ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 18, 2018

ಕೇರಳದ ಸಿಸ್ಟರ್ ಗೋಳು ಕೇಳುವವರು ಯಾರು?

‍ನಿಲುಮೆ ಮೂಲಕ

-ರಾಕೇಶ್ ಶೆಟ್ಟಿ

ದೆಹಲಿಯ ನಿರ್ಭಯ ಕೇಸ್ ಎಲ್ಲರಿಗೂ ಗೊತ್ತಿರುವಂತದ್ದು. ಬಾಳಿ ಬದುಕಬೇಕಾದ ಹೆಣ್ಣುಮಗಳು ರಕ್ಕಸರ ಕೈಗೆ ಸಿಕ್ಕಿ ಜೀವನ್ಮರಣದ ಹೋರಾಟದ ನಂತರ ಕೊನೆಯುಸಿರೆಳೆದು ಹೋದಳು. ಆದರೆ ಹೋಗುವ ಮುನ್ನ ಇಡೀ ದೇಶವನ್ನೇ ಬಡಿದೆಬ್ಬಿಸಿ ಹೋದಳು ನಿರ್ಭಯಾ.ಅಂತಹದ್ದೇ ಕೇಸೊಂದು ೯೦ರ ದಶಕದಲ್ಲಿ ಸುದ್ದಿಯಾಗಿತ್ತು. ಇಡೀ ದೇಶವನ್ನು ಅದು ಆವರಿಸಲಿಲ್ಲವಾದರೂ ಕೇರಳ ರಾಜ್ಯವನ್ನಂತೂ ಸಂಪೂರ್ಣವಾಗಿ ಆವರಿಸಿತ್ತು,ಸಂಸತ್ತಿನಲ್ಲೂ ದನಿಯೆದ್ದಿತ್ತು. ಅದು ಸಿಸ್ಟರ್ ಅಭಯಾ ಹತ್ಯೆಯ ಕೇಸ್. ಕೇಸಿನ ತನಿಖೆಗಿಳಿದ ತನಿಖಾಧಿಕಾರಿಗಳ ಜೀವನವನ್ನೇ ಬದಲಿಸಿ  ಕೇಸ್ ಇದು.

ಬಡ ಕುಟುಂಬದಿಂದ ಬಂದ ಹುಡುಗಿಗೆ ಓದುವ ಆಸೆಯಿತ್ತು,ಜೀವನದಲ್ಲೇನಾದರೂ ಸಾಧಿಸುವ ಹಂಬಲವಿತ್ತು.೧೯ ರ ಹರೆಯದ ಸಿಸ್ಟರ್ ಅಭಯ ಕೇರಳದ ಕೊಟ್ಟಾಯಂನಲ್ಲಿರುವ St. Pius Xth Convent ಎಂಬ ಸೆಮಿನರಿಯಲ್ಲಿದ್ದರು.ಸೆಮಿನರಿಯಲ್ಲಿ ಓದಿಕೊಂಡು ಓಡಾಡಿಕೊಂಡಿದ್ದ ಹುಡುಗಿ ಮಾರ್ಚ್ ೨೭,೧೯೯೨ರ ಬೆಳಗಿನ ಜಾವ St. Pius Xth Conventನ ಬಾವಿಯೊಳಗೆ ಹೆಣವಾಗಿ ತೇಲುತ್ತಿದ್ದರು.ತನಿಖೆ ಆರಂಭವಾಗುವ ಮುನ್ನವೇ ಇದು ಆತ್ಮಹತ್ಯೆ ಎಂದು ಸುದ್ದಿ ಹರಿಬಿಡಲಾಯಿತು. ಮೊದಲು ತನಿಖೆಗಿಳಿದ ಎ.ಎಸ್.ಐ ಅಗಸ್ಟಿನ್ ಅವರ ಕೇಸ್ ಡೈರಿಯಲ್ಲಿ ಹತ್ಯೆಯ ಗುಮಾನಿಯಿದ್ದರೂ ಇದೊಂದು ಆತ್ಮಹತ್ಯೆ ಎಂದೇ ಬಿಂಬಿಸುವ ರೀತಿಯಲ್ಲಿ ತನಿಖೆ ನಡೆದಿತ್ತು.ಇತ್ತ ರೊಚ್ಚಿಗೆದ್ದ ಸ್ಥಳೀಯರು ‘ಕ್ರಿಯಾ ಸಮಿತಿ’ ರಚಿಸಿಕೊಂಡು,ಅಭಯಾ ಕೊಲೆಗೆ ಕಾರಣರಾಗಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಪ್ರಧಾನಮಂತ್ರಿ, ಕೇರಳ ಮುಖ್ಯಮಂತ್ರಿ, ಕೇರಳ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್‌ಗೆ(ಡಿಜಿಪಿ) ಮನವಿ ಮಾಡಿಕೊಂಡಿತು,ಜನರ ಹೋರಾಟ ತೀವ್ರವಾದಾಗ,ಒತ್ತಡಕ್ಕೆ ಮಣಿದ ಡಿಜಿಪಿ, ೧೯೯೨, ಏಪ್ರಿಲ್ ೭ರಂದು ಪೊಲೀಸರಿಂದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕ್ರೈಮ್ ಬ್ರ್ಯಾಂಚ್ ಗೆ ಸೂಚಿಸಿದರು.ಸಿಸ್ಟರ್ ಅಭಯ ದೇಹದ ಮೇಲಿದ್ದ ಬಟ್ಟೆ, ಫೋಟೋಗಳು,ಖಾಸಗಿ ಡೈರಿ ಹೀಗೆ ಪ್ರಮುಖ ಸಾಕ್ಷ್ಯಗಳೆಲ್ಲ ಕೇರಳ ಕ್ರೈಮ್ ಬ್ರ್ಯಾಂಚಿನ SPಯಾಗಿದ್ದ ಕೆ.ಟಿ ಮೈಕೆಲ್ ಅವರ ಸುಪರ್ದಿಗೆ ಬಂದು ನಂತರ ಇದ್ದಕಿದ್ದಂತೆ ಕಾಣೆಯಾಗಿ ಹೋದವು. ಯಾವ ಡೆವಿಲ್ ಬಂದು ಕೊಂಡು ಹೋಯಿತೋ ಏನೋ? ೩೦ ಜನವರಿ ೧೯೯೩ರಂದು ಉಪವಿಭಾಗೀಯ ನ್ಯಾಯಾಧೀಶರೆದುರು ತನ್ನ ವರದಿಯನ್ನಿಟ್ಟ ಕ್ರೈಮ್ ಬ್ರ್ಯಾಂಚ್, ತನಿಖೆ ಮಾಡುವುದನ್ನು ಬಿಟ್ಟು ಚರ್ಚ್‌ನ ನನ್ ಗಳ ಅಭಿಪ್ರಾಯವನ್ನು ಸಂಗ್ರಹಿಸಿ, ‘ಆತ್ಮಹತ್ಯೆ’ ಎಂದು ಷರಾ ಬರೆದಿತ್ತು!

ಕ್ರಿಯಾ ಸಮಿತಿ ಕೈ ಕಟ್ಟಿ ಕೂರಲಿಲ್ಲ,ಹೈಕೋರ್ಟಿನ ಮೆಟ್ಟಿಲೇರಿತು.ಹೈಕೋರ್ಟಿನ ಮಧ್ಯಪ್ರವೇಶದಿಂದ ೨೯ ಮಾರ್ಚ್ ೧೯೯೩ರಂದು ಸಿಬಿಐ ತನಿಖಾಧಿಕಾರಿ ವರ್ಗೀಸ್ ಥಾಮಸ್ ನೇತೃತ್ವದಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆಗಿಳಿದರು. ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ೧೯೯೩ರ ಡಿಸೆಂಬರ್ ೩೦ರಂದು ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ವರ್ಗೀಸ್ ಥಾಮಸ್ ಅವರು ರಾಜೀನಾಮೆ ನೀಡಿ ಹೊರಬಂದರು.ಶಿಸ್ತು ಹಾಗೂ ದಕ್ಷತೆಗಾಗಿ ರಾಷ್ಟ್ರಪತಿ ಪದಕ ಪಡೆದಿದ್ದ ದಕ್ಷ ಅಧಿಕಾರಿಯಾಗಿದ್ದವರು  ಸಿಬಿಐ ಡಿವೈಎಸ್ಪಿ ವರ್ಗೀಸ್.ಇನ್ನೂ ೭ ವರ್ಷ ಸೇವಾವಧಿ ಇರುವಾಗಲೇ,ಅವರು ನೀಡಿದ ರಾಜೀನಾಮೆ ಸಹಜವಾಗಿಯೇ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ೧೯೯೪, ಜನವರಿ ೧೯ರಂದು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಕರೆದ ವರ್ಗೀಸ್ ಥಾಮಸ್, “ಸಿಬಿಐ ಡೈರಿಯಲ್ಲಿ ಅಭಯಾ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸುವಂತೆ ಸಿಬಿಐನ ಕೊಚ್ಚಿನ್ ದಳದ ನನ್ನ ಮೇಲಧಿಕಾರಿ ವಿ. ತ್ಯಾಗರಾಜನ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆದರೆ ಹಾಗೆ ಮಾಡಲು ನನ್ನ ಆತ್ಮಸಾಕ್ಷಿ ಒಪ್ಪದ ಕಾರಣ ರಾಜೀನಾಮೆ ನೀಡಿದೆ” ಎಂದರು. ಪತ್ರಿಕಾಗೋಷ್ಠಿಯ ನಂತರ ಪ್ರಕರಣ ಮಾಧ್ಯಮಗಳ ಗಮನ ಸೆಳೆಯಿತು,ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಪ್ರಸ್ತಾಪವಾಯಿತು. ತ್ಯಾಗರಾಜನ್ ಅವರನ್ನು ಕೇಸಿನಿಂದ ತೆಗೆಯುವಂತೆ ಒತ್ತಡ ಹೇರಿದಾಗ ಅವರ ಜಾಗಕ್ಕೆ ಎಂ.ಎಲ್ ಶರ್ಮಾ ಅವರನ್ನು ಕೂರಿಸಲಾಯಿತು.

೧೯೯೬ರ ನವೆಂಬರ್ ೨೯ರಂದು, ಸಿಬಿಐ ತನ್ನ ಮೊದಲ ತನಿಖಾ ವರದಿಯನ್ನು ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದಿಟ್ಟಿತು.ಎ.ಕೆ ಓಹ್ರಿ ಬರೆದ ಈ ವರದಿಯ ಪ್ರಕಾರ ಸಿಸ್ಟರ್ ಅಭಯ  ಕೊಲೆಯೋ  ಆತ್ಮಹತ್ಯೆಯೋ ಎನ್ನುವ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಯಿತು. ಕೋರ್ಟ್ ಈ ವರದಿಯನ್ನು ತಿರಸ್ಕರಿಸಿತು. ೦೯ ಜುಲೈ ೧೯೯೯ರಂದು ಸುರಿಂದರ್ ಪೌಲ್ ಅವರು ಬರೆದ ಎರಡನೇ ವರದಿಯಲ್ಲಿ ಇದೊಂದು ಕೊಲೆ ಎಂದರಾದರೂ ಕೊಲೆಗಾರರ ಪತ್ತೆ ಸಾಧ್ಯವಾಗಿಲ್ಲ ಎನ್ನಲಾಯಿತು. ಈ ವರದಿಯನ್ನು ಕೋರ್ಟ್ ತಿರಸ್ಕರಿಸಿತು.ಮೂರನೇ ಹಾಗೂ ಅಂತಿಮ ವರದಿಯನ್ನು ಆರ್.ಆರ್ ಸಹಾಯ್ ಅವರು ಮಂಡಿಸಿದರು,ಅದರ ಪ್ರಕಾರ ಅಭಯ ಸಾವಿನಲ್ಲಿ ಯಾರೂ ಭಾಗಿಯಾಗಿದ್ದಕ್ಕೆ ಪುರಾವೆಗಳಿಲ್ಲ ಎನ್ನಲಾಯಿತು. ಈ ವರದಿಯನ್ನೂ ತಿಪ್ಪೆಗೆಸದ ಕೋರ್ಟ್ ತನಿಖೆಯನ್ನು ಕೇರಳದ ಸಿಬಿಐ ಬ್ರ್ಯಾಂಚಿಗೆ ವಹಿಸಿತು. ಯಾರಿಗೆ ವಹಿಸಿದರೇನು ಬಂತು> ಹಂತಕರ ಕೈಗಳು ಅದೆಷ್ಟು ಉದ್ಧವಾಗಿದ್ದವೆಂದರೆ, ಮೊದಲ ಹಂತದಲ್ಲೇ ತನಿಖೆಯ ದಿಕ್ಕನ್ನು ತಪ್ಪಿಸುವಂತೆ ನೋಡಿಕೊಂಡಿದ್ದವು. ಹತ್ಯೆ ನಡೆದ ಸ್ಥಳದಲ್ಲಿ ಯಾವುದೇ ಸಾಕ್ಷ್ಯಗಳ ಸಂಗ್ರಹವಾಗಲಿ ಮಾಡಿರಲೇ ಇಲ್ಲ,ಮೃತ ದೇಹದ ಬಟ್ಟೆಗಳನ್ನು ಫಾರೆನ್ಸಿಕ್ ಪರೀಕ್ಷೆಗೆ ಕಲಿಸಿರಲಿಲ್ಲ,ಮೃತ ದೇಹದ ಗುರುತುಗಳ ಫೋಟೋಗಳು ತನಿಖೆಯಲ್ಲಿ ದಾಖಲಾಗಲಿಲ್ಲ ಎಂದು ಸಿಬಿಐ ಹೇಳಿತ್ತು. ಮೃತ ದೇಹದ ಪೋಸ್ಟ್ ಮಾರ್ಟಮ್ ಮಾಡಿ,ಮುಳುಗಿಯೇ ಸತ್ತಿದ್ದು ಎಂದು ವರದಿ ನೀಡಿದ್ದ ಡಾ. ಸಿ ರಾಮಕೃಷ್ಣನ್,೨೦೦೯ರಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ತನ್ನನ್ನು ದೇಹ ದೊರೆತ ಸ್ಥಳಕ್ಕೆ ಹೋಗಲು ಬಿಡಲಿಲ್ಲವಾದ್ದರಿಂದ ಸರಿಯಾದ ಕಾರಣ ತಿಳಿಸಲಾಗಿರಲಿಲ್ಲ ಎಂದರು. ಆದರೆ ಕ್ರೈಮ್ ಬ್ರ್ಯಾಂಚ್  ಕೇಸನ್ನು ಬೇರೆ ಡಾಕ್ಟರ್ ಅವರ ಸುಪರ್ದಿಗೆ ವಹಿಸಲಾಗಿತ್ತು ಎಂದು ವಾದಿಸಿತು. ಶಂಕಿತರಾಗಿದ್ದ ಇಬ್ಬರು ಫಾದರ್ ಹಾಗೂ ಸಿಸ್ಟರ್ ಒಬ್ಬರನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ,ಆಗಲೇ ಹೇಳಿದೆನಲ್ಲ, ಹಂತಕರ ಕೈಗಳ ಆಳ-ಅಗಲ ಎಷ್ಟಿತ್ತೆಂದರೆ ನಾರ್ಕೋ ಅನಾಲಿಸಿಸ್ ಪರೀಕ್ಷೆಯ ಸಿಡಿಯನ್ನು ಕೋರ್ಟಿಗೆ ಸಲ್ಲಿಸಿದಾಗ ಅದು ಒರಿಜಿನಲ್ ಸಿಡಿಯಲ್ಲ,ಅದನ್ನು ತಿದ್ದಲಾಗಿದೆ ಎನ್ನುವ ಅನುಮಾನಗಳೆದ್ದವು. ಖುದ್ದು ಕೋರ್ಟ್ ಈ ಬಗ್ಗೆ ಬೆಂಗಳೂರಿನ ಫಾರೆನ್ಸಿಕ್ ಲ್ಯಾಬಿನ ಡಾ.ಮಾಲಿನಿ ಅವರಿಗೆ ಪ್ರಶ್ನೆಗಳನ್ನು ಕೇಳಿತ್ತು. ತಿದ್ದಿರಬಹುದಾದ ಸಾಧ್ಯತೆಗಳಿವೆ ಎಂದ ಮಾಲಿನಿಯವರು ಕೆಲವೇ ದಿನಗಳ ಅಂತರದಲ್ಲಿ ತಮ್ಮ ಜನ್ಮ ದಿನಾಂಕವನ್ನು ತಿದ್ದಿರುವ ಆರೋಪದ ಮೇಲೆ ಕೆಲಸ ಕಳೆದುಕೊಂಡರು.

ತನಿಖಾ ಪತ್ರಿಕೋದ್ಯಮಕ್ಕೆ ಹೆಸರಾದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ತಿರುವನಂತಪುರ ಆವೃತ್ತಿಯಲ್ಲಿ ಇದೇ ಕೇಸಿನ ಬಗ್ಗೆ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ೧೯೯೭ರಲ್ಲಿ ಪ್ರಕಟವಾದ ಆ ವರದಿ, ‘ಸಿಸ್ಟರ್ ಅಭಯಾ ಮೇಲೆ ಅತ್ಯಾಚಾರ ನಡೆದಿತ್ತು, ಆಕೆ ಕೊಲೆಯಾಗಿದ್ದಳು ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು’ ಎಂಬುದನ್ನು ಜನರ ಮುಂದಿಟ್ಟಿತು. ಅಲ್ಲದೆ ‘ಅದೊಂದು ಕೊಲೆ’ ಎಂಬುದನ್ನು ಸಿಬಿಐ ಅಧಿಕಾರಿ ವರ್ಗೀಸ್ ಥಾಮಸ್ ಕೂಡ ಹೇಳಿದ್ದರು. ಹಾಗಾಗಿ ಸಿಸ್ಟರ್ ಅಭಯಾ ಅತ್ಯಾಚಾರಕ್ಕೊಳಗಾಗಿರುವ ಹಾಗೂ ಕೊಲೆಯಾಗಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳಿರಲಿಲ್ಲ.ಆಕೆಯನ್ನು ಕೊಲೆಗೈಯ್ಯುವುದಕ್ಕೂ ಕಾರಣವಿತ್ತು! ಒಬ್ಬ ಸಿಸ್ಟರ್ ಹಾಗೂ ಇಬ್ಬರು ಫಾದರ್ ಗಳ ನಡುವಿನ ಅನೈತಿಕ ಚಟುವಟಿಕೆಯನ್ನು ಅಚಾನಕ್ ನೋಡಿದ ಕಾರಣಕ್ಕೆ ಆಕೆ ಪ್ರಾಣ ಕಳೆದುಕೊಳ್ಳಬೇಕಾಯಿತು ಎನ್ನುವ ಮಾತುಗಳಿವೆ. ತಮ್ಮ ಕಾಮಕಾಂಡ ಕಂಡವಳನ್ನು ಉಳಿಸಿದರೆ ನಮ್ಮ ಮರ್ಯಾದೆ ಉಳಿಯಲಿಕ್ಕಿಲ್ಲವೆಂದು ೧೯ರ ಹುಡುಗಿಯನ್ನು ಕೊಡಲಿಯಿಂದ ಹೊಡೆದು ಕೊಂದು ಬಾವಿಗೆ ಹಾಕಲಾಯಿತು ಎನ್ನಲಾಗುತ್ತದೆ.೧೯ ನವೆಂಬರ್ ೨೦೦೮ರಲ್ಲಿ ಸಿಬಿಐ ಥಾಮಸ್ ಕೊಟ್ಟೂರ್ ,ಜೋಸ್ ಪೂತ್ರಿಕ್ಕಾಯಿಲ್,ಸಿಸ್ಟರ್ ಸೆಫಿ ಅವರನ್ನು ಬಂಧಿಸಿತ್ತು. ೨೫ ನವೆಂಬರ್ ೨೦೦೮ಕ್ಕೆ ಈ ಕೇಸಿನ ಮೊದಲ ತನಿಖಾಧಿಕಾರಿ ಅಗಸ್ಟಿನ್ ಅವರು ಸತ್ತರು,ಯಥಾ ಪ್ರಕಾರ ಅದು ಆತ್ಮಹತ್ಯೆ ಎನ್ನಲಾಯಿತು. ಗಮನಾರ್ಹ ವಿಷಯವೆಂದರೆ ಅಗಸ್ಟಿನ್ ತಮ್ಮ ಕೇಸ್ ಡೈರಿಯಲ್ಲಿ ಇದೊಂದು ಹತ್ಯೆ ಎಂದು ದಾಖಲಿಸಿದ್ದರು! ೧೭ ಜುಲೈ ೨೦೦೯ರಂದು ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಫಾದರ್ ಕೊಟ್ಟೂರ್,ಪೂತ್ರಿಕ್ಕಾಯಿಲ್,ಸಿಸ್ಟರ್ ಸೆಫಿ ಅವರ ಮೇಲೆ ಹತ್ಯೆ ,ಸಾಕ್ಷ್ಯ ನಾಶದ ಆರೋಪ ಹೊರಿಸಿತ್ತು. ಸೆಪ್ಟೆಂಬರ್ ೨೦೦೯ರಲ್ಲಿ  ಚಾನೆಲ್ ವೊಂದರಲ್ಲಿ ಈ ಕೇಸಿನ ನಾರ್ಕೊ ಅನಾಲಿಸಿಸ್ ಪರೀಕ್ಷೆಯ ರೆಕಾರ್ಡಿಂಗ್ ಎಂದು ಪ್ರಸಾರವಾಗಿತ್ತು.ಅದರ ಪ್ರಕಾರ ಮೂವರು ತಪ್ಪು ಒಪ್ಪಿಕೊಂಡಿದ್ದರು.ಆದರೆ ಆ ರೆಕಾರ್ಡಿಂಗಿನ ಅಧಿಕೃತತೆ ಸಾಬೀತಾಗಲಿಲ್ಲ. ಜನವರಿ ೨೦೧೮ರ ವರದಿಯಲ್ಲಿ ಕ್ರೈ ಬ್ರ್ಯಾಂಚಿನ ಎಸ್.ಪಿ ಮೈಕೆಲ್ ವಿರುದ್ಧ ಸಾಕ್ಷ್ಯ ನಾಶದ ಆರೋಪವಿದೆ. ಮಾರ್ಚ್ ೨೦೧೮ರಂದು ಫಾದರ್ ಜೋಸೆಫ್ ಅವರನ್ನು ಕೋರ್ಟ್ ದೋಷ ಮುಕ್ತಗೊಳಿಸಿದೆ,ಉಳಿದಿಬ್ಬರ ಮೇಲೆ  ನಡೆಯುತ್ತಿದೆಯಾದರೂ ಬೇಲ್ ಮೇಲೆ ಹೊರಗಿದ್ದಾರೆ.ಆಕೆ ಹತ್ಯೆಯಾದ ಜಾಗವಿಂದು ರಿನೋವೇಷನ್ ಹೆಸರಲ್ಲಿ ಬಹಳಷ್ಟು ಬದಲಾಗಿ ಹೋಗಿದೆ.ಆಕೆಯ ಹತ್ಯೆಯಾಗಿ ೨೬ ವರ್ಷಗಳು ಕಳೆಯಿತು.ಆದರೆ ಹಂತಕರ ಪತ್ತೆ ಮಾತ್ರ ಇನ್ನೂ ಆಗಲಿಲ್ಲ. ಸಿಸ್ಟರ್ ಅಭಯ ಸಾವಿಗೆ ನ್ಯಾಯ ಸಿಗುತ್ತದೆಯೋ ಗೊತ್ತಿಲ್ಲ.

ಕೇರಳದ ನನ್ ಒಬ್ಬರು,ಪಾದ್ರಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಪ್ರಕರಣವನ್ನು ನೋಡುವಾಗ ಸಿಸ್ಟರ್ ಅಭಯ ಅವರ ಕೇಸ್ ನೆನಪಾಯಿತು.ಹತ್ಯೆಯನ್ನೇ ಮುಚ್ಚಿ ಹಾಕಬಲ್ಲದಕ್ಷ ತನಿಖಾಧಿಕಾರಿಗಳು ರಾಜೀನಾಮೆ ನೀಡುವಂತೆ ಮಾಡುವ,ಅವರ ಪ್ರಾಣವನ್ನೇ ಕಸಿದು ದಕ್ಕಿಸಿಕೊಳ್ಳುವ ಮಾಫಿಯಾಗಳಿಗೆ ಅತ್ಯಾಚಾರವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲವೇ? ಕೇರಳದ ಸಚಿವನೊಬ್ಬ ಈಗಾಗಲೇ ಸಂತ್ರಸ್ತ ನನ್ ಚಾರಿತ್ರ್ಯವನ್ನೇ ಪ್ರಶ್ನಿಸಿದ್ದಾನೆ.ಅತ್ಯಾಚಾರ ಸಂತ್ರಸ್ತೆಯ ಹೆಸರನ್ನೇ ಗುಪ್ತವಾಗಿಡಲಾಗುತ್ತದೆ ಅಂತಹದ್ದರಲ್ಲಿ  ಮಿಷನರಿಯೊಂದು ಸಂತ್ರಸ್ತೆಯ ಫೋಟೋವನ್ನೇ ಪ್ರಕಟಿಸಿದೆ. ಹಿಂದೂ ಸ್ವಾಮೀಜಿಗಳ ಮೇಲೆ ಆರೋಪ ಕೇಳಿ ಬಂದ ತಕ್ಷಣ ಅವರನ್ನು ಬಂಧಿಸಲಾಗುತ್ತದೆ,ಆದರೆ ಈ ಕೇಸಿನ ಆರೋಪಿ ಇನ್ನು ಆರಾಮವಾಗಿ ಹೊರಗಿದ್ದಾನೆ. ಯಾವ ಮೀಡಿಯಾಗಳು ಕೈ ತೊಳೆದುಕೊಂಡು ಹಿಂದೆ ಬಿದ್ದಿಲ್ಲ,೨೪ ತಾಸಿನ ಪ್ಯಾನೆಲ್ ಡಿಸ್ಕಷನ್ನುಗಳು ಆಗುತ್ತಿಲ್ಲ,ಗಂಜಿಗಿರಾಕಿಗಳು ಬೀದಿಗಿಳಿದು ಆರೋಪಿಯನ್ನು ಬಂಧಿಸುವ ಒತ್ತಡವನ್ನು ಹಾಕುತ್ತಿಲ್ಲ. ಕೇರಳದ ನನ್ ಗಳೇನೋ ಈ ಬಾರಿ ಬೀದಿಗಿಳಿದಿದ್ದಾರೆ.ನ್ಯಾಯ ಸಿಗಬಹುದೋ ಇಲ್ಲವೋ ಗೊತ್ತಿಲ್ಲ.ಆದರೆ ಗಂಜಿಗಿರಾಕಿಗಳ ಹಿಂದೂ ದ್ವೇಷಕ್ಕೆ ಹಾಗೂ ವ್ಯವಸ್ಥೆಯನ್ನು ಪರದೆಯ ಹಿಂದೆ ನಿಯಂತ್ರಿಸುವ ಕಾಣದ ಕೈಗಳ ಬಗ್ಗೆ ಈ ಪ್ರಕರಣ ಮತ್ತೊಮ್ಮೆ ಕನ್ನಡಿ ಹಿಡಿದಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments