ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2018

ದೇಶಕಟ್ಟುವ ಫ್ಯಾಂಟಸಿ..

‍ನಿಲುಮೆ ಮೂಲಕ

– ಸುಜಿತ್ ಕುಮಾರ್

Sheikh-Zayed-bin-Sultan-Al-Nahyan-696x464ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ಧ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು ? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು ಎಲ್ ಇ ಡಿ ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರಾಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ. ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕ್ಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನನ್ನು ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೋ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು ? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?
ಬಿಲ್ಲಕುಲ್ ಇಲ್ಲ!

ಹೌದು. ಶತಮಾನಗಳಿಂದ ರಣಬೆಂಕಿಯ ಶಾಖದಲ್ಲಿ ಬಾಡಿ ಬೆಂದ ಆ ದೇಶದ ಇಂದಿನ ಸ್ಥಿತಿಯನ್ನು ನೋಡಿದರೆ ನಾವು ಅಕ್ಷರ ಸಹ ಮೂಖವಿಸ್ಮಿತರಾಗುವುದರಲ್ಲಿ ಸಂಶಯವೇ ಬೇಡ. ಇಂದು ತಲವಾರು ಜಿಡಿಪಿಯಲ್ಲಿ ಅಮೇರಿಕ, ಕೆನಡಾ, ಜರ್ಮನಿಯಂತಹ ಸಬಲ ದೇಶಗಳನ್ನೇ ಹಿಂದಿಕ್ಕಿ, ಮಾನವ ಅಭಿವೃದ್ಧಿ ಸೂಚ್ಯಂಕ (HDI) ದಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲಿ ಬರುವ, ವಿಶ್ವದಲ್ಲೇ ಅತಿ ಹೆಚ್ಚಿನ ಗಗನಚುಂಬಿ ಕಟ್ಟಡಗಳ ನಗರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದು (ದುಬೈ), ವಿಶ್ವದ ಅತಿ ಎತ್ತರವಾದ ಕಟ್ಟಡ, ಅತಿ ದೊಡ್ಡದಾದ ಮಾನವನಿರ್ಮಿತ ದ್ವೀಪ, ಅತಿ ದೊಡ್ಡ ಶಾಪಿಂಗ್ ಮಾಲ್ (ವಿಸ್ತೀರ್ಣವಾರು), ಅತಿ ದೊಡ್ಡ ಅಕ್ವೇರಿಯಂ ಗಳ ನಿರ್ಮಾಣದ ಹೆಗ್ಗಳಿಕೆಯನ್ನೂ ಗಿಟ್ಟಿಸಿಕೊಂಡು, ದೇಶದ ಜನಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಪರದೇಶದವರೇ ಬಂದು ಮುಗಿಬೀಳುವಂತೆ ಮಾಡಿಕೊಂಡಿದೆ ಎಂದರೆ ನಾವು ನಂಬಲೇ ಬೇಕು. ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್). ಅಬುಧಾಬಿ, ದುಬೈ, ಶಾರ್ಜಾ ಎಂಬ ಒಟ್ಟು ಏಳು ಸಂಸ್ಥಾನಗಳು ಸೇರಿ ಮೂಡಿದ ದೇಶವಿದು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಇಂದಿಗೂ ರಾಜರುಗಳ ಗಟ್ಟಿ ಆಳ್ವಿಕೆಯಲ್ಲಿಯೇ ಇರುವ ದೇಶ. ಅಬುಧಾಬಿ ದೇಶದ ರಾಜಧಾನಿ. ಇಂದು ಜಗತ್ತಿನ ಮೂಲೆ ಮೂಲೆಯ ಗಲ್ಲಿ ಗಲ್ಲಿಗಳಲ್ಲಿಯೂ ತನ್ನ ಹೆಸರನ್ನು ಗುರುತಿಸಿಕೊಳ್ಳಬಲ್ಲ ಯುಎಇ ಒಂದು ಕಾಲಕ್ಕೆ ಯಾರಿಗೂ ಬೇಡವಾಗಿದ್ದ ಬಂಜರು ಭೂಮಿಯೆಂದೇ ಹೇಳಬಹುದು. ಕೇವಲ ದಶಕ ಒಂದೆರಡರಲ್ಲೇ ಅಭಿವೃದ್ಧಿ ಹಾಗು ಬೆಳವಣಿಗೆಯ ಮಹಾಬದಲಾವಣೆಯನ್ನು ಕಂಡ ಈ ದೇಶದ ಇತಿಹಾಸವನ್ನು ಕೇಳುವುದೇ ಒಂದು ರೋಮನಂಚಕಾರಿ ಅನುಭವ.

ಶತಕಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಇಲ್ಲಿನ ಪ್ರಾಂತ್ಯಗಳು ಜಗತ್ತಿನ ಭೂಪಟದಲ್ಲಿ ಗುರುತಿಸಲ್ಪಡುತ್ತಿದ್ದದ್ದು ಮುತ್ತುಗಳ ವಹಿವಾಟಿಗೆ. ಬಿಸಿಲಿನ ತಾಪಕ್ಕೆ ಕುದಿಯುವಂತಹ ಉಪ್ಪುನೀರಿನ ತಳದಲ್ಲಿ ಸಿಗುತ್ತಿದ್ದ ರಾಶಿ ರಾಶಿ ಮುತ್ತುಗಳನ್ನು ಬ್ರಿಟಿಷರು ಅವಿರತವಾಗಿ ಬಗೆದು, ತುಂಬಿ ವಿಶ್ವದ ಎಲ್ಲೆಡೆಗೆ ಮಾರುತ್ತಾ ಹಣವನ್ನು ಗಳಿಸಿಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಜನರು ಹಾಗು ಭಾರತದಿಂದಲೂ ಉತ್ತಮ ಈಜುಗಾರರನ್ನು ಕರೆತಂದು ಅಕ್ಷರ ಸಹ ಜಲಚರ ಪ್ರಾಣಿಗಳಂತೆ ಮೂಗಿದೊಂದು ಸುತ್ತುವರಿ (Clip)ಯನ್ನು ಕೊಟ್ಟು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ ಬಿಡುತ್ತಿದ್ದರು. ತಮ್ಮ ಜೋಳಿಗೆಯ ತುಂಬ ಸಾಗರದ ತಳದಲ್ಲಿ ಅಂಟಿಕೊಂಡಿರುವ ಕಪ್ಪೆ ಚಿಪ್ಪುಗಳನ್ನು ಹೆಕ್ಕಿ ತಂದು ಕೊಡುವುದೇ ಈ ಈಜುಗಾರರ ಕಾಯಕವಾಗಿತ್ತು. ದಿನಕ್ಕೊಂದು ಲೋಟ ನೀರು ಹಾಗು ಒಂದಿಡೀ ಅನ್ನವನ್ನಷ್ಟೇ ತಿಂದು ಜಗತ್ತಿನ ಐಷಾರಾಮತೆಯ ಸಂಕೇತಕ್ಕೆ ತಮ್ಮ ಪರೋಕ್ಷವಾದ ಕಾಣಿಕೆಯನ್ನು ನೀಡುತ್ತಿದ್ದರು ಇಲ್ಲಿನ ಜನ. ಆದರೆ 1920 ರಷ್ಟರಲ್ಲಿ ಜಪಾನಿನ ಹಲವೆಡೆ ಇಂತಹ ನೈಸರ್ಗಿಕ ಮುತ್ತುಗಳಿಗೆ ಸರಿಸಮನಾದ ಅಥವಾ ನೋಡಲು ಇನ್ನೂ ಅಂದವಾಗಿ ಕಾಣುವ ಕೃತಕ ಮುತ್ತುಗಳು ಮಾರುಕಟ್ಟೆಗೆ ಬಂದ ಕೂಡಲೇ ಇಲ್ಲಿನ ಮುತ್ತುಗಳಿಗೆ ಮುತ್ತಿಡುವವರೇ ಇಲ್ಲರಾದರು. ಪರಿಣಾಮ ಜಗತ್ತಿನ ಭೂಪಟದಲ್ಲಿ ಕನಿಷ್ಠ ಕಾರಣಕ್ಕಾದರೂ ಒಂತಿಷ್ಟು ಗುರುತಿಸಲ್ಪಡುತ್ತಿದ್ದ ಈ ಮರಳುಗಾಡು ಪ್ರದೇಶ ಕ್ರಮೇಣ ಕಣ್ಮರೆಯಾಗತೊಡಗಿತು. ಮೀನುಗಾರಿಕೆ ಹಾಗು ಖರ್ಜುರದ ಹಣ್ಣುಗಳ ವಹಿವಾಟಷ್ಟೆ ಮುಂದಿನ ದಿನಗಳ ಆಧಾರವಾಯಿತು. 1947 ರಲ್ಲಿ ಭಾರತ ಸ್ವಾತಂತ್ರ್ಯವನ್ನು ಗಳಿಸಿಕೊಂಡ ಮೇಲೆ ಬ್ರಿಟಿಷರ ಹಿಡಿತ ಇಲ್ಲಿಯೂ ಕಡಿಮೆಯಾಗತೊಡಗಿತು. ಅಲ್ಲದೆ ಐಶ್ವರ್ಯವಿದ್ದಾಗ ಅನಾಗರೀಕರಂತೆ ದುಡಿಸಿಕೊಂಡು ಎಲ್ಲವೂ ಹೋದಾಗ ನಾಗರಿಕರನ್ನಾಗಿ ಮಾಡುವ ನಾಟಕದಂತೆ ಇಲ್ಲಿನ ಸ್ಥಳೀಯ ನಾಯಕರನ್ನು ಒಟ್ಟುಗೂಡಿಸಿ ಒಕ್ಕೂಟವೊಂದನ್ನು ನಿರ್ಮಿಸಿ ದೇಶ ವಿದೇಶಗಳ ಸಂಪರ್ಕವನ್ನು ಸಾಧಿಸುವುದನ್ನು ಕಲಿಸಿ ಕೈತೊಳೆದುಕೊಳ್ಳತೊಡಗಿದರು, ಬ್ರಿಟಿಷ್ ಪ್ರಭುಗಳು. ಆದರೆ ಮುಂದೆ ಈ ತಪ್ಪಿನಿಂದ ಅವರು ಪಟ್ಟ ಪಶ್ಚಾತಾಪ ಮಾತ್ರ ಯಾವುದೇ ಇತಿಹಾಸದ ಪುಟಕಳಲ್ಲಿಯೂ ದಾಖಲೆಯಾಗುವುದಿಲ್ಲ! ಹೀಗೆ ಸುಮಾರು 1950ರ ವರೆಗೂ ಆಟಕ್ಕುಂಟು ಲೆಕ್ಕಕಿಲ್ಲದಂಥ ನೆಲವಾಗಿದ್ದ ಪ್ರದೇಶ ನಂತರದ ಕೆಲ ವರ್ಷಗಳಲ್ಲೆ ಶತಮಾನಗಳಿಂದ ಅನುಭವಿಸಿದ ಕಡುಕಷ್ಟಗಳ ಪರಿಣಾಮವೋ ಏನೋ ಎಂಬಂತೆ ನೇಸರರಾಜನಿಂದ ಯಾರೊಬ್ಬರೂ ಊಹಿಸಲಾರದಂತಹ ವರವೊಂದನ್ನು ಪಡೆಯಿತು.

ಅಮೇರಿಕಾದಲ್ಲಿ ಮೊದಲುಗೊಂಡ (1859) ಪೆಟ್ರೋಲಿಯಂ ನ ಅವಿಷ್ಕಾರ ನಂತರ ವಿಶ್ವದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡತೊಡಗಿತು. ಬಗೆದರೆ ಕನಿಷ್ಠ ಒಂದು ತೊಟ್ಟು ನೀರೇ ಸಿಗದ ಇಲ್ಲಿನ ನೆಲದಲ್ಲಿ ಇನ್ನೇನು ದೊರೆತೀತು ಎನ್ನುತ್ತಿದ್ದ ಪರಕೀಯರಿಗೆ 1908 ರ ಪರ್ಷಿಯಾದ ತೈಲ ಸಂಶೋಧನೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿತು. ಅಲ್ಲಿಂದ ಮುಂದೆ ಶುರುವಾದ ತೈಲದ ಆವಿಷ್ಕಾರ ಮರಳುಭೂಮಿಯ ಕೆಳಗೆ ಅಡಗಿರುವ ಕಪ್ಪುಚಿನ್ನದ ಅಕ್ಷಯ ಪಾತ್ರೆಯನ್ನೇ ವಿಶ್ವಕ್ಕೆ ಪರಿಚಯಿಸಿತು. ಹೀಗೆ ಮುಂದುವರೆಯುತ್ತಿದ್ದ ತೈಲನಿಕ್ಷೇಪಗಳ ಆವಿಷ್ಕಾರ ಯುಎಇ ಯನ್ನು ತಲುಪಲು ದಶಕಗಳೇ ಹಿಡಿದವು. ಐವತ್ತನೇ ದಶಕದ ಕೊನೆಯ ವರ್ಷಗಳಲ್ಲಿ ಮೊದಲುಗೊಂಡ ಆವಿಷ್ಕಾರ ನಂತರದ ಕೆಲವೇ ದಿನಗಳಲ್ಲಿ ದೇಶವನ್ನು ಚಿನ್ನದ ತಟ್ಟೆಯಲ್ಲಿ ತಂದು ಕೂರಿಸಿತು. ಅಷ್ಟರಲ್ಲಾಗಲೇ ಇಲ್ಲಿಂದ ಭಾಗಶಃ ಕಣ್ಮರೆಯಾಗಿದ್ದ ಬ್ರಿಟಿಷ್ ಪ್ರಭುಗಳು ಕೈ ಕೈ ಹಿಸುಕಿಕೊಳ್ಳುತ್ತಾ 1971 ರಲ್ಲಿ ಇಲ್ಲಿನ ರಾಜರುಗಳಿಗೆ ತಮ್ಮ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸಿದರು. ಅಭುದಾಭಿ, ದುಬೈ, ಶಾರ್ಜಾ, ಫುಜೆರಾ, ರಸ್-ಅಲ್-ಕೈಮಾ, ಅಜ್ಮಾನ್ ಹಾಗು ಉಮ್-ಅಲ್-ಕ್ವೆನ್ ಎಂಬ ಏಳು ಸಂಸ್ಥಾನಗಳು ಒಟ್ಟುಗೂಡಿ ಯುಎಇ ಯನ್ನು ಕಟ್ಟಿಕೊಂಡವು. ಅಲ್ಲಿಂದ ಮುಂದೆ ಅಂಬೆಗಾಲಿಡುತ್ತಾ ಬೆಳೆದ ದೇಶ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದೆಯೇ ಮುಂದೊಂದು ದಿನ ಉತ್ತುಂಗಕ್ಕೆ ಏರುವ ಪರಿಯಂತೂ ಹಲವಾರು ದೇಶಗಳಿಗೆ ಮಾದರಿಯಾಯಿತು.

ಇಂದು ಯುಎಇ ಉತ್ಪಾದಿಸುತ್ತಿರುವ ತೈಲದ ಪ್ರಮಾಣ ‘ಪ್ರತಿದಿನ’ ಸುಮಾರು 40 ಲಕ್ಷ ಬ್ಯಾರೆಲ್ಗಳು! ಇದು ಹೆಚ್ಚು ಕಡಿಮೆ ನಮ್ಮ ದೇಶದ 130 ಕೋಟಿ ಜನರ ಪ್ರತಿದಿನದ ಬಳಕೆಯ ಪ್ರಮಾಣ! ಇಷ್ಟು ಅಗಾಧ ಪ್ರಮಾಣದ ತೈಲವನ್ನು ಭೂಮಿಯಾಳದಿಂದ ಹೊರತೆಗೆದು ಇಟ್ಟರೆ ವಿಶ್ವಮಾರುಕಟ್ಟೆಯಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಖರೀದಿಸಿಬಿಡುವ ಗ್ರಾಹಕರಿಗೇನು ಕಡಿಮೆ ಇಲ್ಲ. ಪರಿಣಾಮ ಹಣದ ರಾಶಿಯೇ ಸಾಗರೋಪಾದಿಯಲ್ಲಿ ಇಲ್ಲಿನ ಖಜಾನೆಗಳನ್ನು ಬಂದು ಸೇರುತ್ತದೆ. ಇಂದು ಯುಎಇಯ ಬೆಳವಣಿಗೆ ಹೀಗೆ ತೈಲದ ನಿಕ್ಷೇಪಗಳು ಒದಗಿಸಿಕೊಟ್ಟ ಹಣದ ಹೊಳೆಯಿಂದ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಆದರೆ, ಹಣವೊಂದಿದ್ದ ಮಾತ್ರಕ್ಕೆ ಲಕ್ಷಾಂತರ ಜನರ ದೇಶವೊಂದನ್ನು ಚಿಟಿಕೆ ಹೊಡೆಯುವ ಕಾಲದಲ್ಲಿ ಬದಲಾಗಿಸಲಾದೀತೇ? ಮೊಟ್ಟಮೊದಲು ದೇಶವೊಂದರ ಸ್ಪಷ್ಟ ಕಲ್ಪನೆ ಹಾಗು ಆ ಕಲ್ಪನೆಗೆ ಬೇಕಾದ ದೂರದೃಷ್ಟಿ ಇಲ್ಲದೆ ಹೋದರೆ ರಾಜರುಗಳದ್ದೇ ಎಲ್ಲವೂ ಆಗಿರುವ ದೇಶ ಕೇವಲ ರಾಜಕುಟುಂಬಗಳನ್ನಷ್ಟೇ ಅಭಿವೃದ್ಧಿಪಡಿಸುತ್ತದೆ. ಆದರೆ ಯುಎಇ ಅಂದು ಸ್ವತಂತ್ರ ದೇಶವಾದಾಗ ದೇಶದ ಅಧಿಕಾರದ ಚುಕ್ಕಾಣಿ ಹಿಡಿದದ್ದು ಇಂದು ಎಲ್ಲರಿಂದ ರಾಷ್ಟ್ರಪಿತನೆಂದು ಕರೆಸಿಕೊಳ್ಳುವ ಶೇಖ್ ಝಯಾದ್ ನಿಂದ. ಯಾವುದೇ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಪಡೆದುಕೊಂಡಿರದಿದ್ದರೂ ತನ್ನ ಜನಗಳ ನಡುವೆಯೇ ಬೆಳೆದ ಈತನ ದೂರದೃಷ್ಟಿಯನ್ನು ವಿಶ್ವವೇ ಕಂಡು ಬೆರಗಾಯಿತು. ಯಾವೊಂದು ಕಾಮರ್ಸ್, ಇಂಜಿನಿಯರಿಂಗ್ ಅಥವಾ ಡಾಕ್ಟರೇಟ್ ಡಿಗ್ರಿಗಳಿಲ್ಲದೆಯೇ ಈತ ದೇಶವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢವಾಗಿ ಕಟ್ಟಿ ಬೆಳೆಸಿದ. ಆ ಯಶೋಗಾಥೆ ಮುಂಬಂದ ನಾಯಕರುಗಳಿಗೆ ಪ್ರೇರಣಾದಾಯಕವಾದದಲ್ಲದೆ ಹೆಮ್ಮೆಯ ವಿಚಾರವೂ ಆಗಿದ್ದಿತು. ಏಕೆಂದರೆ ಇಂದು ಡಿಗ್ರಿಯೊಂದರ ಮುಖವಾಡ ಅದೆಷ್ಟು ಜರೂರಿಯಾಗಿದೆ ಎಂದರೆ ನೀನು ಕಳ್ಳನಾದರೂ ಸರಿಯೇ ಡಿಗ್ರಿಯನ್ನೊಂದಿರುವ ಕಳ್ಳನಾಗು ಎಂಬಂತಾಗಿದೆ ಪರಿಸ್ಥಿತಿ. ಸಮಾಜವನ್ನು ಕಟ್ಟಬೇಕು, ನಾಳೆಯ ದಿನಗಳು ಇಂದಿನದಕ್ಕಿಂತ ಚೆನ್ನಾಗಿರಬೇಕು ಎಂಬ ಸಾತ್ವಿಕ ಗುರಿಯಿದ್ದರೆ ಹಾಗು ಆ ಗುರಿಯನ್ನು ಸಾಧಿಸುವ ಕಲೆ ಕರಗತಗೊಂಡಿದ್ದರೆ ನಾಡನ್ನು ಕಟ್ಟಲು ಯಾವ ಡಿಗ್ರಿಗಳ ಡಂಗೂರಗಳ ಅವಶ್ಯಕೆ ಇರುವುದಿಲ್ಲ ಎಂಬುದಕ್ಕೆ ಶೇಖ್ ಝಯಾದ್ನ ಕಾರ್ಯವೈಖರಿ ಒಂದು ಉತ್ತಮ ಉದಾಹರಣೆ.

ಇಂದು ಮುಸ್ಲಿಂ ರಾಷ್ಟ್ರಗಳೆಂದರೆ ಯುದ್ಧ, ಹೊಡೆದಾಟ, ದ್ವೇಷ, ಅಸೂಯೆ ಎನ್ನುವ ಕಾಲದಲ್ಲಿ ಯುಎಇ ಯ ಏಳೂ ಸಂಸ್ಥಾನಗಳು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಾಗಿ ಇಂದಿಗೂ ಯಾವುದೇ ವೈಮನಸ್ಸಿಲ್ಲದೇ ಒಟ್ಟಿಗೆ ಇವೆ. ಈ ಒಗ್ಗಟ್ಟಿಗೆ ಅಂದು ಶೈಖ್ ಝಯಾದ್ ಹಾಕಿಕೊಟ್ಟ ಅಡಿಪಾಯದ ಗಟ್ಟಿತನವೇ ಆಧಾರವೆನ್ನಬಹುದು. ಒಡೆದು ಛಿದ್ರವಾಗಬೇಕಿದ್ದ ಏಳು ಸಂಸ್ಥಾನಗಳನ್ನು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರಂತೆಯೇ ಒಟ್ಟುಗೂಡಿಸಿ ದೇಶವೊಂದನ್ನು ಕಟ್ಟಿದ್ದ ಸಾಧನೆ ಮೊದಲುಗೊಂಡು, ಮಣ್ಣಿನ ರಾಶಿಯ ನೆಲದಲ್ಲಿ ಸ್ಕೂಲು, ಆಸ್ಪತ್ರೆ, ಬ್ರಿಡ್ಜು, ಬಂಧರುಗಳನ್ನು ನಿರ್ಮಿಸತೊಡಗಿದನಾತ. ಅಂದು ಬೆರಳೆಣಿಕೆಗೂ ಸಿಗದಿದ್ದ ಸ್ಕೂಲು ಕಾಲೇಜುಗಳು ಇಂದು ಹತ್ತಾರು ನೂರಾರು ಸಂಖ್ಯೆಯಲ್ಲಿ ವಿಶ್ವಮಟ್ಟಕ್ಕೆ ಬೆಳೆದು ಹೆಸರುಮಾಡುತ್ತಿವೆ. ದುಬೈ ನಗರದಲ್ಲಿರುವ ‘ಜಬೆಲ್ ಅಲಿ’ ಬಂದರು ಇಂದು ವಿಶ್ವದಲ್ಲೇ ಅತಿದೊಡ್ಡ ಮಾನವ ನಿರ್ಮಿತ ಬಂದರೆಂದು ಹೆಸರು ಮಾಡಿದೆ ಅಲ್ಲದೆ ದೇಶದ ಪ್ರಗತಿಗೂ ತನ್ನ ಗಜಬಲವನ್ನು ತುಂಬಿದೆ. ಇಂದು ದೇಶವಿದೇಶಗಳಿಂದ ಬರುವ ನೂರಾರು ಹಡಗುಗಳು ಪ್ರತಿದಿನ ಈ ಬಂದರನ್ನು ಹಾದು ಹೋಗುತ್ತವೆ. ಅಲ್ಲದೆ ಅಂದು ತಿನ್ನಲು ಒಪ್ಪೂತ್ತು ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿದ್ದ ದೇಶ ಇಂದು ಕೋಟಿ ಕೋಟಿ ಹಣವನ್ನು ವಿದೇಶಿ ನೆರವಾಗಿ ಅಗತ್ಯವಿರುವ ದೇಶಗಳಿಗೆ ನೀಡುವ ಸ್ಥಿತಿಗೆ ಬೆಳೆದು ನಿಂತಿದೆ. ಇಲ್ಲಿಯವರೆಗು ಯುಎಇ ವಿದೇಶಿ ನೆರವಿನ ರೂಪದಲ್ಲಿ ನೀಡಿರುವ ಹಣದ ಮೊತ್ತ ಸುಮಾರು 175 ಬಿಲಿಯನ್ ದಿರ್ಹಾಂಗಳು.( ದಿರ್ಹಾಂ ಇಲ್ಲಿನ ಅಧಿಕೃತ ಕರೆನ್ಸಿ. ಸೋಜಿಗದ ಸಂಗತಿಯೆಂದರೆ 1973 ರ ವರೆಗೂ ಭಾರತದ ರೂಪಾಯಿ ಇಲ್ಲಿ ಚಲಾವಣೆಯಲ್ಲಿದ್ದ ಬಹುಸಂಖ್ಯೆಯ ಕರೆನ್ಸಿ. ಎರಡೂ ದೇಶಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ ಭಾರತದ ಕರೆನ್ಸಿಯನ್ನೇ ಇಲ್ಲಿಯೂ ಬಳಸಲಾಗುತ್ತಿತ್ತು.) ಇದು ಆರು ಕೋಟಿ ಜನಸಂಖ್ಯೆಯ ನಮ್ಮ ರಾಜ್ಯದ ಹೆಚ್ಚುಕಡಿಮೆ ಎರಡು ವರ್ಷಗಳ ಆಯವ್ಯಯದ ಹಣವೆನ್ನಬಹುದು! ಹೀಗೆ ತನ್ನ ತಟ್ಟೆಯಿಂದ ಹಸಿದವನ ತಟ್ಟೆಗೂ ಒಂತಿಷ್ಟು ನೀಡಿ ಸುಖಪಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದವನು ಶೈಖ್ ಝಯಾದ್. ಅಲ್ಲದೆ ಮುಸ್ಲಿಂ ಮಹಿಳೆಯರೆಂದರೆ ಸಾಲಿನಲ್ಲಿ ಕಡೆಯವರು ಎಂಬಂತಿದ್ದ ಕಾಲದಲ್ಲಿ ಈತ ಮಹಿಳೆಯರ ಸಬಲೀಕರಣ, ಶಿಕ್ಷಣ ಹಾಗು ಅವರುಗಳ ಮುನ್ನೆಲೆಗೆ ಶ್ರಮಿಸಿದನಲ್ಲದೆ ಸರ್ಕಾರಿ ಕೆಲಸಗಳಲ್ಲೂ ಇಂತಿಷ್ಟು ಮೀಸಲಾತಿಯನ್ನು ನೀಡುತ್ತಾನೆ. ಕಟ್ಟಾ ಇಸ್ಲಾಂ ಸಂಪ್ರದಾಯದ ಪರಿಸರದಲ್ಲಿ ಈತನ ನಡೆ ಅಂದು ಬಹುಮಂದಿಯ ಹುಬ್ಬನ್ನು ಏರುವಂತೆ ಮಾಡಿದರೂ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನಲ್ಲಿಲ. ಇವೆಲ್ಲದರ ಪರಿಣಾಮ ಇಲ್ಲಿನ ಜನರ ಮೇಲೆ ಅದೆಷ್ಟರ ಮಟ್ಟಿಗೆ ಬೀರಿತೆಂದರೆ ಅತಿ ಕನಿಷ್ಠವಾಗಿದ್ದ (0.55-0.60) ಮಾನವ ಅಭಿವೃದ್ಧಿ ಸೂಚ್ಯಂಕ (HDI) ಕೇವಲ ಮೂರು ದಶಕಗಳಲ್ಲೆಯೇ ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಅನ್ನು ಮೀರಿಸುವ ಮಟ್ಟಕ್ಕೆ (0.80-0.85) ಬಂದು ನಿಂತಿತು. ಕಾರಣ ಆತನ ಹೂಡಿಕೆ ಅಂದು ಕೇವಲ ನಗರ ಪಟ್ಟಣಗಳ ಬ್ರಿಡ್ಜು ಬಂದರುಗಳಷ್ಟೇ ಅಲ್ಲದೆ ಅದು ನೇರವಾಗಿ ಅಲ್ಲಿನ ಜನರ ಮೇಲೆಯೇ ಆಗಿದ್ದಿತು.

2004 ರಲ್ಲಿ ಶೈಖ್ ಝಯಾದ್ ನ ಮರಣಾ ನಂತರ ಬಂದ ಇತರ ದೊರೆಗಳೂ ಸಹ ಆತನ ನಾಯಕತ್ವವನ್ನೇ ಮಾದರಿಯಾಗಿಸಕೊಂಡರು. ‘The race for excellence has no finish line'(ಉತ್ಕೃಷ್ಟತೆಯ ಓಟಕ್ಕೆ ಅಂತ್ಯವೆಂಬುದೇ ಇಲ್ಲ) ಎನ್ನುತ ಮುನ್ನೆಡುತ್ತಿರುವ ಮತ್ತೋರ್ವ ನಾಯಕ ಪ್ರಸ್ತುತ ಯುಎಇ ಪ್ರಧಾನಿ ಹಾಗು ದುಬೈನ ದೊರೆ ಶೈಖ್ ಮುಹಮ್ಮದ್. ಈತ ದುಬೈ ನಗರವನ್ನು ಮಧ್ಯಪ್ರಾಚ್ಯದ, ಅಷ್ಟೇಕೆ ಇಡೀ ವಿಶ್ವದ ಉತ್ಕೃಷ್ಟ ನಗರವನ್ನಾಗಿ ಸಜ್ಜುಗೊಳಿಸಿದ್ದಾನೆ. ತೈಲವೊಂದಿದೆ ಎಂಬ ಮಾತ್ರಕ್ಕೆ ಕುಡಿಯುವುದರಿಂದ ಹಿಡಿದು ಮೀಯುವುದಕ್ಕೂ ಅದನ್ನೇ ಬಳಸಿ ಮೂರೇ ದಿನದಲ್ಲಿ ಗುಡಿಸಿ ಗುಂಡಾತರವಾಗಿಸಬಹುದಾದ ಸಂಪತ್ತನ್ನು ಇಲ್ಲಿನ ನಾಯಕರುಗಳು ಅತ್ತಕಡೆ ಅತಿಯೂ ಆಗದೆ ಇತ್ತಕಡೆ ಮಿತಿಯೂ ಎನಿಸದೆ ಕಾಪಾಡಿಕೊಂಡು ಬಂದಿದ್ದಾರೆ. ಎಷ್ಟಾದರೂ ನವೀಕರಿಸಲಾಗದ ಸಂಪನ್ಮೂಲವನ್ನು ಸಾಯುವವರೆಗೂ ನೆಚ್ಚಿಕೊಂಡು ಕೂರಲಾಗದು ಎಂಬುದನ್ನು ಅರಿತ ಇಲ್ಲಿನ ನಾಯಕರು ದೇಶದ ಬೊಗಸೆಯನ್ನು ತುಂಬಿಸಲು ಸಾಧ್ಯವಾಗಬಹುದಾದ ಇತರೆ ವಲಯಗಳನ್ನು ಸಂಶೋದಿಸತೊಡಗಿದರು. ಆಗ ಚಿಗುರೊಡೆದದ್ದೇ ಪ್ರವಾಸೋದ್ಯಮ, ಸರಕು ವ್ಯಾಪಾರ ಹಾಗು ಬಹುಬಗೆಯ ಸೇವೆಗಳು. ಪರಿಣಾಮ ಇಂದು ದುಬೈ ನಗರ ಅಷ್ಟೆಲ್ಲ ಹೆಸರು ಮಾಡಿದ್ದರೂ ದೇಶದ ಅಭಿವೃದ್ಧಿಗೆ ಅದು ಪೆಟ್ರೋಲಿಯಂ ವಲಯದಿಂದ ಗಳಿಸುತ್ತಿರುವ ಆದಾಯ ಶೇಕಡಾ 5 ಕಿಂತಲೂ ಕಡಿಮೆ! ಆ ಮಟ್ಟಿನ ಬೆಳವಣಿಗೆ ಮರುಭೂಮಿಯ ಉರಿಬಿಸಿಲಲ್ಲೂ ಇತರ ವಲಯಗಳಿಗೆ ಸಾಧ್ಯವಾಗಿದೆ. ಇಂದು ಇಡೀ ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಒಂದೆನಿಸಿರುವ ದುಬೈ ಇಂತಹ ಹಲವಾರು ನಾಯಕರುಗಳ ದೂರದೃಷ್ಟಿಯ ಫಲವಂದರೆ ಸುಳ್ಳಾಗದು. ಜಗತ್ತಿನ ಅತಿ ಎತ್ತರವಾದ ಕಟ್ಟಡ (ಬುರ್ಜ್ ಖಲೀಫಾ 828 ಮೀಟರ್!), ಅತಿ ಎತ್ತರವಾದ ಹೋಟೆಲು (ಬುರ್ಜ್ ಅಲ್ ಅರಬ್), ಅತಿ ದೊಡ್ಡ ಮಾನವ ನಿರ್ಮಿತ ದ್ವೀಪ (ಪಾಮ್ ಜುಮೇರಾ), ವಿಸ್ತೀರ್ಣವಾರು ಅತಿ ದೊಡ್ಡ ಶಾಪಿಂಗ್ ಮಾಲ್ (ದುಬೈ ಮಾಲ್) ಹಾಗು ಅದರೊಳಗಿರುವ ವಿಶ್ವದ ಅತಿ ದೊಡ್ಡ ಅಕ್ವೇರಿಯಂ, ಹೀಗೆ ದುಬೈ ಎಂದರೆ ಸಾಲು ಸಾಲು ಮಾನವ ನಿರ್ಮಿತ ವಿಸ್ಮಯಗಳ ಒಂದು ಪೊಟ್ಟಣವೆಂದೇ ಹೇಳಬಹುದು. ಇಂತಹ ಕೃತಕ ವಿಸ್ಮಯಗಳನ್ನು ನೋಡಿ ಆನಂದಿಸಲು ದುಬೈ ನಗರವೊಂದಕ್ಕೆ ಇಂದು ಬರುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ ಸುಮಾರು ನೂರೈವತ್ತು ಲಕ್ಷಕ್ಕೂ ಮಿಗಿಲು!

ತೈಲವೊಂದಷ್ಟೇ ಅಲ್ಲದೆ ಇತರ ವಲಯಗಳ ಪೋಷಣೆಯಲ್ಲಿಯೂ ತೊಡಗಿದ ದೇಶ ನಿಧಾನವಾಗಿ ವಿದೇಶಿ ಬಂಡವಾಳ ಹೂಡಿಕೆಯ ಬರಮಾಡಿ ಕೊಡುವೆಡೆಗೆ ಮುಖಮಾಡತೊಡಗಿತು. ಆದರೆ ಇಂತಹ ಹೂಡಿಕೆಗೆ ಬೇಕಾದ ಮಾರುಕಟ್ಟೆಯ ಸಾಮರ್ಥ್ಯ ಅಂತೇನೂ ಹೇಳಿಕೊಳ್ಳುವ ಮಟ್ಟಿಗಿರಲಿಲ್ಲ. ಪ್ರತಿಯೊಂದು ವಸ್ತುಗಳಿಗೂ ಇತರೆ ದೇಶಗಳನ್ನೇ ನೆಚ್ಚಿಕೊಂಡು ಬದುಕುವ ನೆಲದಲ್ಲಿ ಸ್ಥಳಿಯದಲ್ಲದ ವಸ್ತುಗಳ ವಿನಃ ಯಾವೊಂದು ಫ್ಯಾಕ್ಟರಿಯನ್ನೂ ಸ್ಥಾಪಿಸುವುದು ತಿಳಿದೇ ಅಪಾಯವನ್ನು ಮೈಮೇಲೆಳೆದುಕೊಂಡಂತೆ ಆಗುತ್ತದೆ. ಆದರೆ ದಿನೇ ದಿನೇ ಕೊಂಚ ಕೊಂಚವಾಗಿ ಬೆಳೆಯತೊಡಗಿದ ಮಾರುಕಟ್ಟೆಯ ಲಾಭವನ್ನು ಪಡೆದ ಇಲ್ಲಿನ ಆಡಳಿತ, ಕಂಪನಿಗಳನ್ನು ಸ್ಥಾಪಿಸಲು ಸುವರ್ಣಾವಕಾಶವೊಂದನ್ನು ಒದಗಿಸಿಕೊಟ್ಟಿತು. ಯಾವುದೇ ಬಗೆಯ ತೆರಿಗೆ ಸುಂಕವಿಲ್ಲದೆಯೇ ಅಲ್ಲದೆ ವರಮಾನ ತೆರಿಗೆಯೂ ಇಲ್ಲದ ದೇಶದ ಬಾಗಿಲನ್ನು ವಿಶ್ವಕ್ಕೆ ತೆರೆಯಿತು.

ಅಲ್ಲಿಯವರೆಗೂ ಇತ್ತಕಡೆ ತಿರುಗಿಯೂ ಮಲಗದ ಕಂಪನಿಗಳು ಇತರೆ ದೇಶಗಳಲ್ಲಿ ತಮ್ಮ ಆದಾಯದ ಸುಮಾರು ಅರ್ಧದಷ್ಟು ಹಣವನ್ನು ತೆರಿಗೆಯ ರೂಪದಲ್ಲಿ ಸ್ಥಳೀಯ ಸರ್ಕಾರಗಳಿಗೆ ನೀಡುವ ಹೊರೆಯನ್ನು ತಪ್ಪಿಸಿಕೊಂಡು ಕೂಡಲೇ ತಮ್ಮ ಒಂದೊಂದು ಶಾಖೆಯನ್ನು ಇಲ್ಲಿ ತೆರೆದುಕೊಳ್ಳತೊಡಗಿದವು. (ಇಂದು ಕಾರ್ಪೊರೇಟ್ ಟ್ಯಾಕ್ಸ್ ಹಾಗು ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಗಳು ಜಾರಿಯಾಗಿರುವುದು ಸುಸ್ಥಿತಿಯಲ್ಲಿರುವ ದೇಶ ತೆಗೆದುಕೊಳ್ಳಬಹುದಾದ ಧೈರ್ಯದ ನಡೆಯ ಸಂಕೇತ)ವಿಶ್ವದ ಪೂರ್ವ ಹಾಗು ಪಶ್ಚಿಮ ದೇಶಗಳು ಸಂಧಿಸುವ ಈ ಪ್ರದೇಶ ಕಾಲಾನುಕ್ರಮದಲ್ಲಿ ಎಲ್ಲ ಬಗೆಯ ಹೂಡಿಕೆಗೂ ಅನುಕೂಲವಾಯಿತು. ಆದರೆ ಈ ನಿರ್ಧಾರ ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಯುವಲ್ಲಿ ಮಾತ್ರ ಇಂತಿಷ್ಟೂ ಎಡವಲಿಲ್ಲ. ದೇಶಕ್ಕೆ ಏನೇ ಮಾಡಿದರೂ ಅದು ನಮ್ಮ ಜನರಿಗಾಗಿಯೇ ಎನ್ನುವ ಇಲ್ಲಿನ ದೊರೆಗಳು ಇಲ್ಲಿ ಬಂದು ತೆರೆದುಕೊಳ್ಳುವ ಕಂಪೆನಿಗಳಲ್ಲಿ ಶೇಕಡ ಅರ್ಧದಷ್ಟು ಹೂಡಿಕೆಯನ್ನು ದೇಶದ ಪ್ರಜೆಗಳಿಂದಲೇ ಮಾಡಿಸಬೇಕೆನ್ನುವ (Local Sponsor) ನಿಯಮವನ್ನು ಜಾರಿಮಾಡಿದರು. ಇಲ್ಲವಾದರೆ ಅಂತಹ ಕಂಪನಿಗಳಿಗೆ ಪರವಾನಿಗೆಯೇ ಸಿಗದಂತೆ ಕಾನೂನನ್ನು ತರಲಾಯಿತು. ಪರಿಣಾಮವಾಗಿ ಇಂದು ಇಲ್ಲಿನ ನೆಲದಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಕಂಪನಿಗಳಿಗೂ ಒಬೊಬ್ಬ ಸ್ಥಳೀಯ ಪ್ರಾಯೋಜಕನಿದ್ದೆ ಇರುತ್ತಾನೆ. ಪ್ರತಿಯೊಂದು ಕಂಪನಿಯ 51% ಮಾಲೀಕತ್ವ ಒಬ್ಬ ಎಮರಾತಿ ಪ್ರಜೆಯದ್ದೇ ಆಗಿರುತ್ತದೆ. ಅಲ್ಲದೆ ಕಾಗದ ಪತ್ರ, ವಿಪರೀತ ನಿಯಮಗಳ ಜಂಜಾಟ ಬೇಡವೆನ್ನುವರಿಗೆ ನಮ್ಮ ಬೆಂಗಳೂರಿನ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ನಂತಹ ತೆರಿಗೆ ರಹಿತ ವಲಯಗಳು (Free Zones), ಯುಎಇ ವಿಪರೀತ ದುಬಾರಿ ಎನ್ನುವವರಿಗೆ ಇನ್ಕಮ್ ಟ್ಯಾಕ್ಸ್ ರಹಿತ ಆದಾಯ, ಸುಸಜ್ಜಿತ ಮೂಲಸೌಕರ್ಯಗಳು, ಯಾವುದೇ ಬಗೆಯ ಬ್ಯುಸಿನೆಸ್ಸ್ಗಳನ್ನು ಮಾಡಲು ಇರುವ ವಿಪುಲ ಅವಕಾಶಗಳು, ವಿಶ್ವದಲ್ಲೇ ಅತಿ ಕಡಿಮೆಯಲ್ಲಿರುವ ಇಲ್ಲಿನ ಅಪರಾಧ ದರ (Crime Rate) ಹೀಗೆ ಇನ್ನು ಹಲವು ಸಂಗತಿಗಳು ಇಂದು ಈ ಪುಟ್ಟ ದೇಶವನ್ನು ಜಗತ್ತಿನ ಅಗ್ರಮಾನ್ಯ ದೇಶಗಳ ಪಟ್ಟಿಯಲ್ಲಿ ತಂದು ನಿಲ್ಲಿಸಿವೆ.

ಸಾಧಿಸುವ ಛಲ ಹಾಗು ಆ ಹಾದಿಯ ಸ್ಪಷ್ಟಗುರಿಯೊಂದಿದ್ದರೆ ಎಂಥಹ ವಿಘ್ನಗಳೇ ಎದುರಾದರೂ ಜಯಿಸಿ ಮುನ್ನಡೆಯಬಲ್ಲವು ಎಂಬುದಕ್ಕೆ ಯುಎಇ ಇಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮುಂದಿದೆ. ಒಂದು ಬಾಟಲಿ ನೀರಿಗಿಂತಲೂ ಕಡಿಮೆ ದುಡ್ಡಿನಲ್ಲಿ ಪೆಟ್ರೋಲ್ ಡಿಸೇಲ್ಗಳು ಸಿಗುವಾಗ ಯಾವ ದೇಶ ತಾನೇ ಮುನ್ನಡೆಯುವುದಿಲ್ಲ ಹೇಳಿ ಎನ್ನುವವರಿಗೆ ಇಡೀ ವಿಶ್ವವನ್ನೇ ಕೊಳ್ಳೆಯೊಡೆದು ದೇಶದ ದೊಡ್ಡ ದೊಡ್ಡ ಗೋದಾಮುಗಳನ್ನು ಭರಪೂರ ತುಂಬಿಸಿದರೂ ನಾಳಿನ ಸ್ಪಷ್ಟ ಚಿತ್ರಣವಿಲ್ಲದೇ ಮಕಾಡೆ ಮಲಗುವಂತಹ ಸ್ಥಿತಿ ಇಂದು ಬ್ರಿಟನ್ ದೇಶಕ್ಕೆ ಬಂದೊದಗಿರುವುದನ್ನು ಮರೆಯಬಾರದು. ದೇಶ ಕಟ್ಟುವ ಹಾಗು ಕಟ್ಟಿ ನಡೆಸುವ ಕೈಗಳ ಶಕ್ತಿಯಷ್ಟೇ ಅಲ್ಲದೆ ಅವುಗಳನ್ನು ಪ್ರೇರೇಪಿಸುವ ಮನಗಳ ಯುಕ್ತಿಯೂ ಇಲ್ಲಿ ಮಹತ್ವವನ್ನು ಪಡೆಯುತ್ತದೆ ಎಂಬುದು ತಿಳಿದಿರಬೇಕು. ಅಂತಹ ನಾಯಕರ ಜನ್ಮಭೂಮಿಯಾದ ಈ ದೇಶ ಒಂದು ಪಕ್ಷ ಅಂದೊಮ್ಮೆ ಇಲ್ಲಿನ ತೈಲ ನಿಕ್ಷೇಪಗಳು ಪತ್ತೆಯಾಗದಿದ್ದರೂ ಮತ್ತೊಂದು ಯಾವುದಾದರು ದಿಸೆಯಲ್ಲಿ ಸಾಧನೆ ಮಾಡಿಯೇ ಮುನ್ನಡೆಯುತ್ತಿತ್ತು ಎಂಬುದರಲ್ಲಿ ಸಂಶಯವೇ ಬೇಡ. ಇಂದು ವಿಶ್ವದ ಏಳನೇ ಅತಿಹೆಚ್ಚು ತೈಲ ಹಾಗು ನೈಸರ್ಗಿಕ ಅನಿಲದ ಸಂಗ್ರಹವನ್ನು ಹೊಂದಿರುವ ದೇಶ ಮುಖ ಮಾಡುತ್ತಿರುವುದು ಸೌರ ಫಲಕಗಳ ಮೂಲಕ ಪಡೆಯಬಹುದಾದ ಶಕ್ತಿಯೆಡೆಗೆ ಎಂದರೆ ಇಲ್ಲಿನ ನಾಯಕರ ದೂರದೃಷ್ಟಿ ಅದೆಷ್ಟರ ಮಟ್ಟಿಗಿದೆ ಎಂದು ತಿಳಿಯುತ್ತದೆ. ಕುಡಿಯಲು ನೈಸರ್ಗಿಕವಾಗಿ ಸಿಗದ ನೀರಿಲ್ಲದ, ಸರಾಸರಿ ತಾಪಮಾನ 40 ರಿಂದ 50 ಡಿಗ್ರಿಗಳವರೆಗೆ ಹೋಗುವ, ಯಾವೊಂದು ಬೆಳೆಯನ್ನು ಹೆಚ್ಚಾಗಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳುವ ದೇಶ ಇಂದು ಕೋಟ್ಯಾನುಕೋಟಿ ಜನರನ್ನು ತನ್ನ ಒಡಲಲ್ಲಿ ಹಾಕಿಕೊಂಡು ಬೆಳೆಸುತ್ತಿದೆ. ಇಷ್ಟೆಲ್ಲ ಇತಿ ಮಿತಿಗಳ ನಡುವೆಯೇ ನೋಡುಗರ ಕಣ್ಣು ಕುಕ್ಕುವಂತೆ ಬೆಳೆದ ನಗರ ಹಾಗು ಅದನ್ನು ಬೆಳೆಸಿದ ನಾಯಕರುಗಳು ಇಂದು ನಮ್ಮಲ್ಲಿ ಪ್ರತ್ಯೇಕ ರಾಜ್ಯಬೇಕೆಂದು ಅರಚುತ್ತಾ ಅಲೆಯುವವರಿಗೆ ಮಾದರಿಯಾಗಬಲ್ಲರು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments