ಹಿಟ್ಲರನ ಗೊಬೆಲ್ಸ್ ಮತ್ತು ಕಾಂಗ್ರೆಸ್ಸಿನ ರಾಹುಲ್
– ರಾಕೇಶ್ ಶೆಟ್ಟಿ
ಮೆಗಾಸೀರಿಯಲ್ಲುಗಳನ್ನೂ ಮೀರಿಸುವಷ್ಟು ಬೋರ್ ಹೊಡೆಸುವಂತಹ ಬಹಳಷ್ಟು ಕಾಮಿಡಿ ಶೋಗಳು ಈಗ ವಿವಿಧ ಚಾನೆಲ್ಲುಗಳಲ್ಲಿ ಬರುತ್ತವೆ. ಈ ಕಾಮಿಡಿ ಶೋಗಳಲ್ಲಿ ಮಾಡುವ ಕಾಮಿಡಿಗೆ,ಕಾರ್ಯಕ್ರಮದ ಪೇಯ್ಡ್ ತೀರ್ಪುಗಾರರು,ಸ್ಪರ್ಧಿಗಳು ಹಾಗೂ ಸ್ಟುಡಿಯೋದಲ್ಲಿ ಕುಳಿತವರನ್ನು ಹೊರತುಪಡಿಸಿ, ಟಿವಿಯಲ್ಲಿ ಇವರ ಕಾಮಿಡಿ ನೋಡುವ ಪ್ರೇಕ್ಷಕರ ಮುಖದಲ್ಲಿ ನಗು ಬಾರದಿರುವುದು,ಈ ಕಾಮಿಡಿ ಶೋಗಳ ಸ್ಪೆಷಾಲಿಟಿ.ಕಳೆದ ಶುಕ್ರವಾರ, ಚಾನೆಲ್ಲುಗಳಲ್ಲಿನ ಇಂತಹ ಕಳಪೆ ಕಾಮಿಡಿ ಶೋಗಳು ಟಿಆರ್ಪಿ ಕಳೆದುಕೊಂಡಿದ್ದವು.ಅಸಲಿ ಕಾಮಿಡಿಯೆಂದರೇನು ಎನ್ನುವುದನ್ನು ಲೋಕಸಸಭಾ ಚಾನೆಲ್ಲಿನಲ್ಲಿ ಶ್ರೀಮಾನ್ ರಾಹುಲ್ ಗಾಂಧಿಯವರು ತಮ್ಮ ಭಾಷಣದ ಮೂಲಕ ತೋರಿಸುತ್ತಿದ್ದರು. ನಕಲಿ ಅಪ್ಪುಗೆ-ಕ್ಲಾಸ್ ರೂಮಿನ ಪಡ್ಡೆ ಹುಡುಗನಂತೆ ಕಣ್ಣು ಹೊಡೆಯುವ ಚೇಷ್ಟೆಗಳೆಲ್ಲ ಬಹುಶಃ ಲೋಕಸಭಾ ಚಾನೆಲ್ಲಿನಲ್ಲೂ ಮೊದಲಬಾರಿಗೆ ಕಂಡ ದೃಶ್ಯಗಳು. ಗಂಜಿಗಿರಾಕಿಗಳು ಬರೆದುಕೊಟ್ಟ ನಾಟಕೀಯ ಸ್ಕ್ರಿಪ್ಟ್ ಮೂಲಕ ಜನರಲ್ಲಿ ನಗುಬುಗ್ಗೆ ಹರಿಸಿದ್ದೇ ರಾಹುಲ್ ಹೆಚ್ಚುಗಾರಿಕೆ.
ಲೋಕಸಭೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧ, ಒಂದು ಕಾಲದ ಮಿತ್ರ ಪಕ್ಷ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ,ಸಂಸದ ರಾಹುಲ್ ಗಾಂಧೀ ಹೆಚ್ಚು ಕಡಿಮೆ ಒಂದುಗಂಟೆಗಳ ಕಾಲ ಮಾತನಾಡಿದರು. ರಾಜಕೀಯಕ್ಕೆ ಬಂದು ೧೩ ವರ್ಷಗಳಾದ ನಂತರ ಬರೆದುಕೊಟ್ಟ ಭಾಷಣವನ್ನು ಓದಿಕೊಂಡು ತುಸು ಗಂಭೀರವಾಗಿ ಅವರು ಮಾತನಾಡಿದ್ದು ಬಹುಶಃ ಇದೇ ಮೊದಲು. ಆತ ಮಾತನಾಡುವ ಶೈಲಿ ಬದಲಾಗಿದೆ,ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸದ ಕೊರತೆಯನ್ನು ದನಿಯನ್ನು ಬದಲಿಸಿಕೊಳ್ಳುವ ಮತ್ತು ಆಕ್ರಾಮಕ ಶೈಲಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುವಂತೆ ತೋರಿತು and Ofcourse ರಾಹುಲ್ ಭಾಷಣವೆಂದ ಮೇಲೆ ಇರಲೇಬೇಕಿದ್ದ ತಪ್ಪುಗಳು ಅಲ್ಲಿದ್ದವು. ಆದರೆ ಒಂದುಗಂಟೆಯ ಕಾಲದ ಈ ಭಾಷಣ ಅದೇ ತಲೆಮಾಸಿದ ಹಳಸಲು ಸುಳ್ಳಿನ ಕಂತೆಗಳಲ್ಲದೇ ಅದರಲ್ಲೇನು ವಿಷಯ ಇರಲಿಲ್ಲ.ಅದೂ ಈ ಮೊದಲಿನಿಂದಲೂ ರಾಹುಲ್ ಮತ್ತವರ ಕಾಂಗ್ರೆಸ್ ಪಕ್ಷ ಹೋದಲ್ಲಿ ಬಂದಲ್ಲಿ ನರೇಂದ್ರ ಮೋದಿವಯವರ ವಿರುದ್ಧ ಮಾಡುತ್ತಿರುವ ಸುಳ್ಳು ಆಪಾದನೆಗಳ ದೋಷಾರೋಪಣ ಪಟ್ಟಿಯನ್ನೇ ರಾಹುಲ್ ಮತ್ತೆ ಲೋಕಸಭೆಯಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಿಸಿದರೇ ಹೊರತು ಅದರಲ್ಲಿ ನಯಾ ಪೈಸೆಯ ಹೊಸತನವಾಗಲಿ, ವೈಚಾರಿಕತೆಯಾಗಲಿ,ಸತ್ಯವಾಗಲಿ ಇರಲೇ ಇಲ್ಲ.ಕೆಲವು ದಿನಗಳ ಹಿಂದಿನ ಅಂಕಣದಲ್ಲಿ ‘ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು” ಅಂತೊಂದು ಅಂಕಣವನ್ನು ಬರೆದಿದ್ದೆ. ಮೊನ್ನೆಯ ರಾಹುಲ್ ಭಾಷಣ ಕೇಳಿದ ನಂತರ ಈ ಗೊಬೆಲ್ಸ್ ತಂತ್ರವೇ ಕಾಂಗ್ರೆಸ್ಸಿನ ಚುನಾವಣಾ ಸ್ಟಾಟರ್ಜಿಯೆಂದು ಎಂದು ಊಹಿಸಬಹುದು.
‘ಸುಳ್ಳನ್ನೇ ಪದೇ ಪದೇ ಜನರ ಕಿವಿಗೆ ಬೀಳುವಂತೆ ಬೊಬ್ಬೆ ಹೊಡೆಯುತ್ತಾ ಹೋದರೆ ಅದೇ ಸತ್ಯವಾಗುತ್ತ ಹೋಗುತ್ತದೆ’ ಎನ್ನುವುದು ಹಿಟ್ಲರ್ ಸರ್ಕಾರದಲ್ಲಿ Public Enlightenment & Propaganda ಸಚಿವನಾಗಿದ್ದ ಗೊಬೆಲ್ಸ್ ಹೇಳಿದ್ದನೆಂಬ ಮಾತು.ಈ ಮಾತನ್ನು ಗೊಬೆಲ್ಸ್ ಹೇಳಿದ್ದನೋ ಇಲ್ಲವೋ,ಆದರೆ ಈ ಮಾತು ಪ್ರಾಕ್ಟಿಕಲಿ ಸತ್ಯವಂತೂ ಹೌದು.ಬೇಕಿದ್ದರೆ ಗೊಬೆಲ್ಸ್ ಹೇಳಿಕೊಟ್ಟ ಈ ಸೂತ್ರವನ್ನು ಬಳಸುತ್ತಿರುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯ ಭಾಷಣವನ್ನೇ ಮತ್ತೊಮ್ಮೆ ನೋಡಿ.ಲೋಕ ಸಭೆಯಲ್ಲಿ ಮಾತನಾಡುತ್ತ ರಾಹುಲ್,ಚುನಾವಣೆಯ ಸಂದರ್ಭದಲ್ಲಿ ಮೋದಿ ಪ್ರತಿಯೊಬ್ಬರ ಅಕೌಂಟಿಗೂ ೧೫ ಲಕ್ಷ ಹಾಕುತ್ತೇನೆ ಎಂದಿದ್ದರು,ಆದರೆ ಇನ್ನೂ ಹಾಕಿಲ್ಲ ಎಂದರು. ಆದರೆ ನಿಜವೇನೆಂದರೇ, ಅಂದಿನ ಭಾಷಣದಲ್ಲಿ ಮೋದಿ ಹೇಳಿದ್ದು ‘ಲೂಟಿಕೋರ-ಕಳ್ಳರು ವಿದೇಶದ ಬ್ಯಾಂಕುಗಳಲ್ಲಿ ಎಷ್ಟು ಪ್ರಮಾಣದ ಕಪ್ಪು ಹಣವಿಟ್ಟಿದ್ದಾರೆಂದರೆ,ಅದನ್ನು ವಾಪಸ್ ತಂದರೆ ಭಾರತದ ಪ್ರತಿ ಬಡವನಿಗೆ ೧೫ ಲಕ್ಷದಷ್ಟು ಹಣವನ್ನು ಉಚಿತವಾಗಿ ಕೊಡುವಷ್ಟಿದೆ’ ಎಂದಷ್ಟೇ ಹೊರತು, ಪ್ರತಿಯೊಬ್ಬರ ಅಕೌಂಟಿಗೆ ೧೫ ಲಕ್ಷ ಹಾಕುತ್ತೇನೆ ಎಂದಲ್ಲವಲ್ಲ.ಈ ಸತ್ಯ ರಾಹುಲ್ ಎಂಬ ಕಾಂಗ್ರೆಸ್ ಗೊಬೆಲ್ಸ್ ಗೆ ಗೊತ್ತಿಲ್ಲದ್ದೇನಲ್ಲ. ಪದೇ ಪದೇ ಸುಳ್ಳನ್ನು ಹೇಳಬೇಕು ಎನ್ನುವ ಗೊಬೆಲ್ಸ್ ಸೂತ್ರವನ್ನು ರಾಹುಲ್ ಮತ್ತವರ,ಕಾಂಗ್ರೆಸ್ ಪಾಲಿಸುತ್ತಿದೆ ಮತ್ತು ಆ ಮೂಲಕ ಜನರಲ್ಲಿ ಇಂತಹದ್ದೊಂದು ಪ್ರಶ್ನೆ ಮೂಡುವಂತೆ ಮಾಡುತ್ತಿದೆ.
ಗೊಬೆಲ್ಸ್ ತಂತ್ರವನ್ನು ದೇಶದ ಆಂತರಿಕ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ರಾಹುಲ್ ಎಂದುಕೊಳ್ಳೋಣವೆಂದರೇ, ಹೆಂಡ ಕುಡಿದ ಮಂಗನಂತಾಡುತ್ತ,ಸದನದಲ್ಲೇ ಸುಳ್ಳು ಹೇಳಲು ನಿಂತ ರಾಹುಲ್,”ರಾಫೆಲ್ ಯುದ್ಧ ವಿಮಾನದ ಖರೀದಿಯ ವೆಚ್ಚ ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಹೆಚ್ಚಾಗಿದೆ.ಒಂದೊಂದು ವಿಮಾನಕ್ಕೆ ಎಷ್ಟು ಮೊತ್ತವಾಗಿದೆ ಎನ್ನುವುದನ್ನು ಬಹಿರಂಗಪಡಿಸಿ ಎಂದರೇ, ಮೋದಿ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಕಡೆ ಕೈ ತೋರಿಸಿ ಸುಮ್ಮನಾಗುತ್ತಿದೆ.ನಾನು ಫ್ರಾನ್ಸ್ ಅಧ್ಯಕ್ಷರ ಜೊತೆ ಈ ಕುರಿತು ಮಾತನಾಡಿದಾಗ,ಅವರು ಈ ರೀತಿಯ ಯಾವುದೇ ಒಪ್ಪಂದವಿಲ್ಲ,ನಿಮ್ಮ ಸರ್ಕಾರ ಮೊತ್ತವನ್ನು ಬಹಿರಂಗ ಪಡಿಸಬಹುದು ಎಂದಿದ್ದಾರೆ” ಎಂದರು ರಾಹುಲ್. ವಾಸ್ತವದಲ್ಲಿ,೨೦೦೮ರ ಯುಪಿಎ ಸರ್ಕಾರದ ಅವಧಿಯಲ್ಲೇ ಭಾರತ-ಫ್ರಾನ್ಸ್ ಸರ್ಕಾರಗಳು ಮಾಡಿಕೊಂಡಿರುವ ಒಪ್ಪಂದದ ಅನ್ವಯವಾಗಿ, ವಿಮಾನ ಖರೀದಿಯ ಮೊತ್ತ ಕ್ಲಾಸಿಫೈಡ್ ವಿಷಯವಾಗಿದೆ.ಅದು ಎರಡೂ ಸರ್ಕಾರಗಳು ವ್ಯಾವಹಾರಿಕವಾಗಿ ಒಪ್ಪಿಕೊಂಡು ಮಾಡಿಕೊಂಡಿರುವ ಒಪ್ಪಂದ.ಇದಕ್ಕೆ ಸಹಿ ಹಾಕಿರುವುದು ಆಗಿನ ರಕ್ಷಣಾ ಸಚಿವರಾಗಿದ್ದ ಕಾಂಗ್ರೆಸ್ಸಿನ ಎ.ಕೆ ಆಂಟನಿ ಎಂದು ಈಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿಗೆ ಸದನದಲ್ಲೇ ತಿರುಗೇಟು ನೀಡಿದ್ದಾರೆ.ಸಂಜೆಯ ವೇಳೆಗೆ ಫ್ರಾನ್ಸ್ ಸರ್ಕಾರ ಕೂಡ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ “ನಮ್ಮ ಅಧ್ಯಕ್ಷರು ಈ ವಿಮಾನಗಳ ಖರೀದಿಯ ಮೊತ್ತದ ಬಗ್ಗೆ ಏನು ಹೇಳಿಲ್ಲ,ಇದು ಎರಡು ದೇಶಗಳ ನಡುವಿನ ರಹಸ್ಯ ಒಪ್ಪಂದ ಎಂದಿದೆ.”
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ್ದು ಅದೆಂತಹ ಬೇಜವಾಬ್ದಾರಿ ಮತ್ತು ಅಪಾಯಕಾರಿ ನಡೆ ನೋಡಿ.ಈ ಮನುಷ್ಯನ ರಾಜಕೀಯ ಬೆಲೆ ಬೇಯಿಸಿಕೊಳ್ಳುವ ಒಂದು ಲೂಸ್ ಹೇಳಿಕೆಗಾಗಿ ಎರಡು ದೇಶದ ಸರ್ಕಾರಗಳು ಸ್ಪಷ್ಟಿಕರಣ ನೀಡಬೇಕಾಗಿ ಬಂತು.ರಾಫೆಲ್ ಯುದ್ಧ ವಿಮಾನಗಳು ಭಾರತದ ವಾಯುಸೇನೆಯ ಶಕ್ತಿವೃದ್ಧಿ ಅತ್ಯಗತ್ಯವಾಗಿ ಬೇಕಾಗಿರುವಂತವು ಮತ್ತು ಅತಿ ತುರ್ತಾಗಿ ಬೇಕಾಗಿರುವಂತವು. ಹಾಗಾಗಿಯೇ, ಮೇಕ್ ಇನ್ ಇಂಡಿಯಾ ಯೋಜನೆಯಡಿ ಇವುಗಳನ್ನು ಉತ್ಪಾದನೆಗೆ ಕೊಳ್ಳುವ ಮುನ್ನವೇ,ಬಳಕೆಗೆ ತಯಾರಾಗಿರುವ ೩೬ ಯುದ್ಧ ಸರ್ಕಾರ ಮೊದಲ ಹಂತದಲ್ಲಿ ತುರ್ತಾಗಿ ಖರೀದಿಸಲು ಹೊರಟಿದೆ.ಕಾಂಗ್ರೆಸ್ ಸರ್ಕಾರಗಳು ತನ್ನ ಐವತ್ತು ವರ್ಷಗಳ ಆಡಳಿತವೆಂಬ ಬೇಜವಾಬ್ದಾರಿ ಪರ್ವದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಸ್ವಾವಲಂಬಿಯಾಗದೇ ಇದ್ದದ್ದೇ ಇದಕ್ಕೆಲ್ಲಾ ಮೂಲ ಕಾರಣ.ಅಂತಹ ಮೂಲ ಕಾರಣವನ್ನು ಮರೆಮಾಚಿ ದೇಶದ ಭದ್ರತೆಯಂತ ಸೂಕ್ಷ್ಮ ವಿಷಯದಲ್ಲಿ ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ ದೇಸಿ ಗೊಬೆಲ್ಸ್ ರಾಹುಲ್.
ಇದೇ ರೀತಿಯ ಮತ್ತೊಂದು ಬೇಜವಾಬ್ದಾರಿ ಹೇಳಿಕೆ ಬಂದಿದ್ದು ಚೀನಾ ಪ್ರವಾಸದ ಕುರಿತು. ದೋಖ್ಲಾಂನಲ್ಲಿ ನಮ್ಮ ಸೈನ್ಯ ಚೀನಿ ಸೈನ್ಯದ ಎದುರು ನಿಂತಿದ್ದರು. ಆದರೆ ಮೋದಿಯವರು ಚೀನಾ ಪ್ರವಾಸ ಮಾಡುತ್ತಾರೆ ಎನ್ನುತ್ತಾರೆ ರಾಹುಲ್.ಇದೆಂತ ಅವಿವೇಕತನದ ಮಾತು?ಇಂತಹ ವ್ಯಕ್ತಿ ದೇಶದ ಪ್ರಧಾನಿ ಅಭ್ಯರ್ಥಿಯಾಗುವುದು ಹೇಗೆ ಎನ್ನುವುದೇ ಆಶ್ಚರ್ಯವಾಗುತ್ತದೆ. ಅದೇ ದೋಖ್ಲಾಂ ಮುಖಾಮುಖಿಯ ವೇಳೆ ಕದ್ದುಮುಚ್ಚಿ ಚೀನಿ ರಾಯಭಾರಿಯನ್ನು ಭೇಟಿಯಾಗಿದ್ದು ಇದೆ ರಾಹುಲ್ ಗಾಂಧೀ. ಮುಚ್ಚಿಡುವಂತಹದ್ದು ಏನೂ ಇರಲಿಲ್ಲವಾದರೆ ಕದ್ದು ಭೇಟಿಯಾಗಿದ್ದೇಕೆ ರಾಹುಲ್? ಭೇಟಿಯಾಗಿದ್ದನ್ನು ಮುಚ್ಚಿಟ್ಟಿದ್ದು,ಆಗಿಯೇ ಇಲ್ಲ ಎಂದು ವಾದಿಸಿದ್ದೇಕೆ? ಇಂತಹ ಇತಿಹಾಸ ಇರುವ ವ್ಯಕ್ತಿಯಿಂದ ಪ್ರಧಾನಿಯವರಿಗೆ ಪಾಠ ಬೇರೆ.ಇಲ್ಲೂ ಇಣುಕುವುದು ಮತ್ತದೇಗೊಬೆಲ್ಸ್ ತಂತ್ರಗಾರಿಕೆಯೇ . ಸಮಸ್ಯೆ ಏನೇಂದರೆ,ಕಾಂಗ್ರೆಸ್ ಎಂತಹ ಹತಾಶ ಪರಿಸ್ಥಿತಿಯನ್ನು ಮುಟ್ಟಿದೆಯೆಂದರೇ,ಮತ್ತೆ ಅಧಿಕಾರ ಹಿಡಿಯಲು ಅದು ದೇಶದ ಗೌರವ,ಭದ್ರತೆ,ದೇಶದ ಸೈನಿಕರ ಗೌರವವನ್ನು ಮಣ್ಣುಪಾಲು ಮಾಡಲು ತಯಾರಾಗಿ ನಿಂತಿದೆ. ಇವೆಲ್ಲದರ ಸಮಾಧಿಯ ಮೇಲಾದರೂ ಸರಿಯೇ ರಾಹುಲನನ್ನು ಪ್ರಧಾನಿ ಮಾಡಬೇಕು ಆ ಮೂಲಕ ಗಂಜಿಕೇಂದ್ರವನ್ನು ಗಟ್ಟಿಮಾಡಬೇಕು ಎನ್ನುವುದೇ ಇವರ ಏಕೈಕ ಕನಸು.
ಈ ಕನಸು ನನಸಾಗಿಸಲೆಂದೇ ನಿರಂತರ ಸುಳ್ಳಿನ ಸರಮಾಲೆಗಳನ್ನು ಪೋಣಿಸಲಾಗುತ್ತಿದೆ,ಪೊಳ್ಳು ಅಭದ್ರತೆ,ಭಯ-ಭೀತಿಯ ವಾತಾವರಣದ ಸ್ಕ್ರಿಪ್ಟ್ ಬರೆಯಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆಯೂ ಇಲ್ಲದಿರುವುದರಿಂದ, ಇಲ್ಲದೆ ಇರುವುದನ್ನು ಇದೆಯೆನ್ನಲಿಕ್ಕಾಗಿ ಸುಖಾಸುಮ್ಮನೆ ರಾಫೆಲ್ ಡಿಲನ್ನು ಕೆದಕಿ ಜನರಲ್ಲಿ ಗೊಂದಲ ಮೂಡಿಸುವ ಯತ್ನ ನಡೆಸಲಾಗುತ್ತಿದೆ. ಇಂತಹ ಮನೆಹಾಳು ಕೆಲಸವನ್ನುಮಾಡಿಕೊಂಡೇ ಅವರ ಮುತ್ತಜ್ಜನ ಕಾಲದಿಂದಲೂ ಈ ದೇಶದ ಜನರನ್ನು ಯಾಮಾರಿಸಿಕೊಂಡು ಬಂದ ಪಕ್ಷವಿಲ್ಲವೇ ಇವರದ್ದು.ಗೊಬೆಲ್ಸ್ ಮುಖವಾಡದಲ್ಲಿ ರಾಹುಲ್ ಮಾಡುತ್ತಿರುವ ಸುಳ್ಳು-ಹೇಟ್ ಕ್ಯಾಮ್ಪೆನ್ ಗಳು ಒಂದು ಕಡೆ ಮೋದಿ ಸರ್ಕಾರಕ್ಕೆ ೨೦೧೯ರ ಚುನಾವಣೆಯ ಸವಾಲಾದರೆ,ನಿಜವಾದ ಸವಾಲಿರುವುದು ತನ್ನದೇ ಪಕ್ಷದ ಸಂಸದರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನಸಾಮನ್ಯರಿಗೆ ತಲುಪಿಸುತ್ತಿಲ್ಲ ಎನ್ನುವುದು.ರಾಹುಲ್ ಸುಳ್ಳನ್ನೆನೋ ಸತ್ಯ ಮುಂದಿಟ್ಟು ಪುಡಿಗಟ್ಟಬಹುದು.ಆದರೆ ಸರ್ಕಾರ ೪ ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಸಮಾಜದ ಕಟ್ಟಕಡೆಯ ಜನರ ಬಳಿಗೆ ಕೊಂಡೊಯ್ಯುವ ಕುರಿತು ಬಿಜೆಪಿಯ ಸಂಸದರು ಏನು ಮಾಡುತ್ತಿದ್ದಾರೆ? ಸಂಪರ್ಕ್ ಸೇ ಸಮರ್ಥನ್ ಎನ್ನುವ ಅಭಿಯಾನದ ಮೂಲಕ ವಿವಿಧ ರಂಗದ ಮುಖಂಡರನ್ನು ಭೇಟಿ ಮಾಡಿ ಸರ್ಕಾರದ ಸಾಧನೆಯನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿಯೇನೋ ಮಾಡುತ್ತಿದೆ,ಆದರೆ ಸಂಸದರಿಗೆ ತನ್ನ ಕ್ಷೇತ್ರದ ಪ್ರತಿ ಬೂತಿಗೂ ಮೋದಿ ಸರ್ಕಾರದ ಸಾಧನೆಗಳನ್ನು ಮುಟ್ಟಿಸಬೇಕು ಎನ್ನಿಸುತ್ತಿಲ್ಲವೇ? ಮೋದಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಲಿಕ್ಕೆ ಇದು ೨೦೧೪ ಅಲ್ಲ ೨೦೧೯. Ofcourse ಜನರಿಗೆ ಮೋದಿಯವರ ಮೇಲೆ ಈಗಲೂ ಅಷ್ಟೇ ನಂಬಿಕೆಯಿದೆ.ಹಾಗೆಂದು ಜನರ ನಂಬಿಕೆಯನ್ನು Taken for Granted ಎಂಬಂತೆಯೂ ತೆಗೆದುಕೊಳ್ಳಬಾರದು ನೋಡಿ.
ಗೊಬೆಲ್ಸ್ ಮುಖವಾಡ ತೊಟ್ಟಿರುವ ರಾಹುಲನ ಕಾಂಗ್ರೆಸ್ ಮತ್ತು ಉಳಿದ ಗಂಜಿಗಿರಾಕಿ ಪಕ್ಷಗಳ ಫೇಕ್-ಹೇಟ್ ಕ್ಯಾಮ್ಪೆನಿಗೆ ಎದುರುತ್ತರ ಕೊಡುವುದಕ್ಕಿಂತ ಮುಖ್ಯವಾದದ್ದು ಮೋದಿಯವರ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕಾದದ್ದು. ಅದು ಆದಾಗಷ್ಟೇ ‘ಪುಕಾರ್ ದಿಲ್ ಸೇ – ನಮೋ ಫಿರ್ ಸೇ’ ಸಾಧ್ಯವಾಗುವುದು. ಬಿಜೆಪಿಯ ಸಂಸದರಿಗೆ ಇದು ಅರ್ಥವಾಗುತ್ತದೆಯೇ?