ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 28, 2018

1

ದೇಶ ವಿಭಜನೆಯ ಕಾರ್ಯಕ್ರಮದ ಹೆಸರು ದ್ರಾವಿಡ ಸಮ್ಮೇಳನ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

“ಯಾವುದರ ಉದ್ದೇಶ Constructive ಆಗಿರುತ್ತದೆಯೋ ಅಂತಹದ್ದು ಮಾತ್ರ ಈ ನೆಲದಲ್ಲಿ ಉಳಿಯುತ್ತದೆ. Destructive ಉದ್ದೇಶವಿರುವಂತವು ಒಂದಷ್ಟು ದಿನ ವಿಜೃಂಭಿಸಿದರೂ ಅಂತಿಮವಾಗಿ ಅವು ಇಲ್ಲಿಂದ ನಾಮಾವಶೇಷವಾಗುತ್ತವೆ”. ಭಾರತದಿಂದ ಬೌದ್ಧ ಮತವೇಕೆ ಹೊರಗೆ ಹೋಗಬೇಕಾಯಿತು ಎಂದು ಶಿಷ್ಯನೊಬ್ಬ ಕೇಳಿದ ಪ್ರಶ್ನೆಗೆ ಈ ಅರ್ಥದಲ್ಲಿ ಸ್ವಾಮಿ ವಿವೇಕಾನಂದರು ಉತ್ತರಿಸುತ್ತಾರೆ. ಅವರು ಹೇಳಿದ ಮಾತು ಎಷ್ಟು ಸತ್ಯವೆನ್ನಲು ಪಕ್ಕದ ತಮಿಳುನಾಡಿನಲ್ಲಿ ಶುರುವಾಗಿದ್ದ ದ್ರಾವಿಡ ಚಳವಳಿ ಎಂಬ ಅತಿರೇಕವು ಇಂದು ಕೊನೆಯುಸಿರುಳೆಯುತ್ತಿರುವುದೇ ಉದಾಹರಣೆ. ಕನ್ನಡ ಮನೆ ಭಾಷೆಯಾಗಿದ್ದ ರಾಮಸ್ವಾಮಿ ಅವರಿಂದ ಶುರುವಾದ ಈ ದ್ರಾವಿಡ ಚಳವಳಿಯ ಬೇರಿನಲ್ಲೇ ದ್ವೇಷದ ವಿಷ ತುಂಬಿಕೊಂಡಿತ್ತು.

ಹಾವು-ಹಾರವ ಎದುರಾದರೇ ಮೊದಲು ಹಾರವನನ್ನು ಕೊಲ್ಲು ನಂತರ ಹಾವನ್ನು ಎನ್ನುವ ವಿಷ ಚಿಂತನೆಯಿಂದ ಹುಟ್ಟಿಕೊಂಡ ಚಳವಳಿ ಹೇಗೆ ತಾನೇ ಇರಲು ಸಾಧ್ಯ? ದೇವರ ವಿಗ್ರಹಗಳನ್ನು ಹೊರಗೆ ಎಳೆದು ತಂದು ಚಪ್ಪಲಿ ಹಾರ ಹಾಕಿದರು. ಬ್ರಾಹ್ಮಣರ ಜುಟ್ಟು-ಜನಿವಾರಗಳನ್ನು ಕಿತ್ತುಹಾಕಿ ಎಂದು ಬೊಬ್ಬಿಟ್ಟರು.ತಮಿಳನ್ನು ಸಂಸ್ಕೃತದಿಂದ ಶುದ್ಧ ಮಾಡಬೇಕು ಎನ್ನುತ್ತಾ ತಮಿಳು ನಾಡನ್ನು ,ತಮಿಳರನ್ನು ಒಂದು ದ್ವೀಪವನ್ನಾಗಿ ಮಾಡಿಕೊಂಡರು. ಜೀವನವಿಡೀ ನಕಾರಾತ್ಮಕ ಚಿಂತನೆಯನ್ನೇ ಹೇಳಿಕೊಂಡು ಬಂದು,ತಮಿಳರಿಂದ ಪೆರಿಯಾರ್ ಎಂದು ಕರೆಸಿಕೊಂಡ ರಾಮಸ್ವಾಮಿಯವರ ಸಂಗ,ಅವರ ಒಂದು ಕಾಲದ ಶಿಷ್ಯರಿಗೆ ಸಾಕಾಯಿತು. ಅವರಿಂದ ಕಳಚಿಕೊಂಡು ಡಿಎಂಕೆ ಸ್ಥಾಪನೆಯಾಯಿತು. ಅದೇ ಡಿಎಂಕೆಯ ಒಡಲಿನಿಂದ ಎಐಡಿಎಂಕೆ ಹುಟ್ಟಿಕೊಂಡಿತು. ಮುಂದೆ ಅರ್ಧ ದಶಕಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕೀಯವೆಂಬ ಹೆಸರಿನ  ಹೂವನ್ನೇ ತಮಿಳರ ಕಿವಿಗೆ ಮುಡಿಸಿ ಅಧಿಕಾರ ನಡೆಸಿದ್ದು ಇವೆರಡು ಪಕ್ಷಗಳೇ. ಅದರಲ್ಲೂ ಕರುಣಾನಿಧಿಯವರ ಕುಟುಂಬವಂತೂ ದೇಶಕ್ಕೆ ಅಮರಿಕೊಂಡ ನೆಹರೂ ಕುಟುಂಬದಂತೆಯೇ ಆಗಿ ಹೋಗಿತ್ತು. ದೊಡ್ಡ ಮಗನ ಕೋಟೆ ಮಧುರೈನಲ್ಲಿ,ಚಿಕ್ಕ ಮಗನ ರಾಜ್ಯಭಾರ ಚೆನ್ನೈನಲ್ಲಿ ಮತ್ತೊಬ್ಬ ಮಡದಿಯ ಮಗನದು ಕೊಂಗನಾಡು,ಹೀಗೆ ತುಂಡು ರಾಜರ ಕಾಲದ ಪಾಳೆಯಪಟ್ಟುಗಳಂತಹ ರಾಜಕೀಯವದು.ಇಂತಹ ರಾಜಕೀಯ ಅತಿರೇಕಗಳು ಮತ್ತು ನಕಾರಾತ್ಮಕ ಚಳವಳಿಯ ಪರಿಣಾಮ ಹೇಗಿರುತ್ತದೆ ಎನ್ನುವುದನ್ನು ಜಯಲಲಿತಾ ಸಾವು ಮೊದಲ ಬಾರಿಗೆ ತೋರಿಸಿಕೊಟ್ಟಿತು. ತಮ್ಮ ತಮಿಳು ದ್ವೀಪದಲ್ಲೇ ಕುಳಿತು ಅಮ್ಮಾ ಅಮ್ಮಾ ಎನ್ನುತ್ತ ಆಕೆಯ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದವರೇ ಪಕ್ಷವನ್ನು ಮೂರು ಹೋಳಾಗಿಸಿದರು.

ಕರುಣಾನಿಧಿ ನಂತರ ಡಿಎಂಕೆ ಎಂಬ ಪಕ್ಷವೂ ಕನಿಷ್ಠ ಎರಡು ಹೋಳಾಗದೇ ಇರಲಾರದು. ಹಾವು-ಹಾರವನ ಪೈಕಿ ಹಾವನ್ನು ಕೊಲ್ಲಿ ಎನ್ನುತ್ತಿದ್ದ ಅದೇ ದ್ರಾವಿಡ ಚಳವಳಿಯ ಹೆಸರಿನಲ್ಲೇ ರಾಜ್ಯಭಾರ ಮಾಡಿ ಇಡೀ ರಾಜ್ಯ,ಪಕ್ಷವನ್ನು ಅಕ್ಷರಶಃ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಜಯಲಿಲತಾ ಜಾತಿಯಿಂದ ಬ್ರಾಹ್ಮಣರು,ಕರ್ನಾಟಕ ಮೂಲದವರು. ವಿಗ್ರಹ ಭಂಜನೆಯೇ ಕ್ರಾಂತಿ ಎನ್ನುತ್ತಿದ್ದ ತಮಿಳುನಾಡಿನ ಗಲ್ಲಿ ಗಲ್ಲಿಗಳಲ್ಲಿ ನಿಮಗಿವತ್ತು ರಾಜಕೀಯ ನಾಯಕರ ಪುತ್ಥಳಿಗಳು ಸಿಗುತ್ತವೆ.ದೇವರ ವಿಗ್ರಹಗಳನ್ನು  ಹೊರತಂದು ಚಪ್ಪಲಿಹಾರ ಹಾಕಿ,ದೇವರ ಫೋಟೋಗಳನ್ನು ಸುಟ್ಟು ಹಾಕಿದ ಇದೇ ತಮಿಳುನಾಡಿನಲ್ಲೇ ದಕ್ಷಿಣ ಭಾರತದ ದೊಡ್ಡ ದೊಡ್ಡ ದೇವಸ್ಥಾನಗಳಿವೆ.ನಾಸ್ತಿಕರ ದ್ರಾವಿಡ ಚಳವಳಿಯ ಇದೇ ತಮಿಳುನಾಡಿನ ದೇವಸ್ಥಾನಗಳನ್ನು,ತಮಿಳರ ಆಚರಣೆಗಳನ್ನು ನೀವು ಒಳಹೊಕ್ಕು ನೋಡಿದರೆ ನಮಗಿಂತ ಹೆಚ್ಚು ಭಕ್ತಿ,ಆಚರಣೆಯ ಮೇಲಿನ ಪ್ರೀತಿ-ತನ್ಮಯತೆ ಅವರಲ್ಲಿ ಎದ್ದು ಕಾಣುತ್ತದೆ.ಇಂತಹ ವೈರುಧ್ಯಗಳು ಕಾಣಲಿಕ್ಕೇನು ಕಾರಣವಿದ್ದಿರಬಹುದು? ಉತ್ತರ ಸರಳವಾಗಿದೆ.  ದ್ರಾವಿಡ ಚಳವಳಿಯೆನ್ನುವುದು ಪೆರಿಯಾರ್ ರಾಮಸ್ವಾಮಿಯವರಿಗೆ ಕಾಶಿಯಲ್ಲಿ ಯಾರೋ ತಲೆಕೆಟ್ಟವರು ಮಾಡಿದ ವೈಯುಕ್ತಿಕ ಅವಮಾನದ ರೊಚ್ಚಿನ ಕೂಸಾಗಿತ್ತು.

ಒಂದರ್ಥದಲ್ಲಿ ಕಮ್ಯುನಿಸ್ಟರ ಕ್ರಾಂತಿಯಂತೆ. ಎಲ್ಲಾ existing ವ್ಯವಸ್ಥೆಗಳನ್ನು ಹಾಳುಗೆಡವಬೇಕು,ಉರುಳಿಸಬೇಕು ಅಷ್ಟೇ ಗುರಿ. ಕಟ್ಟುವುದು ಹೇಗೆ? ಅದು ನಮಗೆ ಬೇಕಾಗಿಲ್ಲ ಎನ್ನುವ ಧೋರಣೆಯ ಚಳವಳಿ. ಇಂತಹ ಕೃತಕ ಚಳವಳಿಯನ್ನು ಭಾವನಾತ್ಮಕ ಮನಸ್ಥಿತಿಯ ತಮಿಳರನ್ನು ಸೆಳೆಯಲೇನೋ ಯಶಸ್ವಿಯಾಯಿತು,ಆದರೆ ಹಳ್ಳಿಗಾಡಿನ ತಮಿಳರ ದೈನಂದಿನ ಬದುಕಿನ ಅನುಭವಗಳಿಗೂ ದ್ರಾವಿಡ  ಚಳವಳಿಗೂ ಯಾವುದೇ ಸಂಬಂಧವೇ ಇರಲಿಲ್ಲವಾದ್ದರಿಂದ ಅಂತಹ ಕೊಂಡಿ ಸಹಜವಾಗಿಯೇ ಬೆಳೆಯಲಿಲ್ಲ.ಬ್ರಿಟಿಷರಿಂದ ಸೃಷ್ಟಿಯಾಗಿದ್ದ ಆರ್ಯ-ದ್ರಾವಿಡದ ಕಟ್ಟುಕತೆಯನ್ನೇ ಸತ್ಯವೆಂದು ನಂಬಿಸಲು ಹೊರಟಿದ್ದು ಪೆರಿಯಾರ್,ಹಾಗೆ ನಂಬಿಸಲು ಹೊರಟ ಪೆರಿಯಾರ್ ಕೈಗೆ ಅಸ್ತ್ರಕೊಟ್ಟಿದ್ದು ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು.ಬ್ರಿಟಿಷರಿಂದ ಶತಮಾನಗಳ ಕಾಲ ಆಲಿಸಿಕೊಂಡ ಗುಲಾಮಿ ಮನಸ್ಥಿತಿಯ ಪರಿಣಾಮವೋ ಏನೋ ಎಂಬಂತೆ ದೇಶವೊಂದನ್ನು ಆಳಲು ಒಂದು ಭಾಷೆಯ ಅವಶ್ಯಕತೆಯಿದೆ ಎನ್ನುವುದನ್ನು ಪ್ರತಿಪಾದಿಸಿ ಅನುಷ್ಠಾನಕ್ಕೆ ಹೊರಟಿದ್ದು ನೆಹರೂ ಅವರ ಕಾಂಗ್ರೆಸ್ ಪಕ್ಷವೇ. ಕಾಂಗ್ರೆಸ್ ಪಕ್ಷದ ಇಂತಹ ಹಿಂದಿ ಹೇರಿಕೆಯ ಧೋರಣೆಯ ವಿರುದ್ಧವೇ ತಮಿಳರನ್ನು ಎದುರಾಗಿ ನಿಲ್ಲಿಸಿದ್ದು ದ್ರಾವಿಡ ಚಳವಳಿ.ಕಾಂಗ್ರೆಸ್ಸಿನ ಕೂಸಾಗಿದ್ದ ಹಿಂದಿ ಹೇರಿಕೆಯ ಶವಪೆಟ್ಟಿಗೆಯನ್ನು ಈಗ ಮೋದಿಯವರ ಹಣೆಗೆ ಕಟ್ಟಲು ಕರ್ನಾಟಕದ ಗಂಜಿಗಿರಾಕಿಗಳು,ಕಾಂಗ್ರೆಸ್ ಕನ್ನಡಿಗರು ಹೊರಟು ನಿಂತಿದ್ದಾರೆ.

೧೯೩೯ರಲ್ಲಿ ಇದೇ ಪೆರಿಯಾರ್ ರಾಮಸ್ವಾಮಿ ದ್ರಾವಿಡ ಸಮ್ಮೇಳನವನ್ನು ಸಂಘಟಿಸಿದ್ದರು.ಪಾಕಿಸ್ತಾನದಂತೆಯೇ ಪ್ರತ್ಯೇಕ ದ್ರಾವಿಡ ದೇಶ ಬೇಕೆನ್ನುವ ಅತಿರೇಕವೂ ಅವರಲ್ಲಿತ್ತು. ಗಮನಿಸಬೇಕಾದ ವಿಷಯವೆಂದರೇ, ತಮಿಳುನಾಡಿನ ಈ ಅತಿರೇಕದ ಹೋರಾಟಗಳು ಕರ್ನಾಟಕದ ಬಾಗಿಲಿಗೆ ಇದುವರೆಗೂ ಕಾಲಿಟ್ಟರಲಿಲ್ಲ. ನಮ್ಮ ಪಾಲಿಗೆ ದ್ರಾವಿಡ ಎಂದರೆ ಅದು ಕೇವಲ ರಾಹುಲ್ ದ್ರಾವಿಡ್ ಅಷ್ಟೇ. ಆದರೆ ಈಗ ಕೆಲವು ಅತೃಪ್ತ ಆತ್ಮಗಳು ದಕ್ಷಿಣ ಭಾರತ ವಿಭಜನೆಯಾಗಬೇಕೆಂದು ಬಯಸುತ್ತಿವೆ.ಕೆಲವು ದಿನಗಳ ಹಿಂದೆ ಟ್ವಿಟರಿನಲ್ಲಿ ದಕ್ಷಿಣ ಭಾರತ Vs ಉತ್ತರ ಭಾರತವೆಂಬ ಮನೆಹಾಳು ಟ್ರೆಂಡ್ ಮಾಡಿದ್ದರು ಈ ಕಿಡಿಗೇಡಿಗಳು. ವಿಚಿತ್ರವೆಂದರೇ ಇಂತಹ ತಲೆಕೆಟ್ಟವರಿಗೆ ಕನ್ನಡಾಭಿವೃದ್ಧಿ ಪ್ರಾಧಿಕಾರ ಹೆಸರಿನ ಸಂಸ್ಥೆಯೇ ವೇದಿಕೆಯೊದಗಿಸಿಕೊಟ್ಟು ದ್ರಾವಿಡ ಸಮ್ಮೇಳನ ಮಾಡಲು ಹೊರಟಿದೆಯಂತೆ.

ನಮ್ಮ ತೆರಿಗೆ ಹಣದಿಂದ ನಡೆಯುವ ಈ ಪ್ರಾಧಿಕಾರದ ಯೋಗ್ಯತೆಗೆ ದಿನೇ ದಿನೇ ಕಣ್ಣು ಮುಚ್ಚುತ್ತಿರುವ ಕನ್ನಡದ ಸರ್ಕಾರಿ ಶಾಲೆಗಳನ್ನು ಉಳಿಸಲಾಗುತ್ತಿಲ್ಲ,ರಾಜಧಾನಿ ಬೆಂಗಳೂರಿನಲ್ಲೇ ನಾಮಫಲಕಗಳಲ್ಲಿ ಕನ್ನಡ ಜಾರಿಗೆ ತರಿಸಲಾಗುತ್ತಿಲ್ಲ. ಆದರೆ ಇವರಿಗೆ ಅಕ್ಕಪಕ್ಕದ ರಾಜ್ಯಗಳನ್ನು ಕರೆಸಿಕೊಂಡ ಸಮ್ಮೇಳನ ನಡೆಸುವ ಉಮೇದಿ ಬಂದುಬಿಟ್ಟಿದೆ. ಹೆಸರಿನಲ್ಲೇ “ಸಿದ್ಧರಾಮಯ್ಯ” ಎಂದಿರುವ ಅಧ್ಯಕ್ಷರು ತಮ್ಮನ್ನು ನೇಮಿಸಿ ಹೋದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಒಡೆದು ಆಳುವ ನೀತಿಯನ್ನೇ ಶಿರಸಾವಹಿಸಿ ಪಾಲಿಸುತ್ತಿದ್ದಾರೆ ಎನಿಸುತ್ತದೆ. ಆ ಪುಣ್ಯಾತ್ಮ ಅಧಿಕಾರದಲ್ಲಿದ್ದಾಗ ಬಿಬಿಎಂಪಿಯನ್ನು ಒಡೆಯಲು ಹೊರಟರು,ವೀರಶೈವ-ಲಿಂಗಾಯತರಲ್ಲಿ ಹುಳಿ ಹಿಂಡಿ ಅವರನ್ನು ವಿಭಜಿಸಲು ಹೊರಟರು,ಪ್ರತ್ಯೇಕತೆಯ ಭಾವನೆ ಕೆರಳಿಸಲು ಧ್ವಜ ಬೇಕೆಂದು ಬೊಬ್ಬೆ ಹೊಡೆಸಿದರು,  ನೆಮ್ಮದಿಯಾಗಿದ್ದ ಕರ್ನಾಟಕದಲ್ಲಿ ಎಲ್ಲಾ ರೀತಿಯ ವಿಭಜನೆಯ ದಾಳಗಳನ್ನು ಉರುಳಿಸಿ ನಕಾರಾತ್ಮಕತೆಯನ್ನು ಹರಡಿದ ಶ್ರೀಮಾನ್ ಸಿದ್ಧರಾಮಯ್ಯನವರನ್ನು ಒಂದರ್ಥದಲ್ಲಿ  ದಕ್ಷಿಣ ಭಾರತದ ಜಿನ್ನಾ ಎಂದರೂ ತಪ್ಪೇನಿಲ್ಲವೆನಿಸುತ್ತದೆ,ಅಂತಹ ಜಿನ್ನಾ ಮನಸ್ಥಿತಿಯ ಸರ್ಕಾರದಲ್ಲಿ ಬಂದು ಕುಳಿತುಕೊಂಡಿರುವ ಎಸ್‌.ಜಿ.ಸಿದ್ದರಾಮಯ್ಯರಂತವರು ಈಗ ದ್ರಾವಿಡ ಸಮ್ಮೇಳನ ಮಾಡುತ್ತೇವೆ,ಕನ್ನಡವನ್ನು ತಮಿಳಿನಂತೆ ಸಂಸ್ಕೃತದಿಂದ ಮುಕ್ತ ಮಾಡುತ್ತೇವೆ ಎಂದು ಬಡಬಡಿಸುತ್ತಿದ್ದಾರೆ. ಶಂಕರ ಭಟ್ಟರೆಂಬ ಮಹಾಶಯರಿಂದ ಶುರುವಾದ ಈ ಎಲ್ಲರ ಕನ್ನಡವೆಂಬ ಅಡಾಲು ಥಿಯರಿಯನ್ನು ಅಳವಡಿಸುವುದು ಕನ್ನಡದ ಅವಸಾನಕ್ಕೆ ನಾವೇ ಹೊಡೆಯುವ ಮೊಳೆಗಳಾಗುತ್ತವೆ ಎನ್ನುವುದು ಈ ಮೂರ್ಖರಿಗೆ ಅರ್ಥವಾಗುತ್ತಿಲ್ಲ ಇವರ ಅತಿರೇಕದ ವರ್ತನೆಗಳನ್ನು ಕಂಡಾಗ ಪೆರಿಯಾರ್ ಆತ್ಮ ಇವುಗಳನ್ನು ಹೊಕ್ಕಿಕೊಂಡಿತಾ ಎಂದು ಆತಂಕವಾಗುತ್ತದೆ.

ಪ್ರಾಧಿಕಾರದ ಅಧ್ಯಕ್ಷರೇನೋ ಇದರಲ್ಲಿ ಯಾವುದೇ ರಾಜಕೀಯವಿಲ್ಲ,ಇದು ಭಾರತದ ಬಹುತ್ವದ ರಕ್ಷಣೆಯ ಕೆಲಸ ಅಂತೆಲ್ಲ ಹೇಳುತ್ತಿದ್ದಾರೆ.ಆದರೆ ಭಾರತದ ಬಹುತ್ವವೆನ್ನುವುದು ಕೇವಲ ದಕ್ಷಿಣದ ನಾಲ್ಕು ರಾಜ್ಯದ ರಾಜ್ಯ ಭಾಷೆಗಳಲ್ಲ ಎನ್ನುವುದು ಈ ವ್ಯಕ್ತಿಗೆ ತಿಳಿದಿಲ್ಲವೇ? ಇವರ ದ್ರಾವಿಡ ಸಮ್ಮೇಳನದಲ್ಲಿ ಸ್ಥಾನ ಪಡೆದಿರುವದು ಕನ್ನಡ,ತಮಿಳು,ತೆಲುಗು ಹಾಗೂ ಮಲಯಾಳಂಗಳು ಮಾತ್ರವೇ ಅಂತೇ.ಕರ್ನಾಟಕದಲ್ಲೇ ಇರುವ ಕನ್ನಡ ಪ್ರಾಧಿಕಾರದ ಈ ಬುದ್ದಿವಂತರಿಗೆ ತುಳು ಕೂಡ ದ್ರಾವಿಡ ಭಾಷೆ ಎನ್ನುವುದು ನೆನಪಾಗಲಿಲ್ಲವೇಕೆ?

ರಾಜಕೀಯವಾಗಿ ತುಳುವಿನ ಅಗತ್ಯ ಸಮ್ಮೇಳನದಲ್ಲಿ ಶ್ರೀಮಾನ್ ಸಿದ್ಧರಾಮಯ್ಯನವರಿಗೆ ಕಾಣಿಸಲಿಲ್ಲವೆನಿಸುತ್ತದೆ ಪಾಪ. ಈ ಬಗ್ಗೆ ಕೆಲವು ತುಳು ಸಂಘಟನೆಯವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಿಜಕ್ಕೂ ತುಳುವಿಗೆ ಇಂತಹ ರಾಜಕೀಯ ದುರುದ್ದೇಶದ ಸಮ್ಮೇಳನದ ಅವಶ್ಯಕತೆಯೇನೂ ಇಲ್ಲ. ತುಳುವನ್ನು ರಕ್ಷಣೆ ಮಾಡಿ ಎಂದು ಯಾವ ಸಂಘಟನೆಗಳಿಗೂ ಗುತ್ತಿಗೆಯನ್ನೂ ಕೊಟ್ಟಿಲ್ಲ,ಹಫ್ತಾ ಕೊಡಬೇಕಾದ ರಗಳೆಯೂ ತುಳುವರಿಗಿಲ್ಲ. ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದು ಮಿಷನರಿಗಳು ಕರಾವಳಿಗೆ ಕಾಲಿಟ್ಟಾಗ ತೆರೆಗೆ ಸರಿದಿದ್ದ ತುಳು ಲಿಪಿಯನ್ನು ಈಗ ಮತ್ತೆ ಜನರು ಬಳಸಲು  ಪ್ರಾರಂಭಿಸಿದ್ದಾರೆ. ಲಿಪಿಯ ಬಳಕೆಗಿಂತಲೂ ಕರಾವಳಿಯ ಪ್ರತಿ ಆಚರಣೆಗಳ ಮೂಲಕವೇ ತುಳು ಭಾಷೆ ತನ್ನ ಅಸ್ತಿತ್ವವನ್ನು ಗಟ್ಟಿಮಾಡಿಕೊಂಡು ಬಂದಿದೆ. ಹೀಗಿದ್ದಾಗ ತುಳು ಭಾಷೆ ರಾಜಕೀಯ ಪ್ರೇರಿತ ಸಮ್ಮೇಳನದ ಭಾಗವಾಗದೆ ಇರುವುದು ತುಳುವಿನ ಪುಣ್ಯವೇ ಸರಿ.

ಅಷ್ಟಕ್ಕೂ ದ್ರಾವಿಡ ಭಾಷೆಗಳ ಸಮ್ಮೇಳನವನ್ನು ಕನ್ನಡಿಗರ ತೆರಿಗೆ ಹಣದಿಂದ ಏಕೆ ನಡೆಸಬೇಕು? ಅದರಿಂದ ಕನ್ನಡಿಗರಿಗೇನು ಲಾಭ? ನೀವು ತಮಿಳುನಾಡು,ಆಂಧ್ರ,ಕೇರಳಕ್ಕೆ ಹೋದಾಗ ಅಲ್ಲಿನ ಹೋಟೆಲಿನ ಟೀವಿಗಳಲ್ಲಿ ಕನ್ನಡವೊಂದನ್ನು ಬಿಟ್ಟು ಉಳಿದ ಮೂರು ಭಾಷೆಗಳ ಚಾನೆಲ್ಲುಗಳು ಸಿಗುತ್ತವೆ.ಕನ್ನಡದ ಟೀ ಶರ್ಟನ್ನು ನೀವು ಉತ್ತರ ಭಾರತದ ರಾಜ್ಯದಲ್ಲಿ ಹಾಕಿಕೊಂಡು ಹೋಗಬಹುದು ಆದರೆ ಅಪ್ಪಟ ತಮಿಳರ ಮಧ್ಯೆ ಹೋಗಿ ನೋಡಿದರೆ ಇವರ ದ್ರಾವಿಡ ಪ್ರೇಮದ ಪ್ರಾಕ್ಟಿಕಲ್ ಅರ್ಥ ಗೊತ್ತಾದೀತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಾಗ ಅದನ್ನು ವಿರೋಧಿಸಿದ್ದು ಯಾವುದೇ ಹಿಂದಿವಾಲಾ ಅಲ್ಲ,ಬದಲಿಗೆ ಇದೆ ದ್ರಾವಿಡ ಚಳವಳಿಯ ನಶೆ ಏರಿಸಿಕೊಂಡ ತಮಿಳರಲ್ಲೇ ಒಬ್ಬ. ಹೌದು ಕರ್ನಾಟಕಕ್ಕೇ ಬಂದು ಕನ್ನಡ ಕಲಿಯದ ಉತ್ತರ ಭಾರತೀಯರು ಹಲವರು ಇದ್ದಾರೆ. ಹಾಗೆಯೇ ತಮಿಳರು,ತೆಲುಗರು ಹಾಗೂ ಮಲಯಾಳಿಗಳು ಇದ್ದಾರೆ. ಬೆಂಗಳೂರಿನಲ್ಲೇ ತಮಿಳು, ತೆಲುಗು,ಮಲಯಾಳಂ ಮಾತನಾಡಿಕೊಂಡು ವ್ಯವಹಾರ ಮಾಡುವವರಿದ್ದಾರೆ.ಅವರ ಬಗ್ಗೆ ಸೋ-ಕಾಲ್ಡ್ ದ್ರಾವಿಡ ಪ್ರೇಮಿಗಳು ಏನೆನ್ನುತ್ತಾರೋ? ಒಬ್ಬ ಕನ್ನಡಿಗನಾಗಿ ನೋಡಿದಾಗ, ಉಳಿದೆಲ್ಲಾ ಭಾಷೆಗಳವರು ನಮ್ಮೊಂದಿಗೆ ವರ್ತಿಸುವ ರೀತಿ ಒಂದೇ ರೀತಿಯದ್ದು.

ಕನ್ನಡಿಗನಾದವನು ತಮಿಳರ ಜೊತೆ ತಮಿಳನ್ನು,ತೆಲುಗರ ಜೊತೆ ತೆಲುಗನ್ನು,ಹಿಂದಿಯವರ ಜೊತೆ ಹಿಂದಿಯನ್ನೇ ಮಾತನಾಡುತ್ತಾನೆ ಅಥವಾ ಪ್ರಯತ್ನವನ್ನಾದರೂ ಮಾಡುತ್ತಾನೆ. ಆದರೆ ನಮ್ಮ ಜೊತೆ ಉಳಿದವರ್ಯಾರು ಈ ರೀತಿ ವ್ಯವಹರಿಸುವುದಿಲ್ಲ. ಈ ಕೃತಕ ದ್ರಾವಿಡ ಪ್ರೇಮವೆನ್ನುವುದು ಕೆಲಸಕ್ಕೆ ಜನಸಾಮಾನ್ಯರ ದ್ರಷ್ಟಿಯಲ್ಲಿ ಬಾರದ್ದು .

ನಿಜವಾಗಿಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭಾರತದ ಬಹು ಭಾಷೆಯಗಳ ಕುರಿತು ಕಾಳಜಿಯಿದ್ದರೆ ಎಲ್ಲಾ ಭಾರತೀಯ ಭಾಷೆಗಳನ್ನು ಸೇರಿಸಿ ಸಮ್ಮೇಳನವನ್ನು ಮಾಡಲಿ,ಅದನ್ನು ಬಿಟ್ಟು ಕಾಂಗ್ರೆಸ್ ಅನ್ನು ಬೆಂಬಲಿಸಲು,ಅದರ ಪಾಪದ ಕೂಸಾದ ಹಿಂದಿ ಹೇರಿಕೆಯನ್ನು ಮೋದಿ-ಬಿಜೆಪಿಯವರ ಮೇಲೆ ಗೂಬೆ ಕೂರಿಸುವ ತೆವಲಿದ್ದರೆ ಅಂತಹ ಸಮ್ಮೇಳನವನ್ನು ಸೆಕ್ಯುಲರ್ ಗಂಜಿಗಿರಾಕಿಗಳ ಸ್ವಂತ (ದುಡಿದ) ಹಣದಿಂದ ಮಾಡಿಕೊಳ್ಳಬೇಕೆ ಹೊರತು ಕನ್ನಡಿಗರ ತೆರಿಗೆ ಹಣದಿಂದ ನಿಮ್ಮ ಮೂರುಕಾಸಿನ ರಾಜಕೀಯ ಮಾಡಲು ಬರಬೇಡಿ ಶ್ರೀಮಾನ್ ಎಸ್.ಜಿ ಸಿದ್ಧರಾಮಯ್ಯನವರೇ and ಕಾಂಗ್ರೆಸ್ ಕನ್ನಡಿಗರೇ. ಭಾಷೆಯ ಹೆಸರಿನಲ್ಲಿ ಮರುಳಾಗಲು ಕರ್ನಾಟಕ ತಮಿಳುನಾಡಲ್ಲ ಎನ್ನುವುದು ನಿಮಗೆ ನೆನಪಿರಲಿ.

ಚಿತ್ರಕೃಪೆ: DNA

1 ಟಿಪ್ಪಣಿ Post a comment
  1. ಪರಮೇಶ್ವರಿ
    ಆಗಸ್ಟ್ 29 2018

    Well written.Some Hindi haters blame the present govt for Hindi thrust which was initiated by Congress. Similarly they hate Sanskrit in such a way that in future we may have to go to foreign countries to learn Sanskrit.What is that ಎಲ್ಲರ ಕನ್ನಡ.By force we can not change a language. Many south Indians ..from Andra ,Kerala,AP,and Tamil Nadu. people though born and brought up in Bengaluru they don’t talk Kannada.We see Malayam or Tamil boards in shops in border areas. These stalwarts are blind to such things. They target Hindi. They don’t know that in South ,kannadigas get least respect .I am writing in English because i take more time in typing Kannada. This is just show the solidarity with writer. Need not publish it

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments