್ನಾದ ಭರವಸೆಯನ್ನೇ ಪ್ರಮುಖವಾಗಿ ನೀಡಿತ್ತು.ಹೋದಕಡೆಯಲ್ಲೆಲ್ಲಾ ಕುಮಾರಸ್ವಾಮಿಯವರು-ದೇವೇಗೌಡರು ಇದನ್ನೇ ಪ್ರಮುಖ ಅಂಶವಾಗಿ ಹೇಳಿಕೊಂಡು ಬಂದಿದ್ದರು. ಹೀಗಾಗಿ ಇವರು ಅಧಿಕಾರ ಚುಕ್ಕಾಣಿ ಹಿಡಿದ ನಂತರ ಸ್ವಾಭಾವಿಕವಾಗಿಯೇ ರೈತರು-ಜನರು ಸಂಪೂರ್ಣ ಸಾಲಮನ್ನಾದ ನಿರೀಕ್ಷೆಯಲ್ಲಿದ್ದರು.ಆದರೆ ಕುಮಾರಸ್ವಾಮಿಯವರು ಮಾಡಿದ್ದೇನು? ತಾನು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ,ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದರು ಆ ಮೂಲಕ ಖುದ್ದು ಅವರೇ ತಾವು ಕರ್ನಾಟಕದ ಮುಖ್ಯಮಂತ್ರಿಯಲ್ಲ,ಕಾಂಗ್ರೆಸ್ ಬೆಂಬಲಿತ ಮುಖ್ಯಮಂತ್ರಿ ಎಂದು ಹೇಳಿಕೊಂಡರು.ಕಾಂಗ್ರೆಸ್ಸಿನ ಮುಲಾಜಿನಲ್ಲಿ ಬೀಳಲು ಇವರಿಗೆ ಜನತೆ ಹೇಳಿದ್ದರೇ? ಜನರು ಇವರಿಗೆ ಕೊಟ್ಟಿದ್ದು ಮೂರನೇ ಸ್ಥಾನವನ್ನು.ಈಗ ಕಣ್ಣೀರು ಸುರಿಸುವ ಬದಲಿಗೆ ಯಾರ ಮುಲಾಜಿಗೂ ಸಿಗದಂತೆ ಕುಮಾರಸ್ವಾಮಿಯವರಿಗೆ ಕೂರಲು ಆಗಲಿಲ್ಲವೇ? ಹಿಂದಿನ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಕುಲಗೆಡಿಸಿ ಹೋಗಿದೆ,ಇಂತಹ ಸಂಧರ್ಭರಲ್ಲಿ ಅಧಿಕಾರಕ್ಕೇರಿದರೇ, ಸಂಪೂರ್ಣ ಸಾಲಮನ್ನಾ ಮಾಡುವುದು ಸಾಧ್ಯವಿಲ್ಲ ಎನ್ನುವ ವಾಸ್ತವದ ಅರಿವಿದ್ದು ಅಧಿಕಾರದ ಮಂಚ ಏರಿದ್ದೇಕೆ? ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡು ಈಗ ನನ್ನ ಮೇಲೆ ಕರುಣೆಯಿಡಿ,ನಾನು ವಿಷಕುಡಿದು ಅಮೃತ ನೀಡುತ್ತೇನೆ ಎಂದೆಲ್ಲಾ ಭಾವನಾತ್ಮಕವಾಗಿ ಮಾತನಾಡುವುದರಿಂದ ಏನು ಸಾಧಿಸಲು ಹೊರಟಿದ್ದಾರೆ? ವಿರೋಧಪಕ್ಷ ಬಿಜೆಪಿಯವರನ್ನು ಬಿಡಿ,ಖುದ್ದು ಮಿತ್ರ ಪಕ್ಷ ಕಾಂಗ್ರೆಸ್ಸಿನ ನಾಯಕರೇ ಕುಮಾರಸ್ವಾಮಿಯವರ ಕಣ್ಣೀರನ್ನು ಗೇಲಿ ಮಾಡುತ್ತಿದ್ದಾರೆ.

ಕುಮಾರಸ್ವಾಮಿಯವರ ಇಂತಹ ಹೇಳಿಕೆಯಿಂದ, ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಕೆಟ್ಟ ಹೆಸರು ಬರುತ್ತದೆಯೆಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸಹ ಕುಮಾರಸ್ವಾಮಿಯವರು ಕಣ್ಣೀರು ಹಾಕಬಾರದಿತ್ತು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಶಾಸಕ ಸುಧಾಕರ್ ಅವರಂತೂ ಕೇವಲ ೩೭ ಸೀಟು ಗೆದ್ದವರನ್ನು ನಾವು ಮುಖ್ಯಮಂತ್ರಿ ಮಾಡಿದ್ದೇವೆ,ಅಳುವ ಬದಲು ಜನರ ಕಣ್ಣೀರು ಒರೆಸಿ ಎಂದು ಉಪದೇಶ ನೀಡಿದ್ದಾರೆ. ಇನ್ನು ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಂತೂ ಸಮ್ಮಿಶ್ರ ಸರ್ಕಾರ ನಡೆಸಲು ಧಮ್ ಬೇಕು ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.ಅಷ್ಟು ಮಾತ್ರವಲ್ಲ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಸಹಿಸಿಕೊಳ್ಳುವಂತೆ ಬುದ್ಧಿಮಾತನ್ನೂ ಹೇಳಿದ್ದಾರೆ. ರಾಹುಲ್ ಪ್ರಧಾನಿಯಾಗಲು ಕುಮಾರಸ್ವಾಮಿಯವರು ಸಹಿಸಿಕೊಳ್ಳಬೇಕಂತೆ! ಆರಂಭದ ಎರಡು ತಿಂಗಳಲ್ಲೇ ಇಷ್ಟೆಲ್ಲಾ ನಾಟಕಗಳು ನಡೆಯುತ್ತಿವೆ,ಇನ್ನು ಲೋಕಸಭಾ ಚುನಾವಣೆ ಮುಗಿಯುವುದರೊಳಗೆ ಕರ್ಣಾಟಕ (ಕರ್ಣನ+ ನಾಟಕ) ಇನ್ನು ಏನೇನು ನೋಡಲಿಕ್ಕಿದೆಯೋ?

ತಾವು ಅಧಿಕಾರಕ್ಕೆ ಅಂಟಿಕೊಂಡಿರುವುದರಿಂದಲೇ ಹೀಗೆಲ್ಲ ಮಾತಕೇಳಬೇಕಾಗಿ ಬಂದಿರುವುದು ಎನ್ನುವುದನ್ನು ಕುಮಾರಸ್ವಾಮಿಯವರು ಅರ್ಥಮಾಡಿಕೊಳ್ಳಲಿ.ಜನರಾಗಲಿ-ಮಾಧ್ಯಮದ ಮಂದಿಯಾಗಲಿ ಅವರಿಂದೇನೂ ಇಂದ್ರ ಲೋಕದ ಸೃಷ್ಠಿಯ ಬೇಡಿಕೆಯಿಟ್ಟಿಲ್ಲ, ಅವರದೇ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳನ್ನು ಈಡೇರಿಸಿ ಎಂದು ಕೇಳುತ್ತಿದ್ದಾರಷ್ಟೇ. ಈಡೇರಿಸಲು ರಾಜ್ಯದ ಹಣಕಾಸು ಸ್ಥಿತಿಗತಿಯನ್ನು ಹಿಂದಿನ ಸಿದ್ಧರಾಮಯ್ಯ ಸರ್ಕಾರ ಕೆಡಿಸಿ ಹೋಗಿದೆ ಎನ್ನುವುದಾದರೆ ಆ ವಾಸ್ತವವನ್ನಾದರೂ ಜನರ ಮುಂದೆ ಹೇಳಿ ಇನ್ನೊಂದಿಷ್ಟು ಟೈಮು ಪಡೆದುಕೊಳ್ಳಲಿ.ಅದನ್ನು ಬಿಟ್ಟು ಜನರನ್ನೇ ದೂರಿದರೆ ಕೇಳಲಿಲ್ಲ ಜನರೇನು ಕುಮಾರಸ್ವಾಮಿಯವರ ಹಂಗಿನಲ್ಲಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಕುಮಾರಸ್ವಾಮಿಯವರ ಕಣ್ಣೀರಿಗೆ ಅವರೇ ಹೊಣೆಗಾರರು,ಹೆಚ್ಚೆಂದರೆ ಅರ್ಧಪಾಲನ್ನು ದೇವೇಗೌಡರಿಗೆ ಕೊಡಬಹುದು.ರಾಜ್ಯದ ಜನತೆಗಲ್ಲ…

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments