ವಿಷಯದ ವಿವರಗಳಿಗೆ ದಾಟಿರಿ

ಜುಲೈ 31, 2018

ರಾಫೆಲ್ ಯುದ್ಧ ವಿಮಾನದ ಸತ್ಯಾಸತ್ಯತೆಗಳು

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮುಗಿದ ನಂತರ ಕೇಂದ್ರದ ರಾಜಕೀಯ ವಲಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ರಾಫೆಲ್ ಯುದ್ಧ ವಿಮಾನ ಖರೀದಿಯ ವಿವಾದ.ಕಳೆದ ವಾರದ ಅಂಕಣದಲ್ಲಿ ಸಂಸದ ರಾಹುಲ್ ಗಾಂಧೀ ಸಂಸತ್ತಿನಲ್ಲಿ ರಾಫೆಲ್ ಬಗ್ಗೆ ಮಾತನಾಡಿದ್ದನ್ನು ಅದಕ್ಕೆ ಭಾರತ ಹಾಗೂ ಫ್ರಾನ್ಸ್ ಸರ್ಕಾರ ನೀಡಿದ ಸ್ಪಷ್ಟಿಕರಣದ ಬಗ್ಗೆ ಹೇಳಿದ್ದೆ.

ಇದೆಲ್ಲದರ ಮೂಲವಿರುವುದು ೨೦೦೧ರಲ್ಲಿ ಭಾರತೀಯ ವಾಯುಪಡೆ (IAF) ತನಗೆ ೧೨೬ ಮೀಡಿಯಂ ಮಲ್ಟಿ ರೋಲ್ ಕಂಬ್ಯಾಟ್ ಯುದ್ಧ ವಿಮಾನಗಳ ಅವಶ್ಯಕತೆಯಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ. ಸಾಧಾರಣವಾಗಿ IAF ಬಳಿ ಕಡಿಮೆಯೆಂದರೂ ೪೫ ಸ್ಕ್ವಾಡ್ರನ್ಸ್ ನಷ್ಟು ಯುದ್ಧವಿಮಾನಗಳು ಇರಬೇಕು ಅಥವಾ ಕನಿಷ್ಟವೆಂದರೂ ೩೯ಸ್ಕ್ವಾಡ್ರನ್ಸ್ ನಷ್ಟು ಇರಬೇಕು ಎನ್ನುವ ನಿಯಮವಿದೆ.ನಮ್ಮ ಬಳಿಯಿದ್ದ ಮಿಗ್ ೨೧ ಮತ್ತು ಮಿಗ್ ೨೭ರ ಜೀವಿತಾವಧಿಗಳು ಮುಗಿಯುತ್ತ ಬಂದಿದ್ದವು ಮೇಲಾಗಿ,ಆ ಯುದ್ಧ ವಿಮಾನಗಳ ಮಿತಿಯನ್ನು ಕಾರ್ಗಿಲ್ ಯುದ್ಧ ಮನಗಾಣಿಸಿತ್ತು ಕೂಡ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಬೇಡಿಕೆ IAF ನಿಂದ ಬಂದಿತ್ತು. ೨೦೦೭ರಲ್ಲಿ ಈ ಕುರಿತು RFP (request for proposals) ಸಲ್ಲಿಸಿತ್ತು. ೬ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ತೀವ್ರತರನಾದ ಪರೀಕ್ಷೆಗಳ ಮೂಲಕ ಅಂತಿಮವಾಗಿ ರಾಫೆಲ್ ಮತ್ತು ಯುರೋ ಫೈಟರ್ ಟೈಫೂನ್ ವಿಮಾನಗಳು ಅಂತಿಮ ಸುತ್ತಿನಲ್ಲಿ ಉಳಿದಿದ್ದವು.ಇದರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದು ರಾಫೆಲ್.ಇಷ್ಟೆಲ್ಲಾ ಆಗುವಾಗ ೨೦೧೨ ಬಂದಿತ್ತು. ಸರಿ ಸುಮಾರು ಹನ್ನೊಂದು ವರ್ಷಗಳು ವರದಿ,ಪ್ರಪೋಸಲ್ ಹಾಗೂ ಯುದ್ಧ ವಿಮಾನದ ಆಯ್ಕೆಯಲ್ಲಿಯೇ ಕಳೆದು ಹೋಗಿತ್ತು. ಹಾಗೂ ಹೀಗೂ ರಾಫೆಲ್ ಖರೀದಿಯ ಕುರಿತ ವ್ಯಾವಹಾರಿಕ ಚರ್ಚೆಗಳು ಶುರುವಾಗಿದ್ದು ೩೧ ಜನವರಿ ೨೦೧೨ ರ ನಂತರ.

೨೦೧೪ರ ವೇಳೆಗೆ ಯುಪಿಎ ತನ್ನ ಹತ್ತು ವರ್ಷಗಳ ಅಧಿಕಾರವಧಿಯ ಕೊನೆ ದಿನಗಳನ್ನು ಎಣಿಸುತ್ತಿರುವಾಗಲೂ ಈ ಡೀಲ್ ಮುಗಿದಿರಲಿಲ್ಲ,ಬದಲಿಗೆ ಇನ್ನಷ್ಟು ಕಗ್ಗಂಟಾಗಿತ್ತು. ಹೆಚ್ಚಿನ ಮೊತ್ತದ್ದು ಒಂದು ವಿಷಯವಾದರೇ,ಅದನ್ನು ಬಿಟ್ಟು ಇನ್ನೆರಡು ಪ್ರಮುಖ ಅಡೆತಡೆಗಳಿದ್ದಿದ್ದು ತಂತ್ರಜ್ಞಾನ ವರ್ಗಾವಣೆ ಹಾಗೂ ಉತ್ಪಾದನೆ ಕುರಿತದ್ದು. ನಾನು ಹಣ ನೀಡುತ್ತಿರುವುದರಿಂದ ತನಗೆ ಸಂಪೂರ್ಣ ತಂತ್ರಜ್ಞಾನವನ್ನು ತನಗೆ ನೀಡಬೇಕು ಎನ್ನುವುದು ಭಾರತದ ವಾದವಾದರೇ,ದಸಾಲ್ಟ್ ಏವಿಯೇಶನ್ನಿನವರು ಕಡಿಮೆ ಪ್ರಮಾಣದ ತಾಂತ್ರಿಕ ಜ್ಞಾನದ ಜೊತೆಗೆ ಲೈಸೆನ್ಸ್ ಇರುವ ಉತ್ಪಾದನೆಗೆಮಾತ್ರ ಒಪ್ಪುವುದಾಗಿ ಹಠವಿಡಿದು ಕುಳಿತಿದ್ದರು.ಒಪ್ಪಂದದ ಇನ್ನೊಂದು ಅಂಶದ ಪ್ರಕಾರ ೧೨೬ ವಿಮಾನಗಳಲ್ಲಿ ೧೮ ರೆಡಿ-ಟು -ಫ್ಲೈ ವಿಮಾನಗಳನ್ನು ಅಲ್ಲಿಯೇ ಉತ್ಪಾದಿಸಿ ತರುವುದಾಗಿದ್ದರೆ,ಇನ್ನುಳಿದ ಇನ್ನುಳಿದ ೧೦೮ ವಿಮಾನಗಳನ್ನು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಉತ್ಪಾದಿಸುವುದಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲೇ ನಾಸಿಕ್ ನಲ್ಲಿರುವ HAL ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ದಾಸಾಲ್ಟ್ ಏವಿಯೇಶನ್ನಿನ ತಂಡ ಅಲ್ಲಿನ ಉತ್ಪಾದನ ಗುಣಮಟ್ಟ ಮತ್ತು ಕ್ವಾಲಿಟಿ ಚೆಕ್ ಬಗ್ಗೆ ಅಸಂತೋಷ ವ್ಯಕ್ತಪಡಿಸಿತ್ತು. ತನ್ನ ವಿಮಾನಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ HAL ಉತ್ಪಾದಿಸಲಾರದು,ಹಾಗಾಗಿ ಆ ೧೦೮ ವಿಮಾನಗಳಿಗೆ ನಾವು ಗ್ಯಾರಂಟಿಯನ್ನು ಕೊಡಲಾಗದು ಎನ್ನುವುದು ದಾಸಾಲ್ಟ್ ವಾದವಾಗಿತ್ತು. ಒಟ್ಟಾರೆಯಾಗಿ ಮಾತುಕತೆ ಮುಂದುವರೆಯಲಾಗದ ಹಂತಕ್ಕೆ ಬಂದು ನಿಂತಿತ್ತು.

ಅತ್ತ, ಖರೀದಿ ಹಾಗೂ ಉತ್ಪಾದನೆಯ ಕುರಿತ ಮಾತುಕತೆಯ ಕಗ್ಗಂಟಿನಲ್ಲಿ ೧೪ ವರ್ಷಗಳು ಕಳೆದು ಹೋಗಿತ್ತು. ಇತ್ತ IAF ಬತ್ತಳಿಕೆ ಸೊರಗಿತ್ತು. ಚೀನಾ-ಪಾಕಿಸ್ತಾನದಂತಹ ದೇಶಗಳನ್ನು ಆಜೂ ಬಾಜಿನಲ್ಲಿಟ್ಟುಕೊಂಡು ಇಂತಹ ಸ್ಥಿತಿಗೆ ತಲುಪಿದರೆ ಮುಂದಾಗಬಹುದಾದ ಅಪಾಯವನ್ನು ಮನಗಂಡ ನರೇಂದ್ರ ಮೋದಿಯವರ ಸರ್ಕಾರ,ಸೈನ್ಯದ ಅಗತ್ಯವನ್ನು ತುರ್ತಾಗಿ ಪೂರೈಸುವ ನಿರ್ಧಾರ ತಳೆಯಿತು. ೨೦೧೫ರ ಏಪ್ರಿಲಿನಲ್ಲಿ ಪ್ರಧಾನಿ ಮೋದಿಯವರು ಫ್ರಾನ್ಸ್ ಪ್ರವಾಸ ಕೈಗೊಂಡಾಗ, ಈ ಹಿಂದಿನ ೧೨೬ ವಿಮಾನ ಖರೀದಿಯ ಮಾತುಕತೆಯನ್ನು ರದ್ದುಗೊಳಿಸಿ ೩೬ ರೆಡಿ-ತು-ಫ್ಲೈ ವಿಮಾನಗಳನ್ನು ತೆಗೆದುಕೊಳ್ಳುವ G2G (government-to-government ) ಒಪ್ಪಂದದ ಘೋಷಣೆ ಮಾಡಿದರು.ಉಳಿದಂತೆ ತಾಂತ್ರಿಕ ಹಾಗೂ ಇನ್ನಿತರೇ ವ್ಯಾವಹಾರಿಕ ರೂಪುರೇಷೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯಲಿವೆ ಎಂದು ಘೋಷಿಸಿದ್ದರು.ಹಾಗೆ ಕಳೆದ ೧೪ ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿದ್ದ ಭಾರತೀಯ ವಾಯುಪಡೆಯ ಬೇಡಿಕೆಗೆ ಮೋಕ್ಷ ಸಿಕ್ಕಿತು. ೧.೫ ವರ್ಷಗಳ ಅವಧಿಯಲ್ಲಿ ಉಳಿದೆಲ್ಲ ಸರ್ಕಾರಿ ಪ್ರಕ್ರಿಯೆಗಳು ಮುಗಿದಿದ್ದವು. ಎಲ್ಲಿಯ ೧೪ ವರ್ಷಗಳು ಎಲ್ಲಿಯ ೧.೫ ವರ್ಷ?

ಇಷ್ಟೆಲ್ಲಾ ಆದ ನಂತರದ ಬೆಳವಣಿಗೆಯಲ್ಲಿ ದಸಾಲ್ಟ್ ಏವಿಯೇಷನ್,ಈ ಡೀಲಿನ ಸಹಭಾಗಿದಾರನಾಗಿ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಅನ್ನು ಸೇರಿಸಿಕೊಳ್ಳುವ ಘೋಷಣೆ ಮಾಡಿತು.ಅಲ್ಲಿಂದ ಕಾಂಗ್ರೆಸ್ ,ರಾಹುಲ್ ಗಾಂಧೀ ಹೊಟ್ಟೆನೋವು ಶುರುವಾಯಿತು. ಸರ್ಕಾರಿ ಸ್ವಾಮ್ಯದ HAL ಅನ್ನು ಬದಿಗಿಟ್ಟು, ಪ್ರಧಾನಿ ತನ್ನ ಗೆಳೆಯನ ಖಾಸಗಿ ಕಂಪೆನಿಗೆ ಲಾಭ ಮಾಡಿಕೊಟ್ಟರು ಎನ್ನುವ ಆರೋಪವಿಟ್ಟುಕೊಂಡರು.ಹಾಗೆಯೇ ಈ ಒಪ್ಪಂದ ಮಾಡಿಕೊಳ್ಳುವಾಗ ಮೋದಿಯವರು ಸಂಪುಟ ಸಹುದ್ಯೋಗಿಗಳನ್ನು ಹಾಗೂ ಸರ್ಕಾರಿ ನಡಾವಳಿಗಳನ್ನು ಪಾಲಿಸಿಲ್ಲ ಎನ್ನುವುದು ಮತ್ತೊಂದು ಆರೋಪವಾಗಿತ್ತು. ಮೊದಲಿಗೆ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಏಕವ್ಯಕ್ತಿಯಿಂದ ಸಾಧ್ಯವಿಲ್ಲವೆನ್ನುವುದು ರಾಹುಲ್ ಗಾಂಧಿಯಂತವರ ಕಾಮನ್ ಸೆನ್ಸಿಗೆ ಅರ್ಥವಾಗದೇ ಇರುವುದೇನು ಸೋಜಿಗವೆನಿಸುವುದಿಲ್ಲ. ಭಾರತೀಯ ವಾಯುಸೇನೆಯ ತುರ್ತು ಅಗತ್ಯಗಳನ್ನು ಪೂರೈಸಲು ಇಂತಹ ಒಪ್ಪಂದ ಅಗತ್ಯವಾಗಿತ್ತು ಎಂದು ಆಗಿನ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರೇ ಹೇಳಿದ್ದರು. ಹಾಗೆಯೇ ಯುಪಿಎ ಸರ್ಕಾರದ ೧೨೬ ವಿಮಾನಗಳ ಒಪ್ಪಂದದಿಂದಾಗಿ ಮುಂದಿನ ೧೦-೧೧ ವರ್ಷಗಳಲ್ಲಿ ಭಾರತಕ್ಕೆ ೧.೩ ಲಕ್ಷಕೋಟಿ ಬೇಕಾಗುತ್ತಿತ್ತು.ಇಷ್ಟೂ ಹಣ ಒಂದೇ ಕಡೆ ಹೋದರೆ ಸೈನ್ಯದ ಉಳಿದ ಕೆಲಸಗಳಿಗೆ ಹಣ ಉಳಿಯುತ್ತದೆಯೇ ಎಂದೂ ಕಾಂಗ್ರೆಸ್ಸನ್ನು ಪ್ರಶ್ನಿಸಿದ್ದರು. ಇನ್ನು ಮೋದಿಯವರ ಏಕವ್ಯಕ್ತಿ ನಿರ್ಧಾರದ ಬಗ್ಗೆ ನೋಡುವುದಾದರೆ,ಸರ್ಕಾರದ ಮುಖ್ಯಸ್ಥರಾಗಿ ಘೋಷಣೆ ಮಾಡಿದಾಗಲೇ ಮುಂದಿನ ರೂಪುರೇಷೆಗಳು ಅಧಿಕಾರದ ಮಟ್ಟದಲ್ಲಿಯೇ ನಡೆಯಲಿದೆ ಎಂದಿದ್ದರು. ಇವೆಲ್ಲವೂ ನಡೆದಿರುವುದು DPP (defence procurement procedure) ಪ್ರಕಾರವೇ.ಹೀಗಿದ್ದಾಗ,ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನದ್ದು ಅರ್ಥವಿಲ್ಲದ ಬಡಬಡಿಕೆಯಷ್ಟೇ.

ಇನ್ನು,ಹೊಸ ಒಪ್ಪಂದದಲ್ಲಿ HAL ಅನ್ನು ಬದಿಗಿಟ್ಟು ಅಂಬಾನಿಯ ರಿಲಯನ್ಸ್ ತಂದ ಬಗೆಗಿನ ಆರೋಪದ ಕುರಿತು.ಅಸಲಿಗೆ ಮೂಲ ಒಪ್ಪಂದದಲ್ಲಿ HAL ಬೇಕಾಗಿದ್ದಿದ್ದು ಜಂಟಿ ಸಹಭಾಗಿತ್ವದ ಉತ್ಪಾದನೆಗಾಗಿ. ಮೂಲ ಒಪ್ಪಂದದಲ್ಲೇ ದಸಾಲ್ಟ್ ಏವಿಯೇಷನ್,HALನ ಕ್ವಾಲಿಟಿ ಬಗ್ಗೆ ನಾನು ಗ್ಯಾರಂಟಿ ನೀಡುವುದಿಲ್ಲವೆಂದಿತ್ತು. ಹಾಗೆಯೇ ಇತಿಹಾಸ ನೋಡಿದರೆ ಅವರಿಗೆ ನಿಗದಿತ ಸಮಯದಲ್ಲಿ ವಿಮಾನಗಳನ್ನು ನೀಡಬಲ್ಲ ಕ್ಷಮತೆ ಇರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿತ್ತು. ದಸಾಲ್ಟ್ ಅನುಮಾನಕ್ಕೂ ಪುಷ್ಟಿನೀಡುವ ಅಂಶಗಳಿವೆ.ದೇಶೀಯ ತೇಜಸ್ ಲಘು ಯುದ್ಧ ವಿಮಾನಗಳನ್ನು ಉತ್ಪಾದಿಸುತ್ತಿರುವ HALಗೆ ಮುಂದಿನ ೫ ವರ್ಷಗಳಲ್ಲಿ ೮೩ ವಿಮಾನಗಳನ್ನು ನೀಡುವಂತೆ ಭಾರತ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಈ ೮೩ರಲ್ಲಿ ಇದುವರೆಗೆ ದಕ್ಕಿದ್ದು ಕೇವಲ ೬ ಮಾತ್ರವೇ. ಇದು ಸರ್ಕಾರಿ ಸ್ವಾಮ್ಯದ ಪಬ್ಲಿಕ್ ಸೆಕ್ಟರ್ ಕಂಪೆನಿಗಳು ಕಾರ್ಯ ನಿರ್ವಹಿಸುವ ಸ್ಪೀಡ್.ದೇಶದ ರಕ್ಷಣೆಯ ದೃಷ್ಟಿಯಿಂದ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನದ ಅಂಗವಾಗಿ ಸರ್ಕಾರ ಖಾಸಗಿ ಕಂಪೆನಿಗಳನ್ನು ಏವಿಯೇಷನ್ ಉದ್ಯಮದಲ್ಲಿ ಪ್ರೋತ್ಸಾಹಿಸಿದರೇನು ತಪ್ಪು? ವ್ಯಾವಾಹಾರಿಕ ಲೋಕದಲ್ಲಿ ಯಾವುದು ಗಟ್ಟಿಯೋ ಅದೇ ನಿಲ್ಲಬೇಕೆ ಹೊರತು ಪಬ್ಲಿಕ್ ಸೆಕ್ಟರಿನ ಬಾವುಟ ಹಿಡಿದು ಬದುಕುವ ಕಾಲ ಮುಗಿಯಿತು. ಅಷ್ಟಕ್ಕೂ ಈ ಒಪ್ಪಂದದಲ್ಲಿ ತನ್ನ ಸಹಭಾಗಿದಾರನನ್ನ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ದಸಾಲ್ಟ್ ಏವಿಯೇಶನ್ನಿನವರಿಗೇ ಇತ್ತು,ಅಂತಹ ಸ್ವಾತಂತ್ರ್ಯವನ್ನು ಅವರಿಗೆ ನೀಡಿರುವುದು DPP (defence procurement procedure) ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಈಗ ಹೇಳಿ ಮೋದಿಯವರು ಯಾರ ಉದ್ಯೋಗ ಕಿತ್ತುಕೊಂಡಿದ್ದಾರೆ? ರಿಲಯನ್ಸ್ ಡಿಫೆನ್ಸಿನಲ್ಲಿ ಕೆಲಸ ಮಾಡುವವರು ಪಾಕಿಸ್ತಾನಿಗಳೇ? ದೇಶಪಾಂಡೆ,ದಿನೇಶ್ ಗುಂಡೂರಾವ್ ತರದವರು, ಮೋದಿ ಕನ್ನಡಿಗರ ಕೆಲಸ ಕಸಿದುಕೊಂಡರೆಂದು ಹಸಿಸುಳ್ಳು ಹೇಳುತ್ತಾರೆ.HALನಲ್ಲಿ ಕನ್ನಡಿಗರೆಷ್ಟು ಮಂದಿ ಇದ್ದಾರೆಂದು ಇವರುಗಳು ಸಮೀಕ್ಷೆ ಮಾಡಿ ನೋಡುವುದು ಒಳ್ಳೆಯದು. ನಾನು ನೋಡಿರುವಂತೆಯೇ ಮ್ಯಾನೇಜ್ಮೆಂಟ್ ಲೆವೆಲ್ಲಿನಲ್ಲಿ ಉತ್ತರ ಭಾರತೀಯರೇ ಅಲ್ಲಿ ಅಧಿಕವಿದ್ದರೇ, ಉಳಿದಂತೆ ತಮಿಳು-ತೆಲುಗಿನವರು ಹೆಚ್ಚಿದ್ದಾರೆ,ಹೀಗಿದ್ದಾಗ ಕನ್ನಡಿಗರ ಕೆಲಸ ಕಸಿದುಕೊಂಡರೆನ್ನುವುದು ಎಷ್ಟು ಸರಿ? ಹಾಗೆಯೇ ಈ ಒಪ್ಪಂದ ನಮ್ಮ ಕೈ ತಪ್ಪಿದ್ದೇಕೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು HALನ ಉನ್ನತ ಮ್ಯಾನೇಜ್ಮೆಂಟ್. ಸರ್ಕಾರದಿಂದ ಸಕಲ ಸವಲತ್ತು ಸಿಕ್ಕ ನಂತರವೂ ಅವರ ಕಾರ್ಯವಿಧಾನ,ಗುಣಮಟ್ಟ ಅಂತರರಾಷ್ಟ್ರೀಯ ಮಟ್ಟದಲ್ಲಿಲ್ಲ ಎನ್ನುವ ಆರೋಪಕ್ಕೆ ಇವರ ಉತ್ತರವೇನು? ಎಲ್ಲದಕ್ಕೂ ಮೋದಿಯೇ ಏಕೆ ಉತ್ತರಿಸಬೇಕು? ಸರ್ಕಾರಿ ಸಂಬಳ,ಸವಲತ್ತು ಪಡೆಯುತ್ತಿರುವವರು ಉತ್ತರದಾಯಿಗಳಲ್ಲವೇ?

ಇದು ರಾಫೆಲ್ ಯುದ್ಧ ವಿಮಾನ ಖರೀದಿಯ ಇತಿಹಾಸ ಹಾಗೂ ವಾಸ್ತವ ಅಂಶಗಳು. ರಾಜಕೀಯವನ್ನು ಯಾವ ವಿಷಯದಲ್ಲಿ ಬೇಕಾದರೂ ವಿರೋಧ ಪಕ್ಷಗಳು ಮಾಡಲಿ. ಆದರೆ ದೇಶದ ರಕ್ಷಣೆಯ ವಿಷಯದಲ್ಲಿ ಹೀಗೆ ಆಧಾರ ರಹಿತ ಆರೋಪ ಮಾಡುವುದು ಅತ್ಯಂತ ಬೇಜವಾಬ್ದಾರಿಯ ನಡೆಯಾಗುತ್ತದೆ ಅಂತಹದ್ದೇ ನಡೆ ಪ್ರಸ್ತುತ ರಾಹುಲ್ ಹಾಗೂ ಅವರ ಕಾಂಗ್ರೆಸ್ ಪಕ್ಷದ್ದಾಗಿದೆ. ೧೪ ವರ್ಷಗಳಿಂದ ಕೆಸರಿನಲ್ಲಿ ಬಿದ್ದ ಎಮ್ಮೆಯಂತೆ ಸಾಗುತ್ತಿದ್ದ ರಕ್ಷಣಾ ಒಪ್ಪಂದವನ್ನು ದೇಶದ ಹಿತದೃಷ್ಟಿಯಿಂದ ಕಸದ ಬುಟ್ಟಿಗೆಸೆದು ಹೊಸ ಒಪ್ಪಂದವನ್ನ ಮೋದಿಯವರ ಸರ್ಕಾರ ಮಾಡಿಕೊಂಡಿದೆ. ಈ ಹೊಸ ಒಪ್ಪಂದದ ಅನ್ವಯ ಮುಂದಿನ ೩೬ ತಿಂಗಳಲ್ಲಿ ಮೊದಲ ೨ ವಿಮಾನಗಳು ಭಾರತದ ವಾಯುಪಡೆಯ ಕೈ ಸೇರಲಿವೆ. ಉಳಿದ ೩೪ ವಿಮಾನಗಳು ೬೭ ತಿಂಗಳಲ್ಲಿ ಪೂರ್ಣವಾಗಲಿವೆ. ೨೦೦೧ರ ಬೇಡಿಕೆಗೆ ೨೦೧೬ರಲ್ಲಿ ಮೋದಿಯವರು ಮೋಕ್ಷ ನೀಡಿದ್ದಾರೆ. ಅಭಿನಂದನೆ ಹೇಳುವ ಬದಲು ದೇಸಿ ಗೊಬೆಲ್ಸ್ ರಾಹುಲ್ ಮತ್ತವರ ಗಂಜಿಗಿರಾಕಿಗಳು ಮೋದಿಯವರನ್ನೇ ಕಟಕಟೆಯಲ್ಲಿ ನಿಲ್ಲಿಸಲು ಹೊರಟಿದ್ದಾರೆ.ತನ್ನ ಐವತ್ತು ವರ್ಷಗಳ ಆಡಳಿತದಲ್ಲಿ ರಕ್ಷಣಾ ವಲಯದಲ್ಲಿ ದೇಶೀ ತಂತ್ರಜ್ಞಾನ ಹಾಗೂ ಶಸ್ತ್ರಾಸ್ತ್ರ ಸಂಶೋಧನೆ,ಉತ್ಪಾದನೆಗೆ ಕಾಂಗ್ರೆಸ್ ಸರ್ಕಾರಗಳು ಗಂಭೀರವಾಗಿ ಪ್ರಯತ್ನಿಸಿದ್ದರೇ,ನಾವಿಂದು ಅವರಿವರ ಮುಂದೆ ಚೌಕಾಸಿಗೆ ಕೂರಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ. ಟ್ವಿಟರಿನಲ್ಲಿ ಬೇಜವಾಬ್ದಾರಿಯಾಗಿ ಬರೆಯುವ ರಾಹುಲ್ ಗಾಂಧೀ ಅಂಡ್ ಕಂಪೆನಿ ಆತ್ಮ ಸಾಕ್ಷಿಯನ್ನು ಕೇಳಿಕೊಳ್ಳಲಿ ಎನ್ನೋಣವೆಂದರೆ ಇವರಿಗೆ ಅದು ಇದ್ದಂತಿಲ್ಲ,ಕಡೇ ಪಕ್ಷ ಕನ್ನಡಿಯಲ್ಲೊಮ್ಮೆ ಮುಖ ನೋಡಿಕೊಳ್ಳಲಿ.ಅಂತಿಮವಾಗಿ ಹೇಳುವುದಾದರೆ ರಾಫೆಲ್ ಯುದ್ಧ ವಿಮಾನ ಖರೀದಿ ಪಾರದರ್ಶಕವಾಗಿದೆ ಮತ್ತು ಭಾರತೀಯ ವಾಯುಪಡೆಯ ತುರ್ತು ಬೇಡಿಕೆಗಳಿಗೆ ಸ್ಪಂದಿಸಲೇಬೇಕಾಗಿತ್ತು.ಜವಾಬ್ದಾರಿಯುತ ಮೋದಿ ಸರ್ಕಾರ ಆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments