ವಿಷಯದ ವಿವರಗಳಿಗೆ ದಾಟಿರಿ

ಜುಲೈ 26, 2018

ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಂಜೆ

ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ  ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು.  ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ.  ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ  ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ  ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ  ಕಲಿತ ಪಾಠವೇನು.? ಬನ್ನಿ ತಿಳಿಯೋಣ.

ಸಾಮಾನ್ಯವಾಗಿ  ಯುದ್ಧ‌ವನ್ನು ಗೆಲ್ಲಬೇಕಾದರೆ  ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ  ಬೇಕಾಗಿರುವ ಸೈನ್ಯದ ಸಂಖ್ಯೆ  ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ  ಬಗ್ಗೆ ಇದ್ದ ಮಾಹಿತಿ.

ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ  ಬಗ್ಗೆ ಮಾಹಿತಿ  ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ  ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ  ಭಾರತೀಯ ಸೈನ್ಯದ ಓರ್ವ ಅಧಿಕಾರಿ  ಕಾರ್ಗಿಲ್  ಪರ್ವತ ಶ್ರೇಣಿಯ  ಉಗ್ರರ ಗುಂಡಿಗೆ ಹುತಾತ್ಮನಾಗುವ  ಮುಂಚೆ ತಮ್ಮ ಮೇಲಧಿಕಾರಿಗೆ  ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ,  ಕ್ಯಾಪ್ಟನ್ ವಿಕ್ರಮ್  ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು  ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ  ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ  ಹಿಂದಿನ ಸರ್ಕಾರಗಳ  ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ  ಮಾಹಿತಿ  ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ  ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!!  ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ  ನೇರ ಯದ್ದದಲ್ಲಿ  ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ‌ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!

ಎರಡನೇ ಪಾಠ, ಭಾರತದ ಬಳಿ ಹಿಮಾಲಯದಂತಹ ಪರ್ವತ ಶ್ರೇಣಿಯಲ್ಲಿ ಸಮರ್ಥವಾಗಿ ಹೋರಾಡಲು ಬೇಕಾದ ಯುದ್ಧ ತಂತ್ರಜ್ಞಾನ ಮತ್ತು ಅತ್ಯಾಧುನಿಕ  ಆಯುಧಗಳ  ಅವಶ್ಯಕತೆ ಎಷ್ಟು ಎನ್ನುವುದು.ಕಾರ್ಗಿಲ್ ಯುದ್ದಲ್ಲಿ ವೈರಿ ಪಡೆ ಎತ್ತರದ ಆಯಕಟ್ಟಿನ ಪ್ರದೇಶದಲ್ಲಿ ಕುಳಿತಿದ್ದರು. ಶ್ರೀನಗರದಿಂದ  ಲೇಹ್ ಗೆ ಹೋಗುವ  ರಾಷ್ಟ್ರೀಯ  ಹೆದ್ದಾರಿ ಒಂದರ ಕತ್ತು ಹಿಸುಕಿ ಇಡಿ ಕಣಿವೆಯನ್ನು ಭಾರತದಿಂದ ಬೇರ್ಪಡಿಸುವ  ಪ್ರಬಲ ಸಂಚು ಮಾಡಿದ್ದರು.ಪರ್ವತ ಶ್ರೇಣಿಯಲ್ಲಿ ಯುದ್ಧ ಮಾಡುವಾಗ ಸ್ವಾಭಾವಿಕವಾಗಿ ಏರು ಜಾಗದಲ್ಲಿ ಕುಳಿತವರಿಗೆ  ನೈಸರ್ಗಿಕವಾಗಿ ಹೆಚ್ಚಿನ  ಲಾಭ ಇರುತ್ತದೆ . ಇಂತಹಾ ಭೌಗೋಳಿಕ ಪರಿಸ್ಥಿತಿಯಲ್ಲಿ ಒಬ್ಬ ವೈರಿಯನ್ನ ಕೊಲ್ಲಲು  ಹದಿನೈದು ಸೈನಿಕರ ಬಲಿ ಕೊಡಬೇಕಾಗುತ್ತದೆ ಎನ್ನುವ ಲೆಕ್ಕಾಚಾರ ಇಟ್ಟುಕೊಂಡೇ ಅಂದಿನ ಸೈನ್ಯ ಮುಖ್ಯಸ್ಥರು ತಮ್ಮ‌ ವಾರ್ ರೂಮಿನಲ್ಲಿ  ಇಂತಹಾ ಒಂದು ಕಠಿಣ ಲೆಕ್ಕಾಚಾರಕ್ಕೆ ಬಂದಿದ್ದರು. ಸಾಂಪ್ರದಾಯಿಕ ರೀತಿಯ ಯುದ್ದೋಪಕರಣವನ್ನು ಉಪಯೋಗಿಸಿದಲ್ಲಿ  ಬೆಟ್ಟದ ತುದಿಯಲ್ಲಿ ಇರುವ ವೈರಿಯ ಒಂದು ಬಂಕರ್ ದ್ವಂಸ ಮಾಡಲು ಒಂದು ಶೆಲ್ ಬದಲು ನೂರು ಶೆಲ್ ಬಳಸಬೇಕಾಗುತ್ತದೆ, ಒಂದು ರಾಕೇಟ್ ಬದಲು ಇಪ್ಪತ್ತು ಬಳಸಬೇಕಾಗುತ್ತದೆ, ಒಂದು ಮೊಟಾರ್ ಬದಲು ಐವತ್ತು ಮೋಟಾರ್ ಬಳಸಬೇಕಾಗುತ್ತದೆ. ಕಾರಣ ಬೆಟ್ಟದ ಬುಡದಿಂದ ಬೆಟ್ಟದ ತುದಿಗೆ ಗುರಿ ಇಟ್ಟು ಹೊಡೆಯುವುದು ಸುಲಭವಲ್ಲ, ಅಲ್ಲಿ ಒಂದು ಅಂದಾಜಿನಲ್ಲಿ ದಾಳಿ  ಮಾಡಬೇಕಾಗುತ್ತದೆ. ಆದರೆ ಅಂದು ನಮ್ಮ ಬಳಿ  ಲೇಸರ್ ನಿರ್ದೇಶಿತ ಬಾಂಬುಗಳು, ಕ್ರೂಸ್ ಕ್ಷಿಪಣಿಗಳು ಇದ್ದಿದ್ದರೆ ಅವುಗಳು ಗುರಿಯನ್ನು ಹುಡುಕಿಕೊಂಡು ಹೋಗಿ ದ್ವಂಸ ಮಾಡುತ್ತಿದ್ದವು.ಕೋಟ್ಯಂತರ ಬೆಲೆಬಾಳುವ ಮದ್ದುಗುಂಡುಗಳ ದುಂದು ವೆಚ್ಚವೂ ಆಗುತ್ತಿರಲಿಲ್ಲ. ದೇಶದ ಗಡಿ ಕಾಯುವ ಯೋಧರ ಅತ್ಯಮೂಲ್ಯ ಪ್ರಾಣದ ಹರಣವೂ ಆಗುತ್ತಿರಲಿಲ್ಲ.ಪರ್ವತದ ತುತ್ತ ತುದಿಯಲ್ಲಿ ಇರುವ ವೈರಿಯ ಅಡಗುದಾಣವನ್ನು ನಷ್ಟ ಮಾಡಲು ಯುದ್ದ  ವಿಮಾನಗಳನ್ನು ಬಳಸಲು ನಮಗೆ ಇಂತಹ ತಿರುವು ಮುರುವು ಪ್ರದೇಶದಲ್ಲಿ ಚಲಾಯಿಸುವ ವಿಮಾನ ಹಗುರವಾಗಿದ್ದು  ಹೆಚ್ಚಿನ Maneuverability  ಹೊಂದಿದ್ದು ಹೆಚ್ಚಿನ ತೂಕದ ಶಸ್ತ್ರಾಸ್ತ್ರಗಳನ್ನ ಒಯ್ಯವ ಶಕ್ತಿ ಹೊಂದಿರಬೇಕು.

ಅಂದಿನ ಮಿಗ್ ೨೧ ಮತ್ತು ಮಿಗ್ ೨೭ ವಿಮಾಗಳು ಇಂತಹಾ ಕ್ಷಮತೆ ಇಲ್ಲದೆ ಇದ್ದ ಕಾರಣ ಮತ್ತು ವೈರಿಯ  ಬಗೆಗಿನ ಮಾಹಿತಿಯ ಕೊರತೆಯಿಂದ ಕ್ಯಾಪ್ಟನ್ ನಚಿಕೇತ, ಕ್ಯಾಪ್ಟನ್ ಅಹುಜಾ ಅವರು ವಿಮಾನಗಳು ಪಾಕಿಗಳ ಸ್ಟ್ರಿಂಗರ್ ಮಿಸೈಲ್ ಗಳಿಗೆ ಸುಲಭದ ತುತ್ತಾದವು.  ಸಾಂಪ್ರದಾಯಿಕ ರೀತಿಯಲ್ಲಿ ವೈರಿಗಳ ಮಾಹಿತಿ  ಕಲೆಹಾಕಲು ನಾವು ನಮ್ಮ ಸೈನಿಕರನ್ನು ಕಳುಹಿದಾಗ ಅವರಲ್ಲಿ ಶವವಾಗಿ ಹಿಂತಿರುಗಿ ಬಂದವರ ಸಂಖ್ಯೆ ಅಧಿಕ. ಮತ್ತೆ ಕೆಲವರ ಹೆಣವೂ ಸಿಗದೆ ಹೋಯಿತು. ಇನ್ನು ಹಿಂದಿರುಗಿ ಬಂದವರು ತಂದ ಮಾಹಿತಿ ಅದೆ ಕುರಡ ಆನೆಯನ್ನು ವರ್ಣಿಸಿದ ರೀತಿ ಇತ್ತು.

ಯುದ್ಧ ಕಲಿಸಿದ ಮೂರನೆ ಪಾಠ ಆಯಕಟ್ಟಿನ ಜಾಗಗಳಿಗೆ ಸಂಪರ್ಕ ವ್ಯವಸ್ಥೆ ಮತ್ತು  ಗಡಿ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಮತ್ತು ಇವುಗಳು ವರ್ಷದ ಎಲ್ಲಾ ಋತುಗಳಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವುದು, ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಲ್ಲಿ ಕೇವಲ ರಸ್ತೆ ಸಂಪರ್ಕ ಮಾತ್ರ ನಿರ್ಮಾಣ ಮಾಡದೆ ವಾಯು ನೆಲೆಗಳನ್ನು  ನಿರ್ಮಿಸಬೇಕು.ರೈಲು ಮಾರ್ಗಗಳನ್ನು ನಿರ್ಮಾಣ ಮಾಡಬೇಕು.ಯುದ್ಧ ಕಾಲದಲ್ಲಿ ನಾವು ಸೈನ್ಯಕ್ಕೆ ಮದ್ದುಗುಂಡುಗಳ ಪೂರೈಕೆ ಮಾಡೋದು,ಅವರಿಗೆ ಆಹಾರ,ಶಸ್ತ್ರಾಸ್ತ್ರಗಳ ಸಾಗಾಣಿಕೆ, ಕ್ಷಿಪ್ರಗತಿಯಲ್ಲಿ ಸೈನ್ಯ ತುಕಡಿಗಳ ಸಾಗಾಟಗಳಿಗೆ ಇವೆಲ್ಲವೂ ಇದ್ದಿದ್ದರೆ ಅನುಕೂಲವಾಗುತ್ತಿತ್ತು. ಆದ್ರೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ಆ ಭಾಗಕ್ಕೆ ದೇಶದ ಉಳಿದ ಬಾಗಗಳಿಂದ ಸಂಪರ್ಕ ಕಲ್ಪಿಸಲು ಇದ್ದದ್ದು ಕೇವಲ ರಾಷ್ಟ್ರೀಯ ಹೆದ್ದಾರಿ ಒಂದು ಮಾತ್ರ. ಅದು ದುರ್ಗಮ ಪರ್ವತ ಶ್ರೇಣಿಗಳಲ್ಲಿ ನೈಸರ್ಗಿಕವಾಗಿ ಇರುವ ತಿರುವುಗಳನ್ನ ಬಳಸಿ ಮಾಡಿರುವ ರಸ್ತೆ.ಕೆಲವು ಕಡೆ ಇದು ತೀರಾ ಕಿರಿದಾಗಿದ್ದು ಏಕ ಕಾಲದಲ್ಲಿ ಕೇವಲ ಒಂದೇ ವಾಹನ ಚಲಿಸಬಹುದಾದಷ್ಟೆ ಇರುವ ಅಗಲ,ಇನ್ನೊಂದು ಸಮಸ್ಯೆ ಈ ರಸ್ತೆ ಗಡಿ ಭಾಗಕ್ಕೆ ತೀರಾ ಹೊಂದಿಕೊಂಡಿದೆ. ಟೈಗರ್ ಹಿಲ್ ಪರ್ವತ ಪ್ರದೇಶದಲ್ಲಿ ಇದು ಎಲ್ ಒ ಸಿ ಯಿಂದ ಕೇವ ೧೨ಕಿ ಮಿ ಒಳಗಿದೆ. ಹಾಗಾಗಿ ಪಾಕಿಸ್ತಾನ ಕಾರ್ಗಿಲ್ಲಿನ ಟೈಗರ್ ಹಿಲ್ ಮತ್ತು ತೋಲೋ ಲಿಂಕ್ ಪ್ರದೇಶದಲ್ಲಿ  ಎತ್ತರದ ಪರ್ವತ ಶಿಖರವನ್ನು ಏರಿ ರಸ್ತೆಯ ಮೇಲೆ  ಬೇಕಾಬಿಟ್ಟಿ ಬಾಂಬಿಂಗ್ ಮಾಡಿದ್ದರು.

ಈ ಕಾರಣಕ್ಕೆ ಕಾರ್ಗಿಲ್ ಪ್ರದೇಶದಲ್ಲಿ ಸೈನ್ಯ ತುಕಡಿಗಳ ಸಾಗಾಟ ದುಸ್ಸಾಹಾದ ಕೆಲಸವಾಗಿತ್ತು.ಕತ್ತಲಲ್ಲಿ ವೈರಿಗಳ ಕಣ್ಣಿಗೆ ಕಾಣದಂತೆ ಮದ್ದುಗುಂಡುಗಳು, ನೈನ್ಯಕ್ಕೆ ಬೇಕಾಗಿದ್ದ ಅಹಾರ ಸಾಮಗ್ರಗಿಳನ್ನ ವಾಹನದಲ್ಲಿ ಸಾಗಿಸುತ್ತಿದ್ದರು. ಅಲ್ಲೂ ಟ್ರಕ್  ಹೆಡ್ ಲೈಟ್ ಹಾಕದೆ ಎದುರಗಡೆ ಇಬ್ಬರ ಸೈನಿಕರು ಟಾರ್ಚ್ ಲೈಟ್ ಹಿಡಿದು ಸಾಗಿ ಟ್ರಕ್ ಚಾಲಕರಿಗೆ ಮಾರ್ಗವನ್ನು ತೋರಿಸಬೇಕಿತ್ತು. ಇಂತಹಾ ಸಮಯದಲ್ಲಿ ಸ್ವಲ್ಪ ಏಮಾರಿದರೂ ಟ್ರಕ್ಕುಗಳು ನೂರಾರು ಅಡಿಗಳ ಆಳದ ಪ್ರಪಾತಕ್ಕೆ ಬೀಳುವ ಸಂಭವ. ಟಾರ್ಚ್ ಲೈಟ್ ಸ್ವಲ್ಪ ಹೊತ್ತು ಜಾಸ್ತಿ ಹಿಡಿದರೆ ವೈರಿಗಳಿಗೆ ಪರ್ವತದ ಮೇಲಿನಿಂದ ಬರಿಗಣ್ಣಿಗೆ ಇವರ ಚಲನವಲನ ಗೊತ್ತಾಗಿ ಬಿಡುತ್ತಿದ್ದವು ಮತ್ತು ಇವರ ಮೇಲೆ ಮೋರ್ಟಾರ್ ದಾಳಿ ಮಾಡುತ್ತಿದ್ದರು. ಇಂತಹಾ ಸಂಧರ್ಭದಲ್ಲಿ ಭಾರತೀಯ ಸೈನಿಕರ ಪರಿಸ್ಥಿತಿ,ನೆತ್ತಿಯ ಮೇಲೆ ಉಗ್ರರು ಮತ್ತು ಕಾಲಿನ ಕೆಳಗೆ ಪ್ರಪಾತ. ಯದ್ದ ಮಾಡುವುದಕ್ಕಿಂತ ಯದ್ದರಂಗಕ್ಕೆ ಹೋಗೋದೆ ಬಹಳ ದೊಡ್ಡ ಸಾಹಸ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯ ಸೈನ್ಯ ತನ್ನ ಬತ್ತಳಿಕೆಯ ಮಹಾನ್ ಅಸ್ತ್ರ ಬೋಫೋರ್ಸ್ ತೋಪುಗಳನ್ನ ತನ್ನ ಟೋಯಿಂಗ್ ಟ್ರಕ್ಕುಗಳ ಹಿಂದೆ ಕಟ್ಟಿಕೊಂಡು ರಂಗ ಪ್ರವೇಶ ಮಾಡಿದ್ದು. ಇಲ್ಲಿ ಭಾರತಿಯ ಸೈನಿಕರ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಕಾರ್ಗಿಲ್ ಯುದ್ದದ್ದಲ್ಲಿ  ಮೂರನೇ ಒಂದು ಬಾಗ ಸೈನ್ಯವನ್ನು ಕೇವಲ ಪೂರೈಕೆ ಮತ್ತು ಗಾಯಾಳುಗಳ ಸಾಗಾಟಗಳಿಗೆ ಬಳಸಿಕೊಂಡಿತ್ತು. ಒಟ್ಟು ನಿಯೋಜನೆಗೊಂಡ ಸೈನ್ಯದಲ್ಲಿ ವೈರಿಗಳೊಂದಿಗೆ ನೇರವಾಗಿ ಯುದ್ದಮಾಡಿದವರು ಕೇವಲ‌ ಮೂರನೇ ಒಂದು ಭಾಗ.ಒಂದು ವೇಳೆ  ಹಿಂದೆ ಆಳಿದ ಸರ್ಕಾರಗಳು ಹಿಮಾಲಯನ್ ಬ್ಲಂಡರಿನಲ್ಲಿ ಕಲಿತ ಪಾಠಗಳಿಂದಾಗಿ ದೇಶದ ಉತ್ತರದ ಗಡಿ ಭಾಗಕ್ಕೆ ಒಳ್ಳೆಯ ಸುಸಜ್ಜಿತ ರಸ್ತೆ ಗಳನ್ನ ಆಯಕಟ್ಟಿನ ಸುರಂಗ ಮಾರ್ಗಗಗಳನ್ನ ನಿರ್ಮಿಸಿದ್ದರೆ ಒಳ್ಳೆಯ ರೈಲ್ವೇ ಸಂಪರ್ಕ ಕಲ್ಪಿಸಿದ್ದರೆ ಭಾರತ ಕಾರ್ಗಿಲ್ ಯುದ್ದವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಾಗಿತ್ತು ಮತ್ತು ಯುದ್ಧವನ್ನು ಅಂದು ತೆಗೆದುಕೊಂಡ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಮುಗಿಸಬಹುದಿತ್ತು.

ಭಾರತೀಯ ಸೈನ್ಯಕ್ಕೆ ವೈರಿಗಳ ಪ್ರಮಾಣ,ಅಡಗುತಾಣಗಳ ಮಾಹಿತಿ ನೀಡುವಂತೆ ಭಾರತ ಸರ್ಕಾರ,ಅಮೇರಿಕಾದ ಜಿಪಿಎಸ್ ಉಪಗ್ರಗಳ ಮೂಲಕ ನೀಡುವಂತೆ ಅಮೇರಿಕಾವನ್ನು ಕೇಳಿತ್ತು. ಅಮೇರಿಕ,ಭಾರತ ಸರ್ಕಾರದ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿತು.ಒಂದು ವೇಳೆ ಭಾರತಕ್ಕೆ ಅಮೇರಿಕ ಇಂತಹಾ ಮಾಹಿತಿ ಕೊಟ್ಟಿದ್ದಲ್ಲಿ  ಯುದ್ದವನ್ನು ಅತ್ಯಂತ ಕಡಿಮೆ ಸಮಯದಲ್ಲಿ,ಕಡಿಮೆ ಪ್ರಮಾಣದ ಪ್ರಾಣಹಾನಿ,ಮಿಲಟರಿ ಉಪಕರಣಗಳ ಹಾನಿಯಾಗುತ್ತಿತ್ತು.ಅಮೇರಿಕಾದ ಜಿಪಿಎಸ್ ಉಪಗ್ರಹಗಳ ಮೂಲಕ ವೈರಿಗಳ ಸಂಖ್ಯೆ, ಅವರು ಇರುವ ಆಯಕಟ್ಟಿನ ಸ್ಥಳ ಅವರ ಬಳಿ ಇರುವ ಆಯಧಗಳ ವಿವರವನ್ನು ಕರಾರುವಕ್ಕಾಗಿ ಗುರುತಿಸಬಹುದಿತ್ತು ಮತ್ತದಕ್ಕೆ ಸರಿಯಾದ ಪ್ರತಿ ತಂತ್ರವನ್ನೂ ಹೆಣೆಯಬಹುದಿತ್ತು.ಆದರೆ,ಅಮೇರಿಕಾ ಇಂತಹ ಮಾಹಿತಿ ಕೊಡಲು ನಿರಾಕರಿಸಿದಾಗ ಭಾರತದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವಕ್ಕೆ ತನ್ನದೇ ಆದ ಸ್ವದೇಶೀ ಜಿ.ಪಿ.ಎಸ್ ಬೇಕೆಂದು ಅನ್ನಿಸಿತು.ಇವತ್ತು ನಾವು ನಮ್ಮ‌ ಸ್ಮಾರ್ಟ ಫೋನ್ ಗಳಲ್ಲಿ ಉಪಯೋಗಿಸುತ್ತಿರುವುದು ಇದೇ ಅಮೇರಿಕಾದ ಜಿಪಿಎಸ್ ತಂತ್ರಜ್ಞಾನ.

ಅಮೇರಿಕಾಕ್ಕೆ ಸಾಕೆನಿಸಿದರೆ ಅಥವಾ ಬೇಡವೆನಿಸಿದರೆ ಅದು ಕಾರ್ಗಿಲ್ ಸಮಯದಲ್ಲಿ ಮಾಡಿದಂತೆ ಈಗಲೂ ತನ್ನ ಜಿಪಿಎಸ್ ಸೌಲಭ್ಯವನ್ನು ನಿಲ್ಲಿಸಬಹುದು.ಇದೇ ಕಾರಣಕ್ಕೆ ಭಾರತದ ಇಸ್ರೋ ಸಂಸ್ಥೆ ತನ್ನದೆ ಆದ ಸ್ವಂತ ಜಿಪಿಎಸ್ ಜಾಲವನ್ನು  ತಯಾರಿಸುವ ಕಾರ್ಯಕ್ರಮ ಕೈಗೆತ್ತಿಕೊಂಡಿತು. ಇದರಲ್ಲಿ ಏಳು ಭೂಸ್ಥಿರ ಕಕ್ಷೆಯಲ್ಲಿ ಅಂದ್ರೆ ಭೂಮಿಯಿಂದ ಸುಮಾರು ಮೂವತ್ತು ಸಾವಿರ ಕಿಲೋ ಮೀಟರ್ ಎತ್ತರದಲ್ಲಿ  ಕೇವಲ ಭಾರತೀಯ ಭೌಗೋಳಿಕ ಪ್ರದೇಶಕ್ಕಷ್ಟೇ ಸೀಮಿತವಾದ ಪ್ರಾದೇಶಿಕ ಜಾಲವನ್ನು ನಿರ್ಮಿಸುವ ಕೆಲಸಕ್ಕೆ ಕೈ ಹಾಕಿತು. ಅದರಂತೆಯ ಸುಮಾರು ೧೫ ವರ್ಷಗಳ ಪರಿಶ್ರಮಮದ ಫಲವಾಗಿ ಭಾರತ ತನ್ನದೇ ಆದ “ನಾವಿಕ್” ಎನ್ನುವ  ಜಿಪಿಎಸ್  ಜಾಲವನ್ನು ಸ್ಥಾಪಿಸಿಕೊಂಡಿದೆ  ಇದರಿಂದಾಗಿ ಇಂದು ಭಾರತೀಯ ಸೈನ್ನ ತನ್ನ ಈ ಉಪಗ್ರಹಗಳ ಸಹಾಯದಿಂದ ತನ್ನ ನೆಲ ಜಲದ ಗಡಿ ಭಾಗಗಳ ಮಲೆ ಹದ್ದಿನ ಕಣ್ಣಿಟ್ಟು ಕಾಯತ್ತಿದೆ. ಈ ಉಪಗ್ರಹಗಳ ನೆರವಿನಿಂದ ಭಾರತ ಪೂರ್ವದಲ್ಲಿ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಉಗ್ರರ ದಮನ ಮಾಡಿದರೆ, ಪಶ್ಚಿಮಕ್ಕೆ ಪಾಕಿಸ್ತಾನದ ಒಳ ಹೊಕ್ಕು ಸರ್ಜಿಕಲ್ ಸ್ಟ್ರೈಕ್ ನಡೆಸಿತು.

ಭಾರತದ ನಾವಿಕ್ ಅಮೇರಿಕಾದ ಜಿಪಿಎಸ್ ಗಿಂತ ಹಚ್ಚು ಪರಿಣಾಮಕಾರಿ ಮತ್ತು ಹೆಚ್ಚು ನಿಖರ.ಕಾರಣ ನಾವಿಕ್ನಲ್ಲಿ ಎರಡು ಬ್ಯಾಂಡ್ ಗಳನ್ನ ಬಳಸಿಲಾಗಿದೆ  ಆದ್ದರಿಂದ ಇದು  ಹವಾಮಾನದಲ್ಲಿ  ಆಗುವ ಯಾವುದೇ ವೈಪರೀತ್ಯಗಳಿಗೆ ತೊಂದರೆಗೊಳಗಾಗದೆ ಸದಾ ಭೂಮಿಯೊಂದಿಗೆ ನಿಖರ ಸಂಪರ್ಕದಲ್ಲಿ ಇರುತ್ತದೆ. ಅಮೇರಿಕಾ ಜಿಪಿಎಸ್  ನಿಖರತೆ ಇಪ್ಪತ್ತು ಮೀಟರ್  ಸುತ್ತಳತೆಯಲ್ಲಿ  ತೋರಿಸಿದರೆ  ಭಾರತದ ನಾವಿಕ್ ನದ್ದು ಕೇವಲ ಎರಡು ಮೀಟರ ಸುತ್ತಳತೆಯ ವ್ಯಾಪ್ತಿ . ಹಾಗಾಗಿ  ಭಾತರ ಇಂದು ಈ ತಂತ್ರಜ್ಞಾನದಲ್ಲಿ ಸಂಪೂರ್ಣವಾಗಿ ಸ್ವಾವಲಂಬಿಯಾಗಿದೆ. ಅಂದಹಾಗೆ ಅಮೇರಿಕಾ ಭಾರತದೊಂದಿಗೆ ತನ್ನ ಬೇಹುಗಾರಿಕಾ ಉಪಗ್ರಹಗಳಿಂದ ಸಿಗುವ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಕೊಳ್ಳದೆ ಇದ್ದ ಕಾಲದಲ್ಲಿ, ಹಾಗೂ ಭಾರತ ಕಾರ್ಗಿಲ್ಲಿನಲ್ಲಿ ವೈರಿಗಳ ಬಗ್ಗೆ ಮಾಹಿತಿ ತಿಳಿಯಲು ತನ್ನ ಸೈನಿಕರ‌ ಪ್ರಾಣದ ಬೆಲೆ ತೆರುತ್ತಿದ್ದ ಕಾಲದಲ್ಲಿ ಭಾರತದ ನೆರೆವಿಗೆ ಬಂದ ವಿಶ್ವದ ಏಕೈಕ ರಾಷ್ಟ್ರ ಇಸ್ರೇಲ್.ಇಸ್ರೇಲ್ ಅಮೇರಿಕಾದ ಒತ್ತಡವನ್ನು ಧಿಕ್ಕರಿಸಿ ಭಾರತಕ್ಕೆ ತನ್ನ ಬೇಹುಗಾರಿಕಾ ಉಪಗ್ರಹಗಳ‌ ಮೂಲಕ ವೈರಿಪಡೆಯ ಅಡಗುತಾಣದ ಮಾಹಿತಿಗಳನ್ನು  ಭಾರತಕ್ಕೆ ರವಾನಿಸಿತು.ಇದು ಕಾರ್ಗಿಲ್ ಯುದ್ಧದ ಗತಿಯನ್ನೇ ಬದಲಾಯಿಸಿತು.ಈ ಯುದ್ಧ ಮುಗಿದ ನಂತರ ಇಸ್ರೇಲ್,ಭಾರತದ ಮೊತ್ತಮೊದಲ ಬೇಹುಗಾರಿಕಾ ಉಪಗ್ರಹವನ್ನು  ಕಕ್ಷೆಗೇರಿಸುವಲ್ಲೂ ಸಹಾಯಕ್ಕೆ ಬಂತು.ಅಂದು ಇಸ್ರೇಲಿನ ಚಾಲಕ ರಹಿತ ಬೇಹುಗಾರಿಕಾ ವಿಮಾನದ ನೆರವು ಪಡೆದ ಭಾರತ ಇಂದು ತನ್ನದೆ ಆದ ರುಸ್ತುಮ್ ಎನ್ನುವ ಡ್ರೋನ್  ವಿಮಾನವನ್ನ‌ ಅಭಿವೃದ್ದಿಪಡಿಸಿದೆ. ಅದರ ಜೊತೆಗೆ ಅಮೇರಿಕಾದ ಪ್ರೆಡಿಟರ್ ಎನ್ನುವ ಕೇವಲ ಬೇಹುಗಾರಿಕೆ ಮಾತ್ರವಲ್ಲದೆ ವೈರಿ ಪಡೆಗಳ ಮೇಲೆ ದಾಳಿ ನೆಡಸುವ ಚಾಲಕ ರಹಿತ ಯದ್ದ ವಿಮಾನ ಖರೀದಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಕಾರ್ಗಿಲ್ ಯುದ್ದ ನಮಗೆ ಸಾಂಪ್ರದಾಯಿಕ ಯದ್ದ ಉಪಕರಣಗಳ ಇತಿ-ಮಿತಿ ಗಳನ್ನು ಸರಿಯಾಗಿ ಮನದಟ್ಟು ಮಾಡಿ ಕೊಟ್ಟಿತು.ಕಾರ್ಗಿಲ್ ನಂತ ದುರ್ಗಮ ಪರ್ವತ ಶ್ರೇಣಿಯಲ್ಲಿ  ಯದ್ದ ಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಎತ್ತರದ ಪ್ರದೇಶದಲ್ಲಿ ಅವಿತುಕೊಂಡಿದ್ದ ವೈರಿ ಪಡೆಗೆ ಲಾಭಗಳು ಹೆಚ್ಚು.ಆಗ ಭಾರತದ ಸೈನ್ಯಕ್ಕೆ ಲೇಸರ್ ನಿರ್ದೇಶಿತ ಬಾಂಬ್ ಗಳು ಮತ್ತು ಕ್ರೂಸ್ ಕ್ಷಿಪಣಿಗಳ ಆವಶ್ಯಕತೆ ಹಚ್ಚು ಎದ್ದು ಕಾಣತೊಡಗಿತು.ಸಾಮಾನ್ಯವಾಗಿ ಸಾಂಪ್ರದಾಯಿಕ ಬಾಂಬುಗಳನ್ನ ಒಂದು ಅದಾಂಜಿನಲ್ಲಿ ಗುರಿಯ ಮೇಲೆ  ಹಾಕಲಾಗುತ್ತದೆ.ಆದರೆ,ಅದು ಬೀಳುವುದು ತನ್ನ ನಿಗದಿತ ಗುರಿಯ ಐನೂರು ಮೀಟರಿನಿಂದ ಸಾವಿರ ಮೀಟರ ಸುತ್ತಳತೆಯ ಒಳಗೆ.ಬಾಂಬ್ ಹಾಕುವಾಗ ಇರುವ ಎತ್ತರ,ಅದರ ಗತಿ ಮತ್ತು ಗಾಳಿ ಬೀಸುವ ಗತಿಯ ಮೇಲೆ ಅವಲಂಬಿಸುತ್ತದೆ. ಸಮತಟ್ಟಾದ ಪ್ರದೇಶದಲ್ಲಿ  ಬಾಂಬುಗಳನ್ನು ಹಾಕುವಾಗ ಯದ್ದ ವಿಮಾನಗಳು ಅತ್ಯಂತ ಕೆಳ ಮಟ್ಟದಲ್ಲಿ ವೇಗವಾಗಿ ಹಾರಟ ನೆಡಸುತ್ತಾ ಬಾಂಬುಗಳನ್ನು ಹಾಕುತ್ತವೆ. ಇದರಿಂದ ಬಾಂಬುಗಳು ಗುರಿಯ ಸಮೀಪದಲ್ಲಿ ಬೀಳುತ್ತವೆ ಮತ್ತು ಯುದ್ಧ ವಿಮಾನದ ವೇಗದ ಕಾರಣ ವೈರಿ ಪಡೆಯ ದಾಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಕಡಿಮೆ.

ಕಾರ್ಗಿಲ್ ಪರ್ವತ ಶ್ರೇಣಿಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು.ವೈರಿಪಡೆ ಸಮುದ್ರಮಟ್ಟದಿಂದ ಸುಮಾರು 3 ಸಾವಿರ ಮೀಟರ್ ಗಳ ಎತ್ತರದಲ್ಲಿ ಇತ್ತು. ಮತ್ತು ಕಡಿದಾದ ಪರ್ವತ ಶ್ರೇಣಿಗಳು ಇರುವ ಕಾರಣ ಯುದ್ದ ವಿಮಾನಗಳಿಗೆ ವೇಗವಾದ ಹಾರಟ ನೆಡೆಸುತ್ತಾ ವೈರಿ ಪಡೆಯ ಮೇಲೆ ದಾಳಿ ನಡಸುವುದು ಕಷ್ಟವಾಗಿತ್ತು. ಇಂತಹುದೆ ಒಂದ ಪ್ರಯತ್ನದಲ್ಲಿ ವಿಫಲವಾಗಿ  ಕ್ಯಾಪ್ಟನ್ ನಚಿಕೇತ್ ಅವರ ಮಿಗ್ ೨೭ ವಿಮಾನ ವೈರಿಗಳ ಸ್ಟ್ರಿಂಗರ್ ಮಿಸೈಲ್ ದಾಳಿಗೆ ತುತ್ತಾಗಿ ನಾಶವಾಯಿತು ಕ್ಯಾಪ್ಟನ್ ನಚಿಕೇತ ತಮ್ಮ ಪ್ಯಾರಾಚೂಟ್ ಮುಖಾಂತರ  ಜಿಗಿದರಾದರೂ ಅವರು ಪಾಕಿಸ್ತಾನದ ಭಾಗಲ್ಲಿ ಲ್ಯಾಂಡ್ ಅದರು.ಪಾಕಿಸ್ಥಾನದ ಸೈನ್ಯ ಅವರನ್ನು ಬಂಧಿಸಿ ಕೊನೆಗೆ ಬಿಡುಗಡೆ ಮಾಡಿದರು.ಆದರೆ ಕ್ಯಾಪ್ಟನ್ ಅಹುಜಾ ನಚಿಕೇತರಷ್ಟು ಅದೃಷ್ಟವಂತರಾಗಿರಲಿಲ್ಲ  ಅವರ ಮಿಗ್ ವಿಮಾನ ವೈರಿ ದಾಳಿಗೆ ಪತನಗೊಂಡು ಪ್ಯಾರಚೂಟ್ ಮುಖಾಂತರ ಜಿಗಿಯುವಾಗ ಪರ್ವತದ ಮೇಲೆ ಅಡಗಿ ಕುಂತಿದ್ದ  ವೈರಿ ಪಡೆ ಅಹುಜಾ ಅವರ ಮೇಲೆ ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿತು. ಅವರು ಹೆಣವಾಗಿ ಕೆಳಗೆಬಿದ್ದರು.ವೈರಿ ಪಡೆಗಳ ದಾಳಿಯ ನಂತರ ಅವರ ಸಾಮರ್ಥ್ಯ ಅರಿತ  ಭಾರತೀಯ ವಾಯುಸೇನೆ ತನ್ನ ಪೈಲೆಟ್ ಗಳಿಗೆ ಮೂವತ್ತು ಸಾವಿರ ಅಡಿಗಳಿಗಿಂತ ಕೆಳಗೆ ಯುದ್ಧ ವಿಮಾನವನ್ನ ಹಾರಿಸದಂತೆ ಆದೇಶ ನೀಡಿತು.ಇಷ್ಟು ಎತ್ತರದಿಂದ ವೈರಿಗಳ ಮೆಲೆ ಸಾಂಪ್ರದಾಯಿಕ ಬಾಂಬ್ ಗಳ ಮುಖಾಂತರ ದಾಳಿ ನೆಡೆಸಿದರೆ ಅದು ವೈರಿಗಳ ನೆಲವನ್ನು ಧ್ವಂಸ ಮಾಡುವ ಸಾಧ್ಯತೆ ಶೇಕಡಾ ಇಪ್ಪತ್ತ ಕ್ಕಿಂತ ಕಡಿಮೆ. ಹಾಗಾಗಿ  ಇಂತಹಾ ಪರಿಸ್ಥಿತಿಯಲ್ಲಿ ಲೇಸರ್ ನಿರ್ದೇಶಿತ  ಬಾಂಬುಗಳು ನಮಗೆ ಅನಿವಾರ್ಯವಾಯಿತು.

ಈ ಲೇಸರ್ ನಿರ್ದೇಶಿತ ಬಾಂಬುಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ ಸಾಮಾನ್ಯವಾಗಿ  ಅತ್ಯಂತ ಎತ್ತರದಿಂದ  ವೈರಿ ನೆಲೆಯನ್ನ ವಿಮಾನ‌ ಗುರುತಿಸಿ ಅದರತ್ತ ಬಾಂಬ್ ಎಸೆಯತ್ತದೆ. ಆಗ ಬಾಂಬು ತನ್ನ‌ ಮುಂಬಾಗದಲ್ಲಿ ಇರುವ ಎಲೆಕ್ಟ್ರಾನಿಕ್  ಉಪಕರಣಗಳ ಸಹಾಯದಿಂಂದ ಲೇಸರ್ ಕಿರಣ ನಿಯೋಜಿತ ಗುರಿಯಿಂದ ಪ್ರತಿಫಲನಗೊಳ್ಳುವ ಹಾದಿಯಲ್ಲೇ ತನ್ನ ಹಿಂಬದಿಯಲ್ಲಿರುವ  ರೆಕ್ಕೆ ಮಯಖಾಂತರ ತನ್ನ ಪಥವನ್ನು ನಿಖರವಾಗಿ ಗುರಿಯಡೆಗೆ ಕಾಯ್ದುಕೊಂಡು, ನೇರವಾಗಿ ಗುರಿಯ ಮೇಲೆ  ಬೀಳುತ್ತದೆ. ಇಂತಹ ಬಾಂಬುಗಳು ಯುದ್ಧದ ಗತಿಯನ್ನು ಬದಲಾಯಿಸಬಲ್ಲವು,ಯುದ್ಧದ ಸಮಯ, ಖರ್ಚು ಮತ್ತು ತಮ್ಮ ಪಡೆಗಳ ಪ್ರಾಣಹಾನಿಯ ಮಟ್ಟವನ್ನು ಬಹಳಷ್ಟು ಕಡಿಮೆ ಮಾಡುತ್ತವೆ. ಕಾರ್ಗಿಲ್ ಯುದ್ದದಲ್ಲಿ ಅಂದು ಅಪಾರ ಸಂಖ್ಯೆಯಲ್ಲಿ  ಸೈನ್ಯದ ಸೈನ್ಯದ ಪ್ರಾಣ ಹಾನಿ ಮತ್ತು  ಶತ್ರುಗಳಿಂದ ಅಕ್ರಮಿತವಾದ ಭಾರತದ ಭೂಭಾಗವನ್ನು ಮತ್ತೆ ತಮ್ಮ ವಶಕ್ಕೆ ಪಡೆಯಲು ತೆಗೆದುಕೊಳ್ಳುತ್ತಿದ್ದ  ಸಮಯವನ್ನು ನೋಡಿ ಭಾರತಕ್ಕೆ  ಇಂಥ  ಆಧುನಿಕ ಬಾಂಬ್ ಆವಶ್ಯಕತೆ ಹೆಚ್ಚು ಕಂಡು ಬಂತು ಆದ್ದರಿಂದ ಅಂತಹಾ ಭಾಂಬುಗಳ‌ ನಿರ್ಮಾಣಕ್ಕೆ ಕೈ ಹಾಕಿದ  DRDO .ಇಂದು ಸ್ವದೇಶಿ ನಿರ್ಮಿತ ಲೇಸಾರ್ ನಿರ್ದೇಶಿತ ಬಾಂಬ್ ಆದ “ಸುದರ್ಶನ್” ಅನ್ನು ನಿರ್ಮಿಸಿ ಭಾರತದ ಬತ್ತಳಿಕೆಗೆ ಯಶಸ್ವಿಯಾಗಿ ಸೇರಿಸಿದೆ. ಕಾರ್ಗಿಲ್ ಯದ್ದ ಸಮಯದಲ್ಲಿ ಇಸ್ರೇಲ್ ಭಾರತಕ್ಕೆ ಈ ಬಾಂಬುಗಳನ್ನು ಕೊಟ್ಟು ಸಹಾಯ ಮಾಡಿತ್ತು.

ಕಾರ್ಗಿಲ್ ಯುದ್ಧದ ಕಾಲದಲ್ಲಿ ಭಾರತಕ್ಕೆ ಅತ್ಯಂತ ಅವಶ್ಯಕ ಎಂದು ಕಂಡುಬಂದ ಮೊತ್ತೊಂದು‌ ಶಸ್ತ್ರಾಸ್ತ್ರ ಕ್ರೂಸ್ ಕ್ಷಪಣಿಗಳು.ಇವು ಸ್ಮಾರ್ಟ್ ಕ್ಷಪಣಿಗಳು ಇದ್ದಂತೆ. ಉಪಗ್ರಹ ಮೂಲಕ ಗುರಿಯನ್ನು ನಿಗದಿಪಡಿಸಿ ಅದನ್ನು ಕ್ರೂಸ್ ಮಿಸೈಲ್ ಗೆ ಹೇಳಿ ಇದನ್ನ ಗುರಿಯಿಂದ ನೂರಾರು ಕಿಲೋ ಮೀಟರ್ ದೂರದಿಂದಲೆ ವೀಕ್ಷಿಸಿದರೆ ಈ ಸ್ಮಾರ್ಟ್ ಕ್ಷಿಪಣಿ ತನ್ನಲ್ಲಿ ಇರುವ ಸಣ್ಣ ಕಂಪ್ಯೂಟರ್ ಮುಖಾಂತರ ವೈರಿಯ ಪಡೆಯ ಕಣ್ಣಿಗೆ ಕಾಣದಂತೆ ಒಂದು ಸಣ್ಣ ಚಾಲಕ ರಹಿತ ವಿಮಾನದಂತೆ ಚಲಸಿ ನೇರವಾಗಿ ಮತ್ತು ನಿಖರವಾಗಿ ಪೂರ್ವ ನಿಯೋಜಿತ ಗುರಿಯ ಮೆಲೆ ಬಿದ್ದು ಅದನ್ನ ದ್ವಂಸಗೊಳಿಸುತ್ತದೆ.ಕಾರ್ಗಿಲ್ ಯದ್ದದ ಸಂದರ್ಭದಲ್ಲಿ ಪಾಕಿಸ್ತಾನಿ ಪಡೆಗಳು ಭಾರತದ ಒಳಗೆ ಸುಮಾರು ೧೪ ಕಿ ಮಿ ನಷ್ಟು ಬಂದಿದ್ದವು. ಆಗ ಭಾರತದ ಸೈನ್ಯ ಅವರನ್ನು ನಾಲ್ಕೂ ದಿಕ್ಕಿನಿಂದ ಸುತ್ತುವರಿದು ಅವರ ಮೆಲೆ ದಾಳಿ ಮಾಡಬೇಕೆಂದು ಯೋಚಿಸಿತು.ಆದರೆ ವೈರಿಗಳ ಹಿಂಬದಿಯಿಂದ ಪಾಕಿಸ್ತಾನ  ತನ್ನ ತೋಪುಗಳ ಮುಖಾಂತರ ಭಾರತದ ಕಡೆ ಅವ್ಯಾಹತವಾಗಿ ದಾಳಿ ನೆಡಸುತಿತ್ತು.ಈ ಮೂಲಕ ಬೆಟ್ಟದ ತುದಿಯಲ್ಲಿ ಅಡಗಿ ಕುಳಿತಿರುವ ತನ್ನ ಸೈನಿಕರಿಗೆ ಕವರ್ ನೀಡುತ್ತಿತ್ತು. ಹಾಗಾಗಿ ವೈರಿಯ ಮೇಲೆ ಹಿಂಬದಿಯಿಂದ ದಾಳಿ ನಡೆಸುವುದು ಸುಲಭವಾಗಿರಲಿಲ್ಲ. ಜೊತೆಗೆ ಅದು ಎಲ್.ಓ.ಸಿ ಗೆ ಅತ್ಯಂತ ಹತ್ತಿರವಿದ್ದ ಕಾರಣ ಭಾರತೀಯ ಸೈನಿಕರ ಕೆಲವೊಮ್ಮೆ ದಿಕ್ಕು ತಪ್ಪಿ ಪಾಕಿಸ್ತಾನದ ಗಡಿ ಭಾಗಕ್ಕೆ ಹೋಗುವ ಅಪಾಯ ಇತ್ತು ಇದರಿಂದ ಯುದ್ದದ ತೀವ್ರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇತ್ತು. ಆದ್ದರಿಂದ ಅಂದಿನ ಪ್ರಧಾನಿ ವಾಜಪೇಯಿಯವರು ಭಾತರದ ಸೈನ್ಯಕ್ಕೆ ಯಾವುದೇ ಕಾರಣಕ್ಕೂ ಎಲ್.ಓ.ಸಿ ದಾಟದಂತ ಕಡಕ್ ಆದೇಶವನ್ನು ಕೊಟ್ಟಿದ್ದರು. ಇಂತಹಾ ಸಂದರ್ಭದಲ್ಲಿ ಬೆಟ್ಟದ ಹಿಂದೆ ಅವಿತು ಕುಳಿತ ವೈರಿಗಳನ್ನು ಎದುರಿನಿಂದ ಹೊಡೆದು ಕೊಲ್ಲುವುದು ಕಷ್ಟವಾಗಿತ್ತು.

ಆಗ ಇಂತಹ ಕ್ರೂಸ್ ಕ್ಷಪಣಿಗಳು ಇದ್ದಿದ್ದರೆ ಅವರ ಬೆಟ್ಟದ ಸುತ್ತ ಪರಿಕ್ರಮಿಸಿ ಹಿಂಬದಿಯಿಂದ ವೈರಿ ಪಡೆಯ ಮೆಲೆ ದಾಳಿ ನಡೆಸಲು ಸಕ್ಷಮವಾಗಿದ್ದವು. ಅಂದಿಗೆ ನಮ್ಮ ಬಳಿ ಅಂತಹಾ ಕ್ಷಿಪಣಿಗಳು ಇಲ್ಲದೆ ಹೋಗಿದ್ದರಿಂದ ಕಾರ್ಗಿಲ್ ಯದ್ದದ ನಂತರ ಅದರ ಅವಶ್ಯಕತೆಯನ್ನು ಅರಿತ  ಭಾರತ ರಷ್ಯಾದೊಂದಿಗೆ ಸೇರಿ ಜಂಟಿಯಾಗಿ ಜಗತ್ತಿನಲ್ಲೆ ಅತ್ಯಂತ ವೇಗವಾಗಿ ಚಲಿಸುವ ಬ್ರಹ್ಮೋಸ್ ಎನ್ನುವ ಕ್ರೂಸ್ ಕ್ಷಿಪಣಿಯನ್ನ ತಯಾರು ಮಾಡಿದೆ.ಇದರ ವೇಗ ೮‌ ಮ್ಯಾಕ್ ಎಂದು ಅಂದಾಜಿಸಲಾಗಿದೆ.ಅಂದರೆ ಇದು ಶಬ್ದದ ವೇಗಕ್ಕಿಂತ ಸುಮಾರು ಎಂಟು ಪಟ್ಟು ಅಧಿಕ ವೇಗದಿಂದ ಚಲಿಸುತ್ತದೆ. ಸದ್ಯ ಇದರ ವ್ಯಾಪ್ತಿ ೨೦೦ಕಿ ಮಿ.ಈಗ ಇದನ್ನು ನೆಲ‌ದ ಮೇಲಿಂದ,ಯದ್ದ ಹಡುಗುಗಳ ಮೇಲಿಂದ ಮತ್ತೆ ಯದ್ದ ವಿಮಾನಗಳ‌ ಮೇಲಿಂದಲೂ ಹಾರಿಸಲು ಸಾಧ್ಯ.

ಇಷ್ಷಿದ್ದೂ ಭಾರತ ಸಾಧಿಸಬೇಕಾದ್ದು ಬಹಳ.ಕಾರ್ಗಿಲ್ ಯದ್ದದ ಸಂಧರ್ಭದಲ್ಲಿ ಸೈನಿಕರು ಸಾಮಾನ್ಯವಾಗಿ ಬಳಸುತ್ತಿದ್ದ INSAS  ಬಂದೂಕಿನ ಮ್ಯಾಗಝೀನ್ ಗಳು ಜಾಮ್ ಆಗುತ್ತಿದ್ದವು.ಇವುಗಳನ್ನು ಭಾರತೀಯ ಸೇನೆ 1980ರಲ್ಲಿ ಅಭಿವೃದ್ಧಿಪಡಿಸಲು ಪ್ರಾರಂಭಿಸಿತು ಇದು 1998ರಲ್ಲಿ ಭಾರತೀಯ ಸೈನಿಕರ ಬತ್ತಳಿಕೆ ಸೇರಿತು.ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಸೈನಿಕರ ಬಳಸುವ ಬಂದೂಕುಗಳು ಅಂತಹ ಆತ್ಯಾಧುನಿ ತಂತ್ರಜ್ಞಾನದವಲ್ಲ.ಇನ್ನು ಭಾರತೀಯ ಸೈನ್ಯಕ್ಕೆ ಸಂಪೂರ್ಣವಾಗಿ ಗುಂಡು ನಿರೋಧಕ ಕವಚಗಳು ಸಿಗುತ್ತಿರಲಿಲ್ಲ.೨೦೦೧೪ ರಲ್ಲಿ ಮೋದಿ ಸರ್ಕಾರ ಮೊತ್ತಮೊದಲ ಬಾರಿಗೆ ಭಾರತಿಯ ಸೈನ್ಯಕ್ಕೆ ಇವುಗಳನ್ನ ಪೂರೈಸುವ ಬಗ್ಗೆ ಕ್ರಮ ತೆಗೆದು ಕೊಂಡರು.ಒಂದು ಅಧ್ಯಯನದ ಪ್ರಕಾರ ವಾರ್ಷಿಕವಾಗಿ ಶೇಕಾಡ ೨೫ಕ್ಕಿಂತಲೂ ಅಧಿಕ ಪ್ರಮಾಣದ ಸೈನಿಕರ ಜೀವ ಇಂತಹಾ ಗುಂಡು ನಿರೋಧಕ ಕವಚಗಳು ಇದ್ದಿದ್ದರೆ ಉಳಿಸಬಹುದಾಗಿತ್ತು .

ಇನ್ನು ಅಂದು ಕಾರ್ಗಿಲ್ ಯದ್ದದ ಸಂದರ್ಭದಲ್ಲಿ ಅಂದಿನ ಮಿಗ್  ವಿಮಾನಗಳು ತಮ್ಮ  ಮಿತಿಯನ್ನ ತೋರಿಸಿದ್ದವು. ಹಾಗಾಗಿ  ಅದಕ್ಕೆ ಬದಲೀ ವಿಮಾನಗಳ ಪೂರೈಕೆ ಸೇನೆಗೆ ಆಗಬೇಕಿತ್ತು. ಇದೆ ಕಾರಣಕ್ಕೆ  30 ವರ್ಷಗಳಿಂದ  ಮಂದಗತಿಯಲ್ಲಿ ಸಾಗುತ್ತಿದ್ದ ದೇಶಿವಾಗಿ ಅಭಿವೃದ್ಧಿ ಪಡಿಸುತ್ತಿದ್ದ “ತೇಜಸ್” ಲಘುಯದ್ದ ವಿಮಾನದ ಉತ್ಪಾದನಾ ಗತಿಯನ್ನು ಹೆಚ್ಚಿಸಿದರು.ಕಳೆದ ವರ್ಷ ಭಾರತೀಯ ವಾಯುಸೇನೆ ಹೆಚ್.ಎ.ಎಲ್ ಗೆ ೮೩ ತೇಜಸ್ ಯದ್ದ ವಿಮಾನವನ್ನ ಮುಂದಿನ ಐದು ವರ್ಷಗಳಲ್ಲಿ ಪೂರೈಸುವಂತೆ ಬೇಡಿಕೆಯನ್ನು ಸಲ್ಲಿಸಿತ್ತು. ಅಂದರೆ ವಾರ್ಷಿಕ ಸರಾಸರಿ ೧೬ ವಿಮಾನವನ್ನು ಹೆಚ್.ಎ.ಎಲ್ ಉತ್ಪಾಧನೆ ಮಾಡಬೇಕಿತ್ತು. ಆದರೆ ಹೆಚ್.ಎ.ಎಲ್ ಇದುವರೆಗೆ ಉತ್ಪಾದನೆ ಮಾಡಿದ್ದು ಕೇವಲ ಆರು. ಇದಕ್ಕೆ ಹೆಚ್.ಎ.ಎಲ್ ಹಲವಾರು ಕಾರಣಗಳನ್ನ ಕೊಡುತ್ತದೆ. ಅದೇನೆ ಇರಲಿ ಈ ಸರ್ಕಾರಿ ಯಂತ್ರಗಳ ಮಂದಗತಿಯ ಕೆಲಸ ಮತ್ತು ಇವರೊಳಗಿನ ಸಮನ್ವಯದ ಕೊರತೆಯಿಂದ   ಪ್ರಾಣಾಹುತಿ ಕೊಡುತ್ತಿರುವುದ ನಮ್ಮ ದೇಶದ ಸೈನಿಕರು. ಇಂದು ಭಾರತದ ವಾಯಸೇನೆಯಲ್ಲಿರುವ ಮಿಗ್ ೨೧ ವಿಮಾನಗಳನ್ನು ಹಾರಾರಡುವ ಶವ ಪೆಟ್ಟಿಗಳು ಅನ್ನುತ್ತಾರೆ. ಕಾರಣ ಈ ಹಳೆಯ ವಿಮಾನ ತಾಂತ್ರಿಕ ಕಾರಣಗಳಿಂದ ಸುಮಾರು ೨೦೦ ಕ್ಕೂ ಹೆಚ್ಚುಭಾರಿ ಅಪಘಾತಕ್ಕೀಡಾಗಿದೆ. ಇದಕ್ಕೆ ಕೊನೆಯ ಸೇರ್ಪಡೆ ಇದೆ ಜುಲೈ ೧೮ಕ್ಕೆ ಹಿಮಾಚಲ ಪ್ರದೇಶದಲ್ಲಿ ಮಿಗ್ ೨೧ ರಲ್ಲಿ  ಆದ ಧುರ್ಘಟನೆಯಿಂದ ಮರಣ ಹೊಂದಿದ ಸ್ಕ್ವಾಡ್ರನ್ ಲೀಡರ್ ಮೀತ್ ಕುಮಾರ್.ವಾಯಸೇನೆ ಸ್ವದೇಶಿ ನಿರ್ಮಿತ ತೇಜಸ್ ವಿಮಾನದಿಂದ ಮಿಗ್ ವಿಮಾನಗಳನ್ನ ಬದಲಿಸಿ ಅವಗಳಿಗೆ ಸೇವಾ ನಿವೃತ್ತಿ ಕೊಡಬೇಕು ಎನ್ನುವುದರಲ್ಲಿ ಇದೆ.ಸದ್ಯದ ಪರಿಸ್ಥಿತಿಯಲ್ಲಿ ಹೆಚ್.ಎ.ಎಲ್ ತೇಜಸ್ ವಿಮಾನವನ್ನ ಮಂದಗತಿಯಲ್ಲಿ ಉತ್ಪಾಧನೆ ಮಾಡುತ್ತಾ ಇರುವ ಕಾರಣ ಈ ಬದಲಾವಣೆ ಪ್ರಕ್ರಿಯೆ  ನಿಧಾನವಾಗಿದೆ.ಇದು ದೇಶದ ರಕ್ಷಣಾ ದೃಷ್ಟಿಯಿಂದಲೂ ಆಘಾತಕಾರಿ.

ಇನ್ನು ಗಡಿಭಾಗದಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಿನ ಮೋದಿ ಸರ್ಕಾರ ಬಹಳಷ್ಟು ಕೆಲಸಗಳನ್ನ ಕೈಗೆತ್ತಿಕೊಂಡಿದೆ. ಭಾರತ, ಪಾಕಿಸ್ತಾನದ ಗಡಿ ಉದ್ದಕ್ಕೂ ಉಪಗ್ರಹಗಳ ಮುಖಾಂತರ ಕಣ್ಗಾವಲಿಡುವ ಮತ್ತು ಇಸ್ರೇಲಿನ ಸಹಾಯದಿಂದ ಲೇಸರ್ ಗಡಿ ನಿರ್ಮಾಣ ಮಾಡುವ ಪ್ರಕ್ರಿಯೆಯು ಪ್ರಾರಂಭಗೊಂಡಿದೆ.ಮೋದಿ ಸರಕಾರದಿಂದ “ಭಾರತ್ ಮಾಲಾ” ಯೋಜನೆಯಡಿ ಭಾರತದ ಭೂಬಾಗದ ಗಡಿಯ ಸುತ್ತಲೂ ಅತ್ಯಾಧುನಿಕ ತಂತ್ರಜ್ಞಾದಿಂದ ಸರ್ವ ಋತು ರಸ್ತೆ ಅಭಿವೃದ್ಧಿ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಇದರ ಜೊತೆಗೆ ಭಾರತದ,ಉತ್ತರದ ಗಡಿಭಾಗದಲ್ಲಿ ಹಿಂದೆಂದಿಗಿಂತಲೂ ಅತ್ಯಧಿಕ ಸೇನಾ ಜಮಾವಣೆ ಮಾಡಿದೆ.ಅಲ್ಲದೆ ಅಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮದ್ದು ಗುಂಡುಗಳ ಸಂಗ್ರಹದ ದಾಸ್ತಾನು,ಬ್ರಹ್ಮೋಸ್ ಕ್ಷಿಣಿಗಳಿಂದ ಸಜ್ಜುಗೊಂಡ ಸೇನಾ ತುಕಡಿಯನ್ನೂ ನಿಯೋಜಿಸಿದೆ.ಉತ್ತರದ ಗಡಿಬಾಗದ ಫಾರ್ವರ್ಡ್ ಏರ್  ಬೇಸ್ ಗಳಲ್ಲೂ ಸುಖೋಯ್ ಯುದ್ದ ವಿಮಾನಗಳ ತಂಡವೂ ಸದಾ ಸನ್ನದ್ದ ಸ್ಥಿತಿಯಲ್ಲಿ ಇದ್ದು ಭಾರತದ ಗಡಿಭಾಗದಲ್ಲಿ ಗಸ್ತು ತಿರುಗುತ್ತಿವೆ.ಲಡಾಕ್ ಭಾಗದಲ್ಲಿ ವಾಯಪಡೆಯ ಸುಸಜ್ಜಿತ ವಾಯುನೆಲೆಯ ನಿರ್ಮಾಣವಾಗಿದೆ.

ಕಾರ್ಗಿಲ್ ಯುದ್ಧ ನಡೆದು ಸುಮಾರು ಹತ್ತೊಂಬತ್ತು ವರ್ಷಗಳು ಕಳೆದಿದೆ.ಹಿಮಾಲಯದ ಮಂಜು ಬಹಳಷ್ಟು ಕರಗಿ ನೀರಾಗಿ ಸಮುದ್ರ ಸೇರಿದೆ. ಕಾರ್ಗಿಲ್ ಯುದ್ಧದಿಂದ ಸಾಕಷ್ಟು ಪಾಠವನ್ನು ಕಲಿತಿದ್ದೇವೆ.ಕೆಲವು ಸುಧಾರಣೆಗಳೂ ಆಗಿವೆ.ಅಂತೆಯೆ ಆಗಬೇಕಾದದ್ದೂ ಬಹಳಷ್ಟು ಇದೆ.ದೇಶದ ಭದ್ರತೆಯ ಹಿತದೃಷ್ಟಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್,ಲಾಲ್ ಬಹದ್ದೂರ್ ಶಾಸ್ತ್ರಿ,ಪಿವಿ ನರಸಿಂಹರಾವ್,ಅಟಲ್ ಬಿಹಾರಿ ವಾಜಪೇಯಿ,ನರೇಂದ್ರ ಮೋದಿಯವರಂತಹ ನಾಯಕರ ನಾಯಕತ್ವ ಈ ದೇಶಕ್ಕೆ ಮತ್ತೆ ಮತ್ತೆ ಬೇಕಿದೆ.ಇಲ್ಲದೆ ಹೋದರೆ  ದೇಶದ ಗತಿ ಹೇಗಿರುತ್ತದೆ ಎನ್ನುವುದಕ್ಕೆ ನೆಹರೂ ಮಹಾಶಯನ ಹಿಮಾಲಯನ್ ಬ್ಲಂಡರ್ ಒಂದೇ ಸಾಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments