ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 23, 2018

ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ…!

‍ನಿಲುಮೆ ಮೂಲಕ

– ಸುಜಿತ್ ಕುಮಾರ್

ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ  ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ  ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ  ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.

‘ನದಿ ಎಂಬ ಪ್ರಿಯತಮೆಯನ್ನು ಕೊಂದರೆ ಮಳೆ ಎಂಬ ಪ್ರಿಯಕರನನ್ನು ಮರೆಯಬೇಡಿ’ ಎಂಬ ಮಾತಿದೆ. ಮಾನವನ ಹಿಂಗದ ಧಾಹಕ್ಕೆ ನದಿ ತೊರೆಗಳನ್ನು ಮನಸ್ಸಾಇಚ್ಛೆ ತಿರುಗಿಸಿ ಬಾಗಿ ಬೆಂಡಾಗಿಸುವ ಆತ ಬಾಕಿ ಉಳಿದಷ್ಟೂ ಜಾಗದಲ್ಲಿ ಮನೆ ಮಠಗಳನ್ನು ನಿರ್ಮಿಸಿಕೊಂಡು ಆರಾಮಾಗಿರುತ್ತಾನೆ. ಕಾಲಚಕ್ರದಲ್ಲಿ ಕೆಲಸಮಯ ಮೋಡವಾಗಿ ಕಾಣೆಯಾಗುವ ನದಿಯ ಪ್ರಿಯತಮ ಮತ್ತೊಮ್ಮೆ ಇಳೆಗೆ ಇಳಿದು ಬಂದು ನೋಡಿದರೆ ತಾನು ಕಾಣ ಬಯಸುವ ಮುದ್ದಿನ ಪ್ರಿಯತಮೆ ಕಾಣೆಯಾಗಿರುತ್ತಾಳೆ! ಆದರೆ ಅವರುಗಳ ಪ್ರೇಮ ಪ್ರಸ್ತುತ ಕಾಲದ ಮಿಲಿಸೆಕೆಂಡುಗಳ ಪ್ರೇಮಕಾವ್ಯವಲ್ಲ. ಅದು ಕಾಲಾತೀತವಾದದ್ದು. ಅಮರವಾದದ್ದು! ಹಾಗೆ ವರುಷಗಳ ನಂತರ ಧರೆಗಿಳಿದು ಬರುವ ಧಾರೆ ತನ್ನ ಪ್ರಿಯತಮೆಯ ಹುಡುಕಾಟದಲ್ಲಿ ಅಕ್ಷರ ಸಹ ಹುಚ್ಚನಂತಾಗಿಬಿಡುತ್ತದೆ. ಮತ್ತದೇ ಜಾಗದಲ್ಲಿ, ಆಕೆ ಹರಿಯುತಿದ್ದ ದಿಕ್ಕಿನಲ್ಲಿಯೇ ರುಧ್ರಾವೇಷದಲ್ಲಿ ಮುನ್ನುಗ್ಗಿ ಸಾಗುತ್ತದೆ. ಇದನ್ನೇ ಆಧುನಿಕ ನಾವುಗಳು ಪ್ರವಾಹ, ಪ್ರಳಯ ಎಂದುಕೊಂಡು ದೇವರನ್ನು ದ್ವೇಷಿಸುವುದು. ನಿಸರ್ಗದ  ಜೀವನಚರಿಯನ್ನು ಅರಿಯಲಾಗದ ನಾವುಗಳಿಗೆ ಅದೊಂದು ಪ್ರವಾಹವಾಗಿಯೇ ಕಾಣುತ್ತದೆ ವಿನಹಃ ತನ್ನಾಕೆಯನ್ನು ಕಳೆದುಕೊಂಡ ಭಗ್ನಪ್ರೇಮಿಯ ರೋಧನೆ ಕಾಣಿಸುವುದಿಲ್ಲ. ಪ್ರಸ್ತುತ ವಿಶ್ವದಲ್ಲಿ ಜರುಗುತ್ತಿರುವ ಹೆಚ್ಚಿನ ಜಲಪ್ರವಾಹಗಳಿಗೆ ಮಾನವ ಹೀಗೆ ನದಿಯ ನೀರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ದಿಕ್ಕುಬದಲಿಸಿಕೊಳ್ಳುತ್ತಿರುವದೇ ಮೊದಲ ಮಹತ್ವದ ಕಾರಣ. ಇದೇ ವಿಷಯವಾಗಿ ಹಲವು ವೇಳೆ  ಪರಿಸರವಾದಿಗಳ ಕೂಗಾಟ ನಮಗೆ ಎಡಪಂಥೀಯ ಬುದ್ದಿಜೀವಿಗಳ ಅರಚಾಟದಂತೆ ಕಾಣುತ್ತದೆ. ಅವರ ಕೂಗಾಟವನ್ನು ನಾವು ಗಂಭೀರ ಸಮಸ್ಯೆಗಳೆಂದು ಎಲ್ಲಿಯವರೆಗೂ ಅರಿವಿಯುವುದಿಲ್ಲವೋ ಅಲ್ಲಿಯವರೆಗೂ ಯಾವ ಕಾಲದಲ್ಲ್ಲೂ ಯಾವುದೇ ಬಗೆಯ ನೈಸರ್ಗಿಕ ವಿಕೋಪಗಳಿಗೆ ನಾವುಗಳು ರೆಡಿಯಾಗಿರಬೇಕು. ಪರಿಸರವಾದಿಗಳಷ್ಟೇ ಅಲ್ಲದೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಸೂಚನೆಗಳನ್ನೇ ಲಘುವಾಗಿ ಪರಿಣಮಿಸಿ ಇಂದು ವಿಪತ್ತನ್ನು ಎದುರಿಸುತ್ತಿರುವ ಕೇರಳ ಸರ್ಕಾರದ ಹಿನ್ನಲೆಯಲ್ಲಿ ಇಡೀ ದೇಶದ ನೀರಿನ ಸಮಸ್ಯೆಗಳಿಗೆ ಒಂದೇ ಹೆಜ್ಜೆಯಲ್ಲಿ ಪರಿಹಾರವನ್ನು ಕರುಣಿಸುವ ಕೇಂದ್ರ ಸರ್ಕಾರದ ”ಗಂಗಾ-ಕಾವೇರಿ’ ನದಿ ಜೋಡಣೆ ಸಾಹಸವನ್ನು ಇನ್ನಾದರೂ ಕೊಂಚ ಯೋಚಿಸಿ ಕೈಗೆತ್ತುಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ಬಂದ ಮಹಾಮಳೆಗೆ ರಾಜಕಾಲುವೆಗಳ ನೀರೂ ಹೀಗೆ ಎಲ್ಲೆಂದರಲ್ಲಿ ನುಗ್ಗಿ ಮಾಡಿದ ಅನಾಹುತ ನಮ್ಮ ಕಣ್ಣ ಮುಂದೆಯೇ ಇರುವಾಗ ಅಲ್ಲದೆ ಹೀಗೆ ದಿಕ್ಕುಬದಲಿಸಿದ ನದಿಗಳ ದಂಡೆಗಳಲ್ಲಿ ಅಥವಾ ಆ ನದಿಯ ಹಿಂದಿನ ಹರಿವಿನ ಜಾಗದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಕೊಡುವ ಬುದ್ದಿವಂತರನ್ನು ಹೀಗೆ ಪ್ರವಾಹಗಳಿಂದ ಮನೆಮಠಗಳನ್ನು ಕಳೆದುಕೊಂಡು ಪರದಾಡುವ ಜನರ ಮುಂದೆ ತಂದು ನಿಲ್ಲಿಸಬೇಕು. ಹೀಗೆ ತಮ್ಮದೇ ಸಮಾಧಿಯ ಜಾಗಕ್ಕೆ ಏನೋ ಎಂಬಂತೆ ಮನೆಗಳನ್ನು ಮಾರುವ ಅವರಿಗೆ ಹಾಗು ಖರೀಧಿಸುವ ನಮಗೆ  ತಿಳಿಹೇಳುವವರರ್ಯಾರು.

ಅಲ್ಲಿ ವರುಣದ ಆರ್ಭಟವಾದರೆ ನಮ್ಮಲ್ಲಿ (ಕೊಡಗು ಹಾಗು ಇತರೆ ಮಲೆನಾಡು ಪ್ರದೇಶ) ಬೆಟ್ಟಗುಡ್ಡಗಳೇ ಕುಸಿದು ಪ್ರಪಾತವನ್ನು ನಿರ್ಮಿಸುತ್ತಿರುದು. ಜಾರುವ ಬಂಡೆಗಳಿಂದ ನಿರಾಯಾಸವಾಗಿ ಜಾರುವಂತೆ ಜಾರಿ ಪ್ರಪಾತಕ್ಕೆ ಬೀಳುವ ಮನೆಗಳು, ಕ್ಷಣಮಾತ್ರದಲ್ಲಿ ಇಡೀ ಹಳ್ಳಿಗೆ ಹಳ್ಳಿಯೇ ಉದುಗಿಹೋಗಿ ಕಣ್ಮರೆವಾಗುವ ದೃಶ್ಯಗಳು, ಕಲ್ಲುಗುಡ್ಡದ ಒಂದಿಡೀ ಬಾಗವೇ ಕುಸಿದು ಭೂಕಂಪವನ್ನು ಹುಟ್ಟುಹಾಕುವ ವಿಡಿಯೋಗಳನ್ನು ನೋಡಿದರೆ  ಕಲಿಯುಗದ ಅಂತ್ಯಕಾಲ ಸಮೀಪಿಸಿತೇನೋ ಎಂದನಿಸುವುದು ಸುಳ್ಳಲ್ಲ. ಆದರೆ ಇಲ್ಲಿ ವಿಚಾರಕ್ಕೊಳಪಡಿಸುವ ವಿಷಯವೇನೆಂದರೆ ಈಗ ಬರುತ್ತಿರುವ ಮಳೆಯ ಪ್ರಮಾಣವೇನು ಹಿಂದೆಂದೂ ಬಾರದಿದ್ದ ಮಟ್ಟದ್ದೇನಲ್ಲ. ಇದಕ್ಕಿಂತಲೂ ಹೆಚ್ಚಿನ ಅಗಾಧವಾದ ಮಳೆಯನ್ನು ಇಲ್ಲಿನ ನೆಲ ಕಂಡಿದೆ. ಆಗ ನೋಡುಗರಿಗೆ ಅದು ರಮ್ಯಾ ರಮಣೀಯ ನೋಟವನ್ನು ಕೊಡುತ್ತಿತ್ತೇ ವಿನಃ ಹೀಗೆ ರುಧ್ರಕಾಳಿಯಂತೆ ಕುಣಿದು ಭಯಬೀಳಿಸುತ್ತಿರಲಿಲ್ಲ. ಹಾಗಾದರೆ ಎರಡು ದಿನದ ಮೋಜಿಗೆ ಗುಡ್ಡಗಳನ್ನು ಕಡಿದು ಕಾಡನ್ನು ಹಾಳುಗೆಡಗುವ ಹೋಂ ಸ್ಟೇಗಳು, ಪೋಷಿಸಿ ಬೆಳೆಸಿದ ಭೂಮಾತೆಯ ಒಡಲನ್ನೇ ಬಗೆದು ನೆಡೆಸುವ ಗಣಿಗಾರಿಕೆ, ಸಿಕ್ಕ ಸಿಕ್ಕ ಜಾಗಗಳಲ್ಲಿ ಅವೈಜ್ಞಾನಿಕವಾಗಿ ಜರುಗುವ ಮನೆ ನಿರ್ಮಾಣಗಳೇ ಇಂದು ನಮ್ಮ ಹಸಿರು ಜಿಲ್ಲೆಗಳ ಕುಸಿತಕ್ಕೆ ನಿಜವಾದ ಕಾರಣವೇ? ಉತ್ತರ ಇಲ್ಲ ಎನ್ನುವವರು ಮಾತ್ರ ಶತಮೂರ್ಖರು!

ಜಲವಿಕೋಪಗಳು ವಿಶ್ವದಲ್ಲಿ ಜರುಗುವುದು ಇಂದು ಹೊಸತೇನಲ್ಲ. ಮಾನವ ಒಂದೆಡೆ ನೆಲೆಸಿ ವ್ಯವಸಾಯ ಮಾಡಲು ಶುರುವಿಟ್ಟಾಗಿನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ನದಿಗಳಿಗೆ, ಹಳ್ಳಗಳಿಗೆ ಅಡ್ಡಗಟ್ಟಿ ಅವುಗಳ ಹರಿವಿನ ವಿರುದ್ಧ ಆಟವಾಡುತ್ತಾ ಬಂದಿದ್ದಾನೆ. ಚೋಳರ ಕಾಲದಲ್ಲಿ (ಒಂದನೇ ಶತಮಾನ) ನಿರ್ಮಿತವಾದ ಇಂದಿಗೂ ಕಾರ್ಯನಿರ್ವಾಹಿಸುತ್ತಿರುವ (!) ತಮಿಳುನಾಡಿನ ಕಲ್ಲಣೈ ಆಣೆಕಟ್ಟು ವಿಶ್ವದಲ್ಲೇ ಅತಿ ಪುರಾತನವಾದ ಆಣೆಕಟ್ಟು ಎಂದನಿಸಕೊಂಡಿದೆ. ತಂತ್ರಜ್ಞಾನಗಳು ಬೆಳೆದಂತೆ ಹೀಗೆ ಕಟ್ಟಿದ ಅಣೆಕಟ್ಟುಗಳ ನಿರ್ವಹಣೆಯಲ್ಲೂ ಸಾಕಷ್ಟು ಸುಧಾರಣೆಗಳು ಬಂದಿವೆ. ಆದರೆ ಇಂದು ಇತರೆ ದೇಶಗಳಲ್ಲಿ ನೆಡೆಯುವ ದುರಂತಗಳು ನಮ್ಮಲಿ ಜರುಗುವುದಕ್ಕಿಂದಲೂ ಅದೆಷ್ಟೋ ಪಟ್ಟು ಭಯಾನಕ ಹಾಗು ಭೀಕರವಾಗಿರುತ್ತವೆ. ಆದರೂ ಅಲ್ಲಿನ ಸಾವು-ನೋವು, ಕಷ್ಟ-ನಷ್ಟಗಳನ್ನು ನಮಗೆ ಹೋಲಿಸಿದರೆ ತೀರಾ ಕನಿಷ್ಠವಾಗಿಯೇ ಇರುತ್ತದೆ. ಕಾರಣ ನಮ್ಮಲ್ಲಿ ಅನಾಹುತಗಳು ಜಗುಗುವ ಮೊದಲು ಹಾಗು ಜರುಗಿದ ನಂತರವೂ ಸರಕಾರಗಳನ್ನು ಧೊಷಿಸುವ ಏಕಮಾತ್ರ ಕಾರ್ಯವೊಂದನ್ನು ಬಿಟ್ಟರೆ ಬೇರೇನೂ ಆಗುವುದೇ ಇಲ್ಲ. ಕನಿಷ್ಠ ಬೆಲೆಗೆ ಸಿಕ್ಕ ಜಾಗವೆನುತ ನದಿ, ಅಣೆಕಟ್ಟುಗಳ ಪ್ರದೇಶವೆನ್ನುವುದನ್ನೂ ಲೆಕ್ಕಿಸದೆ ಮನೆ ಮಠಗಳನ್ನು ಖರೀದಿಸುವ ನಮಗೆ ಹೀಗೆ ಪ್ರವಾಹದ ಪಾಠ ದೊರೆತರೂ ಅದರಿಂದ ಕಲಿಯುವುದ ಬಿಟ್ಟು ಬಿಸ್ಕತ್ತನ್ನು ಎಸೆಯುವ ರಾಜಕಾರಣಿ ಹಾಗು ಅವನ ಸರ್ಕಾರಗಳ ದೋಷಣೆಯಲ್ಲೇ ನಮ್ಮ ಸಿಟ್ಟನ್ನು ಶಮನಮಾಡಿಕೊಳ್ಳುತ್ತೇವೆ. ಅಲ್ಲದೆ ಇತ್ತೀಚಿನ ವರದಿಯೊಂದರ ಪ್ರಕಾರ ನೀರಿಂಗಿತ ಹೆಚ್ಚಾಗಿ ಹೂಳೆ ತುಂಬಿಕೊಂಡಿರುವ ಕೇರಳದ ಪ್ರತಿಯೊಂದು ಅಣೆಕಟ್ಟುಗಳನ್ನು ಮಾನ್ಸೂನ್ ಶುರುವಾಗುವ ಮೊದಲೇ ಬರಿದುಗೊಳಿಸಿ ಹೂಳನ್ನು ತೆಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದರೆ ಬಹುಷಃ ಈ ಮಟ್ಟಿನ ಸಾವುನೋವುಗಳು ಸಂಭವಿಸುತ್ತಿರಲಿಲ್ಲವೆಂಬುದು. ಅಲ್ಲದೆ ಅಣೆಕಟ್ಟುಗಳ ಸಂಖ್ಯೆಯಲ್ಲಿ USA ಹಾಗು ಚೈನಾದ ನಂತರದ ಸ್ಥಾನದಲ್ಲಿರುವ ಭಾರತ (ಸುಮಾರು 5000) ದಲ್ಲಿನ ಅಣೆಕಟ್ಟುಗಳಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದಾದ ವ್ಯವಸ್ಥೆ ಇರುವುದು ಕೇವಲ ಬೆರಳೆಣಿಕೆಯಷ್ಟರಲ್ಲಿ ಮಾತ್ರ(25-30!). ಬದಲಾಗುತ್ತಿರುವ ಹವಾಮಾನ ವೈಪರಿತ್ಯದಲ್ಲಿ ಹೀಗೆ ಮುಲಾಜಿಲ್ಲದೆ ಬರುವ ಮಳೆಯ ಹಿನ್ನಲೆಯಲ್ಲಿ ಉಳಿದಂತೆ ಇರುವ ಅಷ್ಟೂ ಅಣೆಕಟ್ಟುಗಳ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಕೇವಲ ಸರಕಾರಗಳಿಗೆ ಇದ್ದರೆ ಸಾಲದು. ದೂರುಗಳಲ್ಲೆಯೇ ಕಾಲಹರಣ ಮಾಡುವ ನಮ್ಮವರು ‘ಮುಲ್ಲಪೆರಿಯಾರ್’ ಅಣೆಕಟ್ಟಿನ ಬಗ್ಗೆಯೂ ಕೊಂಚ ತಿಳಿದುಕೊಳ್ಳುವುದು ಲೇಸು. ಇಂದು ನೆನೆದ ಹಸಿಮುದ್ದೆಯಂತಾಗಿರುವ  ಧಕ್ಷಿಣ ಭಾರತದ ನೆಲದ ಭಾಗಶಃ ಅಣೆಕಟ್ಟುಗಳು ತುಂಬಿತುಳುಕುತ್ತಿವೆ. ಆದರೆ ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂರಿಪ್ಪತ್ತು ವರ್ಷಗಳ ಪುರಾತನವಾದ ಮುಲ್ಲಾ ಪೆರಿಯಾರ್ ಆಣೆಕಟ್ಟು ತುಂಬಿತೆಂದರೆ ಕೇರಳದ ನಾಲ್ಕೈದು ಜಿಲ್ಲೆಗಳ ಜನರಿಗೆ ಜಲಬಾಂಬೊಂದು ಸ್ಪೋಟಗೊಳ್ಳುವ ಭಯ ಆವರಿಸಿಕೊಳ್ಳುತ್ತದೆ. ಅಂದು ಬ್ರಿಟಿಷರು ಕೇವಲ ಐವತ್ತು ವರ್ಷ ಆಯಸ್ಸಿಗೆ ಎನ್ನುವಂತೆ ನಿರ್ಮಿಸಿದ ಆಣೆಕಟ್ಟನ್ನು ಇಂದು ನೂರು ವರ್ಷಗಳು ಕಳೆದರೂ ದುಡಿಸಿಕೊಂಡು ಬಂದಿದ್ದಾರೆ. ಕಾರಣ ಪೆರಿಯಾರ್ ನದಿಯ ಹೆಚ್ಚಿನ ಭಾಗದ ಹರಿವು ಕೇರಳ ರಾಜ್ಯದಲ್ಲೇ ಆದರೂ ಅದರ ಉಗಮಸ್ಥಾನ ತಮಿಳುನಾಡಿನ ಸಿವಗಿರಿ ಅರಣ್ಯ ಪ್ರದೇಶಗಳಲ್ಲಿ. ಅಂದು ಬ್ರಿಟಿಷರ ತಪ್ಪುನಿರ್ಧಾರದಿಂದಲೂ ಅಥವಾ ಎಪ್ಪತ್ತರ ದಶಕದಲ್ಲಿ ಕೇರಳ ಹಾಗು ತಮಿಳುನಾಡು ಸರ್ಕಾರಗಳ ಒಪ್ಪಂದದಿಂದಲೋ ಏನೋ ಇಂದಿಗೂ ಈ ಅಣೆಕಟ್ಟಿನ ಸಂಪೂರ್ಣ ಅಧಿಕಾರ ತಮಿಳುನಾಡು ಸರ್ಕಾರದ ಬಳಿಯೇ ಉಳಿದಿದೆ. ಯಾವುದೇ ವಿಪತ್ತಿಲ್ಲದೆ ಎತೇಚ್ಛವಾಗಿ ಸಿಗುವ ನೀರು, ವಿದ್ಯುತ್ತ್ ನನ್ನು ಅನುಭವಿಸುವ ತಮಿಳರು ಇಲ್ಲಿಯೂ ಸಹ ಕೇರಳ ಸರಕಾರದೊಟ್ಟಿಗಿನ ಅಮಾನವೀಯತನದಿಂದಲೇ ನಿಂದನೆಗೊಳಗಾಗುತ್ತಿದ್ದರೆ. ಒಂತಿಷ್ಟು ಹಣವನ್ನು ಖರ್ಚುಮಾಡಿ ಇರುವ ಅಣೆಕಟ್ಟಿನ ಪಕ್ಕಕ್ಕೆ ಹೊಸತೊಂದು ಅಣೆಕಟ್ಟನ್ನು ಕಟ್ಟಿ ಮುಂದೊಂದು ದಿನ ಬಂದೊದಗುವ ಅಪಾಯವನ್ನು ತಪ್ಪಿಸಬಹುದಲ್ಲ ಎಂದರೆ 136 ಅಡಿಗಳಿಷ್ಟಿದ್ದ ಗರಿಷ್ಟ ಮಟ್ಟವನ್ನು 142 ಅಡಿಗೆ ಏರಿಸಿ ‘ಮುಲ್ಲಾ ಪೆರಿಯಾರ್ ಆಣೆಕಟ್ಟು ಇನ್ನೂ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಬಹುದೆಂಬ’ ಬಾಲಿಶ ಹೇಳಿಕೆಯನ್ನು ಕೊಡುತ್ತಿದ್ದಾರೆ ಒಬ್ಬ ಸಾಮಾನ್ಯ ಮುಖ್ಯಮಂತ್ರಿಯನ್ನು ದೇವರಿಗಿಂತಲೂ ಮಿಗಿಲಾದವರಂತೆ ಪೂಜಿಸಿ ಬಿದ್ದು ಒರಳಾಡುವ ಅಂಧ ರಾಜಕಾರಣಿಗಳು. ಒಂದೊಮ್ಮೆ ಮುಲ್ಲಾ ಪೆರಿಯಾರ್ ಆಣೆಕಟ್ಟು ಒಡೆದು ಅದರಲ್ಲಿನ ನೀರೇನಾದರೂ ಒಳನುಗ್ಗಿದರೆ ನಿಮಿಷಮಾತ್ರದಲ್ಲಿ ನಾಲ್ಕು ಜಿಲ್ಲೆಗಲ್ಲಿ ಒಂದು ನರಪಿಳ್ಳೆಯೂ ಬದುಕುವುದು ಕಷ್ಟಕರವೆನುತದೆ ಸಂಶೋಧನೆಗಳು! ಅಲ್ಲದೆ ಸುಣ್ಣ ಹಾಗು ಸಿಮೆಂಟಿನಿಂದ ಮಾಡಿದ ಈ ಪುರಾತನ ಅಣೆಕಟ್ಟಿನ ಅಲ್ಲಲ್ಲಿ ಬಿರುಕುಗಳು ಮೂಡುತ್ತಿದ್ದರೂ ಇಂತಹ ಬಂಡ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳನ್ನು ಆರಿಸಿ ಸರ್ಕಾರವನ್ನು ನೆಡೆಸಲು ಕಳಿಸುವ ಜನರ ವಿಚಾರಶಕ್ತಿಯನ್ನೂ ಮೆಚ್ಚಲೇಬೇಕು!

ನಾವು, ನಮ್ಮ ದೇಶ ಎನುತ ಕೆಲದಿನಗಳ ಹಿಂದಷ್ಟೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಕೊಂಡ ಭಾರತೀಯರು ನೀರಿನ ವಿಚಾರ ಬಂದಾಗ ಅಕ್ಷರ ಸಹ ಸ್ವಾರ್ಥಿಗಳಾಗುತ್ತೇವೆ. ಒಂದೆಡೆ ನೀರು ಬೇಕೆಂದು ಕೋರ್ಟ ಮೆಟ್ಟಿಲನ್ನು ಏರಿದರೆ ಮತ್ತೊಂದೆಡೆ ನೀರು ಬೇಡವೆಂದು ವಾದವನ್ನು ಮಂಡಿಸುತ್ತೇವೆ. ಅದು ಕೇರಳ ತಮಿಳುನಾಡಿನ ಸರ್ಕಾರಗಳ ವಿಷಯವಷ್ಟೇ ಅಲ್ಲ. ಹಸಿವು, ನೋವು, ದುಃಖ ದುಮ್ಮಾನಗಳಲ್ಲೇ ಬಾಡಿ ಬೆಂಡಾಗಿ ಹೋಗಿರುವ ಅಮಾಯಕ ಜನರ ಜೀವನದ ಪ್ರೆಶ್ನೆ. ಇಂದು ಪರಿಹಾರ ಕಾರ್ಯ, ದೇಣಿಗೆ, ದಾನ ಎನುತ ಕೊಡುವುದಕ್ಕಿಂತ ಹೆಚ್ಚಾಗಿ ‘ತೋರಿಸಿಕೊಳ್ಳುವ’ ಜನ ಹೀಗೆ ಮುಂದೊಂದು ದಿನ ಬಂದೆರಗಬಹುದಾದ ಭೀಕರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜಾತಿ, ಭೇದ, ವರ್ಣ, ರಾಜ್ಯ,ಬೇಲಿಯನ್ನು ಮರೆತು ಕೈಜೋಡಿಸಬೇಕು. ಪೆಟ್ಟುತಿಂದ ನೇಸರರಾಜ ಮುನಿದು ಶಿಕ್ಷಿಸುವ ಮೊದಲೇ ನಮ್ಮ ಟೆಕ್ನಾಲಜಿ ಎಂಬ ಕೊಂಬುಗಳನ್ನು ಬದಿಗಿಟ್ಟು ನೇಸರ ನನ್ನು ಬದುಕಿಸಿ ನಾವುಗಳೂ ಬದುಕುವ ಹಾದಿಯನ್ನು ಕಂಡುಕೊಳ್ಳಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments