ಪುಸ್ತಕ ಪರಿಚಯ – “ಪ್ರಜ್ಞೆ ಮತ್ತು ಪರಿಸರ”
– ಚಂದ್ರಹಾಸ
“ಪ್ರಜ್ಞೆ ಮತ್ತು ಪರಿಸರ” – ಯು. ಆರ್. ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನ. ಪ್ರಸ್ತುತ ಪುಸ್ತಕ ಯಾವುದೋ ಕೆಲವು ಕೃತಿಗಳ ವಿಮರ್ಶೆಗಳಲ್ಲ, ಬದಲಾಗಿ ಕೃತಿಗಳನ್ನು ಸೃಷ್ಟಿಸಿದ ಕೃತಿಕಾರರ ದೃಷ್ಟಿಕೋನಗಳದ್ದು. ಸುತ್ತಲಿನ ಸಮಾಜ, ವಾಸ್ತವ ಅನುಭವಗಳು ಮತ್ತು ಲೋಕವ್ಯಾಪರ, ಹೇಗೆ ಸಾಹಿತಿಗಳ ಮನೋಭೂಮಿಕೆಯಲ್ಲಿ ವಿಶ್ಲೇಷಣೆಗೊಂಡು, ಶೋಧನೆಗೆ ಪ್ರೇರೇಪಿಸಿ ಕೃತಿಗಳಲ್ಲಿ ಮೂರ್ತಗೊಂಡಿರಬಹುದೆಂಬುದನ್ನು ತಮ್ಮ ಲೇಖನಗಳಾ ಮೂಲಕ ವಿವೇಶಿಸಿದ್ದಾರೆ. ಮುನ್ನುಡಿಯಲ್ಲಿ ಅವರೇ ಈ ಲೇಖನಗಳಾ ಹಿಂದಿನ ಪ್ರೇರಣೆಯನ್ನು ಹೀಗೆ ಹೇಳಿಕೊಂಡಿದ್ದಾರೆ – “ಸಾಹಿತ್ಯದಿಂದ ರಾಜಕೀಯದವರೆಗೆ ಸ್ನೇಹಿತರೊಡನೆ ನಡೆಸಿದ ಚರ್ಚೆಗಳಿಂದ,ಮಾರ್ಕ್ಸ್ ವಾದದ,ಲೋಹಿಯಾವಾದಗಳ ಬಗ್ಗೆ ಇದ್ದ ಅನುಮಾನ ಅಭಿಮಾನಗಳಿಂದ ಪ್ರಭಾವಗೊಂಡ ಅಲೋಚನ ಲಹರಿಗಳೇ, ಈ ಸಂಕಲನದಲ್ಲಿ ಲೇಖನಗಳಾಗಿ ಮೂಡಿವೆ.”
ಕೃತಿಯು ಪ್ರಾರಂಭವಾಗುವುದೇ “ಪ್ರಜ್ಞೆ ಮತ್ತು ಪರಿಸರ” ಎಂಬ ವೈಚಾರಿಕ ಲೇಖನದಿಂದ. ಈ ಲೇಖನದಲ್ಲಿ ಮನುಷ್ಯನ ಪ್ರಜ್ಞೆಯ ವಿಕಾಸ ವ್ಯಕ್ತಿಗತವಾದದ್ದೋ ( ಆದರ್ಶವಾದ/ಆಧ್ಯಾತ್ಮಿಕವಾದ/ಭಾವಕೇಂದ್ರಿತ ) ಅಥವಾ ಪರಿಸರದಿಂದ (ಸಾಮಾಜಿಕ ವ್ಯವಸ್ಥೆ/ಅರ್ಥಿಕ ವ್ಯವಸ್ಥೆ/ಸಂಸಾರ/ಉದ್ಯೋಗ) ಬಂದದ್ದೋ ? ಎಂಬ ಪ್ರಶ್ನೆಗೆ, ಸಾಹಿತ್ಯದ ನೆಲೆಯಲ್ಲಿ ವಿವೇಚಿಸಿದ್ದಾರೆ. ಇದಕ್ಕೆ ಆಧಾರವಾಗಿ ಮಾರ್ಕ್ಸ್ ವಾದವನ್ನು ಅದರಲ್ಲಿನ ಅನೇಕ ಉಪಪಂಥಗಳ ಚಿಂತನೆಗಳನ್ನು ತೆಗೆದುಕೊಂಡಿದ್ದಾರೆ. ಪ್ರಜ್ಞೆ ಮನುಷ್ಯನ ಒಳ ಲೋಕ, ಪರಿಸರ ಅವನನ್ನು ಸುತ್ತುವರಿದ ಹೊರಲೋಕ. ಒಂದು ಅರಿವು, ಇನ್ನೊಂದು ಅರಿವಿನ ಮೇಲೆ ಪ್ರಭಾವ ಬೀರುವಂತ ಜಗತ್ತು. ಪ್ರಪಂಚಾನುಭವ ಮನುಷ್ಯ ಪ್ರಜ್ಞೆಯಲ್ಲಿ ಬದಲಾವಣೆಯನ್ನು ತರುವಂತೆ, ಬೌದ್ಧಿಕ ಪ್ರೇರಣೆಯಿಂದ ಚಿಂತಿಸಿಯೂ ವ್ಯಕ್ತಿಪ್ರಜ್ಞೆ ಬದಲಾವಣೆಗೊಳ್ಳುತ್ತದೆ; ಶಕ್ತಿಯುತವಾದ ಪ್ರಜ್ಞೆಯೂ ಕೂಡ ತನ್ನ ಸುತ್ತಲಿನ ಸಮಾಜದ ಮೇಲೂ ಪ್ರಭಾವ ಬೀರಿ ಸಮಾಜದ ಪರಿವರ್ತನೆಗೆ ಪ್ರಚೋದಿಸುತ್ತದೆ. ಈ ದೃಷ್ಟಿಯಲ್ಲಿ ಯೂರೋಪಿನ ವ್ಯಕ್ತಿಯ ಮನೋಧರ್ಮ ಹೇಗೆ ಪರಿವರ್ತನೆಗಳ ಸರಪಣಿಯಲ್ಲಿ ವಿಕಾಸ ಹೊಂದಿತು, ಹಾಗೆಯೇ ಭಾರತೀಯ ವ್ಯಕ್ತಿ ಮನೋಧರ್ಮ ತನ್ನನ್ನು ಹೇಗೆ ಬದಲಾವಣೆಗೊಳಿಸಿಗೊಂಡಿತು, ಅಲ್ಲಿಗೂ ಭಾರತೀಯ ಚಿಂತನೆಗಳಿಗೂ ಕಂಡುಬರುವಂತಹ ವ್ಯತ್ಯಾಸಗಳೇನು ಎಂಬುದನ್ನು ಲೇಖನದಲ್ಲಿ ಚರ್ಚಿಸಿದ್ದಾರೆ. ಮನುಷ್ಯನ ಇತಿಹಾಸವನ್ನು ಸಮಷ್ಟಿ ದೃಷ್ಟಿಯಿಂದ ತಿಳಿಯಬಯಸುವರಿಗೆ, ಪುರಾತನ ತತ್ವ ಸಿದ್ಧಾಂತಗಳ ದೃಷ್ಟಿಕೋನದಿಂದ ಅವಲೋಕಿಸಿದರೆ ಅನುಕೂಲವೋ, ಅಥವಾ ಮಾರ್ಕ್ಸ್ ವಾದದ ಆರ್ಥಿಕ ವ್ಯವಸ್ಥೆಯ ದೃಷ್ಟಿಕೋನದಿಂದ ವಿವೇಚಿಸುವುದು ಉಚಿತವೋ, ಎಂಬುದನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸಿದ್ದಾರೆ. ಬರಿ ‘ತತ್ವ ಆದರ್ಶಗಳ’ ಮಟ್ಟದಲ್ಲಿ ಅಥವಾ ‘ಸರಳ ಹಾಗು ಕಠಿಣ ಮಾರ್ಕ್ಸವಾದ’ದ ಮಟ್ಟದಲ್ಲೇ ಇತಿಹಾಸ ಹಾಗು ಲೋಕದ ಬಗ್ಗೆ ವಿವೇಚಿಸಿದರೆ, ಆಗುವ ಅನುಕೂಲ ಅನಾನುಕೂಲಗಳೇನು ಎಂಬುದನ್ನು ವಿವರವಾಗಿ ವಿಚಾರಮಾಡಲಾಗಿದೆ. ಮುಂದೆ ಇವೆರೆಡೂ ದೃಷ್ಟಿಕೋನಗಳೂ, ಒಂದನ್ನು ಬಿಟ್ಟು ಒಂದು ಸ್ವತಂತ್ರವಾಗಿ ಮನುಷ್ಯನ ಇತಿಹಾಸವನ್ನು ಗ್ರಹಿಸುವುದಕ್ಕಿಂತ, ಎರಡೂ ಸಮನ್ವಯಗೊಂಡ ಹೊಸದಾರಿಯೇ ಸಮರ್ಪಕವಾದುದು ಎಂದು ತಮ್ಮ ಆಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಂತರ ಬರುವ “ಸಾರ್ತ್ರ್ ಮತ್ತು ಅಸ್ತಿತ್ವವಾದ” ಲೇಖನ, “Existentialism and Humanism” ಎಂಬ ಅನಂತಮೂರ್ತಿಯವರ ಇಂಗ್ಲಿಷ್ ಭಾಷಣದ ಆಯ್ದ ಭಾಗದ ಕನ್ನಡಾನುವಾದ. ಇದರಲ್ಲಿ ಸಾರ್ತ್ರ್‌ನ ಅಸ್ತಿತ್ವವಾದ ದೀರ್ಘ ವಿಶ್ಲೇಷಣೆಯಿದೆ. ತನ್ನನ್ನು “ನೀರೀಶ್ವರವಾದಿ ಅಸ್ತಿತ್ವವಾದಿ” ಎಂದು ಕರೆದುಕೊಳ್ಳುವ ಅವನ ಸಿದ್ಧಾಂತವನ್ನು ಮೊದಲಿಂದಲೂ, ಕಮ್ಮುನಿಸ್ಟರು ಹಾಗು ಸಾಂಪ್ರದಾಯಿಕ ಕ್ಯಾಥೊಲಿಕರು ಏಕೆ ನಿರಾಕರಿಸುತ್ತಲೇ ಬಂದಿದ್ದಾರೆ? ಅವರ ದೂರುಗಳಿಗೆ ಸಾರ್ತ್ರ್ ಹೇಗೆ ಉತ್ತರ ಕೊಟ್ಟು, ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾನೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ” ಮನುಷ್ಯ ತಾನು ‘ಆಗು’ವ ಮೊದಲು ಬರೀ ‘ಇರು’ತ್ತಾನೆ (ಅಸ್ತಿತ್ವ). ತಾನು ಸ್ವಂತ ಏನಾಗಬೇಕೆಂದು ಮೊದಲು ನಿಶ್ಚಯಿಸಿ, ನಂತರ ಏನಾಗುತ್ತಾನೋ ಅದೇ ಮನುಷ್ಯತ್ವ; ಕೆಲವು ಪೂರ್ವಸಿದ್ದ ಸತ್ಯ ಅಥವಾ ತತ್ವದ, ಉದ್ದೇಶಿತ ಸೃಷ್ಟಿಯಲ್ಲ ಮನುಷ್ಯ!” – ಎಂಬುದೇ ಸಾರ್ತ್ರ್‌ನ ಪ್ರಮುಖ ವಾದ. ಅಂದರೆ ಸ್ವತಂತ್ರವಾದ ನಿಶ್ಚಯಗಳ ಮೂಲಕ ಬದುಕು ‘ಬಾಳ್ವೆ’ ಯಾಗುತ್ತದೆ; ಇಂತಹ ನಿಶ್ಚಿತ ಕ್ರಿಯೆಗಳ ಮೂಲಕ ಬದುಕು ಕಟ್ಟಿಕೊಳ್ಳುವನೇ ಅಸ್ತಿತ್ವವಾದಿ. ಈ ದಾರಿಯಲ್ಲಿ ಸೋಲು ಇದೆ, ಗೆಲುವು ಇದೆ. ಬದುಕಿನ ಅನೇಕ ದ್ವಂದ್ವ ಸಂದರ್ಭಗಳಲ್ಲಿ, ಸ್ವತಂತ್ರವಾಗಿ ಸಮಾಲೋಚಿಸಿ, ಸಮಯ ಸ್ಥಿತಿ ಶಕ್ತ್ಯಾನುಸಾರ ನಿರ್ಧಾರಗಳನ್ನು ತೆಗೆದುಕೊಂಡಾಗ ಸಿಗುವ ಪರಿಣಾಮವೇ ಸಮರ್ಪಕವಾದ ಬಾಳು ಹೊರತು, ಧರ್ಮ ತತ್ವಶಾಸ್ತ್ರಗಳಂತ ಸರ್ವಕಾಲಿಕ ಸತ್ಯವಾಗಲಿ ಸೂತ್ರಗಳಿಂದಾಗಲಿ ಹತೋಟಿಗೆ ತರುವುದು ಕೇವಲ ಭ್ರಮೆಯಾಗುತ್ತದೆ; ಇಲ್ಲಾ ಸತ್ಯವನ್ನು ಮರೆಮಾಚಿದಂತಾಗುತ್ತದೆ. ಇದು ಕೂಡ ಸಾರ್ತ್ರ್‌ನ ವಾದಗಳಲ್ಲಿ ಪ್ರಮುಖವಾದದ್ದು ಹಾಗು ವಿಶ್ವಾದಾದ್ಯಂತ ಬಹುಚರ್ಚೆಗೆ ವಿಮರ್ಶೆಗೆ ಗುರಿಯಾದದ್ದು.
“ಮಾರ್ಕ್ಸ್‌ವಾದ ಮತ್ತು ಸಾಹಿತ್ಯದಲ್ಲಿ ನಿಷ್ಠೆ” ಬರಹದಲ್ಲಿ ಮಾರ್ಕ್ಸ್‌ವಾದ, ಸಾರ್ತ್ರ್‌ನ ಅಸ್ತಿತ್ವವಾದ ಅಥವಾ ಫ್ರಾಡ್‌ನ ಮನೋವೈಜ್ಞಾನಿಕ ಸಿದ್ಧಾಂತಗಳಂತ ಅನೇಕ ತತ್ವಶಾಸ್ತ್ರಗಳ ಆಧಾರದ ಮೇಲೆ ಬರೆಯುವ ಕಥೆ, ಕವನ, ಕಾದಂಬರಿಗಳ ಓದು ಅವಶ್ಯಕತೆಯಿದೆಯೆ? ಎಂಬ ಮಹತ್ವಪೂರ್ಣ ವಿಚಾರವನ್ನು ವಿಶ್ಲೇಷಿಸಲಾಗಿದೆ. ತತ್ವ ಸಿದ್ಧಾಂತಗಳ ತಿರುಳನ್ನು ಅದರ ಸಂದೇಶಗಳನ್ನು ಪ್ರಯತ್ನಪೂರ್ವಕವಾಗಿ ಕೃತಕವಾಗಿ ಕೃತಿಯೊಳಗೆ ಸೇರಿಸಿದರೆ, ಅವೆಲ್ಲಾ “ಫಾರ್ಮುಲಾ’ ಕೃತಿಗಳೆಂದು ಕರೆಯಿಸಿಕೊಳ್ಳುತ್ತವೆ. ಹಾಗದರೆ ಇಂತಹ ಆಧುನಿಕ ಚಿಂತನೆಗಳನ್ನು ಸಾಹಿತ್ಯದೊಳಗೆ ತರುವುದಾದರೂ ಹೇಗೆ ? ಸಾಹಿತ್ಯಕ್ಕೂ ಶಾಸ್ತ್ರಬದ್ಧ ತತ್ವಗಳಿಗೂ ಇರಬೇಕಾದ ಸಂಭಂಧವಾದರೂ ಏನು? ಎಂಬ ವಿಚಾರಗಳ ಸುತ್ತ ಇಲ್ಲಿ ವಿಚಾರವಾದವಿದೆ. “ಸಮಾಜಶಾಸ್ತ್ರ ,ರಾಜಕೀಯ, ಮನಃಶಾಸ್ತ್ರಗಳಲ್ಲಿರುವ ಶಿಸ್ತು ಶ್ರದ್ದೆಗಳಂತೆಯೇ, ಸಾಹಿತ್ಯವೂ ತನ್ನದೇ ಆದ ಶಿಸ್ತುಬದ್ಧ ರೀತಿಯಲ್ಲಿ ಸತ್ಯದ ಅಮೂಲ್ಯ ಶೋಧನೆಯನ್ನು ಮತ್ತು ಸಾಕ್ಷಾತ್ಕಾರಗಳನ್ನು ಸಾಧ್ಯಗೊಳಿಸುತ್ತದೆ” ಎಂಬ ಸಾಧ್ಯತೆಯ ಲಕ್ಷಣಗಳನ್ನು ಹಲವು ಆಧಾರಗಳೊಂದಿಗೆ ವಿವರಿಸುತ್ತಾರೆ. ಎಂಗಲ್ಸ್‌ರ ೧೮ನೇ ಶತಮಾನದಲ್ಲೇ ಒಂದು ಕಥೆ, ಕಾದಂಬರಿ ಅಥವಾ ಕಾವ್ಯ ಹೇಗಿರಬೇಕು? ಅದರ ಅಂತಃಸತ್ವ, ಉದ್ದೇಶ, ಹೊರಸೂಸುವ ಸಂದೇಶ ಹೇಗಿರಬೇಕು? ಎಂಬ ರೂಪುರೇಷೆಗಳನ್ನು, ತನ್ನ ಕ್ರಾಂತಿಕಾರಿಕ ಚಿಂತನೆಯ ನೆಲೆಯಲ್ಲಿ ವಿವರಿಸಿರುತ್ತಾನೆ. ಅವನ ಈ ದೃಷ್ಟಿಕೋನ ಅಂದು ಆ ಸಮಾಜದ ಸಾಹಿತ್ಯದಲ್ಲಿ ಅಂತರ್ಗತವಾಗಿದ್ದ ಸೌಂದರ್ಯೋಪಾಸನೆ, ಆದರ್ಶವಾದ, ಭಾವಾವೇಶಗಳ ವಿಜೃಂಭಣೆಗೆ ವಿರೋಧವಾಗಿ ಹೇಗೆ ಚಿಂತಿಸಿತು ? ಈ ಚಿಂತನೆಯ ಪರಿಣಾಮ, ಪ್ರತಿರೋಧಗಳೇನು? ಎಂಬುದರ ವಿವರಣೆ ನಮ್ಮನ್ನೂ ಇಂದಿನ ಕಾಲದಲ್ಲಿನ ಸ್ಥಿತಿಯನ್ನು ಚಿಂತಿಸುವಂತೆ ಮಾಡುತ್ತದೆ. ಈ ಲೇಖನ ಮುಖ್ಯವಾಗಿ ಕೃತಿಕಾರನಿಗೆ ಸಾಹಿತ್ಯೇತರ ವಿಷಯಗಳಲ್ಲಿ ( ಆಧುನಿಕ ವಾದಗಳು, ಶಾಸ್ತ್ರಗಳು, ವೈಜ್ಞಾನಿಕ ರಾಜಕೀಯ ಚಿಂತನೆಗಳು ಇತರೆ..) ನಿಷ್ಠೆಯಿರಬೇಕೇ ಹೊರತು, ಸಾಹಿತ್ಯ ಕೃತಿಯನ್ನು ಆ ಸಿದ್ಧಾಂತಗಳನ್ನು ಪಸರಿಸುವ ಸಾಧನವಾಗಿಸಕೂಡದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಟಾಲ್ಸ್ಟಾಯ್, ಲಾರೆನ್ಸ್, ಮಾಲ್ರೊ, ಸಾರ್ತ್ರ್ ರವರ ಕೃತಿಗಳು ಹೇಗೆ ಯಶಸ್ವಿಯಾಗಿದೆ ಎಂಬುದಕ್ಕೆ ಉಲ್ಲೇಖಿಸುತ್ತಾರೆ. ಸಾಹಿತ್ಯ ತತ್ವಶಾಸ್ತ್ರಗಳ ವಸ್ತುಗಳನ್ನೊಳಗೊಂಡಿದ್ದರೂ, ಅದು ಬೇರೆ ರೀತಿಯಾಗಿಯೆ ಆ ವಿಷಯ ಚಿಂತನೆಯನ್ನು ಮೂಡಿಸಬೇಕು (ಮನುಷ್ಯ ಅನುಭವದೊಳಗೆ) ಎಂದು ಸೂಚಿಸುತ್ತಾರೆ. ಸಾಹಿತಿ ಸಾಹಿತ್ಯದ ಜವಾಬ್ಧಾರಿಯನ್ನೂ, ರಸಾನುಭವವನ್ನೂ ಅರಿತಿರಬೇಕು, ಇಲ್ಲದಿದ್ದರೆ ರಚಿಸುವ ಕೃತಿ ಸೃಜನಶೀಲತೆಯನ್ನು ಕಳೇದುಕೊಂಡು ಬರಿ ಪ್ರಚಾರ ಅಥವಾ ವರದಿಗಳಾಗಿಬಿಡುವ ಸಂಭವವಿರುತ್ತದೆ ಎಂದು ಎಚ್ಚರಿಸುತ್ತಾರೆ ಕೂಡ.
“ಸಾಹಿತ್ಯದಲ್ಲಿ ವೈಚಾರಿಕತೆ” – ಈ ಹಿಂದೆ ಪರಿಚಯಿಸಿದ ಪ್ರಬಂಧವಾದ ‘ಸಾಹಿತ್ಯದಲ್ಲಿ ನಿಷ್ಠೆಯ’ ಮುಂದುವರೆದ ಭಾಗವೇ ಈ ಲೇಖನ ಹೇಳಬಹುದು. ಆದರು ಇಲ್ಲಿನ ವಿಚಾರಗಳು ಬೇರೆ ಆಯಾಮಗಳಲ್ಲೂ ವಿವೇಚಿಸಲ್ಪಟ್ಟಿದೆ. ಇಲ್ಲಿ ಮುಖ್ಯವಾಗಿ ತತ್ಚಶಾಸ್ತ್ರಗಳಿಗೂ ಸಾಹಿತ್ಯಕ್ಕೂ ಇರುವ, ಇರಬೇಕಾದ ಸಂಭಂಧ, ದೂರಗಳನ್ನು ವಿಶ್ಲೇಷಿಸುತ್ತದೆ. ಈ ನಿಟ್ಟಿನಲ್ಲಿ, ಈ ಸಂಭಂಧವನ್ನು ಎರಡು ನೆಲೆಯಿಂದ ವಿವೇಚಿಸಬಹುದು. ಒಂದು ತತ್ವಶಾಸ್ತ್ರದ ನೆಲೆ, ಇನ್ನೊಂದು ಸಾಹಿತ್ಯಿಕ ನೆಲೆ. ಎರೆಡೂ ದೃಷ್ಟಿಕೋನಗಳಲ್ಲಿ ಒಂದರ ಅನುಕೂಲತೆ ಹಾಗು ಮತ್ತೊಂದರ ನ್ಯೂನತೆ ಕಾಣುತ್ತದೆಯಾದರೂ, ಒಟ್ಟು ಫಲಿತಾಂಶದಲ್ಲಿ ರಸನಿರ್ಮಾಣ ಅಥವಾ ರಸಯೋಗವೇ ಮುಖ್ಯಗುರಿಯಾಗುತ್ತದೆ. ತತ್ವವೊಂದನ್ನು ಭೋಧಿಸುವಾಗ ಯಾವುದನ್ನು ಬಿಡಬೇಕು, ಯಾವುದನ್ನು ಸೇರಿಸಿಕೊಳ್ಳಬೇಕು ಎಂಬುದರ ಪಟ್ಟಿಗಳನ್ನು ಅವುಗಳೇ ಹೇಗೆ ರೂಪಿಸಿಕೊಂಡಿವೆ ಎಂಬ ವಿವರಣೆಗಳಿವೆ. ಈ ಭಾಗದಲ್ಲಿ ಸಾರ್ತ್ರ್‌ನ ಗದ್ಯ-ಪದ್ಯ ವ್ಯತ್ಯಾಸ, ರೂಪ-ಲಕ್ಷಣ ಭೇಧ, ಟ್ರೆಲ್ಲಿಂಗ್‌ನ ವಿಮರ್ಶಕ-ಕವಿಗಳ ನಡುವೆಯಿರುವ ರಸಪ್ರಜ್ಞೆಯ ಭೇಧ, ಹಾರ್ಡಿಂಗ್ ಮಂಡಿಸುವ ಕಾವ್ಯಾರ್ಥರೂಪ, ಟಿ.ಎಸ್. ಎಲಿಯಟ್ ನಿರೂಪಿಸಿವ ವಸ್ತು-ಪ್ರತಿರೂಪ ತತ್ವಗಳ ತೌಲನಿಕ ವಿಶ್ಲೇಷಣೆಯಿದೆ. ಇವುಗಳೆಲ್ಲವನ್ನು ಒಟ್ಟಿಗೆ ನೋಡಲೆತ್ನಿಸಿದಾಗ ಸಾಹಿತ್ಯರೂಪದಲ್ಲಿ ಅದರ ಸೃಜನೆಕ್ರಿಯೆಯ ವಿಧಾನಗಳಲ್ಲಿ ಅದೆಷ್ಟು ಪರ-ವಿರೋಧ ನಿಲುವುಗಳಿವೆ ಎಂಬುದು ಗಮನಕ್ಕೆ ಬರುತ್ತದೆ. ತತ್ವ ಶಾಸ್ತ್ರದಂತೆ ಸಾಹಿತ್ಯವೂ ತನ್ನದೇ ಆದ ಹೊಸ ತತ್ವವೊಂದನ್ನು ಸೃಷ್ಟಿಸಲು ಸಶಕ್ತವಾಗಿದೆ. ಶಾಸ್ತ್ರಗಳ ತಾರ್ಕಿಕ ಅಭಿವ್ಯಕ್ತಿಗೆ ನಿಲುಕದ, ಅದರ ಹಿಡತಕ್ಕೆ ಸಿಗದ ಭಾವನೆಗಳನ್ನು ಸಾಹಿತ್ಯ ಬೇರೆಯದೆ ನವ್ಯ ಭೂಮಿಕೆಯಲ್ಲಿ ಅಭಿವ್ಯಕ್ತಿಸಿ ಹೊರಸೂಸುತ್ತದೆ! ಎಂಬ ಅಭಿಪ್ರಾಯ ಲೇಖನದ ಕೊನೆಗೆ ನಾವು ಕಾಣಬಹುದು.
“ಕನ್ನಡ ಕಾದಂಬರಿಯ ಭವಿಷ್ಯ” – ಕನ್ನಡ ಕಾದಂಬರಿಯ ವಸ್ತು, ರೂಪ ವಿಧಾನಗಳಲ್ಲಿ ಇನ್ನೂ ಸಾಧಿಸಬೇಕಾಗಿರುವುದು ಬಹಳಷ್ಟು ಉಳಿದಿದೆ ಎಂಬ ಅಭಿಪ್ರಾಯದಲ್ಲಿ ಬರೆದ ಲೇಖನವಾಗಿದೆ. ಆಧುನಿಕ ಪಾಶ್ಚಾತ್ಯ ಲೇಖಕರು ತಮ್ಮ ಪ್ರೌಢತೆಯನ್ನು ನಮಗಿಂತ ಹೆಚ್ಚಾಗಿ ಹೇಗೆ ಪಡೆದುಕೊಂಡ ? ಇಂತಹ ಪ್ರೌಢಗೊಂಡ ಸಾಹಿತ್ಯ ಮುಂದೆ ಕನ್ನಡ ಸಾಹಿತ್ಯ ಸೃಷ್ಟಿ ತಂತ್ರ ಸ್ವರೂಪಗಳನ್ನು ಯಾವ ಯಾವ ಕಾಲಗಳಲ್ಲಿ ಹೇಗೆ ಪ್ರಭಾವ ಬೀರಿತು ಎಂಬುದರ ಧೀರ್ಘ ವಿಚಾರವಿದೆ. ಸಮಾಜದಲ್ಲಿನ ಬದಲಾವಣೆಗಳು ಹೇಗೆ ಸಾಹಿತಿಯೊಬ್ಬನ ದೃಷ್ಟಿಕೋನದ ಮೇಲೆ ಪ್ರಭಾವ ಬೀರುತ್ತದೆ ? ಯುಗದಿಂದ ಯುಗಕ್ಕೆ ಆದ ಇಂತಹ ಬದಲಾವಣೆಗಳೇನು ? ಎಂಬ ವಿಚಾರವನ್ನು – “ಸರ್ವ ಸಾಕ್ಷಿತ್ವ” ಹಾಗು “ವ್ಯಕ್ತಿ-ಪ್ರಜ್ಞೆ” ಗಳಂತ ಸೃಜನಕ್ರಿಯ ಸ್ವರೂಪಗಳ ಸಹಾಯದಿಂದ ವಿವರಿಸಲಾಗಿದೆ. ಈ ಬರಹದಲ್ಲಿ ಮುಂಚೆ ಹಿಂದೆ ಹೇಳಾಲಾಗಿದ್ದ ‘ಶಾಸ್ತ್ರ, ತತ್ವ, ಆದರ್ಶಗಳ’ ಹಾಗು ‘ಸಾಹಿತ್ಯ’ದ ಸಂಭಂಧವನ್ನು, ಅನೇಕ ಕನ್ನಡ ಕಾದಂಬರಿಗಳ ವಿಮರ್ಶೆಗಳ ಮೂಲಕ ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.
ಮುಂಬರುವ ೨ ಪ್ರಬಂಧಗಳು ಸರಿ ಸುಮಾರು ಒಂದೇ ರೀತಿಯ ಶೀರ್ಷಿಕೆಯನ್ನು ಪಡೆದಿವೆ. ಮೊದಲನೆಯದು “ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ”, ಎರಡನೆಯದು “ಇಂಗ್ಲಿಷ್ ಬ್ರಾಹ್ಮಣ ಮತ್ತು ಕನ್ನಡ ಶೂದ್ರ”. ಬ್ರಾಹ್ಮಣ ಶೂದ್ರ ಪದಗಳನ್ನು ಜಾತಿ ಸೂಚ್ಯಕವಾಗಿ ಉಪಯೋಗಿಸದೆ ಸಾಂಕೇತಿಕವಾಗಿ ಉಪಯೋಗಿಸಲಾಗಿದೆ ಎಂದು ಹೀಗೆ ಹೇಳಿರುವರು – “ನಾನು ಬ್ರಾಹ್ಮಣ ಶಬ್ಧವನ್ನು ಅತಿ ಶಿಷ್ಟತೆಗೆ ಸಂಕೇತವಾಗಿಯೂ, ಶೂದ್ರ ಶಬ್ಧವನ್ನು ಶಿಷ್ಟತೆಯ ಸಂಕೋಚಗಳಾಚೆ ಜಾಗೃತವಾಗಿರುವ ಪ್ರಾಕೃತ ಪ್ರವೃತ್ತಿಗಳಿಗೆ ಸಂಕೇತವಾಗಿಯೂ ಬಳಸಿದ್ದೇನೆ”. ಅಂದರೆ ಇಲ್ಲಿ ಸಾಹಿತ್ಯದಲ್ಲಿ ಸನಾತನ ಸಂಕೃತಿಯಲ್ಲಿರುವ ಸಂಸ್ಕೃತ ಇನ್ನಿತರ ಹಳೆಯ ಭಾಷೆಗಳ ಸಾಹಿತ್ಯಗಳಿಂದ ಪ್ರಭಾವಿತರಾದ ಸಾಹಿತಿಗಳನ್ನು ‘ಬ್ರಾಹ್ಮಣ’ ರೆಂದೂ, ದೈಹಿಕವಾಗಿ ಪ್ರಕೃತಿಯಿಂದ ನೇರವಾಗಿ ಅನುಭವಕ್ಕೊಳಗಾದ, ಸಹಜ ಸ್ಫೂರ್ತಿಯನ್ನು ತೋರಿರುವ, ಮಣ್ಣಿನ ಸಂಪರ್ಕದಿಂದ ಒದಗಿ ಬಂದಿರುವ ಅನುಭವಗಳನ್ನು ಅಭಿವ್ಯಕ್ತಿಸಿರುವ ವರ್ಗವನ್ನು ‘ಶೂದ್ರ’ ರೆಂದು ಸಂಕೇತಿಸುತ್ತ ತಮ್ಮ ವಿಚಾರವಾದವನ್ನು ಪ್ರತಿಪಾದಿಸಿದ್ದಾರೆ. ಶಿಕ್ಷಿತ ವರ್ಗದಲ್ಲಿ ಹರಿತವಾದ ಬುದ್ಧಿಶಕ್ತಿಯಿದೆ ಆದರೆ ಪ್ರಕೃತಿ ಪ್ರೇರಣೆಯಾಗಲಿ ಮಣ್ಣಿನ ವಾಸನೆಯಾಗಲಿ ಇಲ್ಲ. ಈ ಪರಕೀಯತೆಯಿಂದ ಕೃತಿಗಳು ಕೃತಕವಾಗಿ, ಶುಶ್ಕತೆಯಿಂದ ಸೊರಗಿರುತ್ತವೆ. ಹಾಗಯೇ ಶೂದ್ರರಲ್ಲಿ ಪ್ರಕೃತಿಯ ಅನುಭವಗಳಿದ್ದರೂ, ಜಾಣ್ಮೆ ಬುದ್ಧಿಗಳಿಂದ ಅವರ ಅಭಿವ್ಯಕ್ತಿ ಜಾಗೃತವಾಗಿರದೆ, ವಿಚಾರಪರತೆ, ವಿಶಾಲದೃಷ್ಟಿಕೋನ, ಆಳ ಚಿಂತನೆಗಳಿರದೆ ಶಕ್ತಿಯುತವಾಗಿರುವುದಿಲ್ಲ. ಭಾರತ ಹಾಗು ಕನ್ನಡ ಕಾದಂಬರಿಗಳು, ಈ ಎರೆಡೂ ಬಗೆಯ ಅಂತರಗಳಿಂದ ಅನುಭವ ದಟ್ಟನೆಯನ್ನು ಪಡೆದುಕೊಳ್ಳದೆ, ಬಹುಕಾಲದಿಂದಲೂ ಸೊರಗಿದೆ. ಕುಂವೆಂಪು, ಮಾಸ್ತಿ, ಲಂಕೇಶ್, ಅಡಿಗರ ವಿಶೇಷ ಕೃತಿಗಳನ್ನು ಇದೇ ನೆಲೆಯಲ್ಲಿ ವಿಮರ್ಶಿಸಲಾಗಿದೆ. ಲೇಖನವು ಕೊನೆಯಲ್ಲಿ, ಕೃತಿಯೊಂದು ಬರಿ ಬೌದ್ಧಿಕವಾಗಿ ಶಕ್ತಿಯುತವಾಗಿದ್ದರೆ ಅಥವಾ ಬರಿಯ ಮಣ್ಣಿನ ಸತ್ವವನ್ನು ತುಂಬಿಸಿಕೊಂಡಿದ್ದರೆ ಸಾಲದು, ಬದಲಾಗಿ ಎರೆಡೂ ಬಗೆಯೂ ಸಮನ್ವಯಗೊಂಡು ಅದರೊಳಗೆ ಅಂತರ್ಗತವಾಗಿದ್ದರೆ, ಅದಕ್ಕೆ ಪೂರ್ಣತೆ ಲಭಿಸುತ್ತದೆ, ಎಂಬ ನಿಲುವನ್ನು ತಾಳುತ್ತದೆ.
“ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ”, “ಕನ್ನಡ ಭಾಷಾ ಸಮಸ್ಯೆ” ಇವೆರಡೂ ಲೇಖನಗಳು ಒಂದೇ ವಿಷಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತದೆ. ಈಗ ನಮ್ಮ ಸುತ್ತಲೂ ನಾವು ನಡೆಯುತ್ತಿರುವ, ಬೆಳೆಯುತ್ತಲೇ ಇರುವ ಇಂಗ್ಲಿಷ್ ವ್ಯಾಮೋಹ ಮತ್ತು ಕನ್ನಡ ಭಾಷೆಯ ಮೇಲಿನ ನಿರ್ಲಕ್ಷ್ಯವನ್ನು ಕಂಡು, ಲೇಖಕರು ತಮ್ಮ ಬೇಸರವನ್ನು ಈ ರೀತಿ ವ್ಯಕ್ತಪಡಿಸುತ್ತಾರೆ – “ನಮ್ಮ ಬೌದ್ಧಿಕ ವ್ಯಾಪಾರಗಳೆಲ್ಲಾ ನಿಘಂಟಿನಿಂದ ಕಲಿತ ಕೃತಕ ಇಂಗ್ಲಿಷ್ ಮುಖಾಂತರ; ಹಾಗೆಯೇ ನಮ್ಮ ಗೃಹಕೃತ್ಯ, ನಿತ್ಯ ಕೆಲಸ, ಚಾಡಿ, ತರಳೆ, ಆಪ್ತ ಮಾತುಕತೆ, ಹರಟೆಯೆಲ್ಲಾ ಸೊರಗಿದ ಕನ್ನಡದ ಮೂಲಕ ನಡೆಯುತ್ತಿದೆ – ಇದು ನಮ್ಮ ಪರಿಸ್ಥಿತಿ”. ಇಲ್ಲಿ ಹೇಳಿರುವಂತೆ ಇದು ನಮ್ಮ ಕನ್ನಡ ಭಾಷೆಯ ಶೋಚನೀಯ ಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಜನರಿಗಿಂದು ಎರಡು ಮೂರು ಭಾಷೆಗಳಲ್ಲಿ ವ್ಯವಹರಿಸಲು ಕಲಿತುಕೊಂಡಿದ್ದರೂ, ಮೂಲದಲ್ಲಿ ಭಾಷಾದಾರಿದ್ರ್ಯ ನಮ್ಮ ಭಾಷಾ ಸಂಸ್ಕೃತಿಯನ್ನು ಹದಗೆಡಿಸುತ್ತದೆ. ಸಹಜ ಸಾಮಾನ್ಯ ಕೃತಿಗಳು ಸಾಕಷ್ಟು ರಚನೆಗೊಳ್ಳುತ್ತಿದ್ದರೂ, ಇಂದಿನ ಕಾಲಮಾನಕ್ಕೆ ತಕ್ಕಂತ ಮುಖ್ಯ ವಿಚಾರಗಳು, ಪ್ರಪಂಚದ ಮುಖ್ಯವಾಹಿನಿಯಿಂದ ಇಲ್ಲಿ ಹರಿದುಬರುತ್ತಿಲ್ಲ. ಇಂಗ್ಲಿಷ್‌ನಲ್ಲಿ ಓದಿದ ವೈಜ್ಞಾನಿಕ, ಆರ್ಥಿಕ, ರಾಜಕೀಯ, ಸಮಾಜಶಾಸ್ತ್ರ, ಮನಃಶಾಸ್ತ್ರದಂತಹ ವಿಕಾಸಗೊಳ್ಳುತ್ತಿರುವ ವಿಚಾರಗಳು, ಒಂದೇ ಭಾಷೆಯ ಚೌಕಟ್ಟಿನಲ್ಲಿ ಉಳಿದುಕೊಂಡು ಇತರ ಭಾಷೆಯ ಹಿಡಿತಕ್ಕೆ ನಿಲುಕದಂತ ಸ್ಥಿತಿ ನಿರ್ಮಾಣವಾಗಿದೆ. ( ಜರ್ಮನ್ ಫ಼್ರೆಂಚ ಭಾಷೆಗಳೆಷ್ಟೋ ಪರವಾಗಿಲ್ಲ). ಇವುಗಳು ಬುದ್ಧಿಜೀವಿಗಳಿಗಷ್ಟೇ ಮಿತಿಯಾಗಿ, ಬೇರೆ ಜನರಿಗೆ ಅಲಭ್ಯವಾಗಿದೆ. ಈ ವಿಷಯಗಳಲ್ಲಿ ಬರೆದಿರುವ ಪ್ರೌಢ, ಸೂಕ್ಶ್ಮ, ವೈಚಾರಿಕ ಬರಹಗಳು ಕನ್ನಡ ಭಾಷೆಯಲ್ಲೂ ಸಿಗುವಂತಾಗಬೇಕು. ಕನ್ನಡ ಓದುಗರ ಅರಿವಿನ ವೈಶಾಲ್ಯತೆಯನ್ನು ವಿಸ್ತರಿಸುವಂತ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಸಾಹಿತಿಗಳು ಶ್ರಮಿಸಬೇಕು. ಹಿಂದೆ ಸಂಸ್ಕೃತದಿಂದ ಕನ್ನಡಕ್ಕೆ ಜ್ಞಾನವು ಬಸವಣ್ಣ, ಕುಮಾರವ್ಯಾಸ ಮತ್ತಿತರಿಂದ ಹೇಗೆ ಒದಗಿಬಂತೋ, ಹಾಗೆ ಈಗಲೂ ಹೊಸ ಶಕ್ತಿಯುತ ವಿಚಾರಗಳು ಕನ್ನಡಕ್ಕೆ ಒದಗಿಬರಬೇಕು. ಈ ಕಳವಳಿಯೇ ಈ ಮೂರು ಲೇಖನಗಳ ಮುಖ್ಯ ಆಶಯ.
“ಹದಿನೈದು ವರ್ಷಗಳ ನವ್ಯಗದ್ಯ ಸಾಹಿತ್ಯ” – ಇದು ೧೯೬೭ ರಲ್ಲಿ ಬರೆದ ಲೇಖನ. ಅಂದು ೧೫ ವರ್ಷಗಳ ಹಿಂದಿನ ಕನ್ನಡ ಸಾಹಿತ್ಯವನ್ನು ವಿಮರ್ಶಾತ್ಮಕವಾಗಿ ಅವಲೋಕಿಸಲಾಗಿದೆ. ೧೫ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಆದ ಬದಲಾವಣೆಗಳೇನು ? ಅದಕ್ಕೆ ಕಾರಣಭೂತವಾದ ಮುಖ್ಯ ಅಂಶಗಳೇನು ಎಂಬುದರ ಉಲ್ಲೇಖನಗಳಿವೆ. ಅಂದಿಗೆ ಹೊಸಕಾಲದ ಸಾಹಿತಿಗಳಾದ ಚಿತ್ತಾಲರು, ಶಾಂತಿನಾಥ ದೇಸಾಯಿ, ಟಿ.ಜಿ. ರಾಘವ, ತೇಜಸ್ವಿ, ಲಂಕೇಶ್ ಮುಂತಾದವರ ಕೃತಿಗಳ ಮೂಲಕ ಪರಿವರ್ತನೆಯು ಹಾದಿಯನ್ನು ಪುನರಾವಲೋಕಿಸಲಾಗಿದೆ. ಕಥೆ ಕಾದಂಬರಿಗಳಲ್ಲಿ ಸಾಂಕೇತಿಕತೆ, ವಸ್ತು-ಪ್ರತಿರೂಪಗಳನ್ನು( ಟಿ.ಎಸ್. ಎಲಿಯಟ್) ಹೇಗೆ ಅಳವಡಿಕೊಳ್ಳಲಾಯಿತು? ಸರ್ವಸಾಕ್ಷಿತ್ವ ಅಥವಾ ಕೇಂದ್ರಪ್ರಜ್ಞೆಗಳ ದೃಷ್ಟಿಕೋನಗಳನ್ನು ಕೃತಿಯಲ್ಲಿ ನಿಯೋಜಿಸಿದಾಗ ಆಗಬಹುದಾದ ವ್ಯತ್ಯಾಸಗಳೇನು? ಈ ಸ್ವರೂಪಗಳು ಅಭಿವ್ಯಕ್ತಿಶೀಲತೆಯಲ್ಲಿ ತಂದ ಬದಲಾವಣೆಗಳೇನು? ಎಂಬುದರ ವಿಶ್ಲೇಷಣೆಯಿದೆ. ಬರಹಗಳಲ್ಲಿ ನಿಷ್ಠುರತೆ, ವಾಸ್ತವದ ವಿಡಂಬನೆ, ಸ್ಥಳೀಯ ಭಾಷಾ ಪ್ರಯೋಗ, ವಿಚಾರಗಳಲ್ಲಿ ಸೂಕ್ಶ್ಮಸಂವೇದಿತನ, ಇವೆಲ್ಲವನ್ನು ಹೇಗೆ ನವ್ಯ ಲೇಖಕರು ಪ್ರಯೋಗಿಸಿದ್ದಾರೆ ಎಂಬುದರ ಚಿಂತನೆಯಿದೆ. ಯೂರೋಪಿನ ಸಾಹಿತ್ಯದ ಬರೀ ಅನುಕರಣೆಯಾಗಲಿ, ಅಥವಾ ಅದರಿಂದ ಪರಕೀಯವಾಗಿರುವುದಾಗಲಿ ಭಾರತೀಯ ಸಾಹಿತ್ಯವನ್ನು ಸಮೃದ್ಧಗೊಳಿಸುವುದಿಲ್ಲ. ಪಾಶ್ಚಾತ್ಯ ಸಾಹಿತ್ಯದ ಆಗುಹೋಗುಗಳನ್ನು ಗಮನಿಸುತ್ತಾ, ಅದರ ಅವಶ್ಯಕ ಸಾರವನ್ನು ಹೀರಿಕೊಂಡು, ನಮ್ಮ ನೆಲದ ಸತ್ವಸಾರವನ್ನೂ ಜೀರ್ಣಿಸಿಕೊಂಡು ಬರಹಗಳು ಪ್ರಬುದ್ಧವಾಗಬೇಕು ಎಂದು ಅಭಿಪ್ರಾಯಪಡುತ್ತಾರೆ.
ಮೇಲಿನ ಲೇಖನ ನವ್ಯಗದ್ಯದ ಪರ್ವಕಾಲವನ್ನು ಅವಲೋಕಿಸಿದರೆ, “ಬದಲಾಗುತ್ತಿರುವ ಕನ್ನಡ ಕಾವ್ಯಮಾರ್ಗ” ಪ್ರಬಂಧದಲ್ಲಿ ‘ನವ್ಯತೆ’ ಹೇಗೆ ಕನ್ನಡ ಕಾವ್ಯಮಾರ್ಗದಲ್ಲಿ ಹುಟ್ಟಿ, ಹೋರಾಡಿ, ಬೆಳೆಯಿತು ಎಂಬುದರ ವಿಚಾರವಾದವಿದೆ. ಈ ಲೇಖನವನ್ನು ೪ ಭಾಗಗಳಾಗಿ ಈ ರೀತಿಯಾಗಿ ವಿಂಗಡಿಸಿದ್ದಾರೆ – ‘ಸಂವೇದನೆ ಮತ್ತು ಸತ್ಯದ ವಿನ್ಯಾಸ’, ‘ಕನ್ನಡ ಕವಿ ಮತ್ತು ಸತ್ಯ’, ‘ಭಾಷೆಯ ಸಮಸ್ಯೆ’, ‘ಇತರರ ಧನಿಗಳು’. ಈ ಬರಹ “Changing idem in Modern Indian Poetry’ ಎಂಬ ಅನಂತಮೂರ್ತಿಯವರ ಇಂಗ್ಲಿಷ್ ಲೇಖನ. ಇದನ್ನು ಕೆ. ವಿ ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರಲ್ಲಿ ಕನ್ನಡ ಕಾವ್ಯ ಮಾರ್ಗದದಲ್ಲಿ ಆದ ಅನೇಕ ಪಲ್ಲಟಗಳ ಬಿಂದುಗಳನ್ನು ಗುರುತಿಸುತ್ತಾರೆ. ಬಿ.ಎಮ್.ಶ್ರೀ ಯವರ ಇಂಗ್ಲಿಶ್ ಗೀತೆಗಳು ಬದಲಾವಣೆಗೆ ತುಡಿಯುತ್ತಿರುವ ಕಾವ್ಯಮಾರ್ಗದ ಆರಂಭ ಬಿಂದು ಎನ್ನಬಹುದು. ಗೋಕಾಕರು “ನವ್ಯ ಕಾವ್ಯ” ಎಂದು ತಮ್ಮ ಪ್ರಾಯೋಗಿಕ ಕಾವ್ಯಗಳ ರೀತಿಗೆ ನಾಮಾಂಕಿತ ಮಾಡಿದರೂ, ಅಡಿಗರು ಬರುವವರೆಗೂ ಕಾವ್ಯಸಿದ್ಧಿ ಹಾಗೆಯೇ ಇತ್ತು ಎಂಬುದನ್ನು ಹೀಗೆ ಸ್ಮರಿಸುತ್ತಾರೆ – “ಅಡಿಗರು ತಂದ ಹೊಸ ಲಯ, ಹೊಸ ಸಂವೇದನೆ, ನಮ್ಮ ಸಾಹಿತ್ಯ ಸಂದರ್ಭವನ್ನೇ ಬದಲಾಯಿಸಿತು”. – “ನಮ್ಮ ಪ್ರಸ್ತುತ ಧಾರ್ಮಿಕ ರಾಜಕೀಯ ಸಾಮಾಜಿಕ ಚಿಂತನೆಗಳ ಕ್ಲೀಶೆಗಳನ್ನು ಮಾತಿಲ್ಲದೆ ಒಪ್ಪಿಕೊಂಡು, ನೆಮ್ಮದಿಯಲ್ಲಿ ಸುರಳೀತ ಬದುಕುವ, ರೂಡಿಜಡವಾದ ಸವಕಲು ಪೀಳಿಗೆಯ ಜನಕ್ಕೆ, ಅಡಿಗರ ಕಾವ್ಯವಸ್ತು ಹಾಗು ತಂತ್ರಗಳೆರೆಡೂ ಗೊಂದಲವೆಬ್ಬಿಸುತ್ತಿದ್ದವು. ನಮ್ಮ ಹಿರಿಯ ಕವಿಗಳಿಗೆ ಸಹಜವಾಗಿಯೆ ಇದು ಅತಿಯಾಗಿ ಕಾಣಿಸಿತು”.
ಕವಿಯ ಜೀವನವನ್ನು ಹಾಗು ಮನಸ್ಸನ್ನು ಆವರಿಸಿರುವ ವಾಸ್ತವತೆ ಬದಲಾವಣೆಗೊಂಡಂತೆ, ಕವಿಯ ಸಂವೇದನೆ ಕೂಡ ಬದಲಾಗಬೇಕಾಗುತ್ತದೆ ಮತ್ತು ಅದರ ಲಯ ಶೈಲಿ ಭಾಷಾವಿನ್ಯಾಸ ಕೂಡ. ಈ ಅಭಿಪ್ರಾಯಕ್ಕೆ ಆಧಾರವಾಗಿ ಅಡಿಗರ ಕಾವ್ಯ ಪ್ರಯೋಗವನ್ನು ಆಳವಾಗಿ ವಿಶ್ಲೇಷಶಿಸಲಾಗಿದೆ. ವರ್ತಮಾನದಲ್ಲಿ ನಮ್ಮ ಅನುಭವಕ್ಕೆ ಬರುತ್ತಿರುವ ಬದುಕೇ ನಮ್ಮ ಅಭಿರುಚಿ, ಆಸಕ್ತಿಗಳನ್ನು ನಿರ್ದೇಶಿಸುವಂತೆ, ಸಾಹಿತ್ಯದಲ್ಲೂ ಕೂಡ ಅದು ನಮ್ಮ ಸಂವೇದನೆಯನ್ನು ನಿರ್ದೇಶಿಸುತ್ತದೆ. ಕುವೆಂಪು ಮಾಸ್ತಿ ಬೇಂದ್ರೆಯವರ ಕಾಲಮಾನಕ್ಕೂ ನವ್ಯ ಕಾಲಕ್ಕೂ, ಚಿಂತನೆ ಹಾಗು ಸಂವೇದನೆಗಳಲ್ಲಿ ಅಂತರವಿರುವುದನ್ನು ಕಾಣುವ ನಮ್ಮ ಪ್ರಜ್ಞೆ, ಕಾಲ ಕಾಲಕ್ಕೆ ವಾಸ್ತವತೆ ಬದಲಾಗುತ್ತಾ ಹೋಗುತ್ತಾ, ಕಾವ್ಯವಸ್ತು, ಭಾಷೆ, ಸಂವೇದನೆಗಳ ಧ್ವನಿಗಳು ಕೂಡ ಅದಕ್ಕೆ ತಕ್ಕಂತೆ ಬದಲಾಗಿ, ಹೊಸ ಕಾವ್ಯ ಯುಗಕ್ಕೆ ಕಾಲ ಮಾಗುತ್ತಿರುವುದನ್ನು ಗಮನಿಸಬಹುದು.
ನಂತರದ ಲೇಖನಗಳಾದ “ಕಾರಂತರ ಅಥೆಂಟಿಕ್ ಪ್ರಪಂಚ”, “ಅಡಿಗರ ಭುಮಿಗೀತ ಸಂಕಲನ”, “ಚೆನ್ನಯ್ಯನವರ ಆಮೆ”,”ಗಂಗಾಧರ ಚಿತ್ತಾಲರ ಕವನಗಳು”, “ಸಾಮ್ಯುಲ್ ಬೆಕೆಟ್” ವ್ಯಕ್ತಿಕೇಂದ್ರಿತ ವಿಮರ್ಶಾ ಲೇಖನಗಳಾಗಿವೆ. ಕಾರಂತರ ಬರಹಳು ಹೇಗೆ ಅಥೆಂಟಿಕ್ ಅನಿಸಿಕೊಳ್ಳುತ್ತದೆ, ಅಡಿಗರ ‘ಭೂಮಿಗೀತ’ ಹೇಗೆ ನವ್ಯಕಾವ್ಯ ಹುಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ, ಚಿತ್ತಾಲರ, ಚೆನ್ನಯ್ಯನವರ ಸಂವೇದನೆ ಚಿಂತನೆಗಳು ಹೇಗೆ ಸಮಕಾಲಿನ ಸಾಹಿತ್ಯದಲ್ಲಿ ವಿಭಿನ್ನತೆಯನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ಆಳವಾದ ವಿಮರ್ಶಾತ್ಮಕ ವಿವರಣೆಗಳಿವೆ. ಇದರ ಜೊತೆಗೆ ಕೊನೆಯಲ್ಲಿ ರಾಜಕೀಯ ಧುರೀಣರು, ಸಮಾಜವಾದಿ ಚಿಂತಕರೂ ಆದ ರಾಮನೋಹರ ಲೋಹಿಯರವರ ವ್ಯಕ್ತಿಚಿತ್ರಣವಿದೆ. ಲೋಹಿಯಾರವರ ಚಿಂತನೆ ಹಾಗು ಸಾಧನೆಗಳ ಕಿರು ಪರಿಚಯದ ಜೊತೆಗೆ ಲೇಖಕರು ಅವರನ್ನು ಭೇಟಿಯಾದ ಕೆಲವು ಸಂಧರ್ಭಗಳ ಉಲ್ಲೇಖನವಿದೆ. ಲೋಹಿಯಾ ಚಿಂತನೆ ಅನೇಕರನ್ನು ಪ್ರಭಾವಿಸಿದ ಹಾಗೆ, ಶಿಕ್ಷಿತ ವರ್ಗದಲ್ಲಿ ಅವು ಚರ್ಚಿತವಾದ ಹಾಗೆ, ಅನಂತಮೂರ್ತಿಯವರನ್ನು ಹೇಗೆ ಪ್ರಭಾವಿಸಿತು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಈ ಪುಸ್ತಕವನ್ನು ಕೂಡ ಲೋಹಿಯರವರ ನೆನಪಿಗೆ ಅರ್ಪಿಸಿದ್ದಾರೆ.
ಒಟ್ಟಿನಲ್ಲಿ ಇಲ್ಲಿನ ಬರಹಗಳು, ನವೋದಯ ಕಾಲದಿಂದ ನವ್ಯದಕಡೆ ರೂಪಾಂತರಗೊಳ್ಳುತ್ತಿದ್ದ ಕನ್ನಡ ಸಾಹಿತ್ಯವನ್ನು ವಿಮರ್ಶಿಸುತ್ತದೆ. ಈ ಪರ್ವಕಾಲದಲ್ಲಿ ಹೊಸ ಚಿಂತನೆಯೊಂದಿಗೆ, ಹೊಸ ಶೈಲಿ, ಭಾವ, ದೃಷ್ಟಿಕೋನಗಳೊಂದಿಗೆ ಹೊಸತನದೆಡೆಗೆ ಮುಖಮಾಡಿದ್ದ ಸಾಹಿತಿಗಳ ಕೃತಿಗಳನ್ನು ಅವಲೋಕಿಸುತ್ತದೆ. ಹಿಂದಿನ ಕಾಲದವರಿಗೂ ಹೊಸ ಪೀಳಿಗೆಯವರಿಗೂ ಇರುವ ಅಂತರಗಳನ್ನು ಅವಲೋಕಿಸುತ್ತದೆ. ಜಾಗತಿಕ ಸಾಹಿತ್ಯ ಸಂಚಲನವನ್ನು ಗಮನಿಸುತ್ತ, ಅದರಿಂದ ಹಲವನ್ನು ಪಡೆಯುತ್ತ ಕೆಲವನ್ನು ತಿರಸ್ಕರಿಸುತ್ತ, ಹಾಗೆಯೇ ಭಾರತೀಯ ಸಾಹಿತ್ಯ ಪರಂಪರೆಯ ಪೊರೆಯನ್ನು ಕಳಚಿದರೂ ತನ್ನ ನೆಲದ ಗಂಧವನ್ನು ಸೂಸುತ್ತ ವಿಕಾಸ ಹೊಂದುತ್ತಿದ್ದ ಕನ್ನಡ ಸಾಹಿತ್ಯವನ್ನು ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸುತ್ತದೆ.