ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 14, 2018

ಪುಣ್ಯಕೋಟಿಯ ವ್ಯಥೆ ಮತ್ತು ಕಾನೂನು ಅವ್ಯವಸ್ಥೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗ ಭದ್ರೆ ತಾಯಿ ಬಾರೆ …

 

 

ಪುಣ್ಯಕೋಟಿಯ ಕಥೆ ಅಚ್ಚಳಿಯದೇ ಮನದಲ್ಲಿ ಉಳಿಯುವಂತೆ ಮಾಡಿದ ಗೋವಿನ ಹಾಡನ್ನು ಕೇಳಿ ಬೆಳೆದವರು ನಾವು. ಆಗಿನ ಕಾಲದ ಗೊಲ್ಲಗೌಡನೇನೋ ತನ್ನ ಮುದ್ದಿನ ಗೋವುಗಳನ್ನು ಹರುಷದಿಂದ ಕರೆಯುವ ಪರಿಸ್ಥಿತಿ ಇತ್ತು. ಆದರೆ ಈಗಿನ ಕರಾವಳಿಯ ಗೋಪಾಲಕರ ಸ್ಥಿತಿ ಯಾವ ಶತ್ರುವಿಗೂ ಬೇಡವೆನಿಸುವಂತಿದೆ. ಕಣ್ಣೆದುರಿಗೆ ಆಡಿ ಬೆಳೆಯುತ್ತಿದ್ದ ಕರುಗಳು, ಲೀಟರ್ಗಟ್ಟಲೆ ಹಾಲು ಕೊಡುತ್ತ  ಜೀವನಾಧಾರವಾಗಿರುವ ಗೋವುಗಳು ರಾತ್ರಿ ಬೆಳಗಾಗುವುದರೊಳಗೆ ಕೊಟ್ಟಿಗೆಯಿಂದ ಕಾಣೆಯಾಗಿರುತ್ತವೆ.ಹಾಗೆಂದು ಈ ಗೋವುಗಳು,ಎಳೆಗರುಗಳೇನೂ ಮಾಯವಾಗುವುದಿಲ್ಲ ಅಥವಾ ಭೂಮಿ ಬಾಯಿಬಿಟ್ಟು ಅವನ್ನು ನುಂಗಿಹಾಕುವುದಿಲ್ಲ. ನಟ್ಟ ನಡುರಾತ್ರಿ ತಲವಾರುಗಳನ್ನಿಡಿದು ನುಗ್ಗುವ ದನಗಳ್ಳರು ಮನೆಯವರನ್ನು ಬೆದರಿಸಿ ಅವರ ಕಣ್ಣೆದುರಿನಲ್ಲಿಯೇ ಸಾಕಿದ ಗೋವುಗಳನ್ನು ಕದ್ದೊಯ್ಯುತ್ತಾರೆ. ಕೇವಲ ಕದ್ದೊಯ್ಯುವುದು ಮಾತ್ರವಲ್ಲ,ಮತ್ತೆ ಬಂದು ಉಳಿದವನ್ನು ಕದ್ದೊಯ್ಯುತ್ತೇವೆ,ನಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮನ್ನು ಉಳಿಸುವುದಿಲ್ಲವೆಂದು ಧಮಕಿ ಹಾಕಿ ಹೋಗುತ್ತಾರೆ.ಮಂಗಳೂರಿನ ಮೂಡುಶೆಡ್ಡೆಯೊಂದರಲ್ಲೇ ಕಳೆದ ಒಂದೆರಡು ತಿಂಗಳಲ್ಲಿ ೨೦ಕ್ಕೂ ಹೆಚ್ಚು ಹಸುಗಳನ್ನು ದನಗಳ್ಳರು ಕದ್ದೊಯ್ದಿದ್ದಾರೆ.ಮೂಡುಶೆಡ್ಡೆಯ ಜೊತೆಗೆ ಕಾವೂರು,ವಾಮಂಜೂರು,ಕುಳಾಯಿ,ಅತ್ತಾವರ,ಜಪ್ಪಿನಮೊಗರು ಹೀಗೆ ಕರಾವಳಿಯ ಹಲವು ಭಾಗಗಳ ಗೋಪಾಲಕರ,ಬಡರೈತರ ಜೀವನವನ್ನೇ ಹಾಳುಗೆಡವಿದ್ದಾರೆ ಈ ದನಗಳ್ಳರು.

ಇತ್ತಿಚೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಒಂದು ಕರಾವಳಿಯ ಗೋಪಾಲಕರ ಸಂಕಟವನ್ನು ಬಿಚ್ಚಿಡುತ್ತದೆ. ದೈಜಿ ವರ್ಲ್ಡ್ ನವರು ಮಾಡಿದ್ದ ಈ ವಿಡಿಯೋದ ಕೇಂದ್ರ ಬಿಂದು ಕೊಣಾಜೆಯ ನಡುಪದವಿನ ಕಲ್ಯಾಣಿ ಅಮ್ಮ. ಒಂದು ಕಾಲದಲ್ಲಿ ಕಲ್ಯಾಣಿ ಅಮ್ಮನ ಕೊಟ್ಟಿಗೆಯಲ್ಲಿ ೫೦ ಗೋವುಗಳಿದ್ದವು.೪೦ ಲೀಟರಿನಷ್ಟು ಹಾಲನ್ನು ಡೈರಿಗೆ ಹಾಕುತ್ತಿದ್ದ ಕಲ್ಯಾಣಿ ಅಮ್ಮನವರು ಒಳ್ಳೆ ಆದಾಯವನ್ನು ಪಡೆಯುತ್ತಿದ್ದರು.ನೆಮ್ಮದಿಯಾಗಿದ್ದ ಕಲ್ಯಾಣಿಯವರ ಕೊಟ್ಟಿಗೆಯ ಮೇಲೆ ದನಗಳ್ಳರ ವಕ್ರದೃಷ್ಟಿ ಬಿದ್ದಿತ್ತು. ೨೦೧೦ರಿಂದ ಈಚೆಗೆ ಶುರುವಾದ ಕಳ್ಳತನದಿಂದಾಗಿ ಇವತ್ತಿಗೆ ಕಲ್ಯಾಣಿ ಅಮ್ಮನವರ ಕೊಟ್ಟಿಗೆ ಬರಿದಾಗಿದೆ.ಮಕ್ಕಳಂತೆ ಸಾಕಿ ಸಲಹುತ್ತಿದ್ದ ಗೋವುಗಳು ಕಾಣೆಯಾದಾಗಲೆಲ್ಲ ಊಟ-ನಿದ್ದೆ ಬಿಟ್ಟು ಕಲ್ಯಾಣಿ ಅಮ್ಮ ಕಣ್ಣೀರು ಹಾಕಿದ್ದಾರೆ.ಮೊದಲ ಬಾರಿ ಕಳ್ಳತನವಾದಾಗ ಪೋಲೀಸರ ಬಳಿ ಹೋಗಿದ್ದೆ,ಅವರು ನನಗೆ ಗದರಿಸಿ ಕಳುಹಿಸಿದರು ನಂತರ ಮತ್ತೆಂದೂ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ ಎನ್ನುತ್ತಾರೆ ಕಲ್ಯಾಣಿ ಅಮ್ಮ.ಗೋವಿನೊಂದಿಗೆ ಅವಿನಾಭಾವ ಸಂಬಂಧವಿರುವ ಅವರಿಗೆ ಖಾಲಿ ಕೊಟ್ಟಿಗೆಯನ್ನು ನೋಡಲಾಗದೇ,ಈಗ ಮತ್ತೊಂದು ಗೋವನ್ನು ತಂದಿದ್ದಾರೆ.ಅದನ್ನೂ ದನಗಳ್ಳರು ಕದ್ದೊಯ್ಯಬಾರದೆಂದು ಪ್ರತಿರಾತ್ರಿ ಅದರ ಕಾವಲು ಕಾಯುತ್ತ ಕೊಟ್ಟಿಗೆಯ ಹೊರಗೆಯೇ ಮಲಗುತ್ತಿದ್ದಾರೆ ಎಂದರೆ ಕರಾವಳಿಯ ಕಾನೂನು ಅವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಇದು ಕೇವಲ ಒಬ್ಬ ಕಲ್ಯಾಣಿ ಅಮ್ಮನವರ ಕಥೆಯಲ್ಲ,ಕರಾವಳಿಯ ಗೋಪಾಲಕರನ್ನು ಮಾತನಾಡಿಸಿದರೆ ಇಂತಹ ಕರುಣಾಜನಕ ಕಥೆಗಳು ಹಲವಾರು ಸಿಗುತ್ತವೆ. ಜೀವನಾಧಾರಕ್ಕಾಗಿ ಬ್ಯಾಂಕ್ನಲ್ಲಿ ಸಾಲ ಮಾಡಿ ಗೋವು ಸಾಕುತ್ತಿದ್ದ ಮೈಕೆಲ್ ಫೆರ್ನಾಂಡಿಸ್,ಕಿರಣ್ ಪಿಂಟೋ ಅಂತವರ ಗೋವುಗಳನ್ನು ದನಗಳ್ಳರು ಕದ್ದೊಯ್ದು ತಿಂದು ಮುಗಿಸಿದ್ದಾರೆ.ಇತ್ತ ಬ್ಯಾಂಕ್ ಅಧಿಕಾರಿಗಳು ಮನೆಗೆ ನೋಟಿಸ್ ಕಳುಹಿಸುತ್ತಲೇ ಇದ್ದಾರೆ. ಇತ್ತ ಗೋವು ಇಲ್ಲ,ಅತ್ತ ಗೋವಿನ ಮೇಲಿನ ಸಾಲವೂ ಮುಗಿದಿಲ್ಲ.

ಯೂಟ್ಯೂಬಿನಲ್ಲಿ ಗೋವು ಕಳ್ಳತನದ ಕುರಿತು ಬಹಳಷ್ಟು ವಿಡಿಯೋಗಳಿವೆ.ಒಬ್ಬ ಧಡೂತಿ ಆಸಾಮಿ ಕೂರಲು ಕಷ್ಟಪಡಬೇಕಾದ ಜೆನ್ ನಂತಹ ಕಾರುಗಳಲ್ಲಿ ಈ ದನಗಳ್ಳರು ಗೋವನ್ನು ತೂರಿಸಿ ಕದ್ದೊಯ್ಯುತ್ತಾರೆ ಎಂದರೆ ನೀವು ನಂಬಲೇ ಬೇಕು. ಮಹಾರಾಷ್ಟ್ರದ ಥಾಣೆಯ ಬಳಿ ಕಾರೊಂದು ರಸ್ತೆಯಲ್ಲಿ ಅಪಘಾತಕ್ಕೀಡಾಯಿತು.ಕಾರಿನಲ್ಲಿದ್ದವ ಕಾರು ಬಿಟ್ಟು ಓಡಿ ಹೋದ. ಜನರೆಲ್ಲಾ ಕಾರನ್ನು ಸುತ್ತುವರಿದು ನೋಡಿದಾಗ ಅವರ ಕಣ್ಣಾಲಿಗಳು ತೇವವಾಗಿದ್ದವು.ಆ ಸೆಡಾನ್ ಕಾರಿನಲ್ಲಿ ಮೂರು ಗೋವುಗಳನ್ನು ಕದ್ದೊಯ್ಯುತ್ತಿದ್ದ. ಹಿಂದಿನ ಸೀಟನ್ನು ತೆಗೆದು ಎರಡು ಗೋವುಗಳ ಅರ್ಧ ಭಾಗವನ್ನು ಕಾರಿನ ಡಿಕ್ಕಿಯಲ್ಲಿ ತೂರಿಸಿ ಅವುಗಳ ಮೇಲೆ ಕಾರಿನ ಸೀಟನ್ನು ಇಟ್ಟಿದ್ದ. ಇದು ಕೇವಲ ಕೆಲ ವಿಡಿಯೋಗಳು, ಜನರು ಕೂರಬಹುದಾದ ಎಲ್ಲಾ ರೀತಿಯ ವಾಹನಗಳನ್ನು ಈ ಹೊಟ್ಟೆಗೆ ಅನ್ನತಿನ್ನದ ದನಗಳ್ಳರು ಉಪಯೋಗಿಸುತ್ತಾರೆ.

ಇವರ ಪಾಲಿಗೆ ಗೋವು ಎಂದರೆ ಅದು ಹಣ ತರುವ ಬಾಬತ್ತು ಅಷ್ಟೇ.ಕದಿಯುವಾಗ ಅದು ಯಾವ ಸ್ಥಿತಿಯಲ್ಲಿದೆ ಎನ್ನುವುದೆಲ್ಲ ಈ ರಾಕ್ಷಸರಿಗೆ ಬೇಕಾಗುವುದಿಲ್ಲ. ದಿನಪತ್ರಿಕೆಯೊಂದರಲ್ಲಿ ವರದಿಯಾಗಿದ್ದ ಸುದ್ದಿ ನೋಡಿ ಎಂತಹ ಕಲ್ಲುಮನಸ್ಸಿನವರ ಹೃದಯವಾದರೂ ಕರಗಲೇಬೇಕು. ಆರು ತಿಂಗಳ ಗರ್ಭಿಣಿಯಾಗಿದ್ದ ಗೋವನ್ನು ಕದ್ದ ದನಗಳ್ಳರು ಮಾರ್ಗ ಮಧ್ಯೆ ಅದು ತಪ್ಪಿಸಿಕೊಳ್ಳಬಾರದೆಂದು ಅದರ ಎರಡು ಮುಂಗಾಲುಗಳನ್ನು ಕತ್ತರಿಸಿ ಹಾಕಿದ್ದರು.ತನ್ನ ಹೊಟ್ಟೆಯಲ್ಲಿದ್ದ ಕಂದಮ್ಮನಿಗಾಗಿ ಬದುಕಲೇಬೇಕೆಂದು ಪಣತೊಟ್ಟ ಆ ತಾಯಿ,ಕಟುಕರ ಕೈಯಿಂದ ಹೇಗೋ ತಪ್ಪಿಸಿಕೊಂಡು ರಸ್ತೆಯ ಮೇಲೆ ರಕ್ತಸಿಕ್ತವಾಗಿ ಬಿದ್ದಿದ್ದ ಹಸುವನ್ನು ಮಂಗಳೂರಿನ ಶಕ್ತಿನಗರದ ಕೇರ್ ಟ್ರಸ್ಟಿನ ಸದಸ್ಯರು ರಕ್ಷಿಸಿ ಕತ್ತರಿಸಲಾಗಿದ್ದ ಅದರ ಕಾಲಿಗೆ ಚಿಕಿತ್ಸೆ ನೀಡಿದ್ದರು. ನಿಲ್ಲಲಾಗದ ತನ್ನ ಕಾಲುಗಳ ಯಮಯಾತನೆಯನ್ನು ನುಂಗಿಕೊಂಡೇ ಪ್ರಸವದ ತಿಂಗಳುಗಳನ್ನು ಕಳೆದ ಆ ತಾಯಿ ಮುದ್ದಾದ ಕರುವಿಗೆ ಜನ್ಮ ನೀಡಿ ಹತ್ತು ದಿನಗಳ ನಂತರ ಕಣ್ಮುಚ್ಚಿತ್ತು. ತನ್ನದಲ್ಲದ ತಪ್ಪಿಗೆ ಹತ್ತುದಿನಗಳ ಆ ಮುದ್ದು ಕಂದ ತಬ್ಬಲಿಯಾಗಬೇಕಾಯಿತು.ದನಗಳ್ಳರನ್ನು ಉದ್ರಿಕ್ತ ಗುಂಪುಗಳು ಹೊಡೆದು ಕೊಂದರೆಂದು ಕಣ್ಣೀರಿಡುವ ಯಾವ ಜೀವಪರ ವ್ಯಕ್ತಿಗಳು ಈ ಗೋವಿಗಾಗಿ,ಅದರ ತಬ್ಬಲಿ ಕಂದನಿಗಾಗಿ ಕಣ್ಣೀರು ಸುರಿಸಿದ್ದು ನೋಡಲಿಲ್ಲ.ಯಾಕೆ ಮನುಷ್ಯರದ್ದು ಮಾತ್ರ ಜೀವವೇ?

ಮೇಲಿನದೆಲ್ಲ ಕರಾವಳಿಯಲ್ಲಿ ನಡೆಯುತ್ತಿರುವ ದನಗಳ್ಳತನ ಮಾಫಿಯಾದ ಕೆಲವು ಉದಾಹರಣೆಗಳು ಮಾತ್ರ. ಕರಾವಳಿಯನ್ನು ಸಂಘಪರಿವಾರ ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ ಎಂದು ಸಿಕ್ಕಸಿಕ್ಕಲ್ಲಿ ಬೊಬ್ಬೆ ಹೊಡೆಯುವ ಮೂರುಕಾಸಿನ, ತಲೆಮಾಸಿದ ಬುದ್ಧಿಜೀವಿಗಳು ಕರಾವಳಿಯ ಯುವಕರಿಗೇಕೆ ಕೋಪ ಬರುತ್ತದೆ ಎಂದು ಸತ್ಯ ಹೇಳುವುದಿಲ್ಲ. ಮಕ್ಕಳಂತೆ ಸಾಕಿದ ಗೋವುಗಳನ್ನು ಯಾವನೋ ಕಳ್ಳ ಬಂದು ತಲವಾರು ತೋರಿಸಿ ಬೆದರಿಸಿ ಹೊತ್ತೊಯ್ದು ಕ್ಷಣ ಮಾತ್ರದಲ್ಲಿ ಅದನ್ನು ಕತ್ತರಿಸಿ ಮಾರುತ್ತಾನೆ ಮತ್ತದನ್ನು ತಡೆಯಬೇಕಾದ ಗೃಹ ಇಲಾಖೆ ಸಂಬಂಧವೇ ಇಲ್ಲದಂತೆ ಕುಳಿತುಕೊಂಡಾಗ,ಜವಾಬ್ದಾರಿಯುತ ಸಮಾಜ ಏನು ಮಾಡಬೇಕು ಹೇಳಿ? ಇವತ್ತು ದೇಶದಾದ್ಯಂತ ಅದೆಂತದ್ದೋ Lynching ನಡೆಯುತ್ತಿದೆ ಎಂದು ಅರಚಾಡುತ್ತಿರುವವರು, ಒಂದೋ ತಮ್ಮ ಭೂತಕಾಲವನ್ನು ಮರೆತಿರಬೇಕು ಅಥವಾ ಅವರಿಗೆ ಮಂಡೆಪೆಟ್ಟಾಗಿ ಹಳೆಯದೆಲ್ಲ ಮರೆತುಹೋಗಿರಬೇಕು. ಭಾರತದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಪಂಚಾಯಿತಿಗಳಲ್ಲಿ ಅಥವಾ ಹಳ್ಳಿಗರೇ ಮುಂದೆ ನಿಂತು ದನಗಳ್ಳರನ್ನು ಹಿಡಿದು ಮರಕ್ಕೆ ಕಟ್ಟಿ ಬಡಿಯುವುದನ್ನು ನಾನು ಕಂಡಿದ್ದೇನೆ.ಈ ರೀತಿಯ ಘಟನೆಗಳು ನಡೆಯುವುದು ಒಂದೋ ಕಾನೂನು ಸುವ್ಯಸ್ಥೆಯೆನ್ನುವುದು ಮಕಾಡೆ ಮಲಗಿದಾಗ ಅಥವಾ ಜನರಿಗೆ ಅವುಗಳ ಮೇಲೆ ನಂಬಿಕೆಯಿಲ್ಲದೆ ಹೋದಾಗ.ಹೌದು ,ಕಾನೂನು ಕೈಗೆತ್ತಿಕೊಳ್ಳುವುದು ತಪ್ಪೇ,ಆದರೆ ಕೊಟ್ಟಿಗೆಗೆ ನುಗ್ಗಿ ಗೋವು ಕದ್ದೊಯ್ಯುವುದು ಸರಿಯೇ? ಹಾಗೆ ಕದ್ದ ಗೋವನ್ನು ಅಕ್ರಮ ಕಸಾಯಿ ಖಾನೆಯಲ್ಲೋ,ಕಟುಕರ ಮನೆಯ ಹಿತ್ತಲಿನಲ್ಲೋ,ಕೆಲವೊಮ್ಮೆ ಸಾಗಿಸುತ್ತಿರುವ ವಾಹನದಲ್ಲೇ ಕತ್ತರಿಸಿ ಮಾರುತ್ತಾರಲ್ಲ ಅದು ಸರಿಯೇ? ಯಾವುದೇ ಸಮಸ್ಯೆಗೆ Root Cause ಇರಲೇಬೇಕಲ್ಲವೇ? ಗೋವುಗಳನ್ನು ಕದ್ದು,ಅಕ್ರಮಕಸಾಯೆಖಾನೆಯಲ್ಲಿ ಕೊಂದು ಮಾರಾಟ ಮಾಡುವ ಅಕ್ರಮ ವ್ಯವಹಾರವನ್ನು ಪೊಲೀಸ್ ಇಲಾಖೆ,ಸರ್ಕಾರಗಳು ನಿಲ್ಲಿಸಿದ್ದರೆ, ಜನರೇಕೆ ಬೀದಿಗಿಳಿಯಬೇಕಿತ್ತು ಹೇಳಿ? ಒಂದು ಏರಿಯಾದಲ್ಲಿ ಪಿಕ್ ಪಾಕೆಟ್ ನಡೆದರೂ ಯಾವ ಕಳ್ಳ ಮಾಡಿದ್ದಾನೆ ಎನ್ನುವ ಮಟ್ಟದ ಮಾಹಿತಿ ಇರುವ ಪೊಲೀಸ್ ಇಲಾಖೆಗೆ ದನಗಳ್ಳರ ಬಗ್ಗೆ ಅವರ ಕಾರ್ಯಾಚರಣೆ,ಸ್ಥಾನಗಳ ಬಗ್ಗೆ ಗೊತ್ತಿಲ್ಲ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಈ ದನಗಳ್ಳರ ಮೇಲೆ ರಾಜಕೀಯ ಪುಢಾರಿಗಳ,ಸಂಘಟನೆಗಳ ಆಶೀರ್ವಾದವಿಲ್ಲದೆ ನಡೆಯಲಾರದು ಅಲ್ಲವೇ? ಗೋವಿನ ಅಕ್ರಮ ಸಾಗಾಣಿಕೆಗಳು ಮತ್ತು ಅವು ಹೇಗೆ ಪೋಲೀಸರ ಮೂಗಿನಡಿಯಲ್ಲೇ ಒಂದು ಊರಿನಿಂದ ಮತ್ತೊಂದು ಊರಿಗೆ ತಲುಪಿಕೊಳ್ಳುತ್ತವೆ ಎನ್ನುವ ಓಪನ್ ಸೀಕ್ರೆಟ್ ಅನ್ನು ಟೀವಿ ಮಾಧ್ಯಮಗಳು ವಿಡಿಯೋ ಸಮೇತ ಸಾಕ್ಷ್ಯವಾಗಿ ಇಟ್ಟಿವೆ. ಕ್ರಮಕೈಗೊಳ್ಳಬೇಕಾದ ಗೃಹ ಇಲಾಖೆ ಮಾತ್ರ ರಾಜಕೀಯ ವೇಶ್ಯೆಯಂತೆ ಕಳ್ಳರೊಂದಿಗೆ ಹಾಸಿಗೆ ಹಂಚಿಕೊಂಡು ಕುಳಿತಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಗೋ ಗ್ಯಾನ್ ಫೌಂಡೇಶನ್ನಿನವರು ಗೋವುಗಳು,ಒಂಟೆಗಳನ್ನು ಶಿವಾಜಿನಗರದ ಮಸೀದಿಯ ಹಾಗೂ ಅದರ ಆಸುಪಾಸಿನ ಜಾಗಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ,ಅವನ್ನು ಹತ್ಯೆ ಮಾಡಲಿರುವ ಕುರಿತು ಕೇಸ್ ದಾಖಲಿಸಿದ್ದರು. ಹೈಕೋರ್ಟ್ ಪೊಲೀಸರಿಗೆ ಇವುಗಳನ್ನು ರಕ್ಷಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಮಾನ್ಯ ಹೈಕೋರ್ಟ್ ನಿಯೋಜಿಸಿದ್ದ ವಕೀಲರೇ, ಪೋಲೀಸರ ಅಸಹಕಾರದ ಬಗ್ಗೆ ಕೋರ್ಟಿನ ಗಮನ ಸೆಳೆದಿದ್ದರು. ಇದು ಗೋವಿಗೆ ಸಂಬಂಧಿಸಿದಂತೆ ಸರ್ಕಾರಗಳು ವರ್ತಿಸುತ್ತಿರುವ ರೀತಿ. ಪರಿಸ್ಥಿತಿ ಹೀಗಿರುವಾಗ ರೈತರು,ಗೋಪಾಲನೆ ಮಾಡುವವರು ಯಾರ ಮೇಲೆ ನಂಬಿಕೆಯಿಟ್ಟು ಗೋವುಗಳನ್ನು ಸಾಕಬೇಕು? ಬಿಬಿಎಂಪಿ ಹೈಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಬೆಂಗಳೂರಿನಲ್ಲಿ ೩ ಸಕ್ರಮ ಕಸಾಯಿಖಾನೆಗಳು, ೨೬೫೯ ಮಾಂಸದಂಗಡಿಗಳಿವೆ ಎಂದಿತ್ತು. ಕೇವಲ ೩ ಸಕ್ರಮ ಕಸಾಯಿಖಾನೆಗಳಿದ್ದರೆ, ಅಕ್ರಮವಾಗಿ ಕದ್ದು ತರುವ ಗೋವುಗಳನ್ನು ಎಲ್ಲಿ ಕಡಿಯಲಾಗುತ್ತದೆ? ಗೋ  ಗ್ಯಾನ್ ಫೌಂಡೇಶನ್ನಿನವರು ಪಟ್ಟಿಮಾಡಿರುವಂತೆ ಬೆಂಗಳೂರಿನಲ್ಲಿ ೧೫ಕ್ಕೂ ಹೆಚ್ಚು ಅಕ್ರಮಕಸಾಯೆಖಾನೆಗಳಿವೆ (ಲೆಕ್ಕಕ್ಕೆ ಸಿಗದವು ಇನ್ನೆಷ್ಟಿವೆಯೋ). ಇನ್ನು ದಕ್ಷಿಣ ಕನ್ನಡದಲ್ಲಿ ಸಕ್ರಮವೆಂದು ಪರಿಗಣಿಸುವುದೇ ಆದರೆ, ಕುದ್ರೋಳಿಯಲ್ಲಿರುವ ಒಂದೇ ಒಂದು ಕಸಾಯಿಖಾನೆ ಮಾತ್ರವೇ ಇರುವುದು.ಆದರೆ ಅವಳಿ ಜಿಲ್ಲೆಯಲ್ಲಿ ನಡೆಯುವ ಗೋ ಕಳ್ಳತನದ ಪ್ರಮಾಣವನ್ನು ನೋಡಿ, ಈ ಗೋವುಗಳನ್ನೆಲ್ಲ ಎಲ್ಲಿ ಕಡಿಯಲಾಗುತ್ತದೆ?

ಗೋವು ತಿನ್ನುವುದು ಆಹಾರದ ಹಕ್ಕು ಎಂದು ವಾದಿಸುವವರು,ಗೋವನ್ನು ಸಾಕುವ ರೈತರ ಹಕ್ಕಿನ ಬಗ್ಗೆ ಮರೆಯುವುದೇಕೆ? ಸಾಕಿ ಸಲಹುತ್ತಿರುವ ಗೋವುಗಳನ್ನು ನಡುರಾತ್ರಿಯಲ್ಲಿ ಬಂದು ಕಳ್ಳರು ಕದ್ದು,ಸೂರ್ಯ ಉದಯಿಸುವುದರೊಳಗೆ ಅದರ ಮೂಳೆಗಳು ಸಿಗದಂತೆ ಮಾಡುತ್ತಾರಲ್ಲ ಅದರ ಬಗ್ಗೆಯೇಕೆ ಮಾತನಾಡುವುದಿಲ್ಲ? ಗೋರಕ್ಷಕರು ಮಾಡುವ ಹಲ್ಲೆಗಳ ಬಗ್ಗೆ ಮಾತನಾಡುತ್ತಿರಲ್ಲ,ಅಸಲಿಗೆ ಸಮಾಜದಲ್ಲಿ ಗೋರಕ್ಷಕರೇಕೆ ಹುಟ್ಟಿಕೊಂಡರು ಎನ್ನುವ ಪ್ರಶ್ನೆಯನ್ನೇಕೆ ಕೇಳಿಕೊಳ್ಳುವುದಿಲ್ಲ? ಪೊಲೀಸರು ಅವರ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದರೆ,ಗೋರಕ್ಷಕ ಹುಡುಗರೇಕೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಗೋಕಳ್ಳರನ್ನು ಎದುರಿಸಬೇಕಿತ್ತು?  ಗೋ ಹತ್ಯಾ ನಿಷೇಧ ಕಾನೂನಿನ ಚರ್ಚೆ ಹುಟ್ಟಿಕೊಂಡಾಗಲೆಲ್ಲ,ಆಹಾರದ ಹಕ್ಕಿನ ವಿಷಯವನ್ನು ಹಾಗೂ ಮುಸ್ಲಿಮ್-ಕ್ರಿಶ್ಚಿಯನ್ನರನ್ನು  ಮುಂದಿಡಲಾಗುತ್ತದೆ. ಆದರೆ ಗಮನಿಸಬೇಕಾದ ವಿಷಯವೇನೆಂದರೇ, ಕರಾವಳಿಯ ಗೋ-ಕಳ್ಳರ ಸಂತ್ರಸ್ತರ ಪಟ್ಟಿಯಲ್ಲಿ ಕ್ರಿಶ್ಚಿಯನ್ನರೂ-ಮುಸ್ಲಿಮರೂ ಇದ್ದಾರೆ.ಮನೆಹಾಳು ಬುದ್ಧಿಜೀವಿಗಳನ್ನು ನಡುವೆ ಬಿಟ್ಟುಕೊಂಡರೆ ಯಾವುದೇ ಉದ್ಧಾರವಾಗುವಂತಹ ಕೆಲಸಗಳು ನಡೆಯುವುದಿಲ್ಲವೆಂದು ಅರ್ಥವಾಗಿರುವುದರಿಂದಲೇ ತಮ್ಮ ಗೋವುಗಳನ್ನು ರಕ್ಷಿಸಿಕೊಳ್ಳಲು ದಕ್ಷಿಣಕನ್ನಡದ ಪ್ರತಿ ಗ್ರಾಮಗಳಲ್ಲೂ ಗ್ರಾಮಸ್ಥರೇ ಸೇರಿಕೊಂಡು ಗೋಮಾತಾ ರಕ್ಷಣಾ ಪಡೆಯನ್ನು ಕಟ್ಟಿಕೊಂಡು ಗೋಕಳ್ಳರನ್ನು ಎದುರಿಸಲು ತಯಾರಾಗುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ತಡವಾಗಿಯಾದರೂ ಅರ್ಥಮಾಡಿಕೊಂಡಿರುವ ಪೊಲೀಸ್ ಇಲಾಖೆ ದನಗಳ್ಳರನ್ನು ಬಂಧಿಸಿದೆ.ನಿಜವಾಗಿಯೂ ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಕಾರ್ಯನಿರ್ವಹಿಸಿ ಗೋ ಕಳ್ಳತನ, ಅಕ್ರಮ ಕಸಾಯಿಖಾನೆಗಳಿಗೆ ಬ್ರೇಕ್ ಹಾಕದೇ ಇದ್ದರೇ,ಕರಾವಳಿಯಲ್ಲಿ ಹೈನೋದ್ಯಮವೇ ಬಾಗಿಲು ಹಾಕುವ ದಿನಗಳು ಬಂದರೂ ಅಚ್ಚರಿ ಪಡಬೇಕಿಲ್ಲ,ಒಂದೆಡೆ ದನಗಳ್ಳರ ಹಾವಳಿ ಮತ್ತೊಂದು ಕಡೆ ಕಾನೂನು ಅವ್ಯವಸ್ಥೆಯ ನಡುವೆ ಅದ್ಯಾರು ತಾನೇ ಗೋವುಗಳನ್ನು ಸಾಕಲು ಮನಸ್ಸು ಮಾಡಬಲ್ಲರು ಹೇಳಿ?

ರೈತರ ಬಗ್ಗೆ ಅತೀವ ಕಾಳಜಿ ಹೊಂದಿರುವೆ ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು,ಕರಾವಳಿಯ ರೈತರು-ಗೋಪಾಲಕರನ್ನು ದನಗಳ್ಳರ-ಅಕ್ರಮಕಸಾಯಿಖಾನೆ  ಮಾಫಿಯಾಗಳನ್ನು ನಿಲ್ಲಿಸುವ ಧೈರ್ಯ ತೋರಬಲ್ಲರೇ?

ಚಿತ್ರಕೃಪೆ : indiamike.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments