ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 3, 2018

ರಾಫೆಲ್ ಬಗ್ಗೆ ಗಂಜಿಗಿರಾಕಿಗಳಿಗೊಂದಿಷ್ಟು ಜ್ಞಾನ ನೀಡೋಣ!

‍ನಿಲುಮೆ ಮೂಲಕ

-ಮಹೇಶ್ ಪ್ರಸಾದ್ ನೀರ್ಕಜೆ

ರಾಫೆಲ್ ಡೀಲ್ ಕುರಿತು ರಾಹುಲ್ ಗಾಂಧಿಯ ಸುಳ್ಳಿನ ಸರಮಾಲೆಯ ನಂತರ,ರಾಜ್ಯದ ಗಂಜಿಗಿರಾಕಿಗಳು,ಸೋ ಕಾಲ್ಡ್ ಲೇಖಕರು ಹಬ್ಬಿಸುತ್ತಿರುವ ಸುಳ್ಳಿನ ಕಂತೆಗಳಿಗೆ ಉತ್ತರಿಸುವ ಒಂದು ಸಣ್ಣ ಪ್ರಯತ್ನ. ಈ ಉತ್ತರಗಳನ್ನು ಓದಿ ಅವರು ಬದಲಾಗಬಹುದು ಎಂದಲ್ಲ .. ಅವರ ತಪ್ಪು ಟೀಕೆಗಳಿಂದ ತಪ್ಪು ಸಂದೇಶ ಹರಡುವುದು ತಪ್ಪಲಿ ಎಂದು ಮಾತ್ರ.

ಮೊದಲನೇದಾಗಿ ಈ ಪ್ರತಿಕ್ರಿಯೆ ಬರೆಯಲು ನನ್ನ ಅರ್ಹತೆ ಏನು ಅಂತ ಹೇಳಿಬಿಡುತ್ತೇನೆ. ನಾನು ಒಬ್ಬ ಡಿಫೆನ್ಸ್ ಎಂಥೂಸಿಯಾಸ್ಟ್. ಅಂದರೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ವಾರ್ತೆಗಳನ್ನು, ಬರಹಗಳನ್ನು ನಿಯಮಿತವಾಗಿ ಓದುತ್ತಿರುತ್ತೇನೆ. ಭಾರತದ ಸೇನೆ, ನೌಕಾದಳ ಮತ್ತು ವಾಯುಸೇನೆ ಗಳಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಶಸ್ತ್ರಾಸ್ತ್ರ ಗಳ ಬಗ್ಗೆ, ಅವುಗಳ ಶಕ್ತಿ/ಮಿತಿಗಳ ಬಗ್ಗೆ, ಶಸ್ತ್ರಾಸ್ತ್ರ ಕೊರತೆಗಳ ಬಗ್ಗೆ ಮತ್ತು ರಕ್ಷಣಾ ಸಚಿವಾಲಯ ಈ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ತಕ್ಕಷ್ಟು ಮಾಹಿತಿ ಕಲೆ ಹಾಕಿರುತ್ತೇನೆ. ಹಾಗಾಗಿ ಈ ಬರಹ ಡಿಫೆನ್ಸ್ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ಪತ್ರಕರ್ತರು ಬರೆಯುವ ತಲೆಬುಡವಿಲ್ಲದ ಲೇಖನಗಳಿಗಿಂತ ಭಿನ್ನವಾಗಿರಬಹದು ಅನ್ನುವ ನಂಬಿಕೆಯಿಂದ ಬರೆಯುತ್ತಿದ್ದೇನೆ.

ರಫಾಲ್ ಡೀಲ್ ಬಗ್ಗೆ ಹೇಳುವುದಾದರೆ ಎರಡು ಡೀಲ್ ಗಳಿವೆ. ಒಂದು ಹಳೆಯ ಯುಪಿಎ ಒಪ್ಪಂದ, ಎರಡನೇದು ಮೋದಿ ಸರಕಾರದ ಒಪ್ಪಂದ. ಈ ಎರಡು ಒಪ್ಪಂದಗಳ ವ್ಯತ್ಯಾಸಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ, ಅದನ್ನು ನಾನು ಪುನಃ ಬರೆಯಲು ಹೋಗುವುದಿಲ್ಲ. ನಾನು ಅತೀ ಮುಖ್ಯವಾದ ಮೂರು ವಿಚಾರಗಳ ಬಗ್ಗೆ ಮಾತ್ರ ಬರೆಯುತ್ತೇನೆ.

ಒಂದನೇದಾಗಿ – ಗ್ಯಾರಂಟಿ ಬಗ್ಗೆ. ಹಳೆಯ ಯುಪಿಎ ಸರಕಾರದ ರಫಾಲ್ ಒಪ್ಪಂದಕ್ಕೆ ಕೊನೆ ಘಳಿಗೆಯವರೆಗೂ ಯಾಕೆ ಸಹಿ ಬೀಳಲಿಲ್ಲ ಗೊತ್ತೇ? ಭಾರತ ಸರಕಾರ ಹೆಚ್.ಎ.ಎಲ್ ತಯಾರಿಸುವ ರಫಾಲ್ ವಿಮಾನಗಳಿಗೆ ಫ್ರಾನ್ಸ್ ಸರಕಾರ ಸಂಪೂರ್ಣ ಗ್ಯಾರಂಟಿ ಕೊಡಬೇಕೆಂಬ ಬೇಡಿಕೆ ಇಟ್ಟಿತ್ತು. ಫ್ರಾನ್ಸ್ ಅದಕ್ಕೆ ಸುತರಾಂ ಒಪ್ಪಲಿಲ್ಲ. ಯಾಕೆಂದರೆ ಹೆಚ್.ಎ.ಎಲ್ ನ ಉತ್ಪಾದನಾ ಸಾಮರ್ಥ್ಯ, ಮತ್ತು ಗುಣಮಟ್ಟದ ಬಗ್ಗೆ ಫ್ರಾನ್ಸ್ ಗೆ ನಂಬಿಕೆ ಇರಲಿಲ್ಲ. ಮೇಲಾಗಿ ಹೆಚ್.ಎ.ಎಲ್ ಮತ್ತು ದಸಲ್ಟ್ ಎರಡೂ ಬೇರೆ ಬೇರೆ ದೇಶದ, ಬೇರೆ ಬೇರೆ ಕಂಪೆನಿಗಳು. ಹೆಚ್.ಎ.ಎಲ್ ಮೇಲೆ ದಸಲ್ಟ್ ಗೆ ಯಾವ ಹಿಡಿತವೂ ಇಲ್ಲ. ಅಂದ ಮೇಲೆ ಹೆಚ್.ಎ.ಎಲ್ ತಯಾರಿಸುವ ವಿಮಾನಗಳ ಮೇಲೆ ದಸಲ್ಟ್ ಹೇಗೆ ಗ್ಯಾರಂಟಿ ಕೊಟ್ಟೀತು? ಈ ಹಗ್ಗ ಜಗ್ಗಾಟ ಯುಪಿಎ ಸರಕಾರ ಇರುವ ತನಕವೂ ಮುಂದುವರೆದಿತ್ತು. ಅಷ್ಟರಲ್ಲಾಗಲೇ ಹಲವಾರು ವರ್ಷಗಳು ಕಳೆದಿದ್ದವು, ಒಪ್ಪಂದದ ಮೊತ್ತವೂ ಸಾಕಷ್ಟು ಹೆಚ್ಚಾಗಿತ್ತು. ಅದಿರಲಿ, ಏನಿದು ಈ ಗ್ಯಾರಂಟಿ? ಯಾಕೆ ಇದಕ್ಕಿಷ್ಟು ಮಹತ್ವ ಅಂತ ಸ್ವಲ್ಪ ನೋಡುವುದು ಅಗತ್ಯ. ಯುದ್ಧ ವಿಮಾನಗಳ ಕಾರ್ಯಕ್ಷಮತೆ ನಿರ್ಧರಿಸುವ ಒಂದು ಅತಿ ಮುಖ್ಯ ಅಂಶ ಅದರ “serviceability”, ಅಥವಾ “performance guarantee”. serviceability ಅಂದರೆ ಯಾವುದೇ ಸಮಯದಲ್ಲಿ ಒಟ್ಟು ಯುದ್ಧ ವಿಮಾನಗಳಲ್ಲಿ ಎಷ್ಟು ವಿಮಾನಗಳು ಯುದ್ಧ ದಲ್ಲಿ ನಿಜವಾಗಿ ಪಾಲ್ಗೊಳ್ಳಲು ಸಿದ್ಧ ಇರುತ್ತವೆ ಎಂಬುದರ ಒಂದು ಮಾಪನ. ಯುದ್ಧ ವಿಮಾನಗಳು ಹಲವಾರು ಕಾರಣಗಳಿಂದಾಗಿ ಯುದ್ಧಕ್ಕೆ ತಯಾರಾಗದೇ ಇರುತ್ತವೆ. ಉದಾಹರಣೆಗೆ ಇಂಜಿನ್ ಸಮಸ್ಯೆ, ಇಲೆಕ್ಟ್ರಾನಿಕ್ ಉಪಕರಣಗಳ ಹಾಳಾಗುವಿಕೆ, ನಿತ್ಯದ ಹಾರಾಟದಿಂದ (routine flight) ಉಂಟಾಗುವ ತಾಂತ್ರಿಕ ಸಮಸ್ಯೆಗಳು, ಶಸ್ತ್ರಾಸ್ತ್ರ ಗಳ ಸಮಸ್ಯೆಗಳು, ಇತ್ಯಾದಿ ಇತ್ಯಾದಿ. ಇಂತಹ ಸಮಸ್ಯೆಗಳಲ್ಲಿ ಕೆಲವನ್ನು ವಾಯುಸೇನೆ ಸಿಬ್ಬಂದಿ ರಿಪೇರಿ ಮಾಡಿದರೆ, ಇನ್ನು ಕೆಲವಕ್ಕೆ ವಿಮಾನ ತಯಾರಕರೇ ಬರಬೇಕಾಗುತ್ತದೆ. ಉದಾಹರಣೆಗೆ ಈಗಿನ ರಫಾಲ್ ಡೀಲ್ ಅನ್ನೇ ತೆಗೆದುಕೊಂಡರೆ, ಫ್ರಾನ್ಸ್ 75% serviceability ಯ ಒಪ್ಪಂದ ಮಾಡಿಕೊಂಡಿದೆ [1]. ಅಂದರೆ, ಯಾವುದೇ ಸಮಯದಲ್ಲಿ 27 ರಫಾಲ್ ಗಳು ಯುದ್ಧಕ್ಕೆ ಸಿದ್ಧ ಇರುವಂತೆ ದಸ್ಸಾಲ್ಟ್ ನೋಡಿಕೊಳ್ಳಲಿದೆ. ಇದು ಅತ್ಯಂತ ಮುಖ್ಯ ವಿಚಾರ ಯಾಕೆಂದರೆ ಯುದ್ಧಕ್ಕೆ ಸಿದ್ಧ ಇಲ್ಲದ ವಿಮಾನ ಹ್ಯಾಂಗರ್ ನಲ್ಲಿ ಸುಮ್ಮನೆ ಕೂತಿದ್ದರೆ ಏನು ಉಪಯೋಗ? ಹಿಂದಿನ ಡೀಲ್ ನಲ್ಲಿ ಹೆಚ್.ಎ.ಎಲ್ ವಿಮಾನ ತಯಾರು ಮಾಡುವುದಾದರೂ ಅದರ ಬಿಡಿ ಭಾಗಗಳು ದಸ್ಸಾಲ್ಟ್ ಇಥವಾ ಇತರ ಕಂಪೆನಿಗಳಿಂದಲೇ ಬರಬೇಕು. ಅಂದರೆ ಹೆಚ್.ಎ.ಎಲ್ ಇಂಜಿನೀರ್ ಗಳು ಸ್ಥಳದಲ್ಲೇ ಲಭ್ಯ ಇದ್ದರೂ ಏನೂ ಮಾಡುವ ಹಾಗಿರುವುದಿಲ್ಲ. ಹಾಗಾದಾಗ ವಿಮಾನಗಳನ್ನು ರಿಪೇರಿ ಮಾಡುವುದರಲ್ಲಿ ವಿಳಂಬವಾಗುತ್ತದೆ. ಈಗಿನ ಒಪ್ಪಂದದಲ್ಲಿ ಸ್ವತಃ ದಸ್ಸಾಲ್ಟ್ ಕಂಪೆನಿಯೇ ಪರ್ಫಾರ್ಮೆನ್ಸ್ ಗ್ಯಾರಂಟಿ ಹೊಣೆ ಹೊತ್ತಿರುವುದರಿಂದ ಈ ಸಮಸ್ಯೆ ಇಲ್ಲವಾಗಲಿದೆ. ಮುಂದುವರೆದು, ಭಾರತೀಯ ವಾಯುಸೇನೆ ಈ serviceability ಸಮಸ್ಯೆ ಯನ್ನು ಬಹಳ ಸಾರಿ ಅನುಭವಿಸಿದೆ. ಹಳೆಯ ರಫಾಲ್ ಡೀಲ್ ಮಾದರಿಯಲ್ಲೇ ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡು, ಹೆಚ್ ಈ ಎಲ್ ತಯಾರಿಸಿದ Sukhoi-30MKI ಯುದ್ಧ ವಿಮಾನಗಳಲ್ಲಿ ಇದೇ ಸಮಸ್ಯೆಯನ್ನು ವಾಯುಸೇನೆ ಎದುರಿಸುತ್ತಿದೆ. ಮೋದಿ ಸರ್ಕಾರ ಬಂದಾಗ ಈ ಯುದ್ಧ ವಿಮಾನಗಳ serviceability ಇದ್ದಿದ್ದು ಕೇವಲ 46%! ಅಂದರೆ ಏರ್ ಬೇಸ್ ಗಳಲ್ಲಿ ಕೂತಿರುವ ವಿಮಾನಗಳಲ್ಲಿ ಅರ್ಧಕ್ಕರ್ಧ ನಾಲಾಯಕ್ ಅಂತಾಯ್ತು. ಇದನ್ನು ಕಂಡು ಹೌಹಾರಿದ ರಕ್ಷಣಾ ಮಂತ್ರಿ ಮನೋಹರ್ ಪಾರಿಕರ್ ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡ ನಂತರ ಈಗ ಇದು 60% ಗೆ ಏರಿದೆ [2]. ಆದರೂ ಮೋದಿಯ ರಫಾಲ್ ಡೀಲ್ ನಲ್ಲಿ ದಸ್ಸಾಲ್ಟ್ ಕೊಡುವ ಗ್ಯಾರಂಟಿ ಗಿಂತ ಕಡಿಮೆಯೇ ಇದೆ! ಇದಕ್ಕಿಂತಲೂ ದೊಡ್ಡ ಸಮಸ್ಯೆಯೊಂದನ್ನ ಭಾರತೀಯ ನೌಕಾಪಡೆ ಎದುರಿಸುತ್ತಿದೆ. ನೌಕಾಪಡೆಯು ವಿಕ್ರಮಾದಿತ್ಯ ಎಂಬ ಹಡಗಿನ (aircraft carrier) ಮೇಲೆ ಕೂತು ಅಗತ್ಯ ಬಿದ್ದಾಗ ಆಕಾಶಕ್ಕೆ ಹಾರಿ ಶತ್ರು ನೌಕೆ ಅಥವಾ ಭೂಭಾಗದ ಮೇಲೆ ಧಾಳಿ ಮಾಡಬೇಕಾದ Mig-29K ವಿಮಾನಗಳೂ ಕೂಡ serviceability issue ನಿಂದ ನರಳುತ್ತಿವೆ. ಈ ವಿಮಾನಗಳನ್ನು ಭಾರತ 2004 ಮತ್ತು 2010 ರಲ್ಲಿ ರಷ್ಯಾದಿಂದ ನೇರವಾಗಿ ಖರೀದಿಸಿತ್ತು, ಆದರೆ ಈಗಿನ ರಫಾಲ್ ಡೀಲ್ ಥರದ performance guarantee ಇಲ್ಲದೆಯೇ. ಇದರ ಪರಿಣಾಮ ಏನೆಂದರೆ ಪ್ರತೀ ಸಲ ವಿಮಾನ ನೌಕೆಯಿಂದ ಹಾರಿ ತನ್ನ ಕೆಲಸ ಮುಗಿಸಿ ಪುನಃ ನೌಕೆಗೆ ಮರಳಿದಾಗ ಅದರ setting ಗಳು ರಿಸೆಟ್ ಆಗುತ್ತವಂತೆ! ಅಲ್ಲದೆಯೇ ಹಲವು ಪಾರ್ಟ್ ಗಳಲ್ಲಿ ಬಿರುಕು ಕಾಣಿಸುತ್ತವೆ, ಒಡೆದು ಹೋಗುತ್ತವೆ ಇತ್ಯಾದಿ. ಇಂತಹ ತಗಡು ಗುಣಮಟ್ಟದ ಸಾಮಗ್ರಿಗಳನ್ನು ತಯಾರಿಸುವ ರಷ್ಯಾ ಆಮೇಲೆ ಅದನ್ನು ರಿಪೇರಿ ಮಾಡುವ ಗೋಜಿಗೂ ಹೋಗುವುದಿಲ್ಲ. ಇದರಿಂದಾಗಿ ಈ ಯುದ್ಧ ವಿಮಾನದ serviceability ಕೇವಲ 21.30 % ರಿಂದ 47.14 % ಮಾತ್ರವಂತೆ [3]! ರಷ್ಯಾ ದ ಮಾಲುಗಳಲ್ಲಿ ಇರುವ ಇಂತಹ ಸಮಸ್ಯೆಗಳಿದಾಗಿಯೇ ವಾಯುಸೇನೆ ರಷ್ಯಾದ ವಿಮಾನಗಳನ್ನು ತಿರಸ್ಕರಿಸಿ ಫ್ರಾನ್ಸ್ ನ ರಫಾಲ್ ಅನ್ನು ಆಯ್ಕೆ ಮಾಡಿದ್ದು ಮಾತ್ರವಲ್ಲದೆ performance guarantee ಯನ್ನು ಕೇಳಿದ್ದು. ಆದರೆ ಯುಪಿಎ ಸರಕಾರ ಮಾಡಿದ ಒಪ್ಪಂದ ಜಾರಿಗೆ ಬಂದಿದ್ದರೂ ಈ ಹಿಂದೆ ಅನುಭವಿಸಿದ ತೊಂದರೆಗಳು ಮರುಕಳಿಸುವ ಎಲ್ಲಾ ಸಾಧ್ಯತೆಗಳು ಇದ್ದವು!

ಎರಡನೇದಾಗಿ ಬೆಲೆ – ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ಹಲವಾರು ಬಾರಿ ಹೇಳಿದರೂ ಕಿವುಡರಂತಾಡುವವರಿಗಾಗಿ ಮತ್ತೊಮ್ಮೆ ಹೇಳುತ್ತಿರುವುದು – ಮೋದಿ ಡೀಲ್ ನಲ್ಲಿ ಯುದ್ಧ ವಿಮಾನ ಜೊತೆ ಮೆಟೀರ್ ಮತ್ತು ಸ್ಕಾಲ್ಪ್ ಮಿಸ್ಸಾಯಿಲ್ ಗಳನ್ನೂ ಕೂಡ ಕೊಳ್ಳಲಾಗಿದೆ. ಹಳೆಯ ಡೀಲ್ ನಲ್ಲಿ ಇವು ಇರಲಿಲ್ಲ. ಇದರ ಜೊತೆ ಹೊಸ ಡೀಲ್ ನಲ್ಲಿ ಭಾರತ ವಾಯುಸೇನೆಗೆ ಅಗತ್ಯವಿರುವ ಇನ್ನೂ ಕೆಲವು ಬದಲಾವಣೆಗಳನ್ನೂ ಮಾಡಲಾಗಿದೆ [1]. ಹಾಗಾಗಿ ಈ ಎರಡೂ ಡೀಲ್ ಗಳ ಬೆಲೆಯನ್ನು ತೂಗಿ ನೋಡುವುದೇ ತಪ್ಪು, ನೋಡಿದರೂ ಈಗಿನ ಡೀಲ್ ಅಗ್ಗವೆ ಹೊರತು ದೇಶಭಂಜಕರು ಹೇಳುವಂತೆ ದುಬಾರಿ ಅಲ್ಲ. ಈ ಮೆಟೀರ್ ಮತ್ತು ಸ್ಕ್ಯಾಲ್ಪ್ ಮಿಸೈಲ್ ಗಳ ಪ್ರಾಮುಖ್ಯತೆ ಏನು? ಮೆಟೀರ್ ಒಂದು ಪ್ರಪಂಚದಲ್ಲೇ ಅತ್ಯಂತ ಸುಧಾರಿತ ವಿಮಾನದಿಂದ ವಿಮಾನಕ್ಕೆ ಹಾರುವ ಮಿಸೈಲ್ (AAM). ಇದು ನೂರು ಕಿಲೋ ಮೀಟರ್ ಗೂ ಮಿಕ್ಕಿ ದೂರದಲ್ಲಿರುವ ಶತ್ರು ವಿಮಾನಗಳನ್ನು ಗುರುತಿಸಿ ಹೊಡೆದು ಉರುಳಿಸಬಲ್ಲದು. ಭಾರತದ ಬಳಿ ಇಷ್ಟು ರೇಂಜ್ ಇರುವಂತಹ AAM ಗಳೇ ಇಲ್ಲ. ನಮ್ಮಲ್ಲಿ ಇರುವಂಥವು ಹತ್ತಿರದಲ್ಲಿರುವ ಪಾಕಿಸ್ತಾನಕ್ಕೆ ಸಾಕು, ಆದರೆ ದೂರದಲ್ಲಿರುವ ಚೀನಾದ ಏರ್ ಬೇಸ್ ಗಳಿಂದ ಹಾರಿ ಬರುವ ಚೀನೀ ಯುದ್ಧ ವಿಮಾನಗಳಿಗೆ ಸಾಕಾಗದು! ಹಾಗಾಗಿ ಯುಪಿಎ ಸರಕಾರದ ಹಳೆಯ ಡೀಲ್ ಒಂದು ವೇಳೆ ಜಾರಿ ಆಗಿದ್ದರೂ ಆ ರಫಾಲ್ ಗಳು ಹಲ್ಲಿಲ್ಲದ ಹಾವಿನಂತೆ ಮುದುರಿಕೊಂಡು ಇರಬೇಕಾಗಿತ್ತು ಅಥವಾ ಈ ಮಿಸೈಲ್ ಗಳನ್ನು ಮತ್ತೆ ಪುನಃ ದುಡ್ಡು ಕೊಟ್ಟು ಕೊಳ್ಳಬೇಕಾಗಿತ್ತು. ಇವು ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವಂಥಾದ್ದಾದ್ದರಿಂದ ಇವುಗಳ ಬೆಲೆಯೂ ತೀರಾ ಜಾಸ್ತಿ. ಇನ್ನು ಸ್ಕ್ಯಾಲ್ಪ್ ಕೂಡ ಚೀನಾ ಕೇಂದ್ರಿತ ಮಿಸೈಲ್ ಆದರೆ ವಿಮಾನ ಹೊಡೆಯುವ ಬದಲಾಗಿ ಏರ್ ಬೇಸ್ ನಂಥಾ ದುಬಾರಿ ಟಾರ್ಗೆಟ್ (high value assets) ಗಳನ್ನು ಧ್ವಂಸ ಮಾಡುವಂಥಾದ್ದು. ನಮ್ಮ ಬಳಿ ಈಗಾಗಲೇ ಇರುವ ಬ್ರಹ್ಮೋಸ್ ಮಿಸೈಲ್ ಕೂಡ ಈ ಕೆಲಸ ಮಾಡಬಹುದಾದರೂ ಬ್ರಹ್ಮೋಸ್ ಅನ್ನು ರಫಾಲ್ ಕೊಂಡೊಯ್ಯಲಾರದು ಸದ್ಯಕ್ಕೆ. ಹಾಗಾಗಿ ಬ್ರಹ್ಮೋಸ್ ಇದ್ದರೂ ಅದನ್ನು ಚೀನಾ ಮೇಲೆ ಪ್ರಯೋಗಿಸಲಾಗದ ಪರಿಸ್ಥಿತಿಯಲ್ಲಿ ನಾವಿರುತ್ತಿದ್ದೆವು. ಇವೆರಡೂ ವಿಚಾರಗಳು ಹೇಳುವುದೇನೆಂದರೆ ಮೋದಿಯ ರಫಾಲ್ ಡೀಲ್ ವೈರಿಯ ಎದುರು ಉಪಯೋಗಕ್ಕೆ ಬೀಳುವಂಥಾದ್ದು, ಹಳೆಯ ಯುಪಿಎ ಡೀಲ್ ಸುಮ್ಮನೆ ವಿಮಾನ ಗಳನ್ನ ಕೊಂಡು ಪ್ರದರ್ಶನ (air show) ಮಾಡುವಂಥಾದ್ದು!

ಮೂರನೆದಾಗಿ ಮತ್ತು ಕೊನೇದಾಗಿ ಅನಿವಾರ್ಯತೆ – ಯುಪಿಎ ಸರ್ಕಾರ ರಫಾಲ್ ಡೀಲ್ ಅನ್ನು ಎಳೆದೂ ಎಳೆದೂ ಬೆಲೆ ಹೆಚ್ಚಾಗಿತ್ತೇ ವಿನಃ ವಾಯುಸೇನೆಗೆ ಅತೀ ಅವಶ್ಯವಿರುವ ಯುದ್ಧ ವಿಮಾನ ಸಿಗದೇ ಪರಿಸ್ಥಿತಿ ಬಿಗಡಾಯಿಸಿತ್ತು. performance guarantee ಇಲ್ಲದೇ ಇವುಗಳನ್ನು ಕೊಳ್ಳುವಂತೆಯೂ ಇರಲಿಲ್ಲ, ಡೀಲ್ ಅನ್ನು ಪೂರ್ತಿ ಸ್ಕ್ರಾಪ್ ಮಾಡಿ ಹೊಸದಾಗಿ ಟೆಂಡರ್ ಕರೆಯುವಷ್ಟು ಸಮಯವೂ ಇರಲಿಲ್ಲ. ದೇಶದ ನಿಜವಾದ ನಾಯಕ ಅಂತ ಒಬ್ಬ ಇದ್ದರೆ ಅವನನ್ನು ಪರೀಕ್ಷಿಸುವಂಥಾ ಕಾಲವಾಗಿತ್ತು ಅದು. ಮೋದಿ ಆ ಅನಿವಾರ್ಯ ಸಂಧರ್ಭದಲ್ಲಿ ತೆಗೆದುಕೊಂಡ ಈ ಒಂದು ದಿಟ್ಟ ನಿರ್ಧಾರ ದಿಂದಾಗಿ ಚೀನಾದ ಎದುರು ನಿಲ್ಲಲು ಒಂದು ಸಣ್ಣ ಹುಲ್ಲು ಕಡ್ಡಿಯಾದರೂ ಸಿಕ್ಕಿದಂತಾಯ್ತು. ಇದರಿಂದಾದ ಒಂದೇ ಸಮಸ್ಯೆ ಅಂದರೆ ಭಾರತ ಇನ್ನಷ್ಟು ಕ್ಷೀಣವಾಗುವುದನ್ನೇ ಕಾಯುತ್ತಿದ್ದ ದೇಶಭಂಜಕ ಪಡೆಗೆ ನಿರಾಸೆಯಾಯ್ತು.

ಇದಿಷ್ಟು ರಫಾಲ್ ಬಗ್ಗೆ ಆಯ್ತು. ಈಗ ಅನಿಲ್ ಅಂಬಾನಿ ಬಗ್ಗೆ – ವಾಸ್ತವದಲ್ಲಿ ಅನಿಲ್ ಅಂಬಾನಿಗೂ ಈ ಯುದ್ಧ ವಿಮಾನ ತಯಾರಿಗೂ ಸಂಬಂಧವೇ ಇಲ್ಲ. ಎಲ್ಲಾ ರಫಾಲ್ ಗಳೂ ಪೂರ್ತಿಯಾಗಿ ಫ್ರಾನ್ಸ್ ನಲ್ಲೇ ತಯಾರಾಗಿ ಬರುವಂಥಾದ್ದು ಹೊರತು ಅಂಬಾನಿ ಕಂಪೆನಿ ಇದರಲ್ಲಿ ಏನೂ ಮಾಡುವುದಿಲ್ಲ. ಅಂದ ಮೇಲೆ experience ನ ಪ್ರಶ್ನೆ ಎಲ್ಲಿ ಬಂತು? ಅಂಬಾನಿ ಕಂಪೆನಿ ವಿಚಾರ ಬರುವುದು offset obligation ನಲ್ಲಿ, ಅಂದರೆ ರಫಾಲ್ ಡೀಲ್ ಪ್ರಕಾರ ಭಾರತ ಪಾವತಿಸುವ ಒಟ್ಟು ಮೊತ್ತದ ಐವತ್ತು ಪರ್ಸೆಂಟ್ ಅನ್ನು ಫ್ರಾನ್ಸ್ ಭಾರತದಲ್ಲಿ ಹೂಡಿಕೆ ಮಾಡಲಿದೆ. ಅಂದರೆ ಡಿಫೆನ್ಸ್ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ (ಈ ಡೀಲ್ ಗೆ ಸಂಬಂಧಿಸದೇ ಇರುವಂತಾದರೂ ಕೂಡ) ಕಂಪೆನಿ ಮೇಲೆ ಫ್ರಾನ್ಸ್ ಹೂಡಿಕೆ ಮಾಡಬೇಕು. ಅದು ಯಾವ ಕಂಪೆನಿ ಮೇಲೆ ಹೂಡಿಕೆ ಮಾಡಲಿದೆ ಅನ್ನುವುದು ಫ್ರಾನ್ಸ್ ಮತ್ತು ಅಲ್ಲಿನ ಕಂಪೆನಿಗಳಿಗೆ ಬಿಟ್ಟಿದ್ದು. ಭಾರತದಲ್ಲಿ ಡಿಫೆನ್ಸ್ ಮೇಲೆ ಕೆಲಸ ಮಾಡುವ ಕೆಲವೇ ಕಂಪೆನಿಗಳಿವೆ, ಅದರಲ್ಲಿ ಅನಿಲ್ ಅಂಬಾನಿ ಯವರದ್ದೂ ಒಂದು. ಹಾಗಾಗೇ ಆ ಮೊತ್ತದ ಒಂದು ಭಾಗವನ್ನು ಮಾತ್ರ ಅನಿಲ್ ಕಂಪೆನಿ ಮೇಲೆ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ವಿರೋಧಿಸುವಂಥಾದ್ದು ಏನಿದೆ?

ಇನ್ನು ಕೊನೆಯದಾಗಿ ಈಗ ಕೆಲವು ದಿವಸಗಳಿಂದ ಈ ಡೀಲ್ ಬಗ್ಗೆ ಉರಿದುಕೊಂಡು ಬರೆಯುತ್ತಿರುವ ದೇಶಭಂಜಕರ ಬಗ್ಗೆ ನನಗೊಂದು ಸಂಶಯ. ಮೊನ್ನೆ ತಾನೇ ಭೀಮ ಕೋರೆಗಾಂ ಗಲಭೆ ವಿಚಾರದಲ್ಲಿ ದೊರಕಿದ ಸಾಕ್ಷ್ಯಾನುಧಾರ ಕೆಲವು ಅರ್ಬನ್ ನಕ್ಸಲರನ್ನು ಬಂಧಿಸಿದ್ದು ಸರಿಯಷ್ಟೇ. ಈ ನಕ್ಸಲರಿಗೆ ಬೆಂಗಳೂರಿನ ಹಲವು “ಚಿಂತಕರ” (ಅಂದರೆ ಭಂಜಕರ) ನಂಟಿತ್ತು ಅಂತ ಟಿವಿಯಲ್ಲಿ ಬರುತ್ತಿರುವುದನ್ನ ನೋಡಿದೆ. ಈ ಘಟನೆಯ ನಂತರವೇ ಮೋದಿ ಸರಕಾರದ ವಿರುದ್ಧ ಮತ್ತಷ್ಟು ಕತ್ತಿ ಮಸೆಯುವ ಲೇಖನಗಳು ಬರುತ್ತಿವೆ. ಇವೆರಡಕ್ಕೂ ಏನೋ ಸಂಬಂಧ ಇರಬಹುದಾ ಅಂತ??? ಇದೂ ಒಂದು ರೀತಿ anticipatory bail ಪಡೆಯುವ ದೇಶಭಂಜಕರ ಪ್ರಯತ್ನವಿರಬಹುದಾ??

References :

[1] https://indianexpress.com/article/india/rafale-fighter-jet-deal-modi-government-rahul-gandhi-congress-5082298/

[2] http://www.defenseworld.net/news/18210/Serviceability_Of_IAF_Su_30MKI_Fighter_Jet_Rises_To_60_per_cent__Manohar_Parrikar#.W4uv_CRfgb0

[3] https://www.defensenews.com/land/2017/08/04/indian-navy-wants-russian-mig-29k-jets-to-be-ruggedized/

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments